ಸುಹಾನ್ ಷೇಕ್
ಅವನಿಗೇನು ತಿಳಿಯದು
ಅವನೀಗ ಏಳರ ಪೋರ
ಅವನ ಕಣ್ಣ ಮುಂದೆಯೇ
ತನ್ನ ಕಾಶ್ಮೀರ ಕಲ್ಮಶ ಆಗುತ್ತಿದೆ
ಆದ್ರೆ ಅವನಿಗೇನು ತಿಳಿಯದು
ಅವನೀಗ ಏಳರ ಪೋರನಷ್ಟೇ
ಅವನಿಗೇನು ತಿಳಿಯದು
ತನ್ನ ಊರಿನಲ್ಲಿ ಸದಾ ಗೂರ್ಖಾರಂತೆ
ಗನ್ ಹಿಡಿದು ಸಾಗುವ ಪೊಲೀಸರನ್ನು
ಕಂಡಾಗ ಅವನಿಗೇನು ತಿಳಿಯದು
ಅವನೀಗ ಏಳರ ಪೋರನಷ್ಟೇ
ಅವನಿಗೇನು ತಿಳಿಯದು
ಚೆಂಡುಗಳನ್ನು ಹಿಡಿದು ದೂರ
ಎಸೆದು ಬಿಡುವ ಕೈಗಳಲ್ಲಿ
ಕಲ್ಲು ಹಿಡಿದು ಗಗನಚುಂಬಿ ಎತ್ತರದ
ದೂರಕ್ಕೆ ಬಿಸಾಕಿ ‘ಮುರ್ದಾಬಾದ್’
ಘೋಷಣೆ ಗಟ್ಟಿಯಾಗಿ ಕೂಗುವಾಗ
ಅವನಿಗೇನು ತಿಳಿಯದು ಅವನೀಗ
ಏಳರ ಪೋರನಷ್ಟೇ
ಅವನಿಗೇನು ತಿಳಿಯದು
ಬಾಂಬ್ ಗಳ ದೊಡ್ಡ ಶಬ್ದ ಕೇಳಿದಾಗ
ಸೈರನ್ ವಾಹನದ ವೇಗ ಕಾಣುವಾಗ
ಎಲ್ಲರ ಮನೆಯ ಬಾಗಿಲು ಮುಚ್ಚಿದಾಗ
ಗುಸು ಗುಸು ಚರ್ಚೆಯಾದಾಗ
ರೇಡಿಯೋ ಇಟ್ಟು ಎಲ್ಲರೂ ಕೇಳಿದಾಗ
ಅವನಿಗೇನು ತಿಳಿಯದು ಅವನೀಗ
ಏಳರ ಪೋರನಷ್ಟೇ

ಅವನಿಗೇನು ತಿಳಿಯದು
ಅಮ್ಮಿ ಜೋರಾಗಿ ರಕ್ಷಿಸು ಅಲ್ಲಾಃ ಎಂದು ದುಃಆ ಮಾಡುತ್ತಾ ಕಣ್ಣೀರು ಇಟ್ಟಾಗ
ಅಪ್ಪ ಇಕ್ಬಾಲ್ ಚಾಚನ ಬಳಿ
ಯುದ್ಧ ಭೀತಿಯ ಬಗ್ಗೆ ಮಾತನಾಡಿದಾಗ
ಅಕ್ಕ ಕಾಲೇಜು ರಜಾ ಹಾಕಿ ಕೂತಾಗ
ಅವನಿಗೇನು ತಿಳಿಯದು ಅವನೀಗ ಏಳರ ಪೋರನಷ್ಟೇ
ಅವನಿಗೇನು ತಿಳಿಯದು
ಸೆಕ್ಷನ್ 144 ಜಾರಿಯಾದಾಗ
ಕರ್ಫ್ಯೂ ಅಡಿಯಲ್ಲಿ ತನ್ನ ಊರು ಇದ್ದಾಗ
ಆಶ್ರುವಾಯು ಪ್ರಯೋಗವಾದಾಗ
ಲಾಠಿ ಚಾರ್ಜ್ ಮಾಡಿದಾಗ
ಅವನಿಗೇನು ತಿಳಿಯದು ಅವನೀಗ
ಏಳರ ಪೋರನಷ್ಟೇ
ಅವನಿಗೇನು ತಿಳಿಯದು
ಸ್ವರ್ಗ ಸಾಮ್ರಾಜ್ಯದಲ್ಲಿ
ಗುಂಡಿನ ದಾಳಿಗೆ ಧರೆಗುರುಳಿ
ಬೀಳುವ ಯೋಧರ ಕಳೆಬರಹವನ್ನು
ಕಂಡಾಗ ಅವನಿಗೇನು ತಿಳಿಯದು
ಅವನೀಗ ಘೋರತೆ ಅರಿಯದ ಏಳರ
ಪೋರನಷ್ಟೇ
ಅವನಿಗೇನು ತಿಳಿಯದು
ಚೆಂಡುಗಳನ್ನು ಹಿಡಿದು
ಆಡುವ ಬಯಕೆ ಅವನಿಗೆ
ಏನೇ ಮಾಡಿದರೂ ಹೊರಗೆ
ಕೆಂಪು ಸೈರನ್ ಹೊಡೆಯುತ್ತಲೇ ಇದೆ
ಅವನಿಗೆ ತಿಳಿಯದು ಇಂದು ನಿಷೇಧಾಜ್ಞೆಯೆಂದು ಅವನೀಗ
ಏಳರ ಪೋರನಷ್ಟೇ
ಅವನಿಗೇನು ತಿಳಿಯದು






ಆಪ್ತವಾದ ಕವಿತೆ