ಅವಧಿ recommends ಸ್ಪಾಟ್ ಲೈಟ್

Harish kera

ಹರೀಶ್ ಕೇರ 

ಪ್ರತಿ ಬಾರಿಯೂ, ಆಸ್ಕರ್ ಪ್ರಶಸ್ತಿಗಳ ಪಟ್ಟಿಯಲ್ಲಿ ನಮ್ಮ ಚಿತ್ರಗಳು ಇಲ್ಲದೆ ಹೋದಾಗ, ‘ಆಸ್ಕರ್ ಮಾನದಂಡವೇ ಬೇರೆ, ನಮ್ಮ ಚಿತ್ರಗಳ ಸ್ವರೂಪವೇ ಬೇರೆ’ ಎಂದು ದ್ರಾಕ್ಷಿ ಹುಳಿ ಮುಖ ಮಾಡಿಕೊಳ್ಳುತ್ತೇವೆ. ಈ ಚಿತ್ರ ಆಸ್ಕರ್ ಗೆದ್ದಿರಲು ಕಾರಣವೇನು, ಅದರ ಆಯ್ಕೆಯ ಹಿನ್ನೆಲೆಯಲ್ಲಿ ಯಾವುದಾದರೂ ಜಾಗತಿಕ ರಾಜಕಾರಣ ಇದೆಯಾ, ಪ್ರಸ್ತುತ ವಿದ್ಯಮಾನಗಳಿಗೂ ಅದಕ್ಕೂ ಸಂಬಂಧವೇನು, ಇದರಿಂದ ಒತ್ತಿ ಹೇಳಿದಂತಾಗುವ ಸಂದೇಶ ಯಾವುದು- ಈ ಪ್ರಶ್ನೆಗಳನ್ನು ಕೇಳಿಕೊಂಡರೆ ಮಾತ್ರವೇ ಆಸ್ಕರ್ ಆಯ್ಕೆಯ ಅರ್ಥಪೂರ್ಣತೆ ಗೊತ್ತಾಗುತ್ತದೆ.

spotlight1ಈ ಸಲ ಅತ್ಯುತ್ತಮ ಎಂದು ಆಸ್ಕರ್ ಪಡೆದದ್ದು ಟಾಮ್ ಮೆಕಾರ್ಥಿ ನಿರ್ದೇಶನದ ‘ಸ್ಪಾಟ್‌ಲೈಟ್’ ಚಲನಚಿತ್ರ, ತನಿಖಾ ಪತ್ರಿಕೋದ್ಯಮದ ಬಗ್ಗೆಯೇ ಇರುವಂಥದು. ‘ಸ್ಪಾಟ್‌ಲೈಟ್’ ಎಂಬುದು ‘ದಿ ಬೋಸ್ಟನ್ ಗ್ಲೋಬ್’ ಎಂಬ ದಿನಪತ್ರಿಕೆಯ ತನಿಖಾ ವರದಿಗಾರಿಕೆ ತಂಡ. 2001ರಲ್ಲಿ, ವಾಲ್ಟರ್ ರಾಬಿನ್ಸನ್ ಎಂಬ ಹಿರಿಯ ವರದಿಗಾರನ ನೇತೃತ್ವದ ನಾಲ್ಕು ಮಂದಿ ರಿಪೋರ್ಟರ್‌ಗಳ ತಂಡ ಕ್ಯಾಾಥೊಲಿಕ್ ಚರ್ಚ್ ವ್ಯವಸ್ಥೆಯಡಿ ಫಾದರ್‌ಗಳಿಂದ ನಡೆಯುತ್ತಿರುವ ಮಕ್ಕಳ ಲೈಂಗಿಕ ದೌರ್ಜನ್ಯದ ಬೆನ್ನು ಬಿದ್ದು, ಅದರ ಬೃಹತ್ ಪ್ರಮಾಣವನ್ನು ಆಧಾರ ಸಮೇತ ಬಿಚ್ಚಿಡುತ್ತದೆ. ಪರಿಣಾಮವಾಗಿ, ಬೋಸ್ಟನ್‌ನ ಕಾರ್ಡಿನಲ್ ತಪ್ಪೊಪ್ಪಿಗೆ ಸಲ್ಲಿಸಿ ರಾಜೀನಾಮೆ ನೀಡಬೇಕಾಗುತ್ತದೆ. ಚರ್ಚ್ ವ್ಯವಸ್ಥೆೆಯನ್ನು ಆಮೂಲಾಗ್ರ ಶುದ್ಧೀಕರಿಸಲು ಪೋಪ್ ಮುಂದಾಗುತ್ತಾಾರೆ. ಈ ನಿಜಘಟನೆಗಳ ಸರಣಿಯನ್ನು ಯಾವ ಅತಿರೇಕಗಳಿಲ್ಲದೆ, ಹೀರೋಗಿರಿಗಳಿಲ್ಲದೆ, ಚಲನಚಿತ್ರಕ್ಕೆ ಬೇಕೇ ಬೇಕೆಂದು ನಾವು ಭಾವಿಸಿರುವ ಮೆಲೊಡ್ರಾಮಾಗಳಿಲ್ಲದೆ ಸ್ಕ್ರಿಪ್ಟ್ ರೈಟರ್ ಮತ್ತು ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ.

‘ಅದುವರೆಗೆ ನಾವು ಭ್ರಷ್ಟಾಚಾರ, ರಿಯಲ್ ಎಸ್ಟೇಟ್ ಮುಂತಾದವುಗಳನ್ನು ಕವರ್ ಮಾಡಿದ್ದೆವು. ಆದರೆ ಚರ್ಚ್! ಇಲ್ಲ’ ಎನ್ನುತ್ತಾನೆ ಸ್ಪಾಟ್‌ಲೈಟ್ ಟೀಮಿನ ಸದಸ್ಯ ರಾಬಿನ್ಸನ್. ನಮ್ಮಲ್ಲಿ ಮಠ ವ್ಯವಸ್ಥೆಯ ಕುರಿತು ತನಿಖಾ ವರದಿ ಮಾಡುವುದು ಹೇಗೆ ಸಾಧ್ಯವಿಲ್ಲವೋ ಹಾಗೇ ಚರ್ಚ್ ಬಗ್ಗೆ ಅಮೆರಿಕ ಮತ್ತು ಯುರೋಪ್‌ನಲ್ಲಿ. 2001ರಲ್ಲಿ ಪತ್ರಿಕೆಯ ಹೊಸ ಸಂಪಾದಕನಾಗಿ ನೇತೃತ್ವ ವಹಿಸಿಕೊಂಡ ಮಾರ್ಟಿನ್ ಬ್ಯಾರನ್, ಒಬ್ಬ ಪಾದ್ರಿಯಿಂದ ನಡೆದ ಲೈಂಗಿಕ ಶೋಷಣೆ ಪ್ರಕರಣದ ಬೆನ್ನು ಹತ್ತಲು ಸ್ಪಾಟ್‌ಲೈಟ್ ತಂಡಕ್ಕೆೆ ಸೂಚನೆ ನೀಡುತ್ತಾಾನೆ. ಬೋಸ್ಟನ್ ಗ್ಲೋಬ್ ಎಂಬ ಪತ್ರಿಕೆಯ ಒಳಗೇ ಇನ್ನೊಂದು ಸ್ವಾಯತ್ತ ಸಂಸ್ಥೆೆಯಂತಿರುವ, ಮುಖ್ಯ ಸಂಪಾದಕರ ನಿರ್ದೇಶನವನ್ನೂ ಪಾಲಿಸದೆ ತನ್ನಷ್ಟಕ್ಕೆೆ ಕಾರ್ಯಾಚರಿಸಬಹುದಾದ ಸ್ವಾತಂತ್ರ್ಯವಿರುವ ‘ಸ್ಪಾಟ್‌ಲೈಟ್’ನ ಘನತೆ ಕಾಯ್ದುಕೊಂಡೇ ಹೊಸ ಸಂಪಾದಕ ಈ ಸೂಚನೆ ನೀಡುವ ದೃಶ್ಯ ಕುತೂಹಲಕರವಾಗಿದೆ.

spotlight movie director Tom McCartyಸಮುದ್ರದ ಮೇಲೆ ಕಾಣಿಸುವ ನೀರ್ಗಲ್ಲಿನ ತುದಿ, ನೀರಿನಾಳದಲ್ಲಿ ಹೇಗೆ ಅದರ ಸಾವಿರಪಟ್ಟು ಅಗಾಧವಾಗಿ ಇರಬಹುದೋ ಹಾಗೆ, ಈ ಲೈಂಗಿಕ ಶೋಷಣೆಯ ಪರಿ ಹಬ್ಬಿರುವುದನ್ನು ಕಂಡು ಸ್ಪಾಟ್‌ಲೈಟ್ ಟೀಮ್ ಚಕಿತವಾಗುತ್ತದೆ. ಶೋಷಣೆ ಎಸಗಿದ ಫಾದರ್‌ನನ್ನು ಆಚೆಗಿಡಲು ಕ್ಯಾಥೊಲಿಕ್ ಚರ್ಚ್ ರಿಜಿಸ್ಟರ್‌ನಲ್ಲಿ ‘ಸಿಕ್ ಲೀವ್’ ಎಂಬ ಕಾರಣ ನಮೂದಾಗಿರುತ್ತದೆ. ಇದು ತನಿಖೆಯ ಪ್ರಮುಖ ಕೊಂಡಿಗಳಲ್ಲೊಂದು. ಈ ‘ಸಿಕ್ ಲೀವ್’ನ ಬಾಲ ಹಿಡಿದು ಹೋದ ತಂಡಕ್ಕೆ ಇಡೀ ಬೋಸ್ಟನ್‌ನಲ್ಲಿರುವ 1500 ಫಾದರ್‌ಗಳಲ್ಲಿ ಸುಮಾರು 90 ಮಂದಿ ಹೀಗೆ ಶಿಶುಕಾಮಿಗಳಾಗಿರಬಹುದು ಎಂಬ ಅಂದಾಜು ಸಿಗುತ್ತದೆ. ಒಬ್ಬೊಬ್ಬ ಫಾದರ್ ಕೂಡ ಹತ್ತಾರು ಶಿಶುಗಳನ್ನು ಹೀಗೆ ಶೋಷಿಸಿರಬಹುದು ಎಂದಿಟ್ಟುಕೊಂಡರೂ, ಪೀಡಿತರ ಸಂಖ್ಯೆ ಹತ್ತಿರ ಸಾವಿರ ಮುಟ್ಟುತ್ತದೆ. ಈ ಪರಿಯ ಕರಾಳತೆ ಇಡೀ ಚರ್ಚ್ ವ್ಯವಸ್ಥೆೆಗೇ ಗೊತ್ತಿದ್ದರೂ, ಮಕ್ಕಳ ಹೆತ್ತವರಿಂದ ದೂರು ಬಂದಾಗ ಅದನ್ನು ‘ಧಾರ್ಮಿಕ ಭಾವನೆ’ ‘ಶ್ರದ್ಧೆ’ಯ ಹೆಸರಿನಲ್ಲಿ ಮುಚ್ಚಿ ಹಾಕುವುದು, ಫಾದರ್‌ಗೆ ಸಿಕ್ ಲೀವ್ ಕೊಟ್ಟು ಕಳುಹಿಸುವುದು ಮಾಡುತ್ತದೆ.

ಈ ಸಂದರ್ಭದಲ್ಲಿ ಮಾರ್ಟಿನ್ ಬ್ಯಾರನ್ ತಾಳುವ ನಿಲುವು ಇಷ್ಟವಾಗುತ್ತದೆ. ‘ಶಿಶುಪೀಡಕ ಪಾದ್ರಿಗಳ ಬಗ್ಗೆ ಬರೆಯುವುದಕ್ಕಿಂತಲೂ, ಇದಕ್ಕೆ ಅವಕಾಶ ಮಾಡಿಕೊಟ್ಟ ವ್ಯವಸ್ಥೆಯ ಬಗ್ಗೆ ಬರೆಯಿರಿ’ ಎಂಬ ಸೂಚನೆ ನೀಡುತ್ತಾನೆ ಆತ. ಒಬ್ಬ ಅಥವಾ ಇಬ್ಬರ ಬಗ್ಗೆ ಬರೆದರೆ ಅವರಷ್ಟೇ ಸಿಕ್ಕಿಬೀಳುತ್ತಾಾರೆ, ವ್ಯವಸ್ಥೆ ಹಾಗೇ ಇರುತ್ತದೆ. ಇದನ್ನು ಅರಿತ ಸ್ಪಾಟ್‌ಲೈಟ್ ತಂಡ ಚರ್ಚ್ ವ್ಯವಸ್ಥೆೆಯನ್ನೇ ತಡವಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ತಂಡದ ಸದಸ್ಯರು ಮೆರೆಯುವ ವೃತ್ತಿ ನಿಷ್ಠೆ, ಸಾವಿರಾರು ಪುಟಗಳಷ್ಟು ದಾಖಲೆಗಳನ್ನು ಮುಂದೆ ಹರವಿಕೊಂಡು ತಲೆ ಕೆಡುವವರೆಗೆ ನಡೆಸುವ ಶೋಧ, ತನಿಖೆಯ ಕೊನೆಯ ಹಂತಗಳಲ್ಲಿ ಅನುಭವಿಸುವ ಉದ್ವೇಗ, ವರದಿ ತಾತ್ಕಾಲಿಕವಾಗಿ ಮುಚ್ಚಿಡಬೇಕಾಗಿ ಬಂದಾಗ ಅನುಭವಿಸುವ ಆತಂಕ ಇವೆಲ್ಲ ಚಿತ್ರದಲ್ಲಿ ಸೊಗಸಾಗಿ ಬಿಂಬಿತವಾಗಿವೆ.

ಪೀಡಿತರು ತಮ್ಮ ಕತೆಗಳನ್ನು ಹೇಳುವಾಗ ಮರಳಿ ಅನುಭವಿಸುವ ನೋವು ನಮಗೂ ಮುಟ್ಟುವಂತಿದೆ. 2001ರಲ್ಲಿ ಜಗತ್ತನ್ನು ಅಲುಗಾಡಿಸಿದ ಘಟನೆ, ವಿಶ್ವ ವಾಣಿಜ್ಯ ಸಂಸ್ಥೆಯ ಮೇಲಿನ ವಿಮಾನ ದಾಳಿಯ ವೇಳೆ, ಸ್ಪಾಟ್‌ಲೈಟ್ ತಂಡ ಆಗಲೇ ತಯಾರಿಸಿದ ವರದಿಯನ್ನು ಬದಿಗಿಡಬೇಕಾಗುತ್ತದೆ. ಕೊನೆಗೂ ವರದಿ ಪ್ರಕಟವಾದಾಗ ಅದು ಅಲ್ಲೋಲ ಕಲ್ಲೋಲ ಸೃಷ್ಟಿ ಸುತ್ತದೆ. ಸಂತ್ರಸ್ತರೆಲ್ಲ ಚರ್ಚ್ ವಿರುದ್ಧ ಒಟ್ಟಾಗುತ್ತಾರೆ, ಪ್ರತಿಭಟನೆಗಳಾಗುತ್ತವೆ, ಕಾರ್ಡಿನಲ್ ರಾಜೀನಾಮೆ ನೀಡುತ್ತಾರೆ.

ಚಿತ್ರ ಪತ್ರಿಕೋದ್ಯಮದ ಎರಡು ಮುಖ್ಯ ಮೌಲ್ಯಗಳನ್ನು ನಮಗೆ ಮುಟ್ಟಿಸುತ್ತದೆ: ಒಂದು, ಈ ವೃತ್ತಿ ನಿರತರಿಗೆ ಇರಬೇಕಾದ ಸಾಮಾಜಿಕ ಬದ್ಧತೆ. ಎರಡು, ವಿವರಗಳು ಹಾಗೂ ಆಧಾರಗಳನ್ನು ನೂರು ಶೇಕಡ ನಿಖರಪಡಿಸಿಕೊಳ್ಳಬೇಕಾದ ಅಗತ್ಯ. ಈ ಎರಡೂ ಮೌಲ್ಯಗಳು ಇಂದು ಹೇಗೆ ಪಾಲನೆಯಾಗುತ್ತಿವೆ ಅಥವಾ ಆಗುತ್ತಿಲ್ಲವೆ ಎಂಬುದು ಬೇರೆಯದೇ ಚರ್ಚೆ.

boston globe newspaper office
ವಾಟರ್‌ಗೇಟ್ ಹಗರಣದ ಬಗ್ಗೆ ಬಂದ ‘ಆಲ್ ದಿ ಪ್ರೆಸಿಡೆಂಟ್ಸ್ ಮೆನ್’ ಚಿತ್ರದಂತೆಯೇ ಇದೂ ಕೂಡ ತನಿಖಾ ಪತ್ರಿಕೋದ್ಯಮದ ಪಾಠ ಹೇಳುವ ಚಿತ್ರ. ‘ಬೋಸ್ಟನ್ ಗ್ಲೋಬ್’ನಂತೆಯೇ ವಾಟರ್‌ಗೇಟ್ ಪ್ರಕರಣವನ್ನು ಪ್ರಕಟಿಸಿದ ‘ವಾಷಿಂಗ್ಟನ್ ಪೋಸ್ಟ್’ ಕೂಡ ಈ ಮೌಲ್ಯಗಳನ್ನು ಬೇರುಮಟ್ಟದಲ್ಲಿ ರೂಢಿಸಿಕೊಂಡ ಇನ್ನೊಂದು ದೊಡ್ಡ ಪತ್ರಿಕೆ.

ಈ ಮೌಲ್ಯಗಳನ್ನು ಸ್ವತಃ ಬೋಸ್ಟನ್ ಗ್ಲೋಬ್‌ಗೇ ನೂರು ಶೇಕಡಾ ಪರಿಪಾಲಿಸುವುದಕ್ಕೆೆ ಸಾಧ್ಯವಾಗಿದೆಯೆ? ಯಾಕೆಂದರೆ ಆದರ್ಶಗಳನ್ನು ನೂರಕ್ಕೆೆ ನೂರು ಆಚರಿಸುವುದು ಕಷ್ಟ. ಗ್ಲೋಬ್ ಕೂಡ ಅನೇಕ ಬಾರಿ ಮುಗ್ಗರಿಸಿದೆ. 2005ರಲ್ಲಿ ಸೀಲ್ ಪ್ರಾಾಣಿಗಳ ಮಾರಣಹೋಮದ ಬಗ್ಗೆ ಅದು ಒಂದು ವರದಿಯನ್ನು ಪ್ರಕಟಿಸಿತು. ಬಾರ್ಬರಾ ಸ್ಟೀವರ್ಟ್ ಎಂಬ ಫ್ರೀಲಾನ್ಸ್ ವರದಿಗಾರ್ತಿ ಕಳುಹಿಸಿದ ಕಳುಹಿಸಿದ ಈ ವರದಿ, ಸಂಪೂರ್ಣ ಸುಳ್ಳಾಾಗಿತ್ತು. ಸೀಲ್ ಬೇಟೆಯ ಆಚರಣೆ ನಡೆಯಲಿದೆ ಎಂಬ ಊಹಾಪೋಹ ಆಧರಿಸಿ ಬರೆದಿದ್ದ ಈ ವರದಿಯನ್ನು ಗ್ಲೋಬ್ ನಂಬಿ ಪ್ರಕಟಿಸಿತ್ತು. ಇಂಥದೊಂದು ಘಟನೆ ನಡೆದಿರಲೇ ಇಲ್ಲ ಎಂದು ಗೊತ್ತಾದ ಬಳಿಕ ಪತ್ರಿಕೆ ಈ ಲೇಖಕಿಯನ್ನು ತನ್ನ ಕೆಲಸದಿಂದ ಉಚ್ಛಾಾಟಿಸಿ, ಬಹಿರಂಗ ಕ್ಷಮೆ ಕೇಳಿತು. ‘ತಾವು ವರದಿಯನ್ನು ಕ್ರಾಸ್ ಚೆಕ್ ಮಾಡಿರಲಿಲ್ಲ’ ಎಂದು ಸಂಪಾದಕರು ಒಪ್ಪಿಕೊಂಡರು. ಆ ಮಟ್ಟಿಗೆ ತನ್ನ ವೃತ್ತಿಗೆ ಬದ್ಧತೆಯನ್ನು ಅದು ಮೆರೆಯಿತು.

ತನಿಖಾ ಪತ್ರಿಕೋದ್ಯಮವೆಂಬುದು ಬಹಳ ನಾಜೂಕಾದದ್ದು. ಅಲ್ಲಿ ಮಾಹಿತಿದಾರರೇನೋ ಇರುತ್ತಾರೆ; ಆದರೆ ಈ ಮಾಹಿತಿದಾರರ ಹಿತಾಸಕ್ತಿ ಏನು ಎಂಬುದು ಗೊತ್ತಾಗದೆ ಮುಂದುವರಿಯುವಂತಿಲ್ಲ. ಯಾವ ಮಾಹಿತಿದಾರನನ್ನೂ ನೂರಕ್ಕೆ ನೂರು ನಂಬುವಂತೆಯೂ ಇಲ್ಲ. ಆತ ಹೇಳಿದುದಕ್ಕಿಂತ ಮುಚ್ಚಿಟ್ಟದ್ದೇ ಹೆಚ್ಚಾಗಿರುತ್ತದೆ. ಅದನ್ನು ಹೊರತೆಗೆಯಬೇಕಾದ ಹೊಣೆ ಪತ್ರಕರ್ತನದೇ. ಮತ್ತೆ ಅದೂ ಶೆರ್ಲಾಕ್ ಹೋಮ್ಸ್ ಕೆಲಸದಂತೆ ರೋಚಕವಾಗಿಯೇನೂ ಇರುವುದಿಲ್ಲ. ಇಕ್ಕಳ ಹಾಕಿದರೂ ಬಾಯಿ ಬಿಡದ ಪೊಲೀಸರು, ವಕೀಲರು, ಅಧಿಕಾರಿಗಳು ಮುಂದೆ ಪರದಾಡಬೇಕಾಗುತ್ತದೆ; ಮುಖದ ಮೇಲೇ ರಪ್ಪನೆ ಬಾಗಿಲು ಹಾಕಿಸಿಕೊಳ್ಳಬೇಕಾಗುತ್ತದೆ; ಭಂಡರ ಮುಂದೆ ಮತ್ತಷ್ಟು ಭಂಡನಾಗಿ ತೋರಿಸಿಕೊಂಡೂ ಅಂತರಂಗದಲ್ಲೊೊಂದು ಪ್ರಾಮಾಣಿಕತೆಯ ಒರತೆ ಜಿನುಗಿಸಿಕೊಳ್ಳಬೇಕಾಗಿರುತ್ತದೆ. ಜತೆಗೆ, ಕಲೆಹಾಕಿದ ದಾಖಲೆಗಳನ್ನು ಹತ್ತಾರು ಬಾರಿ ಒರೆಗೆ ಹಾಕಿ ತೀಡಬೇಕಾಗುತ್ತದೆ. ಇದನ್ನೆಲ್ಲ ಈ ಚಿತ್ರ ಚೆನ್ನಾಗಿ ಹೇಳಿದೆ.

spotlight3ಇಂದು ಪತ್ರಕರ್ತರಿಗೆ ದಾಖಲೆಗಳಿಗೇನೂ ಬರವಿಲ್ಲ. ದಾಖಲೆಗಳನ್ನು ಸೃಷ್ಟಿಸಿ ಆನ್‌ಲೈನ್‌ನಲ್ಲಿ ಒದಗಿಸುವ ದಂಧೆಯನ್ನೇ ಮಾಡುವವರೂ ಹುಟ್ಟಿಕೊಂಡಿದ್ದಾರೆ. ನಾಲ್ಕಾರು ವರ್ಷ ಫೀಲ್ದ್ ನಲ್ಲಿದ್ದರೆ ಸಾಕಷ್ಟು ಮಾಹಿತಿದಾರರೂ ದೊರೆತಿರುತ್ತಾರೆ. ಆದರೆ ಸಿಕ್ಕಿದ ದಾಖಲೆಗಳು ಸಂಪೂರ್ಣ ನಿಜವಾ, ಇವುಗಳನ್ನು ಇಟ್ಟುಕೊಂಡು ದೊಡ್ಡದೊಂದು ವ್ಯವಸ್ಥೆಯ ಬೆನ್ನು ಹತ್ತಿ ಹೋಗಬಹುದಾ ಇಲ್ಲವಾ ಎಂದು ತರ್ಕಿಸುವ ಜಾಣ್ಮೆ ಆತನಿಗೇ ಇರಬೇಕು. ಅದಿಲ್ಲದೆ ಹೋದಾಗಲೇ ಕಸ ಗುಡಿಸುತ್ತಿರುವ ಮೋದಿಯವರ ಚಿತ್ರ, ದೇಶದ್ರೋಹದ ಘೋಷಣೆ ಕೂಗುತ್ತಿರುವ ಕನ್ಹಯ್ಯನ ವಿಡಿಯೋಗಳೇ ಚಾನೆಲ್‌ಗಳ ಪಾಲಿಗೆ ಪರಮ ಪ್ರಸಾದವಾಗಿ ಪ್ರೈಮ್ ಟೈಮ್ ತಿನ್ನುತ್ತವೆ. ದೇಶದ ಜನತೆಯ ಅಮೂಲ್ಯ ಸಮಯ ಹಾಳಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಶಾಶ್ವತ ತಪ್ಪುಗಳನ್ನು ಬಿತ್ತಿದಂತಾಗುತ್ತದೆ.

ಸ್ಪಾಾಟ್‌ಲೈಟ್ ಚಿತ್ರ ಈ ವಿಚಾರವನ್ನು ನೇರವಾಗಿ ಹೇಳದೆಯೂ ಹೇಳಿದಂತಿದೆ: ವಿಶ್ವಾಸಾರ್ಹ ಪತ್ರಿಕೋದ್ಯಮಕ್ಕೆ ಯಾವತ್ತೂ ಬೇಡಿಕೆಯಿದೆ. ಅದು ಅದರ ನಿಖರತೆ ಮತ್ತು ಸತ್ಯವನ್ನು ಹೇಳುವ ಛಾತಿಯಿಂದಾಗಿ ವಿಶ್ವಮಾನ್ಯವಾಗುತ್ತದೆ. ಸತ್ಯ ಹೊರಬೀಳುವುದು ಕೊಂಚ ತಡವಾಗಬಹುದು, ಆದರೆ ಅದಕ್ಕೆ ಬೆಲೆಯಿದ್ದೇ ಇದೆ. ಹಾಗಾಗಿಯೇ ಎಡ್ವರ್ಡ್ ಸ್ನೋಡೆನ್ ಮತ್ತು ಜೂಲಿಯನ್ ಅಸ್ಸಾಂಜೆ ಮೂಲತಃ ಪತ್ರಕರ್ತರಲ್ಲದಿದ್ದರೂ ಪತ್ರಕರ್ತರಿಗೆಲ್ಲ ಮಾದರಿಯಾದವರು.

‍ಲೇಖಕರು admin

March 12, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: