ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರ್ಥವಾಗಲು ಬೆಳಕೇ ಬೇಕು!

ನಾಗರಾಜ್ ಹರಪನಹಳ್ಳಿ

ಖಾಲಿ‌ ಕೋಣೆ
ಖಾಲಿ ಖಾಲಿಯಾಗಿಲ್ಲ
ಶೋನು
ಅಲ್ಲಿ ಪಿಸುಮಾತುಗಳು
ಜೀವಂತವಾಗಿವೆ

ಮುಗಿಲು ನೆಲ
ಈಗ ಒಬ್ಬರನ್ನೊಬ್ಬರು ದಿಟ್ಟಿಸುತ್ತಿವೆ
ನಮ್ಮ ವಿರಹ ಅವಕ್ಕೂ ತಟ್ಟಿದೆ

ಮರ ಅಳುತ್ತಿದೆ
ಬೇರಿಗೆ ನೀರೆರೆದು
ಬದುಕಿಸು ಎಂದು


ನನಗೆ ಗೊತ್ತಿತ್ತು
ಹೀಗೆ ಹಠಾತ್
ಮಾತು ನಿಲ್ಲಿಸುವೆ ಎಂದು
ಅದಕ್ಕೆ ಕಾರಣ ನೀನಲ್ಲವೆಂದು

ಒಂದು ವರ್ಷ
ಎರಡು ವರ್ಷ ಕರಾರಿನಿಂದ
ಈ ಕಠೋರ ವ್ಯವಸ್ಥೆ ಬದಲಾಗುವುದಿಲ್ಲ;
ಇತಿಹಾಸದ ಎಲ್ಲಾ ಪ್ರೇಮ ಕಥಾನಕಗಳ ಕೆದಕಿ ನೋಡು‌

ಸೋಜಿಗ ಅಂದರೆ
ಬೇರೇನಲ್ಲ;
ದೂರ ದೂರ ದೇಹ
ದೂರ ದೂರ ಊರು

ದೂರವೇ ಇರುವ
ನೀನು
ಎದುರೇ ಬಂದಂತಾಗುವುದು
ನಿನ್ನ ಚಿತ್ರವನ್ನೇ ಕಣ್ಣು
ಪ್ರತಿರೂಪಿಸುವುದು
ನಿನ್ನ ಹೆಸರನ್ನೇ ನಾಲಿಗೆ
ಉಸುರುವುದು
ಪ್ರೇಮ

ಇನ್ನೇನು ಉಳಿದಿತ್ತು
ನಮ್ಮ ನಡುವೆ
ಮೂರ್ಖ ಜಗತ್ತಿಗೆ
ಒಡೆಯುವುದು ಮಾತ್ರ ಗೊತ್ತು

ಪ್ರೇಮಿಗಳು
ಭಾವಚಿತ್ರವ ಎದೆಯಲ್ಲಿಟ್ಟು
ನೂರು ವರ್ಷ ಉಸಿರಾಡಬಲ್ಲರು;
ಸ್ಮರಣೆ ಮಾತ್ರದಿಂದ ಬದುಕಬಲ್ಲರೆಂದು
ದ್ವೇಷಕ್ಕೆ ಅರ್ಥವಾಗಲಾರದು

ಹೆಚ್ಚೆಂದರೇನು ಮಾಡಿಯಾರು
ದೇಹಗಳ ಛಿದ್ರ ಮಾಡಬಹುದು
ಪ್ರೀತಿಯ ಋಜುತ್ವ
ಬೆಳಕಿನ ಹಾಗೆ
ವಿಪರ್ಯಾಸವೆಂದರೆ
ಕತ್ತಲಿಗೆ ಕತ್ತಲೆಂದು
ಅರ್ಥವಾಗಲು ಬೆಳಕೇ ಬೇಕು!

‍ಲೇಖಕರು Avadhi

22 January, 2021

1 Comment

  1. ನೂತನ ದೋಶೆಟ್ಟಿ

    ನಾಗರಾಜ್..
    ಶೋನೂ…. ಎಂಬ ಪದದಿಂದಲೇ ಕವಿತೆ ಹತ್ತಿರವಾಯಿತು. ಇಲ್ಲೇ ಕಡಲ ಆಳವನ್ನು ಕವಿತೆಗೆ ತೋರಿಸಿದಿರಿ. ವ್ಹಾ .. ಎಂದರೆ ಏನೂ ಹೇಳಿದಂತೆ ಆಗುವುದಿಲ್ಲ. ನಿಮ್ಮ ಇಬ್ಬನಿಯ ಹನಿ ಈಗ ಕಡಲಾಳದ ಮೊರೆತವಾಗಿದೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading