ಅವರು.. ಜಿ ಕೆ ಜಿ

ಎಲ್ಲರ ಗೆಳೆಯ, ಮಾರ್ಗದರ್ಶಿ, ಮಹತ್ವದ ಚಿಂತಕ ಜಿ ಕೆ ಗೋವಿಂದರಾವ್ ಇನ್ನಿಲ್ಲವಾಗಿದ್ದಾರೆ.

ಅವರ ಒಡನಾಡಿಗಳ ಕಂಬನಿ ಇಲ್ಲಿದೆ-

ನಮ್ಮ ತಂಡದ ಅನೇಕ ಧಾರಾವಾಹಿ ಗಳಲ್ಲಿ ಮುಖ್ಯ ಪಾತ್ರಗಳನ್ನು ಮಾಡುತ್ತಾ, ಮಾಡುತ್ತಾ ನಮ್ಮೆಲ್ಲರಿಗೂ ತುಂಬಾ ಹತ್ತಿರವಾದವರು ನೀವು.

ನಿಮ್ಮ, ಜ್ಞಾನ ಪಾಂಡಿತ್ಯ ಕ್ಕಿಂತ ಹೆಚ್ಚಾಗಿ ಹೃದಯದ ಮೂಲಕ ಗೆಳೆಯರ ಜತೆ ಬಾಂಧವ್ಯ ವಿಟ್ಟುಕೊಂಡವರು ನೀವು.‌
ನಿಮ್ಮ ಜತೆ ಜಗಳಗಳು ಗಂಟು ಮುಖದಿಂದ ಕೂಡಿರುತ್ತಿರಲಿಲ್ಲ..ನಗು ಉಲ್ಲಾಸ ಗಳಿಂದ ತುಂಬಿರುತ್ತಿತ್ತು..

ಮುಂದಿನ ಧಾರಾವಾಹಿ ಯಲ್ಲಿ ಸಿಡುಕು ವ್ಯಕ್ತಿ ತ್ವದ, ಆದರೆ ಅಂತಃಕರಣ ತುಂಬಿದ ಮುಖ್ಯಮಂತ್ರಿ ಪಾತ್ರ ಮಾಡಿಸಬೇಕೆಂದು ನಿನ್ನೆ ತಾನೇ ನನ್ನ ತಂಡದವರ ಜತೆ ಮಾತನಾಡುತ್ತಿದ್ದೆ.

ಇಷ್ಟು ಬೇಗ ವಿದಾಯ ಹೇಳುತ್ತೀರೆಂದು ಭಾವಿಸಿರಲಿಲ್ಲ.
ಟಿ ಎನ್ ಸೀತಾರಾಂ

ನಿಷ್ಠೂರವಾದಿ,ತಾವು ನಂಬಿದ ತತ್ವ ಸಿದ್ಧಾಂತಗಳನ್ನು ಕೊನೆ ಉಸಿರಿರುವತನಕ ಬಿಡದ,ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡು ಆದರ್ಶವಾಗಿ ಬದುಕು ನಡೆಸಿದ, ಮಾರ್ಗದರ್ಶಿ ಪ್ರೊಫೆಸರ್ ಗೋವಿಂದರಾವ್ ಅವರಿಗೆ ಗೌರವಪೂರ್ವಕ ಶ್ರದ್ಧಾಂಜಲಿಗಳು.
– ಶಶಿಧರ ಬಾರಿಘಟ್

ಜಿ.ಕೆ.ಜಿ. ನಿದನರಾಗಿದ್ದಾರೆ. ಏನೋ ಖಾಲಿತನ. ತೊಂಬತ್ತರ ದಶಕದಿಂದ ಅವರ ಜೊತೆ ಒಡನಾಟದ ನೆನಪುಗಳು. ಬೇಕಂತಲೇ ಅವರನ್ನು ರೇಗಿಸಿ ಬಯ್ಯಿಸಿಕೊಳ್ಳುವ ಕುಶಿ ನಮಗೆ. ಅವರ ನಟನೆಯ ಹುಚ್ಚನ್ನು ತಮಾಶೆ ಮಾಡಿದಾಗ ಸಿಟ್ಟು ಮಾಡಿಕೊಳ್ಳುವುದನ್ನು ಎಂಜಾಯ್ ಮಾಡುತ್ತಿದ್ದೆವು.

ಜಿ.ಕೆ.ಜಿ. ಪ್ರಾಮಾಣಿಕತೆ ನಮಗೆ ಇಂದಿಗೂ ಅಚ್ಚರಿ. ಇಂಗ್ಲೀಶ್ ಸಾಹಿತ್ಯದ ಪ್ರಾದ್ಯಾಪಕರಾದ ಜಿ. ಕೆ. ಜಿ. ಶೇಕ್ಸಪಿಯರ್ ಕುರಿತು ಮಾತನಾಡಲು ಶುರು ಮಾಡಿದರೆ ಹಗಲು, ರಾತ್ರಿ ದಾಟುತ್ತಿತ್ತು. ಬಲಪಂಥೀಯ ಮತಾಂದತೆಯನ್ನು ಸದಾ ವಿರೋದಿಸುತ್ತಿದ್ದ ಜಿ.ಕೆ.ಜಿ. ಯವರು ಲಂಕೇಶ್ ಘರಾಣದವರು. ಕಡೆಯವರೆಗೂ ಆ ಘರಾಣದ ನಿಯತ್ತನ್ನು ಉಳಿಸಿಕೊಂಡಿದ್ದರು.
ಹೋಗಿ ಬನ್ನಿ ಸರ್.
-ಶ್ರೀಪಾದ್ ಭಟ್

ತೊಂಭತ್ತರ ದಶಕ. ಇಟ್ಟಿಗೆಗಳು ಕಟ್ಟುವ ಬದಲು ಕೆಡಹಲು ಅಸ್ತ್ರವಾಗುವ ಎಲ್ಲ ತಯಾರಿಗಳು ನಡೆದಿದ್ದವು. ಬೆಂಗಳೂರಿನಲ್ಲಿ ಕೋಮು ಸೌಹಾರ್ದತೆಗಾಗಿ ಚಟುವಟಿಕೆಗಳನ್ನು ನಡೆಸುವ ಯೋಜನೆ ಸಿದ್ಧಪಡಿಸಿದೆವು. ನಗರದ ಸೂಕ್ಷ್ಮ ಎಂದು ಕರೆಸಿಕೊಳ್ಳುವ ಪ್ರದೇಶಗಳಲ್ಲಿ ಪಾದಯಾತ್ರೆ ಮಾಡಿದೆವು. ಹತ್ತಾರು ಸಣ್ಣ ದೊಡ್ಡ ಸಭೆಗಳನ್ನು ಸಂಘಟಿಸಿದೆವು. ಆಗ ಕಬ್ಬನ್ ಪಾರ್ಕ್ ಒಳಗೆ ಅಧಿಕಾರ ಕೇಂದ್ರ ವಿಧಾನಸೌಧದ ಎದುರಿನಲ್ಲಿಯೇ ಶಾಂತ ಪ್ರತಿಭಟನೆಗಳಿಗೆ ಅವಕಾಶ ಕೊಡುತ್ತಿದ್ದ ಸಮಯ.

ಈಗಿನಂತೆ ಜಗತ್ತಿಗೆ ಕಾಣದ ಹಾಗೆ ಸ್ವಾತಂತ್ರ್ಯ ಉದ್ಯಾನದ ಹೆಸರಿನ ಜೈಲಿನಲ್ಲಿ ಅಲ್ಲ. ಕರಸೇವೆ ಇಟ್ಟಿಗೆ ಪೂಜೆಗಳ ಮೂಲಕ ದೇಶದ ಕೋಮುಸೌಹಾರ್ದತೆ ಕದಡ ಬೇಡಿರೆಂದು ದಿನವಿಡೀ ಧರಣಿ ನಡೆಸಿದ್ದೆವು. ಆದರೆ ಸೌಹಾರ್ದತೆ ಕದಡುವುದೇ ದೇಶಪ್ರೇಮವೆಂದು ಸಾರಿಕೊಂಡವರು ಕೊನೆಗೂ ಬಾಬರಿ ಮಸೀದಿ ಉರುಳಿಸಿಯೇ ಬಿಟ್ಟಾಗ…ಬೆಂಗಳೂರಿನಲ್ಲಿ ಕರ್ಫ್ಯೂ ಇದ್ದರೂ ಧೃತಿಗೆಡದೆ ಮೌನ ಯಾತ್ರೆ ಮೈಸೂರು ಬ್ಯಾಂಕ್ ವೃತ್ತದಿಂದ ಗಾಂಧೀ ವೃತ್ತದ‌ವರೆಗೆ ನಡೆಸಿದ್ದೆವು.

ಟೌನ್ ಹಾಲ್ ಮುಂದೆ ನಡೆದ ಅಸಂಖ್ಯ ಹೋರಾಟ ಗಳಲ್ಲಿ ಭಾಗಿಯಾದಿರಿ. ನಮ್ಮ ಜೊತೆ ಗಟ್ಟಿ ಧ್ವನಿಯಾಗಿ, ಮಾರ್ಗದರ್ಶಕರಾಗಿ ನಿಂತ ಗುರುಗಳೇ….ಹೀಗೆ ಹೊರಟು ಬಿಟ್ಟಿರಾ..
-ಕೆ ಎಸ್ ವಿಮಲಾ

ನೇರ ದಿಟ್ಟ ನಿರಂತರ ಎಂಬ ಪದಗಳನ್ನು ತಮ್ಮ ಸಾರ್ವಜನಿಕ ಬದುಕಿನಲ್ಲಿ ಸಾಕಾರಗೊಳಿಸಿದ ನಿಷ್ಠುರವಾದಿ ಚಿಂತಕ, ವಾಗ್ಮಿ, ಬೋಧಕ, ಕಲಾವಿದ ಮತ್ತು ಲೇಖಕ ಜಿ ಕೆ ಗೋವಿಂದರಾವ್ ಅವರ ನಿರ್ಗಮನದೊಂದಿಗೆ ಕನ್ನಡ ಸಾರಸ್ವತ ಲೋಕ ಮತ್ತು ವಿಚಾರವಾದದ ಜಗತ್ತಿನ ಮತ್ತೊಂದು ಕೊಂಡಿ ಕಳಚಿದಂತಾಗಿದೆ.

ತಮ್ಮ ಪ್ರಖರ ವಾಗ್ಬಾಣಗಳ ಮೂಲಕ, ಬರಹಗಳ ಮೂಲಕ, ಚಿಂತನೆಗಳ ಮೂಲಕ ವಿಚಾರವಾದವನ್ನು, ಪ್ರಗತಿಪರತೆಯನ್ನು ಮತ್ತು ಸಂವೇದನಾಶೀಲ ಚಿಂತನೆಗಳನ್ನು ಯುವ ಮನಸುಗಳಲ್ಲಿ ನಿರಂತರವಾಗಿ ಬಿತ್ತುತ್ತಲೇ ಇದ್ದ ‘ಜಿಕೆಜಿ’ ಕರ್ನಾಟಕದ ವೈಚಾರಿಕ ಜಗತ್ತಿನ ಪ್ರಬಲ ದನಿಯಾಗಿದ್ದವರು. ಅವರೊಡನೆ ಕೆಲವು ಸಂದರ್ಭಗಳಲ್ಲಿ ವೇದಿಕೆ ಹಂಚಿಕೊಂಡ ನೆನಪು ನೆನಪಾಗಿಯೇ ಉಳಿಯಲಿದೆ. ‘ಜಿಕೆಜಿ’ ಬಿತ್ತು ಹೋಗಿರುವ ವೈಚಾರಿಕತೆಯ ಬೀಜಗಳು ಜೀವಂತವಾಗಿರುತ್ತವೆ, ಇರಬೇಕಿದೆ.

ಕರ್ನಾಟಕದ ವೈಚಾರಿಕ ಜಗತ್ತಿನ ಒಂದು ಕೊಂಡಿಯನ್ನು ಕಳೆದುಕೊಂಡು ಪ್ರಗತಿಪರ ಸಮಾಜ ಅನಾಥವಾಗಿದೆ. ಆದರೆ ಅವರು ಬಿಟ್ಟುಹೋದ ಹೆಜ್ಜೆ ಗುರುತುಗಳು ಸದಾ ನಮ್ಮೊಳಗಿನ ಸುಪ್ತ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಲೇ ಇರುತ್ತದೆ.

ನಿಮಗೆ ಅಂತಿಮ ವಿದಾಯದ ನಮನಗಳು ಜಿಕೆಜಿ ಸರ್.
-ನಾ ದಿವಾಕರ್

ನನ್ನ ಅತ್ಯಂತ ಆತ್ಮೀಯ ಸ್ನೇಹಿತ ರು.ಅವರೊಂದಿಗೆ ಕಳೆದ ಮಾತು ಹರಟೆಯ ಗಳಿಗೆಗಳು ಅತ್ಯಂತ ಖುಷಿಯ ಅರ್ಥಪೂರ್ಣ ಗಳಿಗೆಗಳು.
-ರಾಜೇಂದ್ರ ಚೆನ್ನಿ

ಜಿ.ಕೆ.ಗೋವಿಂದರಾವ್ ಅವರು ಇನ್ನಿಲ್ಲವೆಂದು ತಿಳಿದು ಮನಸ್ಸಿಗೆ ನೋವಾಗಿದೆ. ಅತೀವ ಸಂತಾಪಗಳು. ಆಗಾಗ ಬೇರೆ ಬೇರೆ ಕಾರಣಕ್ಕೆ ಅವರೇ ಫೋನ್ ಮಾಡಿ ದುಷ್ಟ, ದೇಶಭಕ್ತ ಎಂದೆಲ್ಲಾ ಪ್ರೀತಿಯಿಂದ ಬೈಯ್ಯುತ್ತಿದ್ದ ಅವರು ನನಗೆ ತುಂಬಾ ಪ್ರಭಾವ ಬೀರಿದವರಲ್ಲೊಬ್ಬರು. ಅವರ ನೆನಪು ನನಗೆ ಸದಾ ಕಾಡುತ್ತದೆ.
-ಎಚ್ ವಿ ವೇಣುಗೋಪಾಲ್

ಇತಿಹಾಸದ ಪುಟ ಸೇರಿದ ನನ್ನ ಆತ್ಮೀಯ ಗುರುಗಳು – ಜಿ.ಕೆ.ಗೋವಿಂದ ರಾವ್

ಸೆಪ್ಟೆಂಬರ್ 28 ರ ರಾತ್ರಿ 10.40 ರ ಸುಮಾರಿಗೆ ಫೋನ್ ಕರೆ ಬಂತು. ‘ಏನ್ರೀ, ಫೋನ್ ಮಾಡಿದ್ದು’ ಅಂದ್ರು. ಪತ್ರಿಕಾ ಹೇಳಿಕೆಗೆ ನಿಮ್ಮ ಹೆಸರು ಹಾಕಬೇಕಾಗಿತ್ತು ಅದಕ್ಕೆ ಫೋನ್ ಮಾಡಿದ್ದೆ ಅಂದೆ. ‘ಅಂಥಾದ್ದಕ್ಕೆಲ್ಲಾ ನೇರವಾಗಿ ನನ್ನ ಹೆಸರು ಹಾಕ್ಕೊಳ್ಳಿ’ ಅಂದ್ರು. ನಾನೀಗ, ಹುಬ್ಬಳ್ಳಿಯಲ್ಲಿದೇನೆ ಅಂತಲೂ ಅಂದ್ರು. ಏನ್ಸಾರ್ ಹುಷಾರಿಲ್ಲವಾ ಅಂದ್ರೆ, ಮೌನವೇ ಉತ್ತರವಾಗಿತ್ತು. ಈಗ ಸಂಪೂರ್ಣ ಮೌನಕ್ಕೆ ಜಾರಿದ್ದಾರೆ ನನ್ನ ಆತ್ಮೀಯ ಗುರುಗಳು.

ಸಾಗರದ ಲಾಲ್ ಬಹಾದೂರ್ ಕಾಲೇಜಿನಲ್ಲಿ ಪಿಯುಸಿ ಓದುವಾಗ ನನಗೆ ಇಂಗ್ಲಿಷ್ ಮೇಷ್ಟರಾಗಿದ್ದರು. ಕೀಟಲೆ ಮಾಡಿದರೆ ಹಿಡಿದು ಹಿಪ್ಪೆ ಮಾಡಿ ಕಿಟಕಿ ಹೊರಗಡೆ ಎಸೆದು ಬಿಡ್ತೇನೆ ಎಂದು ಹೇಳಿ ವಿದ್ಯಾರ್ಥಿಗಳನ್ನು ತಮಾಷೆಯಾಗಿಯೇ ತಮ್ಮ ಹಿಡಿತಕ್ಕೆ ತಗೋಳ್ತಿದ್ದ ಗುರುಗಳು. ಅದೇ ಕಾಲೇಜಿನಲ್ಲಿ ಕಾರ್ನಾಡರ ತುಘಲಕ್ ನಾಟಕದಲ್ಲಿ ತುಘಲಕ್ ಪಾತ್ರ ಮಾಡಿದ್ದು ನನಗೆ ಇನ್ನೂ ಹಸಿರಾಗಿಯೇ ಇದೆ.

ನಂತರ ಬೆಂಗಳೂರು ಸಮುದಾಯದ “ಸಂಸ್ಕಾರ” (ಯು.ಅರ್.ಅನಂತಮೂರ್ತಿಯವರ ಕಾದಂಬರಿ – ಕಥಾರೂಪದ ನಾಟಕ ದೆಹಲಿಯ ದೇವೇಂದ್ರ ರಾಜ್ ಅಂಕುರ್ ಅವರ ನಿರ್ದೇಶನ)ದಲ್ಲಿ ಪ್ರಾಣೇಶಾಚಾರ್ಯರಾಗಿ ಮತ್ತು ಪ್ರಸನ್ನ ನಿರ್ದೇಶನದ ಮ್ಯಾಕ್ ಬೆಥ್ ನಾಟಕದ ಮ್ಯಾಕ್ ಬೆಥ್ ಆಗಿ ನಮ್ಮ ಜತೆ ನಾಟಕಗಳಲ್ಲಿ ಮಾಡಿದ್ದರು. ಬೆಂಗಳೂರು ಸಮುದಾಯದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

ಅನೇಕ ಕನ್ನಡ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಎಲ್ಲಾ ಪ್ರಗತಿಪರ ಹೋರಾಟಗಳಲ್ಲಿ, ಕೋಮುವಾದದ ವಿರುದ್ಧದ ಚಳುವಳಿಗಳಲ್ಲಿ ಸದಾ ನಮ್ಮ ಜತೆ ಪಾಲ್ಗೊಳ್ಳುತ್ತಿದ್ದ ಗುರುಗಳು ನಮಗೆ ಸದಾ ಸ್ಪೂರ್ತಿಯಾಗಿದ್ದರು.

ಗಾಂಧಿಯ ವಿಚಾರಗಳನ್ನು ನಮ್ಮಂಥ ಎಡಪಂಥೀಯರಿಗೆ ಮನವರಿಕೆ ಮಾಡಲು ನಿರಂತರ ಪ್ರಯತ್ನ ಮಾಡುತ್ತಿದ್ದರು. ಇಬ್ಬರೂ ಒಂದೇ ಸಭೆಯಲ್ಲಿ ಪಾಲ್ಗೊಂಡಿದ್ದಾಗ ಕಮ್ಯುನಿಸಂ ಬಗೆಗಿನ ಅವರ ನಿರ್ದಾಕ್ಷಿಣ್ಯ ಟೀಕೆ ಮಾಡುತ್ತಾ ನಮಗೆ ಮುಜುಗರ ಉಂಟು ಮಾಡುತ್ತಿದ್ದರು, ನಮ್ಮ ತೀಕ್ಷ್ಣ ಟೀಕೆಯನ್ನೂ ಸಹಿಸಿಕೊಳ್ಳುತ್ತಿದ್ದರು. ಮನೆಗೆ ಬನ್ನಿ ಎಂದು ಸಿಕ್ಕಾಗೆಲ್ಲಾ ಹೇಳುತ್ತಿದ್ದರು.

ಈಗ ಇತಿಹಾಸದ ಪುಟ ಸೇರಿ ಕೇವಲ ನೆನಪಾಗಿ ಹೋದರು ನನ್ನ ಗುರುಗಳು.

ಗುರುಗಳೇ, ಹೋಗಿಬನ್ನಿ. ನಿಮ್ಮ ಒಡನಾಟ ನಮ್ಮನ್ನು ಸರಿಯಾದ ದಾರಿಯಲ್ಲಿ ಹೋಗುವಂತೆ ಮಾಡಿದೆ. ನಿಮಗೆ ಧನ್ಯವಾದಗಳು.
-ಟಿ ಸುರೇಂದ್ರ ರಾವ್

‍ಲೇಖಕರು Admin

October 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: