ಈ ಕುರಿತು ಅವರಿಗೂ ಕೊರಗಿತ್ತು..

ಸುತ್ತಲೂ ಕತ್ತಲು ಎತ್ತಲೂ ಕವಿದಿದೆ…

n s sreedhara murthy

ಎನ್.ಎಸ್.ಶ್ರೀಧರ ಮೂರ್ತಿ

ಕಳೆದ ಕೆಲವು ದಿನಗಳಿಂದ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಸೂತಕದ ಛಾಯೆ ಆವರಿಸಿದೆ.. ಒಂದರ ಹಿಂದೆ ಇನ್ನೊಂದರಂತೆ ಬರುತ್ತಿರುವ ಸಾವಿನ ಸುದ್ದಿಗಳು ಅಘಾತಕಾರಿಯಾಗಿವೆ. ಕೆ.ಎಸ್.ಎಲ್.ಸ್ವಾಮಿ(ರವೀ), ಡಾ.ಸೂರ್ಯನಾಥ ಕಾಮತ್, ಗಜಾನನ ಮಹಾಲೆ, ಆರೂರು ಲಕ್ಷ್ಮಣ ಶೇಟ್ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಅಸಾಧಾರಣ ಕೊಡುಗೆಗಳನ್ನು ನೀಡಿದವರೇ!

ksl swamyಕೆ.ಎಸ್.ಎಲ್.ಸ್ವಾಮಿ(ರವೀ)ಯವರನ್ನು ನಾನು ಮೊದಲು ನೋಡಿದ್ದು ಮಲಯ ಮಾರುತ ಚಿತ್ರದ ಚಿತ್ರೀಕರಣದಲ್ಲಿ ಆಗ ನಾನು ಶೃಂಗೇರಿಯಲ್ಲಿ ವಿದ್ಯಾರ್ಥಿಯಾಗಿದ್ದೆ. ಚಿತ್ರೀಕರಣದಲ್ಲಿನ ಅವರ ಕೋಪ ತಾಪಗಳು ನಮಗೆ ಭಯ ಮತ್ತು ಗೌರವದ ಭಾವನೆಯನ್ನು ಮೂಡಿಸಿದ್ದವು. ಇಂತಹ ಕಾರಣದಿಂದಲೇ ನಾನು ಬೆಂಗಳೂರಿಗೆ ಬಂದ ಬಹಳ ದಿನ ಅವರನ್ನು ಮಾತನಾಡಿಸಲೂ ಹೆದರುತ್ತಿದ್ದೆ. ಚಿತ್ರಗೀತೆಗಳ ಕುರಿತ ಕಾರ್ಯಕ್ರಮವೊಂದರ ಮೂಲಕ ಅವರೊಡನೆ ಒಡನಾಡಲೇ ಬೇಕಾದ ಅನಿವಾರ್ಯತೆ ಬಂದಿತು. ಅಲ್ಲಿಂದ ಮುಂದೆ ಅವರು ನನಗೆ ಬಹುಬೇಗ ಆತ್ಮೀಯರಾಗಿ ಬಿಟ್ಟರು. ಪದೇ ಪದೇ ಭೇಟಿ, ಗಂಟೆಗಟ್ಟಲೆ ಮಾತು ನನ್ನ ಭಾಗ್ಯವೆನ್ನುವಂತೆ ದೊರಕಿತು. ಆಗೆಲ್ಲಾ ಅವರು ಇತಿಹಾಸದ ಪುಟಗಳನ್ನೇ ಬಿಚ್ಚಿಡುತ್ತಿದ್ದರು.

ಹಾಗೆ ನೋಡಿದರೆ ನನ್ನನ್ನು ಚಲನಚಿತ್ರ ಇತಿಹಾಸದ ಕುರಿತು ಬರೆಯುವಂತೆ ಮಾಡಿದವರೇ ಅವರು. ಏನು ಮಾಹಿತಿ ಬೇಕಿದ್ದರೂ ಅವರಿಗೆ ದೂರವಾಣಿ ಮಾಡುತ್ತಿದ್ದೆ ಅವರು ಸುಂದರವಾದ ಕಥೆಯೊಂದಿಗೆ ಮಾಹಿತಿ ನೀಡುತ್ತಿದ್ದರು. ವಿವಿಧ ಭಾರತಿಗಾಗಿ ಸುವರ್ಣ ಚಿತ್ರ ಭಾರತಿ ಎನ್ನುವ ಮಾಲಿಕೆಯನ್ನು ರೂಪಿಸುವಾಗ ರವೀಯವರನ್ನು ಸಂದರ್ಶಿಸಿದ್ದೆ.  ಅವರು ಚಿತ್ರರಂಗ ಪ್ರವೇಶಿಸಿದಾಗಿನಿಂದ ಹಿಡಿದು ಹಲವು ಅನುಭವಗಳನ್ನು ಅಲ್ಲಿ ಸುದೀರ್ಘವಾಗಿ ಹಂಚಿಕೊಂಡಿದ್ದರು. ನನಗೆ ಆಗಲೇ ಅವರ ಜೀವನ ಚರಿತ್ರೆ ಬರೆಯ ಬೇಕು ಎನ್ನುವ ಕನಸು ಹುಟ್ಟಿದ್ದು. ಕಳೆದ ಹತ್ತು ವರ್ಷಗಳಲ್ಲಿ ಅವರನ್ನು ಅದಕ್ಕಾಗಿ ಇನ್ನಿಲ್ಲದಂತೆ ಕಾಡಿದ್ದೇನೆ. ಖಂಡಿತ ಇದು ಆಗ ಬೇಕಾದ ಕೆಲಸ ಎಂದೇನೋ ಅವರು ಹೇಳುತ್ತಿದ್ದರು. ಆದರೆ ಹಲವಾರು ಕಾರಣಗಳಿಂದ ಅದು ಮುಂದಕ್ಕೆ ಹೋಗಿ ಕೊನೆಗೆ ಕೈಗೂಡಲೇ ಇಲ್ಲ. ಬಹುಷ: ಅದು ನನ್ನನ್ನು ಜೀವನ ಪೂತರ್ಿ ಕಾಡುವ ಕೊರಗು.

ಮೇಲ್ನೋಟಕ್ಕೆ ಕೋಪಿಷ್ಠರಂತೆ ಕಾಣುತ್ತಿದ್ದ ಸ್ವಾಮಿಯವರು ಅಂತರಂಗದಲ್ಲಿ ಅಪಾರ ವಿನಯವಂತರಾಗಿದ್ದರು. ಜಿ.ಕೆ.ವೆಂಕಟೇಶ್ ಅವರ ಕುರಿತು ಕೃತಿಯೊಂದು ರೂಪುಗೊಂಡಾಗ ಅದಕ್ಕೆ ಕೆ.ಎಸ್.ಎಲ್.ಸ್ವಾಮಿಯವರೇ ಮನ್ನುಡಿಯನ್ನು ಬರೆಯಬೇಕು ಎಂದು ನಾವು ನಿರ್ಧರಿಸಿ ಕೇಳಿದಾಗ ವೆಂಕಟೇಶ್ ಸಂಗೀತ ನಿರ್ದೇಶಕ ಅವನು ಕುರಿತು ಸಂಗೀತ ಬಲ್ಲವರು ಬರೆದರೆ ಚೆನ್ನಾಗಿರುತ್ತದೆ, ನನಗೆ ಆ ಯೋಗ್ಯತೆ ಇಲ್ಲ ಎಂದು ಬಿಟ್ಟಿದ್ದರು. ಸಾರ್ ನೀವು ಬರೆಯದಿದ್ದರೆ ಇನ್ಯಾರು ಅದನ್ನು ಬರೆಯಲಾರರು ಎಂದು ಬಹಳ ಒತ್ತಾಯಿಸಿದ ಮೇಲೆ ಒಪ್ಪಿಕೊಂಡರು.

ksl swamy1ಅದರಲ್ಲಿ ಜಿ.ಕೆ.ವೆಂಕಟೇಶ್ ಅವರ ಸ್ವರ ಸಾರ್ವಭೌಮತೆಯ ಬಗ್ಗೆ ಅನೇಕ ಅಪರೂಪದ ಮಾಹಿತಿಗಳನ್ನು ನೀಡಿದ್ದಾರೆ. ಸ್ವಾಮಿಯವರು ಸಹಾಯಕ ನಿದರ್ೇಶಕರಾಗಿದ್ದ ಬಂಗಾರಿಚಿತ್ರದಲ್ಲಿ ಸಾವಿನ ಕುರಿತ ಗೀತೆಗೆ ಜೀವ ಸ್ವರ ಪಂಚಮವನ್ನು ಬಿಟ್ಟು ಸಂಯೋಜಿಸಿದ ಯಾರೇನ ಮಾಡಿದರೋ ಗೀತೆಯ ಮಾಹಿತಿ ಅವುಗಳಲ್ಲಿ ಮುಖ್ಯವಾದದ್ದು. ಜಿ.ಕೆ.ವಿಯವರ ರಾಗಗಳ ಕುರಿತ ಪ್ರಯೋಗಗಳ ಬಗ್ಗೆ ಕೂಡ ಸ್ವಾಮಿ ಮಾತನಾಡಿದ್ದರು. ಪೀಲ್ ವೆಂಕಟೇಶ್ಗೆ ಬಹಳ ಪ್ರಿಯವಾದ ರಾಗ. ಇದರಲ್ಲಿ ಆತ ನನ್ನ ಚಿತ್ರದಲ್ಲಿ ಒಂದು ಗೀತೆ ಸಂಯೋಜಿಸಲಿ ಎನ್ನುವ ಆಸೆ ಇತ್ತು ಕೊನೆಗೆ ಭೂಮಿಗೆ ಬಂದ ಭಗವಂತಚಿತ್ರದಲ್ಲಿ ಭೂಮಿಗೆ ಬಂದ ದೇವಕಿ ಕಂದ ಎನ್ನುವ ಗೀತೆಯನ್ನು ಆ ರಾಗದಲ್ಲಿ ಆತನಿಂದ ಪಡೆದೆ ಎಂದು ಸ್ವಾಮಿ ನೆನಪು ಮಾಡಿಕೊಂಡಿದ್ದರು.

ಚಿತ್ರ ನಿರ್ದೇಶಕರಾಗಿ ಕೆ.ಎಸ್.ಎಲ್.ಸ್ವಾಮಿ ಪ್ರಸಿದ್ಧರು, ಕಿರುತೆರೆಯ ಮೂಲಕ ಕಲಾವಿದರಾಗಿ ಜನಪ್ರಿಯರಾದರು. ಆದರೆ ಬೆಳಕಿಗೆ ಬಾರದ ಅವರ ಪ್ರತಿಭೆಯ ಮುಖಗಳು ಇನ್ನೂ ಹಲವಿದ್ದವು. ಅವರು ಕನ್ನಡ, ಸಂಸ್ಕೃತ ಸಾಹಿತ್ಯವನ್ನು ಆಳವಾಗಿ ಓದಿಕೊಂಡಿದ್ದರು. ಪದ ಪ್ರಯೋಗದಲ್ಲಿಯೂ ಹೊಸತನ ತರುತ್ತಿದ್ದರು. ಶರಶ್ಚಂದ್ರ ಚಟರ್ಜಿಯವರ ‘ಚಂದ್ರನಾಥ ಕಥೆಯಲ್ಲಿ ಬರುವ ಎತ್ತಿನ ಗಾಡಿಯ ಹಿಂದೆ ಕಟ್ಟಿದ ಲಾಟೀನಿನ ರೂಪಕವನ್ನು ತೂಗುದೀಪ ಎಂದು ಕರೆದು ತಮ್ಮ ಚಿತ್ರದ ಶೀರ್ಷಿಕೆಯಾಗಿಸಿದ್ದರು. ಅವರ ಮನೆಯ ಹೆಸರು ಇಂಗಡಲು ಅಚ್ಚಕನ್ನಡದ ಈ ಪದ ಸೂಚಿಸಿದ್ದು ವಿಷ್ಣುವಿನ ವಾಸಸ್ಥಳವಾದ ಹಾಲಿನ ಕಡಲನ್ನು. ಇದರಲ್ಲಿನ ಅಧ್ಯಾತ್ಮಿಕ ರೂಪಕವನ್ನು ಅವರು ಸೊಗಸಾಗಿ ವಿವರಿಸುತ್ತಿದ್ದರು.

ಕೆ.ಎಸ್.ಎಲ್.ಸ್ವಾಮಿ ಅಧ್ಯಾತ್ಮ ಕ್ಷೇತ್ರದಲ್ಲಿ ಸಾಕಷ್ಟು ಚಿಂತನೆ ನಡೆಸಿದ್ದರು. ಶ್ರೀಕೃಷ್ಣನ ಪರಿಕಲ್ಪನೆಯ ಬಗ್ಗೆ ಒಮ್ಮೆ ಅವರ ಜೊತೆ ಮಾತನಾಡುವ ಅವಕಾಶ ದೊರಕಿತ್ತು. ಆಗ ಅವರು ನೀಡಿದ ಚಿಂತನೆ ಅಪಾರ ಓದಿಗೆ ಸಾಕ್ಷಿ ಎನ್ನಿಸುವಂತಿತ್ತು. ಕೊನೆಯ ದಿನಗಳಲ್ಲಿ ಅವರು ಹೆಚ್ಚಾಗಿ ಚಿಂತಿಸುತ್ತಿದ್ದದ್ದು ಶಂಕರಾಚಾರ್ಯರ ಕುರಿತು. ಅನುಭಾವದ ವಿವಿಧ ನೆಲೆಗಳನ್ನು ಶಂಕರ ಚಿಂತನೆಯಲ್ಲಿ ಅವರು ಹುಡುಕಿಕೊಂಡ ರೀತಿ ಬೆರಗು ಮೂಡಿಸುವಂತಿತ್ತು.

ನಾನು ಅವರನ್ನು ಕೊನೆಯ ಸಲ ಭೇಟಿಯಾಗಿದ್ದು ಸುಚಿತ್ರ ಫಿಲಂ ಸೊಸೈಟಿಯವರು ಅಯೋಜಿಸಿದ್ದ ನರಸಿಂಹ ರಾಜು ಅವರ ಸ್ಮರಣಾ ಕಾರ್ಯಕ್ರಮದಲ್ಲಿ ಅವತ್ತು ಅವರು ಶಂಕರ ಚಿಂತನೆಗಳನ್ನು ಸಾಕಷ್ಟು ವಿವರಿಸಿದ್ದರು. ಅಥವಾ ಅದೇ ಗುಂಗಿನಲ್ಲಿದ್ದರು. ಕಾರ್ಯಕ್ರಮ ಮುಗಿದ ನಂತರ ಕೂಡ ಸರಿ ಸುಮಾರು ಒಂದು ಗಂಟೆಗಳ ಕಾಲ ಅವರ ಜೊತೆ ಕಳೆಯುವ ಅವಕಾಶ ಸಿಕ್ಕಿತು. ಆಗ ಮಾತು ಮಲಯ ಮಾರುತ ಚಿತ್ರದ ಕುರಿತು ಅದರಲ್ಲಿನ ಸಂಗೀತದ ಪ್ರಯೋಗಗಳ ಕುರಿತು ಬಂದಿತು. ಈ ಚಿತ್ರಕ್ಕೆ ಪ್ರೇರಣೆಯಾಗಿದ್ದು ಚೆಂಬೈ ವೈದ್ಯನಾಥ ಭಾಗವತರ್ ಅವರ ಕುರಿತ ಕಥೆ ಎನ್ನುವ ಮಾತನ್ನೂ ಅವರು ಹೇಳಿದ್ದರು. ನೇಪಾಳದಲ್ಲಿ ಚಿತ್ರೀಕರಣ ನಡೆಸಿದ ಅನುಭವಗಳ ಕುರಿತು ಮಾತು ಬಂದಾಗ ಇತ್ತೀಚೆಗೆ ಚಿತ್ರವೊಂದರಲ್ಲಿ ಪಾತ್ರಧಾರಿಯಾಗಿ ನೇಪಾಳಕ್ಕೆ ಹೋಗಿದ್ದೆ ಎಲ್ಲಾ ಬದಲಾಗಿದೆ. ಆಧುನಿಕತೆಯ ವಿರೂಪ ಅಲ್ಲಿಗೂ ಕಾಲಿಟ್ಟಿದೆ ಎಂದಿದ್ದರು.

ಕೆ.ಎಸ್.ಎಲ್.ಸ್ವಾಮಿಯವರು ನಿರ್ದೇಶಿಸಿದ ಚಿತ್ರಗಳಲ್ಲಿ ಇವರು ವಸ್ತು ವೈವಿಧ್ಯ ಗಮನ ಸೆಳೆಯುವಂತಿದೆ. ಲಗ್ನಪತ್ರಿಕೆ, ಭಲೇ ಅದೃಷ್ಟವೋ ಅದೃಷ್ಟದಂತಹ ಕಾಮಿಡಿ ಚಿತ್ರಗಳಂತೆ ಕಳ್ಳ ಏಜೆಂಟ್ 000, ಸಿಐಡಿ 72ದಂತಹ ಮಾರಮಾರಿ ಥ್ರಿಲ್ಲರ್ ಗಳೂ ಇವೆ. ಗಾಂಧಿನಗರ, ಅಣ್ಣತಮ್ಮ, ದೇವರು ಕೊಟ್ಟ ತಂಗಿ, ತುಳಸಿ, ಮತ್ತೆ ವಸಂತದಂತಹ ಮೆಲೋಡ್ರಾಮಗಳಿವೆ. ಜಾತಿ ಪದ್ದತಿ ಕುರಿತ ಭಾಗ್ಯಜ್ಯೋತಿ ಇದ್ದಂತೆ ಸಂಗೀತಮಯ ಚಿತ್ರ ಮಲಯ ಮಾರುತ ಇದೆ. ಪ್ರಯೋಗಶೀಲ ಚಿತ್ರ ಆರು ಮೂರು ಒಂಭತ್ತುದಂತೆ ಮಕ್ಕಳ ಚಿತ್ರ ಜಂಬೂ ಸವಾರಿ ಇದೆ.

kslswami2ನನಗೆ ಮಹತ್ವದ್ದು ಎನ್ನಿಸುವುದು ಸ್ವಾಮಿಯವರು ಚಲನಚಿತ್ರ ಮಾಧ್ಯಮದ ಮೂಲಕ ಅಧ್ಯಾತ್ಮವನ್ನು ಹಿಡಿಯಲು ಮಾಡಿದ ಪ್ರಯತ್ನಗಳು. ಶ್ರೀಕೃಷ್ಣ ರುಕ್ಮಣಿ ಸತ್ಯಭಾಮ ಚಿತ್ರದಲ್ಲಿ ಪೌರಾಣಿಕ ಕಥೆಯ ಮೂಲಕವೇ ಈ ಎಳೆಗಳನ್ನು ಅವರು ಹಿಡಿದಿದ್ದರು. ದೇವರ ದುಡ್ಡು, ಭೂಮಿಗೆ ಬಂದ ಭಗವಂತ ಚಿತ್ರಗಳಲ್ಲಿ ಸಾಮಾಜಿಕ ನೆಲೆಯಲ್ಲಿ ಹಿಡಿದಿದ್ದರು. ಕ್ರಾಂತಿಯೋಗಿ ಬಸವಣ್ಣದಲ್ಲಿ ಚಾರಿತ್ರಿಕ ನೆಲೆಯಲ್ಲಿ ಹಿಡಿದಿದ್ದರು.

ಬನಶಂಕರಿಯಂತಹ ಚಿತ್ರದಲ್ಲಿ ಪರಿಕಲ್ಪನೆಯ ನೆಲೆಯಲ್ಲಿ ಹಿಡಿದಿದ್ದರು. ಅವರ ಎಲ್ಲಾ ಚಿತ್ರಗಳಲ್ಲಿಯೂ ಇಂತಹ ಪ್ರಯತ್ನವನ್ನು ಕಾಣ ಬಹುದು. ಅಧ್ಯಾತ್ಮದ ಒಲವಿದ್ದ ಅವರು ಸಂಪ್ರದಾಯಸ್ಥರಾಗಿರಲಿಲ್ಲ, ಆಧುನಿಕ ಚಿಂತನೆಗಳಿಗೆ ಸದಾ ತೆರೆದುಕೊಂಡಿದ್ದರು ದೇಹದಾನವನ್ನು ಮಾಡಿದ್ದೇ ಹಾಗೆ ನೋಡಿದರೆ ಇದಕ್ಕೆ ನಿದರ್ಶನ. ಅವರ ಚಿತ್ರಗಳ ಕುರಿತು ಚರ್ಚೆ ನಡೆಯಲಿಲ್ಲ. ಎಲ್ಲಿಯೂ ರೆಟ್ರಾಸ್ಪಕ್ಟಿವ್ ಅಯೋಜಿತವಾಗಲಿಲ್ಲ. ಈ ಕುರಿತು ಅವರಿಗೂ ಕೊರಗಿತ್ತು. ನಮ್ಮಲ್ಲಿ ಸಿನಿಮಾ ಕುರಿತ ಚರ್ಚೆಗಳು ಬಹುಮುಖಿ ಆಗಬೇಕಾದ ಅಗತ್ಯ ಕಾಣುವುದು ಇಂತಹ ಕಡೆ.

ಈಗ ರವೀ ಎಂದು ತಮ್ಮನ್ನು ಕರೆದುಕೊಂಡಿದ್ದ ಕೆ.ಎಸ್.ಎಲ್.ಸ್ವಾಮಿ ಮರೆಯಾಗಿದ್ದಾರೆ. ಸೂರ್ಯನಂತೇ ಪ್ರಜ್ವಲವಾಗಿ ಬೆಳಗಿ ಅಸ್ತಮಾನರಾದ ನಂತರ ಸಹಜವಾಗಿಯೇ ಕತ್ತಲು ಎತ್ತಲೂ ತುಂಬಿದೆ. ಅವರ ಚಿತ್ರವೊಂದರ ಗೀತೆಯೊಂದರಂತೆ ತಿಳಿಯಾದಯ್ಯ ದಾರಿ ತಿಳಿಯಾದಯ್ಯ ಎಂದು ನನಗನ್ನಿಸುತ್ತಿದೆ.

‍ಲೇಖಕರು admin

October 27, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. asha

    Excellent write up on director Ravi by Sridhar Sir.. Thank you so much for yet another thought provoking article.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: