ತೇಜಸ್ವಿಯನ್ನು ಹುಡುಕುತ್ತಾ – ರಾಜೇಶ್ವರಿ ತೇಜಸ್ವಿ ನೆನೆಸಿಕೊಂಡಂತೆ ತೇಜಸ್ವಿ

(ಇಲ್ಲಿಯವರೆಗೆ…)

ಆ ದಿನ ಬಹಳ ಮಹತ್ವದ ದಿನವಾಗಿತ್ತು. ಕಾರಣ ಆ ಇಡೀ ದಿವಸ ಚಿತ್ರೀಕರಣ ನಡೆಯಬೇಕಾಗಿದ್ದದ್ದು ತೇಜಸ್ವಿಯವರ ತೋಟದಲ್ಲಿ ಮತ್ತು ಮಾತನಾಡಿಸಬೇಕಾದದ್ದು ತೇಜಸ್ವಿಯವರ ನೆರಳಂತೆ ಸುಮಾರು ನಲವತ್ತು ವರುಷ ಅವರ ಕಷ್ಟ ಸುಖಗಳನ್ನು ಸಮಾನವಾಗಿ ಉಂಡ ಅವರ ಬಾಳಸಂಗಾತಿ ಶ್ರೀಮತಿ ರಾಜೇಶ್ವರಿ ತೇಜಸ್ವಿಯವರನ್ನು. ಆ ದಿನ ತೇಜಸ್ವಿಯವರ ಬಗೆಗಿನ ಕಂಡು ಕೇಳರಿಯದ ಕೆಲ ಅಪರೂಪದ ಆಪ್ತ ವಿವರಗಳನ್ನು, ಅವರ ಒಟ್ಟು ವ್ಯಕ್ತಿತ್ವವನ್ನು ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಕಟ್ಟಿ ಕೊಡುವ ಪ್ರಯತ್ನ ಮಾಡಲಿದ್ದರು.
ಇದಕ್ಕೆ ಬೇಕಾದ ಪೂರ್ವಸಿದ್ದತೆಗಳೆಲ್ಲವನ್ನೂ ಚಾಚೂತಪ್ಪದೇ ಮಾಡಿಕೊಂಡಿದ್ದೆವು. ಹಿಂದಿನ ದಿನವೇ ಮೇಡಂ ಗೆ ಸಾಕ್ಷ್ಯಚಿತ್ರದ ಸ್ಕ್ರಿಪ್ಟ್ ಹಾಗೂ ಚಿತ್ರೀಕರಣಕ್ಕೆ ಬೇಕಾದ ವಿಷಯಗಳ ಪ್ರತಿಯನ್ನು ಕೊಟ್ಟು ಬಂದಿದ್ದೆ. ಹಾಗಾಗಿ ಸಾಕ್ಷ್ಯಚಿತ್ರಕ್ಕೆ ಬೇಕಾಗಿದ್ದ ವಿಷಯಗಳ ಸ್ಪಷ್ಟತೆ ಹಾಗೂ ಅದಕ್ಕೆ ಬೇಕಿದ್ದ ಪೂರ್ವತಯಾರಿಗಳನ್ನು ಚಾಚೂ ತಪ್ಪದೇ ಮಾಡಿಕೊಂಡಿದ್ದರಿಂದ ಯಾವ ಅಂಜಿಕೆಯೂ ಇಲ್ಲದೆ ಬೆಳಿಗ್ಗೆ 7ಗಂಟೆಗೆ ಸರಿಯಾಗಿ ’ನಿರುತ್ತರ’ ತಲುಪಿ ಚಿತ್ರೀಕರಣ ಪ್ರಾರಂಭಿಸಿದೆವು.
ಅಂದು ಸಹ ಯಥಾಪ್ರಕಾರ ಬೆಳಿಗ್ಗೆ ಬೆಳಿಗ್ಗೆಯೇ ಮಳೆ. ಆದರೆ ಅಷ್ಟೊತ್ತಿಗಾಗಲೇ ಚಿತ್ರೀಕರಣ ಪ್ರಾರಂಭವಾಗಿ ಐದಾರು ದಿನಗಳಾಗಿದ್ದರಿಂದ ನಿರಂತರವಾಗಿ ಸುರಿಯುವ ಮಲೆನಾಡಿನ ಮಳೆಗೆ ಎಲ್ಲರೂ ಹೊಂದಿಕೊಂಡುಬಿಟ್ಟಿದ್ದೆವು. ಪ್ರಾರಂಭದಲ್ಲಿನಾನು ನಮ್ಮ ತಂಡ ತೋಟವಿಡೀ ಸುತ್ತಾಡಿ ತೋಟದ ಮೂಲೆ ಮೂಲೆಯನ್ನೂ ಬಿಡದೇ ಅಲ್ಲಿನ ಪ್ರತಿಯೊಂದು ಹೂವು, ಹಣ್ಣು, ಕೆರೆ, ಕಂಗೊಳಿಸುತ್ತಿದ್ದ ಕಾಫಿ ತೋಟ, ಹೀಗೆ ಎಲ್ಲವನ್ನೂ ಚಿತ್ರೀಕರಿಸಿಕೊಂಡೆವು. 9 ಗಂಟೆಯ ಹೊತ್ತಿಗೆ ಈ ಕೆಲಸ ಮುಗಿಯುತ್ತಾ ಬಂದಿತ್ತು. ಕಡೆಯದು ಎಂಬಂತೆ ಮನೆಯ ಪಕ್ಕದ ಶೆಡ್ ನಲ್ಲಿ ಕವರ್ ಹೊದ್ದುಕೊಂಡು ನಿಂತಿದ್ದ ತೇಜಸ್ವಿಯವರ ದೀರ್ಘಕಾಲದ ಸಾಥಿ ’MEN 6625’ (ಲೋಕಪ್ರಸಿದ್ದ ಅವರ ಸ್ಕೂಟರ್) ನ ಕೆಲ ಚಿತ್ರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೆವು.
ಮೇಡಂ ಅಡಿಗೆ ಮನೆಯ ಕಿಟಕಿಯಂದಲೇ ನಮ್ಮನ್ನು ಕಾಫಿ ಕುಡಿಯಲು ಬರುವಂತೆ ಕೂಗಿ ಕರೆದರು. ಮೇಡಂ ಕೊಟ್ಟ ಬಿಸಿಬಿಸಿ ಕಾಫಿ ಕುಡಿಯುತ್ತಲೇ ಮತ್ತೊಮ್ಮೆ ಅವರಿಗೆ ವಿಷಯಗಳನ್ನು ಜ್ಞಾಪಿಸಿದೆ. ’ನೀವು ಕೊಟ್ಟು ಹೋದ ಸ್ಕ್ರಿಪ್ಟ್ ಓದಿದೆ. ನಾನು ಸಿದ್ದವಾಗಿದ್ದೀನಿ. ನೀವು ಒಂದೊಂದಾಗಿ ಕೇಳ್ತಾ ಹೋಗಿ…’ ಎಂದು ಮೇಡಂ ಅಲ್ಲಿದ್ದ ಖುರ್ಚಿಯ ಮೇಲೆ ಕುಳಿತರು. ನಾವೂ ಸರ್ವ ಸನ್ನದ್ದರಾಗೇ ಇದ್ದುದ್ದರಿಂದ ಸಾಕ್ಷ್ಯಚಿತ್ರದ ಅಂದಿನ ಚಿತ್ರೀಕರಣ ಪ್ರಾರಂಭವಾಯಿತು. ’ತೇಜಸ್ವಿಯವರನ್ನು ಮೊದಲು ನೋಡಿದ್ದು ಎಲ್ಲಿ?’ ಎಂಬ ಮೊದಲ ಪ್ರಶ್ನೆಯನ್ನು ಅವರಿಗೆ ಕೇಳಿದೆ. ಮೇಡಂ ಪ್ರಾರಂಭದಲ್ಲಿ ತುಸು ಸಂಕೋಚದಿಂದಲೇ ಆ ದಿನಗಳ ನೆನಪುಗಳನ್ನು ಬಿಡಿಸಿಡಲು ಪ್ರಾರಂಭಿಸಿದರು, Over to madam now…
“ಅಲ್ಲಿ ಹೋಗ್ತಿದ್ದಾನಲ್ಲ…ಅವ್ನೇ ತೇಜಸ್ವಿ…!!! “
“ನಾನು ಬೆಂಗಳೂರಿನಿಂದ ಮೈಸೂರಿಗೆ ಓದಕ್ಕೆ ಅಂತ ಬಂದವಳು. ಆಗ ಅದು ತುಂಬಾ ಹೊಸ ಪರಿಸರ ಅನ್ನಿಸಿತ್ತು ನನಗೆ. ಕೋ ಎಜುಕೇಶನ್ನು ಗೊತ್ತಿರ್ಲಿಲ್ಲ ಏನೂ ಗೊತ್ತಿರಲಿಲ್ಲ. ಆಗ ಇಡೀ ಕಾಲೇಜ್ ತುಂಬಾ ಹುಡುಗಿರೆಲ್ಲಾ ಎನೋ ಗುಸುಗುಸು, ಪಿಸಿಪಿಸಿ ಅಂತ ಮಾತಾಡ್ಕೊತಿದ್ರು. ’ತೇಜಸ್ವಿ ಕಣ್ರೇ….ಪೂರ್ಣಚಂದ್ರ ತೇಜಸ್ವಿ…’ ಅಂತ. ಅದು ಹೇಗಿರ್ತಿತ್ತು ಅಂದ್ರೆ ಇಡೀ ಕಾಲೇಜಿನಲ್ಲಿ ಮುಸ್ಲಿಂ ಹುಡುಗೀರು ಕೂಡ ಇವರನ್ನ ಕಂಡು ಥ್ರಿಲ್ ಆಗ್ತಿದ್ರು. ಅದು ಕುವೆಂಪುರವರ ಮಗ ಅನ್ನೊದಕ್ಕಲ್ಲ, ಒಟ್ಟಾರೆ ಇವರ ವ್ಯಕ್ತಿತ್ವವೇ ಹಾಗಿತ್ತು. ಆಗ ನನಗೆ ಕುತೂಹಲ ತಡೆಯೋಕ್ಕಾಗದೇ ಅವ್ರನ್ನ ಕೇಳ್ದೆ ’ಯಾರೇ ಅದು ನನಗೂ ತೋರಿಸ್ರೇ’ ಅಂತ. ಒಂದಿನ ತೋರಿಸಿದ್ರು…’ಅಗೋ ಅಲ್ಲಿ ಹೋಗ್ತಿದ್ದಾನಲ್ಲ ಅವ್ನೇ ತೇಜಸ್ವಿ’ ಅಂತ. ಆಗ ನನಗೆ ತೇಜಸ್ವಿ ಅಂದ್ರೆ ಕುವೆಂಪು ಅವರ ಮಗ ಅಂತ ಮಾತ್ರ ಗೊತ್ತಿತ್ತು. ಅಮೇಲೆ ಜೂಲಿಯಟ್ ವೆನ್ನಿ ಅಂತ ಒಬ್ಬರು, ಕೃಷ್ಣಮೂರ್ತಿ ಅಂತ ಒಬ್ಬರು ನಮ್ಮ ಗೆಳೆಯರಿದ್ರು. ಅವ್ರು ಒಂದಿನ ತೇಜಸ್ವಿನ ನನಗೆ ಪರಿಚಯ ಮಾಡಿ ಕೊಟ್ರು. ಅವತ್ತಾದ ಪರಿಚಯ ಹಾಗೇ ಮುಂದುವರೀತು. ನಂತರ ೧೯೬೧ನಲ್ಲಿ ಇಬ್ಬರದ್ದೂ ಎಂಎ ಮುಗೀತು. ನಾನು ಫಿಲಾಸಫಿ ಎಂಎ ಮಾಡ್ಕೊಂಡೆ, ಅವ್ರು ಕನ್ನಡ ಎಂಎ ಮಾಡ್ಕೊಂಡ್ರು. ಆಗ ನಾನು ಮೈಸೂರು ಬಿಟ್ಟು ಬೆಂಗಳೂರಿಗೆ ವಾಪಸ್ ಬರಬೇಕಾಯಿತು.ಆಗ ಯಾಕೋಇಬ್ಬರಲ್ಲೂ ಒಂಥರ ಚಡಪಡಿಕೆ. ಅದನ್ನೇನು ಬಾಯಿ ಬಿಟ್ಟು ಹೇಳ್ಬೇಕು ಅನ್ನೊ ಹಂಗಿರಲಿಲ್ಲ. ನನ್ನ ಚಡಪಡಿಕೆ ಅವರ ಚಡಪಡಿಕೆ ಒಬ್ಬರಿಗೊಬ್ಬರಿಗೆ ಗೊತ್ತಾಗ್ತಿತ್ತು,‘ವಿ ಲವ್ ಈಚ್ ಅದರ್’ ಅಂತ. ಆಗ ಮದುವೆ ಮಾಡಿಕೊಳ್ಳೊದು ಅಂತ ಡಿಸೈಡ್ ಮಾಡ್ಕೊಂಡು ನಾನು ಬೆಂಗಳೂರಿಗೆ ವಾಪಸ್ ಬಂದೆ.’

ಮೇಡಂ ತೇಜಸ್ವಿಯವರೊಂದಿಗಿನ ಕಾಲೇಜು ದಿನಗಳ ಅಂದಿನ ನೆನಪುಗಳನ್ನು ಮೊಗೆಯಲು ಪ್ರಾರಂಭಿಸಿದರು. ’ಅದನ್ನ ಬಾಯಿಬಿಟ್ಟು ಹೇಳ್ಬೇಕು ಅಂತೇನೂ ಇರಲಿಲ್ಲ. ನನ್ನ ಚಡಪಡಿಕೆ, ಅವರ ಚಡಪಡಿಕೆ ನೋಡಿದ್ರೆ ಗೊತ್ತಾಗ್ತಿತ್ತು ವಿ ಲವ್ ಈಚ್ ಅದರ್ ಅಂತ..’ ಮೇಡಂ ಹೇಳಿದ ಈ ಮಾತು ನನಗೆ ಅತ್ಯಂತ ಆಪ್ತವೆನಿಸಿತು. ’ಅಂತರ್ಜಾಲ, ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲ ತಾಣಗಳ ಜಾತ್ರೆಯ ಈ ದಿನಗಳಲ್ಲಿ ಪ್ರೀತಿ, ಪ್ರೇಮ ಎಂಬ ಪದಗಳೆಲ್ಲಾ ಎಷ್ಟೊಂದು ಅಗ್ಗದ ಸರಕಾಗಿದೆ ಎಂಬ ವಿಷಯ ನಿಮಗೆ ನಮಗೆ ಎಲ್ಲರಿಗೂ ಗೊತ್ತಿರುವಂತದ್ದೆ. ಅಂತಹದ್ದರಲ್ಲಿ ಸುಮಾರು ೫೦ ವರ್ಷಗಳ ಹಿಂದೆ ಸತತ ಮೂರು ವರ್ಷ ಜೊತೆಗಿದ್ದು ಒಂದು ದಿನವೂ ಬಾಯಿ ಬಿಟ್ಟು ಹೇಳಿಕೊಳ್ಳದೆಯೂ ಪ್ರೀತಿಸಿ ೬ ವರ್ಷಗಳ ನಂತರ ಮದುವೆಯಾದ ತೇಜಸ್ವಿ-ರಾಜೇಶ್ವರಿಯವರ ಪ್ರೀತಿ ಹಾಗೂ ಮದುವೆ ’ಹಲವು ತೆವಲುಗಳಿಗಾಗಿ ಪ್ರೀತಿಸುವ ನಾಟಕವಾಡುವವರಿಗೆ’ ಆದರ್ಶವಾಗಬಲ್ಲದೇ’ ಎಂದು ಆ ಕ್ಷಣದಲ್ಲಿ ಯೋಚನೆಯೊಂದು ಮಿಂಚಿ ಮಾಯವಾಯಿತು.
“ಥೂ ಹಾಳಾದವಳೆ…”
ನಮ್ಮ ಚಿತ್ರೀಕರಣ ಮುಂದುವರೆಯಿತು. ಮೇಡಂ ಮುಂದುವರೆಸಿದರು ’ಇವತ್ತಿನ ಹಾಗೆ ಆಗ ಟೆಲಿಪೋನ್ ಆಗ್ಲಿ, ಇಂಟರ್ನೆಟ್ ಆಗ್ಲಿ ಅಥವ ಮೊಬೈಲ್ ಆಗ್ಲಿ ಇರಲಿಲ್ಲ. ಏನೇ ಇದ್ದರೂ ಕಾಗದಗಳ ಮೂಲಕವೇ ಪರಸ್ಪರ ಸಂಪರ್ಕ ಮಾಡ್ಬೇಕಿತ್ತು. ಆಗ ಹೇಗಾಗ್ತಿತ್ತು ಅಂದ್ರೆ ಬೆಳಿಗ್ಗೆ ಒಂದು ಕಾಗದ ಹಾಕಿದ್ರೆ ಸಂಜೆಗೆ ತಲುಪುವ ವ್ಯವಸ್ಥೆಯೂ ಇತ್ತು. ಹಾಗಾಗಿ ನಾನು ಬೆಂಗಳೂರಿಗೆ ಬಂದ ನಂತರ ಪತ್ರಗಳ ಮೂಲಕವೇ ಇಬ್ಬರೂ ಒಬ್ಬರಿಗೊಬ್ಬರು ಮಾತಾಡ್ತಿದ್ವಿ. ಹೆಚ್ಚು ಕಡಿಮೆ ದಿನಕ್ಕೊಂದು ಕಾಗದ ತಪ್ಪದೇ ಬರಕೊತಿದ್ದೆವು’ ಎಂದು ಹೇಳಿ ಮೇಡಂ ನಕ್ಕರು. ಅಂದಿನ ಆ ಪತ್ರಗಳಲ್ಲಿ ಬದುಕು, ಸಾವು, ಫಿಲಾಸಫಿ, ಆಧ್ಯಾತ್ಮ, ಪ್ರೇಮ, ಕಾಮ, ಹಲವು ವಿಚಾರಗಳಿಗೆ ಸಂಬಂಧಪಟ್ಟಂತೆ ತೇಜಸ್ವಿಯವರ ನಿಲುವುಗಳು, ಮುಂತಾದ ಅನೇಕ ವೈವಿಧ್ಯಮಯ ವಿಷಯಗಳು ಆ ಪತ್ರಗಳಲ್ಲಿವೆ. (’ನನ್ನ ತೇಜಸ್ವಿ’ ಪುಸ್ತಕದಲ್ಲಿ ಇಬ್ಬರ ನಡುವಿನ ಆ ಎಲ್ಲಾ ಪತ್ರಗಳು ಪ್ರಕಟವಾಗಿವೆ. ಲೇಖಕರು ಶ್ರೀಮತಿ ರಾಜೇಶ್ವರಿ, ತೇಜಸ್ವಿ, ಪುಸ್ತಕ ಪ್ರಕಾಶನ ಪ್ರಕಟಿತ). ತೇಜಸ್ವಿ ರಾಜೇಶ್ವರಿಯವರಿಗೆ ಬರೆದ ಅಷ್ಟೂ ಪತ್ರಗಳಲ್ಲಿ ಒಂದು ಪತ್ರ ನನಗೆ ತುಂಬಾ ಅಚ್ಚುಮೆಚ್ಚಿನ ಪತ್ರ. ರಿಸರ್ಚ್ ವರ್ಕಿನ ಸಮಯದಲ್ಲಿ ಈ ಪತ್ರ ನನ್ನ ತೇಜಸ್ವಿ ಪುಸ್ತಕದಲ್ಲಿ ನನ್ನ ಕಣ್ಣಿಗೆ ಬಿದ್ದಿತ್ತು. ಅದು ತೇಜಸ್ವಿ ರಾಜೇಶ್ವರಿಯವರನ್ನು ಹುಡುಕಿಕೊಂಡು ಮೈಸೂರಿನಿಂದ ಬೆಂಗಳೂರಿಗೆ ಬಂದಾಗ ಮನೆ ಹುಡುಕಲು ಸರಿಯಾದ ಅಡ್ರೆಸ್ ಕೊಡದ ರಾಜೇಶ್ವರಿಯವರ ಮೇಲೆ ಸಿಟ್ಟಾಗಿ ಬರೆದಿದ್ದ ಪತ್ರ.ಆ ಪತ್ರವನ್ನು ಚಿತ್ರೀಕರಣದ ಸಮಯದಲ್ಲಿ ರಾಜೇಶ್ವರಿ ಮೇಡಮ್ ರಿಂದಲೇ ಓದಿಸಬೇಕೆಂದುಕೊಂಡಿದ್ದೆ. ಅದನ್ನು ಮೇಡಂ ಗೆ ತಿಳಿಸಿದೆ.
ಅವರು ನಗುತ್ತಾ ತೇಜಸ್ವಿ ಬರೆದ ಮೂಲ ಪತ್ರದ ಕಾಗದವನ್ನು ಅವರ ಸಂಗ್ರಹದಿಂದ ಹುಡುಕಿ ತೆಗೆದು ನಮಗಾಗಿ ವಾಚಿಸಿದರು. “ಇವರು ಯಾವ ಕಾಗದಕ್ಕೂ ತಾರೀಖಂತೂ ಹಾಕ್ತಾನೇ ಇರ್ಲಿಲ್ಲ. ನಾನು ಅದರ ಮೇಲಿರುವ ಪೋಸ್ಟ್ ಆಫೀಸ್ ಸೀಲ್ ನೋಡ್ಕೊಂಡು ಆ ಪತ್ರಗಳ ತಾರೀಖು ಪತ್ತೆ ಹಚ್ಕೊಂಡೆ’ ಎಂದು ಹೇಳಿ ಆ ಪತ್ರವನ್ನು ತೇಜಸ್ವಿಯವರ ಧಾಟಿಯಲ್ಲೇ ಓದಲು ಪ್ರಾರಂಭಿಸಿದರು.
“ರಾಜೇಶ್ ಇಲ್ಲಿ ಬಂದು ನನಗೆ ರೇಗಿ ಹೋಗಿದೆ, ಹಾಳಾದವಳೆ ಯಾವುದೋ ದರಿದ್ರ ಫೋನ್ ನಂಬರ್ ಕೊಟ್ಟು ಫೋನ್ ಮಾಡಿ ಮಾಡಿ ಸತ್ತೆ. ಆಮೇಲೆ ನಿನ್ನೆಯೆಲ್ಲಾ ಅದನ್ನೇ ಹುಡುಕಿ ಹುಡುಕಿ ಸತ್ತೆ. ಈಗ ಬೆಳಿಗ್ಗೆಯೆಲ್ಲಾ ಮತ್ತೆ ಹುಡುಕಿ ಹುಡುಕಿ ಸತ್ತೆ. ಹಾಳಾದವ್ಳಿಗೆ ಕ್ರಾಸ್ ನಂಬರ್ ಆದ್ರೂ ಕೊಡ್ಲಿಕ್ಕೆ ಏನಾಗಿತ್ತು. ತರ್ಲೆ ಅಂದ್ರೆ ತರ್ಲೆ ಮಾಡಿಟ್ಟಿದ್ದಿ. ನಿನ್ನೆ 3PM ಗೆ ಬಂದೆ. ಅಂದರೆ ನಿನ್ನೆ ರಾತ್ರಿಯ ರೈಲಿಗೆ ಹೋಗಬೇಕೆಂದು ಬಂದೆ. ನಿನ್ನ ಹುಡುಕಿ ಸತ್ತು ಇವತ್ತಾದರೂ ಸಿಗುತ್ತಾಳೆ ಎಂದರೆ ಇವತ್ತೂ ಬೇರೆ ತರಲೆ…ಥೂತ್ತೇರಿ. ಅಲ್ಲೆ ಇವತ್ತು ರಾತ್ರಿ ರೈಲಿಗೆ ಹೋಗುತ್ತೇನೆ. ತಮ್ಮ ಘನ ವ್ಯಕ್ತಿತ್ವಕ್ಕೆ ಸಾಧ್ಯವಾದರೆ ಟೌನ್ ಹಾಲಿನ ಹತ್ತಿರ ೪ ಗಂಟೆಗೆ ಬನ್ನಿ ಸಿಗುತ್ತೇನೆ. ಅಮ್ತು ನನಗೆ ರೇಗಂದ್ರೆ ರೇಗು. ನಿನ್ನನ್ನು ಮಾತಾಡಿಸಲೇ ಬಾರದು ಅನ್ನೊ ಅಷ್ಟು ರೇಗು ತರಲೆ ಥತ್. 16th ೪ಕ್ಕೆ ಟೌನ್ ಹಾಲಿನ ಹತ್ತಿರ ವಕ್ಕರಿಸಿರಿ. ಪೂಚಂತೇ.’
’ಹೀಗೇನೊ ಕಾಗದ ಬರ್ದಿದ್ರು ಸರಿ. ಆದರೆ ಅವರೇ ನಮ್ಮನೆ ಹುಡ್ಕೊಂಡ್ ಬಂದ್ರು. ಹ್ಯಾಗೆ ಗೊತ್ತಾಯ್ತು ಅಂದ್ರೆ ಇವರು ಪೋಸ್ಟ್ ಮ್ಯಾನ್ ಹತ್ರ ಹೋಗಿ ಅಡ್ರೆಸ್ ಕೇಳ್ಕೊಂಡು ಹುಡುಕ್ಕೊಂಡ್ ಬಂದಿದ್ರು…’ ಎಂದು ಹೇಳಿ ಮೇಡಂ ಮುಗುಳ್ನಕ್ಕರು. ನಮ್ಮ ಕ್ಯಾಮೆರಮನ್ ದರ್ಶನ್ ಕ್ಯಾಮೆರ ಆಫ್ ಮಾಡುವುದನ್ನು ಮರೆತು ಬಾಯಿಗೆ ಕೈ ಅಡ್ಡ ಕೊಟ್ಟುಕೊಂಡು ಒಳಗೊಳಗೆ ನಗಲು ಪ್ರಾರಂಭಿಸಿದರು. ಹೇಮಂತ ನನ್ನ ಕಡೆ ನೋಡಿ ‘ಹೆಹೆಹೆ….’ಎಂದು ಜೋರಾಗೇ ನಗಲಾರಂಭಿಸಿದ. ನಿತಿನ್ ಚಿತ್ರೀಕರಣದ ಜಾಗದಲ್ಲೇ ಇಲ್ಲದೆ ಹೊರಗೆ ನಿಂತು ಸುತ್ತಲಿನ ತೋಟ ನೋಡುವುದರಲ್ಲಿ ಮಗ್ನನಾಗಿದ್ದ.
“ನಾನೇನು ಕುಂಟನೊ, ಕುರುಡನೊ ಅಥವ ಹೆಳವನೊ”
ನಂತರ ನಾನು ತೇಜಸ್ವಿ ಮೈಸೂರನ್ನು ಬಿಟ್ಟು ಮೂಡಿಗೆರೆಯ ಕಾಡಿನ ಪರಿಸರಕ್ಕೆ ಬಂದು ಕೃಷಿ ಮಾಡುವ ನಿರ್ಧಾರದ ಕುರಿತು ಮಾತನಾಡುವಂತೆ ಅವರನ್ನು ಕೇಳಿದೆ. ಮೇಡಂ ಈ ವಿಚಾರದ ಕುರಿತು ಮಾತು ಪ್ರಾರಂಭಿಸಿದರು. ‘ಕನ್ನಡದಲ್ಲಿ ಇಲ್ಲಸ್ಟ್ರೇಟೆಡ್ ವೀಕ್ಲಿ ತರಹದ ಪತ್ರಿಕೆ ತರಬೇಕು ಅಂತ ತೇಜಸ್ವಿ-ಶಾಮಣ್ಣ ಜೋಡಿಯ ಯೋಚನೆ ಆಗಿತ್ತಂತೆ. ಹಾಗಾಗಿ ಕಾಲೇಜು ಮುಗಿಸಿದ ನಂತರ ಅವರ ಆಪ್ತ ಗೆಳೆಯ ಕಡಿದಾಳು ಶಾಮಣ್ಣನವರೊಂದಿಗೆ ಸೇರಿ ಮೈಸೂರಿನಲ್ಲಿ ಪ್ರೆಸ್ ತೆರೆದಿದ್ದರಂತೆ ತೇಜಸ್ವಿಯವರು. ಆದರೆ ಕಾರಣಾಂತರಗಳಿಂದ ಆ ಪ್ರೆಸ್ಸನ್ನು ಮುಚ್ಚಬೇಕಾಯಿತಂತೆ. ಇದಾದ ನಂತರ ತುಂಬಾ ಕಾಲ ಏನೂ ಕೆಲಸವಿಲ್ಲದೆ ಸುಮ್ಮನಿದ್ದ ತೇಜಸ್ವಿಯವರು ತಮ್ಮ ಬಗ್ಗೆಯೇ ಸಿಟ್ಟಾಗಿ ಆ ಕೋಪದಲ್ಲಿ ರಾಜೇಶ್ವರಿಯವರಿಗೆ ಪತ್ರ ಬರೆದು ’ನಾನೇನು ಕುಂಟನೊ, ಕುರುಡನೊ ಅಥವ ಹೆಳವನೊ? ಈ ರೀತಿ ಏನೂ ಕೆಲಸ ಮಾಡ್ದೆ ಇದ್ದೀನಲ್ಲ’ ಎಂದು ತಮ್ಮ ಹತಾಶೆ ತೋಡಿಕೊಂಡಿದ್ದಾರೆ.
ಆಗ ರಾಜೇಶ್ವರಿಯವರ ಕುಟುಂಬ ಬೆಂಗಳೂರು ಬಿಟ್ಟು ಮೂಡಿಗೆರೆ ಸಮೀಪದ ಭೂತನಕಾಡು ಎಂಬಲ್ಲಿ ಕಾಫಿ ತೋಟ ಮಾಡಿಕೊಂಡಿದ್ದರಂತೆ. ಒಮ್ಮೆ ತೇಜಸ್ವಿ ಭೂತನಕಾಡಿಗೆ ಬಂದು ನೋಡಿದವರು ನಿರ್ಧರಿಸಿದರಂತೆ ‘ತಾವೂ ಸಹ ಕಾಫಿ ತೋಟ ಮಾಡೇ ಮಾಡ್ತೇನೆ’ ಎಂದು. ಆದರೆ ತೇಜಸ್ವಿ ಕಾಡಿಗೆ ಬಂದು ಕಾಫಿ ತೋಟ ಮಾಡುವ ನಿರ್ಧಾರದ ಹಿಂದೆ ಕಾಫಿ ತೋಟದ ಲಾಭ ಗಳಿಸುವ ಉದ್ದೇಶಗಳ್ಯಾವೂ ಇದ್ದಂತೆ ಕಾಣುವುದಿಲ್ಲ. ಈ ನಿರ್ಧಾರದ ಹಿಂದಿನ ಮೂಲ ಕಾರಣ ಕಾಡಿನ ಬಗೆಗಿದ್ದ ತೀವ್ರ ಸೆಳೆತ, ಕುತೂಹಲ ಹಾಗೂ ಸ್ವತಂತ್ರವಾಗಿ ತಮ್ಮ ಪಾಡಿಗೆ ತಾವು ಮನಸ್ಸಿಗೆ ಅನ್ನಿಸಿದ್ದನ್ನು ಮಾಡಿಕೊಂಡು ಬದುಕಬಹುದು ಎಂಬುದೇ ಆಗಿತ್ತು. ಏಕೆಂದರೆ ಮುಂದೆ ಕಡಿದಾಳು ಶಾಮಣ್ಣನವರು ನಮಗೆ ತಿಳಿಸಿದ ಪ್ರಕಾರ ‘ತೇಜಸ್ವಿಯವರು ಕಾಫಿಯಲ್ಲಿ, ಕೃಷಿಯಲ್ಲಿ ಲಾಭ ಅಂತ ಕಂಡಿದ್ದೇ ಇಲ್ಲ’. ಅವರ ಪ್ರಕಾರ ‘ಸುಮ್ಮನೆ ತೋಟ ಒಂದು ನೆಪ’ ಎಂದು ಆರಿಸಿಕೊಂಡರಂತೆ ತೇಜಸ್ವಿ ತನ್ನ ಪಾಡಿಗೆ ತಾನು ಬದುಕೋಕೆ. ಮುಖ್ಯವಾಗಿ ತೇಜಸ್ವಿಯವರಿಗೆ ಲೋಹಿಯಾರವರ ವಿಚಾರಧಾರೆಗಳ ಪ್ರಭಾವ ಹೆಚ್ಚಾಗಿದ್ದುದ್ದರಿಂದ ಅವರು ಗ್ರಾಮ ಜೀವನದೆಡೆ ಮುಖಮಾಡಿ ಬದುಕಲು ಸಾಧ್ಯವಾಗಿದ್ದನ್ನು ಸ್ವತಃ ತೇಜಸ್ವಿಯವರೇ ಅವರ ’ಅಬಚೂರಿನ ಪೋಸ್ಟಾಫೀಸು’ ಕೃತಿಯ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ. (’ಹೊಸ ದಿಗಂತದೆಡೆಗೆ’ ಮುನ್ನುಡಿ ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನ).
ಮೇಡಂ ಮುಂದುವರೆಸಿದರು, “ಇವರು ತೋಟ ಮಾಡಿದ ನಂತರ ನಮ್ಮ ಮದುವೆ ಮಂತ್ರಮಾಂಗಲ್ಯ ರೀತಿಯಲ್ಲಿ ಅತ್ಯಂತ ಸರಳವಾಗಿ ತೋಟದಲ್ಲೇ ಆಯ್ತು. ಆಗ ಕಾಡಿಗೆ ಬಂದ ಪ್ರಾರಂಭದಲ್ಲಿ ತುಂಬಾ ಕಷ್ಟಗಳೇ ಇದ್ದವು. ಮೂಲತಃ ಅದು ದಟ್ಟ ಕಾಡು. ಅಲ್ಲಿ ಮೂಲಭೂತ ಅನ್ನುವಂತಹ ಸೌಕರ್ಯಗಳೂ ಸರಿಯಾಗಿ ಇರಲಿಲ್ಲ. ಆದರೆ ಛಲ ಬಿಡದೇ ಅದೇ ಕಷ್ಟದಲ್ಲೇ ಬದುಕಿದ್ವಿ. ನಮ್ಮಲ್ಲಿ ಕರೆಂಟ್ ಇರಲಿಲ್ಲ. ಹತ್ತು ವರ್ಷ ಕರೆಂಟ್ ಇಲ್ಲದೇ ದಟ್ಟವಾದ ಕಾಡಿನಂತಿದ್ದ ತೋಟದಲ್ಲೇ ವಾಸ ಮಾಡ್ತಿದ್ವಿ. ಈ ಕತ್ತಲಿನಲ್ಲೇ ಸೀಮೆ ಎಣ್ಣೆ ದೀಪದ ಬೆಳಕಿನಲ್ಲೇ ಇವರು ಕ್ಲಾಸಿಕ್ ಕಾದಂಬರಿ ’ಕರ್ವಾಲೊ’ ಬರೆದಿದ್ದು ಅಂತ ಹೇಳೊಕೆ ನನಗೆ ತುಂಬಾ ಹೆಮ್ಮೆ ಆಗುತ್ತೆ.’ ಎಂದು ಹೇಳಿದ ಮೇಡಂ ರ ಕಣ್ಣುಗಳಲ್ಲಿ ಅವರು ಹೇಳಿದಂತೆ ತೇಜಸ್ವಿಯೆಡೆಗಿನ ಹೆಮ್ಮೆ, ಮೆಚ್ಚುಗೆ, ಅಭಿಮಾನ ಎದ್ದು ಕಾಣಿಸುತ್ತಿದ್ದವು.
“ನನಗೆ ಈಗ ಅನುಕೂಲ ವಿರಾಮ ಸಿಕ್ತು”
ಮಂತ್ರಮಾಂಗಲ್ಯದ ಬಗ್ಗೆ ರಾಜೇಶ್ವರಿಯವರು ಹೇಳಿದ ಕೆಲ ಆಸಕ್ತಿಕರ ವಿಷಯಗಳು ಇಲ್ಲಿವೆ. ‘ಕೇವಲ ೨೫ ಜನರ ಸಮ್ಮುಖದಲ್ಲಿ ತೇಜಸ್ವಿಯವರ ತೋಟ ಚಿತ್ರಕೂಟದಲ್ಲಿ ನಡೆದ ಅತ್ಯಂತ ಸರಳ ಮದುವೆ ಅದಾಗಿತ್ತಂತೆ. ಅಂದು ಕುವೆಂಪುರವರು ಕೆಲ ಶ್ಲೋಕಗಳನ್ನು ಓದಿ ಇವರಿಬ್ಬರ ಮದುವೆ ಮಾಡಿಸಿದರಂತೆ. ಆ ಸಂದರ್ಭದಲ್ಲಿ ಕುವೆಂಪುರವರು ’ನೀವು ಲೋಕವನ್ನಾಗಲಿ, ಪುರೋಹಿತಶಾಹಿಯನ್ನಾಗಲಿ ಪ್ರತಿಭಟಿಸುವ ಅಗತ್ಯ ಖಂಡಿತಾ ಇಲ್ಲ. ನಿಜವಾಗಿಯೂ ನೀವು ಪ್ರಾಮಾಣಿಕರಾಗಿದ್ದರೆ ಮುಂದೆ ಹೇಳುವ ಸುಧಾರಣೆಯನ್ನು ನಿಮ್ಮ ಜೀವನದಲ್ಲಿ ಮಾಡಿಕೊಳ್ಳಿ. ವರದಕ್ಷಿಣೆ ತೆಗೆದುಕೊಳ್ಳದೆ, ಶಾಸ್ತ್ರ ಸಂಪ್ರದಾಯ ಆಚರಿಸದೇ, ಆಡಂಬರದ ಪ್ರದರ್ಶನ ಮಾಡದೇ ಸರಳವಾಗಿ ಮದುವೆ ಮಾಡಿಕೊಳ್ಳಿ. ಇದ್ಯಾವ ಮಹಾ ಸುಧಾರಣೆ ಎಂದು ನಿಮಗನ್ನಿಸಬಹುದು. ಗೊಡ್ಡು ಸಂಪ್ರದಾಯಗಳಿಗೆ ಬಲಿಯಾಗದೆ, ನೀವು ನಂಬಿದ ತತ್ವ, ಆದರ್ಶಗಳನ್ನು ಬಿಟ್ಟುಕೊಡದೆ ಅವುಗಳ ಪರವಾಗಿ ನಿಲ್ಲುವ ಅದ್ಭುತ ಆನಂದ ಎಂತಹುದೆಂದು ನಿಮಗೆ ಗೊತ್ತಾಗುತ್ತದೆ. ಭಾರತ ನಿಮ್ಮ ಕಣ್ಣೆದುರೇ ಬದಲಾಗುವುದನ್ನು ನೀವು ಕಾಣುತ್ತೀರಿ’ ಎಂಬ ಸಂದೇಶವನ್ನು ನಾಡಿನ ಯುವಸಮುದಾಯಕ್ಕೆ ಕೊಟ್ಟಿದ್ದಾರೆ.
ಕುವೆಂಪುರವರು ಮದುವೆಯ ಆಹ್ವಾನ ಪತ್ರಿಕೆಗಳನ್ನು ಕಾಗದಗಳ ಮೇಲೆ ಮುದ್ರಿಸಿ (ಈ ಕೆಲಸಕ್ಕೆಲ್ಲಾ ಸ್ವತಃ ತೇಜಸ್ವಿಯವರೇ ಇದ್ದರಲ್ಲ…ಪ್ರಿಂಟಿಂಗ್ ಪ್ರೆಸ್ ಇಟ್ಟು ಅನುಭವ ಹೊಂದಿದ್ದವರು) ಮದುವೆಯ ದಿನವೇ ಎಲ್ಲರಿಗೂ ತಲುಪುವ ಹಾಗೆ ’ಮದುವೆ ಇಂತ ದಿವಸ ನಡೆಯಿತು. ತಮಗೆ ಅನುಕೂಲ ವಿರಾಮವಿದ್ದಾಗ ವಧು ವರರ ಆತಿಥ್ಯ ಸ್ವೀಕರಿಸಿ ಅವರನ್ನು ಆಶೀರ್ವದಿಸಿ’ ಎಂಬ ಒಕ್ಕಣೆಯಿದ್ದ ಪತ್ರವನ್ನು ಕಳಿಸಿದ್ದರಂತೆ. ಹೆಚ್ಚು ಜನ ಸೇರುವುದು ಮಂತ್ರ ಮಾಂಗಲ್ಯ ವಿವಾಹ ಪದ್ದತಿಯ ಮೂಲ ಅಲೋಚನೆಗೆ ವಿರುದ್ಧವಾದದಾದ್ದರಿಂದ ಮದುವೆಗೆ ಸಾಧ್ಯವಾದಷ್ಟು ಕಡಿಮೆ ಜನ ಬರಬೇಕೆಂಬುದು ಆಹ್ವಾನ ಪತ್ರಿಕೆ ಮದುವೆಯ ದಿನವೇ ಎಲ್ಲರ ಕೈ ಸೇರುವಂತೆ ಪೋಸ್ಟ್ ಮಾಡಿದ ಹಿಂದಿನ ಉದ್ದೇಶ. ಇವರ ಮದುವೆಯಾದ ೨೭ ವರ್ಷಗಳ ನಂತರ ಜಾನಪದ ಲೋಕದ ಹೆಚ್.ಎಲ್ ನಾಗೇಗೌಡರು ತೇಜಸ್ವಿಯವರ ತೋಟಕ್ಕೆ ಬಂದು ’ನನಗೆ ಈಗ ಅನುಕೂಲ ವಿರಾಮ ಸಿಕ್ತು ಅದಕ್ಕೆ ಆಶೀರ್ವಾದ ಮಾಡೊಕೆ ಬಂದಿದ್ದೀನಿ… ಬನ್ನಿ ಆಶೀರ್ವಾದ ತಗೊಳಿ’ ಎಂದು ಹಾಸ್ಯ ಮಾಡಿದರಂತೆ. ಹೀಗೆ ಅತ್ಯಂತ ಸರಳ ರೀತಿಯಲ್ಲಿ ಪ್ರಾರಂಭವಾದ ತೇಜಸ್ವಿ-ರಾಜೇಶ್ವರಿಯವರ ಬದುಕಿನ ಪಯಣ ಕಡೆಯವರೆಗೂ ಹಾಗೇ ಅತ್ಯಂತ ಸರಳವಾಗೇ ಮುಂದುವರೆದಿದೆ.
“ಕಾಡಿನ ನಡುವಿನ ಬದುಕಿನ ಸೌಂದರ್ಯ, ಸವಾಲುಗಳು”


‘ಸದಾ ಸ್ವತಂತ್ರ ಬದುಕನ್ನು ಹಂಬಲಿಸುತ್ತಿದ್ದ ತೇಜಸ್ವಿಯವರಿಗೆ ಮೂಡಿಗೆರೆಯ ಪರಿಸರ ಹಾಗೂ ಸುತ್ತಲಿನ ಕಾಡಿನಿಂದ ಆ ಸ್ವತಂತ್ರ ಸಿಗಲು ಪ್ರಾರಂಭವಾದಾಗ ಹೇಳಲಸಾಧ್ಯವಾದ ಆನಂದ ಉಂಟಾಗಿದೆ. ಹಾಗಾಗಿ ‘ತಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಸ್ವತಂತ್ರ ಬದುಕಿನ ಮುಂದೆ ಉಳಿದ ಕಷ್ಟ ನಷ್ಟಗಳೆಲ್ಲಾ ಗೌಣವಾಗಿ ಕಂಡಿವೆ’ ಎಂದು ಮೇಡಂ ಕಾಡಿಗೆ ನೆಲೆಸಿದ್ದರ ನಂತರದ ಬದುಕನ್ನು ಅನಾವರಣ ಮಾಡುತ್ತಾ ಹೋದರು. ಹೀಗೆ ಮಾತು ತೇಜಸ್ವಿಯವರ ಫಿಶಿಂಗ್ ಹಾಗೂ ಶಿಕಾರಿಯ ಹವ್ಯಾಸಗಳ ಕಡೆ ಹೊರಳಿಕೊಂಡಿತು. ಮೇಡಂ ಅಂದಿನ ಕೆಲ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಹೋದರು.
“ಮದುವೆ ಆದ ಹೊಸದು ಅದು. ನನಗೆ ಮೊದಲು ಗೊತ್ತಿರಲಿಲ್ಲ, ಇವರಿಗೆ ಫಿಶಿಂಗ್ ಬಗ್ಗೆ ಆಸಕ್ತಿ ಇದೆ ಅಂತ. ಎಷ್ಟೊ ಸಲ ಬೆಳಿಗ್ಗೆ ಫಿಶಿಂಗ್ ಗೆ ಅಂತ ಹೋದ್ರೆ ಸಂಜೆ ಆದ್ರೂ ಮನೆಗೆ ಬರ್ತಿರ್ಲಿಲ್ಲ. ನಾನು ಇದೇನಪ್ಪ ಇವರು ಹೀಗೆ ಅಂತ ಅಂದ್ಕೊಳ್ತಿರ್ತಿದ್ದೆ. ಒಂದ್ಸಲ ಏನಾಯ್ತು, ನಾವು ಮೈಸೂರಿಗೆ ಹೋಗಿದ್ದೆವು ಆಗ. ಆಗ ಇವರು ಬೆಳಿಗ್ಗೇನೆ ರಾಡು ರೀಲು ಎಲ್ಲಾ ಹಿಡ್ಕೊಂಡು ಫಿಶಿಂಗ್ ಗೆ ಅಂತ ಹೋದವರು ರಾತ್ರಿ ೧೧ ಗಂಟೆ ಆದ್ರೂ ವಾಪಸ್ ಬರಲೇ ಇಲ್ಲ. ನಾನು ಕಾಯ್ತಾ ಕೂತಿದ್ದನ್ನ ನೋಡಿ ಅಣ್ಣ (ಕುವೆಂಪು) ’ಏನಕ್ಕ ಅಣ್ಣ ಇನ್ನೂ ಬರಲಿಲ್ವ? ಒಂದ್ಕೆಲಸ ಮಾಡು ಅವನು ಬಂದ್ರೆ ನೀನು ಬಾಗಿಲು ತೆಗಿಬೇಡ. ನಾನು ತೆಗಿತೀನಿ ಅವನತ್ರ ಮಾತಾಡ್ತೀನಿ…’ ಅನ್ನೊ ಅಷ್ಟರಲ್ಲಿ ಇವರು ಬಂದ್ರು.
ತಕ್ಷಣ ಅಣ್ಣ ’ಏನಣ್ಣ ನೀನು ಅಲ್ಲ ಇಷ್ಟೊತಾದ್ರು ಮನೆಗೆ ಬರದೇ ಎಲ್ಲಿಗೆ ಹೋಗಿದ್ದೆ?’ ಅಂತ ಕೇಳಿದ್ರು. ಇವರು ’ರಾಮದಾಸ್ ಜೊತೆಗೆ ಕಾವೇರಿ ನದಿಗೆ ಮೀನು ಹಿಡಿಯಕ್ಕೆ ಹೋಗಿದ್ದೆ. ಮೀನೆಲ್ಲಾ ಹಿಡ್ಕೊಂಡು ಹಾಗೇ ರಾಮದಾಸ್ ಮನೆಗೆ ಹೋಗಿ ಅಲ್ಲೇ ಅಡಿಗೆ ಮಾಡಿ ತಿಂದು ಬರೊ ಅಷ್ಟರಲ್ಲಿ ಲೇಟ್ ಆಯ್ತು’ ಅಂತ ಕಾರಣ ಹೇಳಿದ್ರು. ಅಮೇಲೆ ನೋಡಿದ್ರೆ ಅಣ್ಣ ಇವರತ್ರ ’ನೀನು ಎಷ್ಟು ಮೀನು ಹಿಡಿದೆ? ಯಾವ್ಯಾವ ಥರದ ಮೀನು ಹಿಡಿದೆ? ಆ ಮೀನುಗಳು ನಿನ್ನನ್ನ ಎಷ್ಟು ಸೆಣೆಸಿತು? ಎಷ್ಟು ದೊಡ್ಡ ಮೀನು ಸಿಕ್ತು?’ ಅಂತೆಲ್ಲಾ ಕೇಳ್ತಾ ಕೂತುಬಿಟ್ರು. ಕಡೆಗೆ ಅಣ್ಣ ’ಅಯ್ಯೊ ಗೊತ್ತಿದ್ರೆ ನಾನು ಬಂದುಬಿಡ್ತಿದ್ದೆ…’ ಅಂತ ಬೇರೆ ಹೇಳಿದ್ರು. ನನಗೆ ಆಗ್ಲೇ ಗೊತ್ತಾಗಿದ್ದು ’ಇವರಿಗೆ ಫಿಶಿಂಗ್ ಅಂದ್ರೆ ಎಷ್ಟು ಇಷ್ಟ ಅಂತ.
ಒಂದ್ಸಲ ನಾನು ಕೇಳಿದ್ದೆ ’ಅಲ್ಲ ಯಾವಾಗ ನೋಡಿದ್ರು ನೀರಿಗೆ ಗಾಳ ಹಾಕ್ಕೊಂಡ್ ಕೂತಿರ್ತೀರಲ್ಲ…’ ಅಂತ. ಅದಕ್ಕವರು ಮೀನು ಹಿಡಿಯುವ ರಾಡು ರೀಲು ಎಲ್ಲಾ ನನ್ನ ಕೈಗೆ ಕೊಟ್ಟು ’ಅನುಭವ ಹೇಗಿರುತ್ತೆ ಹೇಳು’ ಅಂದಿದ್ರು. ಅವರೇ ಹೇಳ್ತಿದ್ರು ’ಫಿಶಿಂಗ್ ಅಂದ್ರೆ ಅದೊಂದ್ ರೀತಿ ಯಾವುದಾದರೂ ಒಳ್ಳೆ ಸಂಗೀತ ಕೇಳಿದ ಹಾಗೆ. ಗಾಳದ ತುದಿಯನ್ನ ಮೀನು ಕುಟುಕಿದ ಅನುಭವ ಇದೆಯಲ್ಲ ಅದು ನಮ್ಮನ್ನ ಬೇರೆ ಒಂದು ಲೋಕಕ್ಕೇ ಕರೆದುಕೊಂಡು ಹೋಗುತ್ತೆ. ಅದೊಂದ್ ರೀತಿ ಧ್ಯಾನ’ ಅಂತ. ಅಮೇಲೆ ಫಿಶಿಂಗ್ ಗೆ ಹೋಗ್ಬೇಕದ್ರಾಂತು ಏನೊ ಒಂಥರ ಮೈಮೇಲೆ ಬಂದೊರ ಹಾಗೆ ತಯಾರಿ ಮಾಡ್ಕೊಳ್ತಿದ್ರು. ಬೆಳಿಗ್ಗೆನೇ ಎದ್ದು ತೋಟದಲ್ಲಿ ಅಗೆದು ಎರೆಹುಳ ಹಿಡ್ಕೊಂಡು, ಅಲ್ಲೇ ನಮ್ಮ ಕೆರೆನಲ್ಲಿ ಸಣ್ಣ ಸಣ್ಣ ಮೀನುಗಳನ್ನ ಹಿಡ್ಕೊಂಡು, ಚಿಕ್ಕ ಚಿಕ್ಕ ಏಡಿಗಳನ್ನ ಹಿಡ್ಕೊಂಡು ಬ್ಯಾಗಿಗೆ ಹಾಕಿಕೊಂಡು ತಯಾರಾಗ್ತಿದ್ರು. ಅವರ ಹತ್ರ ಒಂದು ಬ್ಯಾಗ್ ಇತ್ತು. ಅದನ್ನ ಅವರೇ ಸ್ವತಃ ಹೊಲ್ಕೊಂಡು ರೆಡಿ ಮಾಡಿ ಇಟ್ಕೊಂಡಿದ್ರು. ತುಂಬಾ ದೂರ ದೂರ ಸುಮಾರು ನಲವತ್ತು ಐವತ್ತು ಕಿಲೊಮೀಟರ್ ದೂರದ ಭದ್ರಾ ನದಿಗೆ ಹೋಗಿ ಫಿಶಿಂಗ್ ಮಾಡ್ಕೊಂಡ್ ಬರ್ತಾ ಇರ್ತಿದ್ರು.
ಮೀನು ಹಿಡಿಯೋಕೆ ಗಾಳಕ್ಕೆ ಸ್ಪಿನ್ನರ್ ಅಂತ ಒಂದು ಬರುತ್ತೆ. ದುಡ್ಡು ಕೊಟ್ಟು ತಗೊಂಡ ಸ್ಪಿನರ್ ಗಳು ದೊಡ್ಡ ಮೀನು ಎಳೀವಾಗ ಬೆಂಡಾಗ್ತವೆ ಅಂತ ಹೇಳಿ ಸ್ಟೀಲ್ ಸ್ಪೂನ್ ಬಳಸಿ ಇವರೇ ಸ್ವತಃ ಸ್ಪಿನ್ನರ್ ತಯಾರು ಮಾಡ್ಕೋತಿದ್ರು. ಒಂದು ಘಟನೆ ನೆನಪಾಗ್ತಿದೆ, ಅಮ್ಮ (ತೇಜಸ್ವಿಯವರ ತಾಯಿ) ಮೈಸೂರಿನಿಂದ ಒಂದಷ್ಟು ಚಮಚಗಳನ್ನ ಕೊಟ್ಟಿದ್ರು. ಅದರ ಮೇಲೆ ಕುವೆಂಪು ಅಂತ ಹೆಸರು ಬರೆಸಿದ್ರು. ಒಂದ್ಸಲ ತೋಟಕ್ಕೆ ಬಂದಾಗ ಇವರು ಸ್ಪೂನ್ ಕಟ್ ಮಾಡಿ ಸ್ಪಿನ್ನರ್ ಮಾಡ್ಕೋತಾರೆ ಅಂತ ಹೇಳ್ದಾಗ ಅವ್ರು ತಕ್ಷಣ ’ಅಯ್ಯೊ ಹಾಗಾದ್ರೆ ಕುವೆಂಪು ಅಂತ ಹೆಸರು ಬರೆಸಿದ್ದ ಚಮಚಾನೂ ಕೊಟ್ಟು ಬಿಟ್ಯ?’ ಅಂತ ಗಾಬರಿಯಲ್ಲಿ ಕೇಳಿದ್ರು. ’ನಾನೇನ್ ಕೊಡಬೇಕ ಅವರಿಗೆ, ಅವರೇ ತಗೋತಾರೆ’ ಅಂತ ಹೇಳಿದ್ದೆ.
ಆದರೆ ಅಷ್ಟು ದೂರ ಹೋಗಿ ಫಿಶಿಂಗ್ ಮಾಡ್ತಿದ್ರಲ್ಲ ಅದು ಬರೀ ಮೀನು ಗಳನ್ನ ಹಿಡ್ಕೊಂಡ್ ಬಂದು ತಿನ್ನೊ ಕಾರಣಕ್ಕೆ ಮಾತ್ರ ಅಲ್ಲ. ಅವರೇ ಹೇಳ್ತಿದ್ದ ಹಾಗೆ ’ಫಿಶಿಂಗ್ ನ ಹಿಂದೆ ಒಂದು ಬಹುದೊಡ್ಡ ಆದರ್ಶ ಇದೆ. ನೀರಿಗೆ ಗಾಳ ಹಾಕಿ ಕೂತಾಗ ಕಂಪ್ಲೀಟ್ ಸೈಲೆನ್ಸ್ ಬೇಕಾಗುತ್ತೆ. ಆ ಸೈಲೆನ್ಸಿನಲ್ಲಿ ಎದುರಿಗೆ ಹರಿಯೊ ನದಿ, ಸುತ್ತಲಿನ ಕಾಡು, ಇವುಗಳ ಮಧ್ಯೆ ಒಂದಾಗಿ ಹೋಗ್ಬೇಕಾಗುತ್ತೆ. ಜೊತೆಗೆ ಈ ಸೈಲೆನ್ಸ್ ಒಂದು ರೀತಿ ತಪಸ್ಸು ಇದ್ದ ಹಾಗೆ. ಯೋಚನೆ ಮಾಡೋದಕ್ಕೆ ಬೇಕಾದಷ್ಟು ಟೈಂ ಸಿಗುತ್ತೆ’ ಅಂತ ಹೇಳ್ತಿರ್ತಿದ್ರು.
ಏಷ್ಟೊ ಸಲ ರಾತ್ರಿ ೧೦ ಗಂಟೆ ಆಗಿಬಿಟ್ಟಿರೋದು. ಆಗ ಇವರು ಮೀನು ಹಿಡ್ಕೊಂಡ್ ಬಂದು ಆ ರಾತ್ರಿನಲ್ಲಿ ಅಡಿಗೆ ಮಾಡು ಅಂತ ಹೇಳ್ತಿದ್ರು. ಪ್ರಾರಂಭದಲ್ಲಂತು ಅತ್ತುಕೊಂಡೆ ಅಡಿಗೆ ಮಾಡಿದ್ದೀನಿ. ಅಮೇಲೆ ಅದು ಅಭ್ಯಾಸ ಆಯ್ತು. ಇವರು ಒಂದು ದೊಡ್ಡ ಮಚ್ಚು ಇಟ್ಕೊಂಡಿದ್ರು. ಅದರಲ್ಲೇ ಆ ಮೀನನೆಲ್ಲಾ ಕತ್ತರಿಸಿ ಕ್ಲೀನ್ ಮಾಡಿ ಕೊಡ್ತಿದ್ರು. ಆಗ ಗಾಂಗೇಯ ಅಂತ ಒಬ್ಬರು ಇವರ ಜೊತೆಗಿದ್ರು. ಅದರಲ್ಲಿ ಥರಾವರಿ ಅಡಿಗೆ ಮಾಡ್ಬೇಕಾಗ್ತಿತು. ಫ್ರೈ ಅಂತೆ, ಸಾರಂತೆ, ಇನ್ನೂ ಏನೇನೊ ಮಾಡ್ಬೇಕಾಗ್ತಿತ್ತು. ಅದರಲ್ಲೇ ಕಟ್ಲೆಟ್ ಮಾಡೊದಕ್ಕು ಕಲಿತಿದ್ದೆ. ಒಂದ್ಸಲ ಸುಮಾರು ೧೨೦ ಕಟ್ಲೆಟ್ ಮಾಡಿಟ್ಟಿದ್ದೆ. ಮನೆಗೆ ಬಂದಿದ್ದ ಡಾಕ್ಟರ್ ಒಬ್ರು ಅದನ್ನ ನೋಡಿ ’ಒಂದ್ಕೆಲಸ ಮಾಡಿ ನೀವಿಬ್ರು ಒಂದು ಅಂಗಡಿ ತಕ್ಕೊಂಡ್ ಕೂತ್ಕೊಳಿ. ಚೆನ್ನಾಗಿ ವ್ಯಾಪಾರ ಆಗುತ್ತೆ’ ಅಂತ ನಗೆಯಾಡಿದ್ರು’ ಎನ್ನುತ್ತಾ ತೇಜಸ್ವಿಯವರೊಂದಿಗಿನ ಬದುಕಿನ ಪಯಣವನ್ನು ನೆನಪಿಸಿಕೊಂಡು ತಾವೂ ಜೋರಾಗಿ ನಕ್ಕರು. ನಾನು ನಮ್ಮ ಹುಡುಗರು ಅವರ ನಗುವಿಗೆ ಸಾಥ್ ಕೊಡದೆ ಸುಮನಿರಲಾಗಲಿಲ್ಲ. ಈ ಮಧ್ಯದಲ್ಲಿ ಬೆಳಗಿನ ತಿಂಡಿ ಹಾಗೂ ಮತ್ತೊಂದು ರೌಂಡು ಕಾಫಿ ಮುಗಿಸಿದ್ದೆವು.
ಕೆಲ ನಿಮಿಷಗಳ ವಿರಾಮ ತೆಗೆದುಕೊಂಡು ಮತ್ತೆ ಚಿತ್ರೀಕರಣ ಪ್ರಾರಂಭಿಸಿದೆವು. ಶಿಕಾರಿಯ ದಿನಗಳ ಬಗ್ಗೆ ಹೇಳುವಂತೆ ಮೇಡಂರನ್ನು ಕೇಳಿದೆ. ಮೇಡಂ ಒಂದೊಂದಾಗಿ ನೆನಪು ಮಾಡಿಕೊಳ್ಳುತ್ತಾ ಹೋದರು.
“ನಾವು ಚಿತ್ರಕೂಟಕ್ಕೆ ಬಂದ ಪ್ರಾರಂಭದಲ್ಲಿ ’ಕಿವಿ’ ಜೊತೆ ಶಿಕಾರಿಗೆ ಹೋಗ್ತಾ ಇರ್ತಿದ್ರು. ಆಗ ಸುತ್ತಾ ಕಾಡು ದಟ್ಟವಾಗಿತ್ತು. ಹಂದಿ, ಕಾಡುಕುರಿ ಮುಂತಾದವು ಕಣ್ಣು ಎದುರಿಗೆ ಯಥೇಚ್ಚವಾಗಿ ಓಡಾಡ್ತಿದ್ವು. ಇವರೇ ಹೇಳ್ತಿದ್ದ ಪ್ರಕಾರ ’ಕಾಡು ಸುತ್ತೋದು ಅಂದ್ರೆ ಪರಮ ಸುಖ’ ಅಂತಿದ್ರು.’ (ಪರಿಸರದ ಕಥೆಯ ಮೊದಲ ಭಾಗದಲ್ಲಿ ಕಿವಿಯೊಂದಿಗೆ ಶಿಕಾರಿಗೆ ಹೋಗಿ ಅಲ್ಲಿ ಮುಳ್ಳು ಕಲ್ಲುಗಳಲ್ಲಿ ನುಗ್ಗಿ ಮೈಕೈ ತರಚಿಕೊಂಡು ಬರುತ್ತಿದ್ದದ್ದರ ಹಿಂದಿನ ಕಾರಣ ತಮಗೂ ಸ್ಪಷ್ಟವಾಗಿಲ್ಲದಿರುವುದರ ಬಗ್ಗೆ ತೇಜಸ್ವಿ ಬರೆದಿರುವುದನ್ನು ನೋಡಬಹುದು.)
ಕಾಡುಕುರಿ, ಕಾಡು ಕೋಳಿ, ಕಾಡು ಹಂದಿ ಹೀಗೆ ಶಿಕಾರಿ ಮಾಡ್ಕೊಂಡ್ ಬರ್ತಿದ್ರು. ಇವರಿಗೆ ನಾನ್ ವೆಜ್ ಅಂದ್ರಂತೂ ಪಂಚಪ್ರಾಣ. ಆ ಮಾಂಸದಲ್ಲಿ ಬಿರ್ಯಾನಿ, ಸಾರು ಎಲ್ಲಾ ಮಾಡ್ಬೇಕಾಗ್ತಿತ್ತು. ಉಳಿದ್ರೆ ಅದನ್ನ ಒಣಗಿಸಿ ಇಟ್ಕೋತಾ ಇರ್ತಿದ್ದೆ. ಒಣಗಿಸಿದ ಮಾಂಸದಲ್ಲಿ ವಡೆ ಮಾಡ್ಬೇಕಾಗ್ತಿತ್ತು. ಕಾಡುಕುರಿಯ ಮಾಂಸದ ವಡೆ!!. ಬಿರ್ಯಾನಿ ತುಂಬಾ ಇಷ್ಟಪಡ್ತಿದ್ರು. ಎಷ್ಟೊ ಸಲ ಇವರೇ ಅಡಿಗೆ ಮನೆಗೆ ಹೋಗಿ ಬಿರ್ಯಾನಿ ಮಾಡ್ಕೊಳ್ತಿದ್ರು. ಆಗೆಲ್ಲ ನನನ್ನ ಅಡಿಗೆ ಮನೆಗೆ ಸೇರಿಸ್ತಾ ಇರಲಿಲ್ಲ. ಒಂದ್ಸಲ ಅಂತು ಬಿರ್ಯಾನಿ ಎಷ್ಟು ಖಾರ ಮಾಡಿದ್ರು ಅಂದ್ರೆ ನನಗೆ, ನಮ್ಮ ತೋಟದ ಕೆಲಸಗಾರರಿಗೆ ಇರಲಿ, ಸ್ವತಃ ಇವರಿಗೂ ಸಹ ಒಂದು ತುತ್ತು ಬಾಯಿಗೆ ಇಡೋಕೆ ಆದಲಿಲ್ಲ. ಅಮೇಲೆ ಅಷ್ಟು ಬಿರ್ಯಾನಿನೂ ತಗೊಂಡು ಹೋಗಿ ಕೆರೆಗೆ ಹಾಕ್ಬೇಕಾಯ್ತು. ನನಗಂತೂ ಎಲ್ಲಿ ಕೆರೆಲಿರೊ ಮೀನುಗಳಿಗೂ ಖಾರ ಆಗುತ್ತೊ ಅಂತ ಅನ್ಸಿತ್ತು. ಇಷ್ಟೆಲ್ಲಾ ಆದ್ಮೇಲೆ ಈ ಫಜೀತಿನೇ ಬೇಡ ಅಂತ ಹೇಳಿ ಮೂಡಿಗೆರೆಲಿ ಒಂದು ಮುಸ್ಲಿಮ್ ಹೋಟೆಲ್ ಗೊತ್ತು ಮಾಡ್ಕೊಂಡಿದ್ರು. ಮೂಡಿಗೆರಯಲ್ಲಂತೂ ಆ ಹೋಟೆಲ್ ನ ಜನ ’ತೇಜಸ್ವಿ ಬಿರ್ಯಾನಿ ಪಾರಡೈಸ್’ ಅಂತ ಕರೀತಿದ್ರು. ಅವತ್ತು ಏಪ್ರಿಲ್ ೫ನೇ ತಾರೀಖು ಸಹ ಅದೇ ಮುಸ್ಲಿಂ ಹೋಟೆಲ್ ನಿಂದ ಬಿರ್ಯಾನಿ ತಂದು ಅಳಿಯ, ಮಗಳು ಎಲ್ಲರ ಜೊತೆ ತಿಂದು ಎದ್ದು ಹೋಗಿ ಕೈ ತೊಳ್ಕೊಂಡ್ರು. ಅಷ್ಟೇ ಧಡಾರ್ ಅಂತ ಸದ್ದಾಯ್ತು. ಅಷ್ಟೇ ಸದ್ದಾಯ್ತು. ಯಾವ್ದೊ ನಮ್ಮ ತೋಟದ ದೊಡ್ಡ ಮರ ಬಿದ್ದು ಹೋಯ್ತು ಅಂತ ಅಂದುಕೊಂಡೆ….’ಮೇಡಂ ಹನಿಗಣ್ಣಾದರು. ಸ್ವಲ್ಪ ಹೊತು ಯಾರೂ ಮಾತಾಡಲಿಲ್ಲ.
“ಬಹುಮುಖ ಪ್ರತಿಭೆಯ ಜೀವನ ಪ್ರೀತಿ”

ನಂತರ ಮೇಡಂ ನಿರುತ್ತರದ ಅವರ ಮನೆಯ ಹಿಂದಿನ ಸಿಟ್ ಔಟ್ ಗೆ ಬಂದು ಕುಳಿತು ಮಾತು ಮುಂದುವರೆಸಿದರು. ‘ಈ ಸಿಟ್ ಔಟಿಗೆ ಬಂದು ಕುಳಿತರೆ ಹಳೆಯದೆಲ್ಲಾ ಕಣ್ಮುಂದೆ ಬಂದ ಹಾಗೆ ಆಗ್ತವೆ. ಇವರು ಕಂಪ್ಯೂಟರ್ ನಲ್ಲಿ ಕೆಲಸ ಮಾಡಿ ಸುಸ್ತಾಗಿ ಬಂದು ಈ ಸಿಟ್ ಔಟ್ ನಲ್ಲಿ ಬಲಗೈ ಎತ್ತಿ ಎಡಭುಜದ ಮೇಲಿಟ್ಟುಕೊಂಡು ಒಂದು ರೀತಿ ರಿಲ್ಯಾಕ್ಸ್ ಮೂಡ್ ನಲ್ಲಿ ಕೂತ್ಕೋತಾ ಇದ್ರು. ನಾನು ಮನೆ ಕೆಲಸ, ಅಡಿಗೆ ಕೆಲಸ ಮುಗಿಸಿ ಅವರ ಜೊತೆ ಕೂರ್ತಿದ್ದೆ. ಒಂದ್ಸಲ ಬರೀ ಇಪ್ಪತ್ತು ನಿಮಿಷದಲ್ಲಿ ೩ ಇಂಚು ಮಳೆ ಸುರಿದಿತ್ತು. ಅದಂತೂ ನೆನೆಸ್ಕೊಂಡ್ರೆ ಭಯ ಆಗುತ್ತೆ. ಆ ಮಳೇ ನಿಲ್ಲೊವರೆಗೂ ಇಬ್ಬರೂ ಇಲ್ಲೇ ಕೂತು ಅದನ್ನೇ ನೋಡಿದ್ವಿ.
ಅದೊಂದು ಮರೆಯದ ನೆನಪಾಗಿ ಉಳ್ಕೊಂಡಿದ್ದೆ. ಕೆಲವು ಸಲ ಮಧ್ಯ ರಾತ್ರಿ ೧ ಗಂಟೆ ಹೊತ್ತಿನಲ್ಲಿ ನಾನು ಮಲಗಿದ್ರೆ ಕನಸಿನಲ್ಲಿ ಯಾವುದೋ ದೇವಲೋಕದಲ್ಲಿ ಕೇಳಿದ ಹಾಗೇ ದೂರದಿಂದ ಸಂಗೀತ ಕೇಳಿ ಬರ್ತಿತ್ತು. ಎಚ್ಚರ ಆಗಿ ನೋಡಿದ್ರೆ ಇವರು ಸರಿರಾತ್ರಿಯವರೆಗೂ ಕೆಲಸ ಮಾಡಿ ಆಮೇಲೆ ಸಿತಾರ್ ನುಡಿಸ್ತಾ ಕೂತಿರ್ತಿದ್ರು.

ಮತ್ತೆ ಹೊಸದನ್ನು ಕಲೀಬೇಕು, ಹೊಸದನ್ನ ಮಾಡ್ಬೇಕು ಅನ್ನೊ ಉತ್ಸಾಹ ಅಂತು ಅವರಿಗೆ ಕೊನೆತನಕ ಇತ್ತು. ನಮ್ಮ ಮನೆಯಲ್ಲಿ ಏನೇ ರಿಪೇರಿ ಆದ್ರೂ ಹೊರಗಡೆಯವರು ಬಂದು ಅದನ್ನ ಸರಿ ಮಾಡಿ ಕೊಟ್ಟಿದ್ದು ತುಂಬಾ ಕಡಿಮೆ. ಇವರೇ ಸ್ವತಃ ಎಕ್ಸ್ ಪೆರಿಮೆಂಟ್ ಮಾಡಿ ಏನೇನೋ ಮಾಡಿ ಅಂತು ಕೊನೆಗು ರಿಪೇರಿ ಮಾಡಿ ಕೊಡ್ತಿದ್ರು. ಒಂದ್ಸಲ ಗೌರಿ (ಲಂಕೇಶ್ ರ ಮಗಳು) ಬರ್ತೀನಿ ಅಂತ ಹೇಳಿದ್ರು. ಅವರು ಬರ್ತಾರಲ್ಲ ಚೆನ್ನಾಗಿ ಅಡುಗೆ ಮಾಡ್ಬೇಕು ಅಂತ ಅಂದ್ಕೊಂಡಿದ್ದೆ. ಆದ್ರೆ ಅವತ್ತು ನಮ್ಮ ಮನೆಯಲ್ಲಿ ಮಿಕ್ಸಿ ರಿಪೇರಿ ಆಗಿ ಕೂತಿತ್ತು. ರಿಪೇರಿಗೂ ಕೊಟ್ಟಿರಲಿಲ್ಲ. ಹಾಗಾಗಿ ನಾನು ಏನ್ ಮಾಡೋದು ಅಂತಿದ್ದೆ. ಇವರು ರಾತ್ರಿ ೧೨ ಗಂಟೆಗೆ ಕಂಪ್ಯೂಟರ್ ನಲ್ಲಿ ಕೆಲಸ ಮುಗಿಸಿ ಬಂದು ನನ್ನನ್ನ ಎಬ್ಬಿಸಿ ’ಒಂಚೂರು ಹಿಡ್ಕೊ’ ಅಂತ ಹೇಳಿ ಕೆಟ್ಟೊಗಿದ್ದ ಮಿಕ್ಸಿನ ರೆಡಿ ಮಾಡಿ ಓಡ್ಸಿ ತೋರಿಸಿದ್ರು. ಪ್ರಾರಂಭದಲ್ಲಿ ನಮ್ಮ ಹತ್ರ ೪ ವೀಲ್ ಡ್ರೈವ್ ಜೀಪ್ ಇತ್ತು. ಇವರು ಅದರ ಇಂಜಿನ್ ಡೌನ್ ಮಾಡಿ, ಅದರ ಪಾರ್ಟ್ಸ್ ನೆಲ್ಲಾ ಸಂಪುನ ಬಿಚ್ಚಿ ಕಂಪ್ಲೀಟ್ ರಿಪೇರಿ ಮಾಡ್ತಿದ್ರು. ಅಮೇಲೆ ಜೀಪ್ ಹೋಗಿ ಮಾರುತಿ ಕಾರ್ ಬಂತು. ಅದನ್ನು ಹಾಗೆ ಬಿಚ್ಚಿ ತಾವೇ ರಿಪೇರಿ ಮಾಡ್ತಿದ್ರು. ಸ್ಕೂಟರ್ ಸಹ ಹಾಗೆ ಕಂಪ್ಲೀಟ್ ಬಿಚ್ಚಿ ಹೊಸ ಸ್ಕೂಟರ್ ಥರ ರೆಡಿ ಮಾಡ್ಕೋತಿದ್ರು. ಎಷ್ಟರ ಮಟ್ಟಿಗೆ ಅಂದ್ರೆ ಮೂಡಿಗೆರೆಯ ಸ್ಕೂಟರ್ ಮೆಕ್ಯಾನಿಕ್ ಸಹ ಇವರತ್ರ ಬಂದು ’ಅಣ್ಣ, ಅಣ್ಣ’ ಅಂತ ಇವರಿಂದ ಸ್ಕೂಟರ್ ರಿಪೇರಿ ಬಗ್ಗೆ ಹೊಸ ಹೊಸ ವಿಷಯಗಳನ್ನ ತಿಳ್ಕೊಂಡು ಹೋಗ್ತಿದ್ದ.
ಒಂದ್ಸಲ ಇವರು ಕಾರು ಕೆಳಗಡೆ ಮಲ್ಕೊಂಡು ಏನೋ ರಿಪೇರಿ ಮಾಡ್ತಾ ಇದ್ರು. ಅದೇ ಸಮಯದಲ್ಲಿ ಜಿ.ಎಸ್ ಶಿವರುದ್ರಪ್ಪನವರು ಮನೆಗೆ ಬಂದ್ರು. ಆದ್ರೂ ಇವರು ಕಾರು ರಿಪೇರಿ ಬಿಟ್ಟು ಮೇಲೇಳಲಿಲ್ಲ. ಅರ್ಧಕ್ಕೆ ಬಿಟ್ಟು ಬಂದ್ರೆ ಕಷ್ಟ ಆಗುತ್ತೆ ಅಂತ. ಆಗ ನಮ್ಮ ಮಗಳು ಸುಸ್ಮಿತ ೫ ವರ್ಷದವಳು. ಅವಳು ಶಿವರುದ್ರಪ್ಪನವರನ್ನ ತೋಟ ಎಲ್ಲಾ ಸುತ್ತಾಡ್ಸಿ ಕಂಪನಿ ಕೊಟ್ಟಿದ್ಳು. ಆಗ ಅವಳು ಶಿವರುದ್ರಪ್ಪನವರಿಗೆ ಹೇಳ್ತಾಳಂತೆ ’ಸಾರ್ ನಿಮಗೆ ಈ ಹಕ್ಕಿ ಗೊತ್ತಾ ಸಾರ್, ಶ್ರೈಕ್ ಅಂತ. ಇದು ನಮ್ಮ ಅಣ್ಣಂಗೆ ತುಂಬಾ ಇಷ್ಟ. ಅದಕ್ಕೆ ಇದರದ್ದೇ ತುಂಬಾ ಫೋಟೋ ತೆಗೆದಿದ್ದಾರೆ’ ಅಂತ ಅವರಿಗೆ ಕಾಡಿನ ಹಕ್ಕಿಗಳ ಬಗ್ಗೆ ವಿವರಿಸಿದ್ದಳಂತೆ. ಅಂದರೆ ಹಿರಿಯರಿಂದ ಕಿರಿಯರಿಗೆ ಹೇಗೆ ವಿಷಯಗಳು ವರ್ಗಾಯಿಸಲ್ಪಡುತ್ತವೆ ಅಂತ ಈ ಘಟನೆ ಹೇಳಿದೆ.’ ಎಂದು ಗಣಿಯಿಂದ ವಜ್ರವನ್ನು ಆರಿಸುವಂತೆ ತೇಜಸ್ವಿ-ರಾಜೇಶ್ವರಿಯವರ ದಾಂಪತ್ಯದ ಮಧುರ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹೋದರು.
ಹಾಗೇ ಮಾತನಾಡುತ್ತಾ ಮಾತು ತೇಜಸ್ವಿಯವರ ಫೋಟೋಗ್ರಫಿ ಕಡೆ ತಿರುಗಿತು.
ಮೇಡಂ ಮುಂದುವರೆಸಿದರು “ಇವರು ಚಿಕ್ಕವರಿದ್ದಾಗ ಪತ್ರಿಕೆಗಳಲ್ಲಿ, ಮ್ಯಾಗ್ ಝೈನ್ ಗಳಲ್ಲಿ ಬಂದಿದ್ದ ಕ್ಯಾಮೆರಗಳ ಚಿತ್ರಗಳನ್ನ ಕಟ್ ಮಾಡಿ ಅದನ್ನ ಒಂದು ನೋಟ್ ಬುಕ್ಕಿಗೆ ಅಂಟಿಸಿ ಇಟ್ಕೊಂಡಿದ್ರು. ಅದು ಅವರ ಕನಸಿನ ಕ್ಯಾಮೆರಗಳ ಪುಸ್ತಕ. ಆ ಪುಸ್ತಕ ಈಗಲೂ ನನ್ನ ಹತ್ರ ಜೋಪಾನವಾಗಿದೆ. ಫೋಟೋಗ್ರಫಿ ಅಂದ್ರೆ ಒಂಥರ ಹಟಯೋಗ ಇದ್ದ ಹಾಗೆ ಅಂತ ಆಗಾಗ ಹೇಳ್ತಾನೇ ಇರ್ತಿದ್ರು. ಯಾಕಂದ್ರೆ ಒಂದು ಒಳ್ಳೆಯ ಫೋಟೋ ತೆಗೆಯಬೇಕಾದರೆ ಗಂಟೆಗಟ್ಟಲೇ ಒಂದೇ ಕಡೆ ಒಂದೇ ಭಂಗಿಯಲ್ಲಿ ಅಲುಗಾಡದೇ ಕೂತಿರ್ಬೇಕಾದ್ರೆ ಅದು ಹಟಯೋಗ ಅಲ್ಲದೇ ಮತ್ತೇನು. ಸುಮ್ಮನೆ ಕಣ್ಣಿಗೆ ಕಂಡದ್ದನೆಲ್ಲಾ ಫೋಟೋ ತೆಗಿತಿರಲಿಲ್ಲ ಇವರು. ಯಾವುದಾದ್ರೂ ಫೋಟೋ ತೆಗಿಬೇಕಾದ್ರೆ ಅದಕ್ಕೆ ಒಂದು ನಿರ್ದಿಷ್ಟ ಗುರಿ, ಉದ್ದೇಶ ಇರ್ತಿತ್ತು. ಹಾಗಾಗಿ ಅಂದುಕೊಂಡ ಹಾಗೆ ಫೋಟೋ ತೆಗಿಬೇಕಾದ್ರೆ ಅದಕ್ಕೆ ತುಂಬಾ ಶ್ರಮ, ತಾಳ್ಮೆ ಬೇಕಾಗ್ತಿತ್ತು. ಹಾಗೆ ಒಂದೇ ಭಂಗಿಯಲ್ಲಿ ಕೂತು ಕೂತು ವಾರಗಟ್ಟಲೇ ಬೆನ್ನು ನೋವು ಅಂತ ಒದ್ದಾಡ್ತಿದ್ರು. ಇನ್ನು ಕೆಲವು ಸಲ ಕೈಕಾಲೆಲ್ಲ ತರಚಿಕೊಂಡು, ಬಿದ್ದು ಗಾಯ ಮಾಡ್ಕೊಂಡಿದ್ದು ಉಂಟು.
ಆದರೆ ಇವರು ಹೇಳ್ತಿದ್ದದ್ದು ’ಅಷ್ಟು ಕಷ್ಟಪಟ್ಟು ತೆಗೆದ ಫೋಟೋಗಳಲ್ಲಿ ಒಂದೇ ಒಂದು ಫೋಟೋ ಚೆನ್ನಾಗಿ ಬಂದಿದ್ರೆ ನನ್ನ ಶ್ರಮ ಸಾರ್ಥಕ’ ಅಂತ ಹೇಳ್ತಿದ್ರು. ಹಕ್ಕಿಗಳ ಫೋಟೋ ತೆಗಿಬೇಕಾದಾಗಲಂತೂ ಅವರು ಸುತ್ತಾ ಏನೇನಾಗ್ತಿದೆ ಅನ್ನೊದನೆಲ್ಲ ಮರೆತುಬಿಡ್ತಿದ್ರು. ಅಷ್ಟೇ ಅಲ್ಲ ನಮ್ಮ ತೋಟದ ಸುತ್ತಲಿನ ಹಕ್ಕಿಗಳ ಬಗ್ಗೆ ಆಳವಾಗಿ ಅದ್ಯಯನ ಮಾಡಿ, ಅವುಗಳ ಹಿಂದೆ ಬಿದ್ದು ಅವುಗಳ ಲೈಫ್ ಸ್ಟೈಲ್ ಸ್ಟಡಿ ಮಾಡ್ತಿದ್ರು. ನಮ್ಮ ಮನೆಯ ಎದುರಿಗಿನ ಮರಕ್ಕೆ ಮಂಗಟ್ಟೆ ಹಕ್ಕಿಗಳು ತುಂಬಾ ಬರ್ತವೆ. ಅದರಲ್ಲಿ ಬಿಡುವ ಕೆಂಪು ಕಾಯಿಯನ್ನ ತಿನೋದಕ್ಕೆ. ಇವರು ಈ ಹಕ್ಕಿಗಳು ಇಷ್ಟು ಇಷ್ಟಪಟ್ಟು ಈ ಕಾಯಿಯನ್ನ ತಿನ್ತಾವಲ್ಲ ಅಂತಾದ್ದೇನಿದೆ ಇದರಲ್ಲಿ ಅಂತ ಆ ಕೆಂಪು ಕಾಯಿಯನ್ನ ನೆಕ್ಕಿ ನೋಡಿದ್ರು. ಕಹಿ ಅಂದ್ರೆ ಕಹಿ ಆ ಕಾಯಿ. ಹಾಗೇ ಇಲ್ಲಿ ನಮ್ಮ ಮನೆಯ ಎದುರುಗಡೆ ಜೀರಿಗೆ ಮೆಣಸಿನಕಾಯಿಯ ಗಿಡ ಇದೆ. ಅದರಲ್ಲಿನ ಮೆಣಸಿನಕಾಯಿಗಳು ಖಾರ ಅಂದ್ರೆ ಖಾರ. ಆದ್ರೆ ಈ ಪಿಕಳಾರ ಇಂತವೆಲ್ಲಾ ಅದನ್ನೇ ತಿನ್ತಾವಲ್ಲ. ಅವಕ್ಕೆ ಖಾರ ಆಗೋದಿಲ್ವ ಅಂತೆಲ್ಲಾ ಯೋಚ್ನೆ ಮಾಡ್ತಿದ್ರು.

ಒಂದ್ಸಲ ನಮ್ಮ ಮಗಳು ಈಶಾನ್ಯೆ ಇವರಿಗೆ ಕ್ಯಾಮೆರ ತಗೋಬೇಕು ಅಂತಿದ್ದೀನಿ ಅಡ್ವೈಸ್ ಮಾಡಿ ಅಂತ ಕೇಳಿದಾಗ ಇವರು. ’ನಾನು ನನ್ನ ಅನುಭವದಿಂದ ಒಂದು ಮಾತು ಹೇಳಲ? ನೋಡು ಒಳ್ಳೆ ಫೋಟೋ ತೆಗಿಬೇಕು ಅಂದ್ರೆ ಅದಕ್ಕೆ ತುಂಬಾ costly ಟೆಲಿ ಲೆನ್ಸು, costly ಕ್ಯಾಮೆರ, ಎಕ್ವಿಪ್ ಮೆಂಟ್ಸು ಅಗತ್ಯ ಇಲ್ಲ. ಜೊತೆಗೆ ನಿಂತಾಗ ಕೂತಾಗ ಟಿಕ್ ಟಿಕ್ ಅನ್ನಿಸ್ತಾ ಸಿಕ್ಕಸಿಕ್ಕ ಫೋಟೋ ತೆಗೀತಾ ಇದ್ರೆ ಏನೂ ಪ್ರಯೋಜನನೂ ಇಲ್ಲ. ಮುಖ್ಯವಾಗಿ ದೊಡ್ಡ ದೊಡ್ಡ ಫೋಟೋಗ್ರಾಫರ್ಸ್ ತೆಗೆದ ಉತ್ತಮ ಫೋಟೋಗಳನ್ನ ನೋಡಿ ಸ್ಟಡಿ ಮಾಡ್ತಾ ಇರ್ಬೇಕು. ನಾವು ಎಷ್ಟು ಸಮೀಪದಿಂದ ಒಂದು ವಸ್ತುವಿನ ಫೋಟೋ ತೆಗಿತೀವೊ ಅಷ್ಟು ಅದರ ಕ್ವಾಲಿಟಿ ಹೆಚ್ಚುತ್ತೆ. ಲೈಟು, ಶಾಡೊ ನಿಭಾಯಿಸೋದು ಕಲೀಬೇಕು’ ಅಂತ ಮಗಳಿಗೆ ಅಡ್ವೈಸ್ ಮಾಡಿದ್ರು.’‘ನಾನು ’ನನ್ನ ತೇಜಸ್ವಿ’ ಬರಿಬೇಕಾದಾಗಲಂತೂ ಪೂರ್ತಿ ಅತ್ತುಕೊಂಡೆ ಬರೆದಿದ್ದೀನಿ. ಅಷ್ಟು ನೆನಪುಗಳು ಇವೆ’ಎಂದು ಹೇಳಿ ಮಾತಿಗೆ ಅಲ್ಪ ವಿರಾಮ ತೆಗೆದುಕೊಂಡರು.
ಸಮಯ ಸಂಜೆ ೪ ಗಂಟೆಯಾಗಿತ್ತು. ಆಗ ಅವರ ತೋಟದ ರೈಟರ್ ಶಿವ ತೋಟದ ಮೂಲೆಯೊಂದರಿಂದ ಮನೆಯಕಡೆ ಬಂದರು. ಎಂದಿನಂತೆ ಮಚ್ಚು ಅವರ ಕೈಯಲ್ಲಿ ಶೋಭಿಸುತ್ತಿತ್ತು. ಬೆಳಿಗ್ಗೆ ನಾವು ತೋಟಕ್ಕೆ ಹೋದಾಗ ನಮ್ಮ ಕಡೆ ಸಂಕೋಚದ ನಗೆ ನಕ್ಕು ತೋಟದಲೆಲ್ಲೊ ಮಾಯವಾಗಿದ್ದವರು ಸಂಜೆ ಹೊತ್ತಿಗೆ ಮತ್ತೆ ನಮ್ಮ ಮುಂದೆ ಪ್ರತ್ಯಕ್ಷರಾಗಿ ಎಂದಿನ ತಮ್ಮ ಟ್ರೇಡ್ ಮಾರ್ಕ್ ನಗೆ ಬೀರಿದರು. ಚಿತ್ರೀಕರಣದ ಯೋಜನೆಯ ಪ್ರಕಾರ ಅವರ ಮಾತುಗಳನ್ನು ದಾಖಲಿಸಿಕೊಳ್ಳಬೇಕಿತ್ತು. ಹಾಗಾಗಿ ಈ ವಿಷಯವನ್ನು ಬೆಳಿಗ್ಗೆಯೇ ಅವರಿಗೆ ತಿಳಿಸಿದ್ದೆವು. ಅವರು ಯಥಾಪ್ರಕಾರ ಸಂಕೋಚದಿಂದ ನಗುತ್ತಲೇ ಒಪ್ಪಿಕೊಂಡಿದ್ದರು. ಜೊತೆಗೆ ಮೇಡಂ ಬೆಳಿಗ್ಗೆಯಿಂದ ನಮ್ಮೊಂದಿಗೆ ನಿರಂತರವಾಗಿ ಮಾತನಾಡಿ ದಣಿದಿದ್ದರಿಂದ ಅವರಿಗೆ ತುಸು ಬಿಡುವು ಕೊಡುವುದು ಸೂಕ್ತವಾಗಿ ಕಂಡಿತು. ಹಾಗಾಗಿ ಮೇಡಂ ಗೆ ರೆಸ್ಟ್ ತೆಗೆದುಕೊಳ್ಳುವಂತೆ ಮನವಿ ಮಾಡಿ ಆ ಸಮಯದಲ್ಲಿ ಶಿವು ನೆನಪುಗಳನ್ನು ದಾಖಲಿಸಲು ನಿರ್ಧರಿಸಿ ಚಿತ್ರೀಕರಣದ ಹಿನ್ನೆಲೆಯಾಗಿ ತೇಜಸ್ವಿಯವರ ತೋಟದೊಳಗಿನ ದೊಡ್ಡ ಕೆರೆಯನ್ನು ಆರಿಸಿಕೊಂಡು ಅಲ್ಲಿ ಆತನ ’ಧಣಿ’ ತೇಜಸ್ವಿಯವರ ನೆನಪುಗಳನ್ನು ಹಂಚಿಕೊಳುವಂತೆ ಕೇಳಿದೆ. ಶಿವು ಅತ್ಯಂತ ಮುಗ್ಧವಾಗಿ ಧಣಿಯ ನೆನಪುಗಳ ಮೂಟೆ ಬಿಚ್ಚತೊಡಗಿದ…
(ಮುಂದುವರೆಯುವುದು…)

ಗಾಂಧಿನಗರ, ಜಯನಗರ ಹಾಗೂ ಕೋರಮಂಗಲದ ಸಪ್ನ ಪುಸ್ತಕ ಮಳಿಗೆಗಳಲ್ಲಿ, ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ರೇಸ್ ಕೋರ್ಸ್ ಬಳಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರದ ಡಿವಿಡಿಗಳು ದೊರೆಯುತ್ತವೆ.

ಹೆಚ್ಚಿನ ಮಾಹಿತಿಗಾಗಿ ಟೋಟಲ್ ಕನ್ನಡದ ಲಕ್ಷ್ಮಿಕಾಂತ್ (ಡಿವಿಡಿ ವಿತರಣೆಯ ಹಕ್ಕುದಾರರು) ರವರನ್ನು ಸಂಪರ್ಕಿಸಿ. Mobile No: 9986222402

 

‍ಲೇಖಕರು G

September 29, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. g.n.nagaraj

    ನನ್ನ ತೇಜಸ್ವಿ ಓದಿದವರಿಗೂ ಹೊಸದೆನಿಸುವಂತೆ ಚೆನ್ನಾಗಿದೆ.ಅಪ್ಪ-ಮಕ್ಕಳ-ಕುವೆಂಪು-ತೇಜಸ್ವಿ ಮಧ್ಯರಾತ್ರಿಯ ಮೀನು ಚರ್ಚೆ ಚೆನ್ನಾಗಿದೆ. ಹಾಗೆಯೇ ಅವರ ಯಂತ್ರ ರಿಪೇರಿಗಳ ಕಥನವೂ

    ಪ್ರತಿಕ್ರಿಯೆ
  2. maheshwari.u

    photo mathu baraha eraduu chennagide. visheshavaagi kathala kanu photo .

    ಪ್ರತಿಕ್ರಿಯೆ
  3. anaamikamathu

    excellent i like thejaswi very much his Karvalo is a master work.
    when we see from our current Kannada literature he is very futuristic writer and one of the eligible jnanapita award writer

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: