ಅವರು ಸ್ವಾಮಿ ಅಗ್ನಿವೇಶ್..

ಮ ಶ್ರೀ ಮುರಳಿಕೃಷ್ಣ

ನಮ್ಮ ತತ್ವಶಾಸ್ತ್ರದಲ್ಲಿ ಭಾವನವಾದಿ(Idealist) ಮತ್ತು ಭೌತವಾದಿ(Materialist) ಎಂಬ ಧಾರೆಗಳಿವೆ.  ದೇವರು, ಆತ್ಮ, ಚೇತನ, ಜಗತ್ತೆಂಬುದು ಮಿಥ್ಯೆ, ಮೋಕ್ಷ, ಪರಲೋಕ ಇತ್ಯಾದಿಗಳಲ್ಲಿ ನಂಬಿಕೆಯನ್ನರಿಸಿಕೊಂಡು ಅವುಗಳ ಹುಡುಕಾಟಗಳಲ್ಲಿ ತೊಡಗುವವರಿಗೆ ‘ಭಾವನಾವಾದಿ’ಗಳೆಂದು, ಕರೆಯುತ್ತಾರೆ. 

ಹಾಗೆಯೇ ವಾಸ್ತವ ಜಗತ್ತಿನ ಆಗುಹೋಗುಗಳಿಗೆ ಕಾರ್ಯ-ಕಾರಣಗಳ ಸಂಬಂಧಗಳ ಮೂಲಕ ಸ್ಪಂದಿಸುತ್ತ, ಜೀವನವನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಸಾಗುತ್ತ, ದೇವರು, ಸ್ವರ್ಗ, ಆತ್ಮ ಮುಂತಾದುವುಗಳನ್ನು ಪರಿಗಣಿಸದಿರುವವರನ್ನು ‘ ಭೌತವಾದಿ’ಗಳೆಂದು ಗುರುತಿಸಲಾಗುತ್ತಿದೆ. 

ಆದರೆ ಅಧ್ಯಾತ್ಮದಲ್ಲಿ ನಂಬಿಕೆಯನ್ನರಿಸಿಕೊಂಡು ಸಾಮಾಜಿಕ ಆಗುಹೋಗುಗಳ ಬಗೆಗೆ ಕಾಳಜಿಯನ್ನಿರಿಸಿಕೊಂಡು, ಕಾರ್ಯಪ್ರವೃತ್ತರಾದವರಲ್ಲಿ ಸ್ವಾಮಿ ವಿವೇಕಾನಂದ, ನಾರಾಯಣ ಗುರು ಮುಂತಾದವರು ಆಗಿಹೋಗಿದ್ದಾರೆ. ಇಂತಹವರಲ್ಲಿ ಒಬ್ಬರಾಗಿದ್ದರು ಸ್ವಾಮಿ ಅಗ್ನಿವೇಶ್.

ಆಂಧ್ರ ಪ್ರದೇಶದ ಶ್ರೀಕಾಕುಲಂನ ಒಂದು ತೆಲಗು ಬ್ರಾಹ್ಮಣ ಕುಟುಂಬದಲ್ಲಿ ಸೆಪ್ಟೆಂಬರ್ 21,1939ರಂದು ಜನಿಸಿದ ಸ್ವಾಮಿ ಅಗ್ನಿವೇಶರ ಪೂರ್ವಾಶ್ರಮದ ಹೆಸರು ವೆಪ ಶ್ಯಾಮ್ ರಾವ್ ಆಗಿತ್ತು.  ಅವರು ನಾಲ್ಕು ವರ್ಷದ ಬಾಲಕನಾಗಿದ್ದಾಗಲೇ ತಮ್ಮ ತಂದೆಯನ್ನು ಕಳೆದುಕೊಂಡರು.  ನಂತರ ಅವರು ತಮ್ಮ ತಾತನ(ತಾಯಿಯ ತಂದೆ) ಆಶ್ರಯದಲ್ಲಿ ಬೆಳೆದರು. 

ಕಾನೂನು ಮತ್ತು ವಾಣಿಜ್ಯ ವಿಷಯಗಳಲ್ಲಿ ಶಿಕ್ಷಣವನ್ನು ಪಡೆದು, ಕೋಲ್ಕತ್ತಾದ ಸೈಂಟ್ ಝೆವಿಯರ್ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ಬೋಧಿಸುವ ಉಪನ್ಯಾಸಕರಾಗಿ ಕೆಲಕಾಲ ಸೇವೆಯನ್ನು ಸಲ್ಲಿಸಿದರು. ನಂತರ 1970ರಲ್ಲಿ ಅವರು ಆರ್ಯಸಮಾಜದ ತಾತ್ವಿಕ ಆಧಾರದಿಂದ ಪ್ರೇರೇಪಿತ ಆರ್ಯಸಭಾ ಎಂಬ ಸಂಘಟನೆಯನ್ನು ಶುರುಮಾಡಿದರು.  1977ರಲ್ಲಿ ಹರಿಯಾಣದ ಶಾಸಕರಾದರು.  1979ರಲ್ಲಿ ಆ ರಾಜ್ಯ ಸರ್ಕಾರದ ಶಿಕ್ಷಣ ಸಚಿವರಾದರು. 

ಅಧಿಕಾರದಲ್ಲಿದ್ದಾಗಲೇ ಅವರು ‘ಜೀತ ಕಾರ್ಮಿಕರ ಮುಕ್ತಿ ರಂಗ ಎಂಬ ಸಂಘಟನೆಯನ್ನು ಹುಟ್ಟುಹಾಕಿದರು. ಈ ಕ್ಷೇತ್ರದಲ್ಲಿ ಗಮನೀಯವಾದ ಸೇವೆಯನ್ನು ಸಲ್ಲಿಸಿದರು.  ಸಚಿವ ಸ್ಥಾನವನ್ನು ತೊರೆದು ಸಂಪೂರ್ಣವಾಗಿ ಸಾಮಾಜಿಕ ಕ್ಷೇತ್ರದ ಕ್ರಿಯಾಶಾಲಿ ಕಾರ್ಯಕರ್ತರಾದರು. ನಮ್ಮ ದೇಶದ ಅನೇಕ ಸಾಮಾಜಿಕ ಪಿಡುಗುಗಳ ವಿರುದ್ಧ ಗಟ್ಟಿ ದನಿಯನ್ನು ಎತ್ತಿದರು; ಕ್ರಿಯಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.

ಸ್ವಾಮಿ ಅಗ್ನಿವೇಶ್ ಒಮ್ಮೆ ವಿಶ್ವ ಮತಗಳ ಸಂಸತ್(ವರ್ಲ್ಡ್ ಪಾರ್ಲಿಮೆಂಟ್ ಆಫ್ ರಿಲಿಜನ್ಸ್- ಅಮೇರಿಕಾದ ಚಿಕಾಗೋದಲ್ಲಿ 1893ರಲ್ಲಿ ಸ್ವಾಮಿ ವಿವೇಕಾನಂದರು ಈ ವೇದಿಕೆಯಲ್ಲಿ ಹಿಂದೂ ಮತ ಕುರಿತಂತೆ ಐತಿಹಾಸಿಕ ಭಾಷಣವನ್ನು ಮಾಡಿದ್ದರು)ನಲ್ಲಿ ಮಾತನಾಡುತ್ತ  ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಸಂರಚನೆಯೇ ಕೋಮುವಾದಿ ಶಕ್ತಿಗಳ ಆಕ್ರಮಣಗಳಿಗೆ ತುತ್ತಾಗುತ್ತಿರುವ ಸಂದರ್ಭದಲ್ಲಿ ವಿವೇಕಾನಂದರ ವಿವೇಚನೆಯ ಮಾತುಗಳು ಏನಾಗಬಹದು ಎಂದು ದಿಟ್ಟವಾಗಿ ಪ್ರಶ್ನಿಸಿದರು. 

ಕಾಶ್ಮೀರ ಬಿಕ್ಕಟ್ಟಿಗೆ ಪರಿಹಾರ, ಮಾವೋವಾದಿಗಳನ್ನು ಮುಖ್ಯವಾಹಿನಿಗೆ ತರುವ ಪ್ರಕ್ರಿಯೆ ಮುಂತಾದ ವಿಚಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ವಿವಿಧ ಮತಗಳ ನಡುವೆ ಸೌಹಾರ್ದಯುತ ಸಂವಾದಗಳು ಜರುಗುತ್ತಿರಬೇಕೆಂದು ಅವರ ಆಶಯವಾಗಿತ್ತು.  ಹೆಣ್ಣುಭ್ರೂಣ ಹತ್ಯೆ, ಭಯೋತ್ಪಾದನೆ, ಜನಾಂಗೀಯವಾದ, ಜಾತೀವಾದ, ಕೋಮುವಾದ, ಮೂಲಭೂತವಾದ ಮುಂತಾದ ವಿಷಮಕಾರಿ, ಜ್ವಲಂತ ವಿಷಯಗಳ ವಿರುದ್ಧ ಸ್ಪಷ್ಟ ಮತ್ತು ನೇರವಾದ ನಿಲುವುಗಳನ್ನು ತೆಗೆದುಕೊಂಡು, ಅವುಗಳನ್ನು ಕಾರ್ಯರೂಪಕ್ಕಿಳಿಸಲು ಪ್ರಾಮಾಣಿಕ ಪ್ರಯತ್ನವನ್ನು ನಡೆಸುತ್ತಿದ್ದರು. 

‘ಭ್ರಷ್ಟಾಚಾರ ವಿರುದ್ಧ ಭಾರತ’ ಆಂದೋಲನದಲ್ಲಿ ಭಾಗವಹಿಸಿದ ಪ್ರಮುಖರಲ್ಲಿ ಅವರು ಒಬ್ಬರಾಗಿದ್ದರು. ನಂತರ ಕೆಲವು ಭಿನಾಭಿಪ್ರಾಯಗಳು ತಲೆದೋರಿದ್ದರಿಂದ ಈ ಚಳವಳಿಯಿಂದ ದೂರ ಸರಿದರು. 

‍ಲೇಖಕರು Avadhi

September 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: