ದುರ್ಗಾಷ್ಟಮಿ..
-ರಂಜನಿ ಪ್ರಭು
ಗೋಧೂಳಿ ವೇಳೆಯಲಿ
ಸಂಪಿಗೆಯ ಮರದ ಬಳಿ
ಘಮ್ಮೆನುತ
ನಿಂತವಳೇ
ಬೆಳುದಿಂಗಳಿರುಳಲ್ಲಿ
ನೈದಿಲೆಯ ಕೊಳದ ಬಳಿ
ಕಿಲಕಿಲನೆ ನಕ್ಕವಳೇ
ಉರಿತೇರನೆಳೆಯುವ
ವೈಶಾಖ ಬೀದಿಯಲಿ
ಥಣ್ಣನೆಯ ಮುಗಿಲ ಕೊಡೆ ಬಿಡಿಸಿದವಳೇ
ಗಾಳಿಯಲಿ ಬಳುಕುತಿಹ ಬೆಳೆದ ಪೈರುಗಳಿಗೆ
ಸವಿಯಾದ ತೆನೆಹಾಲ ಕುಡಿಸಿದವಳೇ
ಶ್ರಾವಣದ ತುಂತುರಿನ
ಕೊರೆಯುವಾ
ಚಳಿಯಲ್ಲಿ
ಬಿಗಿದಪ್ಪಿ
ಹಸಿರಂಗಿ ತೊಡಿಸಿದವಳೇ
ಮಾಗಿ ಮರಗಳ ಕೊಂಬೆ ಬರಿದಾಗಿಸುವ
ನೆವದಿ ಚೆಲುವಿನಾ
ಮದವನ್ನು ಕೆಡಿಸಿದವಳೇ
ಗಿರಿಶಿಖರದ ಮೇಲೆ
ನದಿಯ ದಂಡೆಯ ಬಳಿ
ಕಾಡಿನಾ ಸೆರಗಲ್ಲಿ
ಶಿಲೆಯಾಗಿ ನಿಂತವಳೇ
ಕೊಳಲ ಉಸಿರಿನ ಲಯದಿ ನೂಪುರದ
ಲಾಸ್ಯದಲಿ
ವಾದ್ಯಗಳ ಘೋಷದಲಿ ಕಾವ್ಯದಾ
ಓಘದಲಿ
ಕಲೆಯಾಗಿ ಅರಳಿದವಳೇ
ಬಾ ಬಾ
ನಿಟ್ಟುಸಿರ ತೊಟ್ಟಿಲಿಗೆ
ಕಂಬನಿಯ
ಬಟ್ಟಲಿಗೆ
ಕಟ್ಟಿರುವ ಶ್ವಾಸಕ್ಕೆ
ಸಾಂತ್ವನದ ದನಿಯಾಗಿ ಬಾ
ಮೆಟ್ಟಿರುವ ದರ್ಪವನು
ಭ್ರಷ್ಟತೆಯ ಪಟ್ಟವನು
ಶೋಷಣೆಯ ಚಟ್ಟವನು
ದಮನಿಸಲು
ಬಾ
ಅವಧಿ ಮೀರುವ
ಮುನ್ನ
ಸಿಡಿಲಾಗಿ ಬಾ
ಬಾ ಬಾ
ದುರ್ಗಿಯಾಗಿ
ಬಾ ಬಾ
ಚಂಡಿಯಾಗಿ.






0 Comments