ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಲ್ಲಮನೆಂಬ ಮಾಯೆ ಎಲ್ಲವೂ ಬಟಾಬಯಲು..

ಶ್ರೀದೇವಿ ಕೆರೆಮನೆ

ಬಯಸಿ ಬಯಸಿ ಎಲ್ಲವನ್ನೂ ಬಿಟ್ಟು
ಸಂದಿಗೊಂದಿಗಳಲ್ಲೆಲ್ಲ ತಡುಕಿ
ಯಾವುದೋ ಪಾಳು ಶಿವಾಲಯದಲ್ಲಿ
ತನ್ನನ್ನೇ ಮರೆತು ಡಮರುಗದ
ನಾದದಲ್ಲಿ ತಲ್ಲೀನನಾದ ಅಲ್ಲಮನನ್ನು
ಹುಡುಕಿ ಹೊರಟಳು ಮಾಯೆ.

ಮುಖದಲ್ಲಿಷ್ಟು ಸಿಡುಕು
ಕಣ್ಣಲ್ಲಿ ನಿಗಿನಿಗಿಸುವ ಕೆಂಡ
ಬಯಸಿ ಬಂದ ಮಾಯೆಯ ಎದೆಯೊಳಗೆ
ಹೇಳಿಕೊಳ್ಳಲಾಗದ ಉಮ್ಮಳ
ಮನದ ಬಯಕೆ ಅರುಹಲಾಗದ ಒತ್ತಡ
ಹೇಳಿಕೊಳ್ಳಲೆಂದು ಬಳಿಸಾಗಿದರೆ
ಅಲ್ಲಮನ ಡಮರುಗದ ಸದ್ದೀಗ
ರಣಚಂಡೆಯಾಗಿ ಎದೆ ನಡುಗಿಸುತ್ತಿದೆ

ಮನದಾಳದ ಮಾತನ್ನು
ಅಲ್ಲೇ ಹುದುಗಿಸಿಕೊಂಡರೆ
ಮೈ ಕಿಚ್ಚೆದ್ದ ಬೆಂಕಿ
ಸುಡುವ ಬೆಂಕಿಯ ಉಡಿಯಲ್ಲಿ
ಅಡಗಿಸಿಟ್ಟುಕೊಂಡ ಯಾತನೆ
ಒಡಲೆಲ್ಲ ಬೆಂದು ಎದ್ದ ನೀರಗುಳ್ಳೆ
ಟಪಟಪನೆ ಒಡೆದು ಕೀವು ಸೋರುತ್ತ
ನರಕ ಯಾತನೆಯ ಅನುಭವ

ಕಣ್ಣೆದುರಿಗಿರುವ ಅಲ್ಲಮನನ್ನು
ಬೆರಳ ತುದಿಯಲ್ಲಾದರೂ
ಒಮ್ಮೆ ಸೋಕಬೇಕೆಂಬ ಆಸೆಗೆ
ಕಟ್ಟು ಹಾಕಲಾಗದೇ ಗುಡಿಯಲ್ಲಿ
ತುಂಬಿರುವ ಜನಜಂಗುಳಿಯಲ್ಲಿ
ಒಮ್ಮೆ ಮುಟ್ಟಲು ಹೋದರೆ
ಎಲ್ಲವೂ ಬಟಾಬಯಲು
ಅಲ್ಲಮನೆಂಬ ಮಾಯೆ
ಈ ಮಾಯೆಗೆ ಯಾವಾಗಲೂ ಮಾಯೆಯೇ.

 

 

‍ಲೇಖಕರು Avadhi GK

15 March, 2018

11 Comments

  1. ರಮೇಶ ಗಬ್ಬೂರ್

    ಕವಿತೆ ತುಂಬಾ ಹಿಡಿಸಿತು… ಮಾಯೆಗೆ ಯಾವಾಗಲು ಮಾಯೆ ಎಂಬ ಸಾಲು… ಹಿಡಿದಿಡಲಾಗದ ಚೌಕಟ್ಟಿನಾಚೆಗೆ ನಿಂತು ನೋಡಿದಾಗ ನಾನು ನೀನು ಎಲ್ಲವೂ ಮಾಯೆಯಾಗಿ ತೋರುವುದನ್ನು ಹೇಳುವ ಕವಯಿತ್ರಿ ಕವಿತೆಯನ್ನು ಬೇಗ ಮುಗಿಸುತ್ತಾರೆ. ತಾವು ಮಾಯವಾಗಿ ನಮ್ಮನ್ನು ಮಾಯೆಯ ಮಂದಿರದೊಳಗೆ ತಂದು ನಿಲ್ಲಿಸಿ ಜನಜಂಗುಳಿ ಯಲ್ಲಿ ಅಲ್ಲಮನ ಕಾಣಿಸುವ ಮಂದಿರದೊಳಗೆ ಇಲ್ಲವಾಗಿಸುವ ಮಂಟಪ ಪ್ರಜ್ಞೆಗೆ ಕವಿತೆ ಸಾಗುತ್ತದೆ….
    ರಮೇಶ ಗಬ್ಬೂರ್

  2. Prema Naduvinamani

    Prema Naduvinamani
    Nnice poem Shreedevi

  3. ರಘುನಾಥ

    ಚಂದದ ಕವನ

  4. JAYASHRI ABBIGERI

    ಅರ್ಥಪೂರ್ಣ ಕವಿತೆ
    ಚೆಂದದ ಪದಪುಂಜಗಳಲ್ಲಿ ಚೆನ್ನಾಗಿ ಹೆಣೆದಿದ್ದೀರಿ
    ಶ್ರೀ ಮೇಡಂ

  5. ಧನಪಾಲ ನೆಲವಾಗಿಲು

    ಕವನ ಚೆನ್ನಾಗಿದೆ.

  6. ದಿನೇಶ್.ಎಂ

    ಮಾಯೆ ಅಲ್ಲಮ…ಕವಿತೆ ಎರಡೆರಡುಸಲ ಓದಿಸಿಕೊಂಡಿತು

  7. Sujatha lakshmipura

    ಅಲ್ಲಮನೆಂಬ ಮಾಯೆಗೆ ಈ ಮಾಯೆ ಮುಟ್ಟಲಾಗದು.ಅಲ್ಲಮನೆಂಬ ಮಾಯೆ ಬಟಾಬಯಲು..
    ನಿಜ ಶ್ರೀದೇವಿ ಮೇಡಮ್, ಯಾರಿಗೂ ದಕ್ಕದ ಬಟಾಬಯಲಿನ ಅಲ್ಲಮನ ವ್ಯಕ್ತಿತ್ವ ಮಾತ್ರವಲ್ಲಾ ಅವನ ವಚನಗಳೂ ಕೂಡ ಒಂದೇ ಓದಿಗೆ ಸಿಗದ ಮಾಯೆ.
    ಕವಿತೆ ಚನ್ನಾಗಿದೆ..ಬಯಸಿ ಬಂದ‌ ಮಾಯೆಯ ತಳಮಳ ..ಮುಟ್ಟುವ ಬಯಕೆಯ ತೀವ್ರತೆ ಮತ್ತು ಅಲ್ಲಮನ ತಲ್ಲೀನತೆಯ ಡಮರುಗದ ಸದ್ದು…ಒಮ್ಮೆಗೆ ಬಟಾಬಯಲು..

  8. Shridhar Banvasi

    ಅಲ್ಲಮನನ್ನು ಆಳವಾಗಿ ಅರಿತವರು ಮಾತ್ರ ಇಂತಹ ಸುಂದರ ಕಾವ್ಯವನ್ನು ರಚಿಸಬಲ್ಲರು. ಕವಿತೆ ತುಂಬಾ ಚೆನ್ನಾಗಿದೆ. ‌ಅಲ್ಲಮನ ಸಿದ್ದಿಕ್ಷೇತ್ರವಾದ ಬನವಾಸಿಯವನಾದ ನನಗೆ ಈ ಕವಿತೆ ಆಪ್ತವಾಯಿತು.
    ಇತಿ
    ಶ್ರೀಧರ ಬನವಾಸಿ

  9. nutana doshetty

    Sridevi
    Illi Allma endare Shivane ?
    Salugalu Chennagiddaroo taleyaguttilla..Gojalu annisitu..

    Nutana

  10. Sangeeta Kalmane

    ಮಾಯೆಯ ತುಡಿತ ಎಷ್ಟು ಚೆನ್ನಾಗಿ ಪಳಗಿಸಿದ್ದೀರಿ ಕವನದಲ್ಲಿ!!!

  11. Sreedhar

    ಪದಪುಂಜದ ಮಾಲೆ ಅಲ್ಲಮನ ಬಗ್ಗೆ ಚೆನ್ನಾಗಿತ್ತು .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading