ಅವರು 'ಬರೆಯದೇ ಉಳಿದು' ಕಾಡಿದರು…

sandhyarani

‘ಅವಧಿ’ಯಲ್ಲಿ ಸಂಧ್ಯಾರಾಣಿ ಬರೆದ ಅಂಕಣಗಳ ಆಯ್ದ ಬರಹಗಳ ಸಂಗ್ರಹ

‘ಯಾಕೆ ಕಾಡುತಿದೆ ಸುಮ್ಮನೆ ನನ್ನನು’ ಈ ಭಾನುವಾರ ಬಿಡುಗಡೆಯಾಗುತ್ತಿದೆ

ಖಂಡಿತಾ ಬನ್ನಿ.. ಎನ್ನುತ್ತಾ ಇಲ್ಲಿದೆ ಅವರ ಮೊದಲ ಮಾತು  

lines

ಬರೆಯದೇ ಉಳಿದದ್ದು ….

ಮಾತು, ಮಾತು, ಮಾತು….. ಮನೆಯಲ್ಲಿ ಮಾತು, ಕಿಲೋಮೀಟರ್ ಗಟ್ಟಲೆ ದೂರವಿದ್ದ ಹೈಸ್ಕೂಲು, ಜೂನಿಯರ್ ಕಾಲೇಜಿನ ದಾರಿ ಉದ್ದಕ್ಕೂ ಗೆಳತಿಯರ ಜೊತೆ ಮಾತು, ಕಾಲೇಜಿನಲ್ಲೂ ಮಾತು, ಹೀಗೆ ಮಾತಿನ ಮಹಾದೇವಿಯಾಗಿದ್ದ ನಾನು ನಂತರ ಹೆಜ್ಜೆಯಿಟ್ಟಿದ್ದು ಒಂದು ಮೌನ ಪರ್ವಕ್ಕೆ. ಮಾತು ಆಡದ, ಮಾತು ಕೇಳದ ಒಂದು ನಿಶ್ಯಬ್ಧ ಸಾಗರಕ್ಕೆ. ಮಾತುಗಳೆಲ್ಲಾ ಆಗ ನನ್ನಲ್ಲೇ ಹರಳುಗಟ್ಟತೊಡಗಿದವು. ಆಮೇಲಾಮೇಲೆ ಮಾತು ಆಡುವುದಕ್ಕಿಂತ ಸುಮ್ಮನೆ ಕೇಳುವುದೇ ಹಿತ ಅನ್ನಿಸತೊಡಗಿತು.  ಮಾತು ಶಬ್ಧವಾಗುವ ಬದಲು ನನ್ನೊಳಗಿನ ಅನುರಣನವಾಯಿತು, ಮಥನವಾಯಿತು.

face2ಮೊದಲ ಕಾದಂಬರಿ ಓದಿದಾಗ ನಾನು ನಾಲ್ಕನೇ ಕ್ಲಾಸಿನ ಹುಡುಗಿ. ಆಮೇಲೆ ಓದಿದ ಪುಸ್ತಕಗಳು ಎಷ್ಟೊಂದು… ಓದುತ್ತ, ಓದುತ್ತಲೇ ಪುಸ್ತಕಗಳು ನನ್ನ ಸಂಗಾತಿಯಾದವು. ಓದುತ್ತಿದ್ದವಳು ಕಾಲೇಜಿನಲ್ಲಿದ್ದಾಗ ಬರೆಯಲು ಶುರು ಮಾಡಿದೆ, ಅಷ್ಟೇ ಬೇಗ ನಿಲ್ಲಿಸಿದೆ. ಬದುಕನ್ನು ಕಟ್ಟಿಕೊಳ್ಳುವ ಧಾವಂತದಲ್ಲಿ ನನ್ನಲ್ಲಿನ ಕವನಗಳು ಕಳೆದುಹೋಗಿದ್ದವು. ಒಂದು ಪತ್ರ ಸಹ ಬರೆಯಲಾರದಷ್ಟು ಅಕ್ಷರಗಳು ಮುನಿಸಿಕೊಂಡಿದ್ದವು. ಅದು ಇನ್ನೊಂದು ನಿರ್ವಾತ. ಓದುವುದನ್ನು ನಿಲ್ಲಿಸಲಿಲ್ಲ ಎನ್ನುವುದು ನನ್ನ ಬದುಕಿಗೊಂದು ಕಾರಣವಾಗಿತ್ತು.

ಹೀಗೆ ಮಾತುಗಳನ್ನೆಲ್ಲಾ ಒಳಗೆ ತುಂಬಿಕೊಂಡಿದ್ದ ನನಗೆ ಕಿಟಕಿಯಾದದ್ದು ’ಅವಧಿ’ಯ ಅಂಕಣ. ‘ಅವಧಿ’ಯ ಸಂಯೋಜಕಿಯಾಗಿ ಕೆಲಸ ಪ್ರಾರಂಭಿಸಿದ್ದೆ, ಆಗ ಸಂಪಾದಕರಾಗಿದ್ದ ಜಿ ಎನ್ ಮೋಹನ್ ಅಂಕಣ ಪ್ರಾರಂಭಿಸಲು ಹೇಳಿದರು. ಒಂದು ಸಂಭ್ರಮ,  ಹೆದರಿಕೆ,  ಆತಂಕದಿಂದಲೇ ಬರೆಯಲು ಪ್ರಾರಂಭಿಸಿದೆ. ಬರಹ ನನಗೆ ಒಂದು ಬಿಡುಗಡೆ ಆಗಿತ್ತು. ’ಬರಹ ನಮ್ಮಲ್ಲಿನ ’ಈಗೊ’ದಿಂದ ಹೊರ ಬರಲು ದಾರಿ’ ಎಂದೊಮ್ಮೆ ಯಾರೋ ಬರೆದದ್ದು ನೆನಪು.

tell storyಇಲ್ಲ, ನನಗೆ ಬರಹ ಅದಲ್ಲ. ಬರಹ ನನ್ನೊಳಗಿನ ನನ್ನ ಸಂವಾದದ ಪ್ರತಿಧ್ವನಿ, ನನ್ನ ಏಕಾಂತಕ್ಕೊಂದು ಕಿಟಕಿ. ಬರಹ ನನ್ನ ಮಟ್ಟಿಗೆ ಪ್ರೇಮದಲ್ಲಿ ಸಾಧ್ಯವಾಗುವ ಉತ್ಕಟ ಪ್ರಾಮಾಣಿಕತೆ. ಆ ಪ್ರಾಮಾಣಿಕತೆ ಸೋತ ದಿನ ಬರಹ ನಿರ್ಜೀವ. ಹಾಗೆ ಶುರುವಾದ ಪಯಣ ಇದು. ನಡೆಯುತ್ತಾ ನಡೆಯುತ್ತ ನಿಂತು ನೋಡಿದರೆ ’ಎ ಕಹಾ ಆಗಯೆ ಹಮ್ ಯೂಹಿ ಸಾಥ್, ಸಾಥ್ ಚಲ್ ಕೆ’ ಅನ್ನಿಸುತ್ತಿದೆ. ಈ ಬರಹಗಳನ್ನು ನಾನು ಬರೆದಿರುವುದು ಎಷ್ಟು ನಿಜವೋ, ಒಂದು ರೀತಿಯಲ್ಲಿ ಈ ಬರಹಗಳು ನನ್ನನ್ನು ಬರೆದಿರುವುದೂ ಅಷ್ಟೇ ನಿಜ. ಇವುಗಳ ಮೂಲಕ ನನಗೆ ನಾನು ಹೆಚ್ಚು ಅರ್ಥವಾಗಿದ್ದೇನೆ.

 

face2ಅಂಕಣ ಬರೆಯುವಾಗ ನಾನು ಯಾವುದೇ ಚೌಕಟ್ಟು ಹಾಕಿಕೊಂಡಿರಲಿಲ್ಲ. ತಡವಾಗಿ ಮಾತು ಕಲಿತ ಮಗು, ಮಾತು ಶುರು ಮಾಡಿದ ಮೇಲೆ ಜನ್ಮದ ಮಾತುಗಳನ್ನೆಲ್ಲವನ್ನೂ ಆಡುವಂತೆ ಬರೆಯುತ್ತಲೇ ಹೋದೆ. ನಾನು ಎಂದೋ ಕಳೆದುಕೊಂಡಿದ್ದ ಕವಿತೆಗಳು, ಆಡಬೇಕು ಎಂದುಕೊಂಡಿದ್ದರೂ ಆಡದೇ ಉಳಿದ ಮಾತುಗಳು, ಯಾವುದೋ ನೋವಿಗೆ ನನ್ನಲ್ಲಿ ಉಳಿದ ನಿಟ್ಟುಸಿರು, ಚಿಕ್ಕಂದಿನ ಯಾವುದೋ ಅವಮಾನ, ಅಂದೆಂದೋ ಮುಚ್ಚಿಟ್ಟುಕೊಂಡಿದ್ದ ಒಂದು ಕಂಬನಿ, ಅಂಗೈಯಲ್ಲೇ ಉಳಿದ ನವಿಲುಗರಿಯ ನವಿರು, ಉಸಿರಲ್ಲೇ ಉಳಿದ ಕಂದನ ನೆತ್ತಿಯ ಪರಿಮಳ, ಬೆನ್ನು ಬಿಡದೆ ಕಾಡಿದ ಹಾಡು ಎಲ್ಲವೂ ಬರಹಗಳಾದವು.

ಈ ಅಂಕಣದ ಪುಟಗಳಲ್ಲಿ ಬರೆದದ್ದೆಲ್ಲಾ ನನ್ನ ಮಾತುಗಳೇ, ಹೊಸದಾಗಿ ಇನ್ನೇನು ಬರೆಯಲಿ? ಹತ್ತು ವಾರ ಬರೆಯುವೆನೆಂದುಕೊಂಡವಳು ಇನ್ನೂ ಬರೆಯುತ್ತಿದ್ದೇನೆ, ’ಅರೆ ಇಷ್ಟು ಮಾತುಗಳಿತ್ತೇ ನನ್ನಲ್ಲಿ’ ಅನ್ನಿಸುವಂತೆ. ಇವು ನನ್ನನ್ನು ಕಾಡಿದ ಹಾಡುಗಳು, ನಾನು ಹಾಡಿದ ಹಾಡುಗಳು. ಈ ಹಾಡುಗಳು ನಿಮ್ಮಲ್ಲೂ ಅನುರಣಿಸಿದರೆ ದಯವಿಟ್ಟು ಬರೆಯಿರಿ…

pigeon in the hand

 

 

ನಮಸ್ತೆ.

ಸಂಧ್ಯಾರಾಣಿ

[email protected]

 

‍ಲೇಖಕರು admin

October 16, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Praveen V Savadi

    ಮೇಡಮ್, ಅವಧಿಯಲ್ಲಿ ಬರುವ ನಿಮ್ಮ ಬರಹಗಳನ್ನ ತಪ್ಪದೇ ಓದುವವರಲ್ಲಿ ನಾನು ಒಬ್ಬ. ನಾಟಕಗಳ ವಿಮರ್ಶಾ ಬರಹಗಳು ಚೆನ್ನಾಗಿರುತ್ತವೆ.. ಆದರೆ ಅವಕ್ಕಿಂತಲೂ ನನಗೆ ಇಷ್ಥವೆಂದರೆ, ಹೊಸದೆನಿಸುವ ನಿಮ್ಮ ಭಾವನೆಯಲ್ಲಿ ಮೂಡಿಬಂದಿರುವ ನಿಮ್ಮದೇಯಾದ ಒಂದು ಅನುಭವದ.. ಕಲ್ಪನೆಯ.. ಪ್ರವಾಸದ .. ಜೊತೆಗಿನ ಭಾವನಾತ್ಮಕವಾದ ಸಂವಾದದ ಬರಹಗಳು.. ಈಗ ಅವೆಲ್ಲವೂ ಒಂದು ಪುಸ್ತಕದ ರೂಪದಲ್ಲಿ ಬರುತ್ತಿರುವುದು ಸಂತೋಷ.. ಕೊಂಡು ಓದುತ್ತೇನೆ… ಮೇಡಂ.. ಪುಸ್ತಕದ ಮುಖ ಪುಟದಲ್ಲಿ ನಿಮಗೆ ಇಷ್ಟವಾದ ಸಮುದ್ರ / ಅಲೆಗಳ ಛಾಯೆ ಇದ್ದಿದ್ದರೆ… ಅದು ನಿಮ್ಮ ಬರಹಗಳಿಗೆ ಹೆಚ್ಚು ರೂಪಕವಾಗುತ್ತಿತ್ತು… ಈಗಿರುವ ಹೂವುಗಳು ಮಕರಂದ ಬೀರುತ್ತಿವೆ…

    ಪ್ರತಿಕ್ರಿಯೆ
  2. Kumar vantamure

    ಮೇಡಮ ಸಂಧ್ಯಾರಾಣಿಯವರಿಗೆ ಅಭಿನಂದನೆಗಳು
    ನೀವು ಬರೆದ ಪುಸ್ತಕ “ಯಾಕೆ ಕಾಡುತಿಹೆ ಸುಮ್ಮನೆ ನನ್ನ ನು”
    ಪುಸ್ತಕದಲಿ ಕಂಬಳಿ ಹುಳು _ಚಿಟ್ಟೆಯಾದ ಅಭೀನೇತ್ರ ರೇಖಾಳ ಜೀವನಗಾಥೆ ಓದಿ ಅನುಕಂಪ ಮೂಡಿಬಂತು ಬರಹ ತುಂಬಾ ಚನ್ನಾಗಿ ಹ್ರದಯಕಲುಕುವಂತಿದೆ.
    ಕುಮಾರ ವಂಟಮುರೆ;
    ಬೆಳಗಾವಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: