ಅವನು, ಅವಳು ಮತ್ತು ಕಿತಾಪತಿ ಗೆಳೆಯ
ವಿ ಎಚ್ ವೀರಣ್ಣ ಮಂಠಾಳಕರ್
ಅವಳೀಗ ಅವನನ್ನು ಪೂರ್ತಿ ಮರೆತು ಬಿಟ್ಟಿದ್ದಾಳೆ. ಅವನು ಕೂಡ ಅವಳಿಗಾಗಿ ಮೊದಲಿನಂತೆ ಮೊಬೈಲ್ ಕರೆಗಳು, ಮೆಸೇಜ್ ಮಾಡುವುದಕ್ಕೆ ಹಿಂಜರಿಯುತಿದ್ದಾನೆ. ಮೊದಲೆಲ್ಲ ಗಂಟೆಗಟ್ಟಲೆ ಫೋನ್ಕಾಲ್ ಇಲ್ಲವೇ ಹತ್ತಾರು ಸಂದೇಶಗಳು ಕಳುಹಿಸುತಿದ್ದವರು ಇದೀಗ ಒಂದು ಮಿಸ್ಟ್ ಕಾಲ್ ಕೂಡ ಮಾಡುವುದಕ್ಕೆ ಅವಳಿಗೂ ಮನಸಾಗುತ್ತಿಲ್ಲ. ಅವನ ಮನಸ್ಸಿಗೆ ನೋವುಂಟು ಮಾಡಿದ ಸಂಗತಿಯೊಂದರಿಂದ ಅವಳು ನೆನಪಾಗುತ್ತಿಲ್ಲ.
ಆತ್ಮೀಯತೆ ಇದ್ದರೂ ಸಣ್ಣ ವಿಷಯಕ್ಕೆ ಅವಳನ್ನು ಅಷ್ಟು ಸುಲಭ ಮರೆತು ಬಿಡುವುದಕ್ಕೆ ಸಾಧ್ಯವಿರಲಿಲ್ಲ. ಆದರೆ ಅವರಿಬ್ಬರ ನಡುವಿನ ಸ್ನೇಹ, ಸಾಧನೆಯ ಬೆಳವಣಿಗೆ ಸಹಿಸದ ಸ್ವಾಥರ್ಿಗಳು ಮಧುರವಾದ ಸ್ನೇಹಕ್ಕೆ ಹುಳಿ ಹಿಂಡಲು ಸಜ್ಜಾಗಿದ್ದರು. ಇದೇ ಕಾರಣಕ್ಕಾಗಿ ಮಿತ್ರರೆಂಬ ಮುಖವಾಡದವರೇ ಅವನ ಜೀವನದಲ್ಲಿ ವೈರಸ್ನಂತೆ ಅಂಟಿಕೊಂಡಿದ್ದರು.
ಗೆಳತಿಯನ್ನು ಮರೆಯುವುದಕ್ಕೆ ಕಾಣದ ಕೈಗಳ ಕೈವಾಡದ ಶಂಕೆ ಅವನಲ್ಲಿ ಮೂಡಿತ್ತು. ಅದಕ್ಕೊಂದು ಬಲವಾದ ಕಾರಣವೂ ಇತ್ತು. ವೈಮನಸ್ಸಿಗೆ ಕಾರಣವೇನೆಂಬುದು ಅವಳು ಮೂಲ ರಹಸ್ಯ ಬಿಟ್ಟು ಕೊಟ್ಟಿರಲಿಲ್ಲ.
ವಿನಾಕಾರಣ ಮುನಿಸಿಕೊಂಡಿದ್ದಾಳೆ ಎಂಬ ಅನುಮಾನ ಮಾತ್ರ ಅವನಲ್ಲಿ ಕಾಡತೊಡಗಿತ್ತು. ಒಂದೇ ವರ್ಷದಲ್ಲಿ ಅವರಿಬ್ಬರ ನಡುವಿನ ಸ್ನೇಹ ಬಾಂಧವ್ಯದ ಕೊಂಡಿ ಕಳಚುತ್ತದೆಂದು ಭಾವಿಸಿರಲಿಲ್ಲ. ಇಲ್ಲದ ಅಪವಾದಗಳು ಹೊತ್ತು ಇರುವುದಕ್ಕಿಂತ ಸ್ಪಷ್ಟವಾದ ಕಾರಣಗಳು ಹುಡುಕಿ ಅವಳ ಮುಂದಿಡಬೇಕೆಂಬ ಹಟ ಅವನಲ್ಲಿದ್ದವು. ಅವಳೋ ಅವನನ್ನು ಅಪಾರ್ಥದ ಕೂಪಕ್ಕೆ ತಳ್ಳಿಬಿಟ್ಟಿದ್ದಳು.
ಅವಳಲ್ಲಿರುವ ಸೌಂದರ್ಯ, ಅವನಲ್ಲಿರುವ ಜಾಣತನ ಅದ್ಯಾವುದೂ ಸಹ ಇಬ್ಬರ ಆಕರ್ಷಣೆಗಳ ಕೇಂದ್ರವಾಗಿರಲಿಲ್ಲ. ಒಬ್ಬರನ್ನೊಬ್ಬರಿಗೆ ಪ್ರೀತಿಸುವ ಇರಾದೆ ಕೂಡ ಖಂಡಿತ ಇರಲಿಲ್ಲ. ಮೈಗೆ ಮೈ ಸ್ಪರ್ಶಿಸಲು ಹಾತೊರೆಯಲಿಲ್ಲ. ಸ್ಪರ್ಶಿಸುವಂಥ ಇಚ್ಛೆ ಇದ್ದರೂ ಪ್ರೀತಿ, ಪ್ರೇಮ, ಕಾಮಗಳಿಗೆ ಇವರ ನಡುವಿನ ಸ್ನೇಹಕ್ಕೆ ಆಸ್ಪದ ಮೊದಲಿರಲಿಲ್ಲ. ಅದು ಅವರಿಗೆ ಅವಶ್ಯಕತೆಯಾಗಿ ಕಂಡಿಲ್ಲ.
ಅನುಮಾನದ ಸುಳಿಯಲ್ಲಿ ಸಿಕ್ಕಿರುವ ಕಾರಣಕ್ಕೆ ಮನಸ್ತಾಪದ ಸಾಕ್ಷ್ಯವನ್ನು ಬಿಟ್ಟರೆ, ಸ್ನೇಹದ ಬಿಕ್ಕಟ್ಟಿಗೆ ಬಲವಾದ ಸಾಕ್ಷಿ, ಆಧಾರಗಳು ನಿಗೂಢವಾಗಿದ್ದವು. ಸತ್ಯವಾಗಿ ಕಂಡಿರುವುದು ಅಸತ್ಯವಾಗಿದೆ ಎಂದು ಹೇಳುತಿತ್ತು. ಅನುಮಾನ ಮನಸ್ಸನ್ನು ಕೊರೆಯುವ ಸಂಗತಿಯಾಗಿ ಬಿಟ್ಟಿತ್ತು. ಗೊತ್ತಿರದ ಗೊಂದಲದಲ್ಲಿ ವಿಮುಖರಾಗಿ ಬಾಳುತಿದ್ದರು.
ಇಬ್ಬರ ನಡುವಿನ ಸ್ನೇಹ ದೂರಾಗುವುದಕ್ಕೆ ನಿಖರವಾದ ಕಾರಣ ತಿಳಿಯಲು ಒಂದಿನ ಅವನು ಎರಡು ಪೆಗ್ ವಿಸ್ಕಿ ಕುಡಿದಿದ್ದೇ ಆಗದವರ ಮುಂದೆ ಬಟ್ಟೆ ಬಿಚ್ಚಿ ಕುಣಿದಂತಾಗಿತ್ತು. ಬಾರ್ನಲ್ಲಿ ಕುಳಿತು ವಿಸ್ಕಿ ಹೀರುವಾಗ ಫೋಟೊ ಕ್ಲಿಕ್ಕಿಸಿ ಅದು ಅವಳೆದುರಿಗೆ ಇಟ್ಟಿದ್ದರು. ಇಂತಹ ಕಿತಾಪತಿ ಮಾಡಿದವರು ಅದ್ಯಾರು ಅಂತ ಗೊತ್ತಾಗುವುರಷ್ಟರಲ್ಲಿ ವಿಷಯ ರಂಪಾಟಕ್ಕೆ ತಿರುಗಿತ್ತು. ಅವಳಲ್ಲಿ ಅವನ ಬಗ್ಗೆ ಇಲ್ಲ ಸಲ್ಲದ ಆರೋಪಗಳು ಬೇರೆ. ಅವನ ಬಗ್ಗೆ ಅವಳ ತಲೆಯಲ್ಲಿ ಕೊರೆಯುವ ಹುಳುವಾಗಿ ಬಿಟ್ಟಿದ್ದರು. ಆದ್ದರಿಂದ ಅ-ಸತ್ಯ ಎಂಬುದು ಇಲ್ಲಿ ಸತ್ಯವಾಗಿತ್ತು.

ಈ ಜಗತ್ತಿನ ಆಗು ಹೋಗುಗಳನ್ನು ಕಣ್ಣಾರೆ ಕಂಡು, ತಿಳಿದು, ಓದಿಕೊಂಡವರು. ಇಂಟರ್ನೆಟ್ ಜಗತ್ತಿನ ಮಾಯಾಲೋಕದಲ್ಲಿ ಸಿಲುಕಿ ಒಬ್ಬರನೊಬ್ಬರು ಪರಿಚಯಿಸಿಕೊಂಡಿದ್ದರು. ಹಾಗಂತ ಮನಸ್ಸಿನ ಭಾವನೆಗಳು ಒಬ್ಬರನೊಬ್ಬರು ಅರ್ಥ ಮಾಡಿಕೊಂಡಿರಲಿಲ್ಲ ಅಂತಲ್ಲ.
ಸ್ನೇಹ ಸಂಪರ್ಕದ ಸಾಧಕರಾಗಿ ಹೊಸ ವಿಚಾರ, ಆಲೋಚನೆಗಳೊಂದಿಗೆ ನಿತ್ಯವೂ ಮೊಬೈಲ್ ಕರೆಗಳ ಮೂಲಕ ಆತ್ಮೀಯರಾಗಿದ್ದರು. ಪತ್ರ ವ್ಯವಹಾರಗಳನ್ನು ಮರೆಯಾಗುತ್ತಿರುವ ಪ್ರಸ್ತುತ ಸಂದರ್ಭಗಳಲ್ಲಿ ಮೊಬೈಲ್ ಸಂದೇಶಗಳಿಂದ ಮನಸ್ಸಿನ ತಲ್ಲಣಗಳಿಗೆ ಉತ್ತರ ಹುಡುಕುತಿದ್ದರು. ತೀರಾ ಆತ್ಮೀಯತೆ ಬೆಳೆಸಿಕೊಂಡಿದ್ದ ಅವನು ಮತ್ತು ಅವಳು ಸಪ್ತಪದಿ ತುಳಿದ ಜೋಡಿಗಳಂತೆ ಅವರ ನಿತ್ಯ ಜೀವನ ಕ್ರಮ ಪ್ರತ್ಯಕ್ಷವಾಗಿಲ್ಲದಿದ್ದರೂ ಪರೋಕ್ಷವಾಗಿಯೇ ಶುರುವಾಗಿತ್ತು.
ಈ ಬದುಕನ್ನು ಮುಗಿಸುವುದರೊಳಗೆ ಮಹತ್ವವಾದುದನ್ನು ಸಾಧಿಸಬೇಕೆಂಬ ಛಲ ಇಬ್ಬರಲ್ಲಿ ಅಧಮ್ಯವಾಗಿತ್ತು. ಈ ಒಂದು ವಿಚಾರವಾಗಿಯೇ ಅವಳು ನಿತ್ಯ ಏನಿಲ್ಲವೆಂದರೂ ಹತ್ತು ಸಲವಾದರೂ ಅವನ ಸೆಲ್ಗೆ ಮೊಬೈಲ್ ಕರೆ ಮಾಡಿದರೆ. ಅದಕ್ಕೆ ಉತ್ತರವಾಗಿ ಅವನು ಮೆಸೇಜ್(ಸಂದೇಶ)ಗಳನ್ನು ಕಳುಹಿಸುತಿದ್ದನು.
ಇದರಿಂದ ಅವಳಲ್ಲಿ ಎಲ್ಲಿಲ್ಲದ ಉತ್ಸಾಹ. ಬದುಕಿನ ಭರವಸೆಯಾಗಿ ಹೊಸ ಚಿಂತನೆಗಳು ಮೂಡುತಿದ್ದವು. ಇಷ್ಟಕ್ಕೆ ಅವರ ಸ್ನೇಹ ಗಟ್ಟಿಯಾಗಿ ಮುಂದೆಂದೂ ಮುರಿದು ಬೀಳದ ಪರಿಚಯ, ಅಪರಿಚಿತರಾಗಿ ಸಾಧಿಸಬೇಕಾಗಿದ್ದು ಕೇವಲ ಭಾವನಾತ್ಮಕದಿಂದ.
ಬರವಣಿಗೆಯೊಂದೇ ಉಸಿರಾಗಿಸಿಕೊಂಡಿದ್ದ ಅವನ ಹೆಸರು ನಿಶ್ಚಯ ಆಗಿತ್ತು. ಅವಳು ನಿಶಾ. ಹತ್ತಾರು ಪುಸ್ತಕಗಳು ಪ್ರಕಟಿಸುವುದರ ಮೂಲಕ ಬರಹಗಾತರ್ಿಯಾಗಿ ಗುರುತಿಸಿಕೊಂಡಿದ್ದಳು. ಆರಕ್ಕೇರದ, ಮೂರಕ್ಕಿಳಿಯದ ಎಲೆಮರೆ ಕಾಯಾಗಿ ಉಳಿದಿದ್ದಳು. ವಿವಿಧ ಪತ್ರಿಕೆಗಳಲ್ಲಿ ಬಿಡಿ ಲೇಖನ, ಕಥೆ, ಕವನಗಳು ಪ್ರಕಟಿಸುವುದರ ಜೊತೆಗೆ ಸಾರ್ವಜನಿಕ ವಲಯದಲ್ಲಿ ಇಬ್ಬರೂ ಪರಿಚಿತರಾಗಿದ್ದರು.
ಅವನು ಕೂಡ ಪ್ರವೃತ್ತಿಯಿಂದ ಕವಿ, ಲೇಖಕನಾಗಿ, ವೃತ್ತಿಯಿಂದ ಪತ್ರಕರ್ತನಾಗಿದ್ದ. ಇಬ್ಬರ ವೈವಾಹಿಕ ಜೀವನ ಬೇರೆ ಬೇರೆಯಾಗಿತ್ತು. ಆ ಕಾರಣಕ್ಕಾಗಿ ದಿನನಿತ್ಯದ ರಾತ್ರಿ ಎಂಟು ಗಂಟೆಯಾದ ಮೇಲೆ ಫೋನ್ಕಾಲ್ ಕರೆಗಳು, ಮೆಸೇಜ್ಗಳಿಗೆ ನಿರ್ಬಂಧ ಹೇರಿ ಇಬ್ಬರಲ್ಲೂ ಕರಾರು ಕಂಡಿಷನ್ ಆಗಿದ್ದವು.
ಇತ್ತ ನಿಶಾಳ ಗಂಡನಿಗೂ ಮತ್ತು ನಿಶ್ಚಯನ ಹೆಂಡತಿಗೂ ಇಬ್ಬರ ನಡುವಿನ ಸ್ನೇಹದ ಅಪಾರ್ಥಕ್ಕೆ ಎಡೆ ಮಾಡಿಕೊಡಬಾರದೆಂಬುದೇ ಅವರ ಅಚಲ ನಿಧರ್ಾರವಾಗಿತ್ತು.
ಕಾಲ ಮುಂದೂಡಿಕೊಂಡು ಹೋದಂತೆ ಬರವಣಿಗೆಯ ಕನಸುಗಳು ಹೊತ್ತುಕೊಂಡು ಪತ್ರಿಕೆಯೊಂದನ್ನು ಪ್ರಾರಂಭಿಸಲು ಯೋಚಿಸಿದರು. ಪತ್ರಿಕೆಯ ನೊಂದಣಿ ಕಾರ್ಯವನ್ನೆಲ್ಲ ಮುಗಿದು ಕೆಲ ತಿಂಗಳುಗಳ ನಂತರ ಸಂಬಂಧಪಟ್ಟ ಆರ್ಎನ್ಐ ಕಚೇರಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿತ್ತು.
ಕಾಲ ಸರಿದು ಹೋದಂತೆಲ್ಲ, ಬಳಿಕ ವೈವಿಧ್ಯಮಯ ಲೇಖನಗಳನ್ನೊಳಗೊಂಡ ಪ್ರಥಮ ಸಂಚಿಕೆ ಮಾರುಕಟ್ಟಿಗೆ ತಂದರು. ಓದುಗರ ಕುತೂಹಲಕ್ಕೂ ಮೀರಿ ಅಚ್ಚುಕಟ್ಟಾದ ಮುದ್ರಣ, ಬರಹಗಳ ಹೂರಣದೊಂದಿಗೆ ಪತ್ರಿಕೆ ಒಳಗೊಂಡಿತ್ತು. ಇದರಿಂದ ಸಾಹಿತ್ಯ, ಸಮಾಜ, ಸಂಸ್ಕೃತಿ, ಕಲೆ, ರಾಜಕೀಯ ಲೋಕಕ್ಕೆ ಚಿರಪರಿಚಿತರಾದರು.
2
ಅಂದು ದೀಪಾವಳಿ ಸಂಭ್ರಮದಲ್ಲಿದ್ದ ನಿಶಾ ನಿಶ್ಚಿತನ ಫೋನ್ ಕರೆಗೆ ಕಾಯುತಿದ್ದಳು. ಇತ್ತ ಗಂಡನೊಂದಿಗೆ ಮಾರುಕಟ್ಟೆಗೆ ಹೋಗಬೇಕಾದುದರಿಂದ ಇಡೀ ಆ ದಿನ ನಿಶ್ಚಿತನಿಗೆ ಸಂಪಕರ್ಿಸಲು ಸಾಧ್ಯವಿರಲಿಲ್ಲ. ಆ ಕಾರಣಕ್ಕೆ ಫೋನ್ ಕರೆಗೆ ಕಾಯುತ್ತಾ ಕುಳಿತಳು. ನಿಶಾ ರೆಡಿನಾ…..? ರಾತ್ರಿ ವಿಶಾಲನ ಪಾಟರ್ಿಗೆ ಬೇರೆ ಹೋಗಬೇಕು. ಮಧ್ಯಾಹ್ನದ ಬಿಸಿಲು ಏರುತ್ತಿದೆ. ಇನ್ನು ಮೆಜೆಸ್ಟಿಕ್ ಸುತ್ತಾಡಿಕೊಂಡು ಬರಬೇಕಾದರೆ ಸಾಯಂಕಾಲ ಆಗಿರುತ್ತೆ. ಎಂದು ನವೀನ ಅವಸರಿಸಿದನು.
ನಿಶಾ, ಹಾಂ… ಆ…ಆಯ್ತು ನವೀನ. ನಾನು ರೆಡಿ. ಬನ್ನಿ ಹೊರಡೋಣ ಎಂದು ಅವಳೇ ಮೊದಲು ನವೀನ್ಗಿಂತ ಮುಂದೆ ಮನೆಯಿಂದ ಹೊರಗಾದಳು. ತನ್ನ ತಳಮಳ ಗೊತ್ತಾಗದಿರಲಿ ಎಂಬ ದುಗುಡ ಅವಳಿಗಿತ್ತು.
ನವೀನ ಶೂ ಹಾಕಿಕೊಳ್ಳುವಾಗ ಅವಳು ಬಾಗಿಲ ಬಳಿ ಬಂದು ನಿಂತಳು. ನಂತರ ದಯವಿಟ್ಟು ಈ ದಿನ ನನಗೆ ಕಾಲ್ ಮಾಡ್ಬೇಡಿ. ಯಾವುದೇ ಮೆಸೇಜ್ ಮಾಡ್ಬೇಡಿ ಪ್ಲೀಜ್. ನಾನು ನನ್ನ ಗಂಡನೊಂದಿಗೆ ಶಾಪಿಂಗ್ ಹೋಗುತಿದ್ದೇನೆ ಸಂಜೆ ನಾನೇ ಸಾಧ್ಯವಾದ್ರೆ ಕಾಲ್ ಮಾಡುವೆ ಎಂಬ ಒಕ್ಕಣಿ ಮೊಬೈಲ್ ಡಿಸಪ್ಲೇನಲ್ಲಿ ಟೈಪ್ ಮಾಡಿದಳು.
ಮೆಸೇಜ್ ಸೆಂಡ್ ಮಾಡುವಷ್ಟರಲ್ಲಿ ಅವಳೆದುರಿಗೆ ನವೀನ ಪ್ರತ್ಯಕ್ಷನಾದ. ಅವಳನ್ನು ಅಪ್ಪಿಕೊಂಡಂತಾಗಿ ಹೌಹಾರಿದಳು. ಹೇ ನಿಶಾ, ಗಾಬರಿ ಆಯ್ತ…? ತುಂಬಾ ಮುದ್ದಾಗಿ ಕಾಣ್ತಿದ್ದಿಯಾ ಈ ದಿನ. ಎಂದು ಕೆನ್ನೆ ಸವರಿದನು. ಅವಳ ನಾಚಿಕೆಗೆ ಮುಟ್ಟಿದರೆ ಮುನಿಸಿಕೊಳ್ಳುವ ನೀನು ಜಿಂಕೆ ಮರಿ ಕಣೇ. ಎಂದು ಹಗುರವಾದ ಮುತ್ತೊಂದು ನೀಡಿ, ಅವಳ ಗಲ್ಲ ಸವರಿದನು.
ಅವಳು ಮೌನವಾಗಿಯೇ ಮೆಟ್ಟಿಲಿಳಿದು ಗೇಟ್ ಬಳಿ ಬಂದಳು. ಬರೀ ಮೊಬೈಲ್ನಲ್ಲೇ ಬ್ಯೂಜಿ ಆಗಿರ್ತಿಯಾ. ನಡಿ…ನಡಿ. ಅದ್ಯಾವ ನಿನ್ನ ಫ್ರೈಂಡ್ಸ್ ನಿನ್ನ ಮೆಸೇಜ್ಗೆ ರಿಪ್ಲೈ ಮಾಡ್ತಾರೊ ಗೊತ್ತಿಲ್ಲ. ನಿನ್ನ ಗೋಳಾಟಕ್ಕೆ ಅವರು ಫೋನ್ ಕೂಡ ರಸೀವ್ ಮಾಡಲ್ಲ. ಗೊತ್ತಾ.? ಎಂದು ತಮಾಷೆಯಾಡಿದ. ಅದಕ್ಕವಳು ಉತ್ತರಿಸದೇ ನೇರ ದೃಷ್ಠಿಸಿದಳು.
ಲೇಟಾಯ್ತು ಬಾ ಬೇಗ ಎಂದು ಮನೆಯ ಬಾಗಿಲು ಚಿಲಕ ಹಾಕಿ, ವರಾಂಡದಲ್ಲಿ ನಿಲ್ಲಿಸಿದ ಬೈಕ್ ಎಳೆದು ಗೇಟಿನಿಂದ ಹೊರಗೆ ತಂದು ನಿಲ್ಲಿಸಿದನು ನವೀನ. ಏ… ಬಾರಮ್ಮ ಬೇಗ. ಹೊತ್ತಾಯ್ತು. ಮೊಬೈಲ್ ಇಟ್ಕೊ ಪರ್ಸಲ್ಲಿ. ಮಳೆ ಬೇರೆ ಬರೋ ಹಾಗಿದೆ. ಮೋಡಗಳು ರಭಸವಾಗಿ ಆಕಾಶದಲ್ಲಿ ತೇಲಾಡುತ್ತಿವೆ. ಕಗ್ಗತ್ತಲು ಕವಿಯುತ್ತಿದೆ. ಮಳೆ ಬಂದು, ಶೀತಗೀತ ಆದ್ರೆ ನಿನ್ನ ಪಾಡು ನನಗೆ ನೋಡಲಾಗದು ಎಂದು ನವೀನ ಛೇಡಿಸಿದನು.
ನಿಶಾ ಹಹಹ…ಹಾ….ಹ ಎಂದು ನಗುತ್ತಲೇ ಬೈಕ್ ಹಿಂದೆ ಹತ್ತಿದಳು. ನೀವು ಯಾವಾಗ ಕವಿಗಳಾದ್ರಿ….? ಪ್ರಶ್ನಿಸಿದಳು. ಕವಿಯಿತ್ರಿ ಮಡದಿ ಇರುವಾಗ, ಕವಿಯಾಗಲು ದೊಣ್ಣೆ ನಾಯಕನ ಅಪ್ಪಣೆ ಯಾಕೆ…? ಎಂಬ ಮಾತು ಮಂಥನದಲ್ಲೇ ನಲವತ್ತರ ಸ್ಪೀಡ್ನಲ್ಲಿ ಜನದಟ್ಟಣೆ ರಸ್ತೆ ಕ್ರಮಿಸುತ್ತಾ ರಾಜಾಜಿನಗರದಿಂದ ಟ್ರಾಫಿಕ್ ಜಾಮ್ನಲ್ಲಿ ಬೈಕ್ ಓಡಿತ್ತು.
ಅಷ್ಟರಲ್ಲೇ ನಿಶಾಳ ಮೊಬೈಲ್ಗೆ ಅನಾಮಿಕ ಕರೆಯೊಂದು ಬಂತು. ರಿಂಗಣಿಸುತಲೇ ಇತ್ತು. ಹೊಸ ನಂಬರ್…? ಅಂತ ಯೋಚಿಸುತ್ತಲೇ ಕಾಲ್ ರಿಸೀವ್ ಮಾಡದೇ ಡಿಸಕನೆಕ್ಟ್ ಮಾಡಿದಳು. ಪದೇ ಪದೇ ಮೊಬೈಲ್ ರಿಂಗಣಿಸುತಿದ್ದಾಗಲೂ ಮತ್ತೆ ಕಟ್ ಮಾಡಿದಳು. ಗಂಡನ ಸಮ್ಮತಿ ಮೇರೆಗೆ ಕಾಲ್ ರಿಸೀವ್ ಮಾಡಿಕೊಂಡಳು.
ಹಲೋ…. ಎಂಬ ಪುರುಷ ಧ್ವನಿ ನಿಶಾಳ ಕಿವಿಗೆ ಬಿತ್ತು. ಮೇಡಮ್ ಹೇಗಿದ್ದಿರಾ….? ಮರು ಪ್ರಶ್ನೆಗೆ
ನಿಶಾ’ ಹಾಂ…. ಯಾರು…?
ಅನಾಮಿಕ ವ್ಯಕ್ತಿ ನಾನು ನಿಮ್ಮ ಪತ್ರಿಕೆ ಓದುಗ ಮೇಡಮ್. ನನ್ನ ಹೆಸರು ಸಣಕಲ್ ಮಚ್ಚು ಅಂತ.
ನಿಶಾ ಓ ಥಾಂಕ್ಸ…..ಎಲ್ಲಿಂದ…?
ಮಚ್ಚು ಸಣಕಲ್ ನಮ್ಮೂರು ಮೇಡಮ್. ಮಚ್ಚು ಅಂತ ನನ್ನ ಹೆಸರು.
ನಿಶಾ ಓಕೆ ಓಕೆ…..
ಮಚ್ಚು ನಿಮ್ಮ ಪತ್ರಿಕೆಯಲ್ಲಿರುವ ನಿಶ್ಚಯ ಎನ್ನುವವರ ಬಗ್ಗೆ ಸ್ವಲ್ಪ ಮಾತಾಡಬೇಕಿತ್ತು.
ನಿಶಾ ಆಂ…! ನಿಶ್ಚಯ ನಿಮಗೆ ಗೊತ್ತಾ…?
ಮಚ್ಚು ಹೌದು ಮೇಡಮ್. ನಿಶ್ಚಯ ಮತ್ತು ನಾನು ತುಂಬಾ ಕ್ಲೋಜ್ ಫ್ರೈಡ್ ಆಗಿದ್ವಿ. ಇಬ್ಬರೂ ಸಾಹಿತ್ಯ ಪ್ರೇಮಿಗಳು. ಇತ್ತೀಚಿಗೆ ನಮ್ಮಿಬ್ಬರ ಮಧ್ಯೆ ಮಾತುಕತೆ ಇಲ್ಲ. ಅವನು ತುಂಬಾ ಮೂಡಿ ಆಗಿರ್ತಾರೆ ಮೇಡಂ. ಮಾತ್ ಮಾತಿಗೆ ಸಿಡುಕು ಸ್ವಭಾವ ಬೇರೆ. ಕೆಲ ವರ್ಷಗಳಿಂದ ಅವನು ಮಧ್ಯ ವ್ಯಸನಿ ಆಗಿದ್ದಕ್ಕೆ ನಾನೇ ದೂರ ಆಗ್ಬಿಟ್ಟೆ. ನಿಮ್ಜೊತೆ ಪತ್ರಿಕೆಯಲ್ಲಿ ಹೇಗೆ ಕೆಲಸ ಮಾಡ್ತಾರೋ ಗೊತ್ತಿಲ್ಲ. ಎಂಬ ಫಿಟಿಂಗ್ ಇಡಲು ಶುರು ಮಾಡಿದ. ಮತ್ತೆ ಇನ್ನೇನೋ ಹೇಳಲು ಪ್ರಯತ್ನಿಸುತಿದ್ದನು.
ನಿಶಾ ನಿಮ್ಮ ಹೆಸರು ಮಚ್ಚು ಅಂತಿರಾ, ಕೈಯಲ್ಲಿ ಮಚ್ಚು ಇಲ್ಲಂದ್ರು ಮಾತಿನಲ್ಲೇ ಅನಾಯಾಸವಾಗಿ ಯಾರ ತಲೆನೋ ಒಂದೇ ಏಟಿಗೆ ಕತ್ತರಿಸುವ ಯೋಚನೆ ತುಂಬಾ ಚೆನ್ನಾಗಿದೆ. ಹೇಗ್ ಬಂತು ನಿಮಗೆ ಈ ಐಡಿಯಾ….? ಎಂದು ನಿಷ್ಠೂರವಾಗಿಯೇ ನುಡಿದಳು.
ಅವರು ನಮ್ಜೊತೆ ಚೆನ್ನಾಗಿಯೇ ಇದ್ದಾರೆ. ಉತ್ತಮವಾದ ಲೇಖನಗಳು, ಕಥೆ, ಕವನಗಳು ಎಲ್ಲವನ್ನು ಬರೆಯುತ್ತಾರೆ. ಅವರಿಂದ ನನಗೆ ನಷ್ಟವೂ ಆಗಿಲ್ಲ. ಅನುಮಾನವಂತೂ ಇಲ್ಲವೇ ಇಲ್ಲ. ಒಳ್ಳೆಯ ವ್ಯಕ್ತಿ. ಭಾವನಾ ಜೀವಿ ಆಗಿದ್ದಾರೆ. ಅಷ್ಟಕ್ಕೂ ನೀವ್ಯಾಕೆ ಅವರ ಬಗ್ಗೆ ಅಷ್ಟು ಹಗುರವಾಗಿ ಮಾತಾಡ್ತಿದ್ದಿರಾ ಗೊತ್ತಾಗ್ತಿಲ್ಲ. ಓದುಗರಾಗಿ ನೀವು ಬರವಣಿಗೆ ಬಗ್ಗೆ ಸಲಹೆ ಕೊಡಿ. ಬಟ್…… ಅದೆಲ್ಲ ಬಿಟ್ಟು ಏನಿದೆಲ್ಲ…..? ಸ್ವಲ್ಪ ಗದರಿದಂತೆ ನುಡಿದಳು.
ಮಚ್ಚು ಚಾಡಿ ಹೇಳ್ತಿಲ್ಲ ಮೇಡಮ್. ನೀವು ಅವನ ಬಗ್ಗೆ ಎಚ್ಚರಿಕೆ ವಹಿಸಿ ಅಂತ. ನಿಮ್ಮ ಪತ್ರಿಕೆಯ ಶ್ರೇಯಸ್ಸಿಗಾಗಿ, ಓದುಗನಾಗಿ ಹೇಳ್ತಿದ್ದಿನಿ ಅಷ್ಟೇ. ನಿಟ್ಟುಸಿರು ಬಿಟ್ಟವನಂತೆ ನಟಿಸಿದಂತೆ ವ್ಯಂಗ್ಯದ ನಗೆ ನಕ್ಕ.
ಗೊತ್ತಿಲ್ಲದ ಅನಾಮಿಕ, ನಿಶ್ಚಯ ಮತ್ತು ನಿಶಾಳ ನಡುವೆ ಕಡ್ಡಿ ಗೀರಿ ಬೆಂಕಿ ಇಡುತ್ತಿರುವುದನ್ನು ನಿಶಾ ಅರ್ಥ ಮಾಡಿಕೊಳ್ಳಲು ತಡವಾಗಲಿಲ್ಲ. ಅದಕ್ಕವಳು…ಸರಿ….ಸರಿ…. ನಾನು ಟ್ರಾಫಿಕ್ನಲ್ಲಿದ್ದೇನೆ. ಫ್ರೀಯಾದಾಗ ನಿಮಗೆ ಕಾಲ್ ಮಾಡ್ತ್ಲಿನಿ. ಎಂಬ ಸಮಜಾಯಿಸಿ ನೀಡಿ, ನಿಶಾ ಮೊಬೈಲ್ ಕರೆ ಡಿಸ್ಕನೆಕ್ಟ್ ಮಾಡಿದಳು.
ಅಷ್ಟರಲ್ಲಾಗಲೇ ಬೈಕ್ ನವರಂಗ ದಾಟಿ, ಸುಜಾತ ಟಾಕೀಸ್ ರಸ್ತೆ ಕ್ರಮಿಸಿತ್ತು. ಬೈಕ್ ಓಡಿಸುತ್ತಲೇ ನವೀನ ಹಿಂದೆ ತಿರುಗಿ, ನಿಶಾಳತ್ತ ಓರೆನೋಟ ಬೀರಿದ ಯಾರದೇ ನಿಶಾ ಫೋನು…?
ನಿಶಾ ಅದ್ಯಾರೋ ನಮ್ಮ ಪತ್ರಿಕೆಯ ಸಂಚಿಕೆ ನೋಡಿ ಮಾತಾಡ್ತಿದ್ದ. ಓದುಗನಂತೆ. ಹಾಗೇ ನಮ್ಮ ಪತ್ರಿಕೆಯಲ್ಲಿ ಡಿಸೈನರ್ ನಿಶ್ಚಿತ ಇದ್ದಾರಲ್ವ. ಅವರ ಫ್ರೈಂಡ್ ಅಂತಲೂ ಹೇಳ್ತಿದ್ದ.
ನವೀನ ಏನಂತೆ ವಿಷಯ ತುಂಬಾ ಗಂಭೀರವಾಗಿದ್ದಂತಿದೆ….? ಪ್ರಶ್ನಿಸಿದನು.

ನಿಶಾ ಅವರದ್ದೆಲ್ಲ ವಯಕಿಕ ಜಗಳ್ತ ತಂದು ನಮ್ಮ ನಡುವೆ ಗೊಂದಲ ಹಚ್ಚಿ ಬಿಡ್ತಾರೆ. ಚಾಡಿ ಹೇಳಿ ತಮ್ಮ ಬೇಳೆ ಬೇಯಿಸಿಕೊಳ್ಳುವವರೇ ಹೆಚ್ಚು ಈ ಸಮಾಜದಲ್ಲಿ. ಸಾಧಕರ ಬೆಳವಣಿಗೆ ಸಹಿಸದೇ, ಮಾನ ಹರಾಜು ಮಾಡುವ ಜನರೇನು ಕಮ್ಮಿಯಿಲ್ಲ ಬಿಡಿ.. ಕೆಲಸವಿಲ್ಲದವರಿಗೆ ಇಂಥದ್ದೆಲ್ಲ ಕಿತಾಪತ್ಲಿ ಮಾಡ್ತ ಕುಳಿತಿರಲು ಸಾಕು. ಅವರಿಗೆ ಬೇರೆ ಕ್ರಿಯಾತ್ಮಕ ಚಟುವಟಿಕೆ ಮಾಡುವುದಕ್ಕೆ ಗೊತ್ತಿರುವುದಿಲ್ಲ ಅದಕ್ಕೆ ಇಷ್ಟಾದರು ಮಾಡ್ಬೇಕಲ್ವ…..?
ನವೀನ ಅದು ನಿಜ. ಅಂತಹ ಕಿತಾಪತಿಗಳಿಂದ ಎಂತೆಂಥವರದ್ದೋ ಮಾನ ಬೀದಿ ಪಾಲಾಗಿರುವುದು ನಾನು ಬಹುತೇಕ ಕೇಳಿದ್ದೇನೆ. ಆದರೆ ಏನೇನೋ ಜಾಸ್ತಿನೇ ಗೊಣಗಾಡ್ತಿದ್ದ ಮತ್ತೆ.?
ನಿಶಾ ಅದೇನೋ ನಿಶ್ಚಯನ ಕುರಿತು ದೂರು ಹೇಳಲು ಪ್ರಯತ್ನಿಸುತಿದ್ದ. ಅದಕ್ಕೆ ಕಟ್ ಮಾಡ್ದೆ. ಅವರವರ ವಯಕ್ತಿಕ ಜೀವನ ನಮಗ್ಯಾಕೆ ಬೇಕು. ನಮ್ ಜೊತೆ ಒಳ್ಳೆಯ ಕೆಲಸ, ಭರವಸೆಯಿಂದ ಇದ್ಬಿಟ್ರೆ ಸಾಕಲ್ವ….? ಅದಕ್ಕೆ ನಾನೇ ಪ್ರೀಯಾದಾಗ ಮಾತಾಡ್ತಿನಿ ಅಂತ ಹೇಳಿದೆ. ಎಂದಳು.
ನವೀನ ಯಾವುದಕ್ಕೂ ಯಾರ ಬಗ್ಗೆಯಾದರೂ ಆಗಲಿ ಅಷ್ಟಾಗಿ ಭರವಸೆ ಇಟ್ಕೊಬೇಡ ನಿಶಾ. ಯಾವ ಹುತ್ತದಲ್ಲಿ ಯಾವ ಹಾವಿದೆ ಎಂಬುದನ್ನು ತಿಳಿಯಲು ಅಸಾಧ್ಯ. ಎಂದ
ನಿಶಾ ೆನಿಶ್ಚಯ ಅಂತಹ ಫ್ರಾಡ್ ವ್ಯಕ್ತಿ ಆಗಿರಲು ಸಾಧ್ಯವಿಲ್ಲ ನವೀನ. ಹಾಗಂತ ಪದೇ ಪದೇ ನನ್ನ ಮನಸ್ಸು ಹೇಳುತ್ತೆ. ಅವರವರ ವಯಕ್ತಿಕ ಜೀವನದಲ್ಲಿ ಏನಾದರೂ ಸಮಸ್ಯೆಗಳಿರುತ್ತವೆ ನಿಜ. ಅದನ್ನೇ ನಾವು ತೀರ ಗಂಭೀರವಾಗಿ ತೆಗೆದುಕೊಂಡು ದೂರಾಗುವುದಕ್ಕೆ ಪ್ರಯತ್ನಿಸಿದರೆ ಬದುಕಿಗೇನು ಅರ್ಥ ಹೇಳಿ. ಅವರಿಗಾಗದವರು ಯಾರೋ ಹೇಳಿದರೆ, ನಂಬಿಕೆ ಕಳೆದುಕೊಂಡು ಬಿಡಲು ಸಾಧ್ಯವಾ..? ಆವೇಷ ಮತ್ತು ಬೇಸರದಿಂದ ನುಡಿದಳು.
ನವೀನ ನೀನುಂಟು. ನಿನ್ನ ಪತ್ರಿಕೆ ಉಂಟು ಮಾರಾಯ್ತಿ. ನಿಶ್ಚಯನ ಮೇಲೆ ನಿನಗಿರುವ ಬಲವಾದ ನಂಬಿಕೆ ಇದೆ ತರಹ ಶಾಶ್ವತವಾಗಿರಲಿ. ಬಟ್ ಅನಾವಶ್ಯಕ ಹಣ ಚೆಲ್ಲಿ ಕೈ ಸುಟ್ಕೊಬೇಡ. ಮನೆಯಲ್ಲಿ ಕುತ್ಕೊಂಡು ಬೇಜಾರು ಅಂದಿದ್ದಕ್ಕೆ, ಬರವಣಿಗೆಯಲ್ಲಿ ಒಂದಿಷ್ಟು ಮೈಂಡ್ ಕ್ರಿಯೇಟಿವಿಟಿವ್ ಆಗಿರುತ್ತೆ ಅಂತ ಪತ್ರಿಕೆ ಟೈಟಲ್ಗಷ್ಟೇ ಸಹಾಯ ಮಾಡಿದೆ. ಮುಂದೆ ಹಣಕಾಸಿನ ವ್ಯವಹಾರದಲ್ಲಾಗಲಿ, ಪತ್ರಿಕೆಯ ಲಾಭ, ನಷ್ಟ ಎರಡಕ್ಕೂ ನನಗೇನು ಗೊತ್ತಿಲ್ಲ. ಯಾವುದಕ್ಕೂ ಜಾಗೃತೆಯಾಗಿರು ಅಷ್ಟೆ. ಎಂಬ ಎಚ್ಚರಿಕೆ ಗಂಟೆ ನೀಡಿದನು.
ಮೆಜೆಸ್ಟಿಕ್ ಹತ್ತಿರದ ಗಾಂಧಿ ನಗರಕ್ಕೆ ಬಂದು ಕಿಕ್ಕಿರಿದ ಜನಸಂದಣಿಯ ರಸ್ತೆಯಲ್ಲಿ ಬೈಕ್ ಮುಂದೆ ಸಾಗಿತ್ತು. ನಿಶಾ ಕೊಂಚ ಮೂಡ್ ಆಪಸೆಟ್ ಮಾಡ್ಕೊಂಡಿದ್ದಳು. ಸ್ವಪ್ನ ಬುಕ್ ಹೌಸ್ಗೆ ಹೋಗಿ ಬರಬೇಕೆಂಬ ಯೋಚನೆಯಲ್ಲಿ ನಿಶಾ ಮನೆಯಿಂದ ಹೊರಗೆ ಕಾಲಿಟ್ಟಿದ್ದಳು. ಇದೀಗ ಅದೆಲ್ಲ ಯಾತಕ್ಕಾಗಿ ಎಂಬ ಯೋಚನೆ ಮೂಡಿತ್ತು. ಪತ್ರಿಕೆಯ ಪುಟಗಳ ಮಧ್ಯದಲ್ಲಿ ಸುಭಾಷಿತ ನುಡಿಗಳು ಬಳಸಿಕೊಳ್ಳಲು ಪುಸ್ತಕ ಖರೀದಿ ಸೇರಿದಂತೆ ನಿಶ್ಚಯನಿಗಾಗಿ ದೀಪಾವಳಿ ಗಿಫ್ಟ್ ಕೊಡಲು ಒಂದು ಉತ್ತಮ ಕಾದಂಬರಿ ಆಯ್ಕೆ ಮಾಡುವ ಯೋಚನೆ ಅವಳ ಮನದಿಂದ ಜಾರಿ ಬಿದ್ದಿತ್ತು.
ಗೊತ್ತಿಲ್ಲದ ಅನಾಮಿಕನ ಕರೆ, ಗಂಡನ ಸಲಹೆಗಳು. ಪತ್ರಿಕೆಗಾಗಿ ಹಾಕಿಕೊಂಡಿರುವ ಮಹತ್ವದ ಯೋಜನೆಗಳು. ಎಲ್ಲವೂ ಇಷ್ಟೊಂದು ಗೊಂದಲ ಸೃಷ್ಟಿ ಮಾಡುತ್ತೆ ಅಂತ ಕನಸಿನಲ್ಲೂ ಭಾವಿಸಿರಲಿಲ್ಲ. ಅಂದುಕೊಂಡಂತೆಲ್ಲ ನಡೆಯದಿದ್ದರೆ ಸೋಲನ್ನು ಅನುಭವಿಸಬೇಕಾಗುತ್ತಲ್ಲ ಎಂಬ ಭೀತಿ ಸುಳಿದು ಹೋಯ್ತು. ನಾನಾ ಮಖವಾಡಗಳು ಹೊತ್ತ ಜನಸಂದಣಿಯಿಂದ ಮರೆಯಾಗುತ್ತಾ ಚಿಂತಿಸುತಿದ್ದಳು ನಿಶಾ.
ಅವಳ ನೋಟದಲ್ಲಿ ಒಂದು ಕ್ಷಣ ಜಗವೆಲ್ಲ ಕತ್ತಲುಮಯವಾಗಿ ಆವರಿಸಿಕೊಂಡಿತ್ತು. ಅಷ್ಟರಲ್ಲಿ ಅದ್ಯಾವುದೋ ಅಂಗಡಿ ಮುಂದೆ ಬೈಕ್ ನಿಂತಿತ್ತು. ತರಾವರಿ ಬಣ್ಣ ಬಣ್ಣದ ಬಟ್ಟೆಗಳು, ಕಣ್ಣು ಕೊರೆಸುವಂಥ ಸುಂದರ ಮುಖಗಳು, ಸ್ತಬ್ಧ ಚಿತ್ರಗಳ ನಡುವೆ. ಚಿತ್ರ ವಿಚಿತ್ರ ವ್ಯಕ್ತಿಗಳನ್ನು ದಾಟಿ ನಿಶಾಳ ಕೈ ಹಿಡಿದುಕೊಂಡು ನವೀನ್ ಬಟ್ಟೆ ಶೋರೂಂ ಒಂದರಲ್ಲಿ ಹೋದನು. ಗಾಜಿನ ಮನೆಯಲ್ಲಿ ಸೇರಿದ ಜನಗಳ ಅಸ್ಪಷ್ಟ ಚಿತ್ರಗಳಲ್ಲಿ ಇಬ್ಬರು ಮರೆಯಾಗಿದ್ದರು.
3
ಮನೆಗೆ ಹೋಗಲು ರಾತ್ರಿ ಎಂಟು ಗಂಟೆಯಾಗಿತ್ತು. ನಿಶಾಳಿಗೆ ಸಣ್ಣಗೆ ತಲೆ ನೋವು ಶುರುವಿಟ್ಟುಕೊಂಡಿತ್ತು. ಶಾಪಿಂಗ್ ಮುಗಿಸಿ ಬಂದ ಕೂಡಲೇ ಆಯಾಸವಾಗಿ ಮಂಚಕ್ಕೆ ಒರಗಿದಳು. ನವೀನ ಗೆಳೆಯ ವಿಶಾಲನ ಪಾಟರ್ಿಗೆ ಹೋಗಬೇಕೆಂದು ಒತ್ತಾಯಿಸಿದ. ಆದರೆ ಅದಕ್ಕೆ ನಿಶಾ ನಿರಾಕರಿಸಿದಳು.
ನವೀನ ನಾನೊಬ್ಬನೇ ಹೋಗ್ಬರ್ತಿನಿ. ಊಟ ಎಲ್ಲಾ ಅಲ್ಲೇ ಮುಗಿಸ್ಕೊಳ್ತಿನಿ. ನೀನು ಏನಾದರು ಊಟ ಮಾಡಿ ಮಲಗು ಎಂದು ಹೇಳಿ ಹೊರಟನು. ನಿದ್ದೆ ಹತ್ತದೇ ಹಾಗೆ ಹಾಸಿಗೆಯಲ್ಲಿ ಹೊರಳಾಡಿದಳು. ಊಟಕ್ಕೂ ಮನಸ್ಸಿಲ್ಲದೇ ಅನಾಮಿಕ ಕರೆಯಿಂದಾದ ಮನಸ್ಸಿನ ಕಿರಿ ಕಿರಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿದ್ದಳು. ರಾತ್ರಿ ಒಂಬತ್ತು ಗಂಟೆಯಾಗಿತ್ತು. ನಿಶ್ಚಿತ ಎಚ್ಚರ ಇರಬಹುದಾ ಎಂಬ ಏಣಿಕೆ ಶುರು ಮಾಡಿದಳು.
ಕಾಲ್ ಮಾಡಿ ನೋಡೋಣ. ಎಚ್ಚರಿದ್ದರೆ ರಿಸೀವ್ ಮಾಡ್ತಾರೆ. ಎಂದು ಅಂದಾಜಿಸಿದಳು. ಆ ದಿನವಿಡೀ ಎಲ್ಲೆಡೆ ದೀಪಾವಳಿ ಸಂಭ್ರಮ. ಪಟಾಕಿಗಳ ಸದ್ದು. ಮಕ್ಕಳು ಸಿಡಿಮದ್ದುಗಳನ್ನು ಹಾರಿಸುತ್ತಾ ಕೇಕೆ ಹಾಕುತ್ತಿರುವುದನ್ನು ಸಣ್ಣಗೆ ಹಕ್ಕಿಗಳ ಕಲರವದಂತೆ ಕೇಳಿ ಬರುತಿತ್ತು. ನಿಶ್ಚಿತನಿಗೆ ಮಾತಾಡುವ ತವಕದಲ್ಲಿ ಕಾಲ್ ಮಾಡಿದಳು.
ಆ ದಿನ ಯಾವುದೇ ಪ್ರಮುಖ ವರದಿಗಳು ಇಲ್ಲದ ಕಾರಣ ಹಾಗೂ ಪತ್ರಿಕಾ ಕಚೇರಿಗೆ ರಜಾ ದಿನವಾದ್ದರಿಂದ ಬೇಗನೆ ಮನೆಗೆ ಬಂದು ನಿಶ್ಚಿತ ಮಲಗಿ ಬಿಟ್ಟಿದ್ದ. ಆಗ ನಿಶಾಳ ಕಾಲ್ ರಿಸೀವ್ ಮಾಡಿದ್ದು ಅವನಲ್ಲ ಅವನ ಹೆಂಡತಿ ರಶ್ಮಿ.
ರಶ್ಮಿ ಹಲೋ….. ಹಲೋ…… ಯಾರ್ರೀ ಅದು..? ಫೋನ್ ಮಾಡ್ತಿರಾ ಮಾತಾಡಾಕ್ಕಾಗಲ್ವ.. ಎಂದು ಗದರಿಸಿದಳು. ಹೆಣ್ಣು ಧ್ವನಿ ಕೇಳಿ ನಿಶಾ ಮೌನವಾಗಿಯೇ ಇದ್ದು, ಕಾಲ್ ಕಟ್ ಮಾಡಿದಳು. ಕರೆ ಮಾಡಿದವರು ಉತ್ತರಿಸದಿರುವುದಕ್ಕೆ ರಶ್ಮಿ ಕೆರಳಿದಳು.
ರಶ್ಮಿ ಏನ್ರೀ… ನಿಮಗೆ ಯಾರದ್ದೋ ಕಾಲ್ ಬಂದಾದ್. ಮಾತಾಡ್ತಿಲ್ಲ. ಅದೇನು ಪರ್ಸನಲ್ ಅದಾನೋ ನೋಡ್ರಿ. ನಿಮ್ ಮೊಬೈಲ್ ನಾನೆತ್ತಿದ್ರ ಅದ್ಯಾವ ಮಾಯಾಂಗಿನಿಗಿ ಚಳಿ, ಜ್ವರ ಬಂದ್ ಬಿಡ್ತದೋ… ಎಂಬ ಹೆಂಡತಿಯ ಸಿಡುಕುತನಕ್ಕೆ ನಿಶ್ಚಯ ಎದ್ದನು.
ನಿಶ್ಚಯ ಏನೇ ನಿಂದು…? ಯಾವತ್ತಾದ್ರೂ ಒಂದಿನ ಬೇಗ ಮನೆಗ್ ಬಂದ್ರೂ ನೆಮ್ಮದಿಯಾಗಿ ಮಲಗಾಕ್ ಬಿಡಾಲ್ಲ. ಎಂದು ನಿದ್ದೆ ಮಂಪರಿನಲ್ಲಿ ಮೊಬೈಲ್ ಪಡೆದು ನೋಡಿ ಸ್ವಿಚ್ಛ್ ಆಫ್ ಮಾಡಿದನು.
ರಶ್ಮಿ ಅದ್ಯಾಕ್ ಫೋನ್ ಸ್ವಿಚ್ಛ್ಆಫ್ ಮಾಡಿದ್ರಿ…, ಅದ್ಯಾರಿದ್ದಾರ್ ನೋಡೇ ಬಿಡ್ತಿನಿ. ನಿಮ್ ಕಳ್ಳಾಟ ಏನಂತ ಇವತ್ತು ಗೊತ್ತಾಗಬೇಕು ನಂಗ್, ಆ ಸಣಕಲ್ ಮಚ್ಚು, ಲೇಖಕ ಅದಾನಲ್ಲ ನಿಮ್ ಗೆಳೆಯ. ಎಲ್ಲಾ ಹೇಳ್ಯಾನ್ ನಿಮ್ ಅನೈತಿಕ ಸಂಬಂಧದ ಬಗ್ಗೆ. ಪೇಪರ್ ಬೇರೆ ತೆಗದು ನೀವು ಇರೋಬರೋ ರೊಕ್ಕ ಎಲ್ಲಾ ಅವಳಿಗಿ, ಅವಳ್ ಸಂಸಾರಕ್ಕ ಕೊಡ್ತಿದ್ದಿರಿ ಅಂತ ಗೊತ್ತಾಗ್ಯದ ಎಂದಾಗ ಹೌಹಾರಿದನು.
ನಿಶ್ಚಯನ ಮಾತಿಗೆ ಅವಕಾಶ ಮಾಡಿಕೊಡದೇ ಬೈಗಳ ಪ್ರಹಾರ ಮತ್ತಷ್ಟು ಜೋರಾಗಿಸಿದಳು ರಶ್ಮಿ. ಎಷ್ಟ ದಿನದಿಂದ ನಡಿತೈತಿ ನಿಮ್ ಈ ಕಳ್ಳಾಟ. ಹಾಂ…! ಯಾರ್ರೀ ಆಕಿ ನಿಶಾ ಅನ್ನಾಕಿ…? ಕೊಡ್ರಿಲ್ಲಿ ನಾನೇ ಫೋನ್ ಮಾಡ್ತಿನಿ ಆಕಿಗಿ. ಅವಳಿಗ್ ಗಂಡ… ಮಕ್ಳು ಯಾರಿಲ್ಲೇನು….? ಅಂತ ಕೇಳ್ತಿನಿ. ಯಾವಾಗಂದ್ರ ಆವಾಗ. ರಾತ್ರಿ-ಹಗಲು ಸಿಕ್ಕ ಸಿಕ್ಕ ಗಂಡಂದಿರ ಮೊಬೈಲ್ಗಿ ಫೋನ್ ಮಾಡಾಕ್ಕ ಅವಳೇನು ವಿಶ್ವ ಸುಂದರಿಯೇನು? ಏನ್ ಹಕ್ಕಾಯಿತಿ ಅವಳಿಗಿ… ನನ್ ಸಂಸಾರದಾಗ ಬಂದು ಹೋಗಾದ್ಕ ಆಂ…!! ಎಂದು ಗದರಿದಳು
ಮೈಯಲ್ಲಿ ರೋಷ, ಆವೇಷ, ತುಂಬಿಕೊಂಡು, ಗಂಡನ ಬಗ್ಗೆ ಇಲ್ಲದ ಅಪವಾದ, ಅನುಮಾನಗಳು, ಹುಟ್ಟಲು ಕಾರಣ ಆ ಕಿತಾಪತಿಯ ಪಾತ್ರವೇ ಇಲ್ಲಿ ಪ್ರಮುಖವಾಗಿತ್ತು. ರಶ್ಮಿಯ ತಲೆಯಲ್ಲಿ ಕೂಡ ಕೊರೆಯುವ ಹುಳುವೊಂದು ಬಿಟ್ಟಿದ್ದು ಅದೇ ಸಣಕಲ್ ಮಚ್ಚು. ಒಂದು ಪವಿತ್ರ ಸ್ನೇಹ ಸಂಬಂಧಕ್ಕೆ ಕ್ಯಾನ್ಸರ್ ಪೀಡಿತನಾಗಿ ಎರಡು ಕುಟುಂಬಗಳ ಬಾಂಧವ್ಯವನ್ನು ಕಸಿದುಕೊಂಡು ಖುಷಿ ಪಡುತಿದ್ದನು.
ಗಂಡನೊಂದಿಗೆ ರಂಪಾಟ ಶುರು ಮಾಡುತ್ತಿದ್ದ ಸಂದರ್ಭದಲ್ಲಿ. ರಶ್ಮಿಯ ಮಾತಿನ ಚಕಮಕಿಯಲ್ಲಿ, ಬಿರುಸು ಬಾಣಗಳ ಮಧ್ಯೆ ಮೊಬೈಲ್ ಕಿತ್ತಾಟಕ್ಕೆ ನಿಶಾಳಿಗೆ ಡಯಲ್ಡ್ ಕಾಲ್ ಹೋಗಿತ್ತು…!! ಆದ್ದರಿಂದ ಎಲ್ಲವನ್ನು ನಿಶಾ ಕೇಳಿಸಿಕೊಂಡಿದ್ದಳು. ಪವಿತ್ರ ಸ್ನೇಹಕ್ಕೆ ಅನೈತಿಕ ಸಂಬಂಧದ ಕಲ್ಪನೆ, ನಿಶ್ಚಯನ ಹೆಂಡತಿ ರಶ್ಮಿಯ ಮಾತುಗಳಿಂದ ನಿಶಾಳ ಮನಸ್ಸನ್ನು ಘಾಸಿಗೊಳಿಸಿತ್ತು. ಅಂದಿನಿಂದ ನಿಶ್ಚಯನ ಸಂಪರ್ಕವೇ ಬೇಡವೆಂದು. ಅವನಿಲ್ಲದೇ, ಅವನ ಸಹಕಾರವಿಲ್ಲದೇ ಜೀವಿಸುವುದಕ್ಕೆ ನಿರ್ಧರಿಸಿದಳು.
ಸಣಕಲ್ ಮಚ್ಚು ಮತ್ತು ನಿಶ್ಚಯ ಸಾಹಿತ್ಯ, ಸಾಂಸ್ಕೃತಿಕ ಲೋಕದ ಸಮಕಾಲೀನ ಸ್ನೇಹಿತರಾಗಿದ್ದರು. ಇದಕ್ಕಾಗಿ ನಿಶ್ಚಯ ಹಂತ ಹಂತವಾಗಿ ಅಕ್ಷರ ಲೋಕದಲ್ಲಿ ಯಾರ ಆಸರೆಯೂ ಇಲ್ಲದೇ ಸ್ವ-ಸಾಮಥ್ರ್ಯದಿಂದ ಬೆಳೆಯುತ್ತಲೇ ಹೋಗುತ್ತಿದ್ದ. ಸಾಹಿತ್ಯ ಮತ್ತು ಮಾಧ್ಯಮ ಲೋಕದಲ್ಲಿ ನಿಶ್ಚಯನ ಸಾಧನೆ, ಬೆಳವಣಿಗೆ ಸಹಿಸದೇ ಅಪಪ್ರಚಾರದಲ್ಲಿ ತೊಡಗಿ, ನಿಶ್ಚಯನ ಗೌರವ ಬೀದಿಪಾಲು ಮಾಡುವ ಯೋಜನೆ ಪೂರ್ವಯೋಜಿತವಾಗಿತ್ತು.






0 Comments