ಎರಡು ಕವಿತೆಗಳು
ವಿದ್ಯಾ ಕುಂದರಗಿ
ಬಹಿರಂಗದಲಿ,
ಬದುಕ ಸಾಮ್ರಾಜ್ಯದೊಳಗೆ
ಅರಮನೆಯ ಮೃಗಗಳಿಗಂಜಿ,
ಉಡುತಡಿಯ ಅಡಿಅಡಿಯಲ್ಲೂ
ಉದರ ಪಾತಕಗಳ ಬೆನ್ನಿಗೆ ಕಟ್ಟಿಕೊಂಡೇ
ಅಟ್ಟಾಡಿಸಿ ದುಡಿದರೂ
ಹಸಿವೆಗೆ ಅಟ್ಟುಂಡು
ತೃಷೆಗೆ ಸೇದಿ ಕುಡಿದರೂ
‘ನಾನೇ ಆಳರಸ…’ಎನುವ
ಕೌಶಿಕ ಭಾವಗಳ ತೃಷೆಗೆ
ತಂಪೆರೆದ ಜೀವನದಿ,
ಮತ್ತೆ ಹಳಿಯುತ್ತೇವೆ ದುರ್ವಿಧಿ.
ಹೊರಗೊರಗೆ,
ಮುಕ್ತಳಾಗಿದ್ದಾಳೆ,
ಮೆರವಣಿಗೆ ಹೊರಟಿದ್ದಾಳೆ,
ಬಂಧನ ಕಳಚಿದ್ದಾಳೆ….
ಎಂದು ಭೋರಿಡುತ್ತಲೇ
ಪೊರೆ ಕಳಚಿದ ಭಾವ ……
ಹೃದಯ ಭಾವದೊಳಗೆಲ್ಲೊ
ಸೀತೆ, ಸಾವಿತ್ರಿ, ರೇಣುಕೆ, ಮಂಡೋದರಿಯರ
ಮಹಾ ಸತಿತ್ವ ಮೊರೆತ…..
ಅಹಲ್ಯೆ, ಊರ್ಮಿಳೆ, ಶಬರಿಯರ
ಪವಿತ್ರಾತ್ಮದ ಕೊರೆತ……
ಅಂಬೆ, ಕುಂತಿ, ದ್ರೌಪದಿಯರ
ಪ್ರಯೋಗ ಪಥ…..
ಎಲ್ಲರ ತಲ್ಲಣ, ತನನ, ರಣರಣ.
ಥೇಟ್ ಪಡಿಯಚ್ಚುಗಳು
ನಾವು
ಎನೆಂದರೇನು?
ರಣಭಯಂಕರ ಅಭಯಾರಣ್ಯದೊಳಗೆ
ಹಂಬಲದ ಗೂಡು ಕಟ್ಟಿ,
ಬಂಧಗಳ ಅಡಕಲೊಟ್ಟಿ,
ಭಾವಗಳ ಬೀಡುಬಿಟ್ಟಿರುವ ….
ಸಾಂತ್ವನದ ಬೆನ್ನು ತಟ್ಟಿರುವ
ನಾವು-ನೀವುಗಳು
ಅಂತರಂಗದೊಳಗೆ
ಆಸೆಯಳಿದು ಭಾವ ಬೆತ್ತಲಾದರೂ
ಭವಪಾಶ ಬಿಡಿಸಿಕೊಳ್ಳಲಾಗದ
ಬಂಧಮುಕ್ತ ಕದಳಿ ಕೂಡ
ಅಗಮ್ಯ, ಅಗೋಚರ, ಅಪ್ರತಿಮ
ಅರಸಿ ಹೊರಟ
ಅಂಬರದೊಳಗನ ಅಕ್ಕಮಹಾದೇವಿಯರು.
ಜನಹಿತಕ್ಕಾಗಿ…..
ಆಗ
ನಿರ್ವೀರ್ಯರಿಗೆ ನಿಯೋಗ,
ಮಹರ್ಷಿಗೆ ಮಹಾಯಾಗ,
ಸಾವಿರ ಸೂಳಿಗ ‘ವೇಶ್ಯಾ ಭುಜಂಗ’,
ಆಚೀಚೆಗೊಬ್ಬೊಬ್ಬ ಎಳೆಗಂಧಿ…
ಮನೋನಿಗ್ರಹ ಎಂದ ಗಾಂಧಿ,
ರಾಜ-ನೀತಿ ನಿಯಮಗಳು
ಕೊಟ್ಟ ಬಿರುದು ಬಾವಲಿ
ಈಗ
ವಿಧಿಯನ್ನು ಗೆಲ್ಲುವ ಮಹಾ ಶೂರ
ಪರಸಂಗಕ್ಕೆ ನಿರ್ಭೀತ ದಾರಿ
‘ಸರಕಾರದಿಂದ ಜನಹಿತಕ್ಕಾಗಿ ಜಾರಿ’
ಯಾವ ಅಳುಕು ಆಕಾಶವಾಣಿಗೆ ?
ದೂರದೃಷ್ಟಿಯ ದೂರದರ್ಶನಕೆ ?
ಬಿತ್ತರಿಸುತ್ತವೆ ಗರ್ವದಿಂದ ಸಾರಿಸಾರಿ.
ಶೂರವಿಧಿ ಲಿಖಿಸುವ ಸರಕಾರ
ಮೀಸೆ ತಿರುವುವ ಸಮಾಜ…..
ಆಗೇನೂ, ಈಗೇನೂ, ಯಾವೊತ್ತಾದರೇನೂ
ನಿನಗೇನಿದೆಯೇ…….?
ಮುನಿಯುವುದೊಂದೇ ಮಾರಿ’
‘ಇವರದ್ದೊಂದು ರಗಳೆ……’
ಎನ್ನುವ ತಾತ್ಸಾರ ಬಿಟ್ಟರೆ
ಅದೇ ವಿಸ್ಪರ್ ಚಾಯ್ಸ, ಅದೇ ಸ್ಟೇ ಫ್ರೀ,
ಲೋಕ ಚಾಲನೆಗೆ ಋತುಗತಿಯೇ ದಾರಿ
ಹೇಳ ಹೊರಟರೆ ನೀ ಹೆಮ್ಮಾರಿ
ನಾಚಿಗ್ಗೆಟ್ಟ ಬಜಾರಿ, ಗಂಡುಬೀರಿ
ಅವರಿಗೇನೂ ಗೊತ್ತು
ಮುಟ್ಟು ರಟ್ಟಾಗದಂತೆ
ಮುಚ್ಚಿಟ್ಟುಕೊಳ್ಳುವ ಗುಟ್ಟು,
ಮರ್ಮ ಬಿರಿಯೇ ಇರಿಯುವ, ಕೊರೆಯುವ
ನೋವು ಸಂಕಟಗಳ ಪೆಟ್ಟು,
ಬೀಜದ ಜನ್ಮ ಸಾರ್ಥಕತೆಗೆ
ಭೂಮಿ ಹದಗೊಳಿಸುವ
ಹಲನ ಪ್ರಕ್ರಿಯೆಯ ನಟ್ಟು……?
ನಿನಗ್ಯಾವ ಬಿರುದೆ……..?
ಶಯನೇಷು ರಂಭಾ
ಕಾರ್ಯೇಷು ಮಂತ್ರಿ
ಧ್ವನಿಸಬಾರದು ಗರತಿ…..
ಊದಿದರೆ ಕಹಳೆ….
ಮರ್ಯಾದೆ ಬಿಟ್ಟ ಮಹಿಳೆ,
ಸುಳಿದೆಯಾದರೆ ಜನರೊಳಗೆ…
ನೀನು ಕಂಭದ ಸೂಳೆ
ಹೆಚ್ಚುಕಮ್ಮಿಯಾದರೆ
ಹಾಸುಂಡು ಬೀಸಿ ಒಗೆದ ಬಾಳೆ.
ಕಳೆದು ಹೋದ ನಾಳೆ…
ಕಳೆದು ಹೋದ ನಾಳೆ-
ಯೊಳಗೆ ಅದೇ ನಿರ್ಭಯಾಳಿಗಿಟ್ಟ
ಅಭಯದ ಖಾಲಿ ಹಾಳೆ.






ಚೆನ್ನಾಗಿವೆ
bahala channagide,nanage rashi likayitu
nanage e kavana tumba istaagide.
nanage e kavana tumba istaagide. thubha cennagide
ಅರ್ಥಪೂರ್ಣ ಕವಿತೆಗಳು.
vidya e kaaala gattada pramukha kavayatri….mahileya inside story yannu avara kavitegalalli kaanabahudu.
ವಿದ್ಯಾ ಈ ಕಾಲ ಘಟ್ಟದ ಪ್ರಮುಖ ಕವಯತ್ರಿ. ಆಕೆಯ ಕವನ ಗಳಲ್ಲಿ ಹೆಣ್ಣಿನ ಅಂತರಂಗದ ಒಳ ನೋಟವಿದೆ
ಎರಡೂ ಅರ್ಥಪೂರ್ಣ ಕವಿತೆಗಳು .. ಚೆನ್ನಾಗಿವೆ ..