ಅವರ ಗೊರಕೆಯು ನನ್ನ ನಿದ್ರೆಗೆ ಭಂಗ ತಂದಿತು..

ಕಾಣದ ಕಡಲಿಗೆ ಹಂಬಲಿಸಿದೆ ಮನ..

ಹೆಜ್ಜೆ 2

ಮಹಾಮನೆಯ ದಾಕ್ಷಿಣ್ಯ   

avadhi-column-rahul bw-edited2    

ರೈಲು ಹುಬ್ಬಳ್ಳಿ ಬಿಟ್ಟು ಧಾರವಾಡದ ದಿಕ್ಕಿಗೆ ಹೊರಟಿತು. ಧಾರವಾಡದಿಂದ ಎಲ್ಲಿಗೆ ಹೋಗುವುದು? ಸುಮಾರು ಬೆಳಗಿನ ಜಾವ ನಾಲ್ಕು ಗಂಟೆಗೆ ರೈಲು ಧಾರವಾಡ ತಲುಪಬಹುದಾಗಿದ್ದರಿಂದ, ಬೆಳಕು ಹರಿಯುವವರೆಗೂ ಸ್ಟೇಷನ್‍ನಲ್ಲೇ ಕುಳಿತು, ಬೆಳಗಾದ ಮೇಲೆ ಮುಂದೆ ಎಲ್ಲಿಗೆ ಹೋಗಬೇಕೆಂಬ ವಿಚಾರ ಮಾಡಿದರಾಯಿತು ಎಂದು ನೆನೆದೆ. ಧಾರವಾಡದ ಸ್ಟೇಷನ್‍ನಲ್ಲಿ ಕೆಲವೇ ಜನ ಇಳಿದರೂ, ಸ್ಟೇಷನ್ ಮಾಸ್ಟರ್ ಎಲ್ಲರ ಟಿಕೆಟ್‍ನ್ನು ಪರಿಶೀಲಿಸಿ ಹೊರಗೆ ಬಿಟ್ಟ.

ಟಿಕೆಟ್ ಕೊಡುವ ಸ್ಥಳದಲ್ಲಿ ಕೂರಲು ಒಂದಷ್ಟು ಚೇರುಗಳನ್ನು ಇಡಬೇಡವೇ. ನೆಲದ ಮೇಲೆಲ್ಲಾ ಪ್ರಯಾಣಿಕರು, ಭಿಕ್ಷುಕರು ಮಲಗಿದ್ದರು. ಸರಿ ಅಲ್ಲಿ ನಿಂತರೆ ಕೆಲಸ ಕೆಡುತ್ತದೆಂದು ತಿಳಿದು, ಬಸ್ ನಿಲ್ದಾಣದ ದಾರಿಯನ್ನು ವಿಚಾರಿಸಿದೆ. ಎಲ್ಲರೂ ಅದು ಬಹಳ ದೂರವಿದೆ ಎಂದರೇ ಹೊರತು ಅಲ್ಲಿಗೆ ಹೋಗಲು ದಾರಿ ಹೇಳಲಿಲ್ಲ. ಅಲ್ಲಿದ್ದ ಆಟೋದವ ನಾನು ತೊಟ್ಟಿದ್ದ ವೇಷಭೂಷಣವನ್ನು ನೋಡಿ ನಾನು ಭಾರಿ ಆಳೇ ಇರಬೇಕೆಂದು ತಿಳಿದು “ಸರ್ರಾ! 300 ರೂಪಾಯಿ ಕೊಡ್ರಿ. ಬಸ್ ಸ್ಟಾಂಡ್‍ಗೆ ಬಿಡ್ತೀನಿ” ಎಂದ.

avadhi- column- rahul- low res- edited“ಅಯ್ಯೋ ಮಾರಾಯ, 300 ರೂಪಾಯಿಯಲ್ಲಿ ನಾನು ಮೈಸೂರಿನಿಂದ ಧಾರವಾಡಕ್ಕೇ ತಲುಪಿದ್ದೀನಿ. ನೀ ಸುಮ್ನೆ ಇರಪ್ಪಾ, ನನಗೆ ಹೋಗೋದು ಗೊತ್ತು” ಎಂದೆ. ಅವನ ನಕ್ಕು ಸುಮ್ಮನೆ ಆದ. ಅಲ್ಲೇ ಒಬ್ಬ ಮುಸಲ್ಮಾನ ತಾತ ಚಹಾ ಮಾರುತ್ತಿದ್ದ.

“ಅಸ್ಸಲಾಮು ಅಲೈಕುಂ” ಎಂದೆ.

“ವ ಅಲೈಕುಂ ಸಲಾಮ್” ಎಂದುತ್ತರಿಸಿದ.

ರಂಜಾನ್ ದಿನವಾದ್ದರಿಂದ “ರಂಜಾನ್ ಮುಬಾರಕ್ ಅಜ್ಜ” ಎಂದು ಶುಭಾಷಯ ಕೋರಿದೆ.

ಅವನು ನಕ್ಕು “ಯಾವೂರ್ರೀ ಸರ್ರಾ” ಎಂದು ಕೇಳಿದ.

“ನಾನು ಮೈಸೂರಿಂದ ಬಂದಿನ್ರೀ” ಎಂದೆ. ನನಗೆ ಗೊತ್ತಿಲ್ಲದ ಹಾಗೆ ನನ್ನ ಬಾಯಿಂದ ಅಸ್ಪಷ್ಟವಾಗಿ ಹುಬ್ಬಳ್ಳಿ ಭಾಷೆ ಬರುತ್ತಿತ್ತು.

“ಎಲ್ಲಿಗ್ ಹೋಗ್‍ಬೇಕ್ರೀ” ಎಂದು ಕೇಳಿದ.

“ಗೊತ್ತಿಲ್ರೀ, ಬೆಳಕಾದ ಮೇಲೆ ಯೋಚನೆ ಮಾಡ್‍ತೀನಿ” ಎಂದೆ.

ಅದಕ್ಕೆ ಅವನು ನಕ್ಕು ಒಂದು ಪೇಪರ್ ಲೋಟದಲ್ಲಿ ಚಹಾ ಕೊಟ್ಟ. ಅದರ ಜೊತೆಯಲ್ಲೇ ಒಂದು ಸಿಗರೇಟ್ ಹತ್ತಿಸಿದೆ. ನಾಲ್ಕು ದಮ್ ಎಳೆದು ಚಹಾ ಕುಡಿದು ಮುಗಿಸುವಷ್ಟರಲ್ಲಿ, ಆ ಅಜ್ಜ 05:30ಕ್ಕೆ ಒಂದು ಬಸ್ ಬರುವುದೆಂದೂ, ಅದು ಬಸ್‍ಸ್ಟಾಂಡ್‍ಗೆ ಹೋಗುವುದೆಂದೂ ತಿಳಿಸಿದ. ಮೂರ್ನಾಲ್ಕು ರೈಲುಗಳು ಬಂದು ಹೋದವು. ಅದರಲ್ಲೊಬ್ಬ ಪ್ರಯಾಣಿಕ ಮತ್ತೊಬ್ಬ ಪ್ರಯಾಣಿಕನಿಗೆ ಧಾರವಾಡದ ಮಹಾಮನೆ ಎಂಬ ಆಶ್ರಮದ ಸ್ವಾಮೀಜಿಯವರು ಕೊಡುವ ಪ್ರಕೃತಿ ಚಿಕಿತ್ಸೆಯ ಬಗ್ಗೆ ವಿವರಿಸುತ್ತಿದ್ದುದು ನನ್ನ ಕಿವಿಗೆ ಬಿತ್ತು. ಸರಿ ಹಾಗಾದರೆ, ಅಲ್ಲಿಗೇ ಹೋಗುವುದೆಂದು ನಿರ್ಧರಿಸಿದೆ.

ಬಂದ ಬಸ್ಸಿನೊಳಗೆ ಹತ್ತಿ ಕುಳಿತು “ಬಸ್‍ಸ್ಟಾಂಡಿಗೆ ಒಂದು ಟಿಕೆಟ್‍ಕೊಡಿ” ಎಂದೆ.

“ಹಳೇ ಸಿ.ಬಿ.ಟಿ ಗಾ, ಹೊಸ ಸಿ.ಬಿ.ಟಿ ಗಾ” ಎಂದು ಕೇಳಿದ.

ಸರಿ, ಮೊದಲು ಹಳೆಯದರಿಂದ ಶುರುಮಾಡೋಣವೆಂದು “ಹಳೇ ಸಿ.ಬಿ.ಟಿಗೆ ಕೊಡ್ರಿ” ಎಂದು ಹೇಳಿ ಟಿಕೆಟ್ ಪಡೆದೆ. ಹಳೇ ಸಿ.ಬಿ.ಟಿಗೆ ಬಂದು ಇಳಿದಾಗ ಬಸ್‍ನಿಲ್ದಾಣ ಬಿಕೋ ಎನ್ನುತ್ತಿತ್ತು. ಸಿಕ್ಕ ಮೂರ್ನಾಲ್ಕು ಕಂಡಕ್ಟರ್‍ನ್ನು ವಿಚಾರಿಸಿದರೆ, ಮಹಾಮನೆ ಮನಗುಂಡಿ ಗ್ರಾಮದಲ್ಲಿದ್ದು, ಕೋರ್ಟ್ ಸಿಗ್ನಲ್‍ನಿಂದ ಬಸ್ಸು ಹೋಗುವುದೆಂದು ಹೇಳಿದರು. ಅಲ್ಲಿ ಇಲ್ಲಿ ಕೇಳಿ ಕೋರ್ಟ್ ಸಿಗ್ನಲ್ ತಲುಪಿ ವಿಚಾರಿಸಿದರೇ, ಜುಬಿಲಿ ಸರ್ಕಲ್‍ನಲ್ಲಿ ಬಸ್ಸು ಬರುತ್ತದೆಂದು ಹೇಳಿದರು. ಮತ್ತೆ ವಾಪಸ್ ನಡೆದು ಜುಬಿಲಿ ಸರ್ಕಲ್‍ನಲ್ಲಿ ಬಂದು ವಿಚಾರಿಸಿ, ಬಸ್ ನಿಲ್ದಾಣದಲ್ಲಿ ಕಾದು ಕುಳಿತೆ.

ಸ್ವಲ್ಪ ದೂರದಲ್ಲೇ ಒಬ್ಬಳು ಬುರ್ಖಾಧಾರಿಣಿ ಬಂದು ಕುಳಿತಳು. ಕೈಚೀಲದಲ್ಲಿ ಕೆಲವು ಪುಸ್ತಕಗಳಿದ್ದವು. ಕಾಲೇಜು ಹುಡುಗಿಯಿರಬಹುದೆಂದು ಗ್ರಹಿಸಿದೆ. ಬುರ್ಖಾದ ಸಂದಿಯಿಂದ ಅವಳ ಕಣ್ಣುಗಳು ಚಂದ್ರದ ತುಂಡುಗಳಂತೆ ಪ್ರಕಾಶಿಸುತ್ತಿದ್ದವು. ಅಲ್ಲಿ ಇಲ್ಲಿ ಇಣುಕಿ ನೋಡುತ್ತಿದ್ದ ಬಿಳಿ ಹಾಲಿನ ಚರ್ಮ ಹೊಳೆಯುತ್ತಿತ್ತು. ಅವಳ ಮೈಯಿಂದ ಬರುತ್ತಿದ್ದ ಸುವಾಸನೆ ಎಂತಹವರನ್ನೂ ಅತ್ತ ಒಂದು ಸಲ ತಿರುಗಿ ನೋಡುವಂತೆ ಮಾಡುತ್ತಿತ್ತು. ನಾನೊಂದು ನಾಲ್ಕೈದು ಸಲವಾದರೂ ಅವಳ ಕಣ್ಣನ್ನೇ ದುರುಗುಟ್ಟಿ  ನೋಡಿದೆ. ಅವಳೊಂದೆರೆಡು ಸಲ ನನ್ನತ್ತ ತಿರುಗಿ ನೋಡಿದರೂ, ಬುರ್ಖಾಧಾರಿಣಿಯಾದ್ದರಿಂದ ನಗು ಬೀರಿದಳೋ ಇಲವೋ ಎಂಬ ತುಂಟು ಕುತೂಹಲ.  ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ ಒಂದು ತಂದೆ ಮಗಳ ಜೋಡಿ ಬಂದು ನನ್ನ ಮತ್ತು ಬುರ್ಖಾಧಾರಿಣಿಯ ಮಧ್ಯೆ ಕುಳಿತರು. ಇನ್ನು ಅತ್ತ ನೋಡಿದರೆ, ನನ್ನ ಪಕ್ಕದಲ್ಲಿ ಕುಳಿತ ತಂದೆ ತನ್ನ ಮಗಳನ್ನು ನಾನು ನೋಡುತ್ತಿರುವೆನೆಂದು ತಿಳಿದುಕೊಂಡಾರು ಎಂದು ಹೆದರಿ, ಅತ್ತ ನೋಡಲೇ ಇಲ್ಲ. ಆ ಬುರ್ಖಾ ಹುಡುಗಿಯು ನಂತರವೇ ಬಂದ ಬಸ್ಸನ್ನು ಏರಿ ಹೊರಟು ಹೋದಳು.

ತರುವಾಯ ಒಬ್ಬ ಫ್ರೆಂಚ್ ಗಡ್ಡಬಿಟ್ಟಿದ್ದ ಮತ್ತು ಕಣ್ಣಿಗೆ ಸ್ಟೈಲಾಗಿ ಕನ್ನಡಕ ಹಾಕಿಕೊಂಡು ವಿಜ್ಞಾನಿಯಂತೆ ಕಾಣುತ್ತಿದ್ದವರು ಮಹಾಮನೆ ಮತ್ತು ಮನಗುಂಡಿಯ ಬಗ್ಗೆ ವಿಚಾರಿಸಿದ್ದು ಕಾಣಿಸಿತು. ಸುಮಾರು 60ರ ಪ್ರಾಯ. ನನಗೂ ಜೊತೆಯಾಯಿತು ಎಂದು ತಿಳಿದು ಕರೆದು, ನಾನೂ ಕೂಡ ಮಹಾಮನೆಗೇ ಹೋಗುತ್ತಿರುವುದಾಗಿ ತಿಳಿಸಿ ನನ್ನ ಪಕ್ಕ ಕೂರಿಸಿಕೊಂಡೆ. ಮನಗುಂಡಿಗೆ ಹೋಗುವ ಬಸ್ಸು ಬಂದಿತು. ಬಸ್ ಕಂಡಕ್ಟರ್‍ನ್ನು ಮನಗುಂಡಿಯಿಂದ ಮಹಾಮನೆಗೆ ಎಷ್ಟು ದೂರ, ಅಗಲ ಎಂದೆಲ್ಲಾ ವಿಚಾರಿಸಿಕೊಂಡ ಆ ವಿಜ್ಞಾನಿ, ಮನುಗುಂಡಿಯಿಂದ ಎರಡು ಮೈಲು ನಡೆದುಕೊಂಡು ಹೋಗಬೇಕು ಎಂದಾಗ ಧಾರವಾಡದಿಂದಲೇ ಒಂದು ಆಟೋ ಹಿಡಿದು ಹೋಗೋಣವೇ ಎಂದು ನನ್ನತ್ತ ತಿರುಗಿನೋಡಿದರು. ನಾನು ಜೊತೆಗಿದ್ದೇನೆ, ಯೋಚನೆ ಮಾಡಬೇಡಿ, ಮನಗುಂಡಿಯಿಂದ ಮಹಾಮನೆಗೆ ಹೋಗುವ ದಾರಿಯನ್ನು ನಡೆದೇ ಕ್ರಮಿಸೋಣ ಎಂದು ಭರವಸೆಕೊಟ್ಟ ನಂತರ ಒಪ್ಪಿಕೊಂಡರು.

joxi_screenshot_1465823962059ಮನಗುಂಡಿಗೆ ಬಂದು ಇಳಿದಾಗ ಸಮಯ 07:30 ಇರಬಹುದು. ವಾಚು, ಮೊಬೈಲು ಬಿಟ್ಟು ಬಂದವನಿಗೆ ಸಮಯವೆಲ್ಲಿ ತಿಳಿಯಬೇಕು. ಅಂದಾಜು ಮಾಡುವುದಷ್ಟೇ ನನ್ನ ಕೆಲಸ. ಕಡಕ್ ಸಮಯ ತಿಳಿದುಕೊಂಡು ನನಗೇನಾಗಬೇಕು. ಹಾಗಾಗಿ ಮಿಕ್ಕವರನ್ನು ಕೇಳಿ ತಿಳಿದುಕೊಳ್ಳುವುದನ್ನೂ ಕೂಡ ನಿಲ್ಲಿಸಿದ್ದೆ. ಅಲ್ಲಿಯೇ ಇದ್ದ ಯುವಕ ತೋರಿಸಿದ ದಾರಿಯನ್ನು ಹಿಡಿದು ನಡೆಯಲು ಶುರುಮಾಡಿದೆವು. ವಿಜ್ಞಾನಿಯವರು ಹಿಡಿದಿದ್ದ ಸೂಟ್‍ಕೇಸ್‍ನ್ನು ನನಗೆ ಕೊಡುವಂತೆ ಕೇಳಿದೆ. ಅವರು ಸಂಕೋಚದಿಂದ ಬೇಡವೆಂದರು. ನಮ್ಮ ಪರಸ್ಪರ ಪರಿಚಯ ಮಾಡಿಕೊಂಡೆವು. ಅವರ ಹೆಸರು ಹೆಗ್ಗಡೆ. ಒಂದು ಕಾಲದಲ್ಲಿ ನಾಸಿಕ್‍ನಲ್ಲಿ ಹೋಟೆಲ್ ವ್ಯಾಪಾರವಿತ್ತಂತೆ. ಈಗ ಬೆಂಗಳೂರಿನಲ್ಲಿ ಅವರ ಚಿಕ್ಕ ಮಗಳ ಜೊತೆಯಲ್ಲಿ ಅವರ ವಾಸ. ಅವರ ಮೂಲ ಸ್ಥಳ ಶಿರಸಿ. ಅವರ ಮಾತಲ್ಲಿ ಶಿರಸಿಯ ಕಂಪು ಇತ್ತು.

ನನ್ನ ಕಿರುಪರಿಚಯ ಮಾಡಿಕೊಂಡೆ. ನಾನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆಂದು ಗೊತ್ತಾದಾಗಿನಿಂದ ಸ್ವಲ್ಪ ಹೆಚ್ಚಿಗೆಯೇ ಗೌರವ ಕೊಡಲು ಶುರುಮಾಡಿದರು. ರಸ್ತೆಯೇನೋ ಚೆನ್ನಾಗಿಯೇ ಇತ್ತು. ಆದರೆ ಬೆಟ್ಟ ಗುಡ್ಡಗಳ ಪ್ರದೇಶ. ಏರಿ ಇಳಿದು ದಾರಿ ಸವೆಸಬೇಕಾಗಿತ್ತು. ಹೆಗ್ಗಡೆಯವರಿಗೆ ಒಂದು ಸೂಟ್‍ಕೇಸ್ ಮತ್ತು ಒಂದು ಕೈಚೀಲವಿಡಿದುಕೊಂಡು ನಡೆಯಲು ತ್ರಾಸವಾಗುತ್ತಿದೆ ಎಂದು ಅರಿತ ನಾನು ಅವರ ಸೂಟ್‍ಕೇಸ್‍ನ್ನು ಒತ್ತಾಯ ಮಾಡಿ ಅವರಿಂದ ಪಡೆದೆ. ವಿನಯದಿಂದಲೇ ಕೊಟ್ಟರು. ಅದನ್ನು ನನ್ನ ಕೈಗೆ ತೆಗೆದುಕೊಂಡ ಕೂಡಲೇ ತಿಳಿಯಿತು, ಅದರ ತೂಕ ಸ್ವಲ್ಪ ಜಾಸ್ತಿಯೇ ಇದೆ ಎಂದು. ಒಯ್ಯಲು ನನಗೂ ಕಷ್ಟವಾಗಬಹುದೇನೋ ಎಂದು ಎನಿಸಿದರೂ ಬೇರೆ ದಾರಿಯಿರಲಿಲ್ಲ. ನನ್ನ ಪ್ರೆಸ್ಟೀಜ್ ಪ್ರಶ್ನೆ. ಮಾತುಕೊಟ್ಟಾಗಿತ್ತು. ಸ್ವಲ್ಪ ದೂರ ನಡೆಯುವುದರಲ್ಲೇ ಒಂದು ಚಿಕ್ಕ ಝರಿ ಕಾಣಿಸಿತು. ಯಾವಾಗಲಾದರೂ ಮಹಾಮನೆಯಿಂದ ಬಂದು ಆ ಝರಿಯಲ್ಲಿ ಆಟವಾಡಬಹುದೆಂದು ಮಾತನಾಡಿಕೊಂಡೆವು. ಮಾತು ಮುಂದುವರಿಯಿತು.

“ನೀವು ಇಲ್ಲಿಗೆ ಬಂದ ಕಾರಣ?” ಎಂದು ಕೇಳಿದರು.

ನನ್ನ ಪುರಾಣವೆಲ್ಲಾ ಅವರಿಗೇತಕ್ಕೆ. “ಸುಮ್ಮನೆ ಓಡಾಡಿಕೊಂಡು ಹೋಗೋಣವೆಂದು ಬಂದೆ” ಎಂದುತ್ತರಿಸಿದೆ.

“ಎಷ್ಟು ದಿನವಿರುತ್ತೀರಿ?” ಎಂದು ಕೆಣಕಿದರು.

“ಗೊತ್ತಿಲ್ಲ. ಅಲ್ಲಿಯ ವಾತಾರಣವನ್ನು ನೋಡಿ ನಿರ್ಧಾರ ಮಾಡಬೇಕು” ಎಂದು ಹೇಳಿದೆ.

ಕುತೂಹಲದಿಂದ “ನಿಮಗೆ ಆರೋಗ್ಯದಲ್ಲಿ ಏನು ಪ್ರಾಬ್ಲಮ್?” ಎಂದು ಕೇಳಿದರು.

“ದೇವರ ದಯೆಯಿಂದ ಆರೋಗ್ಯದಲ್ಲಿ ಏನು ಪ್ರಾಬ್ಲಮ್ ಇಲ್ಲ ಸರ್” ಎಂದೆ.

“ನೀವು ಯಾವ ಕಾರಣಕ್ಕಾಗಿ ಮಹಾಮನೆಗೆ ಭೇಟಿ ಕೊಡುತ್ತಿದ್ದೀರಿ ಸರ್?” ಎಂದು ಕೇಳಿದೆ.

“ನಾನು ತೂಕ ಇಳಿಸಲು ಬಂದಿದ್ದೇನೆ” ಎಂದು ತಮ್ಮ ಬ್ರಾಹ್ಮಣ ಹೊಟ್ಟೆಯನ್ನು ಮುಟ್ಟಿ ತೋರಿಸಿದರು.

ಅಯ್ಯೋ ಶಿವನೇ ಬರೀ ದೇಹದ ತೂಕ ಇಳಿಸಲೇ ಇಷ್ಟು ದೂರ ಬರಬೇಕೆಂದರೆ, ನನ್ನ ಮನಸ್ಸಿನ ತೂಕ ಇಳಿಸಲು ಹಿಮಾಲಯಕ್ಕೇ ಹೋಗಬೇಕಾಗಬಹುದೇ? ಎಂದು ಎಣಿಸಿದೆ.

ಆ ನಂತರ ಅವರೇ ಮಹಾಮನೆಯಲ್ಲಿ ಉಪವಾಸದ ಚಿಕಿತ್ಸೆ ಕೊಡುತ್ತಾರೆಂದೂ, ಚಿಕಿತ್ಸೆಗೆ 100ರೂ,  ಅಲ್ಲಿ ಇರಲು 250ರೂ ಎಂದು ಹೇಳಿದರು. ಒಹೋ ಇಲ್ಲಿ ನನ್ನ ರೊಕ್ಕ ಸ್ವಲ್ಪ ಖಾಲಿಯಾಗಬಹುದೆಂದುಕೊಂಡೆ. ನಮ್ಮ ದೇವನೂರು ಮಠವಾಗಿದ್ದರೆ ಪುಕ್ಕಟ್ಟೇ ಒಂದಷ್ಟು ದಿನ ದಾಸೋಹ ಉಂಡು ಕಾಲ ಕಳೆಯಬಹುದಿತ್ತು. ಹೆಗ್ಗಡೆಯವರು ಬೇಲಿಯ ಗಿಡಗಳತ್ತ ತಿರುಗಿ, ಬಹುತೇಕರ ಆಯುರ್ವೇದ ಶಕ್ತಿಯನ್ನೂ, ತಾವು ಮನೆಯಲ್ಲಿ ಮಾಡಿದ ಪ್ರಯೋಗಗಳನ್ನು ವಿವರಿಸುತ್ತಾ ಹೋದರು. ನಾನು ಈ ಹಿಂದೆ ಅವರನ್ನು ವಿಜ್ಞಾನಿ ಎಂದು ನಾಮಕರಣ ಮಾಡಿದ್ದು ಸರಿಯೆನಿಸಿತು. ನಮ್ಮ ಪುರಾಣ ಕಥೆಗಳನ್ನೆಲ್ಲಾ ಕೆದಕಿ, ವ್ಯಾಖ್ಯಾನ ಮಾಡಿ, ಅದೆಲ್ಲಾ ವೈಜ್ಞಾನಿಕವಾಗಿ ಸಾಧ್ಯವೇ? ಎನ್ನುತ್ತಿದ್ದರು.

ನನ್ನ ಗಮನವೆಲ್ಲಾ ನಾನು ಹಿಡಿದಿದ್ದ ತೂಕದ ಲಗ್ಗೇಜಿನ ಮೇಲೇ ಇತ್ತು. ಸೂಟ್‍ಕೇಸನ್ನು ನನ್ನ ಎಡಗೈಯಿಂದ ಬಲಗೈಗೆ, ಬಲಗೈಯಿಂದ ಎಡಗೈಯಿಗೆ ಬದಲಾಯಿಸುತ್ತಿದ್ದೆ. ಗುಡ್ಡದ ಮೇಲೆ ಕಾಣುತ್ತಿದ್ದ ಶಾಲೆಯನ್ನು ಹತ್ತಿ ಇಳಿದಾಗ ಶೆಡ್ಡಿನ ಜೊತೆಯಿದ್ದ ಕಾವಿ ಬಣ್ಣದ ಕಟ್ಟಡ ಕಾಣಿಸಿತು. ಡಾಂಬರು ರಸ್ತೆ ಬಿಟ್ಟು ಮಣ್ಣಿನ ರಸ್ತೆ ಹಿಡಿದು ಆಶ್ರಮದ ಹತ್ತಿರ ಹೋದೆವು. ಆಶ್ರಮದ ಮುಂದಿನ ಮೈದಾನದಲ್ಲಿ ಜನರು ಸಂಭ್ರಮದಿಂದ ಓಡಾಡಿಕೊಂಡು ಇದ್ದರು. ಗುಂಪಿನಲ್ಲಿದ್ದ ಬಿಳಿ ಪಂಚೆ ಮತ್ತು ಅಂಗಿ ತೊಟ್ಟು ನಿಂತಿದ್ದ  ನಾಗರಾಜು ಎಂಬವ ನಮ್ಮನ್ನು ಸ್ವಾಗತಿಸಿ ನನ್ನ ಆರೋಗ್ಯದಲ್ಲಿ ಏನೇನು ತೊಂದರೆಗಳಿವೆ ಎಂದು ವಿಚಾರಿಸಿಕೊಂಡರು. “ನನಗೇನು ತೊಂದರೆಯಿಲ್ಲ, ಸ್ವಲ್ಪ ದಿನ ಇಲ್ಲಿ ಇದ್ದು ಹೋಗೋಣವೆಂದು ಬಂದೆ” ಎಂದೆ. ನಮ್ಮ ವಿಜ್ಞಾನಿ ತಮ್ಮ ತೊಂದರೆಗಳನ್ನು ಹೇಳಿಕೊಂಡರು.

ಅವರೊಂದಿಗೆ ನನ್ನನ್ನೂ ಉಪವಾಸಕ್ಕೆ ದೂಡಿದರು. ಸುಮಾರು 08:30 ಸಮಯಕ್ಕೆ ಆಶ್ರಮ ತಲುಪಿದ್ದರಿಂದ ನೀರಿನ ಜೊತೆ ನಿಂಬೆಯ ರಸ, ಜೇನಿನ ತುಪ್ಪವನ್ನು ಬೆರೆಸಿ ಮಾಡಿದ ಪಾನಕವನ್ನು ಅಲ್ಲಿನ ಉಪವಾಸ ಸತ್ಯಾಗ್ರಹಿಗಳಿಗೆ ಕೊಡುತ್ತಿದ್ದರು. ನಮ್ಮಿಬ್ಬರಿಗೆ ಒಂದು ಕೊಠಡಿ ಗೊತ್ತುಮಾಡಿ, ಎರಡು ಚಂಬು ಪಾನಕ ಪೂರೈಸಿದರು. ನಮ್ಮ ನಡಿಗೆಯ ದಣಿವನ್ನು ಪಾನಕ ಕುಡಿದು ಹಿಂಗಿಸಿಕೊಂಡೆವು. ನಾನು ಮತ್ತು ವಿಜ್ಞಾನಿಯವರು ಒಂದೇ ಕೊಠಡಿಯಲ್ಲಿ ಉಳಿದು ಸಹಪಾಠಿಗಳಾದೆವು.

joxi_screenshot_1465823981149ಮನಗುಂಡಿ ಗ್ರಾಮದಿಂದ ಎರಡು ಮೈಲು ದೂರದ ಒಂದು ಗುಡ್ಡದ ಮೇಲೆ ಪ್ರಶಾಂತವಾದ ವಾತಾವರಣದಲ್ಲಿದ್ದ ಆಶ್ರಮದ ನೆಲ ಅಂತಸ್ತಿನಲ್ಲಿ ಒಂದು ಆಫೀಸು, ಧ್ಯಾನದ ಕೋಣೆ, ದಾಸೋಹ ಭವನ ಹಾಗು ಅಡುಗೆ ಮನೆ. ಮೊದಲ ಅಂತಸ್ತಿನಲ್ಲಿ ಚಿಕೆತ್ಸೆ ಪಡೆಯಲು ಬಂದವರು ಉಳಿದುಕೊಳ್ಳಲು ಕೊಠಡಿಗಳು. ಎರಡನೇ ಅಂತಸ್ತಿನಲ್ಲಿರುವ ಕೊಠಡಿಯಲ್ಲಿ  ಸ್ವಾಮೀಜಿಯವರ ವಾಸ. ವಯಸ್ಸಾದವರ ದಂಡೇ ಅಲ್ಲಿದ್ದರಿಂದ ಇದು ಮಠವೋ ಅಥವಾ ವೃದ್ಧಾಶ್ರಮವೋ ಎಂಬ ಅನುಮಾನ ಮೂಡಿತು. ಎಲ್ಲರೂ ಅವರವರ ತೊಂದರೆ ಮತ್ತು ಚಿಕೆತ್ಸೆಯಿಂದಾದ ಪರಿಣಾಮಗಳನ್ನು ಹಂಚಿಕೊಂಡರು.

ಮೈದಾನದಲ್ಲಿ ಬಹಳ ಸಂಭ್ರಮವಿದ್ದರಿಂದ ಕೆಳಗೆ ಹೋಗಿ ವಿಚಾರಿಸಿದೆ. ಹುಬ್ಬಳ್ಳಿ-ಧಾರವಾಡದ ಭಾರೀ ಶ್ರೀಮಂತರು ಮತ್ತು ಕೊಡುದಾನಿಗಳಾದ ಓಸ್ವಾಲ್‍ರು ತಮ್ಮ ಇಬ್ಬರು ಮೊಮ್ಮಕ್ಕಳೊಂದಿಗೆ ಬಂದಿದ್ದರು. ಖಾಕಿ ಬಣ್ಣದ ಎರಡು ಜೇಬಿನ ಅಂಗಿ ಮತ್ತು ಅದೇ ಬಣ್ಣದ ಆರು ಜೇಬಿನ ದೊಗಳೇ ಪ್ಯಾಂಟ್, ಪ್ರತೀ ಕೈಯಲ್ಲಿ ಎರಡೆರಡು ಹರಳಿನ ಉಂಗುರಗಳು, ಬಲಗೈಗೆ ಚಿನ್ನದ ಬಳೆ, ಎಡಗೈಗೆ ದುಬಾರಿ ಕೈಗಡಿಯಾರ, ಹಣೆಯಲ್ಲಿ ವಿಭೂತಿ, ಕಿವಿಯಲ್ಲಿ ಓಲೆ ಮತ್ತು ಮುಖದಲ್ಲಿ ಲಕ್ಷ್ಮಿಯ ಕಳೆಹೊತ್ತ ಸುಮಾರು 70ರ ಹರೆಯದ ಓಸ್ವಾಲರಿಗೆ ನಮ್ಮನ್ನು ಪರಿಚಯ ಮಾಡಿದರು.

“ಶರಣ್ರೀ, ಹುಟ್ಟುಹಬ್ಬದ ಶುಭಾಶಯಗಳು” ಎಂದು ಅವರ ಕೈ ಕುಲುಕಿದೆ. ತುಸು ನಕ್ಕು “ಧನ್ಯವಾದ ಸರ್ರ” ಎಂದರು.

“ಯಾವೂರ್ರಿ? ಏನು ತೊಂದರೆ?” ಎಂದು ಕೇಳಿದರು. ಇದು ಒಳ್ಳೆಯ ಕಥೆಯಾಯಿತಲ್ಲಾ. ಇದೇನು ದವಾಖಾನೆಯೇ? ಬರೀ ಆರೋಗ್ಯ ಸರಿಯಿಲ್ಲದವರು ಬರಲಿಕ್ಕೆ? ಆರೋಗ್ಯದಿಂದಿರುವ ಸಾರ್ವಜನಿಕರೂ ಕೂಡ ಇದರ ಆಶ್ರಯ ಬಯಸಿ ಬರಬಹುದಲ್ಲವೇ?

“ನಮ್ದು ಮೈಸೂರ್ರಿ. ನನಗೇನು ತೊಂದರೆ ಇಲ್ಲ. ಸ್ವಾಮೀಜಿಯನ್ನು ನೋಡಲು ಬಂದೆ” ಎಂದೆ. ನಿಜ ಹೇಳಬೇಕೆಂದರೆ ಅಲ್ಲಿದ್ದವರಲ್ಲಿ ಸ್ವಾಮೀಜಿ ಯಾರೆಂಬುದೇ ನನಗೆ ತಿಳಿಯದು.

“ಹಚ್ಚಾ ಹಚ್ಚಾ, ಏನ್ ಕೆಲ್ಸಾ ಮಾಡ್ತೀರ್ರೀ?” ಎಂದು ಕೇಳಿದರು.

“ನಾನ್ ಸಾಫ್ಟ್ ವೇರ್ ಇಂಜಿನಿಯರ್ ರೀ” ಎಂದೆ. ಖುಷಿಪಟ್ಟು ಅವರ ಅಳಿಯನೊಬ್ಬ ಕೂಡ ಅದೇ ವೃತ್ತಿಯಲ್ಲಿದ್ದಾನೆ ಎಂದರು. ಎಪ್ಪತ್ತು ದಾಟಿದ್ದರೂ ಬಹಳ ಚಟುವಟಿಕೆಯಿಂದಿರುವ ವ್ಯಕ್ತಿ. ನನಗೆ ಬಹಳ ಇಷ್ಟವಾದರು. ವಿಜ್ಞಾನಿಯವರು ತಮ್ಮ ನಾಸಿಕ್‍ನ ಹೋಟೆಲ್ ವೃತ್ತಿಯನ್ನು ಎಲ್ಲರಿಗೂ ವಿವರಿಸಿದರು. ಮೈದಾನದಲ್ಲಿ ಒಂದು ದೊಡ್ಡ ಜಮಖಾನ ಹಾಸಿದ್ದರು. ಸ್ವಾಮೀಜಿಯವರು ತಮ್ಮ ಕೋಣೆಯಿಂದ ಒಬ್ಬ ಹುಡುಗನ ಕೈ ಹಿಡಿದುಕೊಂಡು ಬಂದಿದ್ದನ್ನು ನೋಡಿದಾಗಲೇ ನನಗೆ ತಿಳಿದಿದ್ದು, ಸ್ವಾಮೀಜಿ ಅಂಧರು ಎಂದು.

ಬಸವಾನಂದ ಸ್ವಾಮೀಜಿಯವರು ಮೂಲತಹ ಹಾಸನದವರು. ಪ್ರಕೃತಿ ಚಿಕಿತ್ಸೆ ಹಾಗು ಉಪವಾಸದಿಂದಾಗುವ ಪರಿಣಾಮಗಳ ಬಗ್ಗೆ ಹಲವು ವರ್ಷಗಳ ಕಾಲ ಅಧ್ಯಯನ ಮಾಡಿ ಹಲವು ರೋಗಗಳಿಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಅವರ ಜೊತೆ ಕಾವಿ ತೊಟ್ಟಿದ್ದ ಒಬ್ಬ ತಾಯಿ ಕೂಡ ಬಂದರು. ಆಳು ಕಾಳು ಎಲ್ಲರೂ ಒಟ್ಟುಗೂಡಿ ಹಾಸಿದ್ದ ಜಮಖಾನದ ಮೇಲೆ ಕುಳಿತರು. ಓಸ್ವಾಲರು ತಮ್ಮ ಕೈಯಾರ ತಯಾರಿಸಿದ್ದ ಭೇಲ್‍ಪುರಿ ಹಾಗೂ ಚಿತ್ರಾನ್ನವನ್ನು ಎಲ್ಲರಿಗೂ ಬಡಿಸುವಂತೆ ಆಜ್ಞೆಯಿಟ್ಟರು. ಉಪವಾಸವಿದ್ದ ನಾವೆಲ್ಲ ನಮ್ಮ ಬಾಯಿ ಚಪ್ಪರಿಸಿಕೊಂಡು ಅವರನ್ನು ಮಿಕ ಮಿಕ ನೋಡುತ್ತಿದ್ದೆವು.

ಆ ಗುಂಪಿನಲ್ಲಿ ನನಗೆ ಕುತೂಹಲ ಕೆರಳಿಸಿದವರು ಒಬ್ಬಜ್ಜ. ಬಹಳವಾಗಿ ಮಾತನಾಡುತ್ತಿದ್ದರು. ಆ ಅಜ್ಜನ ಕೈಯನ್ನು ಹಿಡಿದುಕೊಂಡು ಮಿಲಿಟರಿ ಮೀಸೆ ಬಿಟ್ಟಿದ್ದ ಮತ್ತೊಬ್ಬ ಅಜ್ಜ ಸುಮ್ಮನೆ ಸ್ಪಟಿಕ ನಗು ಬೀರುತ್ತಿದ್ದರು. ಇಬ್ಬರೂ ಅವರ ಕಾಲೇಜಿನ ಕಾಲದಿಂದಲೂ ಪ್ರಾಣ ಸ್ನೇಹಿತರಂತೆ. ಬಹಳವಾಗಿ ಮಾತನಾಡುತ್ತಿದ್ದವ ಸುಮಾರು ಆರು ಅಡಿ ಎತ್ತರ, ಕಪ್ಪನೆಯ ಬಣ್ಣ, ಕ್ಯಾನ್ಸರ್ ಮತ್ತು ಸಕ್ಕರೆ ಕಾಯಿಲೆಯ ರೋಗಿ, ತೂಕವೂ ಜಾಸ್ತಿಯಾಗಿದ್ದರಿಂದ ನಡೆದಾಡುವುದೇ ದುಸ್ಥರ. ಹೊಸಬರಾದ ನಮ್ಮ ಹತ್ತಿರ ಅವರ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳುವ ತುಡಿತ. ಅವರ ಕಥೆಯನ್ನು ಎರಡೆರಡು ಸಲ ಹೇಳಿ, ಎರಡು ದಿನದಿಂದ ಅವರಿಗಾಗುತ್ತಿರುವ ಭೇದಿಯನ್ನು ಬಹುವಾಗಿ ವಿವರಿಸಿದರು. ನನಗೆ ಹೇಸಿಗೆಯಾಯಿತು. ಅವರು ಮತ್ತೆ ಭೇದಿಯ ಬಗ್ಗೆಯೇ ವಿವರಿಸತೊಡಗಿದಾಗ, ನಾನು ಕೇಳಿಸಿಕೊಳ್ಳುವಂತೆ ನಾಟಕವಾಡಿ ನನ್ನ ಗಮನವನ್ನು ಓಸ್ವಾಲರತ್ತ ವಾಲಿಸಿದೆ. ಓಸ್ವಾಲರು ಬಹಳ ಉಲ್ಲಾಸದಿಂದ ಎಲ್ಲರಿಗೂ ಚೆನ್ನಾಗಿ ತಿನ್ನುವಂತೆ ಹುರಿದುಂಬಿಸಿ ತಮ್ಮ ಹುಬ್ಬಳ್ಳಿ ಭಾಷೆಯಲ್ಲಿ ಎಲ್ಲರ ಕಾಲೆಳೆದು ತಮಾಷೆ ಮಾಡುತ್ತಿದ್ದರು.

ಓಸ್ವಾಲರ ಹುಟ್ಟು ಹಬ್ಬದ ಪ್ರಯುಕ್ತ ಆಶ್ರಮದ ಸುತ್ತ ಸ್ವಚ್ಚತಾ ಅಭಿಯಾನ ಹಾಗೂ  50 ವಿವಿಧ ಜಾತಿಯ ಗಿಡಗಳನ್ನು ನೆಡುವ ಕಾರ್ಯಕ್ರಮವಿತ್ತು. ಎರಡೂ ಕೂಡ ನನಗೆ ಬಹಳ ಪ್ರಿಯವಾದ ಕೆಲಸಗಳು. ಬಹುತೇಕರು ಅತ್ತ ಇತ್ತ ಒಂದಷ್ಟು ಕೈಯಾಡಿಸಿ ತಮ್ಮ ಕೊಠಡಿಗೆ ಹೊರಟರು. ವಿಜ್ಞಾನಿಯವರು ತಮ್ಮ ಅಲರ್ಜಿಗಳನ್ನು ಮುಂದಿಟ್ಟುಕೊಂಡು ಕೆಲಸದಿಂದ ದೂರ ಉಳಿದರು.  ಸಸ್ಯಶಾಸ್ತ್ರದ ಬಗ್ಗೆ ಅವರಿಗಿದ್ದ ಜ್ಞಾನವನ್ನು ಓಸ್ವಾಲರ ಮುಂದೆ ಪ್ರದರ್ಶನ ಮಾಡುತ್ತಿದ್ದರು. ಓಸ್ವಾಲರು ಜೈನರು. ಸಾತ್ವಿಕರು. ಆದರೂ ಹುಬ್ಬಳ್ಳಿಯ ಗಟ್ಟಿತನವಿತ್ತು. ಎಲ್ಲರಿಂದಲೂ ಬಹಳ ತಮಾಷೆಯಿಂದಲೇ ಕೆಲಸ ತೆಗೆಸುತ್ತಿದ್ದರು. ನಾನು ಓಸ್ವಾಲರ ಮತ್ತು ಇತರೆ ಕೆಲಸಗಾರರ ಜೊತೆಗೂಡಿ ಸುಮಾರು ಮಧ್ಯಾಹ್ನ ಮೂರು ಗಂಟೆಯವರೆಗೂ ನಿಂಬೆ, ಮಾವು, ನುಗ್ಗೆ, ಗಸಗಸೆ ಮತ್ತು ಇತರೆ ಗಿಡಗಳನ್ನು ನೆಟ್ಟೆವು.

ಓಸ್ವಾಲರು ತಮ್ಮ ವ್ಯವಸಾಯದ ಅನುಭವ, ಜ್ಞಾನವನ್ನು ನಮ್ಮಲ್ಲಿ ಹಂಚಿಕೊಂಡರು. ಬಹುತೇಕ ಗಿಡಗಳು ಕಸಿಯಾಗಿದ್ದವು. ಮೊದಲು ಗುಂಡಿ ತೋಡಿ, ಕಸ ಕಡ್ಡಿ ಹಾಕಿ ಬೆಂಕಿ ಹಚ್ಚಿ ಬೂದಿ ಮಾಡುವುದು. ಬೂದಿಯ ವಾಸನೆಗೆ ಮತ್ತು ಶಾಖಕ್ಕೆ ಗೆದ್ದಲು ಹುಳಗಳು ಗಿಡದ ಬೇರನ್ನು ತಿನ್ನಲು ಬರುವುದಿಲ್ಲ. ಆನಂತರ ದಪ್ಪ ಕಲ್ಲುಗಳನ್ನು ಆಯ್ದು ತೆಗೆದಿದ್ದ ಮಣ್ಣನ್ನು ಹಾಕುವುದು. ಅದರ ಮೇಲೆ ಗೊಬ್ಬರ, ಕೊಂಚ ಮರಳು ಮಿಶ್ರಿತ ಮಣ್ಣನ್ನು ಹಾಕುವುದು. ಅದರ ಮೇಲೆ ಕಸಿಯಾದ ಗಿಡವನ್ನು ಇಟ್ಟು, ಸುತ್ತಾ ಮತ್ತೆ ಗೊಬ್ಬರ ಮಿಶ್ರಿತ ಮಣ್ಣನ್ನು ಸುರಿಯುವುದು. ಅದರ ಮೇಲೆ ಕಸಿಯಾದ ಭಾಗದ ಕೆಳಗಿನ ತನಕ ಬರೀ ಮಣ್ಣನ್ನು ಹಾಕಿ, ಮಣ್ಣಿನ ಒಳಗೆ ಗಾಳಿ ತುಂಬಿಕೊಳ್ಳದಂತೆ, ಗಿಡದ ಸುತ್ತ ಜೋರಾಗಿ ತುಳಿದು ಗಟ್ಟಿಗೊಳಿಸುವುದು.

ನಂತರ ನಾಲ್ಕು ಚಂಬು ನೀರು ಹಾಕಿದರು. ಕಸಿಯಾದ ಜಾಗವನ್ನು ಮಣ್ಣಿನಿಂದ ಮುಚ್ಚಲೇಬಾರದು. ಮುಚ್ಚಿದರೆ ಕಸಿಯಾದ ಎರಡೂ ಜಾತಿಯಿಂದ ಚಿಗುರೊಡೆದು ಗಿಡ ಹಾಳಾಗುತ್ತದೆ. ಗಿಡದ ಬೇರಿನ ಪಕ್ಕದಲ್ಲೇ ಗೊಬ್ಬರ ಗಿಡದ ಒಂದು ಉದ್ದನೆಯ ಕೋಲನ್ನು ಗಾಳಿ ಬರುವ ದಿಕ್ಕಿನಲ್ಲೇ ನೆಟ್ಟು ಗಾಳಿಗೆ ಗಿಡ ಬೀಳದಂತೆ ಕೋಲಿಗೂ ಗಿಡಕ್ಕೂ ದಾರದಿಂದ ಕಟ್ಟಬೇಕು. ಅವರ ಮೊಮ್ಮಕ್ಕಳು ನಮ್ಮ ಸುತ್ತ ಚೇಷ್ಟೆ ಮಾಡುತ್ತಾ ತಿರುಗಾಡುತ್ತಿದ್ದರು. ನಾನು ಶಾಲೆಯಲ್ಲಿ ಓದುತ್ತಿದ್ದಾಗ ಬೇಸಿಗೆಯ ರಜೆಯಲ್ಲಿ ತಾತನ ಮನೆಯಲ್ಲಿ ಉಳಿದು ಅವರ ಜೊತೆ ತೋಟಕ್ಕೆ ಹೋಗಿ ಆಟವಾಡುತ್ತಿದ್ದು ನನಗೆ ನೆನಪಾಗಿ ಕಣ್ಣುಗಳು ನೆನೆದವು. ಬಾಲ್ಯದ ಆನಂದಮಯ ಕ್ಷಣಗಳು ಮತ್ತೆ ಮರುಕಳಿಸುವುದುಂಟೇ?

joxi_screenshot_1465823999128ಕೆಲಸದಲ್ಲಿ ಮಗ್ನನಾಗಿದ್ದರಿಂದ ಮಧ್ಯಾಹ್ನದ ಪಾನಕವನ್ನು ಕುಡಿಯಲಾಗಲಿಲ್ಲ. ಅಷ್ಟರಲ್ಲೇ ನಾಲ್ಕೈದು ಸಲ ನನ್ನನ್ನು ರಿಜಿಸ್ಟ್ರೇಷನ್ ಮಾಡಿಸಲು ಹುಡುಕಿಕೊಂಡು ಬಂದಿದ್ದರೆಂದು ತಿಳಿಯಿತು. ಬಾಡಿಗೆ ಕೊಡಲು ನನ್ನ ಹತ್ತಿರ ಹಣವೂ ಇರಲಿಲ್ಲ. ಎರಡನೇ ಅಂತಸ್ತಿನ ತಮ್ಮ ಕೋಣೆಯಲ್ಲಿದ್ದ ಸ್ವಾಮೀಜಿಯನ್ನು ನೋಡಲು ಹೊರಟೆ. ಅವರನ್ನು ಇಲ್ಲಿ ಎಲ್ಲರೂ ಪ್ರೀತಿಯಿಂದ ಅಪ್ಪಾವರೇ ಎನ್ನುತ್ತಾರೆ. ತಮ್ಮ ಕೋಣೆಯಲ್ಲಿ ಓಡಾಡುತ್ತಿದ್ದ ಅವರನ್ನು ನಾನು “ಅಪ್ಪಾವರೇ” ಎಂದು ಕರೆದೆ.

“ಯಾರು?” ಎಂದರು. ದೃಷ್ಟಿ ಇಲ್ಲದಿದ್ದರೂ ಬಹಳ ಚುರುಕಾದ ವ್ಯಕ್ತಿ.

“ನಾನು ರಾಹುಲ್‍ರೀ ಮೈಸೂರಿನಿಂದ ಬಂದಿನ್ರೀ” ಎಂದೆ.

“ಓಹೋ ಸಾಫ್ಟ್ ವೇರ್ ಇಂಜಿನೀಯರ್. ನಾವು ಮೈಸೂರಿಗೆ ನಾಲ್ಕೈದು ಸಲ ಬಂದು ಪ್ರವಚನ ಮತ್ತು ಆರೋಗ್ಯದ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಲು ಬಂದಿದ್ದೆವು” ಎಂದು ಅವರ ಮೈಸೂರು ಪ್ರಯಾಣದ ವಿವರಗಳನ್ನು ಬಿಚ್ಚಿಟ್ಟರು.

ನನಗೆ ತಟ್ಟನೆ ನೆನಪಾಯಿತು. ನಾನು ಮತ್ತು ನಮ್ಮನೆಯಾಕೆ ಯೋಗ ಕಲಿಯುತ್ತಿದ್ದ ಶಾಲೆಯಲ್ಲಿ ಅಪ್ಪಾವ್ರು ಒಂದು ಅರ್ಧ ಗಂಟೆ ಪ್ರವಚನ ಕೊಟ್ಟು ಹೋಗಿದ್ದರು. ಬಹಳ ತಮಾಷೆಯಾಗೇ ಉಪವಾಸದ ಬಗೆಗಿನ ವಿವರವನ್ನು ಕೊಟ್ಟಿದ್ದರು.

“ಏನು ಇಲ್ಲಿಗೆ ಬಂದಿದ್ದು?” ಎಂದು ಕೇಳಿದರು.

ನನಗೆ ಏನೇಳಬೇಕೆಂದು ತಿಳಿಯದೆ “ಅಪ್ಪಾವರೇ ನಿಮ್ಮ ಕ್ಷೇಮ ವಿಚಾರಿಸಿಕೊಂಡು ಹೋಗಲಷ್ಟೇ ಬಂದೆ. ನನಗೆ ಆರೋಗ್ಯದಲ್ಲಿ ಯಾವ ತೊಂದರೆಯೂ ಕಾಣಿಸುತ್ತಿಲ್ಲ. ಒಂದೆರಡು ದಿನ ಇದ್ದು ನಿಮ್ಮ ಸೇವೆ ಮಾಡಿ ಹೊರಟು ಹೋಗುತ್ತೇನೆ” ಎಂದೆ.

“ಇಲ್ಲಿಗೆ ಬರಲು ಮಠದ ವಿಳಾಸ ತಿಳಿದಿತ್ತಾ?” ಎಂದು ಕೇಳಿದರು.

“ಇಲ್ಲ, ಧಾರವಾಡದಲ್ಲಿ ವಿಚಾರಿಸಿಕೊಂಡು ಬಂದೆ”

ಅದಕ್ಕೆ ನಕ್ಕು “ಸರಿ ನೀನ್ಯಾಕೆ ಉಪವಾಸ ಶುರುಮಾಡಿರುವೆ? ಎಷ್ಟು ತೂಕವಿರುವೆ?” ಎಂದು ಕೇಳಿದರು.

“ನಾನು 5’7” ಉದ್ದ 67 ಕೆಜಿ ತೂಕವಿರುವೆ. ನಿಮ್ಮ ಮಠದವರು ನನ್ನ ಮಾತು ಕೇಳದೆ, ಗುಂಪಿನಲ್ಲಿ ಗೋವಿಂದ ಎನಿಸಿಬಿಟ್ಟರು. ಸರಿ, ನನಗೂ ಉಪವಾಸ ಮಾಡಿದ ಅನುಭವಯಿರಲಿಲ್ಲ. ಹಾಗಾಗಿ ಒಪ್ಪಿಕೊಂಡೆ.”

ತುಸು ನಕ್ಕು “ಹಾಗಾದರೆ, ಮೂರು ದಿನ ಉಪವಾಸ ಮಾಡು ಸಾಕು. ತೂಕ ಸರಿಯಾಗೇ ಇದೆ. ಏನು ಮಾತನಾಡಲು ಬಂದೆ? ಏನು ಸಮಾಚಾರ?” ಎಂದು ನನ್ನ ಮನಸ್ಸಿನ ಇಂಗಿತವನ್ನು ಅರಿತು ಕೇಳಿದರು.

ನನ್ನ ಪ್ರಯಾಣದ ವಿಚಾರ ಮತ್ತು ನಾನು ಅಲ್ಲಿಯ ತನಕ ಬಂದ ಹಾದಿ, ನನ್ನ ಮನಸ್ಸಿನಲ್ಲಿ ಇರುವ ನೋವು, ಸ್ವಲ್ಪವೇ ಹಣವಿಟ್ಟುಕೊಂಡು ಬಂದಿರುವ ವಿಚಾರ, ಕರ್ನಾಟಕದ ಉದ್ದಗಲವನ್ನು ಕಾಲ್ನಡಿಗೆಯಿಂದ ಸುತ್ತುವ ಆಸೆಯನ್ನು ವ್ಯಕ್ತಪಡಿಸಿದೆ.

“ಓಹೋ! ದೊಡ್ಡ ಯೋಜನೆಯನ್ನೇ ಹಾಕಿಕೊಂಡು ಬಂದಿದ್ದೀಯ. ಒಳ್ಳೆಯದೇ ಆಯಿತು. ಜೀವನದಲ್ಲಿ ಸಾಧನೆ ಮುಖ್ಯ. ಮೊಬೈಲ್ ಬಿಟ್ಟು ಬಂದಿದ್ದು ಒಳ್ಳೆಯ ಕೆಲಸ. ಕುಟುಂಬದವರು ಯಾವಾಗಲೂ ಹಾಗೆಯೇ. ಏನಾದರೂ ಸಾಧನೆ ಮಾಡಬೇಕೆಂದರೆ ಅಡ್ಡ ಬರುತ್ತಾರೆ. ಮನಸಾ ಇಚ್ಛೆ ಒಪ್ಪಿ ಕಳುಹಿಸಿ ಕೊಡುವವರು ಅತೀ ವಿರಳ. ನೀನು ಹೆದರದೆ ಮುನ್ನುಗ್ಗು.  ದೇವರು ಒಳ್ಳಯದನ್ನೇ ಮಾಡುತ್ತಾನೆ” ಎಂದು ಬುದ್ಧ, ಮಹಾವೀರ ಮತ್ತು ಬಸವಣ್ಣನವರ ಉದಾಹರಣೆಯನ್ನು ಕೊಟ್ಟರು.

“ನನ್ನ ಪಯಣ ಎಷ್ಟು ದಿನವೋ, ಎಷ್ಟು ತಿಂಗಳೋ ಕಾಣೆ. ತುರ್ತು ಪರಿಸ್ಥಿತಿಯಲ್ಲಿ ಬೇಕಾಗಬಹುದು ಎಂದು ಸ್ವಲ್ಪ ಹಣವನ್ನು ಇಟ್ಟುಕೊಂಡಿದ್ದೇನೆ. ಸ್ವಲ್ಪ ದಿನ ಇಲ್ಲಿ ಆಶ್ರಯ ಪಡೆದು ಮುಂದಿನ ಯೋಜನೆಯನ್ನು ರೂಪಿಸಲು ಬಂದೆ. ನನಗೆ ಇಷ್ಟಬಂದಷ್ಟು ದಿನ ಬಾಡಿಗೆ ಕೊಡದೆ ಇಲ್ಲಿ ಇದ್ದು ಹೋಗಲು ಅವಕಾಶ ಮಾಡಿಕೊಡಿ. ನಾನು ಮಠದಲ್ಲಿ ನನ್ನ ಕೈಲಾದ ಸೇವೆಯನ್ನು ಮಾಡಿ ಇತರರಿಗೆ ಸಹಕರಿಸುತ್ತೇನೆ” ಎಂದು ವಿನಂತಿಸಿಕೊಂಡೆ.

ಖುಷಿ ಪಟ್ಟು “ಅಯ್ಯೋ, ನೀನು ಅವಶ್ಯವಾಗಿ ನಿನಗೆ ಎಷ್ಟು ದಿನ ಬೇಕೋ ಅಷ್ಟು ದಿನ ಇಲ್ಲಿದ್ದು ಹೋಗು. ನಾನು ಕೆಳಗಿನ ಕಚೇರಿಗೆ ಮಾತನಾಡುತ್ತೇನೆ. ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಪಡೆಯಲು ಬರುವವರಿಗೆ ಬಾಡಿಗೆ. ಮಠದ ಆಶ್ರಯ ಬಯಸಿ ಬಂದವರಿಗಲ್ಲ” ಎಂದರು.

ನನಗೆ ಎಲ್ಲಿಲ್ಲದ ಖುಷಿಯಾಯಿತು. “ತುಂಬಾ ಸಂತೋಷ. ನಿಮ್ಮ ಈ ಋಣವನ್ನು ಬೇರೆ ಯಾವುದಾದರು ರೂಪದಲ್ಲಿ ತೀರಿಸುತ್ತೇನೆ” ಎಂದೆ.

“ಋಣದ ಮಾತು ಹಾಗಿರಲಿ. ಈಗ ಅದರ ಬಗ್ಗೆ ಚಿಂತೆ ಬೇಡ. ನಿನ್ನಿಂದಲೂ ಕೂಡ ನಮಗೆ ಸಹಾಯ ಕೇಳುವ ಸಮಯ ಬರಬಹುದು. ಆಗ ನೋಡಿಕೊಳ್ಳೋಣ. ಈಗ ನಿನ್ನ ಗಮನವೆಲ್ಲಾ ಸಾಧನೆಯ ಕಡೆಗೆ ಇರಲಿ” ಎಂದರು.

“ರಾಹುಲ್, ಇವತ್ತಿನ ವಿಜಯವಾಣಿ ದಿನಪತ್ರಿಕೆಯಲ್ಲಿ ಒಂದು ಲೇಖನ ಬಂದಿದೆಯಂತೆ. ಹುಡುಕಿ ನನಗೆ ಓದಿ ತಿಳಿಸುವೆಯಾ? ನಿನಗೆ ಕನ್ನಡ ಓದೋಕೆ ಬರುತ್ತಾ?” ಎಂದು ಅಪ್ಪಾವ್ರು ಕೇಳಿದರು.

“ಏನ್ ಅಪ್ಪಾವ್ರೆ, ಹೀಗೆ ಕೇಳುತ್ತೀರ. ಕನ್ನಡ ಓದದೆ ಏನು? ಹೊಸಗನ್ನಡವಾದರೆ ಸುಲಲಿತವಾಗಿ ಓದುತ್ತೀನಿ” ಎಂದೆ.

ಅವರು ನಗುತ್ತಾ, ನನ್ನನ್ನು ಓದಲು ಸೂಚಿಸಿದರು ಲೇಖಕರು ಮುಸಲ್ಮಾನನಾದರು ಗೋವಿನ ಸಂರಕ್ಷಣೆಯ ಪೂರಕವಾಗಿ ಬರೆದಿದ್ದನ್ನು ಓದಿ ಮುಗಿಸಿದೆ.

“ಶರಣು ಶರಣು” ಎಂದು ಒಬ್ಬ ಹುಡುಗ ಅಪ್ಪಾವ್ರ ಕೋಣೆಗೆ ಬಂದ.

ಕಿವಿಯನ್ನು ಅರಳಿಸಿ “ಯಾರು?” ಎಂದು ಕೇಳಿದರು.

“ನಾನು ಅಪ್ಪಾವ್ರೆ, ನೀಲಕಂಠ.”

“ಓಹ್, ನೀಲಕಂಠನೇ. ಏನು ಬಂದಿದ್ದು? ಸಾಧನೆಯ ಬಗ್ಗೆ ಯಾವ ನಿರ್ಧಾರಕ್ಕೆ ಬಂದಿದ್ದೀಯ?” ಎಂದು ಕೇಳಿದರು.

“ಬಂದೀನ್ರಿ. ಮನೆಯಲ್ಲಿ ಅದರ ಬಗ್ಗೆ ಇನ್ನು ಒಪ್ಪಿಲ್ರೀ.”

rahul dayalu“ಸ್ವಾಮೀಜಿ ಆಗ್ತೀನಿ ಅಂದ್ರೆ, ಯಾರ ಮನೆಯಲ್ಲಿಯಾದರು ಒಪ್ಪಿ ಪಾದಪೂಜೆ ಮಾಡಿ ಕಳಿಸುತ್ತಾರೇನೋ? ಮೂಢ. ಮೊಬೈಲ್ ಜೇಬಿನಲ್ಲಿ ಇಟ್ಟುಕೊಂಡು ಬಂದರೆ ಸಾಧನೆ ಮಾಡಲು ಆಗುತ್ತದೇನೋ? ರಾಹುಲ್, ಇವನಿಗೆ ಸ್ವಲ್ಪ ಬುದ್ಧಿ ಹೇಳಿ” ಎಂದು ನನ್ನತ್ತ ತಿರುಗಿದರು.

ನನ್ನ ಖಾಲಿಯಿರುವ ಮೆದುಳಿನ ಜೋಳಿಗೆಯನ್ನು ತುಂಬಿಸಲು ನಾನೇ ಜ್ಞಾನದ ಭಿಕ್ಷೆಯನ್ನು ಬೇಡುತ್ತಾ ತಿರುಗುತ್ತಿರುವೆ. ನಾನೇನು ಹೇಳಲಯ್ಯಾ ಎಂದು ತಿಳಿದು ಮೂಕಪ್ರೇಕ್ಷಕನಾದೆ. ನೀಲಕಂಠನಿಗೆ ಒಂದೆರಡು ದಿನ ಇದ್ದು ಹೋಗು ಎಂದು ಹೇಳಿ ಕಳಿಸಿದರು.

ಮತ್ಯಾರೋ ನಾಲ್ಕು ಜನ ಬಂದರು. ಒಬ್ಬ ಇಂಜಿನಿಯರ್ ಸಾಹೇಬರು. ಅಪ್ಪಾವ್ರು ಹೊಸ ಶಾಲೆಯ ಕಟ್ಟಡದ ಬಗ್ಗೆ ಮಾತನಾಡಲು ಅವರನ್ನು ಕರೆಸಿದ್ದರು. ಮತ್ತಿಬ್ಬರು ಮನಗುಂಡಿ ಪ್ರೌಢಶಾಲೆಯ ಶಿಕ್ಷಕರು. ನನ್ನನ್ನೂ ಕೂರಿಸಿಕೊಂಡು ಹೊಸದಾಗಿ ಖರೀದಿಸಿದ ಜಮೀನಿಗೆ ಕರೆದುಕೊಂಡು ಹೋದರು. ಜಮೀನಿನಲ್ಲಿ ನಿಂತು ಶಾಲೆಯ ಪರಿಕಲ್ಪನೆ ಹಾಗೂ ನೀಲನಕ್ಷೆಯ ಬಗ್ಗೆ ಚರ್ಚಿಸಿದರು. ಅಪ್ಪಾವ್ರಿಗೆ ಮಳೆ ನೀರು ಸಂರಕ್ಷಣೆ ಬಗ್ಗೆ ಅಪಾರವಾದ ಕಾಳಜಿ ಇದ್ದಂತೆ ಕಾಣಿಸಿತು. ಮಠಕ್ಕೆ ಬಂದು ಮಗದಷ್ಟು ಚರ್ಚಿಸಿದರು. ಅವರಿಗೆಲ್ಲಾ ಪ್ರಸಾದಕೊಡಲು ಪೂಜಾಗೃಹಕ್ಕೆ ಹೋಗಿ ಹಣ್ಣುಗಳನ್ನು ತಟ್ಟೆಯಲ್ಲಿ ಇಟ್ಟು ತರಲು ನನಗೆ ಆಜ್ಞೆಯಿಟ್ಟರು. ನಾನು ಪೂಜೆಯ ಕೋಣೆಗೆ ಹೋಗಿ ಎಷ್ಟೋ ತಿಂಗಳುಗಳು ಕಳೆದಿದ್ದವು.

“ಅಪ್ಪಾವ್ರೆ ನಾನ್ ಇನ್ನು ಸ್ನಾನ ಮಾಡಿಲ್ಲ” ಎಂದೆ.

“ಸ್ನಾನ, ಮಡಿಯೆಂಬುದು ಮನಸ್ಸಿಗೆ ಇರಬೇಕು ದೇಹಕ್ಕಲ್ಲ ಕಣೋ ಪೆದ್ದ. ನೀನು ಹೋಗಿ ತೆಗೆದುಕೊಂಡು ಬಾ” ಎಂದರು.

ಕೂಡಲೇ ಹೋಗಿ ಒಂದು ತಟ್ಟೆಗೆ ಐದು ಸೇಬಿನ ಹಣ್ಣುಗಳನ್ನು ಇಟ್ಟುಕೊಂಡು ಅವರ ಮೇಜಿನ ಮೇಲೆ ಇಟ್ಟೆ. ಅವರು ಭಕ್ತರಿಗೆ ಪ್ರಸಾದ ಕೊಟ್ಟು ಕಳಿಸಿದರು. ತಮ್ಮ ಜೊತೆ ಮತ್ತೆ ಚರ್ಚೆ ಮಾಡಲು ಸಮಯ ಕೊಡಬೇಕು ಎಂದು ವಿನಂತಿಸಿ ಅಪ್ಪಾವ್ರ ಕೋಣೆಯಿಂದ ಹೊರಡಲು ಸಿದ್ದನಾದೆ.

“ಹೌದು ಹೌದು, ಚರ್ಚೆ ಮಾಡೋಣ. ನಿಮ್ಮಂತಹ ಯುವಕರ ಜೊತೆ ಇಂತಹ ಗಂಭೀರ ವಿಷಯಗಳನ್ನು ಚರ್ಚೆ ಮಾಡಲು ನಮಗೂ ಇಷ್ಟ. ಬರುವ ಜುಲೈ-09ನೇ ತಾರೀಖಿನಿಂದ ಮೂರು ದಿನಗಳ ಕಾಲ ಶಿಬಿರವಿದೆ. ಸ್ವಲ್ಪ ಅದರ ಪೂರ್ವ ತಯಾರಿ ಕೆಲಸಗಳ ಬಗ್ಗೆ ಮಗ್ನನಾಗಿರುತ್ತೇನೆ. ನೀನು ಶಿಬಿರ ಮುಗಿಯುವ ತನಕ ಇದ್ದು ಸೇವೆ ಮಾಡು. ಆ ನಂತರ ಚರ್ಚೆ ಮಾಡೋಣ” ಎಂದರು.

“ಸರಿ ಅಪ್ಪಾವ್ರೆ” ಎಂದು ಅವರ ಕಮಲ ಪಾದಗಳಿಗೆ ನಮಸ್ಕರಿಸಿ ಹೊರ ಬಂದೆ.

ಉಪವಾಸದ ಹಸಿವನ್ನು ನೀಗಿಸಲು ರಾತ್ರಿಯ ಪಾನಕ ಕೊಟ್ಟ ತಕ್ಷಣ ಗಟ ಗಟ ಕುಡಿದುಬಿಟ್ಟೆ. ಅದಕ್ಕೆ ವಿಜ್ಞಾನಿಯವರು ಆ ತರಹ ನೀರು ಕುಡಿಯಬಾರದು ಅಥವಾ ಅತೀ ವೇಗವಾಗಿ ಊಟವನ್ನು ಕೂಡ ಸೇವಿಸಕೂಡದು ಎಂದರು. ಯಾವಾಗಲೂ ನಮ್ಮ ಬಾಯಿಯಲ್ಲಿ ಉತ್ಪಾದಿಸುವ ಎಂಜಲಿನ ಜೊತೆಯೇ ಹೊಟ್ಟೆಗೆ ಹೋಗಬೇಕು. ಹೊಸ ವಿಷಯ ಗೊತ್ತಾಯಿತು ಎಂದು ಅಪ್ಪಾವ್ರ ಹತ್ತಿರ ವಿಚಾರಿಸಿದೆ. ಅವರು ಹಾಗೇ ಅಂದರು. ಊಟದ ರುಚಿಯನ್ನು ಸವಿದು, ಸವೆಸಿ ನಿಧಾನವಾಗಿ ತಿನ್ನಬೇಕು ಎಂದರು. ಅದಾದ ಮೇಲೆ ವಿಜ್ಞಾನಿಯವರ ವೈದ್ಯಕೀಯ ಜ್ಞಾನ ಮತ್ತು ಅವರು ನಡೆಸಿದ್ದ ಪ್ರಯೋಗಗಳನ್ನು ಕೇಳಿ ತಿಳಿದುಕೊಂಡೆ. ಅವರ ವೈದ್ಯ ಜ್ಞಾನದಿಂದ ಆಶ್ರಮದಲ್ಲಿ ಬಂದಿದ್ದ ರೋಗಿಗಳ ಗುಂಪಿನಲ್ಲಿ ಅವರು ಬಹಳ ಬೇಗ ಚಿರಪರಿಚಿತರಾಗಿದ್ದರು. ಮಲಗಿದ ಕೆಲ ಕ್ಷಣಗಳಲ್ಲೇ ವಿಜ್ಞಾನಿಯವರ ಮೃದಂಗ ನಾದ ಗೊರಕೆಯು ನನ್ನ ನಿದ್ರೆಗೆ ಭಂಗ ತಂದಿತು.

[ಇಲ್ಲಿಯ ತನಕ ನಡಿಗೆಯಲ್ಲಿ ಕ್ರಮಿಸಿದ ಅಂದಾಜು ದೂರ – 22 ಮೈಲುಗಳು]

‍ಲೇಖಕರು Admin

June 15, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

19 ಪ್ರತಿಕ್ರಿಯೆಗಳು

    • RaDa

      dhanyavadagalu Ramesh. mundina kelavu vaargalu, neevu kooda namm jothe hejje haaki. 🙂

      ಪ್ರತಿಕ್ರಿಯೆ
    • RaDa

      Thanks Sindhu. Travel with me for next few weeks in the wildness of my journey. Happy to have a company. 🙂

      ಪ್ರತಿಕ್ರಿಯೆ
    • RaDa

      Thanks Adwaith. Please do travel with me virtually for next few weeks…

      Please find previous and upcoming episodes in Avadhi.

      ಪ್ರತಿಕ್ರಿಯೆ
  1. VK

    ತು೦ಬಾ ಚೆನ್ನಾಗಿ‌ ಬರೆದಿದ್ದೀರಿ..ಈ ರೀತಿಯ ಪಯಣ ನನ್ನ ಕನಸೂ ಕೂಡ! ನಿಮ್ಮ ಮನಸ್ಸಿನ ತೂಕ ಬೇಗನೆ ಇಳಿಯಲಿ..ಈ ಪಯಣ ನಿಮಗೆ ನವ ಚೈತನ್ಯ ನೀಡಲಿ.

    ಪ್ರತಿಕ್ರಿಯೆ
  2. ಹೆಗಡೆ

    ಅವರ ಗೊರಕೆ….. ಗೊತ್ತು, ಆದರೆ ಅಸಹಾಯ…. ಅದಕ್ಕೇ ಎಲ್ಲರ ನಂತರ ಮಲಗುವೆ!!!
    ” ವಿಜ್ನಾನಿ” ಪ್ರಶಸ್ತಿ ಯಾವ ದ್ರಷ್ಟಿಯಿಂದಲೋ…
    ಮೂರ್ಖತನದ ಬಡಬಡಿಕೆಯ ಫಲ!!! ವಯಸ್ಸಿನ 69 ದಾಟಿದ ಮೇಲೆ ಸುಧಾರಣೆ ಅಶಕ್ಯ!!!
    ಲೇಖನ ಸುಂದರವಾಗಿದೆ. ಕೊಂಡು ಓದುವ ಅಭ್ಯಾಸ ಇಟ್ಟುಕೊಂಡಿರುವೆ… ಮತ್ತೂ ಅದನ್ನೇ ಬಯಸುವೆ.

    ಪ್ರತಿಕ್ರಿಯೆ
    • RaDa

      ನಮಸ್ತೆ ಸಾರ್, ಲೇಖನ ಓದಿ ಮೆಚ್ಚಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಬದಬದಿಕೆಯಲ್ಲೇ ನಾನು ಹಲವು ವಿಷಯಗಳನ್ನು ಕಲಿತಿದ್ದೇನೆ. ಗಿಡ ಮೂಲಿಕೆಗಳಲ್ಲಿನ ನಿಮ್ಮ ಜ್ಞಾನ ನಿಮಗೆ ವಿಜ್ಞಾನಿ ಹೆಸರು ಕೊಟ್ಟಿತು.
      ಗೊರಕೆಯನ್ನೂ ಸೇರಿದಂತೆ ತಮ್ಮ ಜೊತೆಗಿನ ಒಡನಾಟ ನಂಗೆ ಖುಷಿ ಕೊಟ್ಟಿದೆ.

      ಅಕ್ಷರ ದಾಸೋಹ ಎಂಬ concept ನಲ್ಲಿ ನನ್ನ ಪುಸ್ತಕವು ದಿನಕ್ಕೊಂದು ಅಧ್ಯಾಯದಂತೆ ಅವಧಿ ಎಂಬ ಆನ್ಲೈನ್ ಮ್ಯಾಗಜಿನ್ ನಲ್ಲಿ ಉಚಿತವಾಗಿ ಓದಲು ಲಭ್ಯವಿರಲಿದೆ. ಕಳೆದು ಹೋಗಿರುವ ಮತ್ತು ಹೊಸ ಓದುಗರನ್ನು ಸೆಳೆಯುವ ಒಂದು ಸಣ್ಣ ಪ್ರಯತ್ನವಷ್ಟೇ.

      http://avadhimag.online/category/%E0%B2%85%E0%B2%82%E0%B2%95%E0%B2%A3/%E0%B2%95%E0%B2%BE%E0%B2%A3%E0%B2%A6-%E0%B2%95%E0%B2%A1%E0%B2%B2%E0%B2%BF%E0%B2%97%E0%B3%86-%E0%B2%B9%E0%B2%82%E0%B2%AC%E0%B2%B2%E0%B2%BF%E0%B2%B8%E0%B2%BF%E0%B2%A6%E0%B3%86-%E0%B2%AE%E0%B2%A8/

      ಇಲ್ಲಿ ಬರವಣಿಗೆ ಗೆ ಒಳ್ಳೆಯ ಅಭಿಪ್ರಾಯ ಸಿಕ್ಕರೆ, ಪುಸ್ತಕ ಮುದ್ರಣಕ್ಕೆ ಹೋಗಬಹುದು.

      ದಿನಕ್ಕೆ ೧೫ ನಿಮಿಷ ಸಮಯ ಕೊಟ್ಟರೆ ಮುಂದಿನ ಕೆಲವು ವಾರಗಳಲ್ಲಿ ನನ್ನ ೪೦ ದಿನಗಳ ಪ್ರವಾಸದ ಚಿತ್ರಣ ನಿಮಗೆ ಸಿಗುತ್ತದೆ.

      facebook ಪೇಜ್:

      https://m.facebook.com/KaanadaKadalige/

      ಓದಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಓದಲು ಹೇಳಿ.

      ನಿಮ್ಮನ್ನು ಮತ್ತೆ ಬೇಟಿಯಾಗುವ ಆಸೆ ಇದೆ

      ಪ್ರತಿಕ್ರಿಯೆ
  3. Umesh S N

    i’m addicted!

    Kavitheya kadalalli kaleduhode ne
    kanada kadalige hambalisi.
    Ninna hudukuva baradalli jari bidde
    RADA bharahada alegalalli.
    Ijutha saguve nimma bharahada nasheyalli.

    ಪ್ರತಿಕ್ರಿಯೆ
    • ರಾದ

      ಧನ್ಯವಾದಗಳು ಉಮೇಶ್.

      ನನ್ನ ಬರಹದಲ್ಲಿ ಜಾರಿಬಿದ್ದರೆ ಸುಖವಿಲ್ಲ.
      ಪ್ರೀತಿಯಲ್ಲಿ ಜಾರಿ ಬೀಳುವ ವಯಸ್ಸು ನಿನ್ನದು.
      ಈಜುತ್ತಾ ಸಾಗು ನೀ ಪ್ರೇಮದ ಅಲೆಗಳ ಮೇಲೆ,
      ತೇಲಾಡು ನೀ ಮಮತೆಯ ನಶೆಯಲ್ಲಿ.
       ರಾದ

      ಮಂದಿನ ಕೆಲವು ವಾರಗಳು, ಪ್ರತಿ ದಿನವೂ ನಮ್ಮ ಜೊತೆ ಒಂದೊಂದು ಹೆಜ್ಹೆ ಹಾಕಿರಿ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: