ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಲ್ಲೊಂದು ಪ್ರೇಮ ಅರಳುತ್ತಿತ್ತು..

ಮೊನ್ನೆ ಗೋಪಾಲ ವಾಜಪೇಯಿ ಅವರು ‘ಜೋಕುಮಾರ ಸ್ವಾಮಿ’ ನಾಟಕದ ಫೋಟೋ ಒಂದನ್ನು ಕಳಿಸಿಕೊಟ್ಟು ‘ಇದರಲ್ಲಿರುವವರು ಯಾರು ಹೇಳಿ ನೋಡೋಣ?’ ಎಂದು ಕ್ವಿಜ್ ಏರ್ಪಡಿಸಿದ್ದರು. ಕ್ವಿಜ್ ಗೆ ಉತ್ತರ ಬಂತು.
ಆದರೆ ಅದು ದೂರದ ಸಿಡ್ನಿಯಲ್ಲಿ ಕುಳಿತ ಹುಡುಗನೊಬ್ಬನ ಎದೆಯೊಳಗೆ ಜುಂ  ಜುಂ ಗಾನಕ್ಕೆ ಕಾರಣಗಿತ್ತು. ಆ ಹುಡುಗ ಸುಧಾ ನಾರಾಯಣ್. ಸಿನೆಮಾ, ನಾಟಕ, ಕಿರುಚಿತ್ರ ಹೀಗೆ ಹಲವು ರಂಗದಲ್ಲಿ ಆಸಕ್ತಿ ಇರುವಾತ.
ಒಂದು ಫೋಟೋ ಕಾರಣದಿಂದಾಗಿ ನನ್ನ ಆತ್ಮೀಯ ಗೆಳೆಯರಿಬ್ಬರ ಪ್ರಣಯದ ಕಥೆ ಹೊರಬಿದ್ದಿದೆ. ಕೇಳಿ..

ಸುಧಾ ನಾರಾಯಣ್

ವರ್ಷ ೧೯೮೭. ಕಲ್ಕತ್ತಾದ ನಾಂದೀಕರ್ ನಾಟಕೋತ್ಸವದಲ್ಲಿ “ಜೋಕುಮಾರಸ್ವಾಮಿ” ಪ್ರದರ್ಶನ. ಬೆಂಗಳೂರಿನಿಂದ ರೈಲಿನಲ್ಲಿ ಹೊರಟ ಬೆನಕ ನಾಟಕ ತಂಡದಲ್ಲಿ ನಾನೂ ಇದ್ದೆ. ಈ ಫೋಟೋದಲ್ಲಿ ನನ್ನನ್ನು ಯಾರೂ ಗುರುತಿಸದೇ ಇರುವುದೇ ನನ್ನ ಖುಷಿಯ ಸಂಗತಿ.
ಅದು ದೂರದ ಕಲ್ಕತ್ತೆಗೆ ನನ್ನ ಎರಡನೇ ಭೇಟಿ. ಆದರೆ ನಾಟಕ ತಂಡದ ಜತೆ ಹೊರಟಾಗ ಯಾವ ಊರು, ಎಷ್ಟು ದೂರ ಎಂಬುದೆಲ್ಲಾ ಗೌಣವಾಗಿ ಬಿಡುತ್ತದೆ. ನಾಟಕ, ಪ್ರದರ್ಶನ, ಅದಕ್ಕೆ ಸಂಬಂಧಪಟ್ಟ ಸಂಗತಿಗಳು ಮನಸ್ಸನ್ನು ಆವರಿಸಿಬಿಡುತ್ತದೆ. ಅಲ್ಲದೆ ಈ ಪ್ರಯಾಣ ನನ್ನ ಮಟ್ಟಿಗಂತೂ ತುಸು ಹೆಚ್ಚು ವಿಶೇಷವೇ ಎನ್ನುವುದು ಸುಳ್ಳಲ್ಲ.
ಮೊದಲನೆಯದಾಗಿ ಅದು ಕಾರಂತರು ಮಧ್ಯ ಪ್ರದೇಶದ ಜೈಲಿನ ಜಂಜಡ ಕಳೆದು ಹಿಂತಿರುಗಿದ ವರ್ಷ. ನನಗೆ ನೆನಪಿರುವಂತೆ ಕಾರಂತರು ಹಿಂದಿರುಗಿದಾಗ ಮೊದಲು ತೊಡಗಿಕೊಂಡ ಪ್ರದರ್ಶನವಿದು. ಅವರು ನೇರವಾಗಿ ಕಲ್ಕತ್ತೆಗೆ ಬಂದು ನಮ್ಮನ್ನು ಸೇರಿಕೊಂಡಿದ್ದರು.
ನಾನು ಆ ಪ್ರವಾಸದಲ್ಲಿ ನನ್ನ ಜತೆಗಿದ್ದ ನನ್ನವಳ ಪ್ರೇಮದಲ್ಲಿ ಮುಳುಗಿದ್ದೆ. ನಾಟಕರಂಗದಲ್ಲಿ ಅದು ಅಂತಹ ವಿಶೇಷವೇನೂ ಅಲ್ಲ. ನಾಟಕದ ಗುಂಪೆಂದ ಮೇಲೆ, ಪ್ರೇಮ, ಕಾಮ, ಪ್ರಣಯ, ವಿರಹ, ನೋವು, ಉತ್ಸಾಹ ಎಲ್ಲವೂ ಇದ್ದದ್ದೆ. ಆದರೆ ಈ ಗುಂಪಿನಲ್ಲಿ ಒಂದಕ್ಕಿಂತ ಹೆಚ್ಚು ಪ್ರಣಯದ ದೀಪಗಳು ಉರಿಯುತ್ತಿದ್ದವು ಎಂಬುದು ಒಂದು ವಿಶೇಷವೇ. ಆ ಪ್ರಣಯಗಳ ಬಗ್ಗೆ ಎಲ್ಲರಿಗೂ ಗೊತ್ತಿದ್ದೂ ಗೊತ್ತಿಲ್ಲದಂತೆ ಇದ್ದು ಸಮಯ ಸಿಕ್ಕಾಗ ಅದರ ಬಗ್ಗೆ ಮಾತಿನ ಚಟಾಕಿ ಹಾರುತ್ತಿದ್ದವು. ಏನೋ ಗೊತ್ತಿರುವಂತೆ ಕಣ್ಣುಗಳು ಮಾತಾಡಿಕೊಳ್ಳುತ್ತಿದ್ದವು.

ರೈಲಿನ ಆ ಉದ್ದನೆಯ ಪ್ರಯಾಣದಲ್ಲಿ ನನ್ನವಳ ಜತೆ ರೈಲಿನ ಬಾಗಿಲಲ್ಲಿ ಕೂತು, ಬೆಳದಿಂಗಳನ್ನು ಹಾಸಿಕೊಂಡ ಹಳ್ಳಿ, ಹೊಲ, ಕಾಡು ಮೇಡು ದಾಟಿ ಹೋಗುವುದನ್ನು ನಡು ರಾತ್ರಿ ಮೀರುವವರೆಗೂ ದಿಟ್ಟಿಸುತ್ತಾ ಆನಂದಿಸಿದ್ದೆವು. ಕಲ್ಕತ್ತಾ ಸಮೀಪವಾದಂತೆ ಕಾಣಸಿಗುವ ಕೊಳಗಳು, ಹಳ್ಳಿಗಳು ಸಿಕ್ಕಾಪಟ್ಟೆ ರಮ್ಯವಾಗಿ ಕಂಡ ದಿನಗಳು ಅವು.
ಭೋಪಾಲದಿಂದ ಹಿಂದಿರುಗಿದ್ದ ಕಾರಂತರಿಗೆ ಸ್ವಯಂದೃಢೀಕರಣದ ಅಗತ್ಯ ಇದ್ದಂತೆ ತೋರುತ್ತಿತ್ತು. ಕುಗ್ಗಿದ್ದರು. ಕಾಂತಿಹೀನರಾಗಿದ್ದರು. ಅವರ ನಾಜೂಕು ಸ್ಥಿತಿಯನ್ನು ಅರಿತು ಯಾರೂ ಅವರನ್ನು ಹೆಚ್ಚು ಮಾತಾಡಿಸುತ್ತಿರಲಿಲ್ಲ. ಅವರು ತಾವಾಗಿಯೇ ದಿಢೀರನೆ ನಾಟಕದಲ್ಲಿ ಭಾಗವತರ ಜತೆಗಿನ ಹಿಮ್ಮೇಳದ ಪಾತ್ರ ಮಾಡುತ್ತೇನೆ ಎಂದು ಹಟ ಹಿಡಿದರು. ಅವರಿಗೆ ಮಾತುಗಳು ಮರೆತಿದ್ದವು. ಬೆಳಗಿನ ಅಭ್ಯಾಸದಲ್ಲಿ ಕೈಯಲ್ಲಿ ಪುಸ್ತಕ ಹಿಡಿದೇ ನಟಿಸಿದ ನೆನಪು. ಮಧ್ಯಾಹ್ನ ಅತ್ತಿತ್ತ ಓಡಾಡುತ್ತಾ ತಮ್ಮ ಮಾತುಗಳನ್ನು ಗಟ್ಟು ಮಾಡುತ್ತಿದ್ದರು. ಸಂಜೆಯಾಗುತ್ತಿದ್ದಂತೆ ಅವರ ಚಡಪಡಿಕೆ ಹೆಚ್ಚಾಗಿತ್ತು. ಅವರು ಒಂದು ಬಗೆಯ ಹಟದಲ್ಲಿ ಇದ್ದಂತೆ ಕಂಡಿತು.
ಆಗ ರಂಗದ ಪಕ್ಕದಲ್ಲಿದ್ದ ಒಂದು ಮೆಟ್ಟಿಲ ಮೇಲೆ ಕೂತು ಅವರು ಬಾಯಿ ಪಾಠ ಮಾಡುತ್ತಿದ್ದರು. ಹಾದು ಹೋಗುತ್ತಿದ್ದ ನನ್ನನ್ನು ಒಂದು ಕ್ಷಣ ಕಣ್ಣೆತ್ತಿ ದಿಟ್ಟಿಸಿದರು. ಸಣ್ಣಗೆ ಭಾರದ ನಗೆ ನಕ್ಕರು. ಆ ನೋಟ, ಆ ನಗು, ಅದರ ಹಿಂದಿದ್ದ ಅಸಹಾಯಕತೆಯ ನೆರಳು ನನ್ನನ್ನು ಅಲ್ಲಾಡಿಸಿ ಬಿಟ್ಟಿತು. ಆ ಗಳಿಗೆಯನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ.
ಇಡ್ಲಿ ಸಾಂಬಾರಿನಂತಹ ನಾಷ್ಟಕ್ಕೆ ಒಗ್ಗಿದ ನಮ್ಮ ನಾಲಗೆಗೆ ಬಂಗಾಳಿಗಳ ರಸಗೊಲ್ಲ ಒಗ್ಗುತ್ತಲೇ ಇರಲಿಲ್ಲ. ಹಾಗೆಂದು ಯಾರೂ ದೂರುವ ಮಾತಿಲ್ಲ. ಹೆಚ್ಚೆಂದರೆ ಒಳಗೊಳಗೇ ಗೊಣಗುವುದಷ್ಟೆ. ಕಡೆಯ ದಿನವೂ ನಮಗೆ ಬೆಳಗಿನ ತಿಂಡಿಗೆ ರಸಗೊಲ್ಲ, ಬಾಳೆಹಣ್ಣು ಇಟ್ಟಿದ್ದರು. ನಮ್ಮೊಡನಿದ್ದ ಅತ್ಯಂತ ನಿಪುಣ ತಬಲಾವಾದಕ ಜೆರ್ರಿ ಅನಂತರಾಮ್ ತುಂಬಾ ಚುರುಕು ಮಾತಿನ ಹಾಸ್ಯದ ವ್ಯಕ್ತಿ. ಸಾಲಾಗಿ ಟೇಬಲ್ಲಿನ ಮೇಲಿಟ್ಟ ಸಿಹಿ ತಿಂಡಿ ನೋಡಿದ್ದೇ ತಮ್ಮ ದಪ್ಪ ಗಾಜಿನ ಕನ್ನಡಕದ ಹಿಂದೆ ಕಣ್ಣು ಹೊರಳಿಸುತ್ತಾ ‘ಅಯ್ಯೋ ಮತ್ತೆ ಅದೇ ಕತೆ. ಎರಡು ರಸಗೊಲ್ಲ ಒಂದು ಬಾಳೇಹಣ್ಣು’ ಎಂದುದೇ ತಡ ಎಲ್ಲರೂ ಗೊಳ್ಳೆಂದು ನಕ್ಕಿದ್ದೆವು. ಅದು ಹಲವು ದಿನ ನಮ್ಮ ನಡುವೆ ಜೋಕಾಗಿ ಉಳಿದಿತ್ತು.
ಅಲ್ಲಿದ್ದ ಒಂದೆರಡು ದಿನದಲ್ಲೇ ಒಂದು ಮುಂಜಾನೆ ಬೇಗನೇ ಎದ್ದು ನನ್ನವಳನ್ನು ಎಬ್ಬಿಸಿದೆ. ಕಲ್ಕತ್ತಾವನ್ನು ಗಪ್ಪನೆ ಮುಚ್ಚಿದ್ದ ಮಂಜಿನ ರಸ್ತೆಯಲ್ಲಿ ಅಡ್ಡಾಡಿ ಬರಲು ಕರೆದೆ. ಅವಳೂ ಹೊರಟಳು. ನಿರ್ಜನ ರಸ್ತೆಗಳಲ್ಲಿ ನಾವಿದ್ದ ತಾಣದ ಹೊರಗೆ ಒಂದು ಸುತ್ತು ಹೊರಟೆವು. ಹತ್ತು ಅಡಿಗಿಂತ ದೂರ ಏನೂ ಕಾಣದಂತಹ ಸುಂದರ ಮಂಜು. ಒಂದಷ್ಟು ದೂರ ನಡೆಯುವಾಗ ಮೆಲ್ಲನೆ ಮಂಜು ಇಳಿಯುತ್ತಿತ್ತು. ಆದರೆ, ದೂರದಲ್ಲಿ ನಿಂತ ಗಂಡಸರ ಒಂದು ಗುಂಪು ನಮ್ಮನ್ನೇ ನೋಡುವುದು ಯಾಕೋ ಸರಿಕಾಣಲಿಲ್ಲ. ಮನಸ್ಸಿನ ಮೂಲೆಯಲ್ಲಿ ಆತಂಕದ ಹೊಗೆ. ಇಬ್ಬರಿಗೂ ಹಾಗೇ ಅನಿಸಿದ್ದರಿಂದ ಅಲ್ಲೇ ನಿಂತೆವು. ಗುಂಪು ನಮ್ಮತ್ತ ಮೆಲ್ಲನೆ ಬರಲಾರಂಭಿಸಿತು. ನಾವು ಹಿಂತಿರುಗಿ ಹೋಗುವುದು ವಾಸಿ ಎಂದು ಪಿಸುಗುಟ್ಟಿಕೊಂಡು ಹೊರಟೆವು. ಗುಂಪು ನಮ್ಮನ್ನು ಹಿಂಬಾಲಿಸತೊಡಗಿತು. ಏನೋ ಕೂಗಿದರು. ನಾವು ಸರಸರನೆ ಹೆಜ್ಜೆ ಹಾಕುತ್ತ ರಸ್ತೆಯುದ್ದಕ್ಕೂ ನಡೆದೆವು. ಅಷ್ಟರಲ್ಲಿ ಮಂಜಿನ ಬೆಳಗನ್ನು ಸವಿಯಲು ನಮ್ಮ ತಂಡದ ಹಲವರು ಮಾತಾಡುತ್ತಾ ಎದುರಾದರು. ನಾವು ಆ ಗಂಡಸರ ಗುಂಪು ಬಗ್ಗೆ ಹೇಳಿದೆವು. ನೋಡೋಣ ನಡಿಯಿರಿ ಎಂದು ಎಲ್ಲರೂ ಹೊರಟೆವು. ಮಂಜಿನಲ್ಲಿ ಆ ಗುಂಪು ಕರಗಿ ಹೋಗಿತ್ತು. ಆ ಮಂಜಿನ ಬೆಳಗಿನ ಚಳಿಯಲ್ಲೂ ನಾನು ಸಣ್ಣಗೆ ಬೆವರಿದ್ದೆ.
ಇಂತಹ ನಾಟಕದ ತಿರುಗಾಟದ ಚಿತ್ರಗಳು ನಮ್ಮಲ್ಲಿ ಉಳಿಸುವುದು ನೀಹಾರಿಕೆಯಂತಹ ನೆನಪುಗಳನ್ನು. ಆದರೆ ಇಂತಹ ಸಾಮೂಹಿಕ ನೆನಪುಗಳಿಗೆ ಹಲವು ಕಣ್ಣುಗಳು, ಹಲವಾರು ಬಣ್ಣಗಳು ಎಂಬುದೇ ಒಂದು ವೈಶಿಷ್ಟ್ಯ.

‍ಲೇಖಕರು G

9 July, 2013

6 Comments

  1. narayan raichur

    geleya sudarshana, Anisikegalau aapyaayamaanavaagive !!!- photodalli yaaroo gurutisillaa yaake/ – naanu gurutisi pratikrike needidde ; – narayan raichur

  2. basavaraja.kp

    savi savi nenapu

  3. ಸುದರ್ಶನ್

    ಹಹ, ಹೌದೆ ನಾರಾಯಣ ರಾಯಚೂರ್?! ಪ್ರತಿಕ್ರಿಯೆಯಲ್ಲಿ ಇರಲಿಲ್ಲ… 😉

  4. ಕನಕಾಪುರ ನಾರಾಯಣ

    ಸುದರ್ಶನ್,ಕೆಲವು ಮುಖಗಳು ಬದಲಾಗಿಲ್ಲ,ಕೆಲವರ ಪರಿಚಯವಿಲ್ಲ, ನಮಗೆ ಗೆಸ್ ಮಾಡಿ ಸಾಕಯ್ತು, ತಾವೇ ಚಿತ್ರದಲ್ಲಿರುವವರ ಹೆಸರು ತಿಳಿಸಿದರೆ ತುಂಬಾ ಥ್ಯಾಂಕ್ಸ್ – ಕನಕಾಪುರ ನಾಣಿ

    • ಸುದರ್ಶನ್

      ನಾರಾಯಣ, ಕ್ವಿಜಿನ ಮೂಲ ಪುಟ ನೋಡಿ – ಹೆಚ್ಚು ಕಡಿಮೆ ಎಲ್ಲರನ್ನೂ ಗುರುತಿಸಿದ್ದಾರೆ.

  5. Aravind

    The one sitting at the left of Kambar and behind the one at harmonium…..seems to be Sudarshan !!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading