ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನು ನನ್ನ ಪ್ರತಿ ತಿಂಗಳ ಮುಟ್ಟನ್ನು ಸಂಭ್ರಮಿಸುತ್ತಿದ್ದ…

ಕಾವೇರಿದಾಸ್ ಲಿಂಗನಾಪುರ ಎಂಬ ಹೊಸ ತಲೆಮಾರಿನ ಯುವ ಕವಿಯು ಹೆಣ್ಣುಮಕ್ಕಳ “ಮುಟ್ಟು” ಕುರಿತು ಬರೆದಿರುವ ಕವಿತೆಯನ್ನು ಪ್ರಕಟಿಸುತ್ತಿದ್ದೇವೆ.

ಅದನ್ನು ಓದಿದ ಡಾ ವಡ್ಡಗೆರೆ ನಾಗರಾಜಯ್ಯ ಅವರು ಮಂಡಿಸಿದ ಮೊದಲ ನೋಟ ಸಹಾ ಇಲ್ಲಿದೆ.

ನಿಮ್ಮ ಅಭಿಪ್ರಾಯವನ್ನೂ ತಿಳಿಸಿ. avadhimag@gmail.com ಗೆ ಕಳಿಸಿಕೊಡಿ

ಕಾವೇರಿದಾಸ್ ಲಿಂಗನಾಪುರ

ಅವನು
ನನ್ನ ಪ್ರತಿ ತಿಂಗಳ ಮುಟ್ಟನ್ನು
ಸಂಭ್ರಮಿಸುತ್ತಿದ್ದ…
ಗುಟ್ಟಾಗಿಯೇನು ಅಲ್ಲ
ನನ್ನ ಜೊತೆಗೆ ಅವನು ಸಹ
ಮುಟ್ಟಾದವನಂತೆ…..

ಅವನ ಕ್ಯಾಲೆಂಡರನಲ್ಲಿ
ನನ್ನ ಮುಟ್ಟಿನ ಡೇಟನ್ನು
ರೆಂಡ್ ಇಂಕಿನಿಂದ ಗುರುತು ಮಾಡಿರುತ್ತಿದ್ದ…
ನಾನು ಹೊರ ಚೆಲ್ಲುವ
ರಕ್ತದ ನೋವನ್ನು ಹೆಚ್ಚು ಬಲ್ಲವನಾಗಿದ್ದ…..

ಮುಟ್ಟಾಗುವ ಮೊದಲೇ
ಮಾರ್ಕೆಟಿನಿಂದ
ಸ್ಯಾನಿಟರಿ ಪ್ಯಾಡ್ಗಳನ್ನು ಖರೀದಿಸಿರುತ್ತಿದ್ದ…
ತರ ತರವಾದ ಚಾಕೊಲೇಟ್‌, ಹಣ್ಣುಗಳನ್ನು ತಂದು ತಿನ್ನಿಸುತ್ತಿದ್ದ.‌.‌

ದಿನ ಮುಂಜಾನೆ ಬೆಚ್ಚನೆಯ ಕಾಫಿಯ
ಜೊತೆ ಹಣೆಯ ಮೇಲೊಂದು ಮುತ್ತನಿಟ್ಟು
ದಿನ ಶುರು ಮಾಡಿಸುವಾತ‌….
ನಾನು ಮುಟ್ಟಾದ ದಿನ
ಅದೇ ಕಾಫಿ, ಅದೇ ಮುತ್ತು ಕೊಡುತ್ತಾನೆ
ಅದರೆ ಅದರಲ್ಲೇನೋ ಅದ್ಭುತವನ್ನಿಟ್ಟುರುತ್ತಾನೆ…

ಬಿಸಿ ನೀರ ಕಾಯಿಸಿರುತ್ತಾನೆ..
ಬೆನ್ನ ಉಜ್ಜಲು ಕಾಯ್ದಿರುತ್ತಾನೆ…
ಕೂದಲನ್ನು ಆರಿಸಿ ಜಡೆ ಕಟ್ಟಿ
ದೃಷ್ಟಿಯಾಗಬಾರದೆಂದು……
ಗಲ್ಲಕ್ಕೆ ಬಟ್ಟನಿಟ್ಟು ದೃಷ್ಟಿ ತೆಗೆಯುತ್ತಾನೆ…
ಅವನೇ ಮುಟ್ಟಾದವನಂತೆ
ನನ್ನ ಮುಟ್ಟನ್ನು ಸಂಭ್ರಮಿಸುತ್ತಾನೆ..‌

ಅವ ನನ್ನ ಜೊತೆಗೂಡಿ
ಅಡುಗೆ ಮಾಡುವುದು ಪ್ರತಿ ದಿನದ ರೂಢಿ..
ಆದರೆ ತಿಂಗಳ ಮೂರು ದಿನ ಮಾತ್ರ
ಅಡುಗೆ ಮನೆ ಅವನದೇ ನೋಡಿ….

ನನ್ನ ಕಾಲುಗಳನ್ನು ಒತ್ತುತ್ತಾ
ಪದ್ಯಗಳನ್ನು ಕಟ್ಟುತ್ತಾನೆ…
ನನ್ನ ಕಂಗಳನ್ನೇ ನೋಡುತ್ತಾ
ಕೆಲ ಪದಗಳಿಗೆ ಜೀವ ತುಂಬುತ್ತಾನೆ….

ದಿನ ಪೂರ್ತಿ ಹರೆಟೆ ಹೊಡೆಯುತ್ತಾ
ಕಾಲ ಕಳೆಯಲು ಬಯಸುವ ಅವನಿಗೆ
ನಾನೇ ಆಫೀಸನ್ನು ನೆನೆ‌ಸುತ್ತೇನೆ
ಒಲ್ಲದ ಮನಸ್ಸಿನಿಂದ
ಆಫೀಸಿಗೆ ಹೋಗುತ್ತಾನೆ….
ಸಂಜೆಯಾಗುವುದರೊಳಗೆ
ಮಲ್ಲಿಗೆ ಜೊತೆ ಹಾಜರಿರುತ್ತಾನೆ

ಮುಟ್ಟಿನ ಈ ಮೂರು ದಿ‌ನ‌ಗಳನ್ನು
ಬೇಗ ಕಳೆಯಲು ಬೇಸರ ನನಗೆ…
ನೋವಾಗದಂತೆ
ಮುಟ್ಟನ್ನು ಸಂಭ್ರಮಿಸುವ ಕ್ಷಣ ನೀಡಲು
ಕಾತುರ ಅವನಿಗೆ‌…
ನಾನು ಮುಟ್ಟಾದಾಗ ಅವನು
ಸಂಭ್ರಮಿಸುತ್ತಾ‌ನೆ….
ಗುಟ್ಟಾಗಿಯೇನು‌ ಅಲ್ಲ…
ಅವನು ಸಹ ಮುಟ್ಟಾದವನಂತೆ…

 

ಕವಿತೆಯ ಪೋಸ್ಟ್ ಮಾರ್ಟಂ

ಡಾ. ವಡ್ಡಗೆರೆ ನಾಗರಾಜಯ್ಯ

ನನಗೆ ಈ ಕವಿತೆಯು ಮುಟ್ಟಿನ ದಿನಗಳಲ್ಲಿ ಪುರುಷನು ವ್ಯಕ್ತಪಡಿಸುವ ಸಹಾನುಭೂತಿಯ ಭಾವನೆಯ ದೃಷ್ಟಿಯಿಂದ ಚೆಂದವಾಗಿ ಕಾಣಿಸಿತು. ಈ ಕವಿತೆ ಸಾಮಾಜಿಕ ಮೌಲ್ಯದ ದೃಷ್ಟಿಯಿಂದ ಸೋತಿದೆ. ಆ ಮೂರು ದಿನಗಳು ಅಡುಗೆ ಮನೆಗೆ ಮುಟ್ಟಾದ ಹೆಣ್ಣನ್ನು ಬಿಟ್ಟಕೊಳ್ಳದಿರುವ ಸಾಂಪ್ರದಾಯಿಕ ಧಾರ್ಮಿಕ ಸೂತಕದ ಜಾಡ್ಯ ಜಡತ್ವವು ಈ ಪದ್ಯದಲ್ಲಿ ವ್ಯಕ್ತವಾಗಿದೆ. ಭಾವುಕತೆಯಿಂದಲೇ ವೈಚಾರಿಕತೆಯನ್ನು ದಮನಿಸುವ ಕವಿತೆ ಇದು.

ಅಡುಗೆ ಮನೆಯಲ್ಲಿ ಮೂರು ದಿನಗಳ ಮಟ್ಟಿಗೆ ಅಡುಗೆ ಮಾಡಲಾಗದಿರುವಷ್ಟು ಯಾವುದೇ ಮುಟ್ಟಾದ ಹೆಣ್ಣುಮಗಳು ಅಶಕ್ತಳಾಗಲು ಸಾಧ್ಯವಿಲ್ಲ. ಅಡುಗೆಯೊಂದಿಗೆ ಮನೆಗೆಲಸಗಳನ್ನು ಸಾಂಗವಾಗಿ ನಿರ್ವಹಿಸುವ, ಕಚೇರಿ, ಶಾಲಾಕಾಲೇಜು, ವಾಹನ ಚಾಲನೆ ಕೈಗಾರಿಕೆಗಳಲ್ಲೂ ಆ ಮೂರು ದಿನಗಳಲ್ಲಿ ದುಡಿಯುವ ಹೆಣ್ಣುಮಕ್ಕಳಿದ್ದಾರೆ. ಪದ್ಯವನ್ನು ಗಂಭೀರವಾಗಿ ಎದುರಾಗುವ ಅಗತ್ಯವಿದೆ.

ಸಂಪ್ರದಾಯ ಪರಿಪಾಲನೆಯು ಹೆಣ್ಣನ್ನು ಮೂರು ದಿನಗಳಮಟ್ಟಿಗೆ ಅಡುಗೆ ಮನೆಯಿಂದ ಆಚೆಗಿರಿಸಿ ಅಡುಗೆ ಮನೆಯು ಪುರುಷನ ವಶದಲ್ಲಿರುವ ಸಂಗತಿಯನ್ನು ಕವಿತೆಯು ಸೂಚ್ಯವಾಗಿ ಧ್ವನಿಸುತ್ತದೆ. ದೇಹಾರೋಗ್ಯದ ಕಾಳಜಿಯೇ ಪ್ರಧಾನವಾಗಿರುವ ಸಿಂಹಪಾಲು ಮೌಲ್ಯಪ್ರಜ್ಞೆಯನ್ನು ಅಡುಗೆಮನೆ ಸೂತಕದ ಒಂದಂಶವು, “ಕಪ್ಪು ಕಲೆಯೊಂದು ಬಿಳಿ ಗೋಡೆಯನ್ನು ನುಂಗಿದಂತೆ” ನುಂಗಿಹಾಕಿದೆ.

ಕವಿಯು ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು ಆಲೋಚನೆ ಮಾಡುತ್ತಿಲ್ಲ ಅನ್ನಿಸ್ತಿದೆ. ಈಗಿನ ವಿಜ್ಞಾನದ ಯಾವುದೇ ಸಾಧನಗಳಿಲ್ಲದ ಆಗಿನ ದಿನಗಳಲ್ಲಿಯೂ ಮುಟ್ಟಿನ ಸಮಯದಲ್ಲಿಯೇ ಹೊಲಗದ್ದೆಗಳಲ್ಲಿ ದುಡಿಯುತ್ತಿದ್ದ ನನ್ನ ತಾಯಿಯನ್ನು ಮತ್ತು ನೂರಾರು ಹೆಣ್ಣುಮಕ್ಕಳನ್ನು ಕಂಡವನು ನಾನು. ಈ ಸಮಸ್ಯೆ ಅರಿಯಲು ನಾನೇ ಮುಟ್ಟಾಗಬೇಕೆಂದೇನೂ ಇಲ್ಲ. ಮುಟ್ಟಾಗುವ ಸ್ತ್ರೀ ಮನೆಯಲ್ಲಿದ್ದರಷ್ಟೇ ಸಾಕು. ಈ ಮುಟ್ಟಿನ ಸಮಸ್ಯೆ ಮೇಲ್ಜಾತಿಗಳು ರೂಪಿಸಿದ ಪುರುಷ ರಾಜಕಾರಣದ ನಿರ್ಮಿತಿಯೇ ಹೊರತು ತಳಸ್ತರ ಜನರದ್ದಲ್ಲ.

ವಿಶ್ರಾಂತಿಗೆಂದೇ ಹೆಣ್ಣುಮಕ್ಕಳನ್ನು ಆ ಮೂರು ದಿನ ಆಚೆಗಿಡುತ್ತಿದ್ದರೆಂಬುದು ಕೇವಲ ಬೂಟಾಟಿಕೆಯ ಮಾತು. ಮೂರು ದಿನಗಳ ಮಟ್ಟಿಗೆ ಮಿಡಿಯುವ ಗಂಡಸು ಉಳಿದ ದಿನಗಳಲ್ಲೇಕೆ ಮಿಡಿಯಬಾರದು? ವಿಶ್ರಾಂತಿಯನ್ನು ಮನೆಯೊಳಗೇ ತೆಗೆದುಕೊಳ್ಳಬಹುದಲ್ಲಾ… ಹೊಸ್ತಿಲಾಚೆಯೇ ವಿಶ್ರಾಂತಿ ತೆಗೆದುಕೊಳ್ಳಬೇಕೇನು? ಹೆಣ್ಣು ಮಾತ್ರ ಅಶುಚಿಯಾಗುವಳೇ? ಗಂಡು ಸ್ಖಲಿಸಿ ಅಶುಚಿಯಾಗನೇ? ಮುಟ್ಟು ಮಾತ್ರ ಅಶುಚಿತ್ವವೇ? ಉಳಿದ ಅಶುಚಿತ್ವ ಕಾರಣಗಳು ಯಾವುದೂ ಇಲ್ಲವೇನು? ಮೇಲ್ಜಾತಿಯ ಪುರುಷ ರಾಜಕಾರಣಕ್ಕೆ ಆಧುನಿಕ ಕಾಲದ ಯುವ ಕವಿಯು ತಾಳ ಹಾಕುವುದು ನೋಡಿದರೆ ನನಗೆ ಮರುಕ ಉಂಟಾಗುತ್ತದೆ.

ಮೂರು ದಿನ ಅವಳು ಅಟ್ಟುಣ್ಣಲಾಗದಷ್ಟು ಅಶಕ್ತಳಾಗುವಳೇನು? ವೈದ್ಯಕೀಯ ವರದಿಗಳು ಏನು ಹೇಳುತ್ತಿವೆ ? ಮುಟ್ಟು ಇದೊಂದು ಸರಳ ಜೈವಿಕ ಪ್ರಕ್ರಿಯೆ. ರಾಮಮೂರ್ತಿ ಎಂ ಬಿ ಇವರು ಒಬ್ಬ ಪ್ರತಿಭಾವಂತ ವೈದ್ಯರು. ಇವರನ್ನೇ ಕೇಳಿನೋಡಿರಿ. ಮೂರು ದಿನಗಳ‌ ಮಟ್ಟಿಗೆ ಪುರುಷನ ಸಹಾಯಕ್ಕೆ ಹಂಬಲಿಸಿ ದೈನ್ಯತೆಗಿಳಿಯುವ ಹಂತವನ್ನು ಹೆಣ್ಣುಮಕ್ಕಳು ತಲುಪಲಾರರು. ಮತ್ತು ಪುರುಷನು ತನ್ನ ಹೆಂಡತಿಗೆ ನೆರವಾಗಬೇಕಿರುವುದು ಅದೇ ಮೂರು ದಿನಗಳ ಮಟ್ಟಿಗೆ ಮಾತ್ರವಲ್ಲವೇನಲ್ಲ. ಪರಸ್ಪರ ನೆರವು ಸಹಕಾರ ನಿರಂತರವಾಗಿರಬೇಕು. ಮಹಿಳೆಯರು ಸ್ವಯಂ ಕೆಲಸ ಮಾಡಿಕೊಳ್ಳಬಲ್ಲಷ್ಟು ಶಕ್ತರೂ ಆಗಿರುತ್ತಾರೆ. ಈ ಕವಿತೆಯಲ್ಲಿ ಮೂರು ದಿನ ಅಡುಗೆ ಮನೆಯಾಚೆಗೆ ಹೆಣ್ಣನ್ನು ನಿಲ್ಲಿಸುವ ವಿಕೃತ ಪುರುಷ ನಿರ್ಮಿತಿ ಕವಿತೆಯ ಓದುಗರಿಗೇಕೆ ಕಾಣಿಸುತ್ತಿಲ್ಲ?

ಮುಟ್ಟಿನ ಸಂದರ್ಭವನ್ನು ಮುಂದುಮಾಡಿಕೊಂಡು ಮೂರು ದಿನ ಅಡುಗೆ ಮನೆಯಾಚೆಗಿರಿಸುವ ಮೂಲಕ ಹೆಣ್ಣನ್ನು ಪುರುಷನ ದ್ವಿತೀಯ ದರ್ಜೆಯ ಅವಲಂಬಿತೆಯೆಂದು ತೋರಿಸುವ ಪುರುಷ ಮೂಲಭೂತವಾದದ ಮನಸ್ಥಿತಿಯ ಕವಿತೆ ಇದು. ಪುರುಷನಿಗೆ ಮುಟ್ಟಿನ ಹೊತ್ತಿನಲ್ಲೂ ದುಡಿದು ತಂದಾಕುವ ಹೆಣ್ಣುಮಕ್ಕಳನ್ನು ಈ ಕವಿತೆ ಪರೋಕ್ಷವಾಗಿ ಹಂಗಿಸುತ್ತಿದೆ. ಅದೇ ವೇಳೆಗೆ ಮುಟ್ಟಿನ ಹೊತ್ತಿನಲ್ಲಿ ಪುರುಷ ತೋರುವ ಭಾವನಾತ್ಕತೆಯನ್ನು ಅದರ ಭಟ್ಟಂಗಿಯಂತನವನ್ನು ಇತರರು ಮೆಚ್ಚುವಂತೆ ಕವಿತೆಯ ಒಳಮರ್ಮವೂ ಇಲ್ಲಿದೆ. ಶರಣು ಶರಣಾರ್ಥಿಗಳು.

‍ಲೇಖಕರು avadhi

24 June, 2019

10 Comments

  1. T S SHRAVANA KUMARI

    ಹೆಣ್ಣಿನ ಬಗ್ಗೆ ಒಂದು ಕಾಳಜಿ ತೋರಿಸಲು ಇಷ್ಟೊಂದು ಮೆರೆತ ಬೇಕಿಲ್ಲ. ಕೆಲವರು ಅಲ್ಪಸ್ವಲ್ಪ ಅಸ್ವಸ್ಥತೆಯನ್ನು ಅನುಭವಿಸಿದರೂ, ಅದನ್ನು ನಿಭಾಯಿಸಲು ಕೂಡಾ ಕಲಿತಿರುತ್ತಾರೆ. ವಾಸ್ತವಕ್ಕೆ ಬಲು ದೂರದ ಕವಿತೆ. ಈ ರೀತಿ ಯೋಚಿಸಬಹುದು ಎಂದು ಕೂಡಾ ಅನ್ನಿಸುವುದಿಲ್ಲ.

  2. sumangalagmmangala

    ಶ್ರೀ ವಡ್ಡಗೆರೆ ನಾಗರಾಜಯ್ಯನವರು ಸರಿಯಾಗಿ ಹೇಳಿದ್ದಾರೆ. ಕವನದ ಒಳಮರ್ಮವನ್ನು ಬಿಚ್ಚಿಟ್ಟಿದ್ದಕ್ಕೆ ವಂದನೆಗಳು ಸರ್. ಒಂದು ಸಹಜ ಜೈವಿಕ ಕ್ರಿಯೆಯನ್ನು ಜೈವಿಕ ಕ್ರಿಯೆಯಾಗಿ ಉಳಿಸಿ, ಮಾನವೀಯತೆಯಿಂದ ಕಂಡರೆ ಸಾಕು. ಮೊದಲು ಮುಟ್ಟನ್ನು ‘ಮುಟ್ಟದ” ರೀತಿಯಲ್ಲಿ ನೋಡಿದ್ದು, ನಡೆಸಿಕೊಂಡಿದ್ದು (ಹಿಂಸಿಸಿದ್ದು!) ಆಯಿತು… ಈಗ ಈ ‘ಭಾವಾ’ತಿರೇಕದ ಸಂಭ್ರಮ!! ವಡ್ಡಗೆರೆಯವರು ಹೇಳಿದಂತೆ ಮೂರು ದಿನ ಮಾತ್ರವಲ್ಲ, ಉಳಿದ ದಿನಗಳು ಕೂಡ ಅಡುಗೆ ಮನೆಯಲ್ಲಿ ‘ಸಾಹಚರ್ಯ’ದಿಂದ ಕೆಲಸ ಮಾಡಿದರೆ ಅದೇ ಸಂಭ್ರಮ!! ಅಂದಹಾಗೆ ಕವಿವರ್ಯರು ಅದೇಕೆ ‘ಮೂರು’ದಿನ ಮಾತ್ರ ಸಂಭ್ರಮಿಸಿ, ಅಡುಗೆ ಮನೆಗೆ ಬಿಟ್ಟುಕೊಳ್ಳದೇ ತಾವೇ ಅಡುಗೆ ಮಾಡುತ್ತಾರೆ ಅಂತ…!! ಈ ‘ಮುಟ್ಟು’ ಕೆಲವರಿಗೆ ಎರಡೇ ದಿನದಲ್ಲಿ ಮುಗಿಯಬಹುದು, ಕೆಲವರಿಗೆ ನಾಲ್ಕು ದಿನ, ಕೆಲವರಿಗೆ ಐದು ದಿನ… ಹೀಗಿದ್ದಾಗ ಯಾವುದೋ ಸ್ಮೃತಿಯಲ್ಲೋ ಇನ್ನೆಲ್ಲೋ ಉಲ್ಲೇಖಿಸಿದಂತೆ ನಮ್ಮ ಆಧುನಿಕ ಕವಿವರ್ಯರೂ ತಿಂಗಳ ‘ಮೂರು’ ದಿನಗಳಿಗೇ ಜೋತುಬಿದ್ದಿದ್ದಾರೆ ಎನ್ನಿಸುತ್ತದೆ! “ಮುಟ್ಟಿನ ಡೇಟನ್ನು ರೆಂಡ್ ಇಂಕಿನಿಂದ ಗುರುತು ಮಾಡಿಕೊಂಡಿದ್ದಕ್ಕೇ ಹೊರ ಚೆಲ್ಲುವ ರಕ್ತದ ನೋವನ್ನು ಹೆಚ್ಚು ಬಲ್ಲವರಾಗುತ್ತಿದ್ದರೆ…” ಆಹಾಹಾ… ಕವಿವರ್ಯರೇ…. ಈ ಪರಪಂಚ ಹಿಂಗಿರುತ್ತಿರಲಿಲ್ಲ ಸ್ವಾಮಿ!!
    ನಿಮ್ಮ ಒಂದು ಪುಸ್ತಕವೋ ಇನ್ನೇನೋ ಬಿಡುಗಡೆಯಾದಾಗ ‘ನವಮಾಸ ಹೊತ್ತು ಹೆತ್ತ ಹೆರಿಗೆ’ ಸಂಭ್ರಮ ನಿಮ್ಮದಾಯಿತೆಂದು ಹೆರಿಗೆ ನೋವನ್ನು ಅನುಭವಿಸಿದೆವೆಂದು ಬೀಗುತ್ತೀರಿ. ಈಗ ಈ ಮುಟ್ಟಿನ ಸಂಭ್ರಮವೊಂದು ಬಾಕಿ ಉಳಿದಿತ್ತು ನೋಡಿ!! ನಮ್ಮನ್ನು, ನಮ್ಮ ಜೈವಿಕ ಕ್ರಿಯೆಗಳನ್ನು ಸಹಜವೆಂದು ಗೌರವಿಸಿ. ಈ ಭೂಮಿಯ ಮೇಲೆ ಹೆಣ್ಣು ಕೂಡ ನಿಮ್ಮಂತೆಯೇ ಮತ್ತು ನಿಮ್ಮಷ್ಟೇ ಒಂದು ಮನುಷ್ಯಪ್ರಾಣಿ ಎಂದು ಸಹಜೀವಿಯ ಗೌರವ, ಘನತೆ ನೀಡಿ ಸಾಕು. ಮತ್ತಾವ ಸಂಭ್ರಮವೂ ಬೇಡ, ಸಂಕಟವೂ ಬೇಡ!!

    • Sumangala

      ನನ್ನ ಹೆಸರನ್ನು ತಪ್ಪಾಗಿ ಹಾಕಿದ್ದೀರಿ… ದಯವಿಟ್ಟು ನನ್ನ ಹೆಸರನ್ನು ಬರಿ ‘ಸುಮಂಗಲಾ’ ಎಂದು ತಿದ್ದುಪಡಿ ಮಾಡಿ.

      • avadhi

        ನಾವು ಹಾಕಿದ್ದಲ್ಲ. ನೀವು ಹಾಕುವಾಗ ಸ್ವಲ್ಪ ಗಮನಿಸಿ

    • M.G.KRISHNAMURTHY indalavadi

      ಹಣ್ಣಿನ ಮುಟ್ಟು ಪ್ರತಿ ತಿಂಗಳ ಸಹಜತೆಯಾದರು ಕವಿಗೆ ಅದು ಸಂಭ್ರಮವಾಗಿದೆ. ಅವಳ ತಿಂಗಳ ಕಷ್ಟವನ್ನು ತನ್ನುದು ಎಂದು ಭಾವಿಸಿದ್ದಾನೆ. ಅವನಿಗೆ ಮುಖ್ಯ ಎನಿಸಿರುವುದು ಅವಳೊಟ್ಟಿಗಿನ ಪ್ರೀತಿ ಮಾತ್ರ; ಅವಳೊಟ್ಟಿಗೆ ಸಹಜ ಪ್ರೀತಿಯ ಜೊತೆಗೆ ಬದುಕುವುದು ಅವನ ಇಚ್ಛಿಯಾಗಿದೆ. ಇಲ್ಲಿ ಯಾವುದೇ ಪೂರ್ವಗ್ರಹವಿಲ್ಲದ ವಿಭಿನ್ನ ಅಭಿವ್ಯಕ್ತಿ. ಆದರಿಂದ ಈ ಹೊಸತನ್ನ ಒಪ್ಪಲು(ವಿಮರ್ಶಕ/ತಿಳುವಳಿಕೆದಾರರಿಗೆ ಇತ್ಯಾದಿಯಾಗಿ) ಸಾಧ್ಯವಾಗದ ಈಗಾಗಲೇ ತಮ್ಮ ತಮ್ಮದೇ ವಿಚಾರಗಳ ಚೌಕಟ್ಟಿನಲ್ಲಿರುವ ಕಾರಣಕ್ಕೆ ಈ ಅಸಂಗತವನ್ನ ಒಪ್ಪಲಾಗುತ್ತಿಲ್ಲ ಎಂಬುದು ನನ್ನ ಭಾವನೆ…

  3. ashfaq peerzade

    ಕವಿಯಿಂದ ಇದೆಲ್ಲ ಸಾಧ್ಯವಾಗುವುದಾದರೆ !, ಈ ನೆಪದಲ್ಲಾದರು ಹಗಲಿರುಳು ಅಡುಗೆ ಮನೆಯಲ್ಲಿ ದುಡಿಯುವ ಹೆಣ್ಣಿಗೆ ಒಂದಿಷ್ಟು ವಿರಾಮ ಸಿಕ್ಕರೆ ತಪ್ಪಲ್ಲ. ಇಂತಹ ಪತಿ ಪಡೆದ ಹೆಣ್ಣೇ ಧನ್ಯ..ಇನ್ನು ಮುಟ್ಟಿನಲ್ಲಿ ಸ್ತ್ರೀ ಯನ್ನು ಬಂದಿಸಿಡುವಂತಾದರೆ ಅದು ಸರ್ವದಾ ತಪ್ಪು. ಒಟ್ಟಿನಲ್ಲಿ ಇಲ್ಲಿ ಕವಿಯ ಉದ್ದೇಶ ಎಂಥದ್ದು ಎನ್ನುವುದರ ಮೇಲೆ ಇದು ಅವಲಂಬಿಸುತ್ತದೆ. ಕವಿಯ ಮುಗ್ಧ ಭಾವನೆಯನ್ನು ವೈಚಾರಿಕತೆಗೆ ತಳಕು ಹಾಕುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಇಲ್ಲಿ ಪ್ರಶ್ನೆಯಾಗುತ್ತದೆ.

    • Chi na hally kirana

      ಇಂತಹ ಅಸಂಬದ್ಧ ಕವನಗಳನ್ನು ದಯವಿಟ್ಟು ಪ್ರಕಟಿಸಬೇಡಿ, please

  4. Bhumika

    ಐದು beralugalu onde thara irodilla , ade thara namma bhavanegalu kuda
    Kaviya mathe kaviya yochanegala bagge nimage gothe?

    Kaviya alochanegala mele avara kavana moodi baruthe , avara bhaavanege anugunavagi vyaktha padisidaare, aa kavana nimma bhavanegalannu olagondathe irabekendilla alva
    Ondu vele nimma bhavanege anugunavagi baredare adaralli avara yochane elliruthe,

    Kavi avara ibbara madye iruva preethina , caring na helthidare
    Poorthiyagi thiliyade enu decide agabardu

    Yuva kavigalanna prothsahisabekalve
    Don’t be negative be positive

  5. Hanamant

    ನನಗೆ ಇಲ್ಲಿ ಗಂಡನ ಅತಿಯಾದ ಪ್ರೀತಿ ಕಾಣಿಸಿತು…

  6. Seema

    Dear Kaveridas,
    nimma kavana hennada nanage thumbha ishta aythu. nanna snehita idanna whatsapp nalli photo tegedu kalisidru. nivu hige baritha iri. mikkiddu avaravara bhavakke bakutige

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading