‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಕನ್ನಡ ಜಾನಪದ

-‘ಅವಧಿ’ಗಾಗಿ ಟೀನಾ ಶಶಿಕಾಂತ್

ಇವತ್ತಿನ ಬ್ಲಾಗ್ – ಕನ್ನಡ ಜಾನಪದ (http://kannadajaanapada.blogspot.com/)

ಅರುಣ ಜೋಳದಕೂಡ್ಲಿಗಿಯ ಹೆಸರನ್ನು ಕೇಳದ ಕನ್ನಡದ ಓದುಗರು ಬಹಳಾ ಕಡಿಮೆ. ಇಂದಿನ ಯುವಪೀಳಿಗೆಯ ಲೇಖಕರ ಪೈಕಿ ಬಹಳ ಗಂಭೀರವಾಗಿ ಸಾಹಿತ್ಯಕೃಷಿಯನ್ನೂ ಸಂಶೋಧನೆಯನ್ನೂ ನಡೆಸುತ್ತಿರುವವರಲ್ಲಿ ಅರುಣ ಮುಂಚೂಣಿಯಲ್ಲಿರುವವರು. ಆಗೀಗ ಹಲವಾರು ಬ್ಲಾಗುಗಳಲ್ಲಿ, ವೆಬ್‍ತಾಣಗಳಲ್ಲಿ ಇವರ ಕವಿತೆಗಳು, ಲೇಖನಗಳು ಕಾಣಿಸಿಕೊಂಡಿದ್ದರೂ ಅರುಣ ಬಹಳ ಕಾಲದ ತನಕ ತಮ್ಮದೇ ಬ್ಲಾಗು ಯಾಕೆ ಶುರುಮಾಡಿರಲಿಲ್ಲ ಅಂದುಕೊಂಡಿದ್ದ ವಾರಿಗೆಯ ಲೇಖಕರುಂಟು. ಅದಕ್ಕೆಲ್ಲ ಉತ್ತರ ನೀಡುವಂತೆ ಅರುಣ ತಮ್ಮ ಮೆಚ್ಚಿನ ವಿಷಯವಾದ ಕನ್ನಡ ಜಾನಪದಕ್ಕೆಂದೇ ಮೀಸಲಾಗಿರುವ ಬ್ಲಾಗೊಂದರ ಬಾಗಿಲನ್ನು ೨೦೧೦ರಲ್ಲಿ ತೆರೆದರು. ಬ್ಲಾಗುಗಳ ಮೂಲಕ ಸಾಕಷ್ಟು ಕಥೆ, ಕವಿತೆ, ಕಾದಂಬರಿ, ವಿಮರ್ಶೆಯಂತಹ ಸಾಹಿತ್ಯ ಈಗಾಗಲೆ ಹರಿದುಬಂದಿದ್ದರು, ನಮ್ಮ ಜಾನಪದದ ಬಗ್ಗೆ ಮಾಹಿತಿಯ ಕೊರತೆ ಢಾಳಾಗಿ ಕಾಣುತ್ತಿತ್ತು.  ಅದನ್ನು ತುಂಬಿಕೊಡಲೆಂದೆಂತೇ ಇರುವ ಈ ಬ್ಲಾಗ್  ಕನ್ನಡ ಜಾನಪದ ಸಂಸ್ಕೃತಿಯ ಬಗ್ಗೆಗಿನ ಮೊತ್ತಮೊದಲ ಕನ್ನಡದ ಬ್ಲಾಗ್ ಅಂತ ಬಹಳ ಓದುಗರು ಸಂತಸಪಟ್ಟಿದ್ದಾರೆ.
ಕನ್ನಡ ಜಾನಪದದ ಸ್ಥಿತಿಗತಿಗಳ ಬಗ್ಗೆ, ಕಾರ್ಯಕ್ರಮಗಳ ಬಗ್ಗೆ, ವಿಶೇಷಗಳ ಬಗ್ಗೆ ಏನೇ ಮಾಹಿತಿಯಿರಲಿ, ಈ ಬ್ಲಾಗಿನಲ್ಲಿ ದೊರಕಿಬಿಡುತ್ತದೆ. ಆ ಲೆಕ್ಕದಲ್ಲಿ ಇದು ಬರೆ ಬ್ಲಾಗೋದುಗರಿಗೆ ಮಾತ್ರವಲ್ಲ, ಜಾನಪದ ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೂ ಬಹಳೇ ಉಪಯುಕ್ತವಾಗಿರುವ ಮಾಹಿತಿಭಂಡಾರ. ’ಕನ್ನಡ ಜಾನಪದ’ದ ಬ್ಲಾಗ್ ಪೇಜಿನ ಟೆಂಪ್ಲೇಟ್ ಆಯ್ಕೆ ಕೂಡ ಅಷ್ಟೇ ಆಕರ್ಷಣೀಯವಾಗಿದ್ದು ಓದುವ ಕಣ್ಣಿಗೆ ಮುದ ನೀಡುತ್ತದೆ. ಒಟ್ಟಿನಲ್ಲಿ ಈ ಬ್ಲಾಗು ’Feast to the eyes and brains’ ಎಂಬಂತಿದೆ!!  ಬ್ಲಾಗಿಗ ಅರುಣ ತಮ್ಮ ಪರಿಚಯವನ್ನ ಈ ರೀತಿ ಮಾಡಿಕೊಳ್ಳುತ್ತಾರೆ :
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜೋಳದ ಕೂಡ್ಲಿಗಿ ನನ್ನೂರು. ಅವ್ವ ಅಂಗನವಾಡಿ ಕಾರ್ಯಕರ್ತೆ, ಅಪ್ಪನದು ಹೊಲ ಉಳುಮೆ..ನಾ ಕನ್ನಡ ವಿವಿಯಲ್ಲಿ ಜಾನಪದ ಎಂ.ಎ ಮತ್ತು ‘ಕನ್ನಡ ಜಾನಪದ ಅಧ್ಯಯನದ ತಾತ್ವಿಕ ನೆಲೆಗಳು’ಪಿಹೆಚ್.ಡಿ . ನೆರಳು ಮಾತನಾಡುವ ಹೊತ್ತು (೨೦೦೪) ಅವ್ವನ ಅಂಗನವಾಡಿ (೨೦೧೦)(ಕಾವ್ಯ). ‘ಸಂಡೂರು ಭೂಹೋರಾಟ’(೨೦೦೮) ಹಂಪಿ ಕನ್ನಡ ವಿವಿ ಪ್ರಕಟಿಸಿದ ಸಂಶೋಧನಾ ಕೃತಿ. ಸಧ್ಯಕ್ಕೆ ಜಾನಪದ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿ ಓದು,ಸಂಶೋಧನೆ, ತಿರುಗಾಟ ನಡೆದಿದೆ. ಇದೀಗ ಹಂಪಿ ಕನ್ನಡ ವಿ ವಿಯಲ್ಲಿ ಕನ್ನಡ ಕಾರ್ಪಸ್ ಯೋಜನೆಯಲ್ಲಿ ಯೋಜನಾ ಸಹಾಯಕ. ಮಾತಿಗಾಗಿ-9901445702

 

ಅರುಣನ ಈ ವಿಶಿಷ್ಟ ಪ್ರಯತ್ನಕ್ಕೆ, ಶ್ರದ್ಧೆಗೆ ನಮ್ಮೆಲ್ಲರ ಬೆಂಬಲವಿದೆ. ’ಕನ್ನಡ ಜಾನಪದ’ ಹೆಚ್ಚು ಓದುಗರನ್ನ ತಲುಪಲೆಂಬ ಆಶಯ ಅವಧಿಯದು.

ಈ ಬ್ಲಾಗಿನಲಿ ಪ್ರಕಟವಾಗಿರುವ ಲೇಟೆಸ್ಟ್ ಲೇಖನ ಇಲ್ಲಿದೆ

ಮುಗುಚಿ ಬಿದ್ದ ಹಂಪಿಯ ಅಕ್ಕ ತಂಗೇರ ಕಲ್ಲುಗಳು : ಅದರ ಸುತ್ತ ಹುಟ್ಟಿದ ಜನಪದ ಕತೆಗಳು.

ಅರುಣ್
ಕಮಲಾಪುರ ಮಾರ್ಗವಾಗಿ ಹಂಪಿಗೆ ಹೋಗುವಾಗ, ದಾರಿಯಲ್ಲಿ ಎರಡು ಬೃಹತ್ ಬಂಡೆಗಳು ಒಂದಕ್ಕೊಂದು ಆಸರೆಯಾಗಿ ನಿಂತಂತೆ ಕಾಣುತ್ತವೆ. ಅವುಗಳನ್ನು ಹಂಪಿ ಭಾಗದಲ್ಲಿಅಕ್ಕತಂಗೇರ ಬಂಡಿ ಎಂದು ಕರೆಯುತ್ತಾರೆ. ಅವುಗಳು ಅಕ್ಕತಂಗಿಯರು ಅನೋನ್ಯವಾಗಿರುವ ಸಂಬಂಧಕ್ಕೆ ರೂಪಕವಾಗಿ ಈ ಬಂಡೆಗಳ ಬಗ್ಗೆ ಅನೇಕ ಜನಪದ ಕಥೆಗಳಿವೆ. ಆ ಎರಡು ಬಂಡಿಗಳಲ್ಲಿ ಒಂದು ಬಂಡಿ 9.3.2011 ರಂದು ಮದ್ಯಾಹ್ನ ಒಂದು ಗಂಟೆ ಸುಮಾರಿಗೆ ಸೀಳಿ ಅದರ ಒಂದು ಭಾಗ ಮುಗುಚಿ ಬಿದ್ದಿದೆ. ಇದು ಹಂಪಿ ಭಾಗದಲ್ಲಿ ದೊಡ್ಡ ಸುದ್ದಿಯಾಗಿದೆ. ಇದಕ್ಕೆ ಪೂರಕವಾದ ಅನೇಕ ಕಥೆಗಳು ಹುಟ್ಟಿವೆ.

ಈ ಅಕ್ಕ ತಂಗೇರ ಬಂಡಿಯ ಬಗ್ಗೆ ಜನಪದರಲ್ಲಿ ಇರುವ ಕಥನಗಳು ಹೀಗಿವೆ. 

ಒಂದು- ವಿಜಯ ನಗರ ಸಾಮ್ರಾಜ್ಯವನ್ನು ಮೊದಲು ಸ್ಥಾಪಿಸುವಾಗ ಮೊದಲು ಈ ಎರಡು ಬೃಹತ್ ಕಲ್ಲುಗಳನ್ನು ನಿಲ್ಲಿಸಿದರಂತೆ, ಅವಕ್ಕೆ ಅಕ್ಕ ತಂಗಿ ಕಲ್ಲುಗಳೆಂದು ನಾಮಕರಣ ಮಾಡಿದರಂತೆ, ಈ ಎರಡೂ ಕಲ್ಲುಗಳು ಎಲ್ಲಿಯವರೆಗೂ ನಿಂತಿರುತ್ತವೆಯೋ ಅಲ್ಲಿಯತನಕ ವಿಜಯನಗರ ಸಾಮ್ರಾಜ್ಯ ವಿರಾಜಮಾನವಾಗಿ ಬೆಳಗುತ್ತದೆ ಎಂದು ನುಡಿದರಂತೆ ಎನ್ನುವ ನಂಬಿಕೆಯಿದೆ.

ಎರಡು- ಉಜ್ಜಯನಿ ರಾಜನ ಇಬ್ಬರು ಪರಾಕ್ರಮಿ ಹೆಣ್ಣುಮಕ್ಕಳು ಬೇಟೆಯಾಡುತ್ತಾ ಹಂಪಿಯ ಭಾಗಕ್ಕೆ ಬಂದರಂತೆ, ಆಗ ಹಂಪಿ ಪುಣ್ಯ ಕ್ಷೇತ್ರವಾಗಿತ್ತಂತೆ, ಆ ಪರಾಕ್ರಮಿ ಹೆಣ್ಣುಮಕ್ಕಳಿಬ್ಬರು ಹಂಪಿಯ ಬಗ್ಗೆ ಗೇಲಿ ಮಾಡಿ ನಕ್ಕರಂತೆ, ಅವರ ಗರ್ವ ಮುರಿಯಲೆಂದು ವಿರೂಪಾಕ್ಷನು ಅವರಿಬ್ಬರನ್ನು ಕಲ್ಲಾಗುವಂತೆ ಮಾಡಿದನಂತೆ.

ಮೂರು- ಇಬ್ಬರು ಹೆಣ್ಣುಮಕ್ಕಳು ಹಂಪಿ ನೋಡಲು ಬಂದರಂತೆ, ನೋಡುತ್ತಾ ನೋಡುತ್ತಾ ಜನರಿಲ್ಲದ ನಿರ್ಜನ ಪ್ರದೇಶಕ್ಕೆ ಬಂದಾಗ ದಡೂತಿ ದೇಹದ ಗಂಡಸೊಬ್ಬ ಈ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು ಅವರಿಬ್ಬರ ಮೇಲೆರಗಿದನಂತೆ, ಅವರು ವಿಧಿಯಿಲ್ಲದೆ ಕಿರುಚಿಕೊಂಡರಂತೆ ಆಗ ಅವರು ಆ ದಡೂತಿ ದೇಹದ ಮನುಷಷ್ಯನಿಂದ ಅತ್ಯಾಚಾರಕ್ಕೆ ಬಲಿಯಾಗಿ ಮಾನಗೇಡಿಗಳಾಗುವುದಕ್ಕಿಂತ ಕಲ್ಲಾಗುವುದೇ ಲೇಸು ಎಂದು ಬಗೆದು ಕಲ್ಲಾದರಂತೆ.

ಇಂತಹ ಇನ್ನಷ್ಟು ಕತೆಗಳು ಪ್ರಚಲಿತದಲ್ಲಿವೆ. ಪುರುಷೋತ್ತಮ ಬಿಳಿಮಲೆ ಮತ್ತು ಚಲುವರಾಜು ಅವರು ಸಂಪಾದಿಸಿದ ಹಂಪಿ ಜಾನಪದ ಎನ್ನುವ ಪುಸ್ತಕದಲ್ಲಿ ಇದರ ಪಠ್ಯಗಳನ್ನು ನೋಡಬಹುದು. ಈ ಕಲ್ಲುಗಳ ಬಗ್ಗೆ ಹಂಪಿ ಪರಿಸರದ ಹೆಣ್ಣುಮಕ್ಕಳಲ್ಲಿ ಭಾವನಾತ್ಮಕ ಸಂಬಂಧವೂ ಇದ್ದಂತಿದೆ. ಈಗ ಅಕ್ಕತಂಗೇರ ಬಂಡಿ ಬಿದ್ದಿದೆ ಎನ್ನುವ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಹಂಪಿ ಸುತ್ತಮುತ್ತಲ ಹಳ್ಳಿಗಳ ಜನ ತಂಡೋಪತಂಡವಾಗಿ ನೋಡಲು ಬರುತ್ತಿದ್ದಾರೆ. ಈ ಕಲ್ಲುಗಳ ಬಗ್ಗೆ ವಿಚಿತ್ರವಾದ ಅನುಕಂಪವೂ, ಅಯ್ಯೋ ಎನ್ನುವ ಭಾವನಾತ್ಮಕ ಉದ್ಘಾರವೂ ನೋಡಲು ಬಂದವರಲ್ಲಿ ವ್ಯಕ್ತವಾಗುತ್ತಿದೆ. ಹಾಗೆಯೇ ಈ ಕಲ್ಲು ಬಿದ್ದ ಬಗ್ಗೆಯೂ ಅನೇಕ ಕಥನಗಳು ಹುಟ್ಟಿಕೊಳ್ಳುತ್ತಿವೆ.

ಹಾಗೆ ಹುಟ್ಟಿಕೊಂಡ ಕಥನಗಳಲ್ಲಿ ಕೆಲವು ಹೀಗಿವೆ. ಒಂದು: ಇದು ಕೇಡನ್ನು ಸೂಚಿಸುತ್ತದೆ, ಈ ಭಾಗದಲ್ಲಿ ದೊಡ್ಡದಾದ ಕೇಡು ಕಾದಿದೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಎರಡು: ಈ ಕಲ್ಲು ಬಿದ್ದ ಕಾರಣ ಪ್ರಳಯದ ಮುನ್ಸೂಚನೆ ಕಾಣಿಸಿಕೊಂಡಿದೆ ಇನ್ನು ಪ್ರಳಯವಾಗುವುದು ಖಚಿತ ಎನ್ನುವುದು ಕೆಲವರ ನಂಬಿಕೆ. ಮೂರು: ತಂಗಿಯ ಆಯಸ್ಸು ಮುಗಿದಿದೆ, ಅಕ್ಕನ ಆಯಸ್ಸು ಇನ್ನು ಗಟ್ಟಿ ಇದೆ. ಹಾಗಾಗಿ ತಂಗಿ ತನ್ನ ಆಯಸ್ಸು ಮುಗಿದಿದೆ ಎಂದು ತೋರಿಸಿಕೊಟ್ಟಿದ್ದಾಳೆ ಎಂಬ ನಂಬಿಕೆ ಇದೆ. ನಾಲ್ಕು: ಈ ಕಲ್ಲಿನ ಆಕಾರದಲ್ಲಿ ಅಕ್ಕನನ್ನು ತಂಗಿ ಹೊತ್ತುಕೊಂಡಂತಿದೆ, ಹಾಗಾಗಿ ತಂಗಿ ಮುನಿಸಿಕೊಂಡು ಇನ್ನೆಷ್ಟು ದಿನ ನಾ ಹೊತ್ತಿರಲಿ ಎಂದು ತಂಗಿ ಅಕ್ಕನ ಮೇಲೆ ಬೇಸರವಾಗಿ ಮೈಕೊಡವಿದ್ದಾಳೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ಈ ಬಗೆಯ ಜನಪದ ನಂಬಿಕೆಗಳ ಆಚೆಗೆ ನಿಂತು ನೋಡುವುದಾದರೆ, ಈ ಎರಡು ಬೃಹತ್ ಕಲ್ಲುಗಳು ನೈಸರ್ಗಿಕವಾಗಿ ನಿಂತಂತವು. ಹೀಗೆ ನಿಂತ ಕಾರಣಕ್ಕೇ ಈ ಬಗೆಯ ಕಥನಗಳು ಹುಟ್ಟಿರಲಿಕ್ಕೆ ಸಾಧ್ಯವಿದೆ. ಅಂತೆಯೇ ಇಂತಹ ಬೃಹತ್ ಬಂಡೆಗಳು ಸೀಳಿ ಉದುರಲು ಮುಖ್ಯ ಕಾರಣ ಈ ಭಾಗದಲ್ಲಿ ನಡೆಯುತ್ತಿರುವ ಮೈನಿಂಗ್ ಎನ್ನುವುದು ಎಲ್ಲರ ಅಭಿಪ್ರಾಯ. ಕಲ್ಲು ಮೈನಿಂಗ್ ನಲ್ಲಿ ಮದ್ದನ್ನು ಇಟ್ಟು ಸಿಡಿಸುತ್ತಾರೆ, ಈ ಮದ್ದು ಸಿಡಿಯುವ ಹೊತ್ತಿಗೆ ನೆಲ ಅದುರುತ್ತದೆ. ಅದರಲ್ಲೂ ಹಂಪಿ ಭಾಗದಲ್ಲಿ ಪ್ರಾಚೀನ ಅವಶೇಷಗಳು ಇರುವ ಕಾರಣ ಅವುಗಳೂ ಸಹಜವಾಗಿ ಅದುರುತ್ತವೆ. ಇದರ ಪರಿಣಾಮ ಅಕ್ಕತಂಗಿಯರ ಬಂಡೆಯ ಮೇಲಾಗಿದೆ. ಹಾಗಾಗಿ ಸರಕಾರ ಹಂಪಿಗೆ ಸುತ್ತಮುತ್ತಲು ನಡೆಯುತ್ತಿರುವ ಮೈನಿಂಗ್ ನ್ನು ನಿಲ್ಲಿಸುವುದು ಒಳಿತು.


 

 

 

‍ಲೇಖಕರು G

April 10, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಧಿ….

೧ ಪ್ರತಿಕ್ರಿಯೆ

  1. D.RAVIVARMA

    arun nimma lekhana odide,tumba sogasagide, nanu kamalapuradavanu,odalikke hampi pattabhirama temple ranisnanagruha,cgandrasehara temple ge sanjevargu odi baruttidde, kamalapuradalli irovargu shivaratri,palapooje,heege hampige nadedu hogade ondu vishista anubhavavagta ittu,akka tangi guddada hatra kutu kabbu tinnodu,cigeret sedodu heege adu nanna manasige ondu visista kushi tandu kodta ittu bruhadakarada aa bandegala munde navestu kubjaru ansta ittu igaladru navu echchettu kolladidre,smarkagalevannu kalakondu namma makkalu bari photo nodabekaditaste omme jambunatha gudi nodibanni adara hale photo gropade collection nallide bareyuttiri,,d,ravi varma hospet.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: