’ತೇಜಸ್ವಿಯನ್ನು ಹುಡುಕುತ್ತಾ’ – "ಏಯ್ ಹಜಾಮ…!!!"

(ಇಲ್ಲಿಯವರೆಗೆ…)

ದತ್ತಣ್ಣನವರ ಮನೆಯಿಂದ ಹೊರಟ ಕೇವಲ ಐದೇ ನಿಮಿಷದಲ್ಲಿ ನಮ್ಮ ವ್ಯಾನು ’ಅಡ್ಯಂತಾಯ ಕ್ಲಿನಿಕ್’ ಎಂಬ ಬೋರ್ಡ್ ಇದ್ದ ಕಟ್ಟಡದ ಮುಂದೆ ನಿಂತಿತು. ನಾವು
ಮಾತನಾಡಿಸಬೇಕಿದ್ದವರು ಒಳಗಡೆ ಇದ್ದರೂ ಆ ಸಮಯದಲ್ಲಿ ಆ ಕ್ಲಿನಿಕ್ಕಿನಲ್ಲಿ ತುಂಬಾ ಜನ ಪೇಷಂಟ್ಸ್ ಇದ್ದಿದ್ದರಿಂದ ಇವರ ನಂತರ ಮಾತನಾಡಿಸಬೇಕಿದ್ದ ವ್ಯಕ್ತಿಯ ಮಾತುಗಳನ್ನು ಚಿತ್ರೀಕರಿಸಿ ನಂತರ ಈ ಡಾಕ್ಟರ್ ರನ್ನು ಮಾತನಾಡಿಸೋಣವೆಂದು ನಿರ್ಧರಿಸಿ ‘ಒಂದು ಗಂಟೆ ಬಿಟ್ಟು ಬರುತ್ತೇವೆ’ ಎಂದು ಅವರಿಗೆ ತಿಳಿಸಿ ಅಲ್ಲಿಂದ ಹೊರಟು ನೇರ ಮುಂದಿನ ವ್ಯಕ್ತಿಯ ಮನೆ ಬಳಿ ಬಂದೆವು.
’ಬನ್ನಿ ಬನ್ನಿ ಈ ಕಡೆ ನಿಲ್ಸಿ ಗಾಡಿ…’ ಎನ್ನುವ ದನಿಯೊಂದು ಕತ್ತಲಲ್ಲಿ ನಮಗೆ ಕೇಳಿಸಿ ದನಿ ಬಂದ ದಿಕ್ಕಿಗೆ ತಿರುಗಿ ನೋಡಿದೆವು. ಮನೆಯ ಕಾಪೌಂಡಿನ ಹಿಂದೆ ಬಣ್ಣ ಮಾಸಿದ ಸ್ವೆಟರ್ ಹಾಕಿಕೊಂಡು ಕೆದರಿದ ತಲೆಯ, ಬಿಳಿಯ ಗಡ್ಡದ ಆ ವ್ಯಕ್ತಿ ನಗುತ್ತಾ ನಮ್ಮ ಕಡೆ ನೋಡುತ್ತಿದ್ದರು. ಅವರನ್ನು ಮಾತನಾಡಿಸುತ್ತಲೇ ಮನೆಯ ಕಾಂಪೌಂಡ್ ಒಳಗೆ ಹೋದೆವು. ಕಡು ಹಸಿರು ಬಣ್ಣ ಪೈಂಟ್ ಮಾಡಿದ್ದ ಆ ಮನೆ ನೋಡಿದರೆ ಯಾರು ಬೇಕಾದರೂ ಹೇಳಬಹುದಿತ್ತು ಅದು ಪಕ್ಕಾ ಮುಸ್ಲಿಂ ಟೇಸ್ಟ್ ಮನೆ ಎಂದು. ತೇಜಸ್ವಿಯವರ ’ಕೃಷ್ಣೇಗೌಡನ ಆನೆ’ ಎಂಬ ಕಥೆಯಲ್ಲಿ ಹಳೆಯ ಲಟಾರಿ ಸ್ಕೂಟರಿನ ಮೇಲೆ ಕತ್ತೆಗೆ ಹೇರಿದಂತೆ ಎರಡೂ ಕಡೆ ನ್ಯೂಸ್ ಪೇಪರಿನ ಕಂತೆಗಳನ್ನು ಹೇರಿ ‘ಹತ್ತಲಾರೇ…’ ಎನ್ನುವಂತೆ ಕಿರ್ರೂರ್ರೊರ್ರೊ ಎಂದು ಅರಚುವ ಸ್ಕೂಟರ್ ನ ಮೇಲೆ ಸವಾರಿ ಮಾಡುವ ಜಬ್ಬಾರ್ ಎಂಬ ಪಾತ್ರವೊಂದು ಬರುತ್ತದೆ ನೆನಪಿದೆಯೇ? ಈಗ ನಾವು ನಿಂತಿದ್ದದ್ದು ’ಕೃಷ್ಣೇಗೌಡನ ಆನೆ’ಯ ಆ ಜಬ್ಬಾರ್ ಎಂಬ ಪಾತ್ರ ಸೃಷ್ಟಿಗೆ ತೇಜಸ್ವಿಯವರಿಗೆ ಸ್ಪೂರ್ತಿಯಾದ ಮಹಮ್ಮದ್ ಜಾಹೀರ್ ಎಂಬ ತೇಜಸ್ವಿಯವರ ಮಾಯಲೋಕದ ಒಡನಾಡಿಯ ಮುಂದೆ. ಈ ಜಾಹೀರ್ ಸಾಬ್ರು ಮೂಡಿಗೆರೆ ಪೋಸ್ಟಾಫೀಸಿನಲ್ಲಿ ಪೋಸ್ಟ್ ಮ್ಯಾನ್. ಕೇವಲ ಪೋಸ್ಟ್ ಮ್ಯಾನ್ ಕೆಲಸದಿಂದ ಹೊಟ್ಟೆ ಹೊರೆಯಲು ಕಷ್ಟವಾಗಿದ್ದರಿಂದ ಇವರು ಮೂಡಿಗೆರೆ ಹಾಗೂ ಸುತ್ತಮುತ್ತ ಪೇಪರ್ ಏಜೆನ್ಸಿ ಹಿಡಿದು ಮನೆಮನೆಗೂ ಪೇಪರ್ ಹಾಕುವ ಕಾಯಕ ಸಹ ಮಾಡುತ್ತಾರೆ. (ಬೆಳಿಗ್ಗೆ ೫.೩೦ಕ್ಕೆ ಮೂಡಿಗೆರೆಯ ಸರ್ಕಲ್ಲಿನಲ್ಲಿ ನಿಂತರೆ ಬೇಕರಿಯೊಂದರ ಮುಂದಿನ ಜಾಗದಲ್ಲಿ ಹತ್ತಾರು ಜಾತಿಯ ಪೇಪರುಗಳ ಕಟ್ಟುಗಳನ್ನು ಹರವಿಕೊಂಡು ಅವುಗಳ ಮಧ್ಯೆ ಒದ್ದಾಡುತ್ತಿರುವ ಜಾಹೀರಣ್ಣ ಕಾಣಸಿಗುತ್ತಾರೆ). ಜಾಹೀರ್ ಸಾಬ್ರಿಗೆ ನಮ್ಮ ಹುಡುಗರ ಪರಿಚಯ ಮಾಡಿಸಿ ಸಮಯ ಕಡಿಮೆ ಇದ್ದದ್ದರಿಂದ ನೇರವಾಗಿ ವಿಷಯಕ್ಕೆ ಆಹ್ವಾನಿಸಿದೆ.
’ಮೂವತ್ ನಲ್ವತ್ ವರ್ಷುದ್ ಹಿಂದೆ ಅವ್ರ್ ಮನೆಗೆ ಪೋಸ್ಟ್ ಕೊಡಕೆ ಅಂತ ಹೋಗ್ತಿದ್ದೆ. ಆಗ ಪರಿಚಯ ಆದ್ರು ಸಾರು. ಅಮೇಲೆ ಹಂಗೆ ಪೇಪರ್ ಹಾಕಕ್ಕೆ, ಪೋಸ್ಟ್ ಕೊಡಕೆ ಅವಾಗವಾಗ ಅವ್ರ್ ಮನೆಗೆ ಹೋಗ್ತ ಬರ್ತಾ ಇದ್ದೆ. ಕೆಲವು ಟೈಮು ಮಳೆ ಬಂದ್ರೆ ಪೋಸ್ಟ್ ತಗೊಂಡೋಗಿ ಕೊಡೋದು ಲೇಟ್ ಆಗ್ಬುಡೋದು. ಲೇಟಾಗಿ ತಗೊಂಡೋಗ್ ಕೊಟ್ರೆ ’ಏಯ್ ಹಜಾಮ.,..ನೀನೆಂತ ಸರಿ ಇಲ್ಲ ಕಣೊ…!!’ ಅಂತ ಬೈತಿದ್ರು. ಅದು ಸ್ವಲ್ಪ ಹೊತ್ತು ಅಷ್ಟೆ. ಅಮೇಲೆ ಅವ್ರೇ ’ಬೇಜಾರ್ ಮಾಡ್ಕೊಬೇಡ ಕಣೊ. ಸುಮ್ನೆ ಹಂಗಂದೆ…’ ಅಂತ ಪ್ರೀತಿ ವಿಸ್ವಾಸ್ದಿಂದ ಮಾತಾಡ್ಸ್ತಿದ್ರು. ಅಮೇಲೆ ಅವ್ರ್ ತೋಟದಲ್ಲಿ ಸೌದೆ ಬಿದ್ರೆ ಅದನ್ನ ಎತ್ತಿಕ್ಕಿ ನಂಗೆ ಕರೆಸ್ಬಿಟ್ಟು ಕೊಡ್ತಾ ಇದ್ರು’ ಹೀಗೆ ತೇಜಸ್ವಿಯವರೊಂದಿಗಿನ ಒಡನಾಟದ ದಿನಗಳ ನೆನಪುಗಳನ್ನು ಹಂಚಿಕೊಳ್ಳತೊಡಗಿದರು.

ಅವರಿಂದ ಸಾಕ್ಷ್ಯಚಿತ್ರಕ್ಕೆ ಮುಖ್ಯವಾಗಿ ಬೇಕಾಗಿದ್ದದ್ದು ತೇಜಸ್ವಿಯವರ ಕಥೆಯಲ್ಲಿ ಜಾಹೀರ್ ‘ಜಬ್ಬಾರ್’ ಆಗಿರುವ ವಿಷಯ ಇವರಿಗೆ ಗೊತ್ತಿದೆಯೇ? ಇದ್ದರೆ ಅವರಿಗೆ ಹೇಗೆ ಅನ್ನಿಸುತ್ತದೆ ಎಂಬ ವಿಷಯ. ಈ ಕುರಿತಾಗಿ ಪ್ರಶ್ನೆಯೊಂದನ್ನು ಅವರಿಗೆ ಕೇಳಿದೆ. ಜಾಹೀರ್ ಸಾಬ್ರು ಜೋರಾಗಿ ನಗುತ್ತಾ ಉತ್ತರಿಸಲು ಪ್ರಾರಂಭಿಸಿದರು, ’ಓಓಓಓ ಅದು…ಅದು ಹೌದು, ನನ್ ಹೆಸ್ರನ್ನ ಜಬ್ಬಾರ್ ಅಂತ ಬರ್ಕೊಂಡಿದ್ರು ಅದ್ರಲ್ಲಿ…ಕೃಷ್ಣೇಗೌಡನ ಆನೆ. ನಾನು ಬೆಂಗಳೂರ್ಗೆ ಪೇಪರ್ ಏಜೆನ್ಸಿ ಕೆಲ್ಸಕೆಲ್ಲ ಹೋದಾಗ ಎಲ್ರೂ ಕೇಳ್ತಿದ್ರು ಅದು ನೀವೇನ…ನೀವೇನ ಅಂತ. ಅಮೇಲೆ ಅದನ್ನ ಇಲ್ಲಿ ನಾಟ್ಕ ಬೇರೆ ಮಾಡಿದ್ರಲ್ಲ ಅವಾಗಂತು ತುಂಬಾ ಜನ ಕೇಳ್ತಿದ್ರು. ಅದ್ಕೆ ನಾನ್ ಅವ್ರ್ನ ಕೇಳ್ದೆ ’ಏನ್ ಸಾರ್ ನನ್ ಬಗ್ಗೆ ಎಲ್ಲ ಬರ್ದಿದ್ದೀರಂತೆ? ಎಲ್ಲಾ ಕೇಳ್ತಾರೆ’ ಅಂತ. ಅದ್ಕೆ ಅವ್ರು ಇರಲಿ ಬಿಡೊ ಚೆನ್ನಾಗಿರುತ್ತೆ. ಅಷ್ಟುಕ್ಕು ನನೇನ್ ನಿನ್ ಹೆಸ್ರುಹಾಕ್ಕಿದ್ದೇನೇನೊ…ಇದ್ಕೊಳ್ಲಿ ಬಿಡು’ ಅಂತ ಹೇಳಿದ್ರು’ ಎನ್ನುತ್ತಾ ನಗು ಮುಂದುವರೆಸಿದರು. ತಕ್ಷಣ ನೆನಪಾದವರಂತೆ ’ಯಾರಾದ್ರು ನಮಸ್ಕಾರ ಅಂದ್ರೆ ಸಿಟ್ಟು ಅವ್ರಿಗೆ. ನಮಸ್ಕಾರ ಅಂದ್ರೆ ಯಾಕೊ ನಮಸ್ಕಾರ ಅಂತೀಯ? ನಿನಗೇನ್ ಮಾಡಕ್ ಕೆಲ್ಸ ಇಲ್ವ?’ ಅಂತ ಬೈದು ಹೋಗ್ತಿದ್ರು. ಆದ್ರೆ ತುಂಬಾ ಓಳ್ಳೆ ಜನ. ಅವ್ರು ತೀರೋದಾಗ್ಲೂ ಅಷ್ಟೇ ಊರ್ ತುಂಬಾ ಜನ ಅಂದ್ರೆ ಜನ. ನಮಗೆ ಗೊತ್ತಿರ್ಲಿಲ್ಲ ಇವ್ರು ಇಷ್ಟೊಂದ್ ಫೇಮಸ್ಸು ಅಂತ. ತೀರೊಗಕ್ಕೆ ಮುಂಚೆ ಅವ್ರ ಹೆಂಡ್ತಿ ಹತ್ರ ಹೇಳಿದ್ರಂತೆ ಸೌದೆ ಇದೆ ಜಹೀರ್ಗೆ ಕೊಡ್ಬೇಕು ಅಂತ. ಅಮೇಲೆ ಅವ್ರು ತೀರೋದ ಒಂದು ತಿಂಗ್ಳು ಬಿಟ್ಟು ಅವ್ರ್ ಮನೆವ್ರು ನನ್ನ ಕರೆದು ಸೌದೆ ಕೊಟ್ರು’ ಎಂದು ಅತ್ಯಂತ ಅಮಾಯಕತೆಯಿಂದ ಇದ್ದದ್ದನೆಲ್ಲವೂ ಹೇಳಿದರು ಜಾಹೀರ್ ಸಾಬ್ರು.
ಮುಂದೆ ಜಾಹೀರ್ ಸಾಬ್ರು ಹೇಳಿದ ಉಳಿದ ವಿವರಗಳು ಅನಗತ್ಯವಾದ್ದರಿಂದ ಅವನ್ನು ಬಿಟ್ಟು ಮುಂದಕ್ಕೆ ಹೋಗುತ್ತಿದ್ದೇನೆ. ಅವರಿಗೆ ಧನ್ಯವಾದ ಹೇಳಿ ಅದೇ ಕಚ್ಚಾ ರಸ್ತೆಯಲ್ಲಿ ಸಾಗಿ ಮತ್ತೆ ಅಡ್ಯಂತಾಯ ಕ್ಲಿನಿಕ್ ಗೆ ಬಂದೆವು. ನಾವು ವಾಪಸ್ ಬಂದಾಗಲೂ ಅಲ್ಲಿ ಒಂದಿಬ್ಬರು ಪೇಷಂಟ್ಸ್ ಇದ್ದರು. ಹಾಗಾಗಿ ಮತ್ತೂ ಹತ್ತು ನಿಮಿಷ ಕಾಯಬೇಕಾಯಿತು. ನಂತರ ಡಾಕ್ಟರ್ ರಿಂದ ಕರೆ ಬಂತು. ಎಲ್ಲ ಹೊತ್ತುಕೊಂಡು ಒಳಗಡೆ ಹೋದೆವು. ಕನ್ನಡಕ ತೆಗೆದರೆ ವಯಸ್ಸಾದ ರಾಜೇಶ್ ಖನ್ನನಂತೆ ಕಾಣುವ ಸುಮಾರು 60 ಪ್ಲಸ್ ನ ವ್ಯಕ್ತಿಯೊಬ್ಬರು ಬೇಸ್ ವಾಯ್ಸಿನಲ್ಲಿ ’ಕಮ್ ಕಮ್…ಕೂತ್ಕೊಳಿ, ಸಾರಿ ತುಂಬಾ ಕಾಯಿಸ್ಬಿಟ್ಟೆ. ಎಕ್ಸ್ಟ್ರೀಮ್ಲಿ ಸಾರಿ’ ಎಂದು ಪೇಚಾಡುತ್ತಾ ನಮ್ಮನ್ನು ಸ್ವಾಗತಿಸಿದರು. ‘ಪರ್ವಾಗಿಲ್ಲ ಸಾರ್’ ಎನ್ನುತ್ತಾ ಅವರಿಗೆ ನಮ್ಮ ತಂಡವನ್ನು ಪರಿಚಯಿಸಿದೆ. ’ಎಲ್ಲಾ ಯಂಗ್ ಸ್ಟರ್ಸು ಗುಡ್’ ಎಂದ ಅವರು ಸಾಕ್ಷ್ಯಚಿತ್ರ ಕುರಿತ ನಮ್ಮ ಉದ್ದೇಶ, ರೂಪುರೇಶೆ ಎಲ್ಲವನ್ನೂವಿವರವಾಗಿ ಕೇಳಿ ತಿಳಿದುಕೊಂಡರು. ಹಾಗೆ ನಿಧಾನಕ್ಕೆ ನಮ್ಮನ್ನು ಅವರ ಜೊತೆ ತೇಜಸ್ವಿ ನೆನಪಿನ ದೋಣಿ ಹತ್ತಿಸಿದರು.
’…ಮತ್ತೆ ನೀನು ನನ್ ಕಣ್ಣಿಗೊಳ್ಳೆ ಬಚ್ಚ ಕಂಡಂಗ್ ಕಾಣ್ತೀಯಲ್ಲ…!!!’

’ನನ್ ಹೆಸ್ರು ಡಾಕ್ಟರ್ ರಾಮಚರಣ ಅಡ್ಯಂತಾಯ. ಮೂಡಿಗೆರೆಲಿ ಕ್ಲಿನಿಕ್ ಇಟ್ಕೊಂಡಿದೀನಿ. ನನ್ನ ಅವ್ರ ಪರಿಚಯ ಆಗಿದ್ದು ಸೆವೆಂಟಿಸ್ ನಲ್ಲಿ ಇರಬೇಕು. ಐಮ್ ನಾಟ್ ಶೂರ್. ಹಿ ವಾಸ್ ಮೋರ್ ಲೈಕ್ ಎ ಫ್ರೆಂಡ್. ಆಗಾಗ ನನ್ ಕ್ಲಿನಿಕ್ಕಿಗೆ ಬರ್ತಾ ಇದ್ರು. ಬಟ್ ಬಂದಾಗ್ಲೆಲ್ಲಾ ’ಏಯ್ ಯಾಕಪ್ಪ ನನ್ ಟೈಂ ತಿಂತೀಯ? ಬಂದ್ರೆ ಸುಮ್ನೆ ಮಾತಾಡಿಸ್ತಾ ಕೂತು ಬಿಡ್ತೀಯ. ನಿನ್ ಟೈಮು ವೇಸ್ಟು ನನ್ ಟೈಮು ವೇಸ್ಟು’ ಅಂತ ರೇಗ್ತಿದ್ರು.
’ಹಿ ವಾಸ್ ಲೈಕ್ ಎ ಫ್ರೆಂಡ್’ ಅಂದ್ರಲ್ಲ ಹೇಗೆ ಸರ್? ಅವರನ್ನು ಕೇಳಿದೆ.
’ಅವ್ರು ಯಾವತ್ತೂ ನನ್ನನ್ನ ಬಹುವಚನದಲ್ಲಿ ಮಾತಾಡಿಸ್ತಿರಿಲ್ಲ. ’ಏನಪ್ಪ ಡಾಕ್ಟ್ರೆ’ ಅನ್ನೊರು. ಒಂದ್ಸಲ ಕೇಳಿದ್ರು ’ನಿನಗೆಷ್ಟಯ್ಯ ವಯಸ್ಸು?’ ಅಂತ. ನಾನು ಹೇಳ್ದೆ. ಅದಕ್ಕವ್ರು ’ಅಷ್ಟೇನ…ನನಗೂ ನಿನಗೂ ಅಷ್ಟೇನ ಡಿಫರೆನ್ಸು? ಮತ್ತೆ ನೀನ್ ನನಗೆ ಒಳ್ಳೆ ಬಚ್ಚ ಕಂಡಂಗ್ ಕಾಣ್ತೀಯಲ್ಲ..’ ಅಂತ ಹೇಳಿದ್ರು’ ಎಂದು ಹಳೆಯ ಆ ಘಟನೆಯನ್ನು ನೆನಪಿಸಿಕೊಂಡು ನಕ್ಕರು.
“ಹಿತ್ತಲ ಗಿಡ ಮದ್ದಲ್ಲ”
ಹಾಗೆ ಮಾತನಾಡುತ್ತಾ ಹೋದ ಡಾಕ್ಟ್ರು ನಮ್ಮ ಸುತ್ತಮುತ್ತಲೇ ಇರುವ ಅದ್ಭುತ ವ್ಯಕ್ತಿಗಳು ಅಥವ ವಸ್ತುಗಳ ಬಗೆಗಿನ ಕುರಿತಾದ ನಮ್ಮ ಉಪೇಕ್ಷೆಯ ಬಗ್ಗೆ ಮಾತನಾಡಲು ಪ್ರಾರಂಭಿಸಿದರು.’ಚಿಕ್ಕಮಗಳೂರಿನಲ್ಲಿ ಡಾಕ್ಟರ್ ರಾಜು ಅಂತ ಒಬ್ರಿದಾರೆ. ತುಂಬಾ ಒಳ್ಳೆ ಪಿಡಿಯಾಟ್ರಿಷಿಯನ್. ತುಂಬಾ ಹಿಂದೆ ಅವ್ರು ನನ್ ಹತ್ರ ಬಂದು ‘ತೇಜಸ್ವಿಯವರ ಎಲ್ಲಾ ಪುಸ್ತಕನೂ ಅವ್ರ ಹತ್ರ ಆಟೋಗ್ರಾಫ್ ಹಾಕ್ಸಿ ಕೊಡ್ಸೊಕಾಗುತ್ತ’ ಅಂತ ಕೇಳಿದ್ರು. ಅಷ್ಟರಲ್ಲಾಗ್ಲೇ ನನಗೆ ತೇಜಸ್ವಿಯವರ ಜೊತೆ ಒಳ್ಳೆ ರಿಲೇಷನ್ ಶಿಪ್ ಬಿಲ್ಡ್ ಆಗಿತ್ತು. ತುಂಬಾ ಸಲ ಅವ್ರು ನಮ್ ಕ್ಲಿನಿಕ್ಕಿಗೆ ಬಂದಿದ್ರು, ನಾನು ಅವ್ರ ಮನೆಗೆ ಹೋಗಿ ಬರ್ತಿದ್ದೆ. ಆದ್ರೆ ಒಂದ್ಸಲನೂ ನನಗೆ ಅವ್ರ ಪುಸ್ತಕದ ಮೇಲೆ ಆಟೋಗ್ರಾಫ್ ಹಾಕುಸ್ಕೊಬೇಕು ಅಂತ ಅನ್ಸಿರ್ಲಿಲ್ಲ. ಡಾಕ್ಟರ್ ರಾಜು ಹಾಗೆ ಕೇಳ್ದಾಗ ನನಗೆ ಆ ಯೋಚನೆ ಬಂತು, ನಮ್ ಸುತ್ತಾ ಇರೋರನ್ನೇ ನಾವು ಗುರುತಿಸೊಲ್ವಲ್ಲ ಅಂತ. ಹಾಗೆ ಮತ್ತೊಂದ್ಸಲ ನಾನಾಗ ದಾವಣಗೆರೆನಲ್ಲಿ ಮೆಡಿಕಲ್ ಪಿಜಿ ಓದ್ತಿದ್ದೆ. ನನ್ ಜೊತೆ ಸಂಜೀವ್ ಕುಲಕರ್ಣಿ ಅಂತ ಕ್ಲಾಸ್ ಮೇಟ್ ಇದ್ದ, ಧಾರವಾಡದವ್ನು. ಈಗವನೂ ಧಾರವಾಡದಲ್ಲಿ ಓಳ್ಳೆ ಡಾಕ್ಟ್ರು. ನಾನು ಅವ್ನಿಗೆ ಮೂಡಿಗೆರೆಗೆ ಬಾರೋ ಮೂಡಿಗೆರೆಗೆ ಬಾರೋ ಅಂತ ಕರೀತಿದ್ದೆ. ಅದಕ್ಕವನು ’ಹೋಗಪ್ಪ ಯಾವಾಗ್ಲೂ ಮಳೆ ಸುರಿಯೊ ಆ ನಿನ್ ಮಲ್ನಾಡಿಗೆ ಯಾರ್ ಬರ್ತಾರೆ. ಒಂದ್ವೇಳೆ ಏನಾದ್ರು ಬಂದ್ರೆ ತೇಜಸ್ವಿಯವ್ರನ್ನ ನೋಡೋಕೆ ಬರಬೇಕು ಅಷ್ಟೆ’ ಅಂತ ಹೇಳಿದ್ದ. ಅವಾಗೆಲ್ಲ ನನಗನ್ನಿಸ್ತಿತ್ತು ಹಿತ್ತಲ ಗಿಡ ಮದ್ದಲ್ಲ ಅಂತ. ನಮ್ಮೋರು ಯಾವಾಗ್ಲೂ ಹಾಗೆ ತಾನೆ’ ಎನ್ನುತ್ತಾ ಮಾತು ಮುಂದುವರೆಸಿದರು. ಈ ನಡುವೆ ನಮ್ಮ ಚಿತ್ರೀಕರಣದ ನಡುವೆ ಚಿಕಿತ್ಸೆಗೆಂದು ಬಂದ ಒಂದಿಬ್ಬರು ರೋಗಿಗಳು ಕ್ಲಿನಿಕ್ಕಿನಲ್ಲಿ ನಡೆಯುತ್ತಿದ್ದ ಚಿತ್ರೀಕರಣ ನೋಡಿ ’ಏನ್ ಸಾರ್ ಟಿವಿ ಇಂಟರ್ವ್ಯೂನಾ? ಯಾವ್ ಛಾನೆಲ್ಲು? ಅಂತೆಲ್ಲ ಡಾಕ್ಟರ್ ತಲೆ ತಿಂದು ಬೆಳಿಗ್ಗೆ ಬರುತ್ತೇವೆ ಎಂದು ಹೇಳಿ ವಾಪಸ್ ಹೋಗುತ್ತಿದ್ದರು. ಇದರಿಂದ ರೋಸಿ ಹೋದ ಡಾಕ್ಟರ್ ಎದ್ದು ಹೋಗಿ ಕ್ಲಿನಿಕ್ ಬಾಗಿಲನ್ನು ಸಂಪೂರ್ಣ ಮುಚ್ಚಿ ಬಂದರು. ಚಿತ್ರೀಕರಣ ಅಡೆತಡೆಗಳಿಲ್ಲದೆ ಸಾಗಿತು.
’ಯೂ ನೋ…ತೇಜಸ್ವಿ ನನಗೆ ಫೋಟೋಗ್ರಫಿ ಹೇಳ್ಕೊಟ್ಟಿದ್ರು’ ಎಂದು ಪ್ರಾರಂಭಿಸಿ ಅದಕ್ಕೆ ಪ್ರೇರಣೆಯಾದ ಘಟನೆಯನ್ನು ನೆನಪಿಸಿಕೊಂಡರು. ’82-83 ಟೈಮಲ್ಲಿ ಒಂದು ಮಿನೋಲ್ಟಾ ಕ್ಯಾಮೆರ ಜರ್ಮನಿಯಿಂದ ತರಿಸ್ಕೊಂಡಿದ್ದೆ. ಅದಕ್ಕೆ ಬೇಕಾದ ನೆಗೆಟಿವ್ಸ್ ಎಲ್ಲಾ ಅಲ್ಲಿಂದಾನೆ ಬಂದಿತ್ತು. ನಾನು ಅದೇ ಜೋಶ್ ನಲ್ಲಿ ಸುಮಾರು ಫೋಟೋಗಳನ್ನ ತೆಗೆದು ತೆಗೆದು ಮನೆ ತುಂಬಾ ಹಾಕಿದ್ದೆ. ಆಗ ಅವನ್ನೆಲ್ಲ ನೋಡಿ ‘ದಿ ಬೆಸ್ಟ್ ಫೋಟೋಸ್ ಇವು, ತುಂಬಾ ಚೆನ್ನಾಗ್ ಬಂದಿವೆ’ ಅಂತ ನನಗೆ ನಾನೇ ಹೇಳ್ಕೊಂಡು ಖುಷಿ ಪಡ್ತಿದ್ದೆ. ಒಂದಿನ ತೇಜಸ್ವಿಯವ್ರನ್ನ ಮನೆಗೆ ಊಟಕ್ಕೆ ಕರ್ದಿದ್ದೆ, ಬಂದ್ರು. ಬಂದವ್ರೆ ನಾನ್ ತೆಗೆದಿದ್ದ ಫೋಟೋಸ್ ನೋಡಿದ್ರು. ಎಲ್ಲಾ ನೋಡಿ ಕಡೆಗೆ ’ಎಯ್ ಎಂತ ಗೂಸ್ಲು ಫೋಟೋ ತೆಗೆದಿದ್ಯೊ. ಚೆನ್ನಾಗಿರೋದು ಹೋಗ್ಲಿ, ಸುಮಾರಾಗಿರೋದು ಒಂದಾದ್ರು ಇಲ್ವಲ್ಲ ಇದ್ರಲ್ಲಿ. ಯಾವ್ ಕ್ಯಾಮೆರ ನಿನ್ ಹತ್ರ ಇರೋದು ತೋರಿಸು ಅಂದ್ರು. ನಾನ್ ನನ್ ಕ್ಯಾಮೆರ ತೋರಿಸ್ದೆ. ’ಇಷ್ಟ್ ಒಳ್ಳೆ ಕ್ಯಾಮೆರ ಇಟ್ಕೊಂಡು ಎಂತ ಕೆಟ್ಟ ಫೋಟೋ ತೆಗೆದಿದ್ಯ ಮಾರಾಯ’ ಅಂತ ನೇರವಾಗಿ ಬೈದು ‘ಮನೆಗೆ ಬಾ ಫೋಟೋಗ್ರಫಿ ಹೇಳಿಕೊಡ್ತಿನಿ’ ಅಂತ ಹೇಳಿದ್ರು. ನಾನು ಅವ್ರ ಮನೆಗೆ ಹೋಗಿ ಅಲ್ಪ ಸ್ವಲ್ಪ ಕಲ್ತುಕೊಂಡೆ. ಅಮೇಲೆ ನನ್ ಕೆಲಸದ ಮಧ್ಯದಲ್ಲಿ ಫೋಟೊಗ್ರಫಿ ಕಂಟಿನ್ಯು ಮಾಡೊಕ್ ಆಗ್ದೆ ಬಿಟ್ಟೆ…’ ಎಂದು ನಗುತ್ತಾ ಅಂದಿನ ಘಟನೆಗಳನ್ನ ಒಂದೊಂದಾಗಿ ನೆನಪಿಸಿಕೊಳ್ಳುತ್ತಾ ಹೋದರು.
’ಊಟದ ರೆಫರೆನ್ಸ್ ಬಂದಿದ್ರಿಂದ ಹೇಳ್ತೀನಿ, ಈಗ ನಾರ್ಮಲಿ ಊಟ ಅಂತಂದ್ರೆ ಒಂದು ಆರ್ಡರ್ ಇದೆ ಅಲ್ವ. ಮೊದಲು ಚಪಾತಿ, ಅಮೇಲೆ ರೈಸು, ಅಮೇಲೆ ಮೊಸರನ್ನ ಹೀಗೆ ಒಂದು ಮೆಥಡ್ ಇದೆ ಅಲ್ವ. ಆದ್ರೆ ಅವ್ರ ಪಾಲಿಸಿನೆ ಬೇರೆ ಇತ್ತು. ಒಂದ್ಸಲ ಊಟಕ್ಕೆ ಇನ್ವೈಟ್ ಮಾಡಿದ್ದೆ, ಬಂದ್ರು. ಬಂದವ್ರೆ ಮೊದ್ಲು ಮೊಸರನ್ನ ಊಟ ಮಾಡಿದ್ರು, ಅಮೇಲೆ ಚಿಕನ್ ತಗೊಂಡ್ರು, ಅಮೇಲೆ ಸ್ವೀಟು, ರಸಂ…!!! ನನಗೆ ತಲೆ ಕೆಡ್ತು. ಯಾಕ್ ಹೀಗೆಅಂತ ಕೇಳ್ದೆ. ಅದಕ್ಕವ್ರು ’ಹೀಗೆ ಆರ್ಡರ್ ನಲ್ಲೇ ತಿನ್ಬೇಕು ಅಂತೇನಾದ್ರು ರೂಲ್ಸ್ ಇದ್ಯೇನಯ್ಯ? ವಾಟೆವರ್ ಉ ಲೈಕ್ ಯು ಈಟ್. ಬಟ್ ತಿನ್ನೋದನ್ನ ಎಂಜಾಯ್ ಮಾಡಿದ್ರೆ ಆಯ್ತು ತಾನೆ’ ಅಂತ ಹೇಳಿದ್ರು’ ಎಂದು ಹೇಳಿಡಾಕ್ಟರ್ ಜೋರಾಗಿ ನಕ್ಕರು.
’ಡ್ರಾ ಬ್ಯಾಕ್ಸ್ ಆಫ್ ತೇಜಸ್ವಿ…!!!’


ಫೋಟೋಗ್ರಫಿಯ ಬಗ್ಗೆ ಮಾತನಾಡುತ್ತಿದ್ದಾಗಲೇ ಅಡ್ಯಂತಾಯರವರು ಮಾತೊಂದು ವಿಷಯಕ್ಕೆ ಜಾರಿದರು. ’ಒಂದ್ಸಲ ಹೀಗೆ ಮಾತಾಡ್ತಾ ಮಾತಾಡ್ತ ಮಾತಿನ ಮಧ್ಯದಲ್ಲಿ ನಾನು ಕ್ಯಾಟ್ ಫಿಶ್ ಅಂತ ಹೇಳ್ದೆ. ತಕ್ಷಣ ತೇಜಸ್ವಿ ’ನೋಡಪ್ಪ ಗೊತ್ತಿಲ್ಲ ಅಂದ್ರೆ ಮಾತಾಡ್ಬಾರ್ದು. ಅದು ಕ್ಯಾಟ್ ಫಿಶ್ ಅಲ್ಲ….’ ಅಂತ ಹೇಳಿ ಅದರ ಹೆಸರು, ಸೈಂಟಿಫಿಕ್ ನೇಮ್, ಯಾವ ಗುಂಪಿಗೆ ಸೇರುತ್ತೆ ಎಲ್ಲಾ ಡೀಟೈಲಾಗಿ ಹೇಳಿದ್ರು. ಅವ್ರು ಎಲ್ಲಾನೂ ತುಂಬಾ ಆಳಕ್ಕೆ ಸ್ಟಡಿ ಮಾಡಿ ತಿಳ್ಕೊಂಡಿರುತಿದ್ರು. ನಾವು ಹಾಗೆ ತಿಳ್ಕೊಂಡಿರ್ಬೇಕು ಅಂತ ಎಕ್ಸ್ಪೆಕ್ಟ್ ಮಾಡ್ತಿದ್ರು.
ದಟ್ ವಾಸ್ ಅ ಡ್ರಾಬ್ಯಾಕ್ ವಿತ್ ಹಿಮ್, ಎಲ್ರನ್ನೂ ಅವ್ರ ಸಮಕ್ಕೆ ಎಕ್ಸ್ಪೆಕ್ಟ್ ಮಾಡ್ತಿದ್ರು’ ಎಂದು ಹಳೆಯ ಘಟನೆಯನ್ನು ಉದಾಹರಿಸಿ ಹೇಳಿದರು.
’ನಿಮ್ಮ ಹತ್ರ ಟ್ರೀಟ್ಮೆಂಟ್ ತಗೊಂಡಿದ್ದು ಉಂಟ?’ ಎಂದು ಅವರನ್ನು ಪ್ರಶ್ನಿಸಿದೆ. ’ಅಫ್ ಕೋರ್ಸ್…ಆದ್ರೆ ಅವ್ರಿಗೆ ಅಲೋಪತಿ ಮೆಡಿಸಿನ್ ಬಗ್ಗೆ ಅಷ್ಟು ಒಲವಿರಲಿಲ್ಲ. ಏನಾದ್ರು ಆದ್ರೆ ಪ್ರಾರಂಭ ಶುಂಟಿ ಕಷಾಯ ಅಂತೆ, ಬೇರು ನಾರು ಎಲ್ಲಾ ಉಪಯೋಗಿಸಿ ಏನೂ ಪ್ರಯೋಜನ ಆಗ್ದೆ ಇದ್ರೆ ಅಮೇಲೆ ನನಗೆ ಫೋನ್ ಮಾಡಿ ’ಡಾಕ್ಟ್ರೆ ನಿನ್ ಹತ್ರ ಬತ್ರೀನಿ ಕಣಯ್ಯ ವಿತ್ ಆಲ್ ಮೈ ಡಿಸ್ ಬಿಲೀಫ್ಸ್’ ಅಂತ ಹೇಳಿ ಬಂದು ಟ್ರೀಟ್ಮೆಂಟ್ ತಗೋತಿದ್ರು. ಯಥಾಪ್ರಕಾರ ಎಲ್ಲಾ ವಿಷಯದಲ್ಲೂ ಆಸಕ್ತಿ, ಕುತೂಹಲ ಇದ್ದ ಹಾಗೆ ಕ್ಲಿನಿಕ್ಕಿಗೆ ಬಂದಾಗ್ಲೂ ಮೆಡಿಕಲ್ ಬಗ್ಗೆ ತುಂಬಾ ಪ್ರಶ್ನೆ ಕೇಳೋರು. ಅವ್ರ ತಾಯಿ ಕ್ಯಾನ್ಸರಿನಿಂದ ತೀರ್ಕೊಂಡಾಗ ನನ್ ಹತ್ರ ಬಂದು ’ಡಾಕ್ಟ್ರೆ ಈ ಸರ್ಕೋಮ ಅಂದ್ರೆ ಏನಯ್ಯ? ಅಂತ ಕೇಳಿದ್ರು. ಅದು ಕ್ಯಾನ್ಸರಿನ ಒಂದು ರೂಪ ಅಂತ ಹೇಳ್ದೆ. ‘ಹಾಗಂದ್ರೇನು’ ಅಂತ ಮತ್ತೆ ಕೇಳಿದ್ರು. ಹೀಗೆ ಪ್ರತಿಯೊಂದರಲ್ಲೂ ಕುತೂಹಲ ಅವರದ್ದು. ಅವ್ರ ನಾಯಿ ಕಿವಿ ಹುಚ್ಚು ನಾಯಿ ಕಡಿದು ಸತ್ತು ಹೋಗ್ಬಿಡ್ತು. ಆಗ ಅವ್ರನ್ನು ಸೇರಿಸಿ ಇಡೀ ಫ್ಯಾಮಿಲಿಗೆ ರೇಬಿಸ್ ಇಂಜೆಕ್ಷನ್ ಹಾಕಿದ್ದೆ. ಖಮಕ್ ಖಿಮಕ್ ಅಂದೆ ಫಿಫ್ಟೀನ್ ಡೇಸ್ ಕಂಟಿನ್ಯೂಯಸ್ ಆಗಿ ಇಂಜೆಕ್ಷನ್ ತಗೊಂಡಿದ್ರು. ಅದೊಂದೆ ಅಂತ ಕಾಣುತ್ತೆ ಅವ್ರ ಇಡೀ ಲೈಫಲ್ಲಿ ಸರಿಯಾಗಿ ತಗೊಂಡ ಟ್ರೀಟ್ಮೆಂಟು. ಈವನ್ ಅವ್ರ ಲಾಸ್ಟ್ ಡೇಸ್ ನಲ್ಲೂ ಅಷ್ಟೆ, ದೇಹದ ಮೇಲೂ ಎಕ್ಸ್ಪೆರಿಮೆಂಟ್ ಮಾಡ್ಕೊಳ್ಳೊಕ್ ಹೋಗಿ ಅಷ್ಟು ಬೇಗ ನಮ್ಮನ್ನೆಲ್ಲಾ ಹೋಗೇ ಬಿಟ್ರು’ ಎಂದು ತೇಜಸ್ವಿಯವರು ಕಡೆಯ ದಿನಗಳಲ್ಲಿ ದೈಹಿಕವಾಗಿ ಅನುಭವಿಸಿದ ಯಾತನೆಗಳನ್ನು ಬಿಡಿಸಿಟ್ಟರು.
’ಅವತ್ತಂತೂ ನಮಗೆಲ್ಲ ದೊಡ್ಡ ಶಾಕ್ ಅದು. ಮಧ್ಯಾಹ್ನ ಅವ್ರ ಮನೆಯವ್ರು ಫೋನ್ ಮಾಡಿದ್ರು. ತಕ್ಷಣ ನನಗೆ ಗೊತ್ತಾಯ್ತು. ಯಾವ್ದುಕ್ಕು ಇರಲಿ ಅಂತ ಆಕ್ಸಿಜನ್ನು, ಅದು ಇದು ಎಲ್ಲಾ ಹೊತ್ಕೊಂಡು ವಿಥಿನ್ ನೋ ಟೈಮ್ ಅವ್ರ ಮನೆಗೆ ಹೋದ್ವಿ. ಬಟ್ ಆಫ್ ನೋ ಯೂಸ್….ಏನೂ ಟೆನ್ಷನ್ನೇ ಇಲ್ದೇ ಶಾಂತವಾಗಿತ್ತು ಮುಖ. ವಾಂತಿ ಆಗ್ಲಿ, ಬ್ಲೀಡಿಂಗ್ ಆಗ್ಲಿ ಉಹುಂ… ಹಿ ವಾಸ್ ಫ್ರೆಷ್ ಅಂಡ್ ಹಿ ವಾಸ್ ಗಾನ್…’ ಮಾತಿನ ಓಘಕ್ಕೆ ತಡೆ ಬಿದ್ದಿತು. ಕೆಲ ನಿಮಿಷಗಳ ನಂತರ ಕಡೆಯದಾಗಿ ಎಲ್ಲರಿಗೂ ಕೇಳುವ ಹಾಗೆ ಅವರನ್ನೂ ಕೇಳಿದೆ ’ಅವರಿಂದ ಕಲಿತಿದ್ದು…?’ ’ಅಫ್ ಕೋರ್ಸ್ ತುಂಬಾ…ಅವ್ರು ಆಗಾಗ ನನ್ನನ್ನ ಬಾರಯ್ಯ ಡಾಕ್ಟ್ರೆ ಫಿಶಿಂಗ್ ಮಾಡ್ಕೊಂಡ್ ಬರೋಣ ಅಂತ ಕರೀತಿದ್ರು. ಆದ್ರೆ ನಾನು ಪೇಷೆಂಟ್ಸ್ ಬಿಟ್ಟು ಹೋಗೋಕ್ಕಾಗ್ತಿರ್ಲಿಲ್ಲ. ಅದಕ್ಕೆ ಅವ್ರು ’ಏನಯ್ಯ ಯಾವಾಗ್ ನೋಡಿದ್ರು ಪೇಷಂಟ್ಸು, ಕ್ಲಿನಿಕ್ಕು ಅಂತೀಯ…ಸ್ವಲ್ಪ ನಿನ್ ಲೈಫು ಬದುಕಯ್ಯ…’ ಅಂತ ಹೇಳ್ತಿದ್ರು. ನನಗೆ ಆಗ ಅದೆಲ್ಲ ಅಷ್ಟು ಇಂಪಾರ್ಟೆಂಟ್ ಅನ್ನಿಸ್ತಿರ್ಲಿಲ್ಲ. ಆದ್ರೆ ಈಗ ಐಯಾಮ್ 62…ಈಗನ್ಸುತ್ತೆ ‘ಲೈಫ್ ಎಂಜಾಯ್ ಮಾಡ್ಲಿಲ್ಲ’ ಅಂತ. ಆಗೆಲ್ಲ ಅವ್ರ ಮಾತು ನೆನಪಾಗುತ್ತೆ. ಅದಕ್ಕೆ ಈಗ ನಮ್ದೆ ಒಂದು ಟೀಮ್ ಇದೆ. ಆಗಾಗ ಟ್ರೆಕ್ಕಿಂಗು, ಟೂರು ಅಂತ ಹೋಗ್ತಾ ಇರ್ತೀವಿ. ಲಾಸ್ಟ್ ಟೈಂ ದಾಂಡೇಲಿಗೆ ಹೋಗಿದ್ವೆ. ಅಲ್ಲಿಮರದ ಮೇಲೆ ಒಂದು ಹಾರುವ ಹಲ್ಲಿ ತರದ್ದು ನೋಡಿದ್ವಿ. ಆಗಂತು ತೇಜಸ್ವಿ ತುಂಬಾ ನೆನಪಾಗ್ಬಿಟ್ರು. ಇದರ ಬಗ್ಗೆ ಎಲ್ಲಾ ಹುಡುಕ್ಕೊಂಡ್ ಹೋಗಿ ಬರದ್ರಲ್ಲ….ಅಂತ… ಹಾಗೆ…ಹಹ…’ ಡಾಕ್ಟರರ ಮಾತಿಗೆ ಪೂರ್ಣವಿರಾಮ ಬಿತ್ತು. ಸಮಯ ರಾತ್ರಿ ೯ ಗಂಟೆ. ಡಾಕ್ಟರ್ ತೇಜಸ್ವಿಯವರ ಜತೆ ತೆಗೆಸಿಕೊಂಡ ಅಪರೂಪದ ಫೋಟೋಗಳನ್ನು ತೋರಿಸಿ ಅದರಲ್ಲಿ ಒಂದನ್ನು ನಮಗೆ ಕೊಟ್ಟರು. ‘ನೆಕ್ಸ್ಟ್ ಪೆರ್ಸನ್ ಹತ್ರ ಹೋಗೋಕೆ ಪ್ಯಾಕ್ ಅಪ್ ಮಾಡ್ಕೊಳಿ’ ಅಂತ ಹೇಳಬೇಕು ಎಂದು ತಿರುಗಿ ನೋಡಿದರೆ ನಮ್ಮ ಹುಡುಗರು ಆಗಲೇ ಎಲ್ಲವನ್ನೂ ಪ್ಯಾಕ್ ಮಾಡಿ ಹೊರಡಲು ಸಿದ್ದರಾಗಿ ನಿಂತಿದ್ದರು. ‘ಮೈ ಗಾಡ್’ ಎಂದು ಮನಸ್ಸಿನಲ್ಲಿಯೇ ಅಂದುಕೊಡು ಡಾಕ್ಟರಿಗೆ ಧನ್ಯವಾದ ಹೇಳಿ ಹೊರಟೆವು. ಡಾಕ್ಟರ್ ಮುಚ್ಚಿದ ಬಾಗಿಲನ್ನು ತೆರೆದು ನಗುತ್ತಾ ನಮ್ಮನ್ನು ಬೀಳ್ಕೊಟ್ಟರು.
ನಾವು ಕ್ಲಿನಿಕ್ಕಿನಿಂದ ಹೊರಬಂದಾಗ ಬೆಳಿಗ್ಗೆ ಸಿಕ್ಕಿದ್ದಟಿವಿ ಅಂಗಡಿ ಸುರೇಂದ್ರರವರು ಮುಕ್ಕಾಲು ಪ್ಯಾಂಟು, ಕರಿ ಬಣ್ಣದ ಜರ್ಕಿನ್ನು, ಮಂಕಿ ಕ್ಯಾಪ್ ಹಾಕಿಕೊಂಡು ಕ್ಲಿನಿಕ್ಕಿನ ಮುಂದೆ ಹೋಗುತ್ತಿದ್ದವರು ನಮ್ಮನ್ನು ನೋಡಿ ’ಇನ್ನೂ ಮುಗಿದಿಲ್ವ ನಿಮ್ಮ ಕಥೆ’ ಎಂದು ಆಶ್ಚರ್ಯವ್ಯಕ್ತಪಡಿಸಿದರು. ’ಲಾಸ್ಟ್ ಇನ್ನೊಬ್ರಿದಾರೆ. ಈಗ ಅಲ್ಲಿಗೆ ಹೋಗ್ತಿರೋದು. ನೀವ್ ಬಂದಿದ್ದು ಒಳ್ಳೆದೇ ಆಯ್ತು. ಭಟ್ರು ಅಂಗಡಿ ಎಲ್ಲಿರೋದು ಸರ್’ ಎಂದು ಅವರನ್ನು ಕೇಳಿದೆ. ’ನಶ್ಯ ಅಂಗಡಿ ಭಟ್ರ…? ಬನ್ನಿ ಪಕ್ಕದ್ ರೋಡು ತೋರಿಸ್ತಿನಿ. ಕಾರೇನು ಬೇಡ ನಡ್ಕೊಂಡೆ ಹೋಗ್ಬಹುದು ಬನ್ನಿ’ ಎಂದು ನಮ್ಮನ್ನೆಲ್ಲಾ ಜೊತೆಗೆ ಕರೆದುಕೊಂಡು ಹೊರಟರು. ಐದೇ ನಿಮಿಷದಲ್ಲಿ ’ಚೈತನ್ಯ ಸ್ಟೋರ್ಸ್’ ಎಂದು ಹೆಸರಿದ್ದ ಪ್ರಾವಿಷನ್ ಸ್ಟೋರ್ ಮುಂದೆ ನಿಂತಿದ್ದೆವು. ಅಂಗಡಿಯ ಒಳಗೆ ಸುಮಾರು 60 ವಯಸ್ಸಿನ ಹಳೆಯ ಸಿನಿಮಾದ ಬೆಂಗಳೂರು ನಾಗೇಶರನ್ನು ನೆನಪಿಸುವ ಕನ್ನಡಕಧಾರಿ ವ್ಯಕ್ತಿಯೊಬ್ಬರು ಅಂಗಡಿಯ ಕೆಲಸದಲ್ಲಿ ಮುಳುಗಿದ್ದರು. ನಾನವರಿಗೆ ಮೊದಲೇ ಫೋನ್ ಮಾಡಿ ರಾತ್ರಿ ಬರುತ್ತೇವೆಂದು ಹೇಳಿ ವಿಷಯ ತಿಳಿಸಿದ್ದೆ. ಹಾಗಾಗಿ ಭಟ್ಟರ ಆತ್ಮೀಯ ನಗು ನಮ್ಮನ್ನು ಸ್ವಾಗತಿಸಿತು. ಆದರೂ ಸುರೇಂದ್ರರವರು ನಮ್ಮನ್ನು ಅರ್ಧ ಮೂಡಿಗೆರೆಗೆ ಕೇಳುವ ಹಾಗೆ ದನಿ ಎತ್ತರಿಸಿ ನಮ್ಮನ್ನುಅವರಿಗೆ ಪರಿಚಯಿಸಿದರು. ಭಟ್ರು ಮತೊಮ್ಮೆ ನಕ್ಕರು. ಸಮಯ ಮೀರಿದ್ದರಿಂದ ಪೀಠಿಕೆ ಹಾಕದೇ ನೇರ ವಿಷಯಕ್ಕೆ ಅವರನ್ನು ಆಹ್ವಾನಿಸಿದೆ. ಭಟ್ಟರು ಹಳೆಯ ನೆನಪುಗಳನ್ನು ಬಿಚ್ಚಿಡುತ್ತಾ ಹೋದರು.
’ನಮ್ದು ಅವ್ರ್ದು ಸುಮಾರು 35 ವರ್ಷ ವಿಶ್ವಾಸ. 82ರಲ್ಲಿಇಲ್ಲಿ ಅಂಗಡಿ ಹಾಕಿದ್ದು. ಆಗಿಂದ್ಲೂ ಅವ್ರು ನಮ್ ಅಂಗಡಿಗೆ ಬಂದು ಹೋಗಿ ಮಾಡ್ತಿದ್ರು. ಪೇಟೆಗೆ ಬಂದಾಗ ಒಂದು ವಿಸಿಟ್ ಇದ್ದೇ ಇರ್ತಿತ್ತು. ವಾರಕ್ಕೆ ಎರಡ್ ಸಲ ಅಂತು ತಪ್ಪದೇ ಬರ್ತಿದ್ರು’ ಎಂದು ಮಾತು ಪ್ರಾರಂಭಿಸಿದರು. ’ಮೊದಲ ಪರಿಚಯ ಆಗಿದ್ದು ಹೇಗೆ?’ ನಾನು ಕೇಳಿದೆ. ’ಅವ್ರ ತೋಟದಲ್ಲಿ ಬಾಳೆಕಾಯಿ ಬೆಳೀತಿದ್ರು. ಆಗ ನಮ್ ಅಂಗಡಿಗೆ ಬಾಳೆಕಾಯಿ ತಗೋತೀರ ಅಂತ ಕೇಳ್ಕೊಂಡ್ ಬಂದ್ರು. ನಾನು ಹೂಂ ಅಂದೆ. ಅವಾಗಿಂದ ನಮ್ಮ ಅವ್ರವಿಶ್ವಾಸ ಶುರು. ’ಅವ್ರೇ ಬಾಳೆಕಾಯಿ ತಂದುಕೊಡ್ತಿದ್ರ?’ ಎಂದು ಹೇಮಂತ ಪ್ರಶ್ನಿಸಿದ. ’ಅವ್ರ ಮನೇಲಿ ಪ್ಯಾರ ಅಂತ ಒಬ್ಬ ಇದ್ದ. ಅವ್ನ್ ಹತ್ರ ಕೊಟ್ ಕಳಿಸ್ತಿದ್ರು’ ಎಂದು ಭಟ್ಟರು ಹೇಳಿ ಮುಗಿಸುವುದೇ ತಡ ಹೇಮಂತ ಯಾರು ಕರ್ವಾಲೋ, ಪರಿಸರದ ಕಥೇಲಿ ಬರ್ತಾನಲ್ಲ ಆ ಪ್ಯಾರನ?’ ಎಂದು ಕೇಳಿದ. ಅದಕ್ಕವರು ’ಅದೇನೊ ನಂಗೊತ್ತಿಲ್ಲ. ಅವ್ರ ತೋಟದಲ್ಲಿ ಒಬ್ಬ ಪ್ಯಾರ ಅಂತ ಹುಡುಗ ಕೆಲ್ಸ ಮಾಡ್ತಿದ್ದ. ಅವ್ನು ಬರ್ತಿದ್ದ ಅಷ್ಟೆ’ ಎಂದುತ್ತರಿಸಿದರು. (ಕೂಡಲೇ ನನಗೂ ಹೇಮಂತನಿಗೂ ಪರಿಸರದ ಕಥೆಯಲ್ಲಿ ಓತಿಕ್ಯಾತದಿಂದ ತಪ್ಪಿಸಿಕೊಳ್ಳಲು ಬಯಲಲ್ಲಿ ಬೆತ್ತಲಾಗಿ ಓಡುವ ಪ್ಯಾರನ ನೆನಪಾಯಿತು) ಭಟ್ರು ಮುಂದುವರೆಸಿದರು ’ಆದ್ರೆ ಮಾತು ಮಾತ್ರ ಕಡ್ಡಿ ಎರಡು ತುಂಡು ಮಾಡಿದ ಹಾಗೆ, ವ್ಯವಹಾರದಲ್ಲಾಗಲಿ, ವಿಶ್ವಾಸದಲ್ಲಾಗಲಿ ಸುತ್ತಿ ಬಳಸಿ ಮಾತಾಡೊ ಜಾಯಮಾನನೇ ಅಲ್ಲ. ನಮ್ಮಲ್ಲಿ ಅಕೌಂಟ್ ಇಟ್ಟಿದ್ರು. ಅಡಿಕೆ ಪುಡಿ, ತಂಬಾಕು, ಅವಾಗವಾಗ ಮನೆಗೆ ಬಿಸ್ಕೆಟ್ಟು ತಗೊಳ್ತಿದ್ರು. ‘ಸಾವಿರ ರೂಪಾಯಿ ಆದ ಕೂಡ್ಲೇ ಹೇಳಿ ಬಿಡ್ಬೇಕು’ ಅಂತ ಹೇಳಿದ್ರು. ನಾನು ಹಾಗೆ ಸಾವಿರ ರೂಪಾಯಿ ಆಯ್ತು ಅಂದ ಕೂಡಲೇ ಹೇಳ್ತಿದ್ದೆ. ಅವ್ರು ‘ಯಾಕೆ ಇಷ್ಟಾಯ್ತು ಏನೂ?’ ಅಂತ ಒಂದ್ ಮಾತು ಕೇಳ್ದೆ ‘ಹೌದಾ?’ಅಂತ ಜೇಬಿಂದ ಸಾವಿರ ರೂಪಾಯಿ ತೆಗೆದು ಕೊಟ್ ಬಿಡ್ತಿದ್ರು. ಅಮೇಲೆ ಹೆದರ್ಸೊರು ’ಸಾವಿರ ರೂಪಾಯಿಗಿಂತ ಜಾಸ್ತಿ ಆದ್ರೆ ಕೊಡಲ್ಲ’ ಅಂತ.
ಆದ್ರೆ ಸಾವಿರದ ಐದುನೂರು ಆದಾಗಲು ಕೊಟ್ಟಿದ್ದಾರೆ. ಸಾವಿರಕ್ಕಿಂತಲೂ ಜಾಸ್ತಿ ಆದಾಗ ಹೇಳಿದ್ರೆ ’ಏನ್ರಿ ನೀವು, ಬುದ್ದಿ ಇದ್ಯ? ಮೊದ್ಲೇ ಹೇಳೋದು ಬಿಟ್ಟು….’ ಅಂತ ಕೈಯಲ್ಲ ತೋರಿಸಿಕೊಂಡು ಜೋರ್ ದನೀಲಿ ರೇಗ್ತಿದ್ರು. ಯಾರಾದ್ರು ಹೊರಗಡೆಯವರು ನೋಡಿದ್ರೆ ಏನೋ ದೊಡ್ಡ ಜಗಳ, ಹೊಡೆದಾಟ ಆಗ್ತಾಉಂಟು ಅಂತಲೇ ತಿಳ್ಕೊಬೇಕಿತ್ತು ಹಾಗೆ ಇರ್ತಿತ್ತು ಅವ್ರ ಮಾತು. ಆದ್ರೆ ಅದು ತಮಾಷೆಗೆ ಹಾಗೆ ಹೇಳ್ತಿದದ್ದು ಅವ್ರು. ಜೋರ್ ಮಳೆ ಬಂದ್ರೆ ಒಳಗಡೆ ಬಂದು ಇಲ್ಲೇ ಮಾತಡ್ತಾ ಕೂರ್ತಿದ್ರು’ ಎಂದು ತೇಜಸ್ವಿ ಅಂಗಡಿಯ ಒಳಗಡೆ ಕೂರುತ್ತಿದ್ದ ಜಾಗ ತೋರಿಸಿದರು. ಊರಲ್ಲಿರೊ ಅಂಗಡಿನೆಲ್ಲಾ ಬಿಟ್ಟು ನಿಮ್ಮ ಅಂಗಡಿಗೆ ಬರ್ತಿದ್ರಲ್ಲ ಅಂತ ಸ್ಪೆಷಲ್ ಏನು ಸಾರ್ ನಿಮ್ ಅಂಗಡೀಲಿ? ನಾನು ಕೇಳಿದೆ. ಭಟ್ರು ಜೋರಾಗಿ ನಗುತ್ತಾ ’ಅದೇನೋ ನನಗೆ ಗೊತ್ತಿಲ್ಲ. ಬರ್ತಿದ್ರು. ವಿಶ್ವಾಸದಿಂದ ಮಾತಾಡ್ತಿದ್ರು. ನಾವು ಮದ್ರಾಸಿನಿಂದ ಸ್ಪೆಷಲ್ ಅಡಿಕೆ ಪುಡಿ ತರಿಸ್ತೀವಿ. ಅದು ಅವ್ರಿಗೆ ತುಂಬಾ ಇಷ್ಟ. ಅರ್ಧ ಕೆಜಿ, ಒಂದ್ ಕೆಜಿ ಹೀಗೆ ತಗೊಳ್ತಿದ್ರು. ಮೀನ್ ಹಿಡಿಯಕ್ ಹೋದಾಗ ಬಾಯಲ್ಲಿ ಹಾಕ್ಕೊಳ್ಳಕ್ ಏನಾದ್ರು ಬೇಕು ಅಂತಿದ್ರು’ ಎಂದು ನಗು ಮುಂದುವರೆಸಿದರು.
’ಅಂಗಡಿಗೆ ಬಂದಾಗ ಯಾವ ವಿಷಯದ ಬಗ್ಗೆ ಜಾಸ್ತಿ ಮಾತಾಡ್ತಿದ್ರು?’ ಹೇಮಂತ ಕೇಳಿದ. ’ಅದು ಇದು ಅಂತಿಲ್ಲ. ಮೂಡ್ ಚೆನ್ನಾಗಿದ್ರೆ ತುಂಬಾ ಮಾತಾಡೋರು. ಇಲ್ಲಾಂದ್ರೆ ’ಬರ್ತೀನಿ ಕಣ್ರಿ’ ಅಂತೇಳಿ ಹೋಗೆ ಬಿಡ್ತಿದ್ರು’ ಎಂದರು. ತೇಜಸ್ವಿಯವರಿಗೆ ಪ್ರಶಸ್ತಿ, ಪುರಸ್ಕಾರಗಳ ಬಗ್ಗೆ ಇದ್ದ ನಿರ್ಮೋಹದ ಬಗ್ಗೆ ಮುಂದೆ ಅವರ ಹತ್ತಿರದ ಒಡನಾಡಿಗಳು ಹೇಳಿದ ವಿಷಯಗಳನ್ನು ಮುಂದೆ ದಾಖಲಿಸುತ್ತೇನೆ. ಆದರೆ ಭಟ್ರು ಹೇಳಿದ ಮುಂದಿನ ಘಟನೆ ಅದರ ಒಂದು ಸ್ಯಾಂಪಲ್ ನಂತಿದೆ. ಓವರ್ ಟು ಭಟ್ರು ’ಒಂದ್ಸಲ ಅವ್ರಿಗೆ ಯಾವ್ದೊ ಅವಾರ್ಡ್ ಬಂದಿದ್ದಂತೆ. ಅದರ ಜೊತೆ 200 ಗ್ರಾಂ ಬಂಗಾರದ ಪದಕ ಕೊಟ್ಟಿದ್ರು. ಇವ್ರು ಅದನ್ನ ಜೇಬಿನಲ್ಲಿ ಹಾಕ್ಕೊಂಡ್ ನೇರ ನಮ್ ಅಂಗಡಿಗೆ ಬಂದು ನನ್ ಕೈಯಲ್ಲಿ ಕೊಟ್ಟು ’ರೀ ಭಟ್ರೆ ಇದು ಎಷ್ಟ್ ಗ್ರಾಂ ಇದೆ ನೋಡ್ರಿ ಅಂದ್ರು. ನಾನು ನಮ್ಮಂಗಡಿ ತಕ್ಕಡೀಲಿ ತೂಕ ಮಾಡಿ 200 ಗ್ರಾಂ ಅಂದೆ. ತಗೊಂಡ್ ಕೈಯಲ್ಲಿ ಹಿಡ್ಕೊಂಡು ’ನೋಡ್ರಿ ಏಷ್ಟೋ ಜನ ಸಾಹಿತಿಗಳಿಗೆ ಊಟಕ್ಕೂ ತೊಂದ್ರೆ ಇರುತ್ತೆ. ಅವ್ರೆಲ್ಲ ಹೀಗೆ ಪ್ರಶಸ್ತಿ ಅಂತ ಬಂದ ಚಿನ್ನನೆಲ್ಲಾ ಮಾರಿ ತಿನ್ನೊ ಪರಿಸ್ಥಿತಿ ಇದೆ. ನಮ್ ರೈಟರ್ಸ್ ಉದ್ದಾರ ಅಗೋದ್ ಯಾವಾಗ್ರಿ?’ ಅಂತ ಯೋಚ್ನೆ ಮಾಡ್ತಿದ್ರು’ ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂದರು. (ನಮ್ಮಲ್ಲಿ ಸಾಹಿತಿಗಳು ಅಂತಲ್ಲ ಬಹುಪಾಲು ಯಾವ ರಂಗದವರೇ ಆಗಲಿ ಪ್ರಶಸ್ತಿ, ಪುರಸ್ಕಾರ ಅಂತ ಬಂದರೆ ಅದನ್ನು ಚೆನ್ನಾಗಿ ಫ್ರೇಮ್ ಹಾಕಿಸಿ, ಮೆಡಲ್ ಬಂದ್ರೆ ಮನೆಗೆ ಬಂದವರಿಗೆ ಮಾತ್ರ ಅಲ್ಲ ಸಾಧ್ಯವಾದರೆ ಹೊರಗೆ ಓಡಾಡುವವರಿಗೂ ಕಾಣುವ ಹಾಗೆ ತೂಗು ಹಾಕಿ ಪ್ರದರ್ಶಿಸುವ ಜನಗಳ ಮಧ್ಯೆ ತೇಜಸ್ವಿಯವರು ತಮಗೆ ಬಂದ ಚಿನ್ನದ ಪದಕವನ್ನು ತಗಡಿನ ತುಂಡು ಎಂಬಂತೆ ಜೇಬಿನಲ್ಲಿ ಹಾಕಿಕೊಂಡು ಹೋಗಿ ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯನೆನ್ನಬಹುದಾದ ವ್ಯಕ್ತಿಯ ಕೈಯಲ್ಲಿ ಕೊಟ್ಟು ಅದರ ಬಗ್ಗೆ ಚರ್ಚಿಸುವ ಇಂತಹ ಅಪರೂಪದ ನಡೆಗಳಿಂದಲೇ ಇರಬೇಕು ಲಕ್ಷಾಂತರ ಕನ್ನಡ ಮನಸ್ಸುಗಳು ಅವರನ್ನು ರೋಲ್ ಮಾಡೆಲ್ ಎಂದು ಭಾವಿಸುವುದು)
ಭಟ್ಟರು ಮುಂದುವರೆಸಿದರು, ’ನಮ್ಮೂರು ಮೂಡುಬಿದರೆ. ಒಂದ್ಸಾರಿ ನಮ್ಮೂರಿಂದ ನನ್ ಸಂಬಂಧಿಕರು ಇಲ್ಲಿಗೆ ಬಂದಿದ್ರು. ಅದೇ ಟೈಮಿಗೆ ಸರಿಯಾಗಿ ತೇಜಸ್ವಿಯವ್ರೂ ಬಂದ್ರು. ಅವ್ರು ಬಂದು ನನ್ನತ್ರ ಮಾತಾಡಿ ಎದ್ದು ಹೋಗಿ ಆದ್ಮೇಲೆ ನನ್ ಸಂಬಂಧಿಕರು ಕೇಳಿದ್ರು ’ಯಾರವ್ರು?’ ಅಂತ. ನಾನ್ ಹೇಳ್ದೆ ’ತೇಜಸ್ವಿ, ಪೂರ್ಣಚಂದ್ರ ತೇಜಸ್ವಿ’ ಅಂತ. ಅವ್ರು ದಿಢೀರ್ ಅಂತ ಶಾಕ್ ಆದವ್ರ ಹಾಗೆ ’ಪೂರ್ಣಚಂದ್ರ ತೇಜಸ್ವಿಯವ್ರ? ರಾಷ್ಟ್ರಕವಿ ಕುವೆಂಪು ಅವ್ರ ಮಗ? ಅವ್ರು ನಿಮ್ ಅಂಗಡಿಗೆ ಬರ್ತಾರ? ಸುಮ್ ಸುಮ್ನೆ ಸುಳ್ಳು ಯಾಕೆ ಹೇಳ್ತಿರಿ? ಅಂದ್ರು. ನಾನು ’ಇಲ್ಲ ಇವರೇ ಪೂರ್ಣಚಂದ್ರ ತೇಜಸ್ವಿ. ಅವ್ರಿರೋದೆ ಹಾಗೆ’ ಅಂತ ಹೇಳಿದೆ. ಮರುದಿನ ಅವ್ರು ಬಂದಾಗ ಕೇಳಿ ಖಚಿತಪಡಿಸಿಕೊಂಡ್ಮೇಲೆ ಅವ್ರು ನಂಬಿದ್ದು’ ಎಂದು ಹೇಳಿ ರಾತ್ರಿಯಾಗಿದೆ ಎಂಬುದನ್ನು ಮರೆತು ರಸ್ತೆಯಲ್ಲಿ ಹೋಗುವವರಿಗೆಲ್ಲಾ ಕೇಳುವ ಹಾಗೆ ಗಟ್ಟಿಯಾಗಿ ನಕ್ಕರು. ನಾವು ಅವರ ನಗೆಯೊಟ್ಟಿಗೆ ಕೋರಸ್ ಕೊಟ್ಟೆವು.
ಸಮಯ ನೋಡಿಕೊಂಡೆ. ರಾತ್ರಿ ಹತ್ತು ಗಂಟೆ ತೋರಿಸುತ್ತಿತ್ತು. ಚಿತ್ರೀಕರಣ ನಡೆಯುವ ಮಧ್ಯದಲ್ಲೇ ಭಟ್ಟರಿಗೆ ಅವರ ಮನೆಯಿಂದ ಎಂದು ಕಾಣುತ್ತದೆ ಮೂರ್ನಾಲ್ಕು ಸಲ ಫೋನ್ ಬಂದಿತ್ತು. ಈಗ ಮತ್ತೊಮ್ಮೆ ಕರೆ ಬಂದಾಗ ಭಟ್ಟರು ಅಂಗಡಿ ಮುಚ್ಚಿ ಮನೆಗೆ ಹೊರಡುವ ಆತುರ ತೋರಿದರು. ಅಷ್ಟರಲ್ಲಾಗಲೇ ಸಾಕ್ಷ್ಯಚಿತ್ರಕ್ಕೆ ಬೇಕಾದಷ್ಟು ವಿಷಯ, ಮಾಹಿತಿ ನಮಗೆ ಸಿಕ್ಕಿತ್ತು. ಹಾಗಾಗಿ ಭಟ್ಟರಿಗೆ ಧನ್ಯವಾದ ತಿಳಿಸಿ ಅಂದಿನ ದಿನದ ಚಿತ್ರೀಕರಣಕ್ಕೆ ಪ್ಯಾಕ್ ಅಪ್ ಹೇಳಿದೆ. ನಮ್ಮ ಹುಡುಗರೂ ಬೆಳಿಗ್ಗಿನಿಂದ ಸುತ್ತಿ ಸುತ್ತಿ ಹಣ್ಣಾಗಿದ್ದರು. ಟಿವಿ ಅಂಗಡಿ ಸುರೇಂದ್ರ ಅಲ್ಲೇ ಕಟ್ಟೆಯೊಂದರ ಮೇಲೆ ನಮ್ಮ ಕಡೆ ನೋಡುತ್ತಿರುವಂತೆ ಮುಖ ಮಾಡಿ ಕುಳಿತು ಸಣ್ಣಗೆ ತೂಕುಡಿಸುತ್ತಿದ್ದರು. ನಿತಿನ್ ಅವರಿಗೆ ’ಸಾರ್ ಶೂಟಿಂಗ್ ಮುಗೀತು ಬನ್ನಿ ಹೋಗೋಣ’ ಎಂದು ಎಬ್ಬಿಸಿ ಕರೆದುಕೊಂಡು ಬಂದ. ಸುರೇಂದ್ರರನ್ನು ಅವರ ಮನೆಗೆ ಡ್ರಾಪ್ ಮಾಡಿ ಐಬಿಗೆ ಹೋಗದೆಮೂಡಿಗೆರೆಯಿಂದ ಸುಮಾರು ನಾಲ್ಕು ಕಿಲೋ ಮೀಟರ್ ದೂರದ ಬಿದರಳ್ಳಿ ಕಡೆ ಹೊರಟೆವು. ಬಿದರಳ್ಳಿ ಗೆಳೆಯ ಧನಂಜಯ್ ಜೀವಾಳರ ಊರು. ಅವರು ಮಧ್ಯಾಹ್ನವೇ ಫೋನ್ ಮಾಡಿ ರಾತ್ರಿ ಊಟಕ್ಕೆ ಮನೆಗೆ ಬರುವಂತೆ ಆಹ್ವಾನಿಸಿದ್ದರು. ಹಾಗಾಗಿ ರಾತ್ರಿ ಹತ್ತು ಮೂವತ್ತರ ಸುಮಾರಿಗೆ ಕಾಡಿನ ಮಧ್ಯದ ಅವರ ತೋಟ ತಲುಪಿದೆವು. ರಾತ್ರಿ 8 ಗಂಟೆಯಿಂದ ಧನಂಜಯ್ ’ಎಲ್ಲಿದ್ದೀರಿ? ಬೇಗ ಬನ್ನಿ…’ ಎಂದು ಹೇಳಿ ಹೇಳಿ ವಿಚಾರಿಸುತ್ತಿದ್ದರು.
ನಾವು ಅರ್ಧ ಗಂಟೆ, ಕಾಲು ಗಂಟೆ, ಹತ್ತು ನಿಮಿಷ ಅಂತೆಲ್ಲಾ ಹೇಳಿ ಸರಿರಾತ್ರಿ ಅವರ ತೋಟದ ಮನೆ ತಲುಪಿದೆವು. ‘ಅಂತು ಬಂದ್ರಲ್ಲ ಬನ್ನಿ’ ಎನ್ನುತ್ತಾನಮ್ಮನ್ನು ಸ್ವಾಗತಿಸಿದರು ಧನಂಜಯ್. ಅರ್ಧ ಗಂಟೆ ಚಿತ್ರೀಕರಣದ ಬಗ್ಗೆ, ಭೇಟಿಯಾದ ವ್ಯಕ್ತಿಗಳ ಬಗ್ಗೆ ಮಾತನಾಡುತ್ತಾ ಕುಳಿತಿದ್ದವರು ನಿದ್ರೆ ತಡೆಯಲು ಅಸಾಧ್ಯವೆನ್ನಿಸಿದಾಗ ಊಟಕ್ಕೆ ಹೋದೆವು. ಊಟದ ಮೆನು ನನಗೂ, ಹೇಮಂತನಿಗೂ, ನಿತಿನ್ ಗೂ ಅಪ್ಯಾಯಮಾನವಾದದ್ದಾಗಿದ್ದರೆ ದರ್ಶನ್ ಮಾತ್ರಸಪ್ಪೆ ಮೋರೆ ಹಾಕಿಕೊಂಡು ಕುಳಿತಿದ್ದರು. ’ಯಾಕ್ರಿ ಅವ್ರು ಹಾಗ್ ಕೂತಿದ್ದಾರೆ?’ ಎಂದು ಧನಂಜಯ್ ಕೇಳಿದಾಗ ನಿತಿನ್ ’ಸಾರ್ ಅವ್ರು ನಾನ್ವೆಜ್ ತಿನ್ನಲ್ಲ, ಅದಕ್ಕೆ’ ಎಂದು ಕಿಸಕ್ಕನೆ ನಕ್ಕ. ಅಯ್ಯೊ ಅದಕ್ಕೇನಂತೆ ಅನ್ನ ಸಾಂಬಾರು, ಮೊಸರನ್ನ, ಸ್ವೀಟ್ಸು ಎಲ್ಲಾ ಇದೆ…ಬನ್ನಿ ಬನ್ನಿ’ ಎಂದು ಎಲ್ಲರನ್ನೂ ಒಟ್ಟಿಗೆ ಕೂರಿಸಿ ಊಟ ಹಾಕಿಸಿದರು. ಮಳೆ ಅಥವ ಚಳಿಗಾಲದಲ್ಲಿಪೋರ್ಕ್, ಅಕ್ಕಿರೊಟ್ಟಿ ಅದರ ಕಾಂಬಿನೇಷನ್ನೇ ಕಾಂಬಿನೇಷನ್ನು. ಪಟ್ಟಾಗಿ ತಿಂದು ಹೊರಡುವಾಗ ’ಸಾರ್ ನಾಳೆ ನಿಮ್ದೇ ಶೂಟ್. ಏಳು ಗಂಟೆಗೆಲ್ಲಾ ಸಿಕ್ರೆ ಚೆನ್ನಾಗಿರುತ್ತೆ…’ ಎಂದು ಅವರಿಗೆ ನಾಳೆಯ ಚಿತ್ರೀಕರಣದ ವಿವರಗಳನ್ನು ತಿಳಿಸಿ ಅವರ ತೋಟದಿಂದ ಹೊರಟು ನೇರ ಮೂಡಿಗೆರೆಯ ಐಬಿಗೆ ಬಂದೆವು. ನಾಳೆಗೆ ಆಗಬೇಕಾಗಿದ್ದ ತಯಾರಿಗಳನ್ನು ಮಾಡಿ ಹಾಸಿಗೆ ಮೇಲೆ ಉರುಳಿದೊಂದೆ ನೆನಪು. ಬೆಳಿಗ್ಗೆ 6ರವರೆಗೂ ಜಗತ್ತಿಗೂ ನಮಗೂ ಸಂಬಂಧವೇ ಇರಲಿಲ್ಲ.
(ಮುಂದುವರೆಯುವುದು….)

‍ಲೇಖಕರು avadhi

September 15, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. pranav.k.r

    Doctor jothe avru tegskondiro photo onde saaku,avru estondu simple aagi baduktidru anodke…..

    ಪ್ರತಿಕ್ರಿಯೆ
  2. Somashekhar

    ‘ತೇಜಸ್ವಿಯನ್ನು ಹುಡುಕುತ್ತಾ ‘ ಸರಣಿಯ latest ಲೇಖನ ನೋಡಿ ಈ ಪ್ರತಿಕ್ರಿಯೆ. ತೇಜಸ್ವಿಯವರ ಅತ್ಯುಗ್ರ ಅಭಿಮಾನಿಯಂತೆ ಕಾಣುವ ಲೇಖಕರು , ಈ ಬರಹದ ಮೂಲಕ ತೇಜಸ್ವಿಯವರ positive ಮತ್ತು negative ಎರಡೂ ಮಗ್ಗಲುಗಳನ್ನು ನೋಡವ ದಿಕ್ಕಿನಲ್ಲಿ ಯತ್ನಿಸಿದ್ದರೆ ಮೆಚ್ಚಬಹುದಿತ್ತು . ಆದರೆ ಆ ಉದ್ದೇಶವೇ ಲೇಖಕರಿಗೆ ಇದ್ದಂತಿಲ್ಲ. ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ‘ಏಯ್ ಹಜಾಮ’ ಎಂದು ಕರೆದದ್ದು ತೆಜಸ್ವಿಯವರಲ್ಲದೆ ಭೈರಪ್ಪನಾಗಿದ್ದರೆ ಓದುಗರ ಪ್ರತಿಕ್ರಿಯೆ ಏನಾಗುತ್ತಿತ್ತು ಎಂದು ಊಹಿಸುವುದು ಕಷ್ಟವಲ್ಲ. ಇದು ತೇಜಸ್ವಿಯವರ ವ್ಯಕ್ತಿತ್ವದ ಹೆಚ್ಚುಗಾರಿಕೆಯನ್ನು ತೋರಿದರೂ ಅವರು ಹಾಗೆನ್ದಿದ್ದು ಸರಿಯೇ. ‘ಏಯ್ ಹಜಾಮ ‘ ಎನ್ನುವ ಜಾಗದಲ್ಲಿ ‘ಏಯ್ ಹೊಲೆಯ’ ಎನ್ನುವುದನ್ನು ಇಟ್ಟು ನೋಡಿದರೆ ನನ್ನ ಮಾತಿನ ಅರ್ಥ ಇನ್ನೂ ಸ್ಪಷ್ಟವಾಗುವುದು. ಇಲ್ಲಿನ ಅನೇಕ ಓದುಗರು ‘ಘೋರವಾಗಿ’ ಇಷ್ಟಪಡುವ (ಇವರಲ್ಲಿ ನಾನೂ ಕೂಡ ಒಬ್ಬ) ತೇಜಸ್ವಿಯವರಾಗಲಿ ಅಥವಾ ಲಂಕೇಶರಾಗಲಿ ಇಂತಹ ಅನೇಕ ವಿಷಯಗಳಲ್ಲಿ ತುಂಬಾ insensitive ಆಗಿ ವರ್ತಿಸಿರುವುದನ್ನು ಅವರ ಬಗ್ಗೆ ಬಂದ ಅನೇಕ ಲೇಖನಗಳಲ್ಲಿ ಗಮನಿಸಬಹುದು. ಆದರೆ ಲೇಖಕರು ಇದಾವುದಕ್ಕೂ ತಲೆಕೆಡಸಿಕೊಳ್ಳದೆ ಇದೆಲ್ಲ ತೇಜಸ್ವಿಯವರ ಅಸಾಮಾನ್ಯ ಗುಣಗಳು ಎಂಬಂತೆ ಬರೆಯುವುದು ನಿರಾಸೆಯುಂಟು ಮಾಡುತ್ತದೆ. ನಾವು ಮೆಚ್ಚುವ ಲೇಖಕರು ಇನ್ನೊಂದು ಜಾತಿ/ಧರ್ಮ/ಲಿಂಗ ದ ಬಗ್ಗೆ ಬರೆಯುವಾಗ ಅಥವಾ ಮಾತನಾಡುವಾಗ ಸ್ವಲ್ಪ sensitive ಆಗಿರಬೆಂದು ಬಯಸುವುದು ತಪ್ಪೇ. ಸರಳತೆ ಮತ್ತು ಪ್ರಾಮಾಣಿಕತೆಯನ್ನು ಅತ್ಯಂತ ಸಹಜವಾಗಿ ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದ ತೇಜಸ್ವಿಯ ಬಗ್ಗೆ ಬರೆಯುವಾಗ ಅವೆರಡನ್ನು ಯಾರೂ ಪಾಲಿಸಲಾಗದಂತಹ ಮೌಲ್ಯಗಳು ಎಂಬಂತೆ ಬಿಂಬಿಸುವುದು ದುರಂತ. ಅದೂ ತಮ್ಮ ಬರಹಗಲ್ಲಲ್ಲಿ ಯಾವುದೇ ಪೂರ್ವಾಗ್ರಹಗಳಿಲ್ಲದೆ ಅತ್ಯಂತ ಆಬ್ಜೆಕ್ಟಿವ್ ಆಗಿ ಬದುಕನ್ನು ನೋಡಲೆತ್ನಿಸಿದ ತೇಜಸ್ವಿಯವರ ಬಗ್ಗೆ ಬರುತ್ತಿರುವ ಲೇಖನಗಳ ವಿಪರ್ಯಾಸ. ಇದು ಒಂದು ತರಹ ‘ಕುಬಿ ಮತ್ತು ಇಯಾಲ’ ಕಥೆಯ ಕುಬಿ ಆದಂತೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: