ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅವಧಿ’ ನೋಡಿದ ‘ಆಕೆ’

‘ಆಕೆ’ ಎಂಬ ‘ಚೈತನ್ಯ’ 

ಸಂಧ್ಯಾರಾಣಿ 

ಚಿತ್ರದಲ್ಲಿ ಒಂದು ದೃಶ್ಯ ಬರುತ್ತದೆ.  ಕಲಾವಿದೆಯೊಬ್ಬಳು ಪಾತ್ರಕ್ಕಾಗಿ ನಿರ್ದೇಶಕನನ್ನು ಭೇಟಿ ಮಾಡಲು ಬಂದಿರುತ್ತಾಳೆ.  ಆಕೆ ಸ್ಕ್ರಿಪ್ಟ್ ನೋಡಿ ತಯಾರಾಗುತ್ತಿರುವಾಗ, ಆ ನಿರ್ದೇಶಕ ಅದನ್ನು ಕಿತ್ತುಕೊಂದು ಆಕೆಗೆ ಒಂದು ಸನ್ನಿವೇಶವನ್ನು ವಿವರಿಸುತ್ತಾನೆ.  ‘

’ಅದು ನಿನ್ನ ಮದುವೆಯ ಮೊದಲನೆಯ ವಾರ್ಷಿಕೋತ್ಸವ, ನೀನು ಗರ್ಭಿಣಿ ಎನ್ನುವುದು ಆಗಷ್ಟೇ ನಿನಗೆ ಅರಿವಾಗಿದೆ.  ಗಂಡನಿಗೆ ಅದನ್ನು ಹೇಳಲು ಕಾತರಳಾಗಿರುವೆ.  ಅಷ್ಟರಲ್ಲಿ ನಿನ್ನ ಗಂಡನಿಗೆ ಇನ್ನೊಬ್ಬಳೊಡನೆ ಸಂಬಂಧ ಇದೆ ಎನ್ನುವುದು ನಿನಗೆ ಗೊತ್ತಾಗುತ್ತದೆ.  ರಾತ್ರಿ ಊಟಕ್ಕೆ ಒಳ್ಳೆಯ ಹೋಟೆಲ್ ಗೆ ಹೋಗುತ್ತೀರಿ.  ಗಂಡ ಬಾತ್ ರೋಂಗೆ ಹೋಗುತ್ತಾನೆ.  ನೀನು ಪರ್ಸ್ ನಿಂದ ವಿಷ ತೆಗೆದು ಅವನ ಡ್ರಿಂಕ್ ಗೆ ಬೆರೆಸುತ್ತೀಯ.  ನಿನ್ನ ಗಂಡ ಬರ್ತಾನೆ. ಅದನ್ನು ಕುಡೀತಾನೆ. ಈ ಸನ್ನಿವೇಶವನ್ನು ಅಭಿನಯಿಸು.’

ನಟಿ ನೀಳವಾಗಿ ಉಸಿರೆಳೆದುಕೊಳ್ಳುತ್ತಾಳೆ, ಕಣ್ಣು ಮುಚ್ಚಿಕೊಳ್ಳುತ್ತಾಳೆ, ಮುಚ್ಚಿದ ಕಣ್ಣರೆಪ್ಪೆಗಳ ಅಂಚಿಂದ ಜಿನುಗುವ ನೀರು.  ಒಮ್ಮೆ ಕಣ್ಣು ತೆರೆದವಳೆ, ಗಂಡನನ್ನು ಗಾಢ ವಿಷಾದದಿಂದ ನೋಡಿ, ’ಹ್ಯಾಪ್ಪಿ ಆನಿವರ್ಸರಿ’ ಎಂದು ಹೇಳಿ ಗಂಡ ಕುಡಿದಿಟ್ಟ ಪಾನೀಯದ ಗ್ಲಾಸ್ ಅನ್ನು ಕೈಗೆತ್ತಿಕೊಂಡು ತಾನೊಂದು ಗುಟುಕು ಕುಡಿಯುತ್ತಾಳೆ.  ಎದುರಿಗೆ ಕುಳಿತ ನಿರ್ದೇಶಕ ಅವಾಕ್ಕಾಗಿರುತ್ತಾನೆ, ನೋಡುತ್ತಿರುವ ಪ್ರೇಕ್ಷಕರೂ ಸಹಾ ಆ ದೃಶ್ಯದ ತೀವ್ರತೆಗೆ ಅಲ್ಲಾಡಿ ಹೋಗಿರುತ್ತಾರೆ.

’ಆಕೆ’ ಚಿತ್ರದ ಮುಖ್ಯ ಕಥೆಗೆ ಈ ಕಥೆಯೊಡನೆ ಇರುವ ಆಂತರಿಕ ಸಂಬಂಧ ಆಮೇಲೆ ಗೊತ್ತಾಗುತ್ತದೆ.  ಆದರೆ ಅದು ಅರ್ಥವಾಗುವುದಕ್ಕೂ ಮೊದಲೇ ಈ ಒಂದು ಪೂರಕ ದೃಶ್ಯವನ್ನು ಹೆಣೆದ ಕಥೆಯ ಬಿಗಿ, ನಿರ್ದೇಶಕ ಅದನ್ನು ವಿನ್ಯಾಸಗೊಳಿಸಿರುವ ರೀತಿ, ಆ ದೃಶ್ಯದಲ್ಲಿ ನಟಿಸಿರುವ ನಟನಟಿಯರ ಅಭಿನಯದ ಗಾಢತೆ ನಮಗೆ ಅರ್ಥವಾಗಿಬಿಡುತ್ತದೆ.

ಸಾಧಾರಣವಾಗಿ ಚಿತ್ರ ಅಥವಾ ನಾಟಕ ಪ್ರಾರಂಭವಾದ ಮೊದಲ ಇಪ್ಪತ್ತು ನಿಮಿಷಗಳಲ್ಲಿ ಚಿತ್ರದ ಕಟ್ಟುವಿಕೆ ಮತ್ತು ಕಸುಬುದಾರಿಕೆ ನಮ್ಮ ಅನುಭವಕ್ಕೆ ಬಂದುಬಿಡುತ್ತದೆ.  ಆ ಇಪ್ಪತ್ತು ನಿಮಿಷಗಳಲ್ಲಿ ಚಿತ್ರ ಅಥವಾ ನಾಟಕ ನಿಮ್ಮನ್ನು ಒಳಗೊಳ್ಳದಿದ್ದರೆ ಆನಂತರ ಅದು ನಿಮ್ಮನ್ನು ಆವರಿಸುವ ಸಾಧ್ಯತೆ ತುಂಬಾ ಕಡಿಮೆ. ’ಆಕೆ’ ಮೊದಲ ಇಪ್ಪತ್ತು ನಿಮಿಷಗಳಲ್ಲೇ ನೋಡುಗರನ್ನು ಆವರಿಸಿಕೊಳ್ಳುತ್ತದೆ.  ಇದು ತಮಿಳಿನ ’ಮಾಯಾ’ ಚಿತ್ರದ ರೀಮೇಕ್ ಎನ್ನುವ ಮಾತನ್ನು ಕೇಳಿದ್ದೆನಾದರೂ, ಚಿತ್ರ ನೋಡುವಷ್ಟೂ ಹೊತ್ತು ಅದು ಎಲ್ಲೂ ರೀಮೇಕ್ ಎನ್ನುವುದು ಗೊತ್ತಾಗದಂತೆ ಚಿತ್ರಕ್ಕೆ ಪ್ರಾದೇಶಿಕತೆಯನ್ನು ತುಂಬುವುದರಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.

ಬೆಂಗಳೂರಿನಲ್ಲಿರುವ ಒಬ್ಬ ನಟಿ, ಲಂಡನ್ನಿನಲ್ಲಿರುವ ಒಬ್ಬ ಕಲಾವಿದ, ಮಾಯಾ ಎನ್ನುವ ತಾಯಿ ಮತ್ತು ಒಂದು ಉಂಗುರದ ಸುತ್ತಾ ಹೆಣೆದ ಕಥೆ ’ಆಕೆ’. ಚಿತ್ರದಲ್ಲಿ ಬೆಂಗಳೂರಿಗಿಂತಾ ಲಂಡನ್ ಹೆಚ್ಚು ಕಸುವುಗೊಂಡು ಒಡಮೂಡಿದೆ.  ಲಂಡನ್ನಿನ ರಸ್ತೆಗಳು, ಕಣ್ತುಂಬಾ ತುಂಬಿಕೊಳ್ಳುವ ಲಂಡನ್ ಸೇತುವೆ, ಒಂದು ಮಾನಸಿಕ ಆಸ್ಪತ್ರೆ, ಲಂಡನ್ನಿನ ಕಾಡುಗಳು, ಮನೆಯೊಳಗಿನ ಸುರುಳಿ ಮೆಟ್ಟಿಲು ಎಲ್ಲವೂ ನೋಡುಗರಲ್ಲಿ ನಿಧಾನವಾಗಿ ಒಂದು ತಲ್ಲಣವನ್ನು ಹುಟ್ಟುಹಾಕುತ್ತದೆ.  ಇದು ನೋಡಿ ಹೆದರಿಕೆಯಿಂದ ಚೀರುವ ಚಿತ್ರವಲ್ಲ, ಹನಿಹನಿಯಾಗಿ ಕಥೆ  ತಲ್ಲಣವನ್ನು ಹುಟ್ಟಿಹಾಕುವ ಚಿತ್ರ.

ಚಿತ್ರದಲ್ಲಿ ನಾಯಕ, ನಾಯಕಿ, ಪೋಷಕ ನಟ ಮತ್ತು ನಟಿಯರಿರುತ್ತಾರೆ.  ಆದರೆ ಇಲ್ಲಿ ನಾಯಕ/ನಾಯಕಿ ಎಂದು ಪ್ರತ್ಯೇಕಿಸಲು ಆಗದಷ್ಟು ಎಲ್ಲಾ ಕಲಾವಿದರೂ ತಮ್ಮತಮ್ಮ ಅಭಿನಯದ ಮೂಲಕ ಕಥೆಯ ಅವಿಭಾಜ್ಯ ಭಾಗವಾಗಿದ್ದಾರೆ.  ಚಿರಂಜೀವಿ ಸರ್ಜಾ ಮತ್ತು ಶರ್ಮಿಳಾ ಮಾಂಡ್ರೆಯವರಿಗಿಂತಾ ಹೆಚ್ಚು ಚಟುವಟಿಕೆಯಲ್ಲಿ ನಟಿಸಿರುವುದು ನಿರ್ದೇಶಕನ ಪಾತ್ರದಲ್ಲಿ ನಟಿಸಿರುವ ಪ್ರಕಾಶ್ ಬೆಳವಾಡಿ, ನಾಯಕ ಮತ್ತು ನಾಯಕಿಯ ಗೆಳೆಯ ಮತ್ತು ಗೆಳತಿಯ ಪಾತ್ರದಲ್ಲಿ ಅಭಿನಯಿಸಿರುವ ಕಲಾವಿದರು.

ತಾಂತ್ರಿಕವಾಗಿ ಚಿತ್ರ ಗೆದ್ದಿದೆ.  ಯಾವುದೇ ಚಿತ್ರಕ್ಕೆ ತಾಂತ್ರಿಕ ಪ್ರಯೋಗಗಳು ನಟಿಯೊಬ್ಬಳು ಮುಖಕ್ಕೆ ಮಾಡಿಕೊಳ್ಳುವ ಮೇಕಪ್ ನಂತೆ, ಇರಬೇಕು ಆದರೆ ಅದೇ ಪ್ರಧಾನವಾಗಿ ಕಾಣಬಾರದು.  ಚಿತ್ರವನ್ನೂ ಮೀರಿ ಚಿತ್ರದ ತಾಂತ್ರಿಕತೆ ವಿಜೃಂಬಿಸಿದೆ ಎಂದರೆ ಅದು ಚಿತ್ರದ ಗೆಲುವಲ್ಲ ಸೋಲು. ಥ್ರಿಲ್ಲರ್ ಮತ್ತು ಹಾರರ್ ವಿಭಾಗದ ಚಿತ್ರಗಳಿಗೆ ಕಸುವು ತುಂಬಲು ಸಾಧಾರಣವಾಗಿ ಮಾಡುವಂತೆ ಭಯಂಕರ ಸದ್ದುಗಳ ಸಹಾಯ ತೆಗೆದುಕೊಂಡಿಲ್ಲ ಎನ್ನುವುದು ಚಿತ್ರವನ್ನು ಸಹನೀಯಗೊಳಿಸುವುದೇ ಅಲ್ಲದೆ, ’ನಿರೀಕ್ಷಿತ’ ಗಳ ಅಪಾಯದಿಂದ ಪಾರುಮಾಡುತ್ತದೆ.

ಎಷ್ಟೋ ಸಲ ಇಂತಹ ಚಿತ್ರಗಳಲ್ಲಿ ಕಡ್ಡಯವಾಗಿ ಇರಲೇಬೇಕೇನೋ ಎನ್ನುವಂತೆ ತುಂಬುವ ಅದೇ ಸದ್ದು, ಅದೇ ಕ್ಯಾಮೆರಾ ಆಂಗಲ್ ನೋಡುಗರಲ್ಲಿ ಬೇಸರ ಮೂಡಿಸುವುದೇ ಹೆಚ್ಚು.  ಕಥೆಗೆ ಕಸುವು ತುಂಬಲು ನಿಜಕ್ಕೂ ಸಾಧ್ಯವಾಗಿರುವುದು ಚಿತ್ರಕಥೆಗೆ.  ಬಿಗಿಯಾದ ಸ್ಕ್ರಿಪ್ಟ್ ಈ ಚಿತ್ರದ ನಿಜವಾದ ನಾಯಕ/ನಾಯಕಿ ಎನ್ನಬಹುದು.  ಕಡೆಗೂ ಚಿತ್ರಕ್ಕೆ ಮೊದಲು ಬೇಕಾಗುವುದು ಅಚ್ಚುಕಟ್ಟಾದ ಸ್ಕ್ರಿಪ್ಟ್, ಮಿಕ್ಕವೆಲ್ಲಾ ಅದಕ್ಕೆ ಪೂರಕವಾಗುತ್ತಾ ಹೋಗುತ್ತದೆ.  ಒಳ್ಳೆಯ ಸ್ಕ್ರಿಪ್ಟ್ ಇಲ್ಲದಿದ್ದಾಗ ಮತ್ತ್ಯಾವುದೂ ಚಿತ್ರವನ್ನು ಗೆಲ್ಲಿಸಲಾಗುವುದಿಲ್ಲ.  ಚಿತ್ರ ಮುಗಿದಮೇಲೂ ಸಹ ಕಥೆ ನಿಮ್ಮ ಮನಸ್ಸಿನಲ್ಲಿ ಬೆಳೆಯುತ್ತಾ ಹೋಗುತ್ತದೆ ಮತ್ತು ನೀವು ಉತ್ತರಗಳನ್ನು ಹುಡುಕುತ್ತಾ ಹೋಗುತ್ತೀರಿ.

ಬ್ರಿಟನ್ನಿನ ಹಲವಾರು ತಂತ್ರಜ್ಞರನ್ನು ಚಿತ್ರ ಒಳಗೊಂಡಿದೆ. ಚಿತ್ರದ ಉದ್ದ ಚಿತ್ರಕ್ಕೆ ಒಂದು ಹಿನ್ನಡೆ ಎಂದೇ ಹೇಳಬೇಕು. ಸುಮಾರು ಎರಡೂವರೆ ಗಂಟೆಗಳ ಚಿತ್ರ ಅದು.  ಹಾರರ್ ಮತ್ತು ಥ್ರಿಲ್ಲರ್ ಚಿತ್ರಗಳು ಗೆಲ್ಲುವುದೇ ಅದರ ಕ್ವಚಿತ್ತತೆಯಿಂದ, ಬಿಗಿಯಿಂದ.  ಹೆದರಿಕೆಯನ್ನು ಸಾಂದ್ರವಾಗಿರಿಸಿದರೆ ಪರಿಣಾಮ ಹೆಚ್ಚು, ಲಂಬಿಸಿದಷ್ಟೂ ಅದು ಅಳ್ಳಕವಾಗುತ್ತಾ ಹೋಗುತ್ತದೆ.  ಚಿತ್ರದ ಕಡೆಯ ಮೂವತ್ತು ನಿಮಿಷಗಳಲ್ಲಿ ಎಡಿಟಿಂಗ್ ಇನ್ನಷ್ಟು ಬಿಗಿ ಇದ್ದಿದ್ದರೆ ಚಿತ್ರ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತು.

’ಆ ದಿನಗಳು’, ’ಸೂರ್ಯಕಾಂತಿ’ ಮತ್ತು ’ಆಟಗಾರ’ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ಚೈತನ್ಯ ತಮ್ಮ ಕಸುಬುದಾರಿಕೆಯಿಂದ ಮತ್ತೊಮ್ಮೆ ನಮ್ಮ ಮೆಚ್ಚುಗೆ ಗಳಿಸುತ್ತಾರೆ.

‍ಲೇಖಕರು avadhi

12 July, 2017

2 Comments

  1. Bharathi B V

    ಓಹ್ ನೋಡಬೇಕು

  2. Arathi ghatikar

    ಬಹಳ ಸುಂದರ ನಿರೂಪಣೆ.ಸಂದ್ಯಾ. ಚಿತ್ರವನ್ನು ನೋಡಲೇಬೇಕಿನಿಸುವಷ್ಟು.☺

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading