ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳೀಗ ಮೊದಲಿನಂತಿಲ್ಲ !!

ಮಂಜುಳಾ ಸಿ ಎಸ್

ಅವಳೀಗ
ಮೊದಲಿನಂತಿಲ್ಲವಂತೆ !
ಹಾ
ಈಗೀಗ ಮತ್ತೆ
ನೀರೆರೆದ ಕೂದಲ
ಎಳೆಬಿಸಿಲಿಗೊಡ್ಧಿ
ಬೆಚ್ಚೆನೆ ಭಾವಕೆ
ಅರೆಗಣ್ಣು ತೆರೆದು
ಮೈ ಮರೆಯುತ್ತಾಳೆ!!
ಮೊದಲಿನಂತಿಲ್ಲವೆ ಇಲ್ಲ !

ಸಂಜೆ
ವಸಂತನ ಪ್ರೀತಿಗರಳಿದ
ಮಲ್ಲೆ ಹೂಗಳ ಮತ್ತೆ
ಮುಡಿಯ
ತೊಡಗಿದ್ದಾಳೆ !
ತನ್ನರಸಿ
ಮೆಚ್ಚಿ ಉಡುವಾಗ
ಸೀರೆಗಳು ಸಂಭ್ರಮಕೆ
ಜತೆಯಾಗಿ
ಸೋಜಿಗ ಪಡುವಂತೆ
ಬದಲಾಗಿದ್ದಾಳೆ
ಅವಳು ಮೊದಲಿನಂತಿಲ್ಲ !!

ಶೀತಲ ಬೆಳದಿಂಗಳ
ಕಿರಣಗಳಿಂದ
ಸುಡುತ್ತಿದ್ದ ಚಂದ್ರಮನು
ಹೊಟ್ಟೆ ಕಿಚ್ಚಿಗೆ
ತಾನೇ ಮೋಡಗಳ
ಮರೆ ಸೇರ
ತೊಡಗುವಾಗ ಇವಳ
ಕಿರುನಗೆಗೆ ಕಾರಣ
ತಿಳಿದರೂ ತಿಳಿಯದಂತೆ
ತಂತಾನೆ ಅಂದುಕೊಳ್ಳವ
ಹಾ
ಇವಳು ಮೊದಲಿನಂತಿಲ್ಲ!

ಉಸಿರುಸಿರಲು
ಸರಾಗ ರಾಗವೀಗ
ಅದೇ ಮೋಹನರಾಗಕೆ
ತೂಗುವ ಯಮುನಾ
ತೀರದ ತರೆಗೆಲೆ- ಹೂ
ಬಳ್ಳಿಯಂತೆ!
ನಿನ್ನಗಳ ನೆನಪಿಲ್ಲದ
ನಾಳೆಗಳ ಪರಿವೆಯಿರದೆ
ಎದೆಗಾನಿಸಿ
ಲೋಕ ಮರೆಸುವ
ಆತ್ಮಸಖನಿರಲು
ಅವಳೀಗ
ಮೊದಲಿನಂತಿಲ್ಲ!

‍ಲೇಖಕರು Admin

23 April, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading