ಎಚ್ಚೆಸ್ವಿ ಅನಾತ್ಮ ಕಥನ: ನಾಕು ದಿಕ್ಕಿನಿಂದ ನಾಕು ಸೊಸೆಯರು

ಅನಾತ್ಮಕಥನ-ಹತ್ತು

ಕಂಬಿಕ್ರಿಯೆ ಎಂಬ ನವೋನ್ನವ ಸಾಂಗತ್ಯ…

ನಮ್ಮ ಮನೆಗೆ ನಾಕು ದಿಕ್ಕಿನಿಂದ ನಾಕು ಸೊಸೆಯರು ಬಂದಿದ್ದಾರೆ. ಹಿರೀಸೊಸೆ ಪ್ರತಿಮ ದಕ್ಷಿಣಕನ್ನಡದವಳು. ಮಂಗೆಬೆಟ್ಟು ಅಂತ ಅವರ ಊರು. ಆದರೆ ಬೆಳೆದದ್ದು ಹಾಸನದ ತನ್ನ ಸೋದರಮಾವನ ಮನೇಲಿ. ಎರಡನೇವಳು ಶಾಲಿನಿ; ಹುಬ್ಬಳ್ಳಿ ಹುಡುಗಿ. ಆದರೆ ಹುಟ್ಟಿಬೆಳೆದದ್ದೆಲ್ಲಾ ಬೆಂಗಳೂರಲ್ಲೇ. ಮೂರನೇ ಸೊಸೆ ವೇದ ಬೆಂಗಳೂರವಳು. ನಾಕನೇ ಹುಡುಗಿ ಸುಮಾ ತಮಿಳಿನವಳು. ಬೆಳೆದದ್ದು ಬೆಂಗಳೂರಲ್ಲೇ. ಇವರಲ್ಲಿ ಮೂವರು ಶೈವ ಸಂಪ್ರದಾಯದವರು. ಎರಡನೆಯವಳು ಮಾತ್ರ ವೈಷ್ಣವ ಸಂಪ್ರದಾಯದ ಮನೆಯಿಂದ ಬಂದವಳು. ಈ ಸಣ್ಣ ಅಂತರವೇ ಅವಳಲ್ಲಿ ಕಾಫೀಕಪ್ಪಿನ ಅನೇಕ ಸುನಾಮಿಗಳನ್ನು ಹುಟ್ಟು ಹಾಕಿದ್ದು ನೆನೆದಾಗ ಬಾಲ್ಯದ ಸಂಸ್ಕಾರ ಎಷ್ಟು ಪ್ರಬಲವಾದದ್ದು ಅಂತ ತಮಗೆ ಹೊಳೆದೀತು.

ಎರಡನೇ ಸೊಸೆ ಶಾಲಿನಿಯನ್ನು ನಾವು ನೋಡಿದ್ದು ನಮ್ಮ ಮನೆಯಲ್ಲೇ. ಪುಷ್ಪಗಿರಿಯಲ್ಲಿ ಮೆಲ್ಲಗೆ ಕತ್ತಲೆ ಇಳಿಯುತ್ತಾ, ಮಿನಿಮಿನಿ ಸಾಲು ದೀಪಗಳು ಹೊತ್ತಲೋ ಆರಲೋ ಎಂಬ ದ್ವೈತದಲ್ಲಿ ಹೊಯ್ದಾಡುತ್ತಿದ್ದ ಸಮಯದಲ್ಲಿ. ಹುಡುಗಿ ಟ್ಯೂಬ್ ಲೈಟ್ ಕೆಳಗೆ ಕೂತಿದ್ದರಿಂದ ತಾನು ಇರುವುದಕ್ಕಿಂತ ಸ್ವಲ್ಪ ಹೆಚ್ಚು ಕಪ್ಪಾಗಿ ಆವತ್ತು ಕಾಣಿಸಿದ್ದು. ನಾಚಿಕೆ ಮತ್ತು ಸಂಕೋಚದಿಂದ ಈ ಹುಡುಗಿ ಆಗಾಗ ಮುಂಗೈಯಿಂದ ಮೂಗಿನ ಕೆಳಗೆ ಅನಾವಶ್ಯಕ ತಿಕ್ಕಿಕೊಳ್ಳುತ್ತಾ ಕೂತಾಗ ನಾನು ಭಾವಿ ವರನಾದ ನನ್ನ ಮಗನಿಗೆ ಹೇಳಿದ್ದು: ಶಾಲಿನಿಯನ್ನ ಕರೆದುಕೊಂಡು ಹೋಗಿ ಅವಳಿಗೆ ನಿನ್ನ ಕಂಪ್ಯೂಟರ್ ಆದರೂ ತೋರಿಸಿಕೊಂಡು ಬಾ…!

ಹುಡುಗಿ ಮುಂಗೈಯಿಂದ ಮತ್ತೊಮ್ಮೆ ಮೂಗಿನ ಕೆಳಗೆ ತಿಕ್ಕಿಕೊಂಡು ತನ್ನ ತಾಯಿಯನ್ನ ನೋಡಿದಾಗ, ಅವರು ಹೋಗಿ ಬಾ ಅದರಲ್ಲೇನು ಅಂತ ಕಣ್ಣಲ್ಲೇ ಸೂಚಿಸಿದ್ದು ವಧುವಿಗೆ ಮಾತ್ರ ಅಲ್ಲ, ಆ ಮುಸ್ಸಂಜೆ ನನ್ನ ಮನೆಯ ಪುಟ್ಟ ಹಜಾರದಲ್ಲಿ ನೆರೆದಿದ್ದ ಹತ್ತೂ ಸಮಸ್ತರ ಗಮನಕ್ಕೆ ಬಂತೆಂಬುದನ್ನು ನೆನೆಯುವಾಗ ಈಗ ನನಗೆ ನಗೆ ಬರುತ್ತದೆ. ಹುಡುಗನೂ ನಾಚಿಕೆಯ ಮುದ್ದೆ. ಇಬ್ಬರೂ ರೂಮಿಗೆ ಹೋಗಿ ಎರಡು ನಿಮಿಷದಲ್ಲಿ ಹೊರಗೆ ಬಂದದ್ದೂ ಆಯಿತು. ಕಂಪ್ಯೂಟರ್ ನೋದಲಿಕ್ಕೆ ಎರಡು ನಿಮಿಷ ಸಾಕು ಅನ್ನುವ ಪರಮಜ್ಞಾನ ಅವತ್ತೇ ನನಗೆ ಬೋಧಿಯಾದದ್ದು.

 

ಉಪ್ಪಿಟ್ಟು ಕೇಸರೀಬಾತಿನ ಸ್ಟಾಂಡರ್ಡ್ ಮೆನು . ಭಾವಿ ಬೀಗರು ವಿಚಾರಮಾಡಿ ನಾವು ತಿಳಿಸುತ್ತೇವೆ…ನೀವೂ ವಿಚಾರ ಮಾಡಿ ತಿಳಿಸಿ ಎಂದು ಬೀಳ್ಕೊಂಡಾಗ ಏಳೂವರೆ ಸಮಯ. ಬೀಗರು ಜಾಗ ಖಾಲಿ ಮಾಡಿದ ಮೇಲೆ ನಾನು ಮಗನನ್ನು ಕೇಳಿದೆ. ನಿನಗೆ ಏನನ್ನಿಸಿತು? ಹುಡುಗಿ ನನಗೆ ಒಪ್ಪಿಗೆ ಎಂದ ಮಗರಾಯ. ನೀನೇನೋ ಒಪ್ಪಿದೆ! ಆದರೆ ಆ ಮಾರಾಯಗಿತ್ತಿ ನಿನ್ನ ಒಪ್ಪಬೇಕಲ್ಲ!- ಎಂದು ನಾನು ರಾಗ ಎಳೆದರೆ ಅವಳೂ ನನ್ನನ್ನು ಒಪ್ಪಿದ್ದಾಳೆ ಎಂದುಬಿಡೋದೆ ಈ ಮಗರಾಯ! ಅದ್ವೈತಕ್ಕಿಂತ ದ್ವೈತ ಚುರುಕು ಅಂತ ತಕ್ಷಣ ನನ್ನ ಅರಿವಿಗೆ ಬಂತು. ಮುಂದಿನ ಬಾರಿ ಹೆಣ್ಣಿನ ಮನೆಗೆ(ಅಂದರೆ ಅವರ ಸೋದರತ್ತೆ ಮನೆಗೆ) ಹೋದಾಗ ಹುಡುಗಿಗೆ-ಏನಮ್ಮಾ ನನ್ನ ಬಗ್ಗೆ ನಿನಗೆ ಏನಾದರೂ ಗೊತ್ತ? ಕೇಳಿದೆ. ನನ್ನ ಒಂದಾದರೂ ಹಾಡು ಅವಳು ಕೇಳಿರಬಹುದು ಎಂಬುದು ನನ್ನ ಒಣ ಅಹಂಕಾರ. ಹುಡುಗಿ ಸಣ್ಣಗೆ ನಕ್ಕು “ನೀವು ನಮ್ಮ ಮಾವ ಅಂತ ಗೊತ್ತು”- ಅಂತ ಉಲಿದದ್ದಾಯ್ತು! ಸರಿ! ಸಾಹಿತ್ಯ , ಕನ್ನಡ ಹಾಡು ಪಾಡು ಈ ಮಗುವಿಗೆ ದೂರವೇ ಎಂದು ಬೋಧೆಯಾಯಿತು. ನಿಮ್ಮ ಮಾವ ಕವಿಗಳು ಕಣಮ್ಮಾ…ಬೇಕಾದಷ್ಟು ಪುಸ್ತಕ ಬರ್ದಿದ್ದಾರೆ ಅಂತ ನನ್ನ ಶ್ರೀಮತಿ ನನ್ನ ನೆರವಿಗೆ ಬಂದಳು. ನೀನು ಏನಾದರೂ ಪುಸ್ತಕ ಓದಿದೀಯಾ ಎಂಬ ಪ್ರಶ್ನೆಗೆ ಹುಡುಗಿ ಥಟ್ಟನೆ “ಅಕೌಂಟೆನ್ಸಿ ಬೈ ಎಸ್.ಪಿ.ಅಯ್ಯಂಗಾರ್” ಅಂತ ಉತ್ತರಿಸಿದ ಮೇಲೆ ನಾನು ದೂಸರಾ ಮಾತಾಡಲಿಲ್ಲ. ಬಲವಂತವೇನಿಲ್ಲ. ನಮ್ಮ ಸುಧಿಗೆ ಹಾಡು ಅಂದರೆ ಭಾಳ ಇಷ್ಟ…ನಿನಗೆ ಹಾಡಲಿಕ್ಕೆ ಬಂದರೆ ಯಾವುದಾದರೂ ಹಾಡಮ್ಮ ಅಂದಳು ನನ್ನ ಪತ್ನಿ. ಹುಡುಗಿ ಈಗ ತಂದೆಯನ್ನು ನೋಡಿದಳು. ಆಪಕಿ ನಜರೋನೆ ಸಮಜಾ ಅದನ್ನೇ ಹಾಡಲಾ…ಅಂದರು ತಂದೆ. ಕಡೇಪಕ್ಷ ಒಂದು ಕನ್ನಡ ಸಿನಿಮಾ ಹಾಡಾದರೂ ಈ ಹುಡುಗಿ ಹಾಡಬಾರದಿತ್ತೇ ಅಂತ ಮನಸ್ಸಲ್ಲೇ ಹಲುಬಿಕೊಂಡೆ. ಎಲ್ಲಾ ಹಾಡು ಕೇಳಿ ಸುಸ್ತಾಗಿ ಕೂತಿದ್ದಾಗ ನನ್ನ ಮಗರಾಯನಿಗೆ ಅದೇನೆನ್ನಿಸಿತೋ…ಒರಿಜಿನಲ್ಲಲ್ಲಿ ಹಾಡು ಅತ್ಯದ್ಭುತ ಅಂದುಬಿಟ್ಟ. ಹುಡುಗಿಯ ಮುಖ, ಹುಡುಗಿಯ ತಾಯಿಯ ಮುಖ ಹಿಗ್ಗಿ ಹೀರೇಕಾಯಿ ಆಯಿತು. ಬೋಂಡ ಮಾಡುವುದಷ್ಟೇ ಬಾಕಿ!

 

ಮೂರೇ ತಿಂಗಳಲ್ಲಿ ಮದುವೆ ಮುಗಿದು ಸೊಸೆಯನ್ನು ಮನೆತುಂಬಿಸಿಕೊಂಡಿದ್ದೂ ಆಯಿತು. ಆಮೇಲಿನ ಒಂದೆರಡು ಸ್ವಾರಸ್ಯದ ಪ್ರಸಂಗಗಳನ್ನು ನಾನಿಲ್ಲಿ ಹೇಳಬೇಕು. ನಮ್ಮಲ್ಲಿ ದೇವರ ಪೂಜೆ ಲಾಗಾಯ್ತಿನಿಂದ ನನ್ನ ಪತ್ನಿಯೇ ಮಾಡಿಕೊಂಡು ಬಂದಿರೋದು. “ನಾವು ಮಾಡಂಗಿಲ್ಲ…ಗಂಡಸರೇ ಮಾಡಬೇಕು”- ಅಂದದ್ದಕ್ಕೆ ವರ್ಷಾ ವರ್ಷಾ ಗಣೇಶನ ಪೂಜೆ ಒಂದು ನಾನು ನಡೆಸಿಕೊಂಡು ಬಂದಿದೀನಿ. ಅದರಲ್ಲೂ ಆರತಿ ಮೊದಲೋ ನೈವೇದ್ಯ ಮೊದಲೋ ಗೊಂದಲವಾಗಿ ಅಜ್ಜಿ ಅಮ್ಮ ಹೆಂಡತಿಯ ಕೈಯಲ್ಲಿ ವಾಚಾಮಗೋಚರ ಬೈಸಿಕೊಂಡಿದ್ದಾಗಿದೆ. ನಮ್ಮಲ್ಲಿ ಪ್ರತಿ ಗುರುವಾರ ಪಾಂಗ್ತವಾಗಿ ಮನೆ ದೇವರ ಪೂಜೆ ಮಾಡಲೇ ಬೇಕು(ನನ್ನ ಹೆಂಡತಿ). ಆ ಗುರುವಾರ ಅವಳಿಗೆ ಏನನ್ನಿಸಿತೋ ಸೊಸೆಗೆ ಹೇಳಿದಳು: “ಪ್ರತಿಮಾ ಇಲ್ಲಿದ್ದಾಗ ಗುರುವಾರದ ಪೂಜೆ ಅವಳೇ ಮಾಡುತಾ ಇದ್ದಳು…ಇವತ್ತು ನೀನೇ ಮಾಡು ಶಾಲಿನಿ..!” . ಪಾಪ! ಹೊಸ ವಧು ತಬ್ಬಿಬ್ಬಾಗಿ ಹೋದಳು. ಅವರ ಮನೆಯಲ್ಲಿ ಗಂಡಸರೇ ಪೂಜೆ ಮಾಡುವ ಸಂಪ್ರದಾಯವಂತೆ. ನಮ್ಮ ಮನೇದು ಸ್ತ್ರೀಮಳೆಯಾಳ ಅಂತ ಅವಳಿಗೇನು ಗೊತ್ತು ? ಅತ್ತೆ ಹೇಳಿದ ಮೇಲೆ ಇಲ್ಲಾ ಎನ್ನಲಿಕ್ಕೆ ಆದೀತೇ? ಅದೂ ಮದುವೆಯಾಗಿ ಇನ್ನೂ ಹೊಸದು. ಅಭ್ಯಾಸ ಇಲ್ಲ. ನೀವು ಹೇಳಿ. ನೀವು ಹೇಳಿದ ಹಾಗೆ ನಾನು ಪೂಜೆ ಮಾಡುತ್ತೇನೆ ಎಂದಿದಾಳೆ ಸೊಸೆ. ನಾನು ಒಂದು ಸಾರಿ ಹೇಳುತೀನಿ…ನೀನು ಎಲ್ಲ ನೆನಪಿಟ್ಟು ಪೂಜೆ ಮುಗಿಸ ಬೇಕು ಎಂದು ನನ್ನ ಪತ್ನಿ ಸಣ್ಣಗೆ ನಕ್ಕು ಹುಡುಗಿಯನ್ನು ಪರೀಕ್ಷೆಗೆ ಕೂಡಿಸಿಯೇ ಬಿಟ್ಟಿದ್ದಾಳೆ.

 

ಅಪರಚಿತ ಮನೆ. ಅಪರಿಚಿತ ದೇವರು. ಹುಡುಗಿಯ ಕೈ ಮೃದುವಾಗಿ ಕಂಪಿಸುತ್ತಾ ಇದೆ. ಅವಳಿಗೆ ಯಾಕೆ ತೊಂದರೆ ಕೊಡುತೀ… ವರ್ಷೊಪ್ಪತ್ತು ಆಗಲಿ…ಆಮೇಲೆ ಅವಳೇ ಮಾಡುತಾಳೆ ಅಂತ ನಾನು. ನನ್ನ ಮಾತು ಶ್ರೀಮತಿಗೆ ಪಥ್ಯವಾಗುವುದಿಲ್ಲ. ನಾನುಂಟು…ನನ್ನ ಸೊಸೆ ಉಂಟು. ನೀವು ಮಧ್ಯೆ ಬಾಯಿ ಹಾಕಬೇಡಿ ಎಂದು ಕಡ್ಡಿ ಮುರಿದು, ನೀವು ಹೋಗಿ…ಓದೋದು ಬರೆಯೋದು ಮಾಡಿಕೊಳ್ಳಿ ! ಎಂದು ಯಜಮಾನತಿ ಅಪ್ಪಣೆ ಕೊಡಿಸಿಯೇ ಬಿಟ್ಟಳು.

 

ಹುಡುಗಿ ಅತ್ತೆಯ ಮಾರ್ಗದರ್ಶನದಂತೆ ಪೂಜೆ ಮಾಡಿ ಮುಗಿಸಿ ಬೆವರು ಹನಿಯುತ್ತಾ ಹೊರಗೆ ಬಂದು ನನಗೆ ತೀರ್ಥ ಪ್ರಸಾದ ಕೊಟ್ಟಾದ ಮೇಲೆ…ಹೇಗಿತ್ತು ಮೊದಲ ಅನುಭವ ಎಂದೆ ತುಂಟ ನಗೆಯೊಂದಿಗೆ. ಉತ್ತರ ಕೊಡದೆ ಹುಡುಗಿ ನಾಚಿ ತಲೆ ಬಾಗಿಸಿದಳು.

 

ಈಚೆಗೆ ಅವಳು ಹೇಳಿದ್ದು ನನಗೆ ಅಚ್ಚರಿ ಉಂಟು ಮಾಡಿತು. ಮೊದಲ ದಿನ ಇವಳು ದೇವರ ಪೂಜೆಗೆ ಕೂತಾಗ ಪೀಠದ ಮಧ್ಯೆ ಇದ್ದ ಶಿವಲಿಂಗ ಇವಳಿಗೆ ಬೆಚ್ಚು ಬೀಳುವಂತೆ ಮಾಡಿತಂತೆ. ರಾಮ ಕೃಷ್ಣರನ್ನ ಪೂಜಿಸುವಾಗ ಹುಟ್ಟುವ ಭಕ್ತಿ ಭಾವ ಅವಳಿಗೆ ಶಿವಲಿಂಗ ಪೂಜಿಸುವಾಗ ಹುಟ್ಟುತ್ತಾ ಇಲ್ಲ. ಲಿಂಗದ ಮೇಲೆ ಹೂ ಇಡಲು ಕೈ ಕೂಡ ಹಿಂಜರಿಯುತ್ತಾ ಇದೆ. ಬಹಳ ಕಷ್ಟ ಪಟ್ಟು ಮನಸ್ಸನ್ನು ತಹಬಂದಿಗೆ ತಂದುಕೊಂಡಳಂತೆ. ತವರಿಗೆ ಹೋದಾಗ ವಿಷಯ ಅವಳ ತಾಯಿಗೆ ತಿಳಿಸಿದ್ದಾಳೆ. ಅವರ ದೇವರ ಮನೆಯಲ್ಲಿ ಈಶ್ವರ ಲಿಂಗ ಇಟ್ಟಿದ್ದಾರೆ. ಈಶ್ವರನ ಪೂಜೆಗೆ ಮನಸ್ಸು ಹಿಂದೇಟು ಹಾಕುತ್ತಾ ಇದೆ. ಏನು ಮಾಡಲಿ? ಅಂತ . ಶಿವರಾತ್ರಿಯ ದಿನ ಮಾತ್ರ ಈಶ್ವರನ ಗುಡಿಗೆ ಹೋಗಿ ಬರುವುದು ಅವರಲ್ಲಿ ಸಂಪ್ರದಾಯವಂತೆ. ಆಗ ತಾಯಿ ಹೇಳಿದರಂತೆ..” ನೀನು ಅವರ ಮನೆಗೆ ಹೋದ ಮೇಲೆ ಅವರ ದೇವರೇ ನಿನ್ನ ದೇವರು… ಆ ದೇವರಲ್ಲೇ ನೀನು ಭಕ್ತಿ ಭಾವ ಬೆಳೆಸಿಕೊಳ್ಳಬೇಕಮ್ಮಾ…”

 

ನನ್ನ ಮೂರನೇ ಹುಡುಗ ಸ್ವಲ್ಪ ಕಿಲಾಡಿ ಸ್ವಭಾವದವನು. ಅತ್ತಿಗೆಯನ್ನು ಗೋಳುಹುಯ್ದುಕೊಳ್ಳುವುದು ಜಾಸ್ತಿ. ಮದುವೆಯಾದ ಹೊಸತರಲ್ಲಿ ಅವನು ಒಂದು ದಿನ ಅತ್ತಿಗೆಗೆ ಹೇಳಿದಾನೆ…”ಅತ್ತಿಗೇ..ನಮ್ಮ ಸಂಪ್ರದಾಯ ನಿಮಗೆ ಗೊತ್ತಿಲ್ಲ…ಶಿವಾರಾತ್ರಿ ಬರುತ್ತಾ ಇದೆ…ಆವತ್ತು ರಾತ್ರಿ ಪುರೋಹಿತರು ನಮ್ಮ ಮನೆಗೆ ಬರುತ್ತಾರೆ…ನಿಮ್ಮಲ್ಲಿ ಮುದ್ರೆ ಒತ್ತಿಸುವ ಸಂಪ್ರದಾಯ ಇದೆ ಅಲ್ಲವಾ? ಹಾಗೇ ನಮ್ಮಲ್ಲಿ ಕಂಬಿಕ್ರಿಯೆ ಅಂತ ಒಂದು ಆಚಾರ ಇದೆ. ಮುಗಚೇಕಾಯಿ ಚೆನ್ನಾಗಿ ಬಿಸಿಮಾಡಿ ಹಣೆಯ ಮೇಲೆ ಮೂರು ಬರೆ ಹಾಕುತ್ತಾರೆ. ನಮ್ಮ ಅಜ್ಜಿ ಹಣೆ ನೋಡಿ …ಅವರೂ ವೈಷ್ಣವರ ಮನೆಯಿಂದ ಬಂದವರು…ಹಣೆಯ ಮೇಲೆ ಗಾಯದ ಕಲೆ ಇನ್ನೂ ಉಳಿದಿದೆ! ಶಾಲಿನಿಯ ಜಂಗಾಬಲವೇ ಉಡುಗಿಹೋಗಿದೆ. ಯಾರ ಜತೆಗೂ ಮಾತಿಲ್ಲ ಕಥೆಯಿಲ್ಲ. ಕನಸಲ್ಲೂ ಸುಬ್ಬಾಭಟ್ಟರು ಮುಗಚೇ ಕಾಯಿ ಕಾಯಿಸಿ…ಒಡ್ಡು…ಒಡ್ಡು ನಿನ್ನ ಹಣೆ ಅಂತ ಅವಳನ್ನು ಅಟ್ಟಿಸಿಕೊಂಡು ಬರುತ್ತಾ ಇದ್ದಾರಂತೆ…ಕಿಠಾರನೆ ಕಿರುಚಿ ಥಟ್ಟನೆ ಹುಡುಗಿ ಹಾಸಿಗೆಯ ಮೇಲೆ ಎದ್ದು ಕೂತಿದ್ದಾಳೆ…ಗಂಡ ಎದ್ದು ಏನು ಏನಾಯಿತು? ಅಂತ ಗಾಭರಿಯಿಂದ ವಿಚಾರಿಸಿದಾಗ , ಅವನ ಹೊಸ ಹೆಂಡತಿ ಮೈದುನ ಹೇಳಿದ ಕಂಬಿಕ್ರಿಯೆಯ ವಿಷಯ ಹೇಳಿದ್ದಾಳೆ. ಗಂಡ ಗಟ್ಟಿಯಾಗಿ ನಕ್ಕು…ಎಂಥಾ ಹುಡುಗೀನೇ ನೀನು…ಅವನು ತಮಾಷೆಗೆ ಏನೋ ಹೇಳಿದರೆ ಅದನ್ನ ನಿಜಾ ಅಂತ ನಂಬೋದಾ?

 

ಈಗ ನೀವು ನಮ್ಮ ಮನೆಗೆ ಬಂದು ನಮ್ಮ ಸೊಸೆಯಂದಿರ ಆರ್ಭಟ ನೋಡಬೇಕು. ಅವರ ಅತ್ತೆಯನ್ನೂ ಮೀರಿಸಿ ನಮ್ಮ ಸಂಪ್ರದಾಯ ಆಚಾರ ವಿಚಾರಗಳ ಸಾಂಗತ್ಯ ಪೂರೈಸುತ್ತಾ ನನ್ನ ತಲೆ ಚಿಟ್ಟು ಹಿಡಿಸುತ್ತಾ ಇದ್ದಾರೆ! ಅಮ್ಮಾ…ನನಗೆ ಇದರಲ್ಲೆಲ್ಲಾ ಇಂಟರಿಷ್ಟಿಲ್ಲಾಮ್ಮಾ ಅಂದರೂ ಅವರು ಕೇಳುತ್ತಾರೆಯೇ? ಕಳೆದ ಗಣೇಶ ಚತುರ್ಥಿಯಲ್ಲಿ ಹಣೆಯ ಮೇಲೆ ನಾಮ ಇದ್ದ ಗಣೇಶನನ್ನು ತಂದಾಗ ನಾಕೂ ಜನ ಸೊಸೆಯರು ಸೇರಿ ನನ್ನ ಗ್ರಹಚಾರ ಬಿಡಿಸಿ ಮತ್ತೆ ಮಾರ್ಕೆಟ್ಟಿಗೆ ಗದುಮಿ ಹಣೆಯ ಮೇಲೆ ವಿಭೂತಿ ಪಟ್ಟೆ ಗುರುತಿದ್ದ ಗಣೇಶನನ್ನು ತರಿಸಿಕೊಂಡು ಕೃತಕೃತ್ಯರಾದರು!

 

ಈ ಹೆಣ್ಣುಮಕ್ಕಳು ಜೋರಾಗಿ ಇರೋತನಕ ಹಳೇ ಸಂಪ್ರದಾಯಗಳ ಕಿರಿಕಿರಿ ತಪ್ಪೋ ಹಾಗಿಲ್ಲ; ಜೊತೆಗೆ ನಮ್ಮಂಥ ನಿರುಪದ್ರವಿ ಗಂಡಸರ ತಾಪತ್ರಯಗಳೂ ಕೂಡ…

 

 

‍ಲೇಖಕರು G

April 10, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. chandrakant

    ಆತ್ಮೀಯ ಎಚ್ ಎಸ ವೀ ಯವರೇ, ನಾಲ್ಕು ಸೊಸೆಯರನ್ನು ನಾಲ್ಕು ಕಡೆಯಿಂದ ತಂದಿದ್ದೂ ಅಲ್ಲದೆ, ಅದ್ಭುತವಾಗಿ ಅವರನ್ನು ಕಾಗದದ ಮೇಲೂ ತಂದದಕ್ಕೆ ಧನ್ಯವಾದಗಳು. ಚಂದ್ರಕಾಂತ್

    ಪ್ರತಿಕ್ರಿಯೆ
  2. ಸುಧೀಂದ್ರ ಹಾಲ್ದೊಡ್ಡೇರಿ

    ಸರ್, ನವಿರಾದ ಹಾಸ್ಯದ ಜತೆ ಜತೆಗೇ ಜೀವನಾನುಭವವನ್ನು ಕನಿಷ್ಟ ಮಾತುಗಳಲ್ಲಿ ಸೆರೆಹಿಡಿಯುವ ಶೈಲಿ ಅತ್ಯಂತ ಆಪ್ತವಾದದ್ದು. ನಿಮ್ಮ ಪಕ್ಕದಲ್ಲಿಯೇ ಕೂತು ಪ್ರವಚನದಂತೆ, ಕತೆ ಕೇಳುತ್ತಿದ್ದಂತೆ ಭಾಸವಾಯಿತು. ಕಾವ್ಯದಷ್ಟೇ, ಅಥವಾ ಅದಕ್ಕಿಂತಲೂ ಚೆಂದವಾಗಿ ಗದ್ಯ ಬರೆಯುತ್ತಿದ್ದೀರೆಂದರೆ ಅಪರಾಧವಲ್ಲ, ಅಲ್ಲವೆ? – ಸುಧೀಂದ್ರ ಹಾಲ್ದೊಡ್ಡೇರಿ

    ಪ್ರತಿಕ್ರಿಯೆ
  3. rAjashEkhar mALUr

    Sir, nimma nechchina soseya bagge yAvAga baruvudu kathana eMdu kAyuttidde… sogasAgide. nIvu bareyuva shaili atyaMta AptavAgide.

    ಪ್ರತಿಕ್ರಿಯೆ
  4. ವಿಕಾಸ್ ರಾವ್

    ಸರ್, ಸ೦ಸ್ಕಾರ-ಸ೦ಪ್ರದಾಯಗಳನ್ನ ತಲೆಮಾರಿನ ಅ೦ತರದಲ್ಲಿ ಹಿಡಿದಿಟ್ಟ ನಿಮ್ಮ ಲೇಖನ ಸೊಗಸಾಗಿದೆ. ತಿಳಿ ಹಾಸ್ಯಕ್ಕೆ ಗ೦ಭೀರವಾದ ಭಾಷೆಯನ್ನ ಬಳಸಿದ ಕ್ರಮ ತು೦ಬಾ ಸ್ವಾರಸ್ಯವಾಗಿದೆ.ಗದ್ಯ-ಪದ್ಯ ಎರಡರಲ್ಲೂ ನೀವು ಭಯ೦ಕರ ಸೈ…!-ವಿಕಾಸ್ ರಾವ್.

    ಪ್ರತಿಕ್ರಿಯೆ
  5. sritri

    ಕಂಬಿಕ್ರಿಯೆ ಬಗ್ಗೆ ಕೇಳಿ ನಿಮ್ಮ ಸೊಸೆ ನಿಮ್ಮ ಮನೆಯಿಂದ ಕಂಬಿ ಕೀಳದಿದ್ದುದು ನಿಮ್ಮ ಪುಣ್ಯ ಸರ್ 🙂 ಶಾಲಿನಿಯವರನ್ನು ನಿಮ್ಮ ಮನೆಯಲ್ಲಿ ಭೇಟಿಯಾಗಿ, ಮಾತನಾಡಿ ಅವರ ಸ್ನೇಹವನ್ನು (ಅವರು ಮಾಡಿಕೊಟ್ಟ ಕಾಫಿಯನ್ನೂ) ಸವಿದಿದ್ದೇನೆ. ನಿಮ್ಮ ಸೊಸೆಯರೆಲ್ಲ ಸೇರಿ ನಿಮ್ಮನ್ನು ಮತ್ತಷ್ಟು ಗೋಳುಹೊಯ್ದುಕೊಂಡು ನಿಮ್ಮಿಂದ ಇಂಥಹ ಇನ್ನಷ್ಟು ಲೇಖನ ಬರೆಸಲಿ.

    ಪ್ರತಿಕ್ರಿಯೆ
    • hsv

      nimma nijarUpa gottaagide! nIvE guTTubiTTukoTTiddu! nimma tamaasheyannu muMde innU chennaagi enjoy maaDuve!

      ಪ್ರತಿಕ್ರಿಯೆ
    • sritri

      ಗುಟ್ಟಿದ್ದರೆ ತಾನೇ ರಟ್ಟಾಗುವ ಭಯ? ನಿಮ್ಮಂತಹ ಸಹೃದಯರನ್ನು ತಮಾಷೆ ಮಾಡಿ ನಗುವ ಖುಷಿ ನನಗೆ ಸದಾ ಇರಲಿ 🙂

      ಪ್ರತಿಕ್ರಿಯೆ
  6. ರಾಮಚಂದ್ರ ನಾಡಿಗ್, ಕದರನಹಳ್ಳಿ

    ಸಾಕಷ್ಟು ಹಾಸ್ಯಭರಿತವಾಗಿದೆ…
    ಈ ಹಿಂದೆ ಪತ್ನಿ, ಅಜ್ಜಿ, ಅಮ್ಮನ ಬಗ್ಗೆ ಸಾಕಷ್ಟು ಬರೆದಿದ್ದೀರಿ…. ಈಗ ನಾಲ್ಕು ಜನ ಸೊಸೆಯರ ಬಗ್ಗೆ ಬರೆದಿರೋದು ಸಖತ್ತಾಗಿದೆ… ಮುಂದಿನ ಸರದಿ ಮಕ್ಕಳ ಬಗ್ಗೆ ಬರದ್ರೆ ಇನ್ನೂ ಚೆನ್ನಾಗಿರುತ್ತೆ…. ಅದನ್ನ ನಿರೀಕ್ಷಿಸ್ತಾ ಇದ್ದೀನಿ…..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: