ಅರುಣ್ ಜೋಳದಕೂಡ್ಲಿಗಿ ಕಾಲಂ : ಗ್ರಾಮೀಣರ ಸೋಪು ಶಾಂಪಾಗಿದ್ದ ಸವಳು

`ಸವಳು ಎದ್ದಾತ್ರೋ’ ಎಂಬ ಸುದ್ದಿ ಊರ ತುಂಬಾ ಹರಡುತ್ತಿದ್ದಂತೆ ಬೆಳಗಿನ ಜಾವ ಐದರಿಂದಲೇ ಸವಳು ತರಲೆಂದು ಅಜ್ಜಿಯರಿಂದ ಹಿಡಿದು ಚಿಕ್ಕ ಪೋರ ಪೋರಿಯರ ತನಕ ಸಾಲು ಗಟ್ಟುತ್ತಿದ್ದರು. ತಲೆ ಮೇಲೆ ಖಾಲಿ ಪಾತ್ರೆ, ಸಿಮೆಂಟ್ ಚೀಲ, ಕಬ್ಬಿಣ ಪುಟ್ಟಿ, ಬೇಸನ್ನು, ಹೀಗೆ ತರಾವರಿ ಪರಿಕರಗಳೊಂದಿಗೆ ಸವಳು ತೆಗ್ಗಿಗೆ ಕಾಲು ನಡಿಗೆ ಶುರುವಾಗುತ್ತಿತ್ತು. ಎತ್ತು ಬಂಡಿ ಇದ್ದವರು ಬಂಡಿ ಕಟ್ಟಿಕೊಂಡು ಖಾಲಿ ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಆಗ ಹಳ್ಳದ ದಂಡೆಯಲ್ಲಿ ಸವಳು ತುಂಬುವವರ ದೊಡ್ಡ ಗುಂಪೇ ನಿಂತಿರುತ್ತಿತ್ತು. ಸಕ್ಕರೆಗೆ ಇರುವೆ ಸಾಲು ಮುತ್ತಿಕೊಂಡಂತೆ.
ಗ್ರಾಮಗಳ ಸಮೀಪದ ಹಳ್ಳಗಳಿಗೆ ಹೊಂದಿಕೊಂಡ ಜೌಗು ಪ್ರದೇಶದಲ್ಲಿ ನೀರು ನಿಂತು ಆ ಭಾಗದ ಮರಳು ಉಪ್ಪುಪ್ಪಾಗಿ ಬದಲಾಗುತ್ತಿತ್ತು. ಆ ಜೌಗು ಪ್ರದೇಶದ ತೇವ ಒಣಗಿದಾಗ ಅನ್ನಕ್ಕೆ ಕುದಿ ಬಂದಾಗ ಪಾತ್ರೆಯ ಮೇಲೆ ಹುಕ್ಕು ಬರುವಂತೆ ಕುಪ್ಪೆ ಕುಪ್ಪೆಯಾಗಿ ಸವಳು ಏಳುತ್ತಿತ್ತು. ಅದನ್ನು ದನ ಕಾಯುವ ಹುಡುಗರು, ಸವಳು ತೆಗ್ಗಿನ ಹತ್ತಿರ ಇರುವ ಹೊಲದವರು, ಮಡಿವಾಳರು ಹೀಗೆ ಸವಳು ಎದ್ದಿರುವುದನ್ನು ನೋಡಿ ಊರಲ್ಲಿ ಸುದ್ದಿ ಎಬ್ಬಿಸುತ್ತಿದ್ದರು. ಈ ವಿಷಯ ಬ್ರೇಕಿಂಗ್ ನಿವ್ಸ್ ತರ ಊರತುಂಬಾ ಹಬ್ಬುತ್ತಿತ್ತು. ಆಗ ಊರವರೆಲ್ಲಾ ಆದಿನ ಉಳಿದೆಲ್ಲಾ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಸವಳು ತರಲೆಂದು ಹಳ್ಳಕ್ಕೆ ಹೋಗುತ್ತಿದ್ದರು. ಹೀಗೆ ಹಳ್ಳದ ತೆಗ್ಗಿನಲ್ಲಿ ತುಂಬಿಕೊಂಡು ಬಂದ ಸವಳು, ಮನೆಯ ಹಿತ್ತಲಲ್ಲಿ ದೊಡ್ಡದಾದ ಮಣ್ಣಿನ ಸೋರೆಯಲ್ಲಿ ಖಾಯಂ ನೆಲೆಯೂರಿರುತ್ತಿತ್ತು. ಆಗ ಸವಳಿಲ್ಲದ ಮನೆಗಳೇ ಇರುತ್ತಿರಲಿಲ್ಲ.
ಮಳೆಗಾಲ ಮುಗಿದು ಬೇಸಿಗೆ ಶುರುವಾಗುವ ಹೊತ್ತಿಗೆ ವರ್ಷದಲ್ಲಿ ಒಂದೆರಡು ಬಾರಿ ಮಾತ್ರ ಸವಳು ಏಳುತ್ತಿತ್ತು. ಹಾಗಾಗಿ ಇಡೀ ಊರಿನವರು ವರ್ಷವಿಡೀ ಬಳಕೆಗೆ ಆಗುವಷ್ಟು ಸವುಳನ್ನು ಕೂಡಿಟ್ಟುಕೊಳ್ಳಬೇಕಿತ್ತು. ಇದು ತೆಳುವಾದ ಮರಳಿನಲ್ಲಿ ಉಪ್ಪು ಬೆರೆಸಿದಂತಿರುವ ಒಂದು ಬಗೆಯ ಕೆಂದು ಬಣ್ಣದ ನುಸಿ ಮರಳು. ಅದನ್ನು ನೀರಿಗೆ ಹಾಕಿದರೆ ಬುರುಗು ಬರುತ್ತಿತ್ತು. ಸವಳು ಆಗ ಸೋಪು ಶಾಂಪು ಮಾಡುವ ಎಲ್ಲಾ ಕೆಲಸಗಳನ್ನೂ ಮಾಡುತ್ತಿತ್ತು. ಮೈ ತೊಳೆಯಲು ಸೋಪಿನ ಬದಲು ಸವಳು ಹಾಕುತ್ತಿದ್ದರು.
ಅರವತ್ತು ಎಪ್ಪತ್ತರ ದಶಕದಲ್ಲಿ ಸವಳು ಏಳುವ ತಗ್ಗುಗಳಲ್ಲಿ ಸವಳನ್ನು ನೀರಲ್ಲಿ ಸೋಸಿ ಮಡಿಗಳಿಗೆ ಬಿಟ್ಟು ಉಪ್ಪು ಮಾಡುತ್ತಿದ್ದರಂತೆ. ಆಗ ಮನೆ ಬಳಕೆಗೆ ಈ ಸವಳು ಉಪ್ಪನ್ನೇ ಬಳಸುತ್ತಿದ್ದರಂತೆ, ನಂತರದ ದಿನಗಳಲ್ಲಿ ಸವಳು ನೀರನ್ನು ಭಟ್ಟಿ ಇಳಿಸಿ ಉಪ್ಪು ಮಾಡುವ ದೇಸೀ ಪದ್ದತಿಯೂ ಇತ್ತಂತೆ. ಹೀಗೆ ಉಪ್ಪು ಮಾಡುವ ಕಾಯಕವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದವರನ್ನು ಉಪ್ಪಾರರು ಎಂದು ಕರೆದಿದ್ದಾರೆ. ಅಂತಹ ಉಪ್ಪಾರರ ಒಂದು ಸಮುದಾಯವೇ ಕನರ್ಾಟಕದಲ್ಲಿದೆ. ಉಪ್ಪಿನ ಸತ್ಯಾಗ್ರಹದ ನಂತರ ಕಡಲಿನ ಉಪ್ಪು ತುಂಬಾ ಕಡಿಮೆ ಮೊತ್ತದಲ್ಲಿ ಸಿಗತೊಡಗಿದಾಗ, ಕಡಿಮೆ ಮಳೆಗೆ ಸವಳಿನ ಪ್ರಮಾಣ ಇಳಿಮುಖವಾದಂತೆ, ಉಪ್ಪು ಮಾಡುವುದು ನಿಧಾನಕ್ಕೆ ಕಣ್ಮರೆಯಾಗಿದೆ. ಆಗ ಉಪ್ಪಾರ ಸಮುದಾಯ ಕಡಲ ಉಪ್ಪಿನ ಚೀಲಗಳನ್ನು ಕತ್ತೆಯ ಮೇಲೂ, ಎತ್ತಿನ ಬಂಡಿಗಳಲ್ಲಿಯೂ ಏರಿಕೊಂಡು ಊರೂರಿಗೆ ತಿರುಗಿ ಮಾರುತ್ತಿದ್ದರಂತೆ. ಹೀಗೆ ಸವಳಿಗೂ ಒಂದು ಮೌಖಿಕ ಚರಿತ್ರೆಯಿದೆ.
ಮುಸರೆ ತಿಕ್ಕಲು ಸಹ ಸವಳನ್ನು ಬಳಸುತ್ತಿದ್ದರು. ಬಟ್ಟೆಗಳನ್ನು ಸವಳು ಹಾಕಿ ನೆನೆ ಇಟ್ಟರೆ, ಕೊಳೆಯನ್ನೆಲ್ಲಾ ಬಿಟ್ಟುಕೊಂಡಿರುತ್ತಿದ್ದವು. ನಂತರ ಹೊಗೆದರೆ ಬಟ್ಟೆಗಳು ಥಳ ಥಳ ಎಂದು ಹೊಳೆಯುವ ಕಾಂತಿಯನ್ನು ಪಡೆಯುತ್ತಿದ್ದವು. ಈಗಿನ ಯಾವ ಡಿಟಜರ್ೆಂಟ್ ಪೌಡರೂ ಸವಳಿಗೆ ಸರಿಸಾಟಿ ಆಗುತ್ತಿರಲಿಲ್ಲ. ಸವಳು ಗ್ರಾಮೀಣರ ಸೋಪು ಶಾಂಪು ಎಲ್ಲವೂ ಆಗಿತ್ತು. ಸವಳು ಹಾಕಿ ತಲೆ ತೊಳೆದರೆ ಕೂದಲು ಪಳ ಪಳ ಎಂದು ಹೊಳೆಯುತ್ತಿದ್ದವು. ಜಾಹೀರಾತಿನಲ್ಲಿ ಬರುವ ಹುಡುಗಿಯರ ಕೂದಲಿಗಿಂತಲೂ ಹೆಚ್ಚು ಪಟ್ಟು ಕೂದಲು ನೀಳವಾಗಿರುತ್ತಿದ್ದವು. ಚಿಟಿಕೆ ಸವಳನ್ನು ತುಪ್ಪ ಕಾಯಿಸುವಾಗ ಹಾಕಿದರೆ ತುಪ್ಪ ಘಮ ಘಮ ಎಂದು ಸುವಾಸನೆ ಬೀರುತ್ತಿತ್ತು ಎಂದು ನೀಲಮ್ಮಜ್ಜಿ ಹೇಳುತ್ತಾರೆ.
ಊರಿನಲ್ಲಿ ಅತಿ ಹೆಚ್ಚು ಸವಳು ಸಂಗ್ರಹ ಮಾಡುತ್ತಿದ್ದುದು ಆಯಾ ಊರಿನ ಮಡಿವಾಳರು ಅಥವಾ ಅಗಸರು. ಕಾರಣ ಊರವರ ಬಟ್ಟೆ ತೊಳೆಯಬೇಕಾದ್ದರಿಂದ ಅವರಿಗೆ ಸವಳು ಅನಿವಾರ್ಯ ಸಂಗಾತಿಯಾಗಿತ್ತು. ಮಡಿವಾಳರು ಅತಿ ಹೆಚ್ಚು ಸವಳನ್ನು ಬಳಸುತ್ತಿದ್ದರು. ಕೂಡಿಟ್ಟುಕೊಂಡ ಸವಳನ್ನು ಜೋಳ ರಾಗಿ ಮುಂತಾದ ಕಾಳುಗಳಿಗೆ ವಿನಿಮಯ ಮಾಡುತ್ತಿದ್ದರು. ಸವಳು ಖಾಲಿಯಾದಾಗ ಜನರು ಮಡಿವಾಳರ ಮನೆಗೋಗಿ ಜೋಳ ಕೊಟ್ಟೊ, ರಾಗಿ ಕೊಟ್ಟೋ ಸೇರುಗಟ್ಟಲೆ ಸವಳನ್ನು ತರುತ್ತಿದ್ದರು. ಅಂತೆಯೇ ಸವಳನ್ನು ಕಡ ತರುವ ಕೊಡುವ ಪದ್ದತಿಯೂ ಚಾಲ್ತಿಯಲ್ಲಿತ್ತು.
ಸವಳು ಕಳ್ಳತನವಾಗುವುದೂ ಇತ್ತು. ಸಾಮಾನ್ಯವಾಗಿ ಸವಳು ಮನೆ ಹಿತ್ತಲಿನ ಸೋರೆಯೊಂದರಲ್ಲಿ ಇರುವುದನ್ನು ಖಚಿತಪಡಿಸಿಕೊಂಡು, ರಾತ್ರಿ ಹೊತ್ತು ಇಲ್ಲವೆ ಬೆಳಗಿನ ಜಾವ ಸವಳನ್ನು ಕದಿಯುವ ಘಟನೆಗಳು ಆಗಾಗ ಸುದ್ದಿಯಾಗುತ್ತಿದ್ದವು. ಒಮ್ಮೆ ಹೀಗೆ ಸವಳು ಕದ್ದದ್ದಕ್ಕೆ ನಮ್ಮೂರಲ್ಲಿ ಪಂಚಾಯ್ತಿ ಸೇರಿಸಿದ್ದರು. ಆಗ ಒಂದು ಸೇರಿನಷ್ಟು ಕದ್ದ ಸವಳಿಗೆ ಹತ್ತು ಸೇರು ಸವಳಿನ ದಂಡ ಹಾಕಿದ್ದರು. ಅಂತೆಯೇ ವಯಕ್ತಿಕ ಜಗಳ ದ್ವೇಶವನ್ನು ತೀರಿಸಿಕೊಳ್ಳಲು ಸವಳು ಸೋರೆಯನ್ನು ಹೊಡೆಯುವುದೂ ಇತ್ತು.
ಸಾಮಾನ್ಯವಾಗಿ ಇಂದು ಮಳೆಯಾಶ್ರಿತ ಗ್ರಾಮೀಣ ಭಾಗಗಳಲ್ಲಿ `ಸವಳು’ ಮರೆಯಾಗಿದೆ. ಈಗದು ನೆನಪಿನ ಪುಟ ಸೇರಿದೆ. ಕಾರಣ ಕಡಿಮೆ ಮಳೆಯಿಂದಾಗಿ ನೀರು ತೆಗ್ಗುಗಳಲ್ಲಿ ನಿಲ್ಲುತ್ತಿತ್ತು. ಈಗ ಮಳೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೂ ಸವಳು ಕಣ್ಮರೆಯಾಗಿರುವುದಕ್ಕೂ ನೇರ ನಂಟಿದೆ. ನದಿ ಪಾತ್ರದ ಪ್ರದೇಶಗಳಲ್ಲಿ, ಕಾಲುವೆ ನೀರು ಹರಿದು ವ್ಯವಸಾಯ ಮಾಡುವ ಭಾಗಗಳಲ್ಲಿ ಈಗಲೂ ಸವಳುಸಿಗುತ್ತದೆ, ಆದರೆ ಆಧುನಿಕ ಸೋಪು ಶ್ಯಾಂಪುಗಳು ಬಳಕೆಯಿಂದಾಗಿ ಈ ಸಾಂಪ್ರದಾಯಿಕ ಸವಳನ್ನು ಬಳಸುವವರು ಕಡಿಮೆಯಾಗಿದ್ದಾರೆ.

ಹೀಗೆ ಭೂಮಿ ಸವಳು ಬಿಡಲು ವೈಜ್ಞಾನಿಕ ಕಾರಣ ಹೀಗಿದೆ: ಭೂಮಿಯು ಸೋಡಿಯಂ ಲವಣಗಳಾದ ಸಲ್ಫೇಟ ಮತ್ತು ಕ್ಲೋರೈಡ್ಗಳ ಸಂಗ್ರಹದಿಂದ ನೆಲ ಬಂಜರಾಗುವು. ಆಗ ಮಣ್ಣಿನ ರಸಸಾರವು/ ಪಿ ಎಚ್ (ಠಿಊ) ಮೌಲ್ಯವು 7.5-8.5ರವರೆಗೆ ಇರುವುದು. ಇದರ ವಿದ್ಯುತ್ ವಾಹಕತ್ವವು ಇಅ >15ಜಖಟ-ಟ ರಷ್ಟು ಕಡಿಮೆ ಇರುವುದು. ಹಾಗಾಗಿ ಈ ನೆಲ ಬೆಳೆ ಬೆಳೆಯುವ ಸಾಮಥ್ರ್ಯವನ್ನು ಸಹಜವಾಗಿ ಕಳೆದುಕೊಳ್ಳುತ್ತದೆ.
ಸವಳು ನೀರು
ಇಂದು ಬಹುಬಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದೊಡ್ಡದಾಗಿದೆ. ಅದರಲ್ಲೂ ಸವಳು ನೀರನ್ನೇ ಕುಡಿಯಲು ಹಳ್ಳಿಗಳಲ್ಲಿ ಬಳಸಲಾಗುತ್ತಿದೆ. ಹಿಂದೆ ಬಟ್ಟೆ ಬರಿ ತೊಳೆಯಲು ಬಳಸುತ್ತಿದ್ದ ಸವಳು ಇಂದು ಅಂತರ್ಜಲದಿಂದಲೇ ಬರುತ್ತಿದೆ. ಇದೇ ನೀರನ್ನು ಹಳ್ಳಿಗರು ಕುಡಿಯಲು ಬಳಸುತ್ತಿದ್ದಾರೆ. ಇದು ಪ್ಲೊರೈಡ್ ಯುಕ್ತ ನೀರು.
ಈ ಕಾರಣಕ್ಕೆ ಬಹುಪಾಲು ಹಳ್ಳಿಗಳು ಕುಡಿಯುವ ಸಿಹಿ ನೀರಿಗಾಗಿ ಸರಕಾರದಲ್ಲಿ ಮೊರೆ ಇಡುತ್ತಿದ್ದಾರೆ. ಸರಕಾರವೂ ಇದಕ್ಕೆ ಕಿವಿಗೊಡದಿದ್ದಾಗ ಅನಿವಾರ್ಯವಾಗಿ ಸವಳು ಮಿಶ್ರಿತ ಪ್ಲೋರೈಡ್ ನೀರನ್ನೇ ಬಳಸುತ್ತಿದ್ದಾರೆ. ಇದರಿಂದಾಗಿ ಗಂಟಲು ಬಾವು ಮುಂತಾದ ಅನೇಕ ರೋಗಗಳಿಗೆ ಗ್ರಾಮೀಣರು ತುತ್ತಾಗುತ್ತಿದ್ದಾರೆ. ಈ ನೀರಿನ ಅಪಾಯ ಗೊತ್ತಿರುವ ಕೆಲವರು ನೀರನ್ನು ಕಾಯಿಸಿಕೊಂಡು ಕುಡಿದರೆ ಬಹುತೇಕ ಗ್ರಾಮೀಣರು ಈಗಲೂ ಸವಳು ನೀರನ್ನೇ ಕುಡಿಯಲು ಬಳಸುತ್ತಿದ್ದಾರೆ. ಒಂದು ಕಾಲಕ್ಕೆ ಸವಳು ಗ್ರಾಮೀಣರ ಬಟ್ಟೆ ಬರೆಗಳನ್ನು ಸ್ವಚ್ಛಗೊಳಿಸುವ ಸಾಧನವಾದದ್ದು, ಈಗ ಅದೇ ಗ್ರಾಮೀಣರ ಆರೋಗ್ಯ ಕೆಡಲೂ ಕಾರಣವಾಗುತ್ತಿದೆ. ಇದು ಅತರ್ಜಲ ಕಡಿಮೆಯಾಗುತ್ತಿರುವುದರ ಫಲವೂ ಹೌದು.
ಸವಳು ಭೂಮಿ
ಸವಳಿನ ಅಂಶವಿರುವ ಭೂಮಿ ಒಂದು ರೀತಿಯಲ್ಲಿ ಬಂಜರು ಭೂಮಿಯೇ ಸರಿ. ಹಾಗಾಗಿ ಸವಳು ಅಂಶ ಇರುವ ಭೂಮಿಯಲ್ಲಿ ಯಾರೂ ಬಿತ್ತನೆ ಮಾಡುವುದಿಲ್ಲ. ಅಥವಾ ಬೆಳೆ ಬೆಳೆಯುವ ಸಾಮಥ್ರ್ಯವನ್ನು ಈ ಸವಳು ಭೂಮಿ ಹೊಂದಿರುವುದಿಲ್ಲ. ಮೂಲತಃ ಸವಳು ಭೂಮಿ ಇರುವುದು ಒಂದು ತೆರನಾದರೆ, ನೀರನ್ನು ಯಥೇಚ್ಛವಾಗಿ ಬಳಸಿ ಬಳಸಿ ಫಲವತ್ತಾದ ಭೂಮಿಯೇ ಸವಳು ಭೂಮಿಯಾಗುವುದು ಮತ್ತೊಂದು ತೆರನಾಗಿದೆ. ಹಾಗಾಗಿ ಇಂದು ನದಿ ಪಾತ್ರದ, ಹಿನ್ನೀರಿನ ಭಾಗದ, ವ್ಯವಸಾಯಕ್ಕೆ ಕಾಲುವೆ ನೀರು ಹರಿವ ಕಡೆಗಳಲ್ಲಿ ಭೂಮಿ ಸವಳು-ಜವಳಾಗುವುದು ಗ್ರಾಮೀಣರ ಸಾಮಾಜಿಕ ಸಮಸ್ಯೆಯೇ ಆಗಿದೆ.
ಕೃಷ್ಣಾ ನದಿ ತೀರದ ಅಥಣಿ ಮತ್ತು ರಾಯಬಾಗ ತಾಲೂಕುಗಳ 30 ಕ್ಕೂ ಹೆಚ್ಚು ಹಳ್ಳಿಗಳಲ್ಲಿ 75 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶ, ಮಲಪ್ರಭಾ ಮತ್ತು ಘಟಪ್ರಭಾ ಜಲಾಶಯಗಳ ವ್ಯಾಪ್ತಿಯಲ್ಲಿ ಬರುವ ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೊಟೆ ಜಿಲ್ಲೆಗಳಲ್ಲಿ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶ ಸವಳು-ಜವಳು ಬಾಧೆಗೆ ತುತ್ತಾಗಿದೆ. ಮೂರು ದಶಕಗಳ ಹಿಂದೆ ಯಾವಾಗ ಜಲಾಶಯಗಳು ನಿರ್ಮಾಣವಾಗಿ ಕಾಲುವೆಗಳ ಮೂಲಕ ನೀರು ಹರಿಯಲು ಆರಂಭವಾಯಿತೋ ಅಲ್ಲಿಂದ ಈ ಸವಳು-ಜವಳು ಸಮಸ್ಯೆ ಶುರುವಾಗಿದೆ.
ಈ ಸವಳು-ಜವಳು ನಿರ್ಮೂಲನೆಗೆ ಕೋಟಿಗಟ್ಟಲೆ ಹಣ ಸರಕಾರಿ ಲೆಕ್ಕದಲ್ಲಿ ಖರ್ಚಾಗುತ್ತಿದೆ. ನೀರನ್ನು ಯಥೇಚ್ಚವಾಗಿ ಭೂಮಿಗೆ ಹರಿಸಿಕೊಳ್ಳುವ ರೈತರ ಅತಿ ಆಸೆ ಭೂಮಿ ಸವಳಾಗಲು ಕಾರಣವಾಗಿದೆ ಎಂದು ನೀರಾವರಿ ಇಲಾಖೆ ಆರೋಪಿಸಿದರೆ, ನೀರಾವರಿ ಇಲಾಖೆಯ ಕಳಪೆ ಕಾಮಗಾರಿಯಿಂದ ಕಾಲುವೆಗಳ ಬಸಿ ನೀರು ಹೊಲಗಳಲ್ಲಿ ನಿಂತು ನಮ್ಮ ಭೂಮಿಗಳು ಸವಳಾಗಿವೆ ಎಂದು ರೈತರು ಸರಕಾರದ ಕಡೆ ಬೆರಳು ತೋರುತ್ತಾರೆ. ಈ ಎರಡೂ ಸಾದ್ಯತೆಗಳೂ ನಿಜವಿದ್ದಂತೆ ಕಾಣುತ್ತದೆ. ಅಂತೆಯೇ ಅವೈಜ್ಞಾನಿಕ ನೀರಿನ ಬಳಕೆಯಿಂದಾಗಿಯೂ ಹೀಗೆ ಭೂಮಿ ಸವಳು-ಜವಳಾಗುವ ಸಾದ್ಯತೆ ಹೆಚ್ಚಾಗಿದೆ. ಮುಧೋಳ ತಾಲೂಕಿನ ಇಂಗಳಗಿ, ಯಡಹಳ್ಳಿ, ಬರಗಿ ಮುಂತಾದ ಹೆಚ್ಚು ಸವಳು ಜವಳಾದ ಭೂಮಿಗಳ ಪುನರುತ್ತಾನಕ್ಕಾಗಿ 2011 ರಲ್ಲಿ 1.79 ಕೋಟಿ ರೂಗಳನ್ನು ಮುಂಜೂರು ಮಾಡಲಾಗಿತ್ತು. ಆದರೆ ಆ ಭಾಗದ ಭೂಮಿಗಳು ಈಗಲೂ ಸವಳು-ಜವಳು ಸಮಸ್ಯೆಯಿಂದ ಸಂಪೂರ್ಣ ಮುಕ್ತವಾಗಿಲ್ಲ. ಇಂತಹ ಪ್ರಕರಣಗಳನ್ನು ನೋಡುತ್ತಿದ್ದರೆ, `ಬರ ಅಂದ್ರೆ ಎಲ್ಲರಿಗೂ ಇಷ್ಟ’ ಎನ್ನುವ ಪಿ.ಸಾಯಿನಾಥ್ ಅವರ ಮಾತು `ಸವಳು ಜವಳಂದ್ರೆ ಎಲ್ಲರಿಗೂ ಇಷ್ಟ’ ಎನ್ನುವಂತೆ ಕೇಳಿಸುತ್ತದೆ.
ಹೀಗೆ ಸವಳಿನ ಕಾಲಾನಂತರದ ಪಯಣದ ಕಥೆ ಕುತೂಹಲಕಾರಿಯಾಗಿದೆ. ಒಂದು ಕಾಲಕ್ಕೆ ಊಟಕ್ಕೆ ಉಪ್ಪಾಗಿ ಬಂದದ್ದು, ನಂತರ ಬಟ್ಟೆ ಬರೆಗಳ ಕೊಳೆ ತೊಳೆಯುವ ಸಾಧನವಾಗಿಯೂ, ರೋಗಗಳನ್ನು ತರುವ ಪ್ಲೋರೈಡ್ ಯುಕ್ತ ನೀರಾಗಿಯೂ, ನದಿ ಪಾತ್ರದ ಭೂಮಿಗಳಲ್ಲಿ ಫಲವತ್ತತೆಯನ್ನೇ ಕಸಿದುಕೊಂಡ ಸವಳು-ಜವಳಾಗಿಯೂ, ಹೀಗೆ ಸವಳಿನ ಬಹುಮುಖಗಳು ಕಾಣತೊಡಗುತ್ತವೆ.
 

‍ಲೇಖಕರು avadhi

September 15, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. ಮನು

    ಸವಳಿನ ಬಗ್ಗೆ ಲೇಖನ ಚೆನ್ನಾಗಿದೆ. ನನಗೂ ಬಾಲ್ಯದಲ್ಲಿ ಸವಳು ತರುವ ನೆನಪುಗಳನ್ನು ಈ ಬರಹ ತಂದಿತು. ಆದರೆ ಈ ಬರಹದಲ್ಲಿ ಸವಳಿನ ಬಳಕೆ ನಿಂತು ಹೋದಂತೆಯೂ, ಸವಳಿಗೆ ಶ್ರದ್ಧಾಂಜಲಿ ಅರ್ಪಿಸುವಂತೆಯೂ ಇರುವುದನ್ನು ನೋಡಿ ದುಃಖವಾಯಿತು. ಹೀಗೆ ಶ್ರದ್ಧಾಂಜಲಿ ಹೇಳಿಸಿಕೊಳ್ಳುವ ಎಷ್ಟೋ ಸಂಗತಿಗಳು ಗ್ರಾಮೀಣ ಭಾಗದಲ್ಲಿವೆ. ಗಂಗಾವತಿ ಭಾಗದಲ್ಲಿ ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಬಳಸಿ ಗದ್ದೆಗಳು ಸವಳಾಗುವ ಬಗ್ಗೆ ನೀವು ಗಮನಿಸಿಲ್ಲ ಎಂದು ಕಾಣುತ್ತದೆ. ಇದು ಕೂಡ ನೆಲ ಸವಳಾಗಲು ನೀರಾವರಿ ಭಾಗದಲ್ಲಿ ಪ್ರಭಾವಿ ಕಾರಣ ಎಂದು ನನ್ನ ತಿಳುವಳಿಕೆ. ಇನ್ನು ಸವಳನ್ನು ಸಾಮಾಜಿಕ ಸಮಸ್ಯೆಗೆ ತಳಕು ಹಾಕಿರುವುದು ಕೂಡ ನಿಜವಿದೆ. ಒಂದು ಗ್ರಾಮೀಣ ಭಾಗದ ಹೆಂಗಳೆಯರ ಸಂಗದಲ್ಲಿದ್ದ ಸವಳಿನ ಬಗ್ಗೆ ಆಪ್ತವಾಗಿ ಕಟ್ಟಿಕೊಟ್ಟಿದ್ದೀರಿ ಧನ್ಯವಾದಗಳು.
    -ಮನು

    ಪ್ರತಿಕ್ರಿಯೆ
  2. paramesh

    Namma holada baduvige `Upppina Halla’ antha ide. prati varsha YUGADI ge Uppara community Elli pooje maaduva Aacharane maaduttare. Arun Nimma lekhana Nodidaga nanage UPPINA HALLADA hinnele Thiliyitu.

    ಪ್ರತಿಕ್ರಿಯೆ
  3. yash

    ಈ ವಿವರಗಳು ನನಗೆ ಹೊಸದು, ಚೆನ್ನಾಗಿದೆ.

    ಪ್ರತಿಕ್ರಿಯೆ
  4. mallikarjuna kalamarahalli

    BAHUMUKHI CHINTANE.AADHUNIKA JANAPADA NIRVACHANE HEEGIRABEEKU.

    ಪ್ರತಿಕ್ರಿಯೆ
  5. kotresh kotturu

    ಅರುಣ್, ಬರಹ ಚೆನ್ನಾಗಿದೆ.ನಮ್ಮೂರಲ್ಲಿ ಸೋಳು ಅಂತ ಕರೀತಿದ್ರು. ಸೋಳಿನ ಜತೆ ಬೂರುಗದ ಕಾಯಿ ಅಂತ ಇತ್ತು. ಆ ಬೂರುಗದ ಕಾಯಿಯನ್ನು ಸಹ ಬಟ್ಟೆ ಒಗೆಯಲು ಹಳ್ಳಿಗಳಲ್ಲಿ ಬಳಸುತ್ತಿದ್ದರು. ಈ ಬೂರುಗದ ಕಾಯಿಯೂ ಬುರುಗು ತರುತ್ತಿತ್ತು. ಈಗ ಈ ಬೂರುಗದ ಮರಗಳು ಕಾಣೆಯಾಗಿವೆ. ಈ ಮರಗಳು ಮಲೆನಾಡಿನಲ್ಲಿ ಇವೆ ಎಂದು ಹೇಳುತ್ತಾರೆ. ಆ ಬಗ್ಗೆ ತಿಳಿದಿಲ್ಲ. ಸವಳಿನಂತಹ ಸಣ್ಣ ವಿಷಯವನ್ನು ಲೇಖನವಾಗಿ ಬರೆದದ್ದು ಇಷ್ಟವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: