ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರಿಗೆ ಕೊಲ್ಲುವ ಅಧಿಕಾರ ನೀಡಿದವರಾರು?

ಮನುಷ್ಯರೇಕೆ ಕ್ರೂರಿಗಳು?

ಆರ್ ಜಿ ಹಳ್ಳಿ ನಾಗರಾಜ

ಅಕ್ಷರ ಮೂಡಿಸಲು ಕೈ ಬೆರಳುಗಳು ನಡುಗುತ್ತಿವೆ.
ನಿಲ್ಲಲು ಕಾಲಲ್ಲಿ ಶಕ್ತಿ ಇಲ್ಲ.
ಕುಸಿದು ಹೋಗುತ್ತಿರುವ ಅನುಭವ.
ಮನಸ್ಸು ಕಸಿವಿಸಿ, ಹೃದಯದಲ್ಲಿ ನೋವು, ಕಣ್ಣುಗಳಲ್ಲಿ ಅಸಾಹಯಕ ಸೋತ ಕ್ಷಣಗಳು…
ನೋಡಲಾರದ ಅಮಾನವೀಯ ಕ್ರೌರ್ಯ,

ಕೈ ಕಾಲು ಕಟ್ಟಿ ರಸ್ತೆಯಲ್ಲಿ ವಧಾ ಸ್ತಂಭಕ್ಕೆ ಪ್ರಾಣಿಯಂತೆ ಎಳೆದು ಹೊಯ್ಯುತ್ತಿರುವ ದೃಶ್ಯ ಮನ ಕರಗಿಸಿತು.

ಈ ಸಂದರ್ಭದಲ್ಲೇ ಒಬ್ಬ ಯುವಕ ಕ್ರಿಕೆಟ್ ಬ್ಯಾಟ್ ಕೈಲಿ ಹಿಡಿದು ಆ ಅಮಾಯಕನನ್ನು ಹೊಡೆಯುತ್ತಿದ್ದ. ಇಷ್ಟೆಲ್ಲ ಹಿಂಸೆ ಅನುಭವಿಸಿದ ಆ ಯುವಕನ ಆಕ್ರಂಧನ, ನೋವು, ಚೀರಾಟ ಮಾನವೀಯ ಮನಸ್ಸುಗಳನ್ನು ಕಲಕುತ್ತಿತ್ತು.

ಸ್ನೇಹಿತರೆ,
ಪ್ರಜ್ಞಾವಂತರು, ಅಜ್ಞಾನಿಗಳು, ಅನಕ್ಷರಸ್ಥರು ಇರುವ ಬೆಂಗಳೂರಿನ ಚಾಮರಾಜಪೇಟೆಯ ಪ್ರಮುಖ ರಸ್ತೆಯಲ್ಲಿ ಇಂಥದ್ದೊಂದು ಘಟನೆ ನಡೆದುಹೋಯಿತು.

ಸಾವಿರಾರು ಜನ ಈ ದೃಶ್ಯ ನೋಡುತ್ತಿದ್ದರು. ಅವರಾರೂ ಮೃಗೀಯ ಕೃತ್ಯದ ವ್ಯಕ್ತಿಗಳನ್ನು ಏಕೆ ಹೀಗೆ ಹಿಂಸಿಸುತ್ತೀರಿ ಎಂದು ಕೇಳಲಿಲ್ಲ. ತಡೆಯಲಿಲ್ಲ. ಅಲ್ಲಿದ್ದ ಕೆಲವರು ತಮ್ಮ ಮೊಬೈಲ್ ಕೈಯಲ್ಲಿ ಹಿಡಿದು ದೃಶ್ಯಗಳನ್ನು ಸೆರೆ ಹಿಡಿದು ವಿಕೃತ ಆನಂದಪಡುತ್ತಿದ್ದರು.

ಅಷ್ಟು ಹೊತ್ತಿಗೆ ರಸ್ತೆಯೆಲ್ಲ ರಕ್ತಮಯವಾಗಿತ್ತು. ಕಟುಕ ಮನಸ್ಸುಗಳಿಗೆ ಕನಿಕರವೇ ಬರಲಿಲ್ಲ. ಆಗಲೇ ಹೆಚ್ಚುಕಡಿಮೆ ಅವನ ಪ್ರಾಣಪಕ್ಷಿ ಹಾರಿ ಹೋಗುವ ಹಂತ ತಲುಪಿತ್ತು. ಎಲ್ಲಾ ಘಟಿಸಿದ ನಂತರ ಪೊಲೀಸರ ಪ್ರವೇಶ ಆಗುವಂತೆ ಅಲ್ಲೂ ಆಯಿತು. ಆ ಹೃದಯ ಕಲಕುವ ದೃಶ್ಯ ಅವರೂ ನೋಡುತ್ತ ನಿಂತರು!

ಈ ಎಲ್ಲಾ ದೃಶ್ಯಗಳನ್ನು ವಾಹಿನಿಗಳು ಮತ್ತೆಮತ್ತೆ ಪ್ರಸಾರ ಮಾಡುತ್ತಿದ್ದವು. ಅವರಿಗೆ ಇದೊಂದು ಮಾಮೂಲಿ ಸುದ್ದಿ. ಅಲ್ಲಿ ಖಂಡನೆ, ಮಾನವೀಯತೆಯ ಮಾತೂ ಇರಲಿಲ್ಲ. ಎಲ್ಲವೂ TRP ಜೊತೆ ಆಟ!

ನಂತರ ಪೊಲೀಸರು ವಾಹನದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವಾಗಲೇ ದಾರಿಯಲ್ಲಿ ಆ ಯುವಕ ನರಳುತ್ತ ಕೊನೆ ಉಸಿರೆಳೆದಿದ್ದ ಎಂಬ ಸುದ್ದಿ ಕೇಳಿ ಮತ್ತಷ್ಟು ನೊಂದುಕೊಂಡೆ.

ಚಾಮರಾಜಪೇಟೆಯ ಎರಡು ಕಿ.ಮೀ. ದೂರದಲ್ಲಿನ ಶಕ್ತಿಕೇಂದ್ರ ವಿಧಾನಸೌಧದ ಎದುರು ಸಂಭ್ರಮ ಮನೆ ಮಾಡಿತ್ತು. ದೇಶದ ವಿವಿಧ ಪಕ್ಷಗಳ ರಾಜಕೀಯ ಮುಖಂಡರ ಸಮ್ಮುಖದಲ್ಲಿ ದೇವರ ಹೆಸರಲ್ಲಿ ಮುಖ್ಯಮಂತ್ರಿಯಾಗಿ ಕುಮಾರಣ್ಣ, ಉಪ ಮುಖ್ಯಮಂತ್ರಿಯಾಗಿ ಡಾ. ಪರಮಣ್ಣ ಪ್ರಮಾಣವಚನ ತೆಗೆದುಕೊಳ್ಳುತ್ತಿದ್ದರು.

ಸಮ್ಮಿಶ್ರ ಸರ್ಕಾರದ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದರು.
ಇತ್ತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆ ಅಮಾಯಕ ಯುವಕ ಅನಾಥ ಹೆಣವಾಗಿ ಮಲಗಿದ್ದ.

ಮಕ್ಕಳ ಕಳ್ಳನೆಂದು ವದಂತಿಗೆ ಸಾರ್ವಜನಿಕರಿಂದ ಆಕ್ರೋಶಕ್ಕೆ ಗುರಿಯಾಗಿದ್ದ ಅವನು ರಾಜಸ್ತಾನದ ಒಬ್ಬ ಯುವಕ.
ನಿದ್ರೆ ಬಾರದೆ ಬೆಳಗಿನ ಒಂದು ಗಂಟೆಯಲ್ಲೂ ಎದ್ದು ಕುಳಿತಿದ್ದೇನೆ.

ಮನುಷ್ಯರು ಯಾಕಿಷ್ಟು ಕ್ರೂರಿಗಳು, ಮೃಗಗಳು ಆಗುತ್ತಿದ್ದಾರೆ? ಅವರಿಗೆ ಕೊಲ್ಲುವ ಅಧಿಕಾರ ನೀಡಿದವರಾರು? ಮಾನವ ಹಕ್ಕುಗಳನ್ನು ಗಾಳಿಗೆ ತೂರಿದ ಈ ವ್ಯಕ್ತಿಗಳಿಗೆ ಶಿಕ್ಷೆ ಆದೀತೆ?

‍ಲೇಖಕರು avadhi

24 May, 2018

1 Comment

  1. Malati mudakavi

    ಅಯ್ಯೋ ದೇವರೆ, ಶ್ರೀ ಸಾಮಾನ್ಯ ನ ಜೀವ ಇಷ್ಟೊಂದು ಅಗ್ಗವಾಯಿತೆ.. ಕಾಯಲೆಂದು ಆಯ್ಕೆ ಮಾಡಿದವರಿಗೆ ತಮ್ಮ ಸುಖವೇ ಹೆಚ್ಚಾಯಿತೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading