-ಅರಬಗಟ್ಟೆ ಅಣ್ಣಪ್ಪ
ಕೊನೇ ಮನೆಯ ಹುಡುಗಿ
ಅವಳಿಗೆ ಹೇಳಿಕೊಳ್ಳಲು
ಬಹಳಷ್ಟಿತ್ತು
ಆರಂಭದ ಮನೆಯಿಂದ
ಅವಳು ಕಾದು ಕುಳಿತಿದ್ದಳು
ತನ್ನ ಸರದಿ ಬರುವುದೆಂದು
ದೇಮಜ್ಜಿಯ ಮನೆ, ಗೋಪಿಯ ಸೂರು
ಅನಾಥನಂತಿರುವ ಮಂಜುವಿನ ಮನೆ
ಎಲ್ಲವೂ ಆಗಿ ಬರುವಷ್ಟರಲ್ಲಿ
ಈ ಹುಡುಗಿಯ ಮನೆಗಾಗಲೇ ಸಂಜೆಯಾಗಿತ್ತು
‘ಬೆಳಗ್ಗೆ ಆರಕ್ಕೇ ಬಂದಿರುವೆ ತಾಯಿ
ನಾಳೆ ಬಂದರಾಗದೆ
ಮನೆಯಲ್ಲಿ ಮಗಳು ಕಾಯುತ್ತಿರುತ್ತಾಳೆ?’
‘ಆಗಲಿ ಅಯ್ಯ!’ ಎಂದವಳೆ
ತೆರೆದ ಹಿತ್ತಲಿನ ಒಲೆಗಿಷ್ಟು
ಹರಕು ಮುರುಕು ತುರುಕಿ
ಬಾಳಿಗೊಂದು ಕಿಡಿ ತಾಗಿಸಿ
ಅರೆ ಬೆಳಕಿನಲಿ ಬೂದಿಯುಣ್ಣು
ತೊಡಗಿದಳು
‘ನಾಳೆ ಬೆಳಗ್ಗೆಯೇ ಬರುತ್ತೇನಮ್ಮ
ಎಲ್ಲ ಸರಿಯಾಗಿ ಜೋಡಿಸಿಕೊಂಡಿರು..’
ಎಂದವನೆ ಕತ್ತಲೆಯ ಬೀದಿಯಲಿ
ದಾಪುಗಾಲಿಟ್ಟೆ, ಬೀದಿನಾಯಿಗಳಿಂದ
ನನ್ನನ್ನು ರಕ್ಷಿಸಲು ದೊಣ್ಣೆ ಹಿಡಿದು
ಕಳುಹಿಸಿಕೊಟ್ಟಳು…!
ನನ್ನ ಗತಿಸಿದ ತಂಗಿಯ ನೆನಪಾಯಿತು
ಅವಳೂ ಹೀಗೆಯೆ ಗಟ್ಟಿಗಿತ್ತಿ!
ರಾತ್ರಿಯೆಲ್ಲ ಎಂತದೋ ಸಂಕಟ!?
ನೀಡಿದ ಅವಧಿ ಮುಗಿದಿದೆ
ಆ ಕೊನೇ ಮನೆಯ ಹುಡುಗಿಯದಿನ್ನೂ
ಆಗಿಲ್ಲ, ಆ ಮಗುವಿಗೋ ಹೇಳ ತೀರದ ವೇದನೆ
‘ಅಯ್ಯೋ ನಾನು ಈ ಭೂಮಿ ಮೇಲೆಯೇ
ಇಲ್ಲವೆನಿಸಿ ಬಿಟ್ಟರಲ್ಲ’
ಮತ್ತೇನೇನೋ ಕೂಗಾಟ ಧಡಗ್ಗನೆ ಎಚ್ಚರಾಯಿತು
ನಡುರಾತ್ರಿ ಮೂರರ ಸಮಯ
ಸಧ್ಯ ಕನಸೆಂದು ಸಮಾಧಾನವಾಯಿತು
ಬೆಳಗ್ಗೆ ಎದ್ದವನೇ ಆ ಮನೆಗೆ
ಮತ್ತೆ ಮುಂಜಾನೆಗೇ
ಇದು ಮೂರನೆಯ ಭೇಟಿ
ಅದು ತಗೊಳ್ತಿಲ್ಲ, ನಾನು ಬಿಡ್ತಿಲ್ಲ
ಆ ಹುಡುಗಿಯ ಬಳಿ ಅಕ್ಕಿ ಕಾರ್ಡೇ ಇಲ್ಲ
ಫೋನೂ ಇಲ್ಲ ಆಧಾರಿಗೆ ಇವಳ
ಮುಖ ನೆನಪಿಲ್ಲ
ಬದುಕಿನ ಹೊಡೆತಕ್ಕೆ ಅಡಕೆ ಸುಲಿದ
ಬೆರಳಿನಂತಾಗಿದೆ ಮೊಗ
ಪಾಪ, ಆಧುನಿಕತೆಯಲ್ಲಿ
ತಪ್ಪು ಯಂತ್ರದಲ್ಲ!?
‘ನೀವು ಇಷ್ಟೆಲ್ಲ ಕಷ್ಟ ತಗೊಳದೇನೂ ಬೇಡ ಬಿಡಿ ಅಯ್ಯಾ
ನಂಗಿವೆಲ್ಲ ಅಭ್ಯಾಸವಾಗೈತೆ…..
ನನ್ನವೆರಡು ಮಕ್ಕಳಿಗೆ ದುಡಿದು ತಂದೇ ಹಾಕ್ತೀನಿ
ಯಾರೋ ಕೊಡ್ತಾರಂತೆ ಈ ಮಕ್ಕಳು
ನನ್ನ ಮಡಿಲಿಗೆ ಬಿದ್ದಿಲ್ಲ
ಅವ್ಕೆ ತಂದಿಲ್ಲದಿರಬಹುದು
ತಾಯಿsss ನಾನಿದಿನಿ……’
ದಸರಾ ಹಬ್ಬದ ಕೊನೆಯ ದಿನವದು
‘ತಾಯೀ ನನ್ನವ್ವ….. ನಿನ್ನಂಥವರ
ಹೊಟ್ಟೆಯಲ್ಲೇ ಕಣವ್ವ ನಾನೂ ಹುಟ್ಟಿದ್ದು’
ಕೈ ಮುಗಿದು ಬಂದೆ
ನವರಾತ್ರಿ ಸಂಪನ್ನವಾಯಿತು
ಆ ಕೊನೇ ಮನೆ ಹುಡುಗಿಯ
ಮನದೊಳಗಣ ಸೂರ್ಯ ಮುಳುಗದಿರಲಿ!






0 Comments