ಕನ್ನಡ-ಮರಾಠಿಯ ಸಾಹಿತ್ಯ ಸೇತುವೆ ಮೀನಾ ವಾಂಗೀಕರ್ ಇನ್ನಿಲ್ಲ

ಕಳೆದ ನಾಲ್ವತ್ತು ವರ್ಷಗಳಿಂದ ಕನ್ನಡದ ಮಹತ್ವದ ಕಾದಂಬರಿಗಳನ್ನು, ನೂರಾರು ಸಣ್ಣಕಥೆಗಳನ್ನು ಮರಾಠಿಗೆ ಅನುವಾದಿಸುತ್ತಾ ಬಂದಿರುವ, ಮಹತ್ವದ ಅನುವಾದಕಿ ಮೀನಾ ವಾಂಗೀಕರ ಇದೇ ಅಕ್ಟೋಬರ್ ೨೨ ರಂದು ಪೂನಾದಲ್ಲಿ ನಿಧನರಾದರು. ಪೂನಾದಲ್ಲಿ ನೆಲೆಸಿದ್ದ ಮೀನಾ, ಕನ್ನಡದ ಖ್ಯಾತ ಲೇಖಕ ವಿ ಎಂ ಇನಾಂದಾರ್ ಅವರ ಮಗಳು.
ಇನಾಂದಾರ್ ಅವರ “ವಿಜಯ ಯಾತ್ರೆ”, “ತ್ರಿಶಂಕು” ಗಳ ಜೊತೆ, ಶಿವರಾಮ ಕಾರಂತರ “ಮೂಕಜ್ಜಿಯ ಕನಸುಗಳು”, ವ್ಯಾಸರಾಯ ಬಲ್ಲಾಳರ “ಬಂಡಾಯ”, ಅನುಪಮಾ ನಿರಂಜನರ “ಮೂಲಮುಖಿ”, ರಾವ್ ಬಹದ್ದೂರ್ ಅವರ “ಧೂಮಕೇತು” – ಇವು ಮೀನಾರ ಸಂವೇದನಾಶೀಲ ಅನುವಾದದಿಂದ ಮರಾಠಿಯಲ್ಲಿ ಪ್ರಸಿದ್ಧವಾದ ಅನೇಕ ಕಾದಂಬರಿಗಳಲ್ಲಿ ಕೆಲವು.
ಮರಾಠಿಯಲ್ಲಿ ಅತಿ ಜನಪ್ರಿಯ ದೀಪಾವಳಿ ವಿಶೇಷಾಂಕಗಳಲ್ಲಿ ನಿಯಮಿತವಾಗಿ ಕನ್ನಡದ ಕಥೆಗಳನ್ನು ಅನುವಾದಿಸಿ ಪ್ರಕಟಿಸುತ್ತಾ ಬಂದಿರುವ ಮೀನಾ, ಕನ್ನಡದ ಕಥನದ ವೈವಿಧ್ಯವನ್ನು, ವಿಸ್ತಾರವನ್ನು ಮರಾಠಿ ಓದುಗರಿಗೆ ತಲುಪಿಸಿದ ಸದ್ದಿರದ ಕೆಲಸಗಾರ್ತಿ. ಯಶವಂತ ಚಿತ್ತಾಲ, ರಾಘವೇಂದ್ರ ಖಾಸನೀಸ, ನಿರಂಜನ, ಶಾಂತಾರಾಮ ಸೋಮಯಾಜಿ, ಜಯಂತ ಕಾಯ್ಕಿಣಿ, ನೇಮಿಚಂದ್ರ, ಶಾಂತಾದೇವಿ ಕಣವಿ – ಇಂಥ ವಿವಿಧ ಶೈಲಿ, ದೃಷ್ಟಿಕೋನಗಳ ಬರಹಗಾರರ ಕಥೆಗಳನ್ನು, ಮರಾಠಿಯ ಕಿರ್ಲೋಸ್ಕರ್, ಕೇಸರಿ, ಸಕಾಳ್, ಸ್ತ್ರೀ, ಆಯುಧ, ಮಾನಿನಿ, ಮಾಹಿರ್ ಇತ್ಯಾದಿ ವಿಶೇಷಾಂಕಗಳಲ್ಲಿ ಪ್ರಕಟಿಸಿದ ಉತ್ಸಾಹಿ ಅನುವಾದಕಿ ಮೀನಾ ಮೂಲತಃ ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮಾಡಿದವರು. ಕಥನವಷ್ಟೇ ಅಲ್ಲ, ಮರಾಠಿಯ ವಿವಿಧ ವೇದಿಕೆ, ಸಂಕಿರಣ, ಪತ್ರಿಕೆಗಳಲ್ಲಿ ಕನ್ನಡ ಸಾಹಿತ್ಯದ ಸ್ಥಿತಿಗತಿಯ ಕುರಿತು ನಿರಂತರ ಜಿಜ್ಞಾಸೆ ನಡೆಸಿದ ಶ್ರೇಯ ಇವರದು.

ಇವರ ಪ್ರಭಾವ ಎಷ್ಟೆಂದರೆ “ಪ್ರಪಂಚ” ಎಂಬ ಜನಪ್ರಿಯ ಪತ್ರಿಕೆ ತನ್ನ ಏಪ್ರಿಲ್ ೨೦೦೦ ಮತ್ತು ಜೂನ್ ೨೦೦೪ ಸಂಚಿಕೆಗಳನ್ನು ಮೀನಾ ವಾಂಗೀಕರು ಅನುವಾದಿಸಿದ ಕನ್ನಡ ಕಥೆಗಳಿಗಾಗಿಯೇ ಮೀಸಲಿಟ್ಟಿತು. ಮೀನಾ ಸ್ವತಂತ್ರವಾಗಿ ಮರಾಠಿಯಲ್ಲಿ ಬರೆದ ‘೧೫೦೦ ವರುಷಗಳ ಭಾರತೀಯ ಮಹಿಳಾ ಸಾಹಿತ್ಯ’ ಉದ್ಗ್ರಂಥವು ಎರಡು ಸಂಪುಟಗಳಲ್ಲಿ ಪ್ರಕಟವಾಗಿದ್ದು, ಇದರ ಒಂದು ಸಂಪುಟ “ಕನ್ನಡ ಮಹಿಳಾ ಸಾಹಿತ್ಯ”ಕ್ಕೆ ಮೀಸಲಾಗಿದೆ.
ಮರಾಠಿಯ ಸಾಹಿತ್ಯ ಸಮ್ಮೇಲನಗಳಲ್ಲಿ ಮತ್ತೆ ಮತ್ತೆ ಕನ್ನಡ ಸಾಹಿತ್ಯದ ಗರಿಮೆಯನ್ನು, ಹಿರಿಮೆಯನ್ನು ಪ್ರತಿಪಾದಿಸುತ್ತಲೇ ಬಂದಿರುವ ಮೀನಾರನ್ನು ಕರ್ನಾಟಕದ ವೇದಿಕೆಗಳು ಬಳಸಿಕೊಂಡಿದ್ದು ಕಡಿಮೆಯೇ ಎನ್ನಬೇಕು. ಕನ್ನಡ ಮತ್ತು ಮರಾಠಿಯ ನಡುವಿನ ಸಂವೇದನಾಶೀಲ ಸೇತುವೆಯಾಗಿದ್ದ ಮೀನಾ ಅವರಿಗೆ ಮುಂಬಯಿ ಕರ್ನಾಟಕ ಸಂಘದ ವರದರಾಜ ಆದ್ಯ ಪ್ರಶಸ್ತಿ, ಮರಾಠಿ ಸಾಹಿತ್ಯ ಪರಿಷತ್ತಿನ ಅನುವಾದ ಪ್ರಶಸ್ತಿ, ಪುಣೆ ಕನ್ನಡ ಮರಾಠಿ ಸ್ನೇಹವರ್ಧನ ಕೇಂದ್ರದ ಸನ್ಮಾನಗಳು ಸಂದಿವೆ.
ಕಾವ್ಯಾ ಕಡಮೆ ಪುಣೆಯಲ್ಲಿ ಈ ಹ್ಹಿಂದೆ ಮಾತನಾಡಿಸಿದಾಗ ಅವರು ಮನ ಬಿಚ್ಚಿ ಮಾತಾಡಿದ್ದರು ಅದರ ಒಂದೆರಡು ತುಣುಕು ಇಲ್ಲಿದೆ
#
ನಾನು ಹೈಸ್ಕೂಲು ಹಂತದಲ್ಲಿ ಉಡುಪಿಯಲ್ಲಿದ್ದಾಗ, ನನ್ನ ತಂದೆಯೊಡನೆ ಮಾತಾಡಲು ಬರುತ್ತಿದ್ದ ಡಾ. ಶಿವರಾಮ ಕಾರಂತರು, ಪರಮೇಶ್ವರ ಭಟ್ಟರು, ವಿ. ಸೀತಾರಾಮಯ್ಯನವರು, ವೆಂಕಟರಾಮಪ್ಪ, ಕು.ಶಿ ಹರಿದಾಸ ಭಟ್ಟರು, ಬಲ್ಲಾಳರು, ಜಿ.ಬಿ. ಜೋಶಿ ಹೀಗೆ ಅನೇಕ ಸಾಹಿತಿಗಳ ಜೊತೆ ಒಡನಾಟ ಲಭಿಸಿತ್ತು. ಶಿವರಾಮ ಕಾರಂತರಂತೂ ಮನೆಯವರಂತೆಯೇ ಹಚ್ಚಿಕೊಂಡಿದ್ದು ಅವರನ್ನು ನಾನು ‘ಕೂದಲ ಕಾಕಾ’ ಅಂತ ಕರೆಯುತ್ತಿದ್ದೆ. ಆಗಲೇ ಆರ್ಕೆ ನಾರಾಯಣ, ತ್ರಿವೇಣಿ, ಎಂ.ಕೆ ಇಂದಿರಾ ಅವರ ಪುಸ್ತಕಗಳನ್ನು ಮೆಚ್ಚಿಗೆಯಿಂದ ಓದಲು ಆರಂಭಿಸಿದೆ.
#
1975ರಲ್ಲಿ ‘ಘಟಶ್ರಾದ್ಧ’ ಚಿತ್ರಕ್ಕೆ ‘ಸ್ವರ್ಣಕಮಲ’ ಪ್ರಶಸ್ತಿ ಬಂದಾಗ ಕನ್ನಡಕ್ಕೆ ಇಷ್ಟು ದೊಡ್ಡ ಸನ್ಮಾನ ತಂದು ಕೊಟ್ಟ ಚಿತ್ರದ ಕುರಿತು ಮರಾಠಿ ಓದುಗರಿಗೆ ತಿಳಿಸಬೇಕೆಂಬ ಹಂಬಲದಿಂದ ‘ಮಹಾರಾಷ್ಟ್ರ ಟೈಮ್ಸ್’ ಹಾಗೂ ‘ಕೇಸರಿ’ ಪತ್ರಿಕೆಗಳಲ್ಲಿ ಎರಡು ಲೇಖನಗಳನ್ನು ಬರೆದಿದ್ದೆ. ಇವು ನನ್ನ ಮೊಟ್ಟ ಮೊದಲ ಮರಾಠಿ ಲೇಖನಗಳು.1978ರಲ್ಲಿ ಶಿವರಾಮ ಕಾರಂತರಿಗೆ ಜ್ಞಾನಪೀಠ ಬಂದಾಗ ಆ ಬಗ್ಗೆ ಮರಾಠಿಯಲ್ಲಿ ಬರೆದ ಲೇಖನಗಳನ್ನು ಗಮನಿಸಿದ ‘ಕಿರ್ಲೋಸ್ಕರ್’ ಪತ್ರಿಕೆಯ ಸಂಪಾದಕರು ‘ಮೂಕಜ್ಜಿಯ ಕನಸು’ ಕಾದಂಬರಿಯ ಸಂಕ್ಷಿಪ್ತ ಅನುವಾದವನ್ನು ಕೊಡಲು ಕೇಳಿದರು. ಆಗ ಆ ಕಾದಂಬರಿಯ ಆಳವಾದ ಓದು ಅನುವಾದವೆಂಬ ಹೊಸ ಸಾಧ್ಯತೆಗೆ ನನ್ನನ್ನು ತೆರೆದುಕೊಳ್ಳುವಂತೆ ಪ್ರೇರೇಪಿಸಿತು. ಅಲ್ಲಿಯ ಮೂಕಜ್ಜಿಯ ಪಾತ್ರದಿಂದ ನಾನು ತುಂಬ ಪ್ರಭಾವಿತಳಾಗಿದ್ದೆ.
#
ನನ್ನ ಮೂಲ ಮನೆಮಾತು ಉತ್ತರಕರ್ನಾಟಕದ ಘಾಟಿ ಕನ್ನಡ. ಆದರೆ ತಂದೆ ಪ್ರೊ. ಇನಾಂದಾರರು ನಾಡಿನಾದ್ಯಂತ ವರ್ಗಾವಣೆಯಾಗುವ ಸರಕಾರಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದುದರಿಂದ ನನಗೆ ಕನ್ನಡದ ಎಲ್ಲ ಪರಿಸರದ ಅಂದರೆ ಉಡುಪಿ, ಹಳೇ ಮೈಸೂರು, ಮಂಡ್ಯ ಹೀಗೆ ಎಲ್ಲ ಭಾಗದ ಭಾಷೆಗಳ ಪರಿಚಯವಿತ್ತು. ಹೀಗಾಗಿ ಅನುವಾದಿಸುವಾಗ ಭಾಷಾ ಸಂವಹನಕ್ಕೆ ಅನುಕೂಲವಾಯಿತು.
#
ನಾನು ಅಪ್ಪಟ ಕನ್ನಡತಿ. ವಿವಾಹದ ನಂತರವೇ ಪತಿ ಮಕರಂದ ವಾಂಗೀಕರರಿಂದ ನಾನು ಮರಾಠಿ ಕಲಿತಿದ್ದು. ಸ್ವಾರಸ್ಯದ ಸಂಗತಿಯೆಂದರೆ ಪುಣೆಯಲ್ಲಿ ನೆಲೆಸಿದ ಕೂಡಲೇ ನಾನು ಮೊದಲು ಕಲಿತಿದ್ದು ಮರಾಠಿ ಸಂಖ್ಯೆಗಳನ್ನು. ಯಾಕೆಂದರೆ ಇಲ್ಲಿಯ ಬಸ್ಸುಗಳ ಮೇಲೆಲ್ಲ ಮರಾಠಿ ಅಂಕೆಗಳನ್ನೇ ಬರೆಯುತ್ತಾರೆ. ನಂತರ ಅನುವಾದ ಕಾರ್ಯಕ್ಕೆ ಸುಲಭವಾಗುವಂತೆ ವ್ಯಾಕರಣವನ್ನೂ ಅಭ್ಯಸಿಸಿದೆ. ಸಂಸ್ಕತ ಭಾಷೆಯ ಅರಿವಿನಿಂದಲೇ ಮರಾಠಿಯನ್ನು ನಾನು ಬೇಗ ಕಲಿಯಲು ಸಾಧ್ಯವಾಯಿತು. ಪುಣೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆಯುವ ಹೊತ್ತಿಗೆ ಈ ಭಾಷೆ ನನಗೆ ಕರಗತವಾಗಿತ್ತು. ಇಲ್ಲಿನ ಪ್ರಕಾಶಕರು ಕೂಡ ಯಾವುದೇ ಬೇಧವಿಲ್ಲದೇ ನನ್ನ ಅನುವಾದಿತ ಕೃತಿಗಳನ್ನು ಕೇಳಿ ಪಡೆದು ಪ್ರಕಾಶಿಸುತ್ತಿರುವುದು ಹೆಮ್ಮೆಯ ವಿಷಯ ನನಗೆ.
#
‘ಮೂಕಜ್ಜಿಯ ಕನಸು’ ನನ್ನ ಮೊಟ್ಟ ಮೊದಲ ಅನುವಾದದ ಬೃಹತ್ ಕೃತಿಯಾದರೂ ಅದಕ್ಕಿಂತ ಮೊದಲು ‘ಬದುಕು ಸುಂದರ, ಆದರೆ..’ ಎಂಬ ತಕಳಿ ಶಿವಶಂಕರ ಪಿಳ್ಳೆಯವರ ಸಣ್ಣ ಕತೆಯೊಂದನ್ನು ಮರಾಠಿಗೆ ತಂದಿದ್ದೆ. ನಂತರ ಮಾಸ್ತಿ, ಬಲ್ಲಾಳ, ಚಿತ್ತಾಲ, ಖಾಸನೀಸ್, ಅನುಪಮಾ ನಿರಂಜನ, ಶಾಂತಾದೇವಿ ಕಣವಿ, ರೇಖಾ ಕಾಖಂಡಕಿ, ಶಾಂತಾರಾಮ ಸೋಮಯಾಜಿ, ಜಯಂತ ಕಾಯ್ಕಿಣಿ, ನೇಮಿಚಂದ್ರ, ಮಾಧವ ಕುಲಕರ್ಣಿ, ನಳಿನಾ ಶ್ರೀರಾಘವನ್, ವಸುಧೇಂದ್ರ ಮುಂತಾದವರ ಸಣ್ಣಕತೆಗಳನ್ನೂ, ಭುವನೇಶ್ವರಿ ಹೆಗಡೆಯವರ ಹಾಸ್ಯ ಬರಹವನ್ನೂ ಅನುವಾದಿಸಿದ್ದೇನೆ. ಸದ್ಯ ‘ಶ್ರೀಧರ ವಚನಾಮೃತ’ ಕೃತಿ ಮರಾಠಿಗೆ ಬರಲು ಸಜ್ಜಾಗಿದೆ.





ಮೀನಾಕ್ಷಿ ವಾಂಗೀಕರ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿಲ್ಲ. ಆದರೆ ಸಾಕಷ್ಟು ಬಾರಿ ಫೋನಿನಲ್ಲ ಮಾತನಾಡಿದ್ದೇವೆ. ಕನ್ನಡದ ಬಗ್ಗೆ ಅವರಿಗೆ ಸಾಕಷ್ಟು ಉತ್ಸಾಹವಿತ್ತು. ನನ್ನ ಪುಸ್ತಕಗಳನ್ನು ತರಿಸಿಕೊಂಡು ಓದಿ, ಬಹಳ ಪ್ರೀತಿಯಿಂದ ಅವುಗಳ ಬಗ್ಗೆ ಮಾತನಾಡಿದ್ದರು. ಈಗ ಅವರ ನಿಧನದ ವಾರ್ತೆ ಮನಸ್ಸಿಗೆ ದುಃಖವನ್ನು ಕೊಟ್ಟಿದೆ. ಮೊಬೈಲ್ ಕಾಂಟಾಕ್ಟ್ ಲಿಸ್ಟ್ ನಿಂದ ಆತ್ಮೀಯರ ಹೆಸರನ್ನು ಡಿಲೀಟ್ ಮಾಡುವುದು ಬಹಳ ಸಂಕಟದ ಸಂಗತಿ.