ಶ್ರೀದೇವಿ ಕೆರೆಮನೆ
ಕೈಯ್ಯಲ್ಲಿ ಹೂವು ಹಣ್ಣು ಅಕ್ಷತೆ
ಕುಂಕುಮ, ಧೂಪದ ಬಾನಿ ಒಂದಿಷ್ಟು ಗಂಧ
ಜೊತೆಗೆ ಹೆಜ್ಜೆಯಿಟ್ಟ ಸಖಿಯರನ್ನೆಲ್ಲ
ಜುಲುಮೆಯಿಂದ ದೂರ ಸರಿಸಿ
ದೂರದ ಶಿವಾಲಯಕೆ ಹೊರಟಾಕೆಯ
ಒಳಗೆ ನಿಗಿನಿಗಿಸುವ ಕೆಂಡ
ಶಿವಾಲಯದ ಆಸುಪಾಸಲ್ಲೆಲ್ಲೂ
ಅಲ್ಲಮನ ಸುಳಿವಿಲ್ಲ
ಡಮರುಗದ ದನಿಯೂ ಮೊರೆಯುತ್ತಿಲ್ಲ
ಗರ್ಭಗುಡಿಯ ಒಳಗೆ ಅನ್ಯಮನಸ್ಕಳಾಗಿ
ಹೂ ಮುಡಿಸಿ, ಕುಂಕುಮವಿಟ್ಟಳು
ನಿಟ್ಟುಸಿರಿಟ್ಟು ಒಳಗೊಳಗೇ ಕೋಪಿಸಿದಳು
ಬಂದಿದ್ದು ನಿನಗಾಗಿ ಅಲ್ಲವೋ ಸ್ಮಶಾನವಾಸಿ,
ಎಲ್ಲಾತ? ಜಗವನ್ನೇ ಕುಣಿಸುವ ಮದ್ದಳೆಯವ?
ಪ್ರಶ್ನಿಸಿ ಕೊಂಕಿಸಿದಳು ಕತ್ತು.
ದಿಟ್ಟಿಸಿದರೆ ಗಂಧ ಪೂಸುವಾಗ ಶಿವನನ್ನೇ
ಅರರೆ, ಮನ ಕದ್ದು ,ಬವಣೆಗೊಳ ಪಡಿಸಿ
ಲಿಂಗದೊಳಗೆ ಅಡಗಿ ಕುಳಿತಿದ್ದಾನಲ್ಲ
ದಿನವಿಡೀ ಆತನನ್ನೇ ಕಂಡಂತಾಗುವ ಭ್ರಮೆಗೆ
ರೋಸಿ ಕಣ್ಣುಜ್ಜಿಕೊಂಡರೂ
ಅಲ್ಲಿ ಕಂಡಿದ್ದು ಲಿಂಗವಲ್ಲದ ಅಲ್ಲಮ
ಮಂತ್ರಘೋಷ, ಜಾಗಟೆಯ ದನಿ
ಕೇಳಿಸಿದರೂ ಕಿವಿಗಿಳಿಯಲಿಲ್ಲ
ಧೂಪದಾರತಿ, ಮಂಗಳಾರತಿ ಕಣ್ತುಂಬಲಿಲ್ಲ
ಲಿಂಗದೊಳಗೆ ಕಣ್ಣು ಮುಚ್ಚಾಲೆಯಾಡುವವನೇ
ಕಣ್ಣು ತಪ್ಪಿಸುವ ನಾಟಕವೇಕೇ?
ಮನದೊಳಗೇ ಅನುಸಂಧಾನ ನಡೆಸುತ್ತ
ಲಿಂಗದೆದುರು ಶಿಲೆಯಾದವಳ ಕಂಡು
ಹಣ್ಣು ಹಾಲು ತಂದಿಲ್ಲವೇ?
ನೈವೇದ್ಯದ ಅರ್ಪಣೆಗೇನಿದೆ?
ಮೀಸೆ ಮರೆಯಲ್ಲೇ ನಗುತ್ತ ಕೇಳಿದವರಿಗೆ
ನನ್ನನ್ನೇ ಆತನಿಗೆ ಸಮರ್ಪಿಸುತ್ತೇನೆ ಎಂದುಸುರಿಯೇ ಬಿಟ್ಟಳು ತರಳೆ
ಲೋಕ ಬೆಚ್ಚಿಬಿದ್ದು, ಗಡಗಡನೆ ನಡುಗಿತು,
ಬೂದಿ ಬಳಿದು, ಊರೂರು ತಿರುಗುವ ಶಿವನಿಗೆ
ತನ್ನನ್ನೇ ನೀಡುವ ಶಪಥಗೈಯ್ಯುವುದೇ?
ಹಾಹಾಕಾರ ಎಲ್ಲೆಲ್ಲೂ
ಲೋಕಪಾಲನಿಗೇ ಈ ಆಹ್ವಾನವೇ?
ಜಗನ್ಮಾತೆಗೆ ಸವತಿಯಾಗುವ ಕನಸೇ?
ಮನದಲ್ಲೇ ನಕ್ಕಳು, ಅಲ್ಲೇ ಅಡಗಿಸಿದಳು
ಆತ ಎಲ್ಲರಿಗೂ ಭಕ್ತವತ್ಸಲ
ಬಯಸಿದ ಹೆಣ್ಣಿಗೆ ಮಾತ್ರ ಅಸಂಗತ
ನನಗಲ್ಲ, ಶಿವೆಗೂ ಸಿಗದ ಅಲ್ಲಮನೀತ.
ಕುಹಕದ ಎಲ್ಲ ಮಾತುಗಳಿಗೆ ಬೆನ್ನು ಹಾಕಿ
ಇಹ ಪರವೆರಡರಲ್ಲೂ ಒಂದೇ ಗುರಿ ಹೊತ್ತು
ಹೊರಟೇ ಬಿಟ್ಟಳು ಮದ್ದಳೆಯ ದನಿಯರಸಿ






ಚಹಾದ ಅಮಲಿಳಿಯಿತು.ಈಗ ಎಲ್ಲೆಲ್ಲೂ ನಿಸ್ಸೀಮ ಅಲ್ಲಮ!
ಅಲ್ಲಮ ಅಮಲೇರಿಸಿದ್ದಾನೆ
ಶ್ರೀದೇವಿ ಮೇಡಂ ಚೆಂದದ ಕವಿತೆ….
Thank you madam
ಕವಿತೆ ತುಂಬಾ ಚೆನ್ನಾಗಿದೆ ಶ್ರೀದೇವಿ keep it up
ಥ್ಯಾಂಕ್ಯೂಅಮ್ಮ
ಆಹಾ! ದಿಟ್ಟೆಯವಳು!
ಬಯಸಿದ್ದು ಪಡೆಯಲು ದಿಟ್ಟೆ ಆಗಲೇಬೇಕು..
ತಮ್ಮಂತಹ ಹಿರಿಯರು ಹೀಗೆ ಹೊಗ ಳಿದ ರೆ…
ತಮ್ಮ ಆಶಿರ್ವಾದ ಕುಲಕರ್ಣಿ ಸರ್
realy amazing ….liked it vry much
Thank you sir
ನನಗಲ್ಲ ಶಿವೆಗೂ ಸಿಗದ ಅಲ್ಲಮನೀತ ಆಹಾ ಅತೀ ಸುಂದರ ಇಷ್ಟ ವಾಯಿತು ಧನ್ಯವಾದಗಳು ನಿಮಗೆ
ಥ್ಯಾಂಕ್ಯೂ
ನಿಮ್ಮ ಅದ್ಭುತವಾದ ಕಲ್ಪನಾ ಶಕ್ತಿಗೆ ಪದಗಳ ವರ್ಣನೆ ಸಾಕಾಗುವದಿಲ್ಲಾ .ಅಘಾದ ಜ್ಞಾನ ಭಂಡಾರ ನಿಮಗೆ ಗೊತ್ತಿಲ್ಲದ ವಿಷಯ ಇಲ್ಲ ವೆನಿಸುತ್ತದೆ. ಅಲ್ಲಮನನ್ನು ನಮಗೆಲ್ಲ ಹೊಸದಾಗಿ ವಿನುತನವಾಗಿ ಪರಿಚಯಿಸುತ್ತಿದ್ದಿರಾ. ತಿಳಿಯುವ ಕುತುಹಲದಿಂದಲ್ಲಾ ನಿಮ್ಮ ಬರವಣಿಗೆಯ ಶೈಲಿಗೆ ಮನಸೂತು ಅಲ್ಲಮನನ್ನು ಅರಿಯುವ ಹಾಗಾಗಿದೆ.ತುಂಬಾ ಸುಂದರ ವಾಖ್ಯಾನ.
ಸುಂದರ ಅಲ್ಲಮ ಮಾಯೆಯ ಪ್ರೀತಿಗೆ ಸ್ಪಂದಿಸದೆ ಅನ್ಯಾಯ ಮಾಡಿಬಿಟ್ಟ….