ಶಶಿಕಲಾ ಅನಂತರಾಮನ್ ಮೈಸೂರಿನಲ್ಲಿ ಓದಿ ನಂತರ ಮಂಗಳೂರಿನ ಸೇಂಟ್ ಆನ್ ಶಿಕ್ಷಣ ಕಾಲೇಜು ಸೇರಿಕೊಂಡವರು. ಶಿಕ್ಷಣ ತಜ್ಞೆ . ಶಿಕ್ಷಕರನ್ನು ತಯಾರಿಸಲಿಲ್ಲ; ಬದಲಿಗೆ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಉಡಿಗೆ ಹಾಕಿಕೊಳ್ಳುವುದನ್ನು ಕಲಿಸಿಕೊಟ್ಟರು.
ಎಂದೂ ಮುಖ ಗಂಟಿಕ್ಕದ, ಮೆಲು ಆದರೆ ಖಡಕ್ ತಿಳುವಳಿಕೆ ಉಳ್ಳ, ಮುಗುಳ್ನಗೆ ಹೊತ್ತ ವ್ಯಕ್ತಿತ್ವ ಶಶಿಕಲಾ ಅವರದ್ದು. ಇದನ್ನೇ ಅವರ ಅಸಂಖ್ಯಾತ ಶಿಷ್ಯವರ್ಗ ಶಶಿ ಮಾಡೆಲ್ ಎಂದು ಗುರುತಿಸಿ ತಾವು ಪಾಠ ಮಾಡುವ ಕಡೆಯೆಲ್ಲಾ ಅಳವಡಿಸಿಕೊಂಡು ಬಂದಿದ್ದಾರೆ.
ಶಶಿಕಲಾ ಅವರಿಗೆ ೬೦ ತುಂಬಿ ಮೊನ್ನೆ ನಿವೃತ್ತರಾದರು. ಇದು ಉದ್ಯೋಗಕ್ಕೆ ಮಾತ್ರ ಹೇಳಿದ ವಿದಾಯ ಎಂದು ಕಂಡುಕೊಂಡ ಅವರ ಅಪಾರ ಬಳಗ ಮಂಗಳೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಸಂದರ್ಭಕ್ಕಾಗಿ ಗುಟ್ಟಾಗಿ ಚಂದ್ರಮಂಡಲ ಎನ್ನುವ ಕೃತಿಯನ್ನೂ ಹೊರತಂದಿತು.
ಶಶಿಕಲಾ ಹಾಗೂ ಅವರ ಕುಟುಂಬದ ಒಡನಾಟದಲ್ಲಿ ೯ ವರ್ಷ ಮಂಗಳೂರನ್ನು ತವರುಮನೆಯಾಗಿಸಿಕೊಂಡ ನಾನು ಬರೆದ ಒಂದು ಆತುರದ ಬರಹ ಇಲ್ಲಿದೆ –

ಜಿ ಎನ್ ಮೋಹನ್
ಅವತ್ತೂ ಹಾಗೇ .. ಮಂಗಳೂರಿಗೆ ಬೆಂಕಿ ಬಿದ್ದಿತ್ತು. ಮಂಗಳೂರು ಹೊತ್ತಿ ಉರಿಯಲು ಅದಕ್ಕೆ ದೊಡ್ಡ ಕಾರಣಗಳೇನೂ ಬೇಕಿಲ್ಲ. ಅದು ‘ಏನೋ ತೀಡಲು,. ಏನೋ ತಾಗಲು.. ಹೊತ್ತಿ ಉರಿಯು’ವುದಕ್ಕೇ ಕಾಯುತ್ತಿರುತ್ತದೆ. ಅವತ್ತಿನ ಕಾರಣ ಎಂ ಆರ್ ಪಿ ಎಲ್ ಪಶ್ಚಿಮಘಟ್ಟಗಳ ಮೂಲಕ ತೈಲ ಕೊಳವೆಗಳು ಹಾದು ಬರುತ್ತದೆ ಎನ್ನುವುದಕ್ಕೆ. ಸುರತ್ಕಲಿನಲ್ಲಿ ಆರಂಭವಾದ ಪ್ರತಿಭಟನೆ ಇಡೀ ದಕ್ಷಿಣ ಕನ್ನಡಕ್ಕೆ ವ್ಯಾಪಿಸಿಬಿಟ್ಟಿತ್ತು. ಗೋಲಿಬಾರ್, ಸಾವು, ಕರ್ಫ್ಯೂ..
‘ಕರ್ಫ್ಯೂ’ ಎಂದರೆ ಯಾರೂ ಬೀದಿಗೆ ಕಾಲಿಡುವ ಪರಿಸ್ಥಿತಿ ಇರುವುದಿಲ್ಲ. ಆದರೆ ಸದಾ ಸುದ್ದಿಯ ಹಿಂದೆಯೇ ಬಿದ್ದಿರಬೇಕಾದ ನಮಗೆ? ‘ಚಳಿ ಇರಲಿ,. ಮಳೆ ಇರಲಿ., ಮಂಜು ಸುರಿಯುತಲಿರಲಿ..’ ಸದಾ ಬೀದಿ ಪಾಲಾಗಿಯೇ ಇರಬೇಕು.. ಸರಿ ಗುಂಡು ಉಗುಳುವ ಬಂದೂಕುಗಳಿಗೂ ಒಂದು ಮನವಿ ಕೊಟ್ಟು ಸುಮ್ಮನಾಗಿಸಬಹುದು. ಆದರೆ ಇಡೀ ಊರಿಗೆ ಊರೇ ಬಾಗಿಲು ಮುಚ್ಚಿ ಕೂತರೆ ಊಟ ಹಾಕುವರಾರು?. ಆಗ ಬಂದ ಕರೆಯೇ ಅವರದ್ದು.. ‘ಊಟಕ್ಕೆ ಏನು ಮಾಡ್ತೀರಿ ಬನ್ನಿ’..
‘ಇಷ್ಟು ಹಚ್ಚನೆ ಹಸಿರು ಗಿಡದಿಂ ಎಂತು ಮೂಡಿತು ಬೆಳ್ಳಗೆ..’ ಎಂದು ಕವಿ ಎಷ್ಟು ಆಶ್ಚರ್ಯಪಟ್ಟಿದ್ದರೋ ಅಷ್ಟೇ ಆಶ್ಟರ್ಯ ನನಗೆ ಆಗಿ ಹೋಗಿತ್ತು. ಏಕೆಂದರೆ ನಾನು ಮಂಗಳೂರಿಗೆ ಕಾಲಿಟ್ಟು ತುಂಬಾ ತಿಂಗಳೇನೂ ಆಗಿರಲಿಲ್ಲ. ಆಗ ತಾನೇ ಒಂದಿಷ್ಟು ಜನರ ಪರಿಚಯ, ಕೈಕುಲುಕುವಿಕೆ ಸಾಗಿತ್ತು. ಹಾಗಿರುವಾಗ ಎಲ್ಲೋ ಒಂದೆರಡು ಬಾರಿ ‘ನಮಸ್ಕಾರ’ ಹೇಳಿದ್ದ ಶಶಿಕಲಾ ಮೇಡಂ ನನ್ನೊಳಗಿದ್ದ ಆ ಹಸಿದ ಹೊಟ್ಟೆಯನ್ನು ಗುರುತಿಸಿದ್ದರು.
ಶಶಿಕಲಾ ಅವತ್ತು ಹೇಗೆ ನನ್ನ ಪೊರೆದಿದ್ದರೋ ಹಾಗೇಯೇ ದಶಕ ಉರುಳಿದ ಈಗಲೂ ಪೊರೆಯುತ್ತಿದ್ದಾರೆ. ಅದು ನಾನು ಮಾತ್ರ ಎಂದು ಕೊಂಡಿದ್ದರೆ ತಪ್ಪು. ಅವರು ಎಲ್ಲವನ್ನೂ ಹಾಗೇ ಪೊರೆಯುತ್ತಾರೆ. ‘ಇಳೆಯಿಂದ ಮೊಳಕೆವೊಡೆವೊಂದು ತುತ್ತೂರಿ ದನಿ ಇಲ್ಲ’ ಎನ್ನುವ ಹಾಗೆ, ಸದ್ದಿಲ್ಲದೇ. ಪೊರೆಯಲು ಒಂದು ಹೆಜ್ಜೆ ಅವರು ಮುಂದಿಡುವಾಗ ಅವರಿಗೆ ‘ನೀ ಯಾರೋ ಏನೋ ಎಂತೋ..’ ಎನ್ನುವುದು ಮುಖ್ಯವೇ ಅಗುವುದಿಲ್ಲ.
ಪ್ರತಿಯೊಬ್ಬರೂ ಅವರ ಬಳಗವೇ.. ಪ್ರತಿಯೊಬ್ಬರಿಗೂ ಅವರ ಒಂದು ತುತ್ತು ಸಿಗಲೇ ಬೇಕು. ಪ್ರತಿಯೊಬ್ಬರ ಜೋಳಿಗೆಯಲ್ಲೂ ಅವರ ಒಂದು ಸ್ನೇಹದ ಮಾತು, ಪ್ರತಿ ನೆನಪಿನಲ್ಲೂ ಅವರ ನಿಷ್ಕಲ್ಮಷ ನಗು..
ಶಶಿಕಲಾ ಎಂದರೆ ಶಶಿಕಲಾ ಮಾತ್ರವಲ್ಲ, ಜೊತೆಗೆ ಸತ್ಯನಾರಾಯಣ, ಜೊತೆಗೆ ನಿಶಾಂತ್, ಜೊತೆಗೆ ಅವರ ಬಂಧುಬಳಗ. ಹಾಗೆ ಅವರು ಆತ್ಮೀಯರ ವಲಯಕ್ಕೆ ಎಲ್ಲರನ್ನೂ ನಡೆಸಿಕೊಂಡು ಬರುತ್ತಾರೆ. ಅಥವಾ ನಮ್ಮನ್ನು ಅವರ ಲೋಕಕ್ಕೆ ಗೃಹಪ್ರವೇಶ ಮಾಡಿಸಿ ಬಿಡುತ್ತಾರೆ.
ಮಂಗಳೂರು ಎಂದರೆ ಒಂದು ಕಾಲಕ್ಕೆ ಬಾವುಟ್ಟಗುಡ್ಡೆ, ಪಣಂಬೂರು ಬೀಚ್, ಸೋಮೇಶ್ವರ ದೇವಸ್ಥಾನ, ಕದ್ರಿಯ ಗುಡ್ಡ, ಹಡಗು ತಾಣ ಎಂದು ಗುರುತಿಸುತ್ತಿದ್ದರು. ಆನಂತರ ಕಾಲ ಬದಲಾಗಿ ಮಂಗಳೂರು ಎಂದರೆ ಪಬ್ಬಾಸ್, ಮಾಲ್ ಗಳ ಗೊಂಚಲು, ಗೋಲ್ಡ್ ಫಿಂಚ್ ಹೋಟೆಲ್, ಎ ಜೆ ಶೆಟ್ಟಿ ಹಾಸ್ಪಿಟಲ್, ಲ್ಯಾಂಡ್ ಲಿಂಕ್ಸ್ ಎನ್ನುವಂತಾಗಿದೆ.
ಆದರೆ ನನಗೆ ಮಂಗಳೂರು ಎಂದರೆ ಅದೂ ಅಲ್ಲ, ಇದೂ ಅಲ್ಲ, ನನಗೆ ಮಂಗಳೂರು ಎಂದರೆ ವಿವೇಕ ರೈಗಳ ‘ಸುಯಿಲ್’, ನಾ ದಾ ಎಂದೇ ಎಲ್ಲರ ಮನ ಹೊಕ್ಕಿರುವ ನಾ ದಾಮೋದರ ಶೆಟ್ಟರ ಪ್ರಸಾಧನ , ಕಜೆಯ ಮನೆಯ ಕಜಿಪು, ಅತ್ರಿ ಬುಕ್ ಸೆಂಟರ್, ಕಲ್ಲೂರ್ ನಾಗೇಶ್ ‘ಆಕೃತಿ ಪ್ರಿಂಟರ್ಸ್’, ಸಬಿಹಾ- ಭೂಮಿಗೌಡರ ಕೊಣಾಜೆ, ವಾಮನ ನಂದಾವರರ ‘ದೃಶ್ಯ’, ನರಸಿಂಹಮೂರ್ತಿಯವರ ಕುಟುಂಬ, ನಾಗರಾಜ ಜವಳಿಯವರ ಸಿಗರೇಟು, ಅಮೃತ ಸೋಮೇಶ್ವರರ ಸೋಮೇಶ್ವರ, ದಾಸಜನ, ನಮ್ಮ ಕೊಲಾಜ್, ಬೃಂದಾವನ ಅಪಾರ್ಟ್ ಮೆಂಟ್ಸ್, ಆ ಮಕ್ಕಳ ಕೇಕೆ, ರಸ್ತೆ ಬದಿಯ ಎಗ್ ಬುರ್ಜಿಯ ಘಮ, ‘ಸುರಭಿ’ಯ ಅಮಲು.. ಹಾಗೆಯೇ ಶಶಿ ಮೇಡಂ ಹಾಗೂ ಅವರ ಮನೆ ‘ಆಲಂಪಿ’ನ ಇಂಪು..
ಕರ್ಣನಿಗೆ ಕವಚ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮನ್ನು ಕವಚದಂತೆ ಕಾಪಾಡಿಬಿಡುವವರಂತೂ ಇದ್ದಾರೆ, ಶಶಿ ಮೇಡಂ ಅಂತಹವರಲ್ಲೊಬ್ಬರು. ಅವರ ಭೇಟಿಯ ನಂತರ ಇಲ್ಲಿಯವರೆಗೂ ಗುಪ್ತಗಾಮಿನಿ ಶಾಲ್ಮಲಾದಂತೆ ನಮ್ಮೆಲ್ಲರನ್ನೂ ಆ ಒಂದು ಕಾಯುವ ನೆರಳು ನಮ್ಮ ಜೊತೆ ಕಾಣದೇ ಸಾಗಿ ಬರುತ್ತದೆ ಎನ್ನುವುದಂತೂ ಗೊತ್ತಿದೆ.

ಸತ್ಯನಾರಾಯಣ ಎಂ ಆಗಿದ್ದವರನ್ನು ‘ಪ್ರಜಾವಾಣಿ’ಯಲ್ಲಿ ಪದೇ ಪದೇ ಸತ್ಯನಾರಾಯಣ ‘ಮಲ್ಲಿಪಟ್ಟಣ’ ಎಂದೇ ಬರೆದು ಹೊಸ ನಾಮಕರಣ ಮಾಡಿದೆ. ನನ್ನನ್ನು ‘ಷೇರ್’ ಎಂದು ಕರೆಯುತ್ತಿದ್ದ ಮಗ ನಿಶಾಂತ್ ನನಗೆ ‘ಷೇರ್ ಕಾ ಬಚ್ಚೇ ಷೇರ್’ ಆಗಿಬಿಟ್ಟಿದ್ದ. ಅವರಿದ್ದ ಎಮ್ಮೆಕೇರಿ, ಪಂಜಿಮೊಗರು, ಮಂಕಿ ಸ್ಟಾಂಡ್ ನಮ್ಮವೂ ಅಗಿ ಹೋದವು. ಎಮ್ಮೆ, ಹಂದಿ, ಕೋಣ ಎನ್ನುವ ತಾಣಗಳನ್ನೇ ಆರಿಸಿಕೊಂಡು ಹೋಗುತ್ತಿದ್ದ ಶಶಿ ಬಳಗವನ್ನು ನೋಡಿ ಅವರ ಜೊತೆ ನಮ್ಮೆಂತಹವರೇ ಇರುವಾಗ ಅವರು ಅಂತಹ ಸಾಕುತಾಣಗಳನ್ನಲ್ಲದೇ ಇನ್ನೆಂತಹ ಸ್ಥಳಕ್ಕೆ ಹೋಗಲು ಸಾಧ್ಯ ಎಂದು ಮಾತಾಡಿಕೊಂಡಿದ್ದು ಅವರಿಗೆ ಕೊಟ್ಟ ಸರ್ಟಿಫಿಕೇಟ್.
ಶಶಿ ಎಂತಹ ಶಿಕ್ಷಣತಜ್ಞೆ ಎನ್ನುವುದು ನಮಗೆ ಅರಿವಾಗುತ್ತಿದ್ದುದು ಅವರ ವಿದ್ಯಾರ್ಥಿಗಳಿಂದ, ಬೇರೆ ವಿಶ್ವವಿದ್ಯಾಲಯಗಳು ನಾವು ಮಂಗಳೂರಿನವರು ಎಂದ ತಕ್ಷಣ ಕೇಳುತ್ತಿದ್ದ ‘ಇವರು ಗೊತ್ತಾ’ ಎನ್ನುವ ಕೆಲವು ಹೆಸರುಗಳಲ್ಲಿ ಶಶಿಕಲಾ ಅವರ ಹೆಸರೂ ಇರುತ್ತಿದ್ದುದರಿಂದ. ಆದರೆ ಶಶಿ ಮೇಡಂ ನನಗೆ ಅಂತಹ ಕಾಲೇಜಿನಲ್ಲೂ ಹೊಸದನ್ನು ಬಿತ್ತಿ ಬೆಳೆಯಲು ಪ್ರಯತ್ನಿಸುತ್ತಿದ್ದರಲ್ಲಾ ಅದು ಮನದೊಳಗೆ ಅಚ್ಚಳಿಯದೇ ಉಳಿದಿದೆ.
ಅವರ ಕಾಲೇಜಿಗೆ ಪಟ್ಟು ಹಿಡಿದು ನಾಟಕ ಮಾಡಿಸಿದಾಗ, ಮುಂಬೈನಿಂದ ತೀಸ್ತಾ ಸೆಟಲ್ವಾದ್ ಅವರನ್ನು ಕರೆಸಿ ಮಾತಾಡಿಸುವಾಗ, ಕಲ್ಪನಾಶರ್ಮ, ಅಮ್ಮು ಜೋಸೆಫ್ ರಂತಹವರ ಆಲೋಚನಾ ಕ್ರಮಗಳು ಮಂಗಳೂರಿಗೆ ಧಕ್ಕಿದ್ದು ಇವರಿಂದ.
ಅವರ ತಾಳ್ಮೆ, ಅವರ ಹಸನ್ಮುಖವನ್ನು ಅವರು ಸದಾ ಜತನದಿಂದ ಕಾಪಾಡಿಕೊಂಡು ಬರಲು ಹೇಗೆ ಸಾಧ್ಯವಾಯಿತು. ಅದೂ ಆ ತಾಳ್ಮೆ, ಹಸನ್ಮುಖವನ್ನು ಹಾಳುಗೆಡವಲು ಅವರ ಮನೆಯಲ್ಲೇ ಎರಡು ಕಪಿಗಳಿದ್ದಾಗ..?
ಗುಟ್ಟಾಗಿ ಸತ್ಯನಾರಾಯಣ ಮಲ್ಲಿಪಟ್ಟಣರಿಗೆ ಆತ್ಮೀಯರ ಹಾರೈಕೆಯ ಕಾರ್ಯಕ್ರಮ ರೂಪಿಸಿದಾಗ, ಬ್ಲೇಸಿ ಡಿಸೋಜಾ ಮನೆಯ ಪಕ್ಕದ ಹೋಟಲಿಗೆ ಹೋದಾಗ ತನ್ನ ಮಗನಿಗೆ ಅಲ್ಲಿರುವ ರುಮಾಲಿ ರೋಟಿ ತಪ್ಪದೇ ಕಟ್ಟಿಸಿಕೊಳ್ಳುತ್ತಿದ್ದಾಗ, ರಾತ್ರಿ ನೂರೆಂಟು ಒತ್ತಡ ಕಳೆದು ಇನ್ನೇನು ನಿಸೂರಾಗಬೇಕು ಎನ್ನುವಾಗ ಬಾಗಿಲು ತಟ್ಟುವ ಗಳೆಯರ ಹಿಂಡು, ನೆಂಟರ ದಂಡನ್ನು ಸುಧಾರಿಸುವಾಗ, ಮಕ್ಕಳೇ ಎಂದು ಪ್ರತಿಯೊಬ್ಬರನ್ನೂ ಜೋಪಾನ ಮಾಡುವ ದನಿ ಕೇಳಿದಾಗ ಶಶಿ ಮೇಡಂ ನಮಗೆ ಗೊತ್ತು ಎನ್ನುವ ಅಹಂ ಮೂಡುತ್ತದೆ.
ಬಾಳಿಗೊಂದು ನಂಬಿಕೆ ಇರಬೇಕು ಎನ್ನುತ್ತಾರೆ. ನಂಬಿಕೆ ಇಡಬೇಕು ಎನ್ನುವಂತೆ ಬಾಳಿ ತೋರಿಸಿದವರು ಕಡಿಮೆ. ಶಶಿ ಹಾಗೂ ಆ ಆಲಂಪಿನ ಎಲ್ಲರೂ ಅದನ್ನು ಮಾಡಿದ್ದಾರೆ.
ಸುನಂದಾ ಬೆಳಗಾಂವಕರ ‘ಕಜ್ಜಾಯ’ ಎನ್ನುವ ನೆನಪು ಲಹರಿಗಳ ಪುಸ್ತಕದಲ್ಲಿ ಬರೆಯುತ್ತಾರೆ ‘ಅಮ್ಮಾ ಬಡಿಸುವ ಅಡಿಗೆಯಲ್ಲಿ ಅಮ್ಮ ಎನ್ನುವುದೇ ರುಚಿ’ ಅಂತ. ಇದಕ್ಕೆ ನಿಜವಾಗಲೂ ಈಗಲೂ ಪ್ರಮಾಣ ಬೇಕು ಎನ್ನುವುದಾದರೆ ನೀವು ಶಶಿ ಮೇಡಂ ಅವರನ್ನು ಭೇಟಿ ಮಾಡಬೇಕು. ಊಟ ಮಾತ್ರವಲ್ಲ ಅವರ ಮಾತು, ಕಳಕಳಿ, ಹಾರೈಕೆ ಎಲ್ಲದರ ಬಗ್ಗೆಯೂ ನಾನು ಖಚಿತವಾಗಿ ಹೇಳಬಲ್ಲೆ.
ಆವತ್ತು ಹಾಗೇ ಒಂದು ದಿನ. ನಾನು ನನ್ನ ಗೆಳೆಯರ ದೊಡ್ಡ ಗ್ಯಾಂಗ್ ರೈಲೇರಿ ಕುಳಿತಿತ್ತು. ದೊಡ್ಡದಾಗಿ ಸಿಳ್ಳೆ ಕೇಳಿಸಿತು. ಚುಕು ಬುಕು ಸದ್ದು ಆರಂಭವಾಗಿಯೇ ಬಿಟ್ಟಿತು. ಆಗ ಶಶಿ ತಮ್ಮ ದಂಡಿನೊಡನೆ ಬಂದರು. ಕೈಬೀಸಿ ಒಂದು ದೊಡ್ಡ ಬ್ಯಾಗ್ ರೈಲಿಗೆ ದಾಟಿಸಿಯೇ ಬಿಟ್ಟರು. ಅಷ್ಟೂ ಜನರಿಗೆ ಆಗಿ ಮಿಗುವಷ್ಟು ಊಟವನ್ನು ನಮ್ಮೆದುರು ಹರಡಿಕೊಂಡು ಕೂತಿದ್ದಾಗ ನನಗೆ ಕಣ್ಣು ಮಂಜಾಗತೊಡಗಿತ್ತು.
ಏಕೋ ಈ ಎಲ್ಲವೂ ನನ್ನನ್ನು ಮತ್ತೆ ಮತ್ತೆ ಇನ್ನಷ್ಟು ಮನುಷ್ಯನನ್ನಾಗಿಸುತ್ತಿದೆ. ಕವಿ ಸು ರಂ ಎಕ್ಕುಂಡಿ ಹೇಳುತ್ತಾರೆ- ‘ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ ಜನಕರಾಜನ ಹೊಲದ ಮಣ್ಣು ತರುವೆ’. ನನಗೂ ಅನಿಸುತ್ತದೆ ಎಂದಾದರೊಂದು ದಿನ ಶಶಿ ಮೇಡಂ ಬಳಿ ಹೋಗಿ ಆ ತಾಳ್ಮೆ. ಆ ನಗು, ಆ ಮನುಷ್ಯತ್ವವನ್ನೆಲ್ಲಾ ತರಬೇಕು ಎಂದು.





Nanu sathya sir student agiddaga 2 sala avara manege hogidde, 2 salvoo medam uta madisiye kalisiddaru. avara mrudu matu meeri uta madade baruvudakke sadhyavagilla. adare aga nanage kadiddu, bhanuvara eneno kelasa karyagalalli todagisikollabekidda avara bhanuvarvannu aduge maneyalli kaledu hoguvante madide emba sanna aluku. avara collegege hogi kooda tondare kottidde, avarige nenapu irlikkilla. ekendare avaru sahanamyi
prati varsha sir avara final year kannada mejor studentsge medam maneyalli uta hakuttiddaru.
avar nivrutti jeevana sukhakaravagirli emba ashaya nannadu. sir avara kuritu innomme helona.
Thanks magu innondu sala mangalurige bandaga manege baa mattomme ottige kaleyona
Apptavaada baraha!
Worthy article to read and neatly narrated by the author
“ಗುಪ್ತಗಾಮಿನಿ ಶಾಲ್ಮಲಾದಂತೆ ನಮ್ಮೆಲ್ಲರನ್ನೂ ಆ ಒಂದು ಕಾಯುವ ನೆರಳು ನಮ್ಮ ಜೊತೆ ಕಾಣದೇ ಸಾಗಿ ಬರುತ್ತದೆ”
ಇಂಥ ನೆರಳುಗಳೇ ಅಲ್ಲವೇ ನಮ್ಮನ್ನ ನಿರಂತರ ತಂಪಾಗಿಸುವುದು ಮತ್ತು ಬದುಕಬೆಕೆಂಬ ಭರವಸೆ ಹುಟ್ಟಿಸುವುದು
ಹೊಂಗೆ ನೆರಳಂಥ ಶಶಿಯಮ್ಮನಿಗೆ ನನ್ನದೊಂದು ಸಲಾಂ
Awesome article sir…