ಎನ್ ರವಿಕುಮಾರ್ ಟೆಲೆಕ್ಸ್
*ಅದೊಂದು ದಿನ ಬೆಳಗಿನ ಜಾವ ಶಿವಮೊಗ್ಗ ಬಿಟ್ಟು ಬೆಂಗಳೂರು ಕಡೆಗೆ ಹೊರಟ ಕಾರಿಗೆ ತರೀಕೆರೆ ದಾಟಿದ ಮೇಲೆ ಹೆದ್ದಾರಿಗೆ ಆತುಕೊಂಡಿರುವ ಕಣಿವೆ ಮಾರಮ್ಮ ದೇವಸ್ಥಾನದ ಬಳಿ ಅಜ್ಜಿಯೊಬ್ಬಳು ದೂರವಿರುವಾಗಲೆ ಕೈ ತೋರಿಸುತ್ತಿದ್ದಳು.
ಆಕೆಯ ಮಗ್ಗಲಿಗೆ ಕಾರು ನಿಲ್ಲಿಸಿದಾಗ ಅಜ್ಜಿ
‘ ಮಗಾ ಜೋಡಿ ತಿಮ್ಮಾಪುರಕ್ಕೆ ಬಿಟ್ಟೋಗಪ್ಪಾ, ನಿಂಗೆ ಪುಣ್ಯ ಬತ್ತದೆ ‘…
ಬೆನ್ನು ಬಾಗಿ ಕೋಲು ಊರಿಕೊಂಡು ಸುಕ್ಕಾಗಿ ನಿಂತಿದ್ದ ಅಜ್ಜಿ ದೀನವಾಗಿ ಬೇಡಿಕೊಂಡಳು.
ನಾವು ಕಾರಲ್ಲಿದ್ದವರು ಮೂರೇ ಜನ. ಒಂದು ಸೀಟು ಖಾಲಿ. ನಾವೇನು ಅಜ್ಜೀನ ಹೆಗಲ ಮ್ಯಾಲ ಹೊತ್ಕೊಂಡೊಗ್ತಿವಾ ? ಸರಿ, ಕಾರಿಗೂ ಕಾಲೆತ್ತಿ ಹತ್ತಲಾಗದೆ ತಟ್ಟಾಡುತ್ತಿದ್ದ ಮಾಗಿದ ಜೀವವನ್ನು ಕಾರಿಗೆ ಕೂರಿಸಿಕೊಂಡು ಹೊರಟಿದ್ದಾಯ್ತು.
‘ಅಜ್ಜಿ ಯಾವೂರು?..’
‘ತಿಮ್ಮಾಪುರ ಕಣ್ಮಗ್ನೆ..’
‘ಎಲ್ಲಿಗೋಗಿದ್ದಜ್ಜಿ…’
‘ ನೆನ್ನೆ ಅಮಾಸೆ. ಕಣ್ವೆ ಮಾರಮ್ಮ ದೇವಸ್ತಾನಕ್ ಬಂದಿದ್ದೆ,
ಸಂಜೆ ಕಡೀಕೆ ನಮ್ಮೂರ್ಗೆ ಬಸ್ಸಿಲ್ಲ . ದೇವಸ್ಥಾನ್ದಗೆ ಮಕ್ಕಂಡಿದ್ದೆ..’
‘ ಅಜ್ಜಿ , ನಡೆಯೋಕೆ ಆಗೋಲ್ಲ. ಈ ವಯಸ್ಸಾಗೆ ದೇವ್ರು ದಿಂಡ್ರು ಅಂತ ಯಾಕ್ ಸುತ್ತಾಡ್ತಿರ, ಮನೇಲಿ ಮೊಮ್ಮಕ್ಳ ಆಡ್ಸ್ಕೊಂಡ್ ಇರ್ ಬಾರ್ದಾ?..’
ಎಷ್ಟು ಜನ ಮಕ್ಳು ಏನ್ ಕತೆ ಅಂತೆಲ್ಲಾ ಅಜ್ಜಿಯನ್ನ ಮಾತಿಗೆಳೆದೆ.
‘ಅಯ್ಯೋ ಏನೇಳನಪ್ಪ ನಮ್ ಪಾಡಾ?, ಮೂರ್ ಜನ ಗಂಡ್ ಮಕ್ಳು, ಒಬ್ಳು ಹೆಣ್ ಮಗ್ಳು ಎಲ್ರಿಗೂ ಮದ್ವೆ ಆಗೆದೆ, ಮಕ್ಳು ಅವೆ, ಅಜ್ಜ ತೀರ್ಕಂಡ್ ನಾಕವೊರ್ಷದೊತ್ತಾತು. ದೊಡ್ಡ ಮಗ ಓದ್ಕಂಡ್ ಎಂತದೊ ಕೆಲ್ಸ್ದಾಗವ್ನೆ. ಇನ್ನಿಬ್ರೂ ಅವ್ರವ್ರ ಅನುಕೂಲ ನೋಡ್ಕಂಡವ್ರೆ. ನಂಗೆ ಯಾರೂ ಕ್ಯಾರೆ ಅನ್ನಲ್ಲಪ್ಪ. …
ಇದ್ದೊಂದು ಅರ್ಧ ಎಕ್ರೆ ಜಮೀನ್ಗೆ ಕಿತ್ತಾಡ್ತಾವ್ರೆ..’
‘ಮತ್ತೆ ನೀ ಇರೋದೆಲ್ಲಿ…..?
‘ಹೆಣ್ಮಗ್ಳು ಮನೇಗೆ ಇದ್ದೀನಿ.. ಅವ್ಳು ಕೂಲಿನಾಲಿ ಮಾಡ್ಕೊಂಡ್ ಬತ್ತಾಳೆ ಮಕ್ಳು ನೋಡ್ಕೊಂಡ್ ಇದೀನಿ. ತಿನ್ನೊದೊಂದ್ ತುತ್ತು ಅನ್ನ ಕಣಪ್ಪ. ಹಾಕ್ತಾಳೆ. ಹ್ಯಾಂಗೋ ಕಣ್ಮಚ್ಕಂಡ್ರೆ ಸಾಕು…’
ಅಜ್ಜಿ ತನ್ನೆಲ್ಲಾ ದುಮ್ಮಾನ ಹೇಳಿ ಹಗುರಾದವಳಂತೆ ಧೀರ್ಘವಾದ ನಿಟ್ಟಿಸಿರು ಟ್ಟಳು.
ಅಜ್ಜಿ ದೇವರ ಬಳಿಗೆ ಬಂದ ಕಾರಣವನ್ನು ಹೇಳದೆ ಇರಲಿಲ್ಲ..
‘ಏನಿಲ್ಲ ಕಣಪ್ಪ.., ದೊಡ್ ಮಗ್ನಿಗೆ ಹುಷಾರಿರ್ಲಿಲ್ಲ…ಯಾಕೋ ಬಲಗೈ ಬಿದ್ದೊದಂಗಗಾಗಿತ್ತು. ಒಂದು ವಾರ ಹಾಸ್ಗೆ ಹಿಡ್ದಿದ್ದ. ನಾ ಹಡದ್ ಮಗ ನನ್ ಕಣ್ಮುಂದೆ ಹೀಂಗೆ ಇರೋದ್ ನೋಡಾಕಾದಾತೆ?. ಅದ್ಕೆ ಮಾರಮ್ಮಗೆ ಕೋಳಿಕೂಯ್ತಿನಿ ಅಂತ ಹರ್ಕೆ ಕಟ್ಟಕಂಡಿದ್ದೆ. ಆ ತಾಯಿ ಕಣ್ಬಿಟ್ಳು. ಸಂದಾಗಾದ. ಅದ್ಕೆ ನೆನ್ನೆ ಅಮಾಸೆ ಅಲ್ವ. ಬಂದು ಕೋಳಿ ಕೂಯ್ದು ಹರ್ಕೆ ತೀರ್ಸ್ದೆ.”
‘ಅಲ್ಲ ಕಣಜ್ಜಿ , ಗಂಡ್ಮಕ್ಳು ನಿಮಗೆ ಒಂದು ತುತ್ತು ಅನ್ನ ಹಾಕೋಲ್ಲ. ಆದ್ರೂ ಅವ್ರಿಗಾಗಿ ಇದೆಲ್ಲಾ ಮಾಡ್ಬೇಕಾ”?
ಅಂತ ಸಿಟ್ಟಿನಿಂದಲೇ ಕೇಳ್ದೆ ನಾನು.
ಅಜ್ಜಿ ಹೇಳಿದ್ಲು…
‘ಅಯ್ಯೋ …ಅದ್ನೆಲ್ಲಾ ಸಾದ್ಸಾಕಾದಾತ ಮಗ್ನೆ, ಅವ್ನು ಮಾಡಿದ್ ಅವ್ನಿಗೆ, ನಾ ಮಾಡಿದ್ ನಂಗೆ, ಎಷ್ಟೇ ಆಗ್ಲಿ ನನ್ ಕರ್ಳು ತಡ್ದಾತಾ? , ಮಕ್ಳು ಸಂದಾಗಿದ್ರೆ ಸಾಕು…..ನಂದೇನೈತೆ.’
ಕಾರು ಊರಿನ ಮುಖ್ಯ ರಸ್ತೆಗೆ ಬಂದಿತ್ತು. ತನ್ನ ಕೈಯಲ್ಲಿದ್ದ ಬಟ್ಟೆ ಚೀಲದಿಂದ ಬತ್ತಿ ಕಪ್ಪಿಟ್ಟ ಎರಡುಬಾಳೆ ಹಣ್ಣು ತೆಗ್ದು ಕೈಗಿಟ್ಟು ಪ್ರಸಾದ ತಗಳ್ರಪ್ಪ. ಎಂದವಳೆ ಪೇಪರ್ ತುಂಡೊಂದನ್ನು ಬಿಚ್ಚಿ ಅರಸಿನದ ಪುಡಿಯನ್ನು ಕಾರಿನಲ್ಲಿದ್ದ ನಾವು ಮೂವ್ವರ ಹಣೆಗೂ ಹಚ್ಚಿ . ‘ಯಾರ್ ಹಡ್ದ ಮಕ್ಳೋ. ಸುಖವಾಗಿರ್ರಪ್ಪ’ ಎಂದು ನೆತ್ತಿಯನ್ನು ಮೆದುವಾಗಿ ಸವರಿದಳು.
ಅಜ್ಜಿಯನ್ನು ಕಾರಿನಿಂದ ಇಳಿಸುವಾಗ ಮಕ್ಕಳಿಗಾಗಿ ಹರಕೆ ಹೊತ್ತು ದಣಿದ ಈ ಜೀವದ ರವಿಕೆ, ಸರಗು ನೂಲು ಬಿಟ್ಟು ನಲುಗುತ್ತಿರುವುದು ಕಂಡಿತು.
ಕಾರು ಇಳಿದ ಅಜ್ಜಿ ಸರಸರನೆ ಕಿಬ್ಬೊಟ್ಟೆಯ ಗಂಟಿನಿಂದ ಮಡಿಕೆ ಮುದ್ದೆಯಾಗಿದ್ದ ಹತ್ತು ರೂಪಾಯಿ ನೋಟೊಂದ ತೆಗೆದು ನನ್ನ ಕೈಗಿಟ್ಟು . ‘ಬಸ್ಜಾರ್ಜು ಮಗ್ನೆ ಇಟ್ಕ ಅಂದ್ಳು.’
ಕ್ಷಣ ಕಾಲ ಅವಕ್ಕಾದೆ. ಆ ನೋಟಿನ ಜೊತೆ ಇನ್ನಷ್ಟು ನೋಟುಗಳ ಸೇರಿಸಿ ಅಜ್ಜಿ ಕೈಗಿಟ್ಟು ಕಾರು ಹತ್ತಿದೆ… ಅಜ್ಜಿ ತಿರು ತಿರುಗಿ ನೋಡುತ್ತಲೆ ಕೋಲು ಊರುತ್ತಾ ಹೋಗುತ್ತಿದ್ದಳು….
ಕಾರು ದಿಬ್ಬ ಏರಿ ಅವಳ ನೆರಳು ಮರೆಯಾಗುವವರೆಗೂ ನೋಡುತ್ತಲೆ ಹೋದೆ ನಾನು..
‘ ತಾಯಿ’ ಎಂದರೆ ಇವಳೇಇರಬೇಕು…
ಅವಳು 'ತಾಯಿ'ಯಲ್ಲದೆ ಬೇರಾರು?
ನಿಮಗೆ ಇವೂ ಇಷ್ಟವಾಗಬಹುದು…





ನಿಜ ಸರ್ ಅದುವೇ ತಾಯಿ.
ತನ್ನ ಕರುಳಬಳ್ಳಿ ಬಲಿತು ದೊಡ್ಡ ಮರವಾಗಿ
ನೂರು ಜೀವ ಸಲಹೀತು ತನ್ನ ಬಾಳು ಕಟ್ಟೀತು
ಆಕೆಗದು ಪುಟ್ಟ ಮಗುವೇ ಜೀವದ ಜೀವಾಳವೇ
ಕೊಟ್ಟಾಳು ತನ್ನ ಪ್ರಾಣ ಬಿಡಳು ಕರುಳು ಕುಡಿಯ
ಅದುವೇ ತಾಯಿ ಬಲ್ಲಿರಾ
ತಾಯಿ ದೇವರೆಂಬರು ಅವಳ ಮಾತು ವೇದವೆಂಬರು
ಕಂಡರಾರು ದೇವರಾ ಬಲ್ಲವರಾರು ವೇದವ
ಈ ಹಿರಿಮೆ ಗರಿಮೆ ಒಲ್ಲಳವಳು
ಬೇಡಿಯಾಳು ಮಮತೆ ನೀಡಿಯಾಳು ಪ್ರೀತಿ
ಅದುವೇ ತಾಯಿ ಬಲ್ಲಿರಾ ಅದುವೇ ತಾಯಿ ಬಲ್ಲಿರಾ
ಬರಹ ಮನಸ್ಸಿಗೆ ತಟ್ಟಿತು.. ಎಷ್ಟೋ ತಾಯಿ ಹೃದಯಗಳು ಹೀಗೆ ಮಿಡಿಯುತ್ತಿವೆ…