ಬಾವಿ ಕಟ್ಟೆ
ಸ್ಮಿತಾ ಅಮೃತರಾಜ್. ಸಂಪಾಜೆ
ಗುದ್ದಿ ಗುದ್ದಿ ಆಳಕ್ಕೆ ಅಗೆದು
ಸಿಕ್ಕ ಜೀವ ಜಲಕ್ಕೆ
ಅತ್ತ ಇತ್ತ ಮಿಸುಕಾಡದಂತೆ
ಕಟ್ಟಿದ್ದು ಕಟ್ಟೆ
ನೆಟ್ಟ ದಿಟ್ಟಿಗೆ ಒಂದು ಹಿಡಿ
ಆಗಸ ಬಿಟ್ಟರೆ
ಆಕೆ ತರುವ ಕೊಡದೊಂದಿಗಷ್ಟೇ ಹೇಗೋ
ಬೆಳೆದದ್ದು ನಂಟು.
ಅದೆಂಥಾ ಆತುರ ಬಿಂದಿಗೆಗೆ
ಕಂಠಕ್ಕೆ ಹಗ್ಗ ಬಿಗಿಸಿಕೊಳ್ಳುತ್ತಾ
ಹಾಗೇ ಇಳಿ ಬಿಡುವ ಹೊತ್ತಿಗೆ
ಕೈಯ ಹಿಡಿತವನ್ನೇ ಸಡಿಲಿಸಿ
ರೊಯ್ಯನೇ ಡುಬುಕಿ ಹೊಡೆದಾಗ
ಕೊಡ ಸೇರಿ ಜಗತ್ತು ನೋಡುವ
ಕಾತರಕ್ಕೆ ಬಾವಿಯ ಮೈ ತುಂಬಾ
ಅಲೆ.
ಅನ್ನಕ್ಕೆ ಸಾಂಬಾರಿಗೆ ಕಾಫಿಗೆ
ಚಹಕ್ಕೆ ನೀರು ಸದ್ದಿಲ್ಲದೇ
ಕಲಬೆರಕೆಯಾಗುವ ಸಂಕಟಕ್ಕೆ
ಕುದಿ ಮತ್ತಷ್ಟು ಹೆಚ್ಚುತ್ತಿದೆ.

ಖಾಲಿಯಾಗುವ ಖುಷಿಗೆ
ಕೊಡ ಇಂಚಿಂಚೇ ಮೈ ಅಲಗಿಸಿಕೊಳ್ಳುತ್ತಿದೆ
ಇತ್ತ ಬಾವಿ ಕಟ್ಟೆ ಹೆಜ್ಜೆ ಸಪ್ಪಳಕ್ಕೆ
ಕಿವಿ ತಾಗಿಸಿ ಕುಳಿತಿದೆ.
ಈ ಕೊಡದ ನೀರು
ಗಿಡದ ಬುಡಕ್ಕೋ
ಅಡುಗೆ ಮನೆಯ ವ್ಯಂಜನಕ್ಕೋ?
ಕುತೂಹಲ ತಣಿದ ದಿನ
ಕಣ್ಣು ಹೊಳಪು ಕಳೆದುಕೊಂಡು
ಬಿಡುತ್ತದೆ.
ಮತ್ತೆ ಕೊಡ ತುಂಬಿ ಕೊಳ್ಳುತ್ತಿದೆ
ಡುಬು ಡುಬು ಎದೆ ಬಡಿಯುವ
ಒಡಲಾಳದ ಸದ್ದು
ಎಲ್ಲಿಯದ್ದು..? ಬಿಂದಿಗೆಯದ್ದಾ..?
ಬಾವಿಯದ್ದಾ..?
ಅರೆ!
ನನ್ನೆದೆಯೇಕೆ ಹೀಗೆ
ಬಡಿದುಕೊಳ್ಳುತ್ತಿದೆ ಈ ಹೊತ್ತು..






0 Comments