ಭೂಮಿಕಾ ನೃತ್ಯೋಲ್ಲಾಸ…

ಶಿವಾನಿ ಹೊಸಮನಿ

ಫೋಟೋ ಕೃಪೆ : ಮಧುಸೂದನ್

ಲಾಸ್ಯವರ್ಧನ ಟ್ರಸ್ಟ್‌ ನ ಗುರು ಡಾ ಮಾಲಿನಿ ರವಿಶಂಕರ್ ಅವರ ಶಿಷ್ಯೆಯಾದ ಕುಮಾರಿ ಭೂಮಿಕಾ ಅವರ ರಂಗಪ್ರವೇಶವು ನಗರದ ಕೃಷ್ಣದೇವರಾಯ ಸಭಾಂಗಣದಲ್ಲಿ ಸುಸಂಪನ್ನವಾಗಿ ನಡೆಯಿತು.

ವಿದ್ವಾನ್ ಶ್ರೀ ರೊಹಿತ್ ಭಟ್ ಉಪ್ಪೂರ್ ಅವರು ಗಂ ಗಣಪತೆ ನಮೋ ನಮೋ ಪ್ರರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದರು.
ಕುಮಾರಿ ಭೂಮಿಕಾ ಅವರು ಸಾಂಪ್ರದಾಯಿಕ ಪುಷ್ಪಾಂಜಲಿಯೊಂದಿಗೆ ನಾಟ್ಯದ ಅಧಿದೇವತೆ ನಟರಾಜ, ವಿದ್ವಾಂಸರು, ಗುರುಗಳು, ಭೂಮಿತಾಯಿ ಹಾಗು ಸಭಿಕರಿಗೆ ನಮಸ್ಕರಿಸಿ ವಿನಮ್ರ ಭಾವನೆಯಿಂದ ಭಕ್ತಿನಿವೇದನೆಯನ್ನು ಮಾಡಿದರು.ದೈವಿಕ ವಿನ್ಯಾಸಗಳಿಂದ ಅಲಂಕೃತಗೊಂಡಂತಹ ಪುಷ್ಪಾಂಜಲಿಯಲ್ಲಿ ಅನವರತ ಪೂಜಿಸಲ್ಪಡುವ ವಿದ್ಯಾಪ್ರದಾಯಕ, ಸಿದ್ಧಿವಿನಾಯಕ, ವಿಘ್ನಹರ್ತನಾದ ಗಣನಾಯಕನನ್ನು ಭಾವಪೂರ್ಣ ಅಭಿನಯದ ಮೂಲಕ ವಂದನೆ ಸಲ್ಲಿಸಿದರು. ಪುಷ್ಪಾಂಜಲಿಯ ಸಂಗೀತ ಸಂಯೋಜನೆ ವಿದ್ವಾನ್ ರೋಹಿತ್ ಭಟ್ ಅವರು ಮಾಡಿದ್ದರು.

ಕೂಡಲಸಂಗಮದೇವನೇ ಶ್ರೀಮಂತರು ಗುಡಿಗಳನ್ನು ನಿರ್ಮಿಸಿ ನಿನ್ನನ್ನು ಪೂಜಿಸುತ್ತಾರೆ, ಆದರೆ ಬಡವನಾದ ನನಗೆ, ನನ್ನ ಶರೀರವನ್ನೇ ಆಲಯವನ್ನಾಗಿಸಿ, ನನ್ನ ಹೃದಯದಲ್ಲಿ ನಿನ್ನನ್ನು ಪ್ರತಿಷ್ಠಾಪಿಸಿ ಪೂಜಿಸುತ್ತೇನೆ . ಏಕೆಂದರೆ ಜಂಗಮವಾದ ಈ ಹೃದಯಕ್ಕೆ ಸಾವಿಲ್ಲ ಎಂಬ ಸಾರ ಉಳ್ಳಂತಹ ಬಸವಣ್ಣನವರ ವಚನವನ್ನು ಪ್ರಸ್ತುತ ಪಡಿಸಿದ ಕಲಾವಿದೆ, ಮೊದಲನೆಯ ಪ್ರಸ್ತುತಿಯಲ್ಲೇ ಎಲ್ಲರ ಗಮನ ಹಿಡಿದಿಟ್ಟುಕೊಂಡರು.
ವಿದ್ವಾನ್ ಶಂಕರ್ ಕಂದಸ್ವಾಮಿ ಅವರು ರಚಿಸಿರುವಂತಹ ಜ್ಞಾನದ ದೇವತೆ ಸರಸ್ವತಿಯನ್ನು ಬಣ್ಣಿಸುವ ಕವಿತ್ವಂ ಅನ್ನು ಸಾದರ ಪಡಿಸಿದ ಕಲಾವಿದೆಯು, ಮನಮೋಹಕ ಭಂಗಿಗಳು, ಆಕರ್ಷಕ ಚಲನವಲನಗಳೊಂದಿಗೆ ಸಪ್ತಸ್ವರ ಚತುರೆ, ಹಂಸವಾಹಿನಿ, ಪುಸ್ತಕಧಾರಿಣಿ, ಅಕ್ಷರ ಮಣಿಮಾಲಿನಿ, ವೀಣಾಧಾರಿಣಿ, ಶ್ವೇತಾಂಬರಧರ, ಸಕಲ ಕಲಾಮಯಿ ಶಾರದೆಯ ವಿಹಂಗಮ ವರ್ಣನೆ ಮಾಡಿದರು. ಸ್ಫುಟವಾದ ಜತಿಗಳಗಳನ್ನು ಸ್ಪಷ್ಟವಾಗಿ ನಿರೂಪಿಸಿ, ಹಂಸದ ಮೇಲೆ ಕುಳಿತಿರುವ ಸರಸ್ವತಿಯನ್ನು ವೇದಿಕೆಯ ಮೇಲೆ ಚಿತ್ರಿಸಿದರು. ಇದರಲ್ಲಿ ಕಲಾವಿದೆಯ ಆಂಗಿಕಾಭಿನಯ, ಜತಿ ನಿರೂಪಣೆ, ಅಡವುಗಳು ಸ್ಥಿರತೆ, ಪಾದಭೇದಗಳು ಲಯದ ಮೇಲಿನ ಹಿಡಿತ, ಇದೆಲ್ಲದಕ್ಕೆ ಹಿಡಿದ ಕನ್ನಡಿಯಂತಿತ್ತು. ಈ ಕವಿತ್ವಂ ವಾಗಧೀಶ್ವರಿ ರಾಗ, ಆದಿ ತಾಳದಲ್ಲಿ ಸಂಯೋಜಿತಗೊಂಡಿತ್ತು.

ಕೃಷ್ಣನ ಲೀಲಾವಿನೋದಗಳನ್ನು ಬಿಚ್ಚಿಡುವ ಸರಸ ಕೃತಿ ತಂಜಾವೂರು ಸಹೋದರರು ರಚಿಸಿರುವ ರಾಗಮಾಲಿಕೆ, ಮಿಶ್ರಛಾಪು ತಾಳದಲ್ಲಿ ನಿಬದ್ಧವಾಗಿದ್ದ ಶಬ್ದಂನಲ್ಲಿ ಕಲಾವಿದೆಯು ಕೃಷ್ಣನ ತುಂಟಾಟಗಳನ್ನು ಪ್ರಶ್ನಿಸುತ್ತಾ, ಸರಸಿಜಾಕ್ಷಿಯರು ನದಿಯಲ್ಲಿ ಸ್ನಾನ ಮಾಡುವಾಗ ಅವರ ವಸ್ತ್ರಗಳನ್ನು ಕದ್ದು, ಅವರು ಕೈ ಮುಗಿಯುವವರೆಗೂ ಅದನ್ನು ಕೊಡದೇ, ತಮಾಷೆ ನೋಡಿದ್ದು ಸರಿಯೇ? ಗೋಪಿಕೆಯರು ಇಟ್ಟ ಹಾಲಿನ ಮಡಿಕೆಗಳನ್ನು ಒಡೆದು ಅದನ್ನು ಸವಿದದ್ದು ತರವೇ? ಲಕ್ಷ್ಮೀವಲ್ಲಭನಾದ ನೀನು ಇತರೆ ಗೋಪಿಯರೊಡನೆ ಲೀಲೆ ರಚಿಸುವುದು ಎಷ್ಟು ಸರಿ ಎಂದು ಕೃಷ್ಣನ ಲೀಲಾವಿನೋದಗಳನ್ನು ಬಿಚ್ಚಿಡುವ ಸರಸ ಶಬ್ದಂ ಅನ್ನು ಲವಲವಿಕೆಯಿಂದ ಚುರುಕು ಅಭಿನಯ ಹಾಗೂ ನಾಟಕೀಯತೆಯಿಂದ ಕೂಡಿರುವ ಪ್ರಸ್ತುತಿಯು ಬಹಳ ಸೊಗಸಾಗಿ ಮೂಡಿ ಬಂದಿತು.

ಕಾರ್ಯಕ್ರಮದ ಕೇಂದ್ರ ಭಾಗ ನೃತ್ಯಬಂಧ ಪದವರ್ಣ, ವಿದುಷಿ ರೂಪಶ್ರೀ ಮಧುಸೂಧನ್ ಅವರು ರಚಿಸಿದ ಈ ಬಂಧದಲ್ಲಿ ಗಂಗಾ ದೇವಿಯ ಕಥೆಗಳನ್ನು ಅನಾವರಣಗೊಳಿಸಲಾಯಿತು. ವಾಮನ ರೂಪಧಾರಿ ವಿಷ್ಣು ಬಲಿಯ ಬಳಿ ಬಂದು ಮೂರು ಹೆಜ್ಜೆಗಳಷ್ಟು ಜಾಗ ಕೇಳಿ ಪಡೆದುಕೊಳ್ಳಬೇಕೆಂದು ಬಂದಾಗ ತನ್ನ ಎರಡನೆಯ ಹೆಜ್ಜೆಯನ್ನು ಆಕಾಶಕ್ಕೆ ಇಡುತ್ತಾನೆ. ಆಗ ಬ್ರಹ್ಮನ ಕಮಂಡಲು ಉರುಳಿ ಗಂಗೆ ಉದಿಸಿದ ಕಥೆ, ತನ್ನ ಪೂರ್ವಜರಿಗೆ ಮುಕ್ತಿ ಕೊಡಿಸಲು ಭಗೀರಥನು ಬ್ರಹ್ಮನನ್ನು ಕುರಿತು ತಪಸ್ಸು ಆಚರಿಸುತ್ತಾನೆ. ಬ್ರಹ್ಮದೇವನು ಗಂಗೆಯನ್ನು ಭೂಮಿಗೆ ಬರಹೇಳುತ್ತಾನೆ. ಗಂಗೆಯು ರಭಸದಿಂದ ಭೂಮಿಗೆ ಧುಮುಕುತ್ತಾಳೆ. ಭೂಮಿಯನ್ನು ಆಕೆಯ ರಭಸದಿಂದ ಕಾಪಾಡಲು ಶಿವನು ಆಕೆಯನ್ನು ತನ್ನ ಜಟೆಯಲ್ಲಿ ಬಂಧಿಸುತ್ತಾನೆ. ಕಲಾವಿದೆಯು ಈ ಪ್ರಸಂಗವನ್ನು ಬಹಳ ಮನಮೋಹಕವಾಗಿ ಪ್ರದರ್ಶಿಸಿದರು. ಸೂಕ್ತ ಚಾರಿಗಳು, ಪಾದಭೇದಗಳು ಹಾಗೂ ಭಂಗಿಗಳ ಮೂಲಕ ಗಂಗೆಯು ಹರಿಯುವುದನ್ನು ತೋರಿದ ಕಲಾವಿದೆಯ ಅಭಿನಯ ಹಾಗೂ ನೃತ್ಯವೈಖರಿಯು ಸಾಕ್ಷಾತ್ ಗಂಗೆಯೇ ಪ್ರವಹಿಸಿದಂತೆ ಭಾಸವಾಯಿತು. ಶಿವನು ತನ್ನ ಜಟೆಯನ್ನು ಹರಡಿ ಪುಣ್ಯನದಿಯನ್ನು ಬಂಧಿಸಿದ ದೃಶ್ಯವಂತೂ ಮೈನವಿರೇಳಿಸಿತು. ನಂತರ ಭಗೀರಥನ ಕೋರಿಕೆಯಂತೆ ಶಿವನು ಗಂಗೆಯನ್ನು ಹರಿಯಲು ಬಿಟ್ಟಾಗ ಆಕೆ ಭಗೀರಥನನ್ನು ಅನುಸರಿಸುತ್ತಾಳೆ. ದಾರಿಯಲ್ಲಿ ಜಹ್ನು ಮುನಿಯ ಆಶ್ರಮವನ್ನು ಪ್ರವೇಶಿಸಿದಾಗ, ಕೋಪಗೊಂಡ ಋಷಿಯು ಆಕೆಯನ್ನು ಒಂದೇ ಗುಟುಕಿನಲ್ಲಿ ಕುಡಿದುಬಿಡುತ್ತಾರೆ. ಭಗೀರಥನ ಪ್ರಾರ್ಥನೆಯಂತೆ ತನ್ನ ಕಿವಿಯಿಂದ ಹೊರಬಿಡುವ ಪ್ರಸಂಗವು ಬಹಳ ಸೊಗಸಾಗಿ ಮೂಡಿಬಂತು. ನಂತರ ಭಗೀರಥನ ಪೂರ್ವಜರಿಗೆ ಆಕೆ ಮುಕ್ತಿಯನ್ನು ಕರುಣಿಸುತ್ತಾಳೆ. ಶಂತನು ಮಹಾರಾಜನನ್ನು ವರಿಸಿ ಶಾಪಕ್ಕೀಡಾದ ವಸುಗಳಿಗೆ ಮುಕ್ತಿ ಕೊಡಿಸಿದ ಗಂಗೆಯ ಎಂಟನೆಯ ಮಗನೇ ಭೀಷ್ಮ. ಈ ಭೀಷ್ಮನು ಅರ್ಜುನನ ಕಾರಣದಿಂದಾಗಿ ಮೃತ್ಯು ಪಡೆದಾಗ, ಕೋಪಗೊಳ್ಳುವ ಗಂಗೆಯು ಅರ್ಜುನನಿಗೂ ಸಹ ಪುತ್ರ ಮೃತ್ಯುವಿನ ಶಾಪ ನೀಡುತ್ತಾಳೆ ಎಂಬ ಪ್ರಸಂಗವನ್ನೂ ಸಹ ಮನಮುಟ್ಟುವಂತೆ ಕಲಾವಿದೆಯು ಪ್ರದರ್ಶಿಸಿದರು. ಒಟ್ಟಾರೆಯಾಗಿ ಇಡೀ ಪದವರ್ಣದಲ್ಲಿ ಕಲಾವಿದೆ ತನ್ನ ಪರಿಪಕ್ವ ಅಭಿನಯ ಹಾಗೂ ಮನೋಹರ ನೃತ್ಯದಿಂದ ಎಲ್ಲರ ಗಮನ ಹಿಡಿದಿಟ್ಟುಕೊಂಡಿದ್ದರು.

ವಿದುಷಿ ದ್ವಾರಕಿ ಕೃಷ್ಣಸ್ವಾಮಿ ಅವರ ರಚನೆಯ ಶಿವ ನವರಸ. ಶಿವನ ಜೀವನದಲ್ಲಿ ಹಾಸುಹೊಕ್ಕಾದ ನವರಸಭರಿತ ಪ್ರಸಂಗಗಳ ವಿಸ್ತಾರವಾದ ವರ್ಣನೆ ಹೊಂದಿದ್ದ ಕೃತಿಯಲ್ಲಿ ನರ್ತಕಿಯು ಎಲ್ಲ ರಸಗಳ ರಸಾನುಭವ ಪ್ರೇಕ್ಷಕರಿಗೆ ನೀಡಿದರು. ದಾಕ್ಷಾಯಿಣಿಯನ್ನು ವಿವಾಹವಾದ ಸಂದರ್ಭದಲ್ಲಿ ಶೃಂಗಾರ, ಕಿರಾತನ ವೇಷದಲ್ಲಿ ಬಂದು ಅರ್ಜುನನೊಂದಿಗೆ ಸಮರ ಮಾಡಿದಾಗ ವೀರತ್ವ, ಭಸ್ಮಾಸುರನಿಗೆ ವರ ನೀಡಿ ಆತ ಅದನ್ನು ಪ್ರಯೋಗಿಸಲು ಅಟ್ಟಿ ಬಂದಾಗ ಭಯ, ವಿಷ್ಣುವಿನ ಮೋಹಿನಿ ಅವತಾರವನ್ನು ಕಂಡು ಅದ್ಭುತ, ಕೋಳೂರು ಕೊಡಗೂಸಿನ ಮುಗ್ಧತೆಯನ್ನು ಕಂಡು ಕರುಣೆ, ದಾಕ್ಷಾಯಿಣಿ ದಹನವಾದಾಗ ರುಂಡ ಮುಂಡಗಳನ್ನು ಚೆಂಡಾಡಿದ ಭೀಭತ್ಸ, ಪಾರ್ವತಿಯ ಬಳಿ ಮುದುಕನಂತೆ ಹೋಗಿ ಹಾಸ್ಯ ಮಾಡಿದ್ದು, ತಪಸ್ಸು ಭಂಗ ಮಾಡಿದ ಮನ್ಮಥನನ್ನು ದಹಿಸಿದಾಗ ರೌದ್ರ, ಶಾಂತವಾಗಿ ಹಾಲಾಹಲವನ್ನು ಸೇವಿಸಿದ್ದು ಹಾಗೂ ಸುಂದರ ಸಂಚಾರಿ ನಿರೂಪಣೆಯೊಂದಿಗೆ ಪ್ರೇಕ್ಷಕರಿಗೆ ನವರಸದೌತಣ ಉಣಬಡಿಸಿದರು.

ಕವಿ ಶೀಯುತ ಡಿ.ವಿ. ಗುಂಡಪ್ಪನವರು ರಚಿಸಿರುವ ಅಂತಃಪುರ ಗೀತೆಯಲ್ಲಿ ಬೇಲೂರು ದೇವಸ್ಥಾನದ ಶಿಲಾಬಾಲಿಕೆಯರು ಮತ್ತು ಶ್ರೀ ಚೆನ್ನಕೇಶವ ಸ್ವಾಮಿ ಜೀವಾತ್ಮ ಪರಮಾತ್ಮರಾಗುತ್ತಾರೋ ಅಂತಹ ಒಂದು ಗೀತೆಯನ್ನು ಕಲಾವಿದೆ ಸಾದರ ಪಡಿಸಿದರು. ಬೇಲೂರು ದೇವಾಲಯದ ಮದನಿಕೆಯರಲ್ಲಿ ಒಬ್ಬಳಾದ ಶುಕಭಾಷಿಣಿಯ ವಿಶಿಷ್ಟ ವರ್ಣನೆಯನ್ನು ಹೊಂದಿದೆ. ಮದನಿಕೆಯು ಗಿಳಿಯನ್ನು ತನ್ನ ಸಖಿಯೆಂದು ಭಾವಿಸಿ, ಆತ್ಮೀಯವಾಗಿ ತನ್ನ ಮನದ ಮಾತುಗಳನ್ನು ಹಂಚಿಕೊಳ್ಳುತ್ತಾಳೆ. ಕವಿ ಕೇಳುತ್ತಾರೆ – ಏನೇ ಶುಕಭಾಷಿಣಿಯೇ ನಿನ್ನ ನೆಚ್ಚಿನ ಸಖಿ ಗಿಳಿಗೆ ಏನು ಅರಹುತ್ತಿರುವೆ, ಯಾರನ್ನು ಹೊಗಳುತ್ತಾ, ಯಾರನ್ನು ತೆಗಳುತ್ತಾ, ಏನು ಚಿಂತೆ, ಏನು ನಿನ್ನ ಸಂತಸ, ಯಾವ ಕಾಂತನಿಗೆ ಸಂತಸದ ವಾರ್ತೆಯನ್ನು ಕಳುಹುತ್ತಿರುವೆಯೇ ಎಂದು ಕೇಳಿ ಚೆನ್ನಕೇಶವನಿಗೆ ನಿನ್ನ ಸಂದೇಶವನ್ನು ತಲುಪಿಸಲು ಇನ್ನಾರು ಸಿಗಲಿಲ್ಲವೇ ಎಂದು ಕೇಳುತ್ತಾರೆ. ಚೈತನ್ಯದ ಚಿಲುಮೆಯಾಗಿ ನರ್ತಿಸಿದ ಕಲಾವಿದೆಯ ನೃತ್ತಾಮೋದದ ಮನೋಲ್ಲಾಸದ ಭಂಗಿಗಳು, ಸ್ಫುಟವಾದ ಕಲ್ಪನೆಗಳು, ಹಸನ್ಮುಖ ಅಭಿನಯ ಮನಸ್ಸೆಳೆದವು. ಬೇಹಾಗ್ ರಾಗ ಆದಿ ತಾಳದಲ್ಲಿದ್ದ ಸುಶ್ರಾವ್ಯ ಸಂಗೀತವೂ ನೃತ್ಯಕ್ಕೆ ಕಳೆ ಕಟ್ಟಿತು.

ಕಾರ್ಯಕ್ರಮದ ಕೊನೆಯ ಪ್ರಸ್ತುತಿ ವಲಚಿ ರಾಗ, ಮಿಶ್ರ ಛಾಪು ತಾಳದಲ್ಲಿ ನಿಬದ್ಧವಾದ ಮದುರೈ ಕೃಷ್ಣನ್ ರವರಿಂದ ರಚಿತವಾದ ತಿಲ್ಲಾನ ಪ್ರಸ್ತುತ ಪಡಿಸಿದರು. ಆಕರ್ಷಕ ಮೈಯಡವು, ವೈವಿಧ್ಯಮಯ ಅಡವುಗಳ ಜೋಡಣೆ, ಪಂಚನಡೆ ಜತಿ, ಚುರುಕು ಅರ್ಧಿ ಹಾಗೂ ಮುಕ್ತಾಯಗಳೊಂದಿಗೆ ತಿರುಪತಿಯ ವೆಂಕಟರಮಣಸ್ವಾಮಿಯ ಸ್ತುತಿಯೊಂದಿಗೆ ಸಂಪನ್ನಗೊಳಿಸಿದರು.

ಕಾಯೇನವಾಚ ಮನಸೇಂದ್ರಿಯೈರ್ವ ಬುದ್ಯಾತ್ಮನಾವ ಪ್ರಕೃತಿ ಸ್ವಭಾವಾತ್ ಮಂಗಳಂನೊಂದಿಗೆ ಕಲಾವಿದೆಯು ತಮ್ಮ ದೀರ್ಘವಾದ ಪರಿಶ್ರಮದ ಸಾರ್ಥಕತೆ ಮೆರೆದರು. ಎಲ್ಲಾ ನೃತ್ಯಬಂಧಗಳನ್ನು ಗುರು ಮಾಲಿನಿ ರವಿಶಂಕರ್ ಅವರು ಅತ್ಯಂತ ಕ್ರಿಯಾತ್ಮಕವಾಗಿ ಸಂಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಅಂತರರಾಷ್ಟ್ರೀಯ ಖ್ಯಾತಿಯ ಸಂಗೀತ ವಿದುಷಿ ಶ್ರೀಮತಿ ಪುಸ್ತಕಂ ರಮಾ ಅವರು , ಮೈಸೂರು ವಿಶ್ವವಿದ್ಯಾಲಯದ ಲಲಿತ ಕಲೆಗಳ ಕಾಲೇಜಿನ ಪ್ರಾಧ್ಯಾಪಕರಾದ ಕರ್ನಾಟಕ ಕಲಾಶ್ರೀ ಡಾ. ಕೆ ಕುಮಾರ್ ಅವರು ಉಪಸ್ಥಿತರಿದ್ದು ಪ್ರೀತಿಯ ನುಡಿಗಳಿಂದ ಕಲಾವಿದೆಗೆ ಶುಭ ಹಾರೈಸಿದರು.

ಸಂಗೀತ ವಿದ್ವಾಂಸರುಗಳಾದ ವಿದ್ವಾನ್ ರೋಹಿತ್ ಭಟ್ ಉಪ್ಪೂರ್ ಅವರು, ಮೃದಂಗದಲ್ಲಿ ವಿದ್ವಾನ್ ಶ್ರೀ ಜನಾರ್ಧನ್ ರಾವ್ ಅವರು ವೀಣಾ ವಾದನದಲ್ಲಿ ವಿದ್ವಾನ್ ಶ್ರೀ ವಿ. ಗೋಪಾಲ್ ಅವರು, ವೇಣು ವಾದನದಲ್ಲಿ ವಿದ್ವಾನ್ ಶ್ರೀ ನರಸಿಂಹ ಮೂರ್ತಿ ಅವರು ಹಾಗೂ ರಿದಮ್ ಪ್ಯಾಡ್ ನಲ್ಲಿ ವಿದ್ವಾನ್ ಶ್ರೀ ಪ್ರಸನ್ನ ಕುಮಾರ್ ಅವರು, ಸ್ಫುಟವಾದ ನಿರೂಪಣೆಯಲ್ಲಿ ಶ್ರೀ ಷಡಾಕ್ಷರಿ ಸುಗ್ಗನಹಳ್ಳಿ ಅವರು ಹಾಗೂ ನೃತ್ಯ ಸಂಯೋಜನೆ ಮಾಡಿ ನಟುವಾಂಗವನ್ನು ನಿರ್ವಹಿಸಿ ಕಲಾವಿದೆಗೆ ಮಾರ್ಗದರ್ಶನ ನೀಡಿದ ಕಲಾಯೋಗಿ ಗುರು ಡಾ. ಮಾಲಿನಿ ರವಿಶಂಕರ್ ಅವರು ರಸಾನುಭವದ ನೃತ್ಯ ಸಂಜೆಯ ಯಶಸ್ಸಿನಲ್ಲಿ ಪಾಲುದಾರರು.

‍ಲೇಖಕರು Admin

April 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: