
ಕೆ ಪಿ ಲಕ್ಷ್ಮಣ್
ಪ್ರತಿ ಮಂಗಳವಾರ ಅಲ್ಲಿ ಸಂತೆ ನಡೆಯುತ್ತಿತ್ತು . ಮಲೆನಾಡಿನ ಊರದು. ಪಟ್ಟಣ ದೂರವಿದ್ದದ್ದರಿಂದ ಏನೇ ಕೊಳ್ಳುವುದಿದ್ದರೂ ಸುತ್ತಮುತ್ತಲಿನ ಊರಿನ ಜನರು ಆ ಸಂತೆಗೇ ಬರಬೇಕಾಗಿತ್ತು. ನಾನು ಏನು ಕೊಳ್ಳದಿದ್ದರೂ ನೋಡಲೆಂದೇ ಹೋಗುತಿದ್ದೆ. ಏನನ್ನು ನೋಡಲು ಎಂದು ಈಗ ಕೇಳಬೇಡಿ, ಮುಂದೆ ಅದೇ ಕಥೆ .
ಮಳೆಗಾಲದಲ್ಲಿ ಮಲೆನಾಡಿನ ಸಂತೆ ನೋಡುವುದೇ ಸೊಗಸು. ಜಿಟಿ ಜಿಟಿ ಮಳೆಗೆ ಕುಣಿಯುತ್ತ ತೆರೆದುಕೊಂಡ ಕೊಡೆಗಳು , ಕಿಚಿ ಪಿಚಿ ಕೆಸರು ಅದರ ಜತೆಗೆ ಬೆರೆತು ಹೋದ ಕಾಲುಗಳು, ಕೆಲವು ಕಾಲಲ್ಲಿ ಮಾತ್ರ ಕಾಣಸಿಗುವ ಮಾಸಿದ ಕಾಲ್ಗೆಜ್ಜೆ , ಬಸಳೆಸೊಪ್ಪು, ಹಸಿಶುಂಟಿ, ಬಣ್ಣದಸೌತೆ, ತುಪ್ಪದಈರೆ, ಕೋಲು ಬದನೆ, ಹಸಿ ಮೆಣಸು, ಮೀನು, ಮಳಿ, ಬಂಗುಡೆ ಭೂತಾಯಿ, ಸಿಗಡಿ , ಕರಿಮೀನು , ಹಸಿಅಡಿಕೆ ಘಮಲು, ವೀಳ್ಯದೆಲೆ , ಜನರ ಬಾಯಿಂದ ಹೊಮ್ಮುವ ತಂಬಾಕಿನ ಘಾಟು, ವ್ಯಾಪಾರಿಗಳ ಜೋರು ಸ್ವರ, ಆಗಾಗ ಕೇಳುವ ಬೈಗುಳ , ಅಲ್ಲೇ ಇಲ್ಲ ಅನ್ನುವ ಹಾಗೆ ಸಣ್ಣಕ್ಕೆ ನಡೆವ ಪ್ರಣಯ ಚೇಷ್ಟೆ , ಇದೆಲ್ಲದರ ಜತೆಗೆ ಕದ್ದು ಮುಚ್ಚಿ ಆಟ ಆಡುವ ಬಿಸಿಲು, ಗಾಳಿ,ಮೋಡಗಳು, ಗಾಳಿ ಬೀಸಿದಾಗ ತುಸು ದೂರದಲ್ಲೇ ಕಾಡು ತೂಗುವ ಸದ್ದು…
ಎಲೆ ಮತ್ತು ಹನಿ ಉದುರುವ ಸದ್ದು ರೋಮ್ಯಾಂಟಿಕ್ ಆಗದಿರಲು ಕಾರಣಗಳೇ ಇರಲಿಲ್ಲ… ಹಾಗಂತ ಪೂರ್ತಿ ಹೊಣೆಯನ್ನು ಮಲೆನಾಡಿನ ಮೇಲೆ ಆ ಸಂತೆ ಮೇಲೆ ಹಾಕುವುದಿಲ್ಲ. ನನ್ನ ಮೇಲು ಮತ್ತು ಅವಳ ಮೇಲೂ ಇದೆ. ಹಾಗೆ ಜಗತ್ತಿನ ತುಂಬ ಇರುವ ಪ್ರೇಮದ ಮೇಲೂ ಇದೆ. ಯಾರದು ಎಷ್ಟು ಪಾಲು ಎಂದು ಕೇಳಬೇಡಿ..
ಹತ್ತಿರದ ಕೈಮಗ್ಗ ಕೇಂದ್ರದಲ್ಲಿ ಕಸೂತಿ ಎಣೆಯುವ ಕಸುಬು ಅವಳದ್ದು. ಸಂತೆಗಂತಲೇ ಬೇಗ ಬರುತ್ತಿದ್ದಳು. ಅವಳ ಜೊತೆಗೆ ಅವಳ ಗೆಳತಿಯೂ ಬರುತ್ತಿದ್ದಳು. ಇದೇನೂ ಸಿನಿಮಾ ಕಥೆಯ ಹಾಗಿದೆಯಲ್ಲ ಎಂದು ನನಗೆ ಈಗ ಅನಿಸುತ್ತದೆ . ಹೌದು ನಿಜಕ್ಕೂ ಅದು ಇದ್ದದ್ದು ಹಾಗೆಯೇ, ಅವಳಿಗಿಂತ ಅವಳ ಗೆಳತಿಯೇ ನನ್ನನ್ನು ಹೆಚ್ಚು ನೋಡುತ್ತಿದ್ದುದು ಮತ್ತು ಮಾತನಾಡಿಸುತ್ತಿದ್ದುದು. ಅವಳದು ಮಾತ್ರ ಮಲೆನಾಡಿನ ಅಗಾಧ ಮೌನ. ಸದಾ ತನ್ನ ಲೋಕದ ಯಾವುದೋ ಗೊಂಬೆಗೆ ನಾಜೂಕಾದ ಕಸೂತಿ ಪೋಣಿಸುತ್ತಿದ್ದಾಳೆನೋ ಅನ್ನುವ ಹಾಗೆ.
ಅವಳದು ಪುಟ್ಟ ಮುಖ. ದುಂಡುಮಲ್ಲಿಗೆ ಮಲ್ಲಿಗೆಯ ಹಾಗೆ. ಏನೇ ಮಹಿಳಾವಾದಿ ಬರಹಗಳನ್ನು ಓದಿಕೊಂಡಿದ್ದರು ಅವಳನ್ನು ಮಲ್ಲಿಗೆಗೆ ಹೋಲಿಸದೆ ಇರಲಾಗುತ್ತಿಲ್ಲ . ಹಾಗೆ ನೋಡಿದರೆ ಹೋಲಿಕೆ ತೀರ ಹಳತು ಆದರೂ ಪ್ರೇಮ ತಾಜಾ ತಾನೇ. ಜೀವಂತ ಕಾವ್ಯ ತಾನೇ . ಅವಳ ಸಣ್ಣ ಕಣ್ಣುಗಳು, ಸಣ್ಣ ತುಟಿಗಳು. ಅದರ ಮೇಲೆ ಇದೆಯೋ ಇಲ್ಲವೋ ಅನ್ನುವ ಹಾಗೆ ನಗು, ಚೂರೇ ಚೂರು ಚೂಪಾದ ಮೂಗು ಅದಕ್ಕೆ ದುಂಡನೆಯ ಮೂಗುನತ್ತು .
ಅದನ್ನು ಮೂಗು ನತ್ತು ಅನ್ನುವುದಿಲ್ಲವಂತೆ ಇದನ್ನು ಅವಳೇ ಹೇಳಿದ್ದು. ಆದರೆ ಅದನ್ನು ಖಾಲಿ ನೋಸ್ ರಿಂಗ್ ಎಂದು ಕರೆಯಲು ನನಗೆ ಸುತಾರಾಂ ಇಷ್ಟವಿರಲಿಲ್ಲ, ಆ ಮೂಗುನತ್ತಿನೊಂದಿಗೆ ಅವಳ ಮುಖವನ್ನು ನೋಡುವುದೇ ವಿಚಿತ್ರ ಸುಖ. ಅದು ಕೊಡುವ ಮತ್ತೇ ಬೇರೆ. ಸೌಂದರ್ಯವನ್ನು ಆಸ್ವಾದಿಸುವುದನ್ನು ಕಲಿಸದೆ ಮಲೆನಾಡು ನಿಮ್ಮನ್ನು ವಾಪಸು ಕಳಿಸುವುದಿಲ್ಲ . ಅವಳ ಗೆಳತಿ ಇದ್ದಳಲ್ಲಾ ಅವಳ ಭಾವವನ್ನು ನನಗೆ ಮಾತಾಗಿ ದಾಟಿಸುತ್ತಿದ್ದ ಭಾವಾನುವಾದಕಿ ಅವಳ ಕಪ್ಪು ಮುಖ ಮತ್ತು ಗುಂಗುರು ಕೂದಲೂ ಕೂಡ ನನ್ನವಳ ಮೂಗುನತ್ತಿನಷ್ಟೇ ಕಾಡಿದ್ದವು. ಇದನ್ನು ನಾನವಳಿಗೆ ಎಂದೂ ಹೇಳಿಲ್ಲ.. ಬಚಾವು ..
ಮೊದಲಿಗೆ ಇಬ್ಬರು ಸಂತೆಗಂತಲೇ ಹೋಗುತ್ತಿದ್ದವರು. (ನಾನು ಮಲೆನಾಡಿನ ಹೆಣ್ಣುಗಳನ್ನು ನೋಡಲೇ ಹೋಗುತ್ತಿದ್ದೆ ಅನ್ನುವುದು ಸತ್ಯಕ್ಕೆ ಹತ್ತಿರವಾದದ್ದು) ಅದೇನೋ ಅವಳು ಆದಿನ ಆ ಜನ ಜಂಗುಳಿಯ ಸಂತೆಯಲ್ಲಿ ಅಚಾನಕ್ ಆಗಿ ಕಣ್ಣಿಗೆ ಬಿದ್ದಳು ಮತ್ತು ನಾನು ಅವಳಿಗೆ . ಇಬ್ಬರದು ದೃಷ್ಟಿ ನೆಟ್ಟಿತು. ಹಾಳಾದ್ದು ಹೀಗೆ ಒಂದೇ ದಿನದ ಸಂತೆಯಲ್ಲಿ ಏಳೆಂಟು ಬಾರಿ ನಡೆದು ಬಿಡುವುದೇ. ಇದನ್ನು ಅವಳ ಮಾನ್ಯ ಭಾವಾನುವಾದಕಿಯವರೂ ಕಂಡು ಬಿಟ್ಟರು. ಹಾಗೆಯೇ ನನ್ನ ಜೊತೆಗಿದ್ದ ಮೂರು ಜನ ಜೀವದ ಗೆಳೆಯರೂ. ಮುಗಿಯಿತಲ್ಲ ಮುಂದಿನ ದೃಶ್ಯ ಸಂಯೋಜನೆ ಗಳನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು.
ಈ ನನ್ನ ಜೀವದ ಗೆಳೆಯರು ನನ್ನ ಹೆಸರನ್ನು ಅವಳಿಗೆ ಕೇಳುವಂತೆಯೂ ಅವಳ ಹೆಸರನ್ನು ನನ್ನ ಮುಂದೆಯೂ ಜೋರಾಗಿ ಕೂಗುವುದಕ್ಕೆ ಶುರುವಿಟ್ಟರು. ಅವಳು ತಿರುಗಿದರೆ ಏನೂ ನಡೆದೇ ಇಲ್ಲ ಎಂಬಂತೆ ಸುಮ್ಮನಾಗಿ ಬಿಡುವುದು. ಅವಳ ಮನೆಯ ಸಾಕಷ್ಟು ಹತ್ತಿರದವರೆಗೂ ಮಳೆಯಲ್ಲಿ ಅವಳ ಹಿಂದೆ ನಡೆದು ಹೋಗುವುದು , ಸಾಂಬಶಿವ ಪ್ರಹಸನ ನಾಟಕದ “ಅಗಲಿ ಇರಲಾರೆನೋ ಮರೆತು ಇರಲಾರೆನೋ ನಿನ್ನನ್ನ… ಸ್ಮರಣ ಹೂವಿನ ಬಾಣ ಹೊಕ್ಕವೋ ಹೃದಯವನ ಅಬಲೇ ನಾ ಮಾಡಲೇನ” ಹಾಡು ಹೇಳುವುದು, ಊಹಿಸಿಕೊಳ್ಳಿ ಆ ದಟ್ಟ ಕಾಡ ದಾರಿಯಲ್ಲಿ ಈ ವಿರಹಗೀತೆ.. ಮಳೆ ಮಣ್ಣಿನ ಘಮಲು .. ನಾನು ಮತ್ತು ಅವಳು ಇಬ್ಬರೂ ಮೌನಿಗಳು.
ಕೆಲವು ಸರಿ ಜೀವದ ಗೆಳೆಯರ ಚೇಷ್ಟೆಗಳಿಗೆ ನಮ್ಮ ಭಾವಾನುವಾದಕಿಯವರು ರೋಷಗೊಂಡು ತಮ್ಮ ಕೆಂಡಗಣ್ಣುಗಳನ್ನು ನಮ್ಮ ಕಡೆ ಎಸೆದದ್ದೂ ಇದೆ. ನಾವು ಬಾಲ ಮುದುರಿಕೊಂಡು ಹಿಂದಿರುಗಿದ್ದೂ ಇದೆ. ಹೀಗೆ ಕೆಲವು ಸಂತೆಗಳು ಸವೆದರೂ ಪ್ರಸಂಗವೂ ಯಾವುದೇ ಪ್ರಗತಿಯನ್ನು ಕಾಣಲಿಲ್ಲ. ನೋಟದಲ್ಲೇ ನಿಂತು ಬಿಟ್ಟಿತ್ತು. ಅವಳು ನನ್ನ ನೋಡಿ ನಗುತ್ತಲು ಇರಲಿಲ್ಲ. ಭಾವಾನುವಾದಕಿಯವರು ಆಗೀಗ ನೆಪಕ್ಕೆ ಎಂಬಂತೆ ಕೆಲವು ಕುಶಲೋಪರಿಯ ಸೊಲ್ಲುಗಳನ್ನು ಎಸೆಯುತ್ತಿದ್ದರು. ಜೀವದ ಗೆಳೆಯರು ಬೇಸತ್ತು ಜೊತೆಗೆ ಬರುವುದು ನಿಲ್ಲಿಸಿದರು..
ಮಲೆನಾಡಿನ ಆ ಅದ್ಭುತ ಪ್ರಣಯ ಭೂಮಿಕೆಯಲ್ಲಿ ಹೀಗೆ ವಾರಕ್ಕೆ ಒಂದು ಸಾರಿ ಕಂತು ಕಟ್ಟುವಂತೆ ಸಂತೆಯ ಜನ ಜಂಗುಳಿಯಲ್ಲಿ ಪ್ರೀತಿ ಹುಡುಕುವ ಮಾತು ಹಾಗಿರಲಿ ಕಾಳು ಹಾಕುವುದೂ ಕಷ್ಟ. ಅವತ್ತು ನಾನು ಒಬ್ಬನೇ ಹೋಗಿದ್ದೆ . ಎಷ್ಟು ಅಂತ ಸಂತೆ ಅಲೆಯುವುದು. ಅವಳು ಬರಲಿಲ್ಲ. ಕಾದು ಕಾದು ಸಾಕಾಯ್ತು. ನಾಲ್ಕು ಕುಂಟೆ ಇದ್ದ ಸಂತೆಯನ್ನು ಆಗಲೇ ನಲವತ್ತು ಸರತಿ ಸುತ್ತಿ ಆಗಿತ್ತು. ಬಹುಷಃ ಅವಳು ಬಂದು ಹೋಗಿರಬೇಕು ಅಥವಾ ಇವತ್ತು ಬರುವುದಿಲ್ಲ ಇರಬೇಕು ಅಂದುಕೊಂಡೆ. ನಮ್ಮ ನಡುವೆ ಯಾವುದೇ ರೀತಿಯ ನಿಖರ ಸಂವಹನ ಇರಲಿಲ್ಲ. ಅವಳು ಸಂತೆಗೆ ಬರುತ್ತಾಳೆ ಎನ್ನುವುದು ಒಂದು ನಂಬಿಕೆ ಅಷ್ಟೇ.ಮಳೆ ಅಥವಾ ಗಾಳಿ ಬಂದ ಹಾಗೆ.
ದಾರಿ ನೋಡುತ್ತಾ ನಿಂತೆ. ಅವಳು ಬರುವುದು ಕಾಣಿಸಿತು. ಅಂದು ಅವಳು ಹತ್ತಿರ ಬರುತಿದ್ದಂತೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ನಕ್ಕಳು . ನನಗೆ ಸ್ಪಷ್ಟವಾಗಿ ನೆನಪಿದೆ ಇದು ಅವಳು ನನಗಾಗಿ ನಕ್ಕ ಮೊದಲ ನಗು. ನಿಜವಾಗಿಯೂ ಅವಳು ನನಗಾಗಿಯೇ ನಕ್ಕಿದ್ದು ಅಂದು ಅವಳು ತನ್ನ ಒಳಲೋಕದ ಗೊಂಬೆಗೆ ಕಸೂತಿ ಹೊಲೆಯುವುದನ್ನು ಬಿಟ್ಟು ನನ್ನ ನೋಡಿದ್ದಳು. ಮೂಗುನತ್ತು ಹೊಳೆಯುತ್ತಿತ್ತು. ನಾನು ವಿಸ್ಮಿತನಾದಂತೆ ಹೇಳಿದೆ ‘ಮೂಗುನತ್ತು ನಿಮಗೆ ಚನ್ನಾಗಿ ಕಾಣುತ್ತೆ”. ಅವಳು ತುಸು ಹೆಚ್ಚೇ ಅನ್ನುವಂತೆ ನಕ್ಕು “ಅದು ಮೂಗುನತ್ತಲ್ಲ ನೋಸ್ ರಿಂಗ್ ಅಂದಳು .
ಇಬ್ಬರೂ ಮಾತಾಡಲಿಲ್ಲ. ಇಡಿ ಸಂತೆಯೇ ಯಾಕೋ ಇವತ್ತು ಮೌನವಾಗಿದೆಯಲ್ಲ ಅನಿಸುತಿತ್ತು . ಮಾನ್ಯ ಭಾವಾನುವಾದಕಿಯವರು ಆ ಮೌನವನ್ನು ಚೆನ್ನಾಗಿ ಕದಡುವಂತೆ ಇವತ್ತು ನೀವು ಬೇಗ ಬಂದ್ರಾ ? ನಿಮ್ ಫ್ರೆಂಡ್ಸ್ ಯಾರು ಬರಲಿಲ್ವಾ? ಅಂದರು. ಸದ್ಯಕ್ಕೆ ನನಗೆ ಯಾವ ಅನುವಾದವೂ ಬೇಕಿರಲಿಲ್ಲ ಭಾವವೇ ಮಾತಾಡುತ್ತಿತ್ತು. ಪ್ರಣಯ ಮೌನಕ್ಕೆ ಬೆಂಕಿ ಹಚ್ಚಿದ ಅವರ ಚತುರತೆಗೆ ನನಗೆ ಕೋಪ ಬಂದರೂ ಬರದವಂತೆ ನಟಿಸಿ ಇಲ್ಲ ಅಂದು ಪೊಳ್ಳು ನಗೆ ನಕ್ಕು ಸುಮ್ಮನಾದೆ. ಅವರಿಬ್ಬರೂ ಸಂತೆ ಮಾಡಲು ಹೊರಟರು. ಅವಳು ನನ್ನತ್ತ ತಿರುಗಿ ಆ ಮೂಗುನತ್ತನ್ನು ಏನೋ ಸರಿ ಮಾಡಿಕೊಳ್ಳುವಂತೆ ಕೈ ಹಾಕಿ ಹೊತ್ತಿ ಕೊಂಡಳು. ಸಣ್ಣಕ್ಕೆ ನೋವಾದಂತೆ ಮುಖ ಹಿಂಡಿದಳು. ಎಡಗಣ್ಣು ಮುಚ್ಚಿದ್ದಳು. ಅಲ್ಲಿ ನಗುವೂ ಇತ್ತು. ಈಗ ಮೈ ಕಂಪನಗಳಿಗೆ ಅನಂತ ರೆಕ್ಕೆ ಬಂದಂತೆ ನಾನು. ಕಸೂತಿ ಪೂರ್ಣಗೊಳಿಸಿದ ಸಂಭ್ರಮದಲ್ಲಿ ಅವಳು .
ಸುಮಾರು ದಿನ ಎದುರು ಸಿಕ್ಕಾಗ ಕಣ್ಣು ಕಣ್ಣು ಬೆರೆಯುವುದು, ನಗುವುದು ಇಷ್ಟೇ ನಡೆಯಿತು. ಅವಳ ಭಾವಾನುವಾದಕಿ ನನ್ನ ಅಣ್ಣ ಅನ್ನಲು ತೊಡಗಿದ್ದಳು. ಇವಳೇ ಹೇಳಿದ್ದು ಎಂದು ಆಮೇಲೆ ತಿಳಿಯಿತು. ಇದ್ದಕ್ಕಿದ್ದ ಹಾಗೆ ಅದೇನಾಯಿತೋ ಗೊತ್ತಿಲ್ಲ. ಅದಾದ ಮೇಲೆ ಅವಳು ಸುಮಾರು ವಾರ ಸಂತೆಗೆ ಬರಲೇ ಇಲ್ಲ. ನಾನು ಬಂದು ಕಾದು ವಾಪಸು ಹೋಗುತಿದ್ದೆ. ಇಷ್ಟು ದಿನವಾದರೂ ನಾನು ಅವಳ ಫೋನ್ ನಂಬರ್ ಕೇಳಿರಲಿಲ್ಲ ಅವಳು ಕೂಡ. ನಾನು ನನ್ನ ಕೆಲಸದಲ್ಲಿ ಬ್ಯುಸಿ ಆದೆ ಆಗಾಗ ಅವಳು ಮನಸಲ್ಲಿ ಹಾದು ಹೋಗುತ್ತಿದ್ದಳು. ಆಗ ಮಹಾಕವಿಯಂತೆ ನನ್ನನ್ನು ನಾನು ಭಾವಿಸಿಕೊಂಡು ನಾಲ್ಕೈದು ಪ್ರಾಸಗಳನ್ನು ಬರೆದಿದ್ದೆ ಅವಳಿಗೆ ತೋರಿಸೋಣ ಅಂತಲೂ ಅಂದುಕೊಂಡಿದ್ದೆ. ತೋರಿಸಲಿಲ್ಲ . ನನಗೆ ಆ ಸಂಬಂಧ ಮಲೆನಾಡ ಕಾಡಿನಷ್ಟೇ ವಿಸ್ಮಯ. ಅವಳ ಮೊಗಕ್ಕೆ, ನಗುವಿಗೆ, ಮೂಗುನತ್ತಿಗೆ ಮಾರುಹೋಗಿದ್ದೆ ಅನ್ನುವುದು ನಿಜ. ಅವಳಿಗೂ ನಾನು ಇಷ್ಟವಾಗಿರಬೇಕು ಅಂದುಕೊಂಡಿದ್ದೇನೆ. ಆದರೆ ಇಬ್ಬರೂ ಮುಂದುವರಿಯಲಿಲ್ಲ.ಅದ್ಯಾಕೋ ?ಏನಾಯಿತೆಂದು ಇವತ್ತಿಗೂ ಗೊತ್ತಿಲ್ಲ.
ಮಳೆಗಾಲ ಮುಗಿದಿತ್ತು ನಾನು ಕಬ್ಬಿನ ಹಾಲು ಕುಡಿಯಲು ಅವಳ ಮನೆ ಹತ್ತಿರದ ಆಲೆ ಮನೆಯೊಂದಕ್ಕೆ ಹೋಗಿದ್ದೆ ಬರುವಾಗ ದಾರಿಯಲ್ಲಿ ಅವಳು ಸಿಕ್ಕಳು ಕಂಕುಳಲ್ಲಿ ನೀರಿನ ಕೊಡ ಹೊತ್ತು ಮನೆಗೆ ಹೋಗುತ್ತಿದ್ದಳು. ನೋಡಿ ನಗುತ್ತ ಮಾತಾಡಿಸಿದಳು. ಮೊದಲಿನ ನಗುವಲ್ಲ ಅದು. ಪಾತ್ರವೊಂದಕ್ಕೆ ನಾನು ಮುಂಚೆ ಬಿಟ್ಟಿದ್ದ ಉದ್ದ ಕೂದಲನ್ನು ಕತ್ತರಿಸಿದ್ದೆ. ಅದು ಅವಳಿಗೆ ಇಷ್ಟವಾಗಲಿಲ್ಲ. ಉದ್ದ ಕೂದಲು ಚನ್ನಾಗಿ ಕಾಣುತಿತ್ತು ಅಂದಳು. ನಕ್ಕೆ. ಅಷ್ಟರಲ್ಲಿ ಅವರ ಅಪ್ಪ ನೀರು ಹೊತ್ತು ಬಂದರು. ನನ್ನನ್ನು ಪರಿಚಯಿಸಿ ಮನೆಗೆ ಕರೆದಳು ನನಗ್ಯಾಕೋ ಹೋಗಲು ಮನಸಾಗಲಿಲ್ಲ.. ಮತ್ತೊಮ್ಮೆ ಬರುತ್ತೇನೆಂದು ಹೊರಟೆ..
ಇದು ಅವಳ ಕೊನೆಯ ಭೇಟಿ ಆ ದಾರಿ,ಅವಳಿಗಿಂತ ಭಾರವಾದ್ದೆ ಅನ್ನುವ ಕಂಚಿನ ಕೊಡ, ಅವರ ಅಪ್ಪನ ದಪ್ಪ ಬಿಳಿ ಮೀಸೆ ಎತ್ತರದ ನಿಲುವು, ಮನೆಗೆ ಕರೆದಾಗ ಅವಳ ದನಿಯಲ್ಲಾದ ಒಡಕು ಸ್ವಲ್ಪವೇ ದೂರಕ್ಕೆ ಕಾಣುತಿದ್ದ ಅವಳ ಮನೆ, ಅದರ ಬೇಲಿ, ಬಿದಿರು ಗಳುಗಳಿಂದ ಮಾಡಿದ ತಟ್ಟಿಗೆ ಅದನ್ನವಳು ಸರಿಸಿದಾಗ ಆದ ಸದ್ದು.. ಇದೆಲ್ಲ ಈಗ ಚಿತ್ರ.. ಅಪ್ಪ ಇದ್ದದ್ದಕ್ಕೆನೋ ತಿರುಗಿಯೂ ನೋಡಲಿಲ್ಲ …
ಊರು ಬಿಟ್ಟೆ..
ಮೊನ್ನೆ ಯಾವುದೋ ಉತ್ಸವಕ್ಕೆಂದು ಗೆಳೆಯನೊಬ್ಬ ಅಲ್ಲಿಗೆ ಹೋದಾಗ ಅವಳು ಸಿಕ್ಕಿದ್ದಳಂತೆ. ಅವನನ್ನು ಹೇಗಿದ್ದೀರಿ ಅಂತಲೂ ಕೇಳದೆ ನನ್ನನ್ನು ಬಂದಿದ್ದಾರೆಯೇ ಎಂದು ಕೇಳಿದಳಂತೆ. ಇವನು ಹೊಟ್ಟೆ ಉರಿದುಕೊಂಡು ಅದನ್ನು ಹೇಳಿದ. ನನಗೆ ಏನು ಮಾತಾಡಲು ಮನಸಾಗಲಿಲ್ಲ..
ಎಷ್ಟೆಂದರೂ ಅವಳು ಕಸೂತಿ ಕೆಲಸದವಳು … ಇಲ್ಲಿ ಎದೆಯಲ್ಲೂ ಅವಳ ನಗುವಿನ , ಮೂಗುನತ್ತಿನ ಕಸೂತಿಯಿದೆ .





🙂 munduvareyade ninta eshtondu haadugalu 🙂 mnduvareyabekittu anisuttade
“ಸಿಂಪಲ್ಲಾಗಿ ಒಂದು ಲೌ ಸ್ಟೋರಿ” ಹುಡಿಗಿಯರ ಮನಸ್ಸು ಅರ್ಥವಾಗುದು ಕಷ್ಟ. ಜೊತೆಗೆ ನಮಗೂ ಧೈರ್ಯ ಬೇಕು. ಅವಳನ್ನು ನೋಡಿ ಕೈ ಕಾಲು ನಡಗಿ ಏನು ಮಾಡುವುದು ತಿಳಿಯದೇ, ಆದರೆ ನೋಡಿದರೆ ನೋಡುತ್ತಲೇ ಇರುವ ನಮ್ಮ ಮನಸ್ಥಿತಿ ಗೆ ಏನು ಹೇಳುವುದು?. ನರೂಪಣೆ ಸ್ವಂತ ಅನುಭವ ಇರಬೇಕು. ಸರಿತಾನೆ?
Lakshman Bahala chennagidhe idhu nimma real story na?
“ಆಗಲಿ ಇರಲಾರೆನೋ ಮರೆತು ಇರಲಾರೆನೋ ನಿನ್ನನು..”
ಹಿತವಾದ ಹಿಡಿತವಾದ ಒಳ್ಳೆ ಬರವಣಿಗೆ.ಕತೆಗಾರ ತನ್ನನ್ನೇ ತಾನು ಅಂಕೆ ದಾಟದೆ ಕಿಚಾಯಿಸಿಕೊಳ್ಳುವುದು,ಮಲೆನಾಡಿನ ವರ್ಣನೆ, ಕಥಾನಾಯಕಿಯ ಮೌನ ಕಸೂತಿ ಮತ್ತವಳ ಭಾವಾನುವಾದಕಿ ಎಲ್ಲವೂ ಸೊಗಸು,ಮುದ ನೀಡುತ್ತವೆ.ನಮ್ಮ ಅನುಭವಕ್ಕೆ ನಿಲುಕುವಂತೆ ಪರಿಚಯಿಸಿದ್ದೀರಿ.ಆದರೂ ಕಥೆ ಅಪೂರ್ಣ ಒಂದು ವರದಿಯಷ್ಟೇ ಅನಿಸಿತು.