ಕ್ರಿಯಾ ಪ್ರಕಾಶನ ಕ್ಯೂಬಾ ದ ಹೆಮ್ಮೆಯ ಚೈತನ್ಯವನ್ನು ಗುರುತಿಸಲು ಮುಂದಾಯಿತು . ನಾನು ಬರೆದ ಪ್ರವಾಸ ಕಥನ ‘ನನ್ನೊಳಗಿನ ಹಾಡು ಕ್ಯೂಬಾ’ ಇಟ್ಟುಕೊಂಡು ಅದನ್ನು ಒಂದು ಅರ್ಥದಲ್ಲಿ ದೃಶ್ಯವಾಗಿ ಪರಿವರ್ತಿಸಿತು. ಆ ಕೃತಿಗೆ ನಾನೇ ಬೆನ್ನುಡಿ ಬರೆಯಬೇಕು ಎಂದಾಗ ಹುಟ್ಟಿದ್ದು ಈ ಸಾಲುಗಳು
ಕ್ಯಾಸ್ಟ್ರೋ- ಚೆ- ಕ್ಯೂಬಾ
ಜಿ ಎನ್ ಮೋಹನ್

ಒಂದು ಬೆಳಕು ದೀಪ ಬೇಕು ಎಂದೆ
ಅವರು ಕ್ಯೂಬಾದ ಭೂಪಟ ನೀಡಿದರು
ವಸಂತ ಮೆಲ್ಲನೆ ಕಾಲಿಡುತ್ತಿದೆ
’ಗ್ವಂತನಮೇರಾ’ ಹಾಡು ಗಿಟಾರ್ ನ ಮೂಲಕ
ಹೊರಚೆಲ್ಲುತ್ತಿತ್ತು
ನಿನ್ನ ಕಂಗಳ ಹೊಳಪಿನ ಗುಟ್ಟೇನು ಎಂದು ಕೇಳಿದೆ
‘ವಿ ಶಲ್ ಓವರ್ ಕಮ್’ ಹಾಡು ಗುನುಗಿದಳು
‘ಕಗ್ಗತ್ತಲ ಕಾಲದಲ್ಲೂ ಕವಿತೆ ಬರೆಯುವುದುಂಟೆ’ ಎಂದು ಕೇಳಿದೆ
ಕ್ಯೂಬಾದ ಹಡಗುಕಟ್ಟೆಯಲ್ಲಿ ಗೋಧಿ ಇಳಿಯುತ್ತಿತ್ತು
‘ಮಮ್ಮಿ ಮಮ್ಮಿ ಮಾಡರ್ನ್ ಬ್ರೆಡ್’ ಎನ್ನುವ ಜಾಹಿರಾತು ಕೇಳಿದಾಗಲೆಲ್ಲಾ
ಯಾಕೋ ಕ್ಯೂಬಾದ ನೆನಪು
‘ಸರಿ ಹೊಂದದ ಪದ ಆರಿಸಿ ತೆಗೆದು ಬಿಡಿ’ ಎಂದರು
ಕ್ಯೂಬಾ, ವಿಯೇಟ್ನಾಂ, ಅಮೇರಿಕಾ, ವೆನೆಜುವೆಲಾ
‘ಬಿಟ್ಟ ಸ್ಥಳ ತುಂಬಿ’ ಎನ್ನುತ್ತಾರೆ ಶಾಲೆಯಲ್ಲಿ
ಬಿಟ್ಟು ಹೋಗಿರುವ ಜಗತ್ತಿನ ಕೊಂಡಿ ಎನ್ನುತ್ತದೆ ಕ್ಯೂಬಾ
ಹಾಡು ಎಂದರೇನು? ಎಂದರು
ಕ್ಯೂಬಾ ಎಂದೆ
ಸಿ ಫಾರ್ ಎಂದರು
ತಡಮಾಡದೆ ಹೇಳಿದೆ – ಕ್ಯೂಬಾ , ಕ್ಯಾಸ್ಟ್ರೋ, ಚೆ
‘ಎಲ್ಲಾದರೂ ಇರು, ಎಂತಾದರು ಇರು’ ಹಾಡು ರೇಡಿಯೋದಲ್ಲಿ
ಕ್ಯೂಬಾ ಮರೆಯದಿರು ಎಂಬ ಸೊಲ್ಲು ನನ್ನ ಹೃದಯದಲ್ಲಿ





‘ಎಲ್ಲಾದರೂ ಇರು, ಎಂತಾದರು ಇರು’ ಹಾಡು ರೇಡಿಯೋದಲ್ಲಿ
ಕ್ಯೂಬಾ ಮರೆಯದಿರು ಎಂಬ ಸೊಲ್ಲು ನನ್ನ ಹೃದಯದಲ್ಲಿ