ಅರುಣ್ ಜೋಳದಕೂಡ್ಲಿಗಿ ಕಾಲಂ : ಮದುಮಗಳ ಉಂಗುರ ಹುಟ್ಟಿಸಿದ ಪ್ರಶ್ನೆ


ಈಚೆಗೆ ಬೆಂಗಳೂರಿನಲ್ಲಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ನಾಟಕ ಮುಗಿದು ಈ ರಂಗಸಾಹಸದ ಕುರಿತ ಪರ ವಿರೋಧದ ಮಾತುಗಳು ತಣ್ಣಗಾಗುತ್ತಿವೆ. ಮದುಮಗಳ ರಂಗ ಸಾಧ್ಯತೆ ಕುರಿತಂತೆ ಬೇರೆ ಬೇರೆ ನೆಲೆಗಳಲ್ಲಿ ಚರ್ಚೆಗಳೂ ನಡೆಯುತ್ತಿವೆ. ನಾನು ಬೆಂಗಳೂರಿನ ಪ್ರಯೋಗವನ್ನು ನೋಡಲಿಲ್ಲವಾದರೂ, ಮೈಸೂರಿನ ರಂಗಪ್ರಯೋಗವನ್ನು ಮೂರು ಬಾರಿ ಕಣ್ತುಂಬಿಕೊಂಡಿದ್ದೆ. ಆಗಲೆ ಮದುಮಗಳ ಉಂಗುರ ನನ್ನಲ್ಲಿ ಪ್ರಶ್ನೆಯೊಂದನ್ನು ಹುಟ್ಟಿಸಿತ್ತು. ಆ ಪ್ರಶ್ನೆಗೆ ಬರುವ ಮೊದಲು ಈ ನಾಟಕವನ್ನೊಮ್ಮೆ ಪ್ರವೇಶಿಸೋಣ.
ಮೈಸೂರಿನ ರಂಗಾಯಣದಲ್ಲಿ ಏಪ್ರಿಲ್ ೨೩, ೨೦೧೦ ರಿಂದ ಮೇ ೧೧ ರ ವರೆಗೆ ಮದುಮಗಳು ನಾಟಕದ ಮೊದಲ ಪ್ರಯೋಗ ನಡೆಯಿತು. ಇದು ಪಿ. ಬಸವಲಿಂಗಯ್ಯ ಅವರು ನಿರ್ದೇಶಿಸಿದ ಮತ್ತು ರಂಗಾಯಣದ ನಟರೊಂದಿಗೆ ಐವತ್ತಕ್ಕೂ ಹೆಚ್ಚು ಅತಿಥಿ ನಟರು ನಟಿಸಿದ ಒಂದು ವಿಭಿನ್ನ ಪ್ರಯೋಗ. ಇದೊಂದು ಸಾಮೂಹಿಕ ಪ್ರಯತ್ನ. ಯಾವುದೇ ಕಾಲಘಟ್ಟದ ರಂಗಭೂಮಿ ಚರ್ವಿತ ಚರ್ವಣ ಎಂಬಂತಹ ಪ್ರಯೋಗ ಮಾಡುತ್ತ ಸ್ಥಗಿತತೆ ಆವರಿಸಿದಾಗ ಇಂತಹ ಪ್ರಯೋಗಗಳು ಹುಟ್ಟಿಕೊಳ್ಳುತ್ತವೆ. ಇದು ಕಾಲಘಟ್ಟದ ಒತ್ತಡವೇ ಆಗುಮಾಡಿದ ರಂಗ ಪ್ರಯೋಗ. ನಿರ್ದೇಶಕರಾದ ಪಿ. ಬಸವಲಿಂಗಯ್ಯ ಅವರ ಮಾತುಗಳಲ್ಲಿಯೂ ಇದು ನಿಚ್ಚಳವಾಗಿ ತೋರುತ್ತಿತ್ತು.
ಮಲೆಗಳಲ್ಲಿ ಮದುಮಗಳು ಕನ್ನಡದ ಅತ್ಯುತ್ಕೃಷ್ಠ ಕಾದಂಬರಿಗಳ ಸಾಲಿನಲ್ಲಿ ನಿಲ್ಲುವಂಥದ್ದು. ಪ್ರತಿ ಸಲದ ಓದಿಗೂ ಹೊಸ ಜಗತ್ತನ್ನು ಕಾಣಿಸುವ ಈ ಕಾದಂಬರಿಯು ತನ್ನೊಡಲೊಳಗಿಟ್ಟುಕೊಂಡ ಚೈತನ್ಯ ಬೆರಗು ಮೂಡಿಸುವಂತದ್ದು. ಇದು ತನಗೇ ತಾನೇ ಒಂದು ಜಗತ್ತು. ಬಹುಶಃ ಅದರ ಜತೆಗಿಟ್ಟು ಹೋಲಿಸುವಂತಹ ಕಾದಂಬರಿಗಳು ಕನ್ನಡದಲ್ಲಿ ಹೆಚ್ಚಿಲ್ಲ ಎನ್ನುವುದು ನನ್ನ ತಿಳುವಳಿಕೆ. ಸಾರ್ವಕಾಲೀನ ಮೌಲ್ಯವನ್ನು ಪಡೆದ ಇಂತಹ ಕಾದಂಬರಿಯ ಜಗತ್ತನ್ನು ಅದರ ಆಶಯ ಮುಕ್ಕಾಗದಂತೆ ನಾಟಕ ರೂಪಕ್ಕಿಳಿಸುವುದು ತುಸು ಕಷ್ಟದ ಕೆಲಸ. ಈ ಕಷ್ಟವನ್ನು ಮೈಮೇಲೆಳೆದುಕೊಳ್ಳುವ ಯೋಚನೆ ಕೂಡ ಕನಸಿನಂತೆ ಕಾಣುವ ಸಾಧ್ಯತೆಯಿದೆ. ಅಂತಹ ಸಾಹಸವನ್ನು ರಂಗ ಕರ್ಮಿ ಬಸವಲಿಂಗಯ್ಯನವರು ಮಾಡಿದ್ದಾರೆ.
ಇದನ್ನು ಕರ್ನಾಟಕದ ಬಹುಭಾಗದಿಂದಲೂ, ಕರ್ನಾಟಕದಾಚೆಯಿಂದಲೂ ಬಂದ ಅನೇಕ ಕನ್ನಡಿಗರು ಕನ್ನಡೇತರರು ನಾಟಕ ನೋಡಿ ಮದುಮಗಳನ್ನು ಕಣ್ತುಂಬಿಕೊಂಡಿದ್ದಾರೆ. ಮನತುಂಬಿಕೊಂಡಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತು ಬೆಂಗಳೂರಿನಲ್ಲಿ ಈ ನಾಟಕದ ಕಾರಣಕ್ಕೆ ಅನೇಕರು ಹಬ್ಬದ ವಾತಾವರಣವನ್ನು ಅನುಭವಿಸಿದರು. ನಾಟಕ ನಡೆದ ಆಚೆ ಈಚಿನ ದಿನಗಳಲ್ಲಿ ರಂಗಾಯಣದ ವಾತಾವರಣ ಮತ್ತು ಬೆಂಗಳೂರಿನ ಕಲಾಗ್ರಾಮವಂತೂ ನಿತ್ಯೋತ್ಸವದ ಸಂಭ್ರಮದಲ್ಲಿದ್ದವು. ಈ ನಾಟಕ ತಯಾರಾಗುವಿಕೆಯ ಬಗ್ಗೆಯೇ ತುಸು ಹೆಚ್ಚೇ ಸುದ್ದಿಯಾದದ್ದು, ಹೆಚ್ಚು ಕುತೂಹಲ ಮೂಡಿಸಿದ್ದು ಸುಳ್ಳಲ್ಲ. ಆ ಕುತೂಹಲ ನಾಟಕ ನೋಡುತ್ತಲೆ ಅಚ್ಚರಿಯಾಗಿ ಬದಲಾದದ್ದು ಇನ್ನೊಂದು ಹಂತ.
ನಾಟಕದ ಬಗೆಗೆ ಹುಟ್ಟಿಕೊಂಡ ತೀವ್ರ ಕುತೂಹಲ ಕುವೆಂಪು ಬಗೆಗಿದ್ದ ಅತೀವ ಪ್ರೀತಿಯ ದ್ಯೋತಕ ಎಂತಲೂ ಪಿ.ಬಸವಲಿಂಗಯ್ಯ ಅವರ ಬಗೆಗಿದ್ದ ಸಹಜ ಕೂತೂಹಲವೆಂತಲೂ ಹೇಳಬಹುದು. ನಾನಿಲ್ಲಿ ವರ್ತಮಾನದ ಜನಸಮುದಾಯದಲ್ಲಿ ಹುಟ್ಟಿಕೊಳ್ಳುತ್ತಿರುವ ನವಮೌಖಿಕತೆಯ ನೆಲೆಯಲ್ಲಿ ಈ ನಾಟಕವನ್ನು ನೋಡುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡಿದ್ದೇನೆ. ಕುವೆಂಪು ತಮ್ಮ ಕಾದಂಬರಿಯಲ್ಲಿ ಮಲೆನಾಡಿನ ದರ್ಶನ ಮಾಡಿಸುತ್ತಾರೆ. ಮಲೆನಾಡಿನ ದಟ್ಟ ಅನುಭವ ನಮ್ಮನ್ನು ತಾಕುತ್ತದೆ. ಅಂತಹ ತಾಕುವಿಕೆ ನಾಟಕದಿಂದಲೂ ಆಗುತ್ತದೆ ಎನ್ನುವುದೇ ನಾಟಕದ ಹೆಚ್ಚುಗಾರಿಕೆ.
ಏಳುನೂರು ಪುಟದ ಈ ಕಾದಂಬರಿಯನ್ನು ಎರಡು ನೂರು ಪುಟದಲ್ಲಿ ಕೆ. ವೈ. ನಾರಾಯಣಸ್ವಾಮಿ ಅವರು ರಂಗರೂಪಕ್ಕೆ ಇಳಿಸಿದ್ದಾರೆ. ಪಂಪಭಾರತ, ಅನಭಿಜ್ಞ ಶಾಕುಂತಲ ದಂತಹ ವಿಶಿಷ್ಠ ನಾಟಕವನ್ನು ರಚಿಸಿ ಗಮನಸೆಳೆದ ನಾರಾಯಣ ಸ್ವಾಮಿ ಮದುಮಗಳ ರಂಗರೂಪಕದಲ್ಲೂ ಇಷ್ಟವಾಗುತ್ತಾರೆ. ಅವರು ಇದಕ್ಕಾಗಿ ರಚಿಸಿದ ನಲವತ್ತು ಹಾಡುಗಳಿಗೆ ಕಾಡುವ ಗುಣವಿದ್ದು ಒಂದು ಹಂತದಲ್ಲಿ ನಾಟಕದ ಸರಾಗ ಮುನ್ನಡೆಗೆ ಹಾದಿ ತೋರುತ್ತವೆ.
ರಂಗ ವಿನ್ಯಾಸಕ ಹೆಚ್.ಕೆ.ದ್ವಾರಕನಾಥ್ , ವಸ್ತ್ರ ಪರಿಕರ ವಿನ್ಯಾಸ ಮಾಡಿದ ಪ್ರಮೋದ್ ಶಿಗ್ಗಾಂವ್, ಸಹ ನಿರ್ದೇಶನ ಮಾಡಿದ ಮಾಯಸಂದ್ರ ಕೃಷ್ಣ ಪ್ರಸಾದ್, ನೃತ್ಯ ನಿರ್ವಹಣೆ ಮಾಡಿದ ಕೃಪಾ ಪಡಕೆ, ಸಂಗೀತ ನಿರ್ವಹಣೆ ಮಾಡಿದ ಶ್ರೀನಿವಾಸ್ ಭಟ್ ಸಂಗೀತ ನಿರ್ದೇಶಿಸಿದ ಹಂಸಲೇಖ ಈ ಎಲ್ಲರ ಕೆಲಸ ಒಂದಕ್ಕೊಂದು ಪೂರಕವಾಗಿ ಸಂಯೋಜನೆಗೊಂಡಿದೆ. ಹಾಗಾಗಿ ಇಲ್ಲಿ ಕುವೆಂಪು ಅವರ ಕಾದಂಬರಿಯ ಲೋಕಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಯಾಗಿದೆ. ನಾಟಕ ಬಯಲು ಆಲಯದಲ್ಲಿ ನಡೆಯುವುದೇ ಕಾದಂಬರಿಯ ಜಗತ್ತನ್ನು ಹಿಗ್ಗಿಸಿ ತೋರಿಸಲು ಸಾಧ್ಯವಾಗಿದೆ. ಅವಸರ ಅತಿ ವೇಗದ ಬೆನ್ನೇರಿದ ಈ ಕಾಲದಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ ಎನ್ನುವ ಕುವೆಂಪು ಅವರ ತಾತ್ವಿಕತೆಯನ್ನು ಕಟ್ಟಿಕೊಡಲು ಒಂದಿಡೀ ರಾತ್ರಿ ನಾಟಕ ಆವರಿಸಿಕೊಳ್ಳುತ್ತದೆ. ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ಪೂರ ನಡೆವ ನಾಟಕವೇನು ಅಚ್ಚರಿ ಪಡುವ ಸಂಗತಿಯಲ್ಲ, ಈಗಲೂ ಅವು ನಡೆಯುತ್ತವೆ. ಅದು ನಗರದ ಜನರಿಗೆ ಅಚ್ಚರಿಯೂ ಕೌತುಕವೂ ಆಗಿದೆ. ಸಮಯವನ್ನು ಗಂಟೆ, ಅರ್ಧ ಗಂಟೆ, ನಿಮಿಷಗಳಲ್ಲಿ ನಿಭಾಯಿಸುವ ಕಾಲದಲ್ಲಿ ಒಂಬತ್ತು ಗಂಟೆ ಎನ್ನುವುದು ತುಂಬಾ ಧೀರ್ಘ ಸಮಯ. ಅಷ್ಟು ಗಂಟೆಗಳ ಕಾಲವನ್ನು ವ್ಯಯಿಸುವುದೆಂದರೆ ಅದೊಂದು ಮಹತ್ವದ ಕಾರ್ಯಕ್ಕೇ ಆಗಬೇಕು. ಅಂತಹ ಮಹತ್ವದ ಕಾರ್ಯ ಮದುಮಗಳು ನಾಟಕ ನೋಡುವ ಕೆಲಸವಾಗಿ ಯಶಸ್ವಿಯಾಗಿದೆ.
ನಾಟಕವನ್ನು ರೂಪಿಸಿದ ತಂತ್ರಗಾರಿಕೆ ಮಾತ್ರ ತುಂಬಾ ವಿಶಿಷ್ಟವಾಗಿದೆ. ಕಾರಣ ಜನಪದ ವೃತ್ತಿಗಾಯಕರ ಮೂಲಕ ನಾಟಕವನ್ನು ನಿರೂಪಿಸಿರುವ ಕ್ರಮ. ಕುವೆಂಪು ತಮ್ಮ ಜೀವಿತಾವದಿಯಲ್ಲಿ ಜಾನಪದ ಸಾಹಿತ್ಯ ಮತ್ತು ಆಚರಣಾಲೋಕದಲ್ಲಿ ಮೌಡ್ಯವಿದೆ, ಅದನ್ನು ಇರುವಂತೆಯೇ ಸ್ವೀಕರಿಸಬಾರದು, ಒರೆಗಚ್ಚಿ ನೋಡಬೇಕು ಎಂದು ಹೇಳುತ್ತಾ, ಆ ಕಡೆಗೆ ಹೆಚ್ಚು ಒಲವು ತೋರಲಿಲ್ಲ. ಆದರೆ ಅದೇ ಜಾನಪದ ಜಗತ್ತಿನ ಕಣ್ಣೋಟದಿಂದಲೇ ಮದುಮಗಳು ನಾಟಕವನ್ನು ನಿರೂಪಿಸಿದ್ದು ಹೆಚ್ಚು ಅರ್ಥಪೂರ್ಣ. ಬಹುಶಃ ಕುವೆಂಪು ಈ ಪ್ರಯೋಗವನ್ನು ನೋಡಿದ್ದರೆ ನಿರೂಪಣಾ ಕ್ರಮವನ್ನು ಅಷ್ಟಾಗಿ ಇಷ್ಟ ಪಡುತ್ತಿರಲಿಲ್ಲವೇನೋ. ನಾಟಕದ ಆರಂಭ ಇಂದು ಜಾನಪದ ಜಗತ್ತು ಎದುರಿಸುತ್ತಿರುವ ದೊಡ್ಡ ಬಿಕ್ಕಟ್ಟನ್ನು ಬಿಡಿಸುವತ್ತ ಸಾಗುತ್ತದೆ.
ಚಿತ್ರ ಕೃಪೆ : ಪರ್ಫ್ಯೂಮ್ ಸುರೇಶ್
ಇಲ್ಲಿ ತಮ್ಮ ಹಾಡುವ ಕಾಯಕವನ್ನು ನಿಲ್ಲಿಸಿದ ಹಾಡು ಪರಂಪರೆಯ ಕಿನ್ನುರಿ ಜೋಗಿಗಳು ನಾಟಕದ ಆರಂಭಕ್ಕೆ ಹೇಳುವ ಮಾತುಗಳು ಕುತೂಹಲಕಾರಿಯಾಗಿವೆ. ಅವರು ತಮ್ಮ ಹಾಡು ಕಥೆ ಹೇಳುವ ಕಾಯಕದ ಕಷ್ಟವನ್ನು ಹೇಳುತ್ತಾರೆ. `ಒಂದಲ್ಲ ಹತ್ತು ಊರು ತಿರುಗಿದ್ರೂ, ಹತ್ತಲ್ಲ ನೂರು ಕಥೆ ಹೇಳಿದ್ರೂ ಯಾರೂ ನಮ್ಮನ್ನ ಕ್ಯಾರೆ ಅನ್ನಲಿಲ್ಲ` ರಾಮ ಕೃಷ್ಣನ ಕಥೆ ಹೇಳಿದರೆ ಕೇಳೋರಿಲ್ಲ ಎಂದು ಒಬ್ಬ ಜೋಗಪ್ಪ ನಿಟ್ಟುಸಿರಿಡುತ್ತಾನೆ. ಮತ್ತೊಬ್ಬ ಜೋಗಪ್ಪ `ಯಾರ ಮೇಲೆ ಕಥೆ ಕಟ್ಟೋಣ, ಯಾರ ಮೇಲೆ ಹಾಡು ಹೇಳೋಣ? ಮೂರು ದಿನದಿಂದ ಒಂದು ರುಪಾಯಿ ಕಾಸಿಲ್ಲ, ಒಂದು ಹಿಡಿ ಕಾಳಿಲ್ಲ, ಎಂದು ಹೇಳುತ್ತಾ ಹಸಿವು ತಾಳಲಾರದೆ ಕುಲದೈವದ ಮುತ್ತಿನ ಉಂಗುರವನ್ನು ಮಾರಿ ತಮ್ಮ ಹಸಿವನ್ನು ನೀಗಿಸಿಕೊಂಡಿದ್ದಾಗಿ ಹೇಳುತ್ತಾರೆ.
ಮುಂದುವರಿದು ತಮ್ಮ ಹಾಡುವ ಕಾಯಕವನ್ನು ನಿಲ್ಲಿಸಿ ಕಿನ್ನುರಿಗಳನ್ನು ಗಂಗೆಯಲ್ಲಿ ಬಿಡಲು ಸಿದ್ಧವಾದಾಗ ಪಂಡರಾಪುರದ ಕೃಷ್ಣನ ದರ್ಶನಕ್ಕೆ ಕೊರಟ ಕೃಷ್ಣ ಭಕ್ತರ ಪ್ರವೇಶವಾಗುತ್ತದೆ. ಈ ಕೃಷ್ಣ ಭಕ್ತರು ಧರ್ಮಸ್ಥಳದ ಹುಂಡಿಯಿಂದ ಸಿಕ್ಕ ಉಂಗುರವನ್ನು ಕೊಟ್ಟು ಕೆ.ವಿ. ಪುಟ್ಟಪ್ಪನವರ ಮೇಗರವಳ್ಳಿಯ ಕಥೆ ಕಟ್ಟಲು ಹೇಳುತ್ತಾರೆ. ಕಥೆ ಹೇಳುವ ಕಾಯಕವನ್ನು ನಿಲ್ಲಿಸಿದ ಕಿನ್ನುರಿಗಳು ಸಿಕ್ಕ ಹೊಸ ಉಂಗುರದಲ್ಲಿ ಕಾಣುವ ಮೇಗರವಳ್ಳಿಯ ಕಥೆ ಹೇಳುತ್ತಾ..ಮದುಮಗಳು ನಾಟಕವನ್ನು ನಿರೂಪಿಸುತ್ತಾ ಹೋಗುತ್ತಾರೆ. ಅವರ ಜತೆ ನಂತರ ಕೊರವಂಜಿಯರು, ನಂತರ ಕಾಡುಸಿದ್ಧರು ಕಥೆಯನ್ನು ಮುಂದುವರಿಸಿಕೊಂಡು ಹೋಗುತ್ತಾರೆ.
ಈ ಉಂಗುರ ಇಂದು ಜಾನಪದ ಜಗತ್ತು ಎದುರಿಸುವ ಒಂದು ಬಿಕ್ಕಟ್ಟಿಗೆ ಉತ್ತರವಾಗಿಯೂ ಕಾಣುತ್ತದೆ. ತಮ್ಮ ಹಾಡುವ ಕಾಯಕ ನಿಲ್ಲಿಸಿ ಹಸಿವನ್ನು ನೀಗಿಸಿಕೊಳ್ಳಲು ಕಿನ್ನುರಿಗಳು ಇರುವ ಒಂದು ಕುಲದೈವದ ಮುದ್ರೆಯ ಮುತ್ತಿನ ಉಂಗುರವನ್ನು ಮಾರುವುದು ಇಡೀ ಜಾನಪದ ಕಥನಕಾರರ ವಾಸ್ತವದ ಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಅಂತೆಯೇ ಸಿಕ್ಕ ಹೊಸ ಉಂಗುರದಲ್ಲಿ ಕಾಣುವ ಮೇಗರವಳ್ಳಿಯ ಕಥೆ ಹೊಸ ಜಾಯಮಾನದ ಕಥೆಯೊಂದನ್ನು ಜನ ಕೇಳುತ್ತಾರೆ ಎನ್ನುವ ಕಾರಣಕ್ಕೆ ಕಿನ್ನುರಿಗಳು ಹೊಸ ಚೈತನ್ಯವನ್ನು ಪಡೆಯುತ್ತಾರೆ. ಇಲ್ಲಿ ಜಾನಪದ ಲೋಕಕ್ಕೆ ಶಿಷ್ಟ ಕೃತಿಯೊಂದು ಜೀವ ತುಂಬುವ ಒಂದು ಭಿನ್ನ ರೂಪಾಂತರವೊಂದು ಸಾಧ್ಯವಾಗುತ್ತದೆ.
ಯು.ಆರ್. ಅನಂತಮೂರ್ತಿಯವರು ಒಂದೆಡೆ ‘ಲೇಖಕರು ಬಂಜೆಯರು ಜಾನಪದದಿಂದ ಪಡೆದಿದ್ದೇವೆಯೇ ಹೊರತು, ಬದಲಾಗಿ ಜಾನಪದ ಲೋಕಕ್ಕೆ ನಾವು ಏನನ್ನೂ ಕೊಡಲಾಗಲಿಲ್ಲ. ಶೇಕ್ಸಪಿಯರನ ನಾಟಕದ ಕಥೆಗಳನ್ನು ನಮ್ಮ ಜಾನಪದ ಗಾಯಕರಲ್ಲಿ ಹರಿಬಿಟ್ಟಿದ್ದರೆ, ನಿಜಕ್ಕೂ ನಮ್ಮ ಜಾನಪದರಲ್ಲಿ ಶೇಕ್ಸಪಿಯರ್ ನಾಟಕಗಳು ಮರುಹುಟ್ಟು ಪಡೆಯುತ್ತಿದ್ದವು’ ಎನ್ನುತ್ತಾರೆ. ಈ ಮಾತು ಬರಹ ಓದಿನ ಕಾರಣಕ್ಕೆ ಗಳಿಸಿಕೊಂಡ ಬರಹಗಾರ/ಗಾರ್ತಿಯರ ತಿಳಿವನ್ನು ಜಾನಪದರಿಗೆ ಹಾಯಿಸುವ ಒಂದು ಮಾರ್ಗವೇ ಇಲ್ಲದ್ದನ್ನು ಕಾಣಿಸುತ್ತದೆ. ಇಂತಹ ಮಾರ್ಗದ ಸಾಧ್ಯತೆಯನ್ನು ಈ ಮದುಮಗಳ ಉಂಗುರ ಈ ನಾಟಕದಲ್ಲಿ ತೋರುತ್ತಿರುವುದು ಗಮನಾರ್ಹ.
ಹೀಗೆ ಮದುಮಗಳು ನಾಟಕವನ್ನು ಜಾನಪದ ಗಾಯಕರು ನಿರೂಪಿಸುವ ತಂತ್ರ ಮೌಖಿಕತೆಯ ನವಮೌಖಿಕ ಹೊಸ ಸಾಧ್ಯತೆಯನ್ನು ಹೇಳುತ್ತಿದೆ. ಈ ನೆಲೆಯಲ್ಲಿ ಜಾನಪದದ ಹೊಸ ನೆಲೆಯೊಂದನ್ನು ಶೋಧಿಸುವ ವಿಧಾನದ ಬಗ್ಗೆ ಚಿಂತಿಸಬೇಕಿದೆ. ಮುಖ್ಯವಾಗಿ ಸಾಹಿತ್ಯವಲಯದ ಒಂದು ವರ್ಗ ಜಾನಪದ ಸಾಹಿತ್ಯ ಮತ್ತು ಶಿಷ್ಟ ಸಾಹಿತ್ಯವನ್ನು ಎರಡು ಕವಲಾಗಿ ನೋಡುತ್ತ ಬಂದಿದ್ದಾರೆ. ಅಂತೆಯೇ ಶಿಷ್ಟ ಸಾಹಿತ್ಯ ಶ್ರೇಷ್ಠ ಮೌಖಿಕ ಸಾಹಿತ್ಯ ಶ್ರೇಷ್ಠ ಎನ್ನುವ ಶ್ರೇಷ್ಠ ಕನಿಷ್ಟದ ಚರ್ಚೆಗಳೂ ನಡೆದಿವೆ.
ನಿಜವೆಂದರೆ, ಜಾನಪದದಿಂದ ಶಿಷ್ಟ ಸಾಹಿತ್ಯ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡೇ ಬಂದಿದೆ. ಈ ಎರಡನ್ನೂ ವಿರುದ್ಧ ನೆಲೆಯಲ್ಲಿ ನಿರ್ವಚಿಸಿದವರು ಹೆಚ್ಚಿನದೇನನ್ನೂ ಸಾಧಿಸಿಲ್ಲ. ದೇಸಿ ಶಿಷ್ಟದ ಕೊಡುಕೊಳೆ ಮಾಡಿದವರಲ್ಲಿ ಶಕ್ತ ಕೃತಿಗಳು ಹುಟ್ಟಿರುವ ವಾಸ್ತವ ನಮ್ಮ ಕಣ್ಣಮುಂದೆಯೇ ಇದೆ. ಆದಿಕವಿ ಪಂಪನೆ `ದೇಸಿಯೊಳು ಪುಗುವುದು, ಪೊಕ್ಕು ಮಾರ್ಗದೊಳ್ ತಳ್ತು’ ಎನ್ನುವಂತಹ ಮಾತನ್ನು ಹೇಳುತ್ತ ಈ ಚಿಂತನೆಗೊಂದು ಮಾರ್ಗ ಹಾಕಿದ್ದಾನೆ. ಈ ನೆಲೆಯಲ್ಲಿ ಬೇಂದ್ರೆಯವರ ಕಾವ್ಯ, ಚಂದ್ರಶೇಖರ ಕಂಬಾರ ಗಿರೀಶ ಕಾರ್ನಾಡ, ಹೆಚ್.ಎಸ್.ಶಿವಪ್ರಕಾಶ್ ಅವರ ನಾಟಕಗಳನ್ನು ಗಮನಿಸಬಹುದು. ಆದರೆ ಶಿಷ್ಟ ಸಾಹಿತ್ಯವನ್ನು ಜಾನಪದ ತನ್ನ ಒಡಲೊಳಗೆ ತೆಗೆದುಕೊಂಡು ಪುನರ್ ಸೃಷ್ಟಿಗೆ ಒಳಗಾದದ್ದು ಮಾತ್ರ ಇಲ್ಲವೆ ಇಲ್ಲವೆನ್ನುವಷ್ಟು ವಿರಳ. ಈ ನೆಲೆಯ ಬಗ್ಗೆ ಪ್ರಾಥಮಿಕ ಚರ್ಚೆಗಳು ಕೂಡ ಕರ್ನಾಟಕ ಜಾನಪದ ಅಧ್ಯಯನಗಳಲ್ಲಿ ಸಾಧ್ಯವಾಗಿಲ್ಲ.
ಸಂಗ್ರಹಿತ ಜನಪದ ಸಾಹಿತ್ಯವನ್ನಿಟ್ಟುಕೊಂಡು ಅದನ್ನು ವಿಶ್ಲೇಷಿಸುವ, ಅಂತೆಯೇ ಅದರ ಪ್ರೇರಣೆಯಿಂದ ನಾಟಕವನ್ನೋ ಕಥೆಯನ್ನೋ, ಜಾನಪದ ಗೀತೆಗಳ ಲಯ ಬಳಸಿ ಪದ್ಯವನ್ನೋ ಕಟ್ಟುವುದು ಇದೆ. ಆದರೆ ಜಾನಪದ ಕಥನಕಾರರಿಗೆ ಬರಹದ ಮೂಲಕ ಹುಟ್ಟಿದ ಸಾಹಿತ್ಯವನ್ನು ಹಾಯಿಸಲು ಬೇಕಾದ ದಾರಿಯೆ ಇಲ್ಲ. ಇಂತಹ ದಾರಿಯೊಂದರ ಸುಳಿವನ್ನು ಮದುಮಗಳ ಉಂಗುರ ಕಾಣಿಸುತ್ತಿದೆ. ಈ ಉಂಗುರ ಹುಟ್ಟಿಸಿದ ಪ್ರಶ್ನೆಗೆ ಹೊಸ ತಲೆಮಾರಿನ ಸಂಸ್ಕೃತಿ ಚಿಂತಕರಾದರೂ ಉತ್ತರ ಹುಡುಕುವ ನೆಲೆಯಲ್ಲಿ ಹೊಸ ಬಗೆಯ ಹೊರಳು ನೋಟಕ್ಕೆ ಸಿದ್ಧವಾಗಬೇಕಿದೆ.

‍ಲೇಖಕರು G

September 29, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Anonymous

    ಅರುಣ್ ಬರಹ ಚೆನ್ನಾಗಿದೆ. ನಾಟಕ ನೋಡಿದ್ದೆನಾದರೂ, ಹೀಗೆ ಅನ್ನಿಸಿರಲಿಲ್ಲ. ಅದರಲ್ಲೂ ಜಾನಪದದ ಸಮಸ್ಯೆಗೆ ಪರಿಹಾರ ಹುಡುಕುವಂತೆ ಯೋಚಿಸಿರುವುದು ಇಷ್ಟವಾಯಿತು. ಹಿರಿಯ ಜಾನಪದ ವಿದ್ವಾಂಸರಲ್ಲಿ ಈ ಚಿಂತನೆ ಬೆಳೆಯಬೇಕು ಅನ್ನಿಸುತ್ತೆ.
    -ಮಲ್ಲಿಕಾರ್ಜುನ

    ಪ್ರತಿಕ್ರಿಯೆ
  2. mallikarjuna

    ಅರುಣ್ ಮದುಮಗಳು ನಾಟಕ ಪ್ರಯೋಗದ ಮೂಲಕ ಇಂತಹ ಪ್ರಶ್ನೆ ಎತ್ತಿರುವುದು ನಿಜಕ್ಕೂ ಖುಷಿಯಾಯಿತು. ನಾಟಕ ನೋಡಿದ್ದೆನಾದರೂ ಈ ಯೋಚನೆ ಬಂದಿರಲಿಲ್ಲ. ಕುವೆಂಪು ಜಾನಪದವನ್ನು ಮೌಢ್ಯ ಎಂದರಾದರೂ, ಅವರು ಸಂಗ್ರಹದಂತಹ ಕೆಲಸ ಮಾಡಲಿಲ್ಲ ನಿಜ, ಆದರೆ ನಾಟಕ ಕಾದಂಬರಿಗಳ ಒಳಗೆ ಜಾನಪದ ಲೋಕವನ್ನು ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಕುವೆಂಪು ಅವರನ್ನು ಜಾನಪದವನ್ನು ವಿರೋಧಿಸಿದರು ಎನ್ನುವುದು ಸರಿಯಲ್ಲ ಅನ್ನಿಸುತ್ತದೆ.ಯೋಚಿಸಿ.
    -ಮಲ್ಲಿಕಾರ್ಜುನ

    ಪ್ರತಿಕ್ರಿಯೆ
  3. ಸುದೀಪ್.ಬಿ.ಎಸ್

    ಗೆಳಯ ಅರುಣ್, ಒಂದು ಒಳ್ಳೆಯ ನಿದರ್ಶನ ಸಹಿತ ನವಮೌಖಿಕತೆಯನ್ನು ಚೆನ್ನಾಗಿ ನಿರೂಪಿಸಿದ್ದೀರಿ.
    ಜಾನಪದದಿಂದ ಶಿಷ್ಟ ಸಾಹಿತ್ಯ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡೇ ಬಂದಿದೆ… ಎಂಬುದು ‘ಇಂದಿನ’ ಸಾಹಿತಿಗಳ ಬರಹಗಳಿಂದ ಹೆಚ್ಚು ಖಚಿತವಾಗುತ್ತಿದೆ.
    ಆದರೆ, ಪ್ರಾರಂಭದಲ್ಲಿ ಈ ರೀತಿಯ ಶ್ರೇಷ್ಠ ಕನಿಷ್ಟಗಳ ದೃಷ್ಟಿಕೋನಗಳು ಬರುವುದಕ್ಕೆ ‘ವಸಹತುಶಾಹಿಯ ಅನುಭವ’ ಕಾರಣವಾಗಿರಬಹುದು. ಬಹುಶಹ ಅಲ್ಲಿಂದಲೇ ಈ ಸಮಸ್ಯೆಯ ಮೂಲವನ್ನು ನಾವು ಹುಡುಕಿಕೊಳ್ಳುವ ಸಾಧ್ಯತೆ ಇದೆ ಅಲ್ವಾ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: