ಕೆ ಪುಟ್ಟಸ್ವಾಮಿ
ಇದು ಕರಡಿಗುಡ್ಡ ಕೃಷ್ಣಪ್ಪ ಅವರ ಊರು ಗೇರಳ್ಳಿಯ ಮನೆಯ ಗೋಡೆಯಲ್ಲಿ ಹಾಕಿರುವ ಫೋಟೋ.
ಈ ಚಿತ್ರವನ್ನು 62 ವರ್ಷಗಳಿಂದ ಜತನವಾಗಿ ಕಾಪಾಡಿಕೊಂಡು ಬಂದಿದ್ದಾರೆ. .
ಕೃಷ್ಣಪ್ಪನವರ ತಂದೆ ವ್ಯವಸಾಯದ ಜೊತೆಗೆ ಮಾವಿನ ಹಣ್ಣಿನ ಕಾಲದಲ್ಲಿ ಬೇರೆ ಬೇರೆ ತೋಟಗಳ ಗುತ್ತಿಗೆ ಹಿಡಿದು ಮಾವಿನ ಹಣ್ಣಿನ ಸಗಟು ಮಾರಾಟ ವ್ಯವಹಾರ ಮಾಡುತ್ತಿದ್ದರು. ಒಮ್ಮೆ ಬೆಂಗಳೂರಿಗೆ ಅಂದರೆ 1956ರಲ್ಲಿ ಮಾವಿನ ಲೋಡಿನೊಡನೆ ಲಾರಿಯಲ್ಲಿ ಐದು ವರ್ಷದ ಬಾಲಕ ಕೃಷ್ಣಪ್ಪನನ್ನು ತಂದೆ ತಿಮ್ಮೇಗೌಡರು ಕೂರಿಸಿಕೊಂಡು ಬೆಂಗಳೂರಿನ ಸಿಟಿಮಾರುಕಟ್ಟೆಗೆ ಕರೆತಂದಿದ್ದರು. ಮಾವಿನ ಹಣ್ಣನ್ನು ಮಂಡಿಗೆ ಹಾಕಿ ವ್ಯವಹಾರ ಮುಗಿದ ನಂತರ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿ ಸುತ್ತು ಹಾಕಿಸಿದರು. ಆಗ ಸ್ವಾತಂತ್ರ್ಯ ಪಡೆದು ದಶಕವಾಗಿರಲಿಲ್ಲ.
ಗಾಂಧಿ ನೆಹರು ನೇತಾಜಿಯ ಗಾಢ ಪ್ರಭಾವ ಇದ್ದಕಾಲ. ಈ ವ್ಯಕ್ತಿಗಳ ಬಗೆ ಬಗೆಯ ಚಿತ್ರಗಳಿಗೆ ಚೌಕಟ್ಟು ಹಾಕಿ ಜೋಡಿಸಿದ ಪಟಗಳನ್ನು ನೋಡುತ್ತಾ ನಿಂತ ಬಾಲಕನನ್ನು ತಂದೆ ವಿಚಾರಿಸಿ ಅವನು ಮೆಚ್ಚಿದ ಈ ಪಟವನ್ನು ಕೊಂಡು ಊರಿಗೆ ತಂದರು. ಅದು ಅವರ ಗೋಡೆಯನ್ನು ಅಲಂಕರಿಸಿತು. ನಿಯತವಾಗಿ ಧೂಳು ಹೊಡೆದು, ಗಾಜು, ಚೌಕಟ್ಟನ್ನು ನಾಜೂಕಾಗಿ ಒರೆಸಿ ಇಡುವುದು ನೇಮದಂತೆ ನಡೆಯಿತು. ಹಬ್ಬಗಳಲ್ಲಿ ಇತರ ದೇವರ ಪಟಗಳಿಗೆ ಪೂಜೆ ಮಾಡುವಂತೆ, ಗಾಂಧೀ ನೆಹರೂ ಹಣೆಗೆ ಕುಂಕುಮ ಇಟ್ಟು ಪೂಜೆ ಮಾಡುತ್ತಾ ಬಂದರು.
ಈ ಅರವತ್ತು ವರ್ಷಗಳಲ್ಲಿ ಏನೆಲ್ಲ ಆದವು! ತಂದೆ ಗತಿಸಿದರು. ಮನೆ ಪಾಲಾಯಿತು. ಹಳೆಯ ಹಂಡೆ ಬಿಂದಿಗೆ ಚಂಬುಗಳು ಇಲ್ಲವಾದವು. ಕೊಳದಪ್ಪಲೆಗಳು ಕಾಣೆಯಾದವು. ಪ್ಲಾಸ್ಟಿಕ್ ಬಿಂದಿಗೆ, ಮಗ್ ಬಂದವು. ಗ್ಯಾಸ್ ಕನೆಕ್ಷನ್ ಸಿಕ್ಕಿತು.
ಸೌದೆ ಒಲೆ ಉರಿಯುವುದು ನಿಂತಿತು. ಉಪ್ಪುಖಂಡ ಮರೆತೇ ಹೋಗಿದೆ. ಕಬಾಬಿನ ಕಬಂಧಬಾಹು ಹಿಡಿತ ಸಾಧಿಸಿದೆ. ಮೂವರು ಅಣ್ಣಂದಿರೂ ಮರಣಿಸಿದರು. ಇದ್ದ ಎಷ್ಟೊ ದೇವರ ಪಟಗಳು ಹೊಗೆ ಹಿಡಿದೋ, ಕೆಳಕ್ಕೆ ಬಿದ್ದೋ ಇಲ್ಲವಾದವು. ಮನುಷ್ಯರ ಚಿತ್ರಗಳು ಗೋಡೆಗೇರಿದವು. ಏನೆಲ್ಲ ಬದಲಾವಣೆಗಳಾದರೂ ಈ ಪಟ ಮಾತ್ರ ಅದೇ ತಾಜಾತನವನ್ನು ಹಾಗೆಯೇ ಉಳಿಸಿಕೊಂಡಿದೆ. ಈಗಲೂ ಗೋಡೆಯ ಮೇಲೆ ಕುಳಿತು ಎಲ್ಲರ ಗಮನ ಸೆಳೆಯುತ್ತಾ ಇದೆ. ಕೃಷ್ಣಪ್ಪನವರಿಗೆ ಇದೊಂದು ಪವಾಡ






0 Comments