ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರುಣ್ ಜೋಳದಕೂಡ್ಲಿಗಿ ಕಾಲಂ : ಓಸಿ ಜಾನಪದ

ಗ್ರಾಮೀಣ ಪ್ರದೇಶಗಳನ್ನು ಹಿಂಡಿ ಹಿಪ್ಪೆ ಮಾಡುವ ಜೂಜಾಟಗಳಲ್ಲಿ ಓಸಿ ತುಂಬಾ ಪ್ರಭಾವಶಾಲಿ. ಹಳ್ಳಿಗಳಲ್ಲಿನ ಚೂರು ಪಾರು ಚಿಲ್ಲರೆ ಕಾಸುಗಳನ್ನೂ ಸಹ ಈ ಆಟ ಬಕಾಸುರನಂತೆ ಕಬಳಿಸಿಬಿಡುತ್ತದೆ. `ಓಸಿ ನಂಬಿದವನ ಮನೆ ಗುಡುಸಿ ಗುಂಡಾಂತರ’ ಎಂಬ ಗಾದೆಯೇ ಹುಟ್ಟಿಕೊಂಡಿದೆ. ಇದರ ಹಿಂದೆ ಬಿದ್ದು ಹೊಲ ಮನೆ ಕಳೆದುಕೊಂಡು ಬೀದಿಗೆ ಬಿದ್ದವರ ಕಥನಗಳು ಜನರ ಬಾಯಲ್ಲಿವೆ. ಗ್ರಾಮೀಣ ಪ್ರದೇಶದ ಹಿಂದುಳಿಯುವಿಕೆಯಲ್ಲಿ ಇಂತಹ ಜೂಜಾಟಗಳ ಪಾತ್ರ ತುಸು ಹೆಚ್ಚೇ ಇರುತ್ತದೆ. ಈ ಜೂಜಾಟಗಳಿಗೆ ಹಳ್ಳಿಯ ಜನ ದಾಸರಾಗುವುದೂ ಸಹ ಜಾಗತೀಕರಣ ಹುಟ್ಟಿಸಿದ ಹಣದ ಅನಿವಾರ್ಯತೆ ಮತ್ತು ಅದರ ಮೋಹದಿಂದ. ಆದರೆ ಈ ಜೂಜಾಟಗಳು ಹುಟ್ಟಿಸಿದ ಕಥನಗಳು ಮಾತ್ರ ಹಳ್ಳಿಗಳಲ್ಲಿ ಹೊಸ ಜಾನಪದವನ್ನೇ ಸೃಷ್ಟಿಸಿವೆ. ಇಂತಹ ಕೆಲವು ಕಥನಗಳು ಇಲ್ಲಿವೆ. ಈ ಕಥನಗಳನ್ನು ಕೇಳುತ್ತಾ ಹೋದಂತೆ ವಿನೋದವೂ ವಿಷಾದವೂ ಒಟ್ಟೊಟ್ಟಿಗೆ ಆಗುತ್ತದೆ. ಇವುಗಳು ಗ್ರಾಮೀಣ ಭಾರತದ ಹಲವು ಮುಖಗಳ ದರ್ಶನ ಮಾಡಿಸುತ್ತವೆ.
ಓಸಿ ಆಟವನ್ನು ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಾರೆ. ಮಟ್ಕಾ ಎಂಬ ಹೆಸರು ಹೆಚ್ಚು ಜನಪ್ರಿಯ. ನಂಬರ್ ಆಡುವುದು ಎಂತಲೂ, ಓಸಿ ಹೊಡಿತಾನೆ ಎಂದರೆ ಕೆಲಸ ಇಲ್ಲದೆ ಸುತ್ತುವವನೂ ಎಂತಲೂ, (ಶಾಲಾ ವಿದ್ಯಾರ್ಥಿಗಳಲ್ಲಿ) ಕ್ಲಾಸ್ ತಪ್ಪಿಸಿ ಸುತ್ತುವುದೆಂತಲೂ, ಸುಳ್ಳು ಹೇಳುವುದೆಂತಲೂ ನಾನಾರ್ಥಗಳಲ್ಲಿ ಈ ಪದ ಬಳಕೆಯಾಗುತ್ತದೆ. ಆದರೆ ಜೂಜಾಟದ ಓಸಿ ಯ ಅರ್ಥವೇ ಬೇರೆ. ಓ ಎಂದರೆ ಓಪನ್, ಅಂದರೆ ಎರಡಂಕಿಯ ಮೊದಲ ಸಂಖ್ಯೆ, ಸಿ ಎಂದರೆ ಕ್ಲೋಸ್, ಎರಡಂಕಿಯ ಎರಡನೇ ಸಂಖ್ಯೆ. ಈ ಆಟದ ನಿಯಮಗಳು ಸರಳ. ಸೊನ್ನೆಯಿಂದ ತೊಂಬತ್ತೊಂಬತ್ತು ಅಂಕೆಗಳಲ್ಲಿ ಪ್ರತಿ ದಿನ ಒಂದು ಅಂಕೆಯನ್ನು ಆರಿಸಲಾಗುತ್ತದೆ, ಹಾಗೆ ಆರಿಸಿದ ಅಂಕೆಗೆ ಯಾರು ಹಣ ಕಟ್ಟಿರುತ್ತಾರೋ ಅವರಿಗೆ ಒಂದು ರೂಪಾಯಿಗೆ ಎಪ್ಪತ್ತು ರೂಪಾಯಿಯಂತೆ ಹಣವನ್ನು ಮರಳಿಸಲಾಗುತ್ತದೆ. ಉಳಿದ 99 ಅಂಕೆಗಳಿಗೆ ಜನರು ಕಟ್ಟಿದ ಹಣ ಕಂಪನಿಯ ಪಾಲಾಗುತ್ತದೆ.
ಇದರಲ್ಲಿ ಕೇವಲ ಮೊದಲ ಸಂಖ್ಯೆಗೆ ಹಣ ಕಟ್ಟಬಹುದು. ಹೀಗೆ ಕಟ್ಟಿದರೆ ಒಂದು ರೂಪಾಯಿಗೆ ಏಳು ರೂಪಾಯಿ ಕೊಡಲಾಗುತ್ತದೆ. ಉದಾ: 2 ಓಪನ್ ಗೆ ಹಣ ಕಟ್ಟಿದರೆ 20 ರಿಂದ 29 ರ ತನಕ ಯಾವುದೇ ನಂಬರ್ ಬಂದರೂ ಅವನು ಗೆದ್ದಂತೆ. ಇದರಂತೆ ಕ್ಲೋಸ್ಗೂ ಹಣ ಕಟ್ಟಬಹುದು. ಈ ನಂಬರನ್ನು ಯಾರು ಆರಿಸುತ್ತಾರೋ ಗೊತ್ತಾಗದು. ಅದೊಂದು ನಿಗೂಢ ಸಂಗತಿ. ಈ ಬಗ್ಗೆ ನಾನಾ ಕಥೆಗಳಿವೆ. ನಿಂಗಪ್ಪನಿಗೆ ನೂರು ರೂಪಾಯಿ ಓಸಿ ಹೊಡೆಯಿತು, ಕಾಳಪ್ಪನಿಗೆ ಇನ್ನೂರು ರೂಪಾಯಿ ಓಸಿ ಹೊಡೆಯಿತೆಂದು ಗುಮಾನಿ ಪ್ರತಿ ದಿನ ಹಬ್ಬುತ್ತಿದ್ದವು. ಈ ಗುಮಾನಿಗಳು ಹಬ್ಬಿದಂತೆಲ್ಲಾ ಓಸಿ ಆಡುವವರು ಮತ್ತಷ್ಟೂ ಚುರುಕಾಗಿ ಹಿಂದಿಗಿಂತ ಈ ದಿನ ತುಸು ಹೆಚ್ಚೇ ದುಡ್ಡನ್ನು ಓಸಿಗೆ ಕಟ್ಟುತ್ತಿದ್ದರು. ಬಹುಶಃ ಹೀಗೆ ಜನರಲ್ಲಿ ಓಸಿಯ ಬಗ್ಗೆ ನಂಬಿಕೆ ಹುಟ್ಟಿಸಲೋಸುಗ ಇಂತಹ ಸುದ್ದಿಗಳನ್ನು ಹಬ್ಬಿಸುತ್ತಿದ್ದರು ಎಂದು ಕಾಣುತ್ತದೆ.
ಓಸಿ ಆಡುವವರು ಕನಸುಗಾರರು. ಕನಸಿಲ್ಲದ ದಾರಿಯಲಿ ನಡೆಯುವುದೇಗೆ? ಎನ್ನುವ ಜಾಯಮಾನದವರು. ಈ ಕನಸುಗಳ ಕರಾಮತ್ತೇ ಬೇರೆ. ರಾತ್ರಿ ಬಿದ್ದ ಕನಸುಗಳಲ್ಲಿ ಒಂದು ನಂಬರ್ ಅಡಗಿರುತ್ತದೆ ಎನ್ನುವುದು ಇವರ ನಂಬಿಕೆ. ಹೀಗಾಗಿ ರಾತ್ರಿಯ ಕನಸುಗಳನ್ನು ಜಾಗರೂಕತೆಯಿಂದ ನೆನಪಿಟ್ಟುಕೊಂಡು, ಆ ಕನಸಿನಲ್ಲಿ ಅಡಗಿ ಕೂತಿರುವ ನಂಬರ್ ಯಾವುದೆಂದು ದಿನವಿಡೀ ಲೆಕ್ಕಾಚಾರ ಮಾಡುತ್ತಿದ್ದರು. ಈ ಲೆಕ್ಕಾಚಾರಕ್ಕೆ ತರಾವರಿ ಸೂತ್ರಗಳು ಪ್ರಚಲಿತದಲ್ಲಿದ್ದವು. ಬಹುಶಃ ಇವರ ರಾತ್ರಿಯ ಕನಸು ಹಗಲಿನಲ್ಲಿ ರಿವೈಂಡ್ ಮಾಡಿ ಮಾಡಿ ಅದು ಸಂಜೆ ಹೊತ್ತಿಗೆ ನಾನಾ ರೆಕ್ಕೆಪುಕ್ಕಗಳನ್ನು ಪಡೆದುಬಿಟ್ಟಿರುತ್ತಿತ್ತು. ಅಥವಾ ಗುರುತೇ ಸಿಗದಷ್ಟು ಕನಸು ಸವೆದಿರುತ್ತಿತ್ತು. ಬಳಲಿ ಬೆಂಡಾಗಿರುತ್ತಿತ್ತು.
ರಾತ್ರಿ ಯಾವ ಯಾವ ಜಾವದಲ್ಲಿ ಕನಸು ಬಿತ್ತೆನ್ನುವುದು ಅದರ ಶಕ್ತಿಯನ್ನು ನಿರ್ಧರಿಸುತ್ತಿತ್ತು. ಬೆಳಗಿನ ಜಾವದಲ್ಲಿ ಬಿದ್ದ ಕನಸು ಬರ್ಜರಿ ಶಕ್ತಿಯುತವಾದದ್ದು. ಮಲಗಿದ ತಕ್ಷಣ ಬಿದ್ದ ಕನಸು ಹುಸಿಹೋಗುವಂತದ್ದು. ಮಧ್ಯರಾತ್ರಿಯ ಕನಸು ಈ ಎರಡೂ ಅಲ್ಲದ ಎಡಬಿಡಂಗಿ ತರದ್ದು. ಇದಲ್ಲದೆ ಹಗಲುಗನಸು ಕಾಣುವವರೂ ಇದ್ದರು. ಕೆಲವರು ತಮಗೆ ಬಿದ್ದ ಕನಸುಗಳನ್ನು ಹತ್ತಾರು ಜನರಿಗೆ ವಿವಿಧ ರೀತಿಯಲ್ಲಿ ವಿವರಿಸಿ, ಕನಸ ಹೊಟ್ಟೆಯೊಳಗೆ ಕಾಣದಂತಿರುವ ನಂಬರ್ ಯಾವುದು ಎನ್ನುವುದನ್ನು ಪರೀಕ್ಷಿಸುತ್ತಿದ್ದರು. ಇನ್ನು ಕೆಲವರು ಬಿದ್ದ ಕನಸನ್ನು ಬೇರೆಯವರ ಜತೆ ಹೇಳಿಕೊಂಡರೆ, ಕನಸ ಕಟ್ಟೊಡೆದು ಸುಳ್ಳಾಗುತ್ತದೆ ಎನ್ನುವ ನಂಬಿಕೆ ಉಳ್ಳವರು.
ಅಂತವರು ತಮ್ಮ ಕನಸುಗಳನ್ನು ಬೇರೆ ಯಾರೊಂದಿಗೂ ಹೇಳಿಕೊಳ್ಳದೆ, ತಾವೇ ಕನಸಿಗೆ ಹಲವಾರು ಅರ್ಥಗಳನ್ನು ಕೊಟ್ಟುಕೊಂಡು ನಂಬರ್ ಆಡುವುದೂ ಪ್ರಚಲಿತದಲ್ಲಿತ್ತು. ಅವರು ಆಡಿದ ನಂಬರ್ ಹಾರಿದರೆ, ನನ್ನ ಕನಸು ಹುಸಿ ಹೋಗಲಿಲ್ಲ ಎಂದುಕೊಂಡು ಮತ್ತೊಂದು ಕನಸಿಗಾಗಿ ಕಾಯುತ್ತಿದ್ದರು. ಅಥವಾ ಆಡಿದ ನಂಬರ್ ಬೀಳದಿದ್ದರೆ, ನನಗೆ ಕನಸನ್ನು ಅರ್ಥೈಸಲು ಬಂದಿಲ್ಲ ಎಂದು ತಮ್ಮನ್ನು ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದರು. ಮಕ್ಕಳಿಗೆ ಬಿದ್ದ ಕನಸು ಯಾವುದೇ ಕಾರಣಕ್ಕೂ ಹುಸಿ ಹೋಗುವುದಿಲ್ಲ ಎನ್ನುವ ನಂಬಿಕೆ ಬಲವಾಗಿತ್ತು. ಹಾಗಾಗಿ ಓಸಿ ಆಡುವ ತಂದೆ ತಾಯಿಗಳು ಮಕ್ಕಳನ್ನು ಕನಸು ಬಿದ್ರೆ ಹೇಳ್ರ.. ಎಂದು ಮುದ್ದಿಸಿ ಕೇಳುವುದು ನಡೆಯುತ್ತಿತ್ತು. ಮಕ್ಕಳು ಬಿಸ್ಕತ್ತು, ಪೆಪ್ಪರ್ ಮೆಂಟಿನ ಆಸೆಗೆ ಒಮ್ಮೊಮ್ಮೆ ಹುಟ್ಟಿಸಿಕೊಂಡ ಕನಸುಗಳನ್ನೂ ಹೇಳುವುದಿತ್ತು. ಹೀಗೆ ಕನಸುಗಳು ಅವುಗಳಿಗೆ ಅಥರ್ೈಸಿದ ನಂಬರುಗಳ ಕೆಲವು ಉದಾಹರಣೆಗಳು ಹೀಗಿವೆ.
ಒಂದು: ಅದು ನಾಗರಪಂಚಮಿ ಹಬ್ಬದ ಆಚೀಚಿನ ದಿನಗಳು, ಮಣ್ಣಜ್ಜಿ ಎನ್ನುವ ಅಜ್ಜಿಗೆ ಬಿದ್ದ ಕನಸೊಂದು ಹೀಗಿತ್ತು. ಅಜ್ಜಿಯ ಗುಡಿಸಲ ಹಿಂದಿನ ಹುತ್ತದಿಂದ ಎರಡು ಹಾವುಗಳು ಬಂದು, ಅಜ್ಜಿಯ ಮನೆಯಲ್ಲಿನ ಹಾಲಿನ ಬಟ್ಟಲಲ್ಲಿ ಹಾಲು ಕುಡಿದು ಮತ್ತೆ ಹುತ್ತ ಸೇರಿಕೊಂಡವಂತೆ. ಈ ಕನಸಿನಿಂದ ಎಚ್ಚೆತ್ತ ಅಜ್ಜಿ ಎದ್ದು ನೋಡಿದರೆ ಹಾಲಿನ ಬಟ್ಟಲು ಖಾಲಿಯಾಗಿತ್ತಂತೆ. ಇದನ್ನು ಅರ್ಥೈಸಿದ ಕನಸು ತಜ್ಞರು ಎರಡು ಹಾವು 11 ಎಂತಲೂ..ಎರಡು ಹಾವು ಮತ್ತು ಒಂದು ದುಂಡನೆ ಬಟ್ಟಲು ಸೇರಿದರೆ 20 ಎಂತಲೂ..ಹುತ್ತದಿಂದ ಬಂದ ಎರಡು ಹಾವು, ಹುತ್ತಕ್ಕೆ ಮರಳಿದ ಎರಡು ಹಾವು ಈ ಎರಡೂ ಸೇರಿ 22 ಸಂಖ್ಯೆ ಬರುವುದೆಂದು ಲೆಕ್ಕಾಚಾರ ಮಾಡಲಾಯಿತು. ಮರುದಿನ ನೋಡಿದರೆ 11 ರ ಸಂಖ್ಯೆ ಹಾರಿತ್ತು.
ಊರಿನ ಅನೇಕ ಓಸಿಗರು ಅಂದು 11 ರ ಸಂಖ್ಯೆಗೆ ಓಸಿ ಹೊಡೆದಿದ್ದರು. ಇದು ಊರಲ್ಲಿ ದೊಡ್ಡಸುದ್ದಿಯಾಯಿತು. ಓಸಿ ಹೊಡೆದ ಸಿದ್ಲಿಂಗಪ್ಪ ಸಾರಾಯಿ ಕುಡಿದು ಮತ್ತಿನಲ್ಲಿ ಮಣ್ಣಜ್ಜಿಯನ್ನು ಹೊತ್ತುಕೊಂಡು ಊರಮುಂದೆ ಬಂದಿದ್ದನು. ಅದನ್ನು ನೋಡಿ ಊರಜನ ಹೊಟ್ಟೆ ತುಂಬಾ ನಕ್ಕಿದ್ದರು. ಸಿದ್ಲಿಂಗಪ್ಪ ಕುಡಿದಿದ್ದರಿಂದ ಜೋಲಿ ತಪ್ಪಿ ಮಣ್ಣಜ್ಜಿಯನ್ನು ಕೆಳಗೆ ಬೀಳಿಸಿದ್ದ. ಆಗ ಮಣ್ಣಜ್ಜಿಯ ಕಾಲು ಹುಳುಕಿ ನಡೆಯಲು ಬಾರದಂತಾಗಿ ಮೂಲೆ ಸೇರಬೇಕಾಯಿತು. ಅಜ್ಜಿಯ ಮಗ ಚಂದ್ರಪ್ಪ `ಬೇ ಕನಸು ಹೇಳಬೇಡಬೇ ಅಂದ್ರ ಕೇಳ್ತಿಯಾ..ಇನ್ ಮೇಲೆ ಯಾರಿಗಾದ್ರು ಕನಸು ಹೇಳು ಇನ್ನೊಂದು ಕಾಲ್ನು ಮುರಿತೀನಿ’ ಅಂದಿದ್ದ. ಆಗಿನಿಂದ ಮಣ್ಣಜ್ಜಿ ತನ್ನ ಕನಸುಗಳನ್ನು ಯಾರ ಮುಂದೂ ಹೇಳುತ್ತಿರಲಿಲ್ಲ. ಪಾಪ ಮಣ್ಣಜ್ಜಿಯ ಕನಸೇ ಮುಳುವಾಗಿ ಕಾಲು ಮುರಿದು ಮೂಲೆ ಸೇರುವಂತಾಯಿತು.
ಎರಡು: ಹರಿಜನ ತಿಂದಪ್ಪನ ಕನಸು ತುಂಬಾ ಜನಪ್ರಿಯವಾಗಿದ್ದವು. ಆತನಿಗೆ ಕನಸು ಪದೇ ಪದೇ ಬೀಳುತ್ತಿರಲಿಲ್ಲ. ತಿಂಗಳಿಗೆ ಒಂದೋ ಎರಡೋ ಕನಸು ಬೀಳುತ್ತಿದ್ದವು. ಆದರೆ ಬಹುಪಾಲು ಕನಸುಗಳ ನಂಬರ್ ಹುಸಿಹೋಗುವುದಿಲ್ಲ ಎನ್ನುವ ನಂಬಿಕೆ ಬಲವಾಗಿತ್ತು. ಮಾದಿಗರಿಗೆ ಬಿದ್ದ ಕನಸು ಸುಳ್ಳಾಗಲ್ಲ ಎನ್ನುವ ನಂಬಿಕೆ ಇತ್ತು. ಹಾಗಾಗಿ ಜಾತಿಯ ಕಟ್ಟು ಮರೆತು ಊರಿನ ಲಿಂಗಾಯಿತರೂ ಸಹಾ ತಿಂದಪ್ಪನನ್ನು ಗೌರವಿಸುವಂತಹ ವಾತಾವರಣ ಓಸಿಯಿಂದಾಗಿ ನಿರ್ಮಾಣವಾಗಿತ್ತು. ತಿಂದಪ್ಪ ಕನಸನ್ನು ಬಹಳ ಜನಕ್ಕೆ ಹೇಳುತ್ತಿರಲಿಲ್ಲ, ತನಗೆ ಬೇಕಾದವರಿಗೆ ಮಾತ್ರ ಹೇಳುತ್ತಾನೆ ಎನ್ನುವ ಕಾರಣಕ್ಕೆ ತಿಂದಪ್ಪನನ್ನು ವಿರೋಧಿಸುವ ಜನರೂ ಇದ್ದರು. ಇದಕ್ಕೆ ತಿಂದಪ್ಪ ಕೊಡುತ್ತಿದ್ದ ಕಾರಣವೇ ಬೇರೆಯಾಗಿತ್ತು. ಕನಸನ್ನು ಹೆಚ್ಚು ಹೆಚ್ಚು ಜನಕ್ಕೆ ಹೇಳುತ್ತಾ ಹೋದರೆ, ಅದು ತನ್ನ ಶಕ್ತಿ ಕಳಕೊಂಡು ಸುಳ್ಳಾಗುತ್ತೆ, ಸ್ವಲ್ಪ ಜನಕ್ಕೆ ಹೇಳಿದರೆ ಅದಕ್ಕೆ ಶಕ್ತಿ ಇರುತ್ತದೆ ಎನ್ನುವುದಾಗಿತ್ತು.
ಒಮ್ಮೆ ತಿಂದಪ್ಪನಿಗೆ ಬಿದ್ದ ಕನಸೊಂದು ಹೀಗಿತ್ತು. ಒಬ್ಬ ಅಗಸರವನು ಸುಣ್ಣ ಮಾರಲು ಕತ್ತೆಯ ಮೇಲೆ ಸುಣ್ಣದ ಚೀಲ ಹೊತ್ತುಕೊಂಡು ಬಂದನಂತೆ, ಮಳೆ ಜೋರಾಗಿ ಬಂದು ಸುಣ್ಣಕ್ಕೆ ನೀರು ಬಿದ್ದು ಕೊತಕೊತನೆ ಕುದಿಯತೊಡಗಿತಂತೆ, ಆ ಸುಣ್ಣದ ಚೀಲವನ್ನು ಕತ್ತೆಯ ಮೇಲಿಂದ ಇಳಿಸಲೆಂದು ಅಗಸ ಪ್ರಯತ್ನ ಮಾಡುತ್ತಿರುವಾಗ ಕತ್ತೆ ಕಾಲಿನಿಂದ ಜಾಡಿಸಿ ಹೊಡೆಯಿತಂತೆ, ಆಗ ಆ ಹೊಡೆತ ತಾಳಲಾರದೆ ಅಗಸ ಸತ್ತನಂತೆ, ಅಂತೆಯೇ ಕತ್ತೆ ಮೈಮೇಲಿನ ಸುಣ್ಣದ ಚೀಲ ಕೊಡವಿಕೊಂಡು ಓಡಿ ಹೋಯಿತಂತೆ, ಆಗ ತಿಂದಪ್ಪನಿಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತಂತೆ. ಈ ಕನಸನ್ನು ಅರ್ಥ ಮಾಡಲು ಕನಸು ತಜ್ಞರು ತರಾವರಿ ಲೆಕ್ಕ ಹಾಕಿದರು. ಆದರೂ ನಂಬರ್ ಹೊಳೆಯಲಿಲ್ಲವಂತೆ. ಮರುದಿನ 21 ಸಂಖ್ಯೆ ಹಾರಿತ್ತು. ಒಬ್ಬನ ಲೆಕ್ಕಾಚಾರ ಮಾತ್ರ ನಿಜವಾಗಿತ್ತು . ಆತ ಅಂದು ಹತ್ತು ರೂಪಾಯಿಯ ಓಸಿ ಹೊಡೆದಿದ್ದ. ಅವನು ಅರ್ಥ ಮಾಡಿಕೊಂಡದ್ದು ಹೀಗಿತ್ತು, ಕತ್ತೆ ಎರಡು ಕಾಲಿನಿಂದ ಅಗಸನ್ನು ಹೊಡೆದದ್ದು 2 ಎಂತಲೂ, ಸತ್ತ ಅಗಸ 1 ಎಂತಲೂ ಎರಡು ಸೇರಿದರೆ 21 ಆಗುತ್ತದೆಯೆಂತಲೂ ಲೆಕ್ಕಾಚಾರ ಮಾಡಿ ಆ ನಂಬರ್ಗೆ ಹಣ ಕಟ್ಟಿದ್ದನಂತೆ. ಅಂದಿನಿಂದ ಆತ ಕನಸನ್ನು ಅರ್ಥ ಮಾಡುವ ತಜ್ಞರಲ್ಲಿ ಖಾಯಂ ಹೆಸರು ನೊಂದಾಯಿಸಿದ್ದನು.
ಮೂರು: ಮಠದ ಗುರುಸಿದ್ದಯ್ಯನಿಗೆ ಬಿದ್ದ ಕನಸೊಂದು ಕುತೂಹಲಕಾರಿಯಾಗಿದೆ. ಗುರುಸಿದ್ದಯ್ಯ ಜಂಬಯ್ಯನ ಮನೆಗೆ ಭಿನ್ನಕ್ಕೆ ಹೋದನಂತೆ, ಆಗ ಗೋದಿ ಹುಗ್ಗಿಯನ್ನು ಭಿನ್ನಕ್ಕೆಂದು ನೀಡಿದರಂತೆ, ಆಸೆಯಿಂದ ಗುರುಸಿದ್ದಯ್ಯ ಹುಗ್ಗಿಯನ್ನು ಮತ್ತೆ ಮತೆ ತರಿಸಿಕೊಂಡು ಚಪ್ಪರಿಸಿದನಂತೆ, ಕೊನೆಗೆ ಹುಗ್ಗಿ ಖಾಲಿಯಾಗಿ ಜಂಬಯ್ಯ ಹುಗ್ಗಿಯ ಪಾತ್ರೆಯನ್ನು ತೊಳೆದು ಅದೇ ನೀರನ್ನು ತಟ್ಟೆಗೆ ಹೊಯ್ದನಂತೆ, ಆಗ ಜಂಬಯ್ಯ ಬಗ್ಗಿ ತಟ್ಟೆಗೆ ನೀಡುವಾಗ ಜೇಬಿನಲ್ಲಿದ್ದ ಒಂದು ರೂಪಾಯಿ ಕಾಯಿನ್ ತಟ್ಟೆಗೆ ಬಿತ್ತಂತೆ, ಆಗ ಗುಸಿದ್ದಯ್ಯನಿಗೆ ಎಚ್ಚರಾಯಿತಂತೆ. ಈ ಕನಸನ್ನು ನಾನಾ ತೆರನಾಗಿ ಊರ ಕನಸು ತಜ್ಞರು ಅರ್ಥ ಮಾಡಿ, ತಟ್ಟೆ ಎಂದರೆ ದುಂಡಗೆ ಇರುವ ಕಾರಣ ಅದು ಸೊನ್ನೆ, ಒಂದು ರೂಪಾಯಿ ತಟ್ಟೆಗೆ ಬಿದ್ದಿರುವುದು ಸೊನ್ನೆಯ ಜತೆ ಒಂದು ಸೇರಿದರೆ, 01 ಇಲ್ಲವೇ 10 ನಂಬರ್ ಬರುತ್ತದೆಯೆಂದು ನಿರ್ದರಿಸಿ ಇಡೀ ಊರಿಗೇ ಊರೇ ಗುರುಸಿದ್ದಯ್ಯನ ಕನಸ ನಂಬರ್ಗೆ ಹಣ ಕಟ್ಟಿದರು. ಮರುದಿನ 00 ನಂಬರ್ ಹೊಡೆದುಬಿಟ್ಟಿತ್ತು. ಗುರುಸಿದ್ದಯ್ಯ `ತಟ್ಟೆನು ದುಂಡಗಿದೆ, ಒಂದು ರೂಪಾಯಿನೂ ದುಂಡಗಿದೆ. ಹಾಗಾಗಿ ಎರಡು ಸೊನ್ನೆ ಬಂತ್ನೋಡು’ ಎಂದು ಹೇಳಿದ್ದರು. ಆಗ ಕನಸು ತಜ್ಞರುಗಳೆಲ್ಲಾ ತಲೆ ಚಚ್ಚಿಕೊಂಡಿದ್ದರು.
ಓಸಿ ಹುಟ್ಟಿಸಿದ ನಂಬಿಕೆಯ ಲೋಕ
ಓಸಿಯ ಕನಸುಗಳನ್ನು ಹುಟ್ಟಿಸಿದ ಹಾಗೆ ಜನರಲ್ಲಿ ನಂಬಿಕೆಯ ಲೋಕವನ್ನೂ ಸೃಷ್ಟಿಸಿತ್ತು. ಜನಪದರಲ್ಲಿ ಈಗಾಗಲೇ ಇರುವ ನಂಬಿಕೆಗಳು ಓಸಿ ಆಟದ ಜತೆ ಹೊಸ ಲಗತ್ತು ಪಡೆಯುತ್ತಿದ್ದವು. ಹೀಗೆ ಜನಪದ ನಂಬಿಕೆಗಳು ಆಯಾ ಕಾಲದ ಸಂಗತಿಗಳ ಜತೆ ಹೊಸ ಹುಟ್ಟನ್ನು ಪಡೆವ ಬಗ್ಗೆ ಜಾನಪದ ಅಧ್ಯಯನಗಳಲ್ಲಿ ಅಷ್ಟಾಗಿ ಚಚರ್ೆಯಾದಂತಿಲ್ಲ. ಇಂತಹ ನಂಬಿಕೆಗಳು ಓಸಿ ಆಡುವುದನ್ನು ಮತ್ತಷ್ಟು ಹೆಚ್ಚಿಸಿ, ಜನರನ್ನು ಇನ್ನಷ್ಟು ಬಡತನದ ಕೂಪಕ್ಕೆ ತಳ್ಳುತ್ತಿದ್ದ ಅಪಾಯವೂ ಇದರ ಬೆನ್ನಿಗಿದೆ. ಒಂದು ನಂಬಿಕೆ ಮತ್ತೆ ಮತ್ತೆ ಹುಸಿಯಾಗತೊಡಗಿದಾಗ, ಜನರಲ್ಲಿ ಓಸಿಯ ಬಗ್ಗೆ ಒಂದು ಬಗೆಯ ತಾತ್ಸಾರವೂ ಹುಟ್ಟುತ್ತಿತ್ತು. ಇಂತಹ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
ದೇವರ ಕೇಳುವುದು: ಮಳೆ ಬರದಿದ್ದರೆ ನಮ್ಮೂರಿನ ಆಂಜನೇಯನನ್ನು ಕೇಳುವುದು ವಾಡಿಕೆ. ಇದರ ಕ್ರಮವೆಂದರೆ, ಆಂಜನೇಯನಿಗೆ ಎಣ್ಣೆ ಮಜ್ಜನ ಮಾಡಿಸಿ, ಮೈತುಂಬಾ ಎಲೆಯ ತುಂಡು, ಹೂಗಳನ್ನು ಅಂಟಿಸಿ ಅವುಗಳು ಉದುರುವುದನ್ನು ಕಾಯುವುದು. ಆಗ ಜನ ದೇವರ ಜತೆ ಮೊದ ಮೊದಲು ಪ್ರೀತಿಯಿಂದ ಮಾತನಾಡುತ್ತಾರೆ. `ನಿನ್ಗೆ ಹೆಚ್ಚಿಂದು ಯಾವ್ದೂ ಇಲ್ಲ ಲೇಟ್ ಮಾಡಬೇಡ ಒಂದು ಬಲಕ್ಕೆ ಉದುರ್ಸು..’ ಎಂದು ಕೇಳುತ್ತಿದ್ದರು. ಎಲೆ ಉದುರುವುದು ತಡವಾದರೆ, ಜನ ದೇವರೊಂದಿಗೆ ಜಗಳ ತೆಗೆಯುತ್ತಿದ್ದರು. `ನಿನ್ನ ಕೈಲೆ ಆಗಲ್ಲ ಅಂದ್ರ ಹೇಳ್ಬಿಡು, ನಮ್ಮ ದಾರಿ ನಾವ್ ನೋಡ್ಕ್ಯಂತಿವಿ..’ ಎಂದು ದೇವರ ಜತೆ ಮುನಿಸಿಕೊಳ್ಳುವ ಪ್ರಸಂಗಗಳೂ ನಡೆಯುತ್ತಿದ್ದವು. ಬಲಗಡೆಯ ಹೂ ಅಥವಾ ಎಲೆ ಬಿದ್ದರೆ ಮಳೆ ಬರುತ್ತದೆಯೆಂತಲೂ, ಎಡಗಡೆ ಎಲೆ ಹೂ ಬಿದ್ದರೆ ಮಳೆ ಬರುವುದಿಲ್ಲ ಎಂತಲೂ ಅರ್ಥ. ಒಮ್ಮೊಮ್ಮೆ ಕಾಕತಾಳೀಯ ಎಂಬಂತೆ ಈ ಭವಿಷ್ಯ ಕೇಳಿದಾಗ ಮಳೆ ಬಂದ ಪ್ರಸಂಗಗಳೂ ಇದ್ದವು.
ಅವು ಓಸಿ ಆಟವು ತಾರಕಕ್ಕೇರಿದ ದಿನಗಳು. ಮೊದ ಮೊದಲು ಆಂಜನೇಯನಿಗೆ ಯಥಾ ಪ್ರಕಾರ ಪೂಜೆ ಮಾಡಿಸಿ, ಮನಸ್ಸಿನಲ್ಲಿ ಒಂದು ನಂಬರ್ ಇಟ್ಟುಕೊಂಡು, ಆಗ ಪತ್ರೆ ಬಲಕ್ಕೆ ಬಿದ್ದರೆ ಆ ನಂಬರ್ ಆಗುವುದೆಂದು ನಂಬಿ ಹಣ ಕಟ್ಟುವುದು ನಡೆಯುತ್ತಿತ್ತು. ಕಾಲಾನಂತರ ದೇವರ ಮೈಗೆ ಪತ್ರೆಯನ್ನು ಅಂಟಿಸುವ ಬದಲಾಗಿ, ಸಿಗರೇಟು ಪ್ಯಾಕಿನ ಹಿಂಬದಿಯಲ್ಲಿ ನಂಬರುಗಳನ್ನು ಬರೆದು, ಆ ನಂಬರಿನ ತುಂಡುಗಳನ್ನು ಅಂಟಿಸುವ ಪರಿಪಾಟ ಬೆಳೆಯಿತು. ಪಾಪ ಹನುಮಂತ ಪತ್ರೆಯನ್ನು ಸಿಕ್ಕಿಸಿಕೊಂಡು ದೊಡ್ಡಾಲದ ಮರದಂತೆ ಬೀಗುತ್ತಿದ್ದವನು, ಸಿಗರೇಟು ಪ್ಯಾಕಿನ ತುಂಡುಗಳನ್ನು ಮೈಗಂಟಿಸಿಕೊಂಡು ತಂಬಾಕಿನ ವಾಸನೆಗೆ ಕೆಮ್ಮುವಂತಾಗಿತ್ತು. ಆಗ ಹನುಮನ ದೇಹದಿಂದ ಯಾವ ನಂಬರ್ ಕೆಳಗೆ ಬೀಳುತ್ತದೋ ಆ ನಂಬರ್ ಹಾರುತ್ತದೆಂದು ನಂಬುತ್ತಿದ್ದರು. ಹನುಮನ ಮೈಗೆ ಎಲೆಯ ತುಂಡನ್ನು ಅಂಟಿಸಿದಾಗ, ಅವು ಮೈಮೇಲಿನ ಎಣ್ಣೆಯನ್ನು ಹಿಡಿಯುತ್ತಿರಲಿಲ್ಲ. ಹಾಗಾಗಿ ಬೇಗನೆ ಉದುರಿ ಬಿಡುತ್ತಿದ್ದವವು. ಆದರೆ ಸಿಗರೇಟ್ ಪ್ಯಕಿನ ತುಂಡುಗಳು ಹನುಮನ ಮೈಮೇಲಿನ ಎಣ್ಣೆ ಮೆತ್ತಿಕೊಂಡು ಗಟ್ಟಿಯಾಗಿ ಬೇಗನೇ ಬೀಳದೆ ಓಸಿಗರ ತಾಳ್ಮೆ ಪರೀಕ್ಷೆ ಮಾಡುತ್ತಿದ್ದವು.
ಆಗ ಓಸಿಗರು `ಬೆಟ್ಟನೇ ಹೊತ್ತೋವ್ನಿಗೆ ಒಂದು ಪುಟಗೋಸಿ ನಂಬರ್ ಹೇಳಾದೇನು ಕಷ್ಟನಾ, ಬಡ ಬಡಾ ಒಂದ್ ನಂಬರ್ ಹೇಳು’ ಎಂದು ಹನುಮನ ಜತೆ ಜಗಳ ಮಾಡಿ ತಕರಾರು ಎತ್ತುತ್ತಿದ್ದರು. ಆಗ ನನಗೆ ಎಂ.ಎನ್.ಶ್ರೀನಿವಾಸ್ ಅವರ `ರಿಮೆಂಬರ್ಡ ವಿಲೇಜ್’ ಪುಸ್ತಕ ನೆನಪಾಗುತ್ತಿತ್ತು. ಅವರ ಮೈಸೂರಿನ ಹತ್ತಿರದ ರಾಂಪುರ ಕುರಿತ ಅಧ್ಯಯನದಲ್ಲಿ ಇಂತಹದ್ದೇ ಒಂದು ಪ್ರಸಂಗ ಬರುತ್ತದೆ. ಆಗ ಶ್ರೀನಿವಾಸ ಅವರು ` ದೇವರ ಜತೆ ಜಗಳ ಮಾಡುತ್ತಾ, ಅವನ ಶಕ್ತಿ ಸಾಮಥ್ರ್ಯವನ್ನು ಗೇಲಿಮಾಡುತ್ತಾ, ಆತನನ್ನು ಸ್ನೇಹಿತನಂತೆ ಕಾಣುವ ಸ್ವಾತಂತ್ರ್ಯವನ್ನು ಈ ಹಳ್ಳಿಗರು ಹೊಂದಿರುತ್ತಾರೆ’ ಎನ್ನುತ್ತಾರೆ. ಅದು ನಿಜಕೂಡ. ಕೆಲವೊಮ್ಮೆ ದೇವರ ಮೈಮೇಲಿಂದ ಉದುರಿದ ನಂಬರ್ ನಿಜವಾಗುತ್ತಿರಲಿಲ್ಲ. ಆಗ ನಿನ್ನೆ ಉದುರಿದ ನಂಬರ್ ಜತೆಗೆ ಬೇರೆ ಬೇರೆ ಲೆಕ್ಕ ಸೇರಿಸಿ ಅದು ಹೀಗಾಗಿದೆ, ನಾವೇ ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂಬ ದೇವರ ಸಮರ್ಥನೆಯೂ ಇರುತ್ತಿದ್ದವು. ಒಮ್ಮೊಮ್ಮೆ ನಂಬರ್ ಆಗದೇ ಇರುವಾಗ ಹನುಮಂತನಿಗೆ ಸೊಕ್ಕು ಹೆಚ್ಚಾಗಿದೆ, ಒಂದು ವಾರ ಯಾರೂ ಪೂಜೆಮಾಡೋದೆ ಬೇಡ, ಮೈ ಒಣಗಿಸಿಕೊಂಡ್ರೆ ಅವ್ನಿಗೆ ಬುದ್ದಿ ಬರುತ್ತೆ ಎಂದು ವಾದಿಸುವವರೂ ಇದ್ದರು. ಹನುಮನನ್ನಲ್ಲದೆ, ಗ್ರಾಮದೇವತೆಗಳನ್ನೂ ನಂಬರ್ ಕೇಳುವ ಪರಿಪಾಠವಿತ್ತು. ಕನಸಿನಲ್ಲಿ ದೇವರು ಇಂತ ನಂಬರ್ ಆಡು ಎಂದು ಹೇಳಿ ಮಾಯವಾದನು ಎಂದು ಆ ನಂಬರಿಗೆ ಹಣ ಕಟ್ಟುವ ಜನರೂ ಇದ್ದರು.
ಹಲ್ಲಿಯ ಲೊಚಗುಟ್ಟುವಿಕೆ : ಹಲ್ಲಿ ಓಸಿಗರಿಗೆ ಅದೃಷ್ಟದ ಸಂಕೇತವಾಗಿತ್ತು. ಹಲ್ಲಿಯ ಶಕುನ ತುಂಬಾ ಶಕ್ತಿಯುತವಾದದ್ದು ಎಂಬ ನಂಬಿಕೆ ಅವರಲ್ಲಿ ಬಲವಾಗಿತ್ತು. ಕೆಲವೊಂದು ಮನೆಯ ಹಲ್ಲಿಗಳು ಓಸಿ ನಂಬರ್ ಹಿಡಿಯುವುದಕ್ಕೆ ಜನಪ್ರಿಯವಾಗಿದ್ದವು. ಅಂತವರ ಮನೆಯಲ್ಲಿ ಓಸಿಗರು ನಂಬರ್ಗಳ ಬಗ್ಗೆ ಮಾತನಾಡುತ್ತಾ ಸುಮ್ಮನೆ ಕಾಲಹರಣ ಮಾಡುತ್ತಿದ್ದರು. ಆ ಹಲ್ಲಿಯ ಲೊಚಗುಟ್ಟುವುದಕ್ಕಾಗಿ ಕಾಯುತ್ತಿದ್ದರು. ಅದು ಒಮ್ಮೆಮ್ಮೆ ಇವರನ್ನು ತುಂಬಾ ಕಾಯಿಸುತ್ತಿತ್ತು . ಮಗದೊಮ್ಮೆ ಲೊಚಗುಟ್ಟದೆ ನಿರಾಸೆ ಹುಟ್ಟಿಸುತ್ತಿತ್ತು. ಹಲ್ಲಿ ಯಾವ ಭಾಗದಲ್ಲಿ ಲೊಚಗುಟ್ಟಿದರೆ ನಿಜವಾಗುತ್ತದೆ ಎನ್ನುವ ನಂಬಿಕೆಗಳಿದ್ದವು. ಹೊಲೆಯ ಮೇಲಿನ ಹಲ್ಲಿ ಲೊಚಗುಟ್ಟಿದರೆ ನಿಜವಾಗುತ್ತದೆ, ಪಡಸಾಲೆಯಲ್ಲಿನ ಹಲ್ಲಿಯದು ಸುಳ್ಳಾಗುತ್ತದೆ, ದನದಕೊಟ್ಟಿಗೆ, ದೇವರಕೋಣೆಯ ಹಲ್ಲಿ ಲೊಚಗುಟ್ಟಿದರೆ ನಿಜವಾಗುತ್ತದೆ ಎನ್ನುವ ನಂಬಿಕೆಗಳಿದ್ದವು. ಮನೆಯಲ್ಲಿ ಎಡಕ್ಕೆ ಇರುವ ಹಲ್ಲಿಯನ್ನು ನಂಬಬಾರದು, ಬಲಕ್ಕೆ ಇರುವ ಹಲ್ಲಿಯನ್ನು ನಂಬಬಹುದು ಎನ್ನುವುದೂ ಇತ್ತು. ಇದರಲ್ಲಿ ನಂಬಿಗಸ್ತ ಹಲ್ಲಿಗಳೂ, ಮೋಸಗಾರ ಹಲ್ಲಿಗಳೂ ಇರುತ್ತವೆ ಎನ್ನುವುದು ಜನರ ನಂಬಿಕೆ. ಅದರಲ್ಲಿ ಕಪ್ಪು ಹಲ್ಲಿಗಳು ನಂಬಿಕೆಗೆ ಅರ್ಹವಾದವೂ, ಬಿಳಿಹಲ್ಲಿಗಳು ನಂಬಿಕೆಗೆ ಅನರ್ಹವಾದವುಗಳೂ ಎನ್ನುವುದು ಅನುಭವಸ್ತರ ಮಾತು.
ಹರಿಜನ ತಿಂದಪ್ಪನ ಮನೆಯ ಹಲ್ಲಿ ನಂಬರ್ ಹಿಡಿಯಲು ತುಂಬಾ ಪ್ರಸಿದ್ಧಿಯಾಗಿತ್ತು. ಅದು ನುಡಿಯುತ್ತಿದ್ದುದು ಕೂಡ ಅಪರೂಪಕ್ಕೊಮ್ಮೆ. ಮೂರ್ನಾಲ್ಕು ಬಾರಿ ಈ ಹಲ್ಲಿಯ ಶಕುನದಿಂದ ಓಸಿ ಹೊಡೆದಿದ್ದರು. ಹಾಗಾಗಿ ಊರಲ್ಲಿ ಈ ಹಲ್ಲಿಯ ಲೊಚಗುಟ್ಟುವಿಕೆಯನ್ನು ಕೇಳಲಿಕ್ಕಾಗಿಯೇ ಹಲವರು ತಿಂದಪ್ಪನ ಮನೆಗೆ ಬರುತ್ತಿದ್ದರು. ಆದರೆ ತಿಂದಪ್ಪ ಮಾತ್ರ ಒಮ್ಮೆಯೂ ತನ್ನ ಮನೆಯ ಹಲ್ಲಿಯ ಶಕುನದಿಂದ ಓಸಿ ಹೊಡೆದಿರಲಿಲ್ಲ. ಒಮ್ಮೆ ಹೀಗಾಯಿತು. ಆ ಹಲ್ಲಿ ಲೊಚಗುಟ್ಟಿತು ಎಂದು ಒಂದು ನಂಬರ್ ಊರಿನ ತುಂಬಾ ಸುದ್ದಿ ಹರಡಿತು. ಎಲ್ಲರೂ ತಮ್ಮ ತಮ್ಮ ಶಕ್ತಾನುಸಾರ ಹಣ ಕಟ್ಟಿದ್ದರು. ತಿಂದಪ್ಪನೂ ಸಾಲ ಮಾಡಿ ನೂರು ರೂಪಾಯಿ ಕಟ್ಟಿದ್ದ. ಮರುದಿನ ಆ ನಂಬರ್ ಬೀಳಲಿಲ್ಲ. ಆಗ ಎಲ್ಲರೂ ತಿಂದಪ್ಪನ ಮನೆಯ ಹಲ್ಲಿಯನ್ನು ಶಪಿಸಲು ಪ್ರಾರಂಭಿಸಿದರು. ಹಲ್ಲಿಯಿಂದಾಗಿ ಮನೆಯ ಘನತೆ ಹಾಳಾಯಿತು ಎಂದು ತಿಂದಪ್ಪ ಒಳಗೊಳಗೆ ಮರುಗಿದನು. ತಾನು ನೂರು ರೂಪಾಯಿ ಕಳೆದುಕೊಂಡ ಸಿಟ್ಟು ತಾಳಲಾರದೆ, ಒಂದು ದಿನವಿಡೀ ಕಸಬರಿಕೆ ಹಿಡಿದು ಹಲ್ಲಿಯನ್ನು ಹುಡುಕಾಡಿ ಸಾಯಿಸಿದ್ದ. ಹೀಗೆ ಸುಳ್ಳು ನುಡಿದ ಹಲ್ಲಿಗಳು ಓಸಿಗರಿಂದ ಹತವಾಗುವ ಪ್ರಸಂಗಗಳೂ ನಡೆಯುತ್ತಿದ್ದವು.
ನಾಯಿ ಮೈಕೊಡವಿ ನಡೆಯುವುದು: ಓಸಿ ನಂಬರ್ ಬಗ್ಗೆ ಮಾತನಾಡುವಾಗ ನಾಯಿ ಮೈಕೊಡವಿ ಮುಂದೆ ಹೋದರೆ ನಂಬರ್ ಹೊಡೆಯುತ್ತದೆ, ಮೈಕೊಡವಿ ನಿಂತುಕೊಂಡರೆ ನಂಬರ್ ಆಗುವುದಿಲ್ಲ ಎನ್ನುವ ನಂಬಿಕೆ ಇತ್ತು. ಇದೂ ಸಹ ಹಲ್ಲಿಯ ಹಾಗೆ ಹಲವಾರು ನಂಬಿಕೆಗಳಿಗೆ ಪಾತ್ರವಾಗಿತ್ತು. ಇದರಲ್ಲೂ ಕೆಲವು ಜನಪ್ರಿಯ ನಾಯಿಗಳೂ ಇದ್ದವು. ಗಂಡು ನಾಯಿಗಳಿಗಿಂತ ಹೆಣ್ಣು ನಾಯಿಗಳನ್ನು ಓಸಿಗರು ಹೆಚ್ಚು ನಂಬುತ್ತಿದ್ದರು. ಅದರಲ್ಲಿ ಬಿಳಿ ನಾಯಿಗಿಂತ ಕೆಂದ, ಬೂದಗಂಪು ನಾಯಿಗಳು ಹೆಚ್ಚು ನಂಬಿಕೆ ಗಳಿಸಿದ್ದವು. ಒಂದು ನಾಯಿಗೆ ತಲೆ ಮೇಲೆ ಮೂರು ಸುಳಿ ಇದ್ದವು. ಹಾಗಾಗಿ ಆ ನಾಯಿಗೆ ಎಲ್ಲಿಲ್ಲದ ಬೇಡಿಕೆಯೂ ಇತ್ತು. ನಾಯಿ ಶಕುನದಿಂದ ಓಸಿ ಹೊಡೆದರೆ, ಆ ನಾಯಿಗೆ ಮರುದಿನ ಆತಿಥ್ಯವೂ ಇರುತ್ತಿತ್ತು. ಕೆಲವರು ಬೇಕರಿಯಿಂದ ಬ್ರೆಡ್ಡನ್ನು ತಂದರೆ, ಕೆಲವರು ಮನೆಯಲ್ಲಿ ಮಾಂಸದ ಅಡುಗೆ ಹಾಕಿ ನಾಯಿಗಳ ಆತಿಥ್ಯವನ್ನು ಮಾಡುತ್ತಿದ್ದರು.
ಒಮ್ಮೆ ನಾಯಿಗಳಿಗೆ ಉರುಕು ರೋಗ ಹಿಡಿಯಿತು. ಆಗ ಬಹುತೇಕ ನಾಯಿಗಳು ಈ ರೋಗಕ್ಕೆ ತುತ್ತಾದವು. ಮೈತಿಂಡಿಯಿಂದಾಗಿ ನಾಯಿಗಳು ಪದೇ ಪದೇ ಮೈಕೊಡವಿ ಹೋಗುತ್ತಿದ್ದವು. ಇದನ್ನು ನಂಬಿ ಓಸಿ ಆಡಿದವರೂ ಸಹ ಮೈಪರಚಿಕೊಳ್ಳುವಂತಾಗಿತ್ತು. ಹೀಗೆ ಉರುಕುರೋಗ ಹೆಚ್ಚಿ ನಾಯಿಗಳು ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾಗ, ಓಸಿಗರು ದನದ ಡಾಕ್ಟರ್ ಒಬ್ಬರಲ್ಲಿ ಎಣ್ಣೆಯನ್ನು ತಂದು, ನಾಯಿಗಳಿಗೆ ಹಚ್ಚಿ ಉರುಕು ರೋಗವನ್ನು ವಾಸಿಮಾಡಿದ್ದರು. ಆಗ ಊರಿನ ಸಮಸ್ತ ನಾಯಿಗಳು ಓಸಿ ಆಟಕ್ಕೆ ಕೃತಜ್ಞತೆ ಸಲ್ಲಿಸಿ ಮತ್ತೆ ಶಕುನ ಹಿಡಿಯಲು ಶುರುಮಾಡಿದ್ದವು. ಶಕುನದ ನಂಬರ್ ಆಗದಿದ್ದಾಗ ,ಓಸಿಗರು ಆಯಾ ನಾಯಿಗಳನ್ನು ಹುಡುಕಿ ಸಿಟ್ಟು ಇಳಿಯುವ ತನಕ ಹೊಡೆಯುತ್ತಿದ್ದರು. ಆಗ ನಾಯಿಗಳು ಕುಯ್ಯಯ್ಯೋ.. ಕುಯ್ಯಯ್ಯೋ ಎನ್ನುತ್ತಾ ಓಸಿ ಆಟವನ್ನು ಶಪಿಸುತ್ತಿದ್ದಂತೆ ಕಾಣುತ್ತಿತ್ತು. ಬೆದೆ ಬಂದು ಗಂಡು ನಾಯಿಗಳೆಲ್ಲಾ ಹೆಣ್ಣು ನಾಯಿಗಳನ್ನು ಮೂಸುತ್ತಾ ಅವುಗಳ ಹಿಂದೆ ಸುತ್ತುವಾಗ ಓಸಿಗರು ಆ ನಾಯಿಗಳ ಹಿಂದೆ ಸುತ್ತಿ ಅವುಗಳ ಏಕಾಂತಕ್ಕೆ ಭಂಗ ತರುವ ಕೆಲಸವನ್ನೂ ಮಾಡುತ್ತಿದ್ದರು. ಆಗ ನಾಯಿಗಳು ಓಸಿಗರನ್ನು ಕೆಕ್ಕರಿಸಿಕೊಂಡು ನೋಡಿ ಗುರುಗುಟ್ಟುತ್ತಾ ಅವರ ನಾಚಿಕೆಗೇಡಿನ ಕೆಲಸಕ್ಕೆ ಚೀಮಾರಿ ಹಾಕುತ್ತಿದ್ದವು.
ಕರೆಂಟು ಹೋಗಿಬರುವುದು: ಮಾತನಾಡುತ್ತಾ ಕೂತಾಗ ದಿಡೀರನೆ ಕರೆಂಟು ಬಂದರೆ ಆ ಮಾತುಗಳು ನಿಜವಾಗುತ್ತವೆಯೆಂದೂ, ಕರೆಂಟ್ ಹೋದರೆ ಮಾತುಗಳು ಹುಸಿಹೋಗುತ್ತವೆ ಎಂಬ ನಂಬಿಕೆಯೂ ಇತ್ತು. ಸಹಜವಾಗಿ ಓಸಿಗರೆಲ್ಲಾ ಸೇರಿ ರಾತ್ರಿ ಅಂಗಳದ ಬೆಳದಿಂಗಳಲ್ಲಿ ಕೂತು ನಾಳೆ ಯಾವ ನಂಬರ್ ಹೊಡೆಯಬಹುದೆಂದು ಲೆಕ್ಕಾಚಾರ ಮಾಡುತ್ತಿದ್ದರು. ಆಗ ಸಹಜವಾಗಿ ಕರೆಂಟ್ ಹೋಗುವುದು, ಬರುವುದು ನಡೆಯುತ್ತಿತ್ತು. ಇದನ್ನೂ ಸಹ ಶಕುನ ಎಂದು ನಂಬಿ ಓಸಿ ಆಡುವ ಜನರೂ ಇದ್ದರು. ಆಕಸ್ಮಿಕವಾಗಿ ಒಮ್ಮೊಮ್ಮೆ ಇಂತವೂ ನಿಜವಾಗಿ ಆ ನಂಬಿಕೆಗೆ ಮತ್ತಷ್ಟು ಬಲ ಬರುತ್ತಿತ್ತು.
ರಸ್ತೆಯಲ್ಲಿ ಎದುರು ಬದುರಾಗುವುದು: ಕೂಡ್ಲಿಗಿ ತಾಲೂಕಿನ ಹಳ್ಳಿಗಳ ಜನರು ಬಸ್ ಸಂಚಾರದ ಮುಖ್ಯ ರಸ್ತೆ ತಲುಪಲು ತಮ್ಮ ಹಳ್ಳಿಗಳಿಂದ ನಡೆಯಬೇಕಿತ್ತು. ಹಾಗೆ ನಡೆಯುವಾಗ ಇಂದು ಯಾವ ನಂಬರ್ಗೆ ಹಣ ಕಟ್ಟಲಿ ಎನ್ನುವ ಆಲೋಚನೆಯಲ್ಲೇ ಇರುತ್ತಿದ್ದರು. ಆಗ ಎದುರಿಗೆ ಹುಚ್ಚರು, ಮಾನಸಿಕ ಅಸ್ವಸ್ತರು ಬಂದರೆ ಕೆಲಸ ಯಶಸ್ಸು ಎಂದು ತಿಳಿಯುತ್ತಿದ್ದರು. ಆಗ ಆ ಹುಚ್ಚರಿಂದ ಯಾವ್ದಾದ್ರೂ ನಂಬರ್ ಹೇಳೋ ಎಂದು ಕೇಳುವುದೂ ಇತ್ತು. ಹೀಗೆ ರಸ್ತೆಯಲ್ಲಿ ತುಂಬಿದ ಕೊಡ ಹೊತ್ತ ಮಹಿಳೆ ಬಂದರೆ, ಮನಸ್ಸಿನಲ್ಲಿ ಅಂದುಕೊಂಡ ನಂಬರ್ ಆಗುತ್ತದೆಯೆಂತಲೂ, ಖಾಲಿ ಕೊಡ ಹಿಡಿದ ಮಹಿಳೆ ಬಂದರೆ ನಂಬರ್ ಹಾರುವುದಿಲ್ಲ ಎಂತಲೂ ನಂಬುತ್ತಿದ್ದರು. ಇನ್ನು ಕಟ್ಟಿಕೆ ಹೊರೆ ಹೊತ್ತ ಮಹಿಳೆ ಬಂದರೆ ನಂಬರ್ ಆಗುವುದಿಲ್ಲ ಎಂತಲೂ, ಹಸಿ ಸೊಪ್ಪು, ಹುಲ್ಲು ಹೊತ್ತ ಮಹಿಳೆ ಬಂದರೆ ನಂಬರ್ ಆಗುತ್ತದೆಯೆಂತಲೂ ನಂಬುವವರಿದ್ದರು.
ಮಠದ ಸ್ವಾಮಿಗಳು, ಜಂಗಮರು ಎದುರು ಬಂದರೆ ಕೇಡೆಂದು, ನಂಬರ್ ಬೀಳುವುದಿಲ್ಲವೆಂತಲೂ, ಊರಿಗೆ ಕ್ಷೌರಿಕ ತನ್ನ ಕ್ಷೌರ ಮಾಡುವ ಸಾಮಾನುಗಳನ್ನು ಹಿಡಿದು ಬಂದರೆ ಅದೃಷ್ಟ ಎಂತಲೂ, ನಂಬರ್ ತಪ್ಪುವುದಿಲ್ಲವೆಂದೂ, ಅದೇ ಕ್ಷೌರಿಕ ಬರಿಗೈಲೆ ಎದುರಾದರೆ ದಟ್ಟ ದಾರಿದ್ರ್ಯವೆಂತಲೂ ತಿಳಿಯುತ್ತಿದ್ದರು. ದಾರಿಯಲ್ಲಿ ಬೆಕ್ಕು ಎಡಕ್ಕೆ ಬಂದರೆ ನಂಬರ್ ಆಗುವುದಿಲ್ಲವೆಂತಲೂ, ಬಲಕ್ಕೆ ಹೋದರೆ ನಂಬರ್ ಹೊಡೆಯುತ್ತದೆಯೆಂತಲೂ ನಂಬುತ್ತಿದ್ದರು. ಹೀಗೆ ದಾರಿಗೆ ಎದುರಾಗುವವರನ್ನು ಆಧರಿಸಿದ ನಂಬಿಕೆಗಳೂ ಓಸಿ ನಂಬರನ್ನು ನಿರ್ದರಿಸುತ್ತಿದ್ದವು.
ನಂಬರ್ ಚಾರ್ಟ ಮೇಲೆ ನೊಣ ಕೂರುವುದು: ಇದೊಂದು ವಿಚಿತ್ರವಾದ ನಂಬಿಕೆ. ಆಟಗಾರರಲ್ಲಿ ಓಸಿ ನಂಬರುಗಳಿರುವ ಚಾರ್ಟ ಇರುತ್ತವೆ. ಈ ಚಾರ್ಟನ್ನು ಅದೃಷ್ಟದ ಪಂಚಾಂಗದಂತೆ ಕಾಪಾಡಿಕೊಂಡಿರುತ್ತಾರೆ. ಆ ಚಾರ್ಟನ್ನು ನೆಲದ ಮೇಲೆ ಹಾಸಿ ಅದರ ಮೇಲೆ ನೊಣ ಕೂರುವುದನ್ನು ಕಾಯುತ್ತಿದ್ದರು. ನೊಣ ಯಾವ ನಂಬರ್ ಮೇಲೆ ಕೂರುವುದೋ ಆ ನಂಬರ್ಗೆ ಹಣ ಕಟ್ಟುತ್ತಿದ್ದರು. ಹೀಗೆ ನೊಣವನ್ನು ಆಕಷರ್ಿಸಲು ಆ ಚಾರ್ಟ ಮೇಲೆ ಸಕ್ಕರೆಯನ್ನೂ ಚೆಲ್ಲುವುದಿತ್ತು. ಒಮ್ಮೊಮ್ಮೆ ಈ ನೊಣ ಎರಡು ನಂಬರ್ಗಳ ಮದ್ಯೆ ಕೂತುಬಿಡುತ್ತಿತ್ತು. ಆಗ ಓಸಿಗರಿಗೆ ಯಾವ ನಂಬರ್ ಆಡುವುದೆಂದು ಬುಗಿಲಾಗುತ್ತಿತ್ತು. ಒಮ್ಮೊಮ್ಮೆ ನೊಣ ಬಲಗಾಲನ್ನಿಟ್ಟ ನಂಬರ್ ಆಡುವುದೆಂತಲೂ, ಅದು ಕೂತ ಎರಡೂ ನಂಬರ್ ಗಳನ್ನು ಆಡುವುದೆಂತಲೂ ನಿದರ್ಾರ ಮಾಡುತ್ತಿದ್ದರು. ಅಂತೂ ಚಾರ್ಟ ಹಾಸಿ ನೊಣ ಕೂರುವುದನ್ನೇ ಕಾಯುತ್ತಿದ್ದ ಓಸಿಗರನ್ನು ನೋಡುವುದೇ ಒಂದು ಚೆಂದ. ಪಾಪ ನೊಣಕ್ಕೆ ಇದಾವುದರ ಪರಿವೇ ಇಲ್ಲದೆ, ಸಕ್ಕರೆಯ ಕಂಡು ಹೊಟ್ಟೆಪಾಡಿಗಾಗಿ ಕೂತರೆ, ಹಾಗೆ ಕೂತ ನಂಬರಿಗೆ ಜನ ಹಣ್ಣ ಕಟ್ಟುತ್ತಿದ್ದರು.
ಮಕ್ಕಳಿಂದ ಬೆರಳು ಹಿಡಿಸುವುದು: ಪುಟಾಣಿ ಮಕ್ಕಳನ್ನು ಓಸಿ ನಂಬರ್ ಹಿಡಿಯುವುದಕ್ಕೆ ಅದೃಷ್ಟ ದೇವತೆಗಳೆಂದು ಓಸಿಗರು ಭಾವಿಸುತ್ತಿದ್ದರು. ಮನಸ್ಸಿನಲ್ಲಿ ಒಂದು ನಂಬರ್ ಇಟ್ಟುಕೊಂಡು, ಅದು ನಿಜವಾಗುತ್ತದೆ ಎಂದರೆ ನಡುವಿನ ಬೆರಳು ಹಿಡಿ, ಇಲ್ಲವಾದರೆ ಬೇರೆ ಬೆರಳು ಹಿಡಿ ಎಂದು ಮಕ್ಕಳೆದುರು ಮುಂಗೈ ಎತ್ತುತ್ತಿದ್ದರು. ಆಗ ಮಗು ಆಟವಾಡುತ್ತಾ ಯಾವ ಬೆರಳು ಹಿಡಿಯುತ್ತೆ ಎನ್ನು ವುದನ್ನು ಅವಲಂಬಿಸಿ ಓಸಿ ನಂಬರ್ ಹಿಡಿಯುತ್ತಿದ್ದರು. ಒಮ್ಮೊಮ್ಮೆ ಅಚಾನಕ್ ಆ ಮಗು ಬೆರಳಿಡಿದ ನಂಬರ್ ಹತ್ತಿದರೆ, ಆ ಮಗುವಿಗೆ ಅದೃಷ್ಟ ಕುಲಾಯಿಸಿದಂತೆ. ಹೆಚ್ಚು ಓಸಿ ಹೊಡೆದಿದ್ದರೆ ಡ್ರಸ್ ತರುವುದು, ಕಡಿಮೆ ಓಸಿ ಹೊಡೆದಿದ್ದರೆ ಬ್ರೆಡ್ಡು, ಬಿಸ್ಕತ್ತು, ಮುಂತಾದ ತಿನಿಸನ್ನು ತರುವುದೂ ನಡೆಯುತ್ತಿತ್ತು. ಈ ನಂಬರ್ ಆದದ್ದು ಊರಲ್ಲಿ ಸುದ್ದಿಯಾದರೆ, ಆ ಮಗುವಿನ ಹತ್ತಿರ ಓಸಿಗರು ಬಂದು ಬೆರಳು ಹಿಡಿಸುವ ಕಾಯರ್ಾಚರಣೆ ಶುರುಮಾಡುತ್ತಿದ್ದರು. ಆಗ ಮಗು ಬೆರಳಿಡಿದೂ ಬೆರಳಿಡಿದೂ ಸುಸ್ತಾಗಿ ಅಳಲು ಶುರು ಮಾಡುವುದೂ, ಆ ಮಗುವಿನ ತಾಯಿ `ಹೋಗ್ರಪ್ಪೋ ನನ್ ಮಗೀಗೆ ಆಸ್ರ ಆಗ್ತಾತಿ’ ಎಂದು ಓಸಿಗರನ್ನು ದಬಾಯಿಸುವುದೂ ಒಟ್ಟೊಟ್ಟಿಗೆ ನಡೆಯುತ್ತಿದ್ದವು. ಮಕ್ಕಳು ಮತಾಡುವುದನ್ನು ಕಲಿತ ಮೊದಲ ತೊದಲ ನುಡಿಗಳಲ್ಲಿ ನಂಬರ್ ಹೇಳಿಸುವುದೂ, ಶಾಲೆಗೆ ಹೋಗುವ ಮಕ್ಕಳಲ್ಲಿ ಯಾವುದಾದರೂ ಅದೃಷ್ಟದ ನಂಬರ್ ಹೇಳು ಎಂದು ಪೀಡಿಸುವಿಕೆಯೂ ಇರುತ್ತಿತ್ತು.
ಕಣ್ಣು ಹೊಡೆದುಕೊಳ್ಳುವುದು: ಕಣ್ಣು ಹೊಡೆದುಕೊಳ್ಳುತ್ತಿದ್ದರೆ, ಅದು ಅದೃಷ್ಟದ ಸಂಕೇತವೆಂದು ಭಾವಿಸುತ್ತಿದ್ದರು. ಅಂತವರು ತಮ್ಮ ಮನಸ್ಸಿನಲ್ಲಿ ಅಂದುಕೊಂಡ ನಂಬರ್ ಹೇಳಿದರೆ ಆ ನಂಬರ್ ಆಗುವುದೆಂದು ಭಾವಿಸಲಾಗುತ್ತಿತ್ತು. ಅದರಲ್ಲಿ ಗಂಡುಮಕ್ಕಳಿಗೆ ಬಲದ ಕಣ್ಣು, ಹೆಣ್ಣುಮಕ್ಕಳಿಗೆ ಎಡದ ಕಣ್ಣು ಹೊಡೆದುಕೊಳ್ಳುತ್ತಿದ್ದರೆ ಅದೃಷ್ಟವೆಂತಲೂ, ಗಂಡುಮಕ್ಕಳಿಗೆ ಎಡಕಣ್ಣು, ಮಹಿಳೆಗೆ ಬಲಕಣ್ಣು ಹೊಡೆದುಕೊಳ್ಳುತ್ತಿದ್ದರೆ ಕೆಡುಕೆಂತಲೂ ಭಾವಿಸಲಾಗುತ್ತಿತ್ತು. ಒಮ್ಮೊಮ್ಮೆ ಓಸಿ ಆಡುವವನ ಎಡ ಕಣ್ಣು ಹೊಡೆದರೆ ಅವನು ಆ ದಿನ ಯಾವ ನಂಬರಿಗೂ ಹಣ ಕಟ್ಟುತ್ತಿರಲಿಲ್ಲ. ಹಾಗಾಗಿ ಆತ ದಿನಪೂರ್ತಿ ನಿರಾಳವಾಗಿರುತ್ತಿದ್ದ. ಅದೇ ಬಲದ ಕಣ್ಣು ಹೊಡೆದರೆ ಸಾಲ ಮಾಡಿ ನಂಬರ್ ಗೆ ಹಣ ಕಟ್ಟಿ ವಿಚಿತ್ರ ತಳಮಳದಲ್ಲಿ ದಿನ ಕಳೆಯುತ್ತಿದ್ದರು. ಇದನ್ನು ಮಹಿಳಾ ಓಸಿಗಾರ್ತಿಯರೂ ಬಲವಾಗಿ ನಂಬುತ್ತಿದ್ದರು.
ಸೀನುವುದು: ಓಸಿ ನಂಬರ್ ಬಗ್ಗೆ ಮಾತನಾಡುತ್ತಾ ಕೂತಾಗ ಯಾರಾದರೂ ಒಂದು ಬಾರಿ ಸೀನಿದರೆೆ ಹುಸಿ ಎಂತಲೂ, ಎರಡು ಬಾರಿ ಸೀನಿದರೆ ಅದೃಷ್ಟವೆಂತಲೂ ನಂಬುತ್ತಿದ್ದರು. ಆ ನಂಬುಗೆಯನ್ನು ಆಧರಿಸಿಯೂ ನಂಬರ್ಗೆ ಹಣಕಟ್ಟುವಿಕೆಯೂ ಇತ್ತು. ಅದರಲ್ಲಿ ಕೆಲವರ ಸೀನು ಒಳ್ಳೆಯದೆಂತಲೂ, ಕೆಲವರ ಸೀನು ಕೆಟ್ಟದ್ದೆಂತಲೂ ನಂಬುತ್ತಿದ್ದರು. ಚಿಕ್ಕಮಕ್ಕಳ ಸೀನು ಯಾವಾಗಲೂ ಒಳ್ಳೆಯದೆ ಎನ್ನುವ ನಂಬಿಕೆ ಬಲವಾಗಿತ್ತು.
ಹೀಗೆ ಓಸಿ ಆಟವು ನಾನಾ ತರಾವರಿ ನಂಬಿಕೆಯನ್ನು ಹುಟ್ಟಿಸಿತ್ತು. ಈ ಎಲ್ಲಾ ನಂಬಿಕೆಗಳು ಇದೇ ಮೊದಲು ಹುಟ್ಟಿಕೊಂಡವಲ್ಲ. ಬದಲಾಗಿ ಜನರಲ್ಲಿ ಈಗಾಗಲೇ ಇದ್ದ ನಂಬಿಕೆಗಳು ಓಸಿ ನಂಬರಿನ ಜತೆ ಹೊಸ ಒಡನಾಟ ಶುರುಮಾಡಿಕೊಂಡಿದ್ದವಷ್ಟೆ. ಈ ಎಲ್ಲಾ ನಂಬಿಕೆಗಳ ಹಿಂದೆ, ಕಾಗೆ ಕೂರುವುದಕ್ಕೂ, ಟೊಂಗೆ ಮುರಿಯುವುದಕ್ಕೂ ಸರಿ ಹೋಯಿತು ಎನ್ನುವ ಗಾದೆಯಂತೆ ಕಾಕತಾಳೀಯವಾಗುತ್ತಿತ್ತು. ಹಾಗಾಗಿ ಆಯಾ ನಂಬಿಕೆಗಳಿಗೆ ಬಲ ಬರುತ್ತಿತ್ತು. ಆಯಾ ನಂಬಿಕೆಯು ತನ್ನ ಮೇಲಿನ ವಿಶ್ವಾಸ ಕಡಿಮೆಯಾಗುತ್ತದೆ ಎನ್ನುವಾಗಲೇ ಮತ್ತೊಮ್ಮೆ ಅಂತಹದ್ದೇ ಘಟನೆ ಜರುಗುತ್ತಿತ್ತು. ಆಗ ಆಯಾ ನಂಬಿಕೆ ಮತ್ತೆ ಹಸಿರಾಗಿ ಬಲ ಹೆಚ್ಚಿಸಿಕೊಳ್ಳುತ್ತಿತ್ತು. ಇದುವೇ ಓಸಿ ಹುಟ್ಟಿಸಿದ ನಂಬಿಕೆಯ ಲೋಕ.
ನಾನು ಈಚೆಗೆ ಕೊಟ್ಟೂರಿನ ಜನಪದ ಹಾಡುಗಾರ ಸುಣ್ಣಗಾರ ಹನುಮಂತಪ್ಪನಲ್ಲಿಗೆ ಹೋಗಿದ್ದೆ. ಆತ ಸದ್ಯದ ಕಾಲದ ಸಂಗತಿಗಳನ್ನು ಅದ್ಭುತವಾಗಿ ಹಾಡು ಕಟ್ಟಿ ಹಾಡುತ್ತಾನೆ. ಈ ಕಂಚಿನ ಕಂಟದ ಹಾಡುಗಾರ ಹಾಡುತ್ತಾ ಹಾಡುತ್ತಾ ಓಸಿ ಆಟದ ಬಗ್ಗೆ ಕಟ್ಟಿದ ಹಾಡನ್ನೂ ಹಾಡಿದ. ಈ ಲಾವಣಿ ಪದ ಹೀಗಿದೆ:
ಓಸಿ ಬಂದಿತವ್ವ | ಓಸಿ ಆಟ ಬಂತವ್ವಾ..
ಚೀಟಿಯ ಬರೆಸಿ ಜೇಬಿನ ಒಳಗೆ ಇಟ್ಟರು ನೋಡವ್ವಾ..
ದೇಶದೇಶಕೆ ಮೋಸ ಮಾಡಿತು ಎಂಥ ಓಸೆವ್ವಾ..
ರಾಶಿಗಟ್ಟಲೆ ಹಣವ ಕಟ್ಟಿ ಪಾಸಿ ಬಿದ್ದರವ್ವಾ.. ||ಓಸಿ ಬಂದಿತವ್ವ||
ಬಾಂಬೆಲಿಂದ ಸಾಹುಕಾರ ಫೋನು ಹಚ್ಯಾನವ್ವಾ..
ಹಳ್ಳಿಡಿಲ್ಲೀಗೆಲ್ಲಾ ಫೋನು ನಂಬರು ಕೈಗೆ ಕೊಟ್ಟನವ್ವಾ..
ಒಂಬಂತ್ತುವರಿಗೆ ಓಪನ್ ಕೇಳಾಕ ಉಪವಾಸ ಹೊಂಟನವ್ವಾ..
ಓಪನ್ ಕೇಳಿ ಟೋಪಿಗಿ ಎಳಿಯುತಾ.. ಮನೆಗೆ ಬಂದನವ್ವಾ..
ಕ್ಲೋಜಿನ ಸುದ್ದಿ ಕೇಳಿ ಉದಯಕೆ ಸಾಕಾಯಿತವ್ವಾ..
ಕೈಯೊಳು ಚೀಟಿ ಹರಿದು ಬಿಸಾಕಿ ಊಟಬಿಟ್ಟನವ್ವಾ.. ||ಓಸಿ ಬಂದಿತವ್ವ||
ಒಂದು ಊರಲ್ಲಿ ಗಂಡ ಹೆಂಡರು ಇದ್ದರು ಕೇಳವ್ವಾ..
ಗಂಡಗೆ ಕಾಣದೆ ಓಸಿ ಕಟ್ಟೆಳು ನೋಡು ಕೆಟ್ಟ ದೈವ..
ಖಚರ್ಿಯ ತುಂಬಾ ಜ್ವಾಳ ಇದ್ದವು ದಿವಸ ಮಾರೆಳವ್ವಾ..
ಓಸಿಗೆ ಕಟ್ಟಿ ಖರ್ಚು ಬರಿದಾಯಿತು ಕೇಳರೀ ದೈವಾ..
ಬಂಗಾರ ಬೆಳ್ಳಿ ಒಳಗೆ ಮಾರೇಳು ಕೇಳೇ ಹಡೆದವ್ವಾ..
ಕೊರಳ ತಾಳಿ ಮಾರಿ ಕಟ್ಟೇಳು ಕಡೆಯದಾಯಿತ್ವಾ..
ಗಂಡಗೆ ಉತ್ತರ ಹೇಳಲಾರದೇ ತೂಗಿ ಕೆಟ್ಟ ಭಾವಾ..
ಚೀಟಿಗೆ ಬರೆದು ಕೊರಳಿಗೆ ಹೊರಳು ಹಾಕಿ ಸತ್ತಳವ್ವಾ..
ಗಂಡನು ಓದಿ ಕಂಡನು ವಾದಿ ಮಣ್ಣಗಿಟ್ಟನವ್ವಾ
ತನ್ನ ಕರ್ಮಕೆ ತಾನೇ ಸತ್ತಳು ವಿಧಿಎಳೆದಿತವ್ವಾ..
ಸತ್ತ ದಿನವೆ ತನ್ನ ಓಸಿ ಎದ್ದಿತು ಕೇಳೀರಿ ದೈವಾ.. ||ಓಸಿ ಬಂದಿತವ್ವ||
ಓಸಿಯೆಂಬುದು ಬಿಟ್ಟ ಇದನಾ ಬೇಸಾಯ ಮಾಡವ್ವಾ..
ರೈತನಿಂದಲೇ ಸಕಲ ಜೀವಕೆ ಅನ್ನವ ಕೊಡುವವ್ವಾ..
ಓಸಿಯೆಂಬುದನು ಬಿಟ್ಟು ಇದನ ಬೇಸಾಯ ಮಾಡವ್ವಾ..
ಭೂಮಿ ಮನೆಗಳನು ಮಾರಿ ಕಟ್ಟಿದರೂ ಎಂಥಾ ಓಸೆವ್ವಾ..
ಹಂಡೇವು ಗಂಗಾಳ ಚರಿಗಿ ಗಂಗಾಳ ಮಾರಿ ಕಟ್ಟೆರವ್ವಾ..
ಎಲ್ಲದು ಮಾರಿ ನಿಲ್ಲದೆ ಹೊರಟನು ಮನೆ ಮನೆ ತಿರುಗುವಾ..
ಬೀಡಿ ಚಾವ ಮಂದಿ ಕೇಳತಾವ ನಾಚಿಕಿಲ್ಲದಾವಾ..
ಹೆಂಡರು ಮಕ್ಕಳು ಮರೆತರು ಇವರು ಕಾಟ ತಡೆಯರವ್ವಾ..
ಊರ ಹೊರಗಿನ ಗುಡಿಯ ನೋಡಿ ಹೋಗಿ ಮಲಗೆರವ್ವಾ..
ಬಳ್ಳಿಗನೂರು ಬಲ್ಲವನೆ ಬಲ್ಲ ಬಾರಿ ಹೇಳುವರವ್ವಾ..
ಕೊಟ್ಟೂರು ಹನುಮಣ್ಣನಲ್ಲಿ ಕಲಿಯಿರಿ ವಿದ್ಯಾದಾನವಾ.. ||ಓಸಿ ಬಂದಿತವ್ವ||
ಇದು ಜನಪದ ಹಾಡುಗಾರನೊಬ್ಬ ಹಾಡಿದ ಹಾಡು. ಈತನ ಹಾಡಿನಲ್ಲಿ ಓಸಿ ಆಟದ ದುಷ್ಪರಿಣಾಮಗಳನ್ನು ಹೇಳುತ್ತಿದ್ದಾನೆ. ಹಾಗೆಯೇ ಓಸಿ ಆಟದ ಬಗ್ಗೆ ಗಾದೆಗಳು ಹುಟ್ಟಿವೆ. ಆ ಗಾದೆಗಳು ಹೀಗಿವೆ:
`ಓಸಿ ಆಡಿ ಪಾಸಿಗೆ ಬಿದ್ದಾಂಗ’
`ಓಪನ್ನಿಗೆ ಊಟಿಲ್ಲ, ಕ್ಲೋಜ್ಗೆ ನಿದ್ದಿಲ್ಲ’
`ಓಸಿಯಾಡಿದವ್ನು, ಹೇಸಿಗೆಗಿಂತ ಕಡೆ’
`ಓಸಿಯಾಡಿ ನಿರ್ವಂಸಿಯಾದ್ನಂತೆ’
`ಓಸಿ ಆಟ ಹಾಡಿ ನೋಡು, ತಲೆ ಬೊಳಿಸಿ ನೋಡು’
ಹೀಗೆ ಓಸಿ ಜನಸಾಮಾನ್ಯರಲ್ಲಿ ಜನಪದ ಸಂಗತಿಯಾಗುವ ಮಟ್ಟಿಗೆ ಬೆಳೆದಿದೆ. ಇದೊಂದು ಕಾನೂನು ಬಾಹಿರ ಆಟ. ಈ ಆಟವನ್ನು ಕಾನೂನು ಯಾವ ರೀತಿಯಲ್ಲಿ ನಿಯಂತ್ರಿಸಿದೆ ಎಂದು ಇದರಿಂದ ಗೊತ್ತಾಗುತ್ತದೆ.
 

‍ಲೇಖಕರು G

25 August, 2013

1 Comment

  1. Sridhar Pai

    Government should ban this manehaala osi aata.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading