ತೇಜಸ್ವಿಯನ್ನು ಹುಡುಕುತ್ತಾ : ಲಂಕೇಶ್ ’ಸಧ್ಯ ಮಾನ ಉಳಿಸಿದೆ ಮಾರಾಯ’ ಅಂದ್ರು

ಭಾಗ ೧೦

(ಭಾಗ ೯ ಓದಲು ಇಲ್ಲಿ ಕ್ಲಿಕ್ಕಿಸಿ)

ಮರುದಿನ ಬೆಳಗಿನ ಜಾವ ೪ ಗಂಟೆ ಹೊತ್ತಿಗೆಲ್ಲ ಎಚ್ಚರವಾಯಿತು. ರಾತ್ರಿ ಸರಿಯಾಗಿ ನಿದ್ರೆಬಾರದ ಕಾರಣ ದೇಹದ ತುಂಬಾ ಒಂದು ಬಗೆಯ ಅನ್ ಈಸಿನೆಸ್. ಜೊತೆಗೆ ಒಂದೇ ಕಡೆ ತಲೆ ನೋವು.ತಂಡದೊಂದಿಗೆ ಹಾಗೆ ಹೇಳಿದರೆ ಎಲ್ಲಿ ಅವರ ಉತ್ಸಾಹವೂ ಕುಗ್ಗುತ್ತದೊ ಎನ್ನಿಸಿ ಎನೊಂದು ಹೇಳದೆ ಯಥಾಪ್ರಕಾರ ಮುಖತೊಳೆದುಕೊಂಡ ಶಾಸ್ತ್ರ ಮುಗಿಸಿ ೫.೩೦ಕ್ಕೆಲ್ಲ ನಾನು ನಮ್ಮ ಮೂವರೂ ಹುಡುಗರು ಕ್ಯಾಮೆರದೊಂದಿಗೆ ಐಬಿ ಬಿಟ್ಟು ಹೊರಬಂದೆವು. ಅಂದಿನ ಚಿತ್ರೀಕರಣ ಪ್ರಾರಂಭವಾಗಿದ್ದು ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ಬಳಿಯಿಂದ. ಮೂಡಿಗೆರೆಯ ಹ್ಯಾಂಡ್ ಪೋಸ್ಟಿನ ಕೆಲವು ಶಾಟ್ಸ್ ಬೇಕಿದ್ದವು. ನಿತ್ಯದ ದಿನಚರಿಯೆಂಬಂತೆ ಮಳೆ ರಾತ್ರಿಯಿಡೀ ಸುರಿದು ಬೆಳಿಗ್ಗೆ ಸ್ವಲ್ಪ ಬಿಡುವು ಕೊಟ್ಟಿತ್ತು. ಆದರೆ ಚಳಿ ಮಾತ್ರ ನಿನ್ನೆಗಿಂತಲೂ ಹೆಚ್ಚಾಗಿತ್ತು.
ನೇರ ಹ್ಯಾಂಡ್ ಪೋಸ್ಟಿನ ಮೂಲೆಯಲ್ಲಿನ ಟೀಶಾಪ್ ಹೊಕ್ಕು ಬಿಸಿಬಿಸಿ ಚಹಾ ಕುಡಿದೆವು. ನಿತಿನ್ ಸುಡುತ್ತಿದ್ದ ಚಹಾ ಕಪ್ಪನ್ನು ಕೆನ್ನೆ ಮೇಲೆ ಇಟ್ಟುಕೊಂಡು ’ಶ್ಶ್ಶ್ಶ್ಶ್ಸ್ ಹಾಹಾಹಾ’ ಎಂದು ಸದ್ದು ಮಾಡುತ್ತಾ ಮುಖ ಬೆಚ್ಚಗೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದ. ಜರ್ಕಿನ್ನು, ಜೀನ್ಸು ಹಾಕಿಕೊಂಡಿದ್ದರೂ ಕರುಣೆ ತೋರಿಸದೆ ಮೈ ಕೊರೆಯುತಿದ್ದ ಆ ಚಳಿಯಲ್ಲಿ ದರ್ಶನ್ ಹಾಗೂ ಹೇಮಂತ ಇಬ್ಬರೂ ಮುಕಾಲು ಪ್ಯಾಂಟು ಹಾಕಿಕೊಂಡು ಬಂದಿದ್ದರು. ’ಎನ್ರೋ ಚಳಿ ಆಗಲ್ವೇನ್ರೊ? ಕಾಲು ಕಾಣಿಸೊ ಹಂಗೆ ಚಡ್ಡಿ ಹಾಕೊಂಡ್ ಬಂದಿದ್ದಿರ’ ಎಂದು ಅವರಿಬ್ಬರನು ಪ್ರಶ್ನಿಸಿದರೆ ’ಹೆಹೆ ಚಳೀನ….? ಬಿಸಿ ರಕ್ತ ಮ್ಯಾನ್ ನಮ್ದು…ಹೆಹೆಹೆ’ ಎಂದು ಟಿಪಿಕಲ್ ಶೈಲಿಯಲ್ಲಿ ನಗುತ್ತಾ, ಟೇಬಲ್ ಕೆಳಗಿನಿಂದ ಕಾಲು ಅಲ್ಲಾಡಿಸಿದ ಹೇಮಂತ. ದರ್ಶನ್ ಬುದ್ಧನಂತೆ ಸ್ಥಿತಪ್ರಜ್ಞರಾಗಿ ಪ್ರಶ್ನೆ ತನಗೆ ಕೇಳಿಸಿಯೇ ಇಲ್ಲ ಎಂಬಂತೆ ಟೀ ಹೀರುವುದರಲ್ಲಿ ಮಗ್ನರಾಗಿದ್ದರು. ಕ್ಯಾಮೆರ ಅವರ ಪಕ್ಕಕ್ಕೆ ಮೌನವಾಗಿ ಕವುಚಿ ಕುಳಿತ್ತಿತ್ತು.
ಟೀ ಮುಗಿಸಿ ತಂಡದ ಮೂವ್ವರಿಗೂ ಆ ದಿನದ ಚಿತ್ರೀಕರಣದ ಯೋಜನೆ ವಿವರಿಸಿದೆ. ಆ ಪ್ರಕಾರ ಅಂದು ಹೆಚ್ಚಿನ ಚಿತ್ರೀಕರಣವಿರಲಿಲ್ಲ. ಹಾಗಾಗಿ ಯಾವುದೇ ಆತುರ, ಗಡಿಬಿಡಿ ಇಲ್ಲದೇ ಹ್ಯಾಂಡ್ ಪೋಸ್ಟಿನ ಶಾಟ್ಸ್ ತೆಗೆದು ಮುಗಿಸಿದೆವು. ಸಮಯ ೮ ಗಂಟೆ ಅಗಿತ್ತು. ಅಲ್ಲಿನ ಕೆಲಸ ಮುಗಿಸುವಷ್ಟರಲ್ಲಿ ನನ್ನ ಫೋನ್ ಹೊಡೆದುಕೊಳ್ಳತೊಡಗಿತು. ತೆಗೆದು ನೋಡಿದೆ, ಧನಂಜಯ ಜೀವಾಳ ಫೋನ್ ಮಾಡಿದ್ದರು. ಧನಂಜಯ್ ‘ಅಂದಿನ ಚಿತ್ರೀಕರಣದ ಪ್ಲಾನ್ ಏನು?’ಎಂದು ಕೇಳಿದರು. ನಾನು ‘ಇವತ್ತೇನೂ ಅಂತ ಮೇಜರ್ ಶೂಟಿಂಗ್ ಇಲ್ಲ. ಇಬ್ಬರದ್ದು ಮಾತುಗಳು ಶೂಟ್ ಮಾಡೋಕಿದೆ ಅಷ್ಟೆ’ ಎಂದೆ. ತಕ್ಷಣ ಧನಂಜಯ್ ’ಹಾಗಾದ್ರೆ ಒಂದ್ಕೆಲ್ಸ ಮಾಡಿ, ನಾನು ಒಂದಿಬ್ಬರ ಡೀಟೈಲ್ಸ್ ಕೊಡ್ತೀನಿ. ಮೂಡಿಗೆರೆಯವ್ರೆ ಅವರು. ಅವರನ್ನೂ ಮಾತಾಡ್ಸಿ. ಪ್ರಯೋಜನ ಆಗಬಹುದು’ ಎಂದು ಇಬ್ಬರ ಹೆಸರು ಹಾಗೂ ನಂಬರ್ ಕೊಟ್ಟು ಧನ್ಯವಾದಕ್ಕು ಕಾಯದೇ ಫೋನ್ ಕಟ್ ಮಾಡಿದರು.
ಧನಂಜಯ್ ಕೊಟ್ಟ ಆ ಎರಡು ಹೆಸರುಗಳಲ್ಲಿ ಮೊದಲನೆಯದು ಮೂಡಿಗೆರೆಯ ಕೃಷ್ಣಪ್ಪನವರದ್ದು. ನಿತಿನ್, ಫೋನಿನಲ್ಲಿ ಕೃಷ್ಣಪ್ಪನವರು ಹೇಳಿದ ಅಡ್ರೆಸ್ಸಿನ ಕಡೆ ವ್ಯಾನ್ ಓಡಿಸಿದ. ಹತ್ತೇ ನಿಮಿಷದಲ್ಲಿ ನಾವು ನಾಲ್ಕೂ ಜನರು ಮೂಡಿಗೆರೆಯ ಕೃಷ್ಣಪ್ಪನವರ ಮನೆಯಲ್ಲಿದ್ದೆವು.
ಸಿನಿಮಾ ಛಾನ್ಸ್ ಕೇಳಿ ಬೈಸಿಕೊಂಡ ಕೃಷ್ಣಪ್ಪನವರ ಕಥೆ
‘೧೯೬೮ನೇ ಇಸ್ವಿ, ಆಗ ಮೂಡಿಗೆರೆಯಲ್ಲಿ ನಾನು ಪೆಟ್ರೋಲ್ ಬಂಕ್ ನಡಿಸ್ತಾ ಇದ್ದೆ. ಆಗ ಅವರು ಜನ್ನಾಪುರದ ಹತ್ರ ತೋಟ ತಗೊಂಡಿದ್ರು. ಆಗಾಗ ನನ್ ಪೆಟ್ರೋಲ್ ಬಂಕಿಗೆ ಪೆಟ್ರೋಲಿಗೆ ಆಗಾಗ ಬರ್ತಾ ಇದ್ರು. ಆಗ್ಲೇ ನಾನು ಅವ್ರನ್ನ ಫಸ್ಟ್ ನೋಡಿದ್ದು’ ಎಂದು ತೇಜಸ್ವಿ ನೆನಪಿನ ಬುತ್ತಿಯನ್ನು ಬಿಚ್ಚಿ ಕುಳಿತವರು ಮೂಡಿಗೆರೆಯ ಕೃಷ್ಣಪ್ಪನವರು. ಇವರು ಯಾರು ಅಂತ ಇಲ್ಲಿ ಒಂದೇ ಮಾತಿನಲ್ಲಿ ಹೇಳೋದು ತುಂಬಾ ಕಷ್ಟ. ಹಾಗಾಗಿ ಇವರು ತೇಜಸ್ವಿ ಕುರಿತು ನಮ್ಮೊಂದಿಗೆ ಹಂಚಿಕೊಂಡ ನೆನಪುಗಳನ್ನು, ಅಂದಿನ ಸ್ವಾರಸ್ಯಕರ ಘಟನೆಗಳನ್ನು ಒಂದೊಂದಾಗಿ ಹೇಳ್ತಾ ಹೋದ್ರೆ ಬಹುಶಃ ಮೂಡಿಗೆರೆಯ ಕೃಷ್ಣಪ್ಪ ಎಂದರೆ ಯಾರು ಅಂತ ಸ್ಪಷ್ಟವಾಗಬಹುದು.ಮುಂದಿನದನ್ನುಕೃಷ್ಣಪ್ಪನವರ ಮಾತಿನಲ್ಲೇ ಕೇಳೋಣ;
‘ನನ್ ಪೆಟ್ರೋಲ್ ಬಂಕಿಗೆ ಆಗಾಗ ಪೆಟ್ರೋಲಿಗೆ ಬರ್ತಾ ಇದ್ರಲ್ಲ ಆಗ ನನಗೆ ಇವ್ರೇ ತೇಜಸ್ವಿ ಅಂತ ಗೊತ್ತಿರ್ಲಿಲ್ಲ. ಸ್ವಲ್ಪ ದಿನ ಆದ್ಮೇಲೆ ಹ್ಯಾಗೋ ಇವ್ರೇ ತೇಜಸ್ವಿ ಅಂತ ಗೊತ್ತಾಯ್ತು, ಒಂಥರ ಖುಷಿಯಾಯ್ತು. ಅವ್ರ ಹತ್ರ ಒಂದು ಸ್ಕೂಟ್ರು ಒಂದು ಜೀಪ್ ಇತ್ತು ಆಗ. ಆಗಿನ ಕಾಲಕ್ಕೆ ಅವ್ರು ಪೆಟ್ರೋಲ್ ಹಾಕಿಸ್ಕೊಂಡ್ ಚೆಕ್ ಕೊಡ್ತಾ ಇದ್ರು, ಇವ್ರು ತೇಜಸ್ವಿ ಅಂತ ಗೊತ್ತಾದಾಗ ಮೊದ್ ಮೊದ್ಲು ನಾನು ಮಾತನಾಡಿಸೋಕೆ ಪ್ರಯತ್ನ ಪಡ್ತಿದ್ದೆ. ಆಗವ್ರು ‘ನಿಮಗೇನ್ ಮಾಡಕ್ ಕೆಲ್ಸ ಇಲ್ಲೇನ್ರಿ?’ ಅಂತ ರೇಗಿದ್ರು. ಅಮೇಲೆ ನಾನಾಗಿ ನಾನೇ ಅವ್ರನ್ನ ಮಾತಾಡ್ಸೋದು ಬಿಟ್ಟು ಅವ್ರು ಮಾತಾಡ್ಸಿದ್ರೆ ಮಾತ್ರ ಮಾತಾಡ್ತಿದ್ದೆ.
ಒಂದ್ಸಲ ಇವ್ರ ಕಥೆ ‘ಅಬಚೂರಿನ ಪೋಸ್ಟಾಪೀಸು’ ಸಿನಿಮಾ ಆಗ್ತಾ ಇದೆ ಅಂತ ಗೊತಾಗಿ ನಾನೇ ಹೋಗಿ ಅವ್ರನ್ನ ಇದರ ಬಗ್ಗೆ ಕೇಳ್ದೆ. ಅದಕ್ಕವ್ರು ‘ಹೌದಾ??…ಅಲ್ರಿ ನಿಮಗೇನ್ ಕೆಲ್ಸ ಇಲ್ಲೇನ್ರಿ. ಯಾವಾಗ್ ನೋಡಿದ್ರು ಇಂತವೇ ಮಾತಾಡ್ತೀರಲ್ರಿ’ ಅಂತ ಸಿಕ್ಕಾಪಟ್ಟೆ ಕೋಪ ಮಾಡ್ಕೊಂಡ್ರು. ಅಮೇಲೆ ಇದರ ಬಗ್ಗೆ ಪತ್ರಿಕೆಗೆ ಒಂದು ಲೇಖನನೇ ಬರೆದ್ರು, ‘ನಾನ್ ಯಾವ್ ಅಂಗಡಿಗೆ ಹೋಗ್ಲಿ, ಪೆಟ್ರೋಲ್ ಬಂಕಿಗೆ ಹೋಗ್ಲಿ, ಕಟಿಂಗ್ ಶಾಪಿಗೆ ಹೋಗ್ಲಿ ಎಲ್ರೂ ‘ಸಾರ್ ಸಿನಿಮಾ ಮಾಡ್ತಿದ್ದೀರಂತೆ’ ಅಂತ ಕೇಳೋರೆ ಆದ್ರು. ಅಲ್ಲ ಒಬ್ಬ ಸಾಹಿತಿಯ ಕಥೆ ಸಿನಿಮಾ ಆಗ್ಬಾರ್ದ?’ ಅಂತೆಲ್ಲ ತುಂಬಾ ಬೇಜಾರು ಮಾಡ್ಕೊಂಡು ಬರೆದಿದ್ರು. ಕೃಷ್ಣಪ್ಪನವರು ಈ ಘಟನೆಯನ್ನು ವಿವರಿಸುತ್ತಿದ್ದಾಗ ನನಗೆ ನೆನಪಾಗಿದ್ದುಕರ್ವಾಲೋ ಕಾದಂಬರಿ. ಕರ್ವಾಲೋ ಕಾದಂಬರಿಯ ಪ್ರಾರಂಭದಲ್ಲಿ ಜೇನುಪೋಷಕರ ಸಂಘದ ಕೆಲಸಗಾರರಲ್ಲಿ ಒಬ್ಬ (ಇದರಲ್ಲಿ ಇನ್ನೊಬ್ಬ ಮಂದಣ್ಣ) ತೇಜಸ್ವಿ ಸಿನಿಮಾದವರು ಅಂತ ಮಂದಣ್ಣನಿಗೆ ಹೇಳಿದಾಗ ಅವನು ಜೇನು ಕೊಂಡುಕೊಳ್ಳಲು ಹೋದ ತೇಜಸ್ವಿಗೆ ಸಿಕ್ಕಾಪಟ್ಟೆ ಮರ್ಯಾದೆ ಕೊಟ್ಟು ಮಾತನಾಡುವ ಸನ್ನಿವೇಶವಿದೆ.ಕೃಷ್ಣಪ್ಪನವರು ಮುಂದುವರೆಸಿದರು, ‘ಕನ್ನಡ, ಹಿಂದಿ, ಮಲಯಾಳಮ್ಮು ಇಲ್ಲಿನ ದೊಡ್ಡ ದೊಡ್ದ ಡೈರೆಕ್ಟರ್ಸ್ ಎಲ್ಲ ಇವರ ಕಥೆ, ಕಾದಂಬರಿಗಳನ್ನ ಸಿನಿಮಾ ಮಾಡ್ಬೇಕು ಅಂತ ಕೇಳ್ಕೊಂಡ್ ಬರೋರು. ಇವರಿಗೆ ಸಿನಿಮಾ ಬಗ್ಗೇನು ತುಂಬಾ ನಾಲೆಡ್ಜ್ ಇತ್ತು. ಇವರು ಮಾತಾಡ್ತಿದ್ದಿದ್ದೆಲ್ಲಾ ವರ್ಲ್ಡ್ ಸಿನಿಮಾ ಬಗ್ಗೆ. ಆ ಸಿನಿಮಾದಲ್ಲಿ ಆ ಸೀನ್ ನಲ್ಲಿ ಕ್ಯಾಮೆರ ಅಲ್ಲಿಟ್ಟಿದ್ದಾರೆ, ಶಾಟ್ ಈ ಥರ ತೆಗ್ದಿದಾರೆ, ಲೈಟಿಂಗ್ ಸುಮಾರಾಗಿ ಮಾಡಿದಾರೆ ಹೀಗೆ ಸಿನಿಮಾ ಟೆಕ್ನಿಕಲ್ ಪಾಯಿಂಟ್ಸ್ ಬಗ್ಗೆ ಎಲ್ಲಾ ಮಾತಾಡೋರು. ನನಗಂತು ಆಗ ಏನೂ ಆರ್ಥ ಆಗ್ತಿರ್ಲಿಲ್ಲ’ ಎನ್ನುತ್ತ ಮಾತು ಮುಂದುವರೆಸಿದರು.
ಪರಮ ಸ್ವಾಭಿಮಾನಿಯಾದ ತೇಜಸ್ವಿ ಕೃಷ್ಣಪ್ಪನವರ ಬೇಡಿಕೆಯೊಂದಕ್ಕೆ ಕೊಟ್ಟ ಮಾತಿನ ಚಾಟಿ ಏಟಿನ ರುಚಿಯನ್ನು ಇವರಿನ್ನೂ ಮರೆತಿಲ್ಲ. ಆ ಘಟನೆಯನ್ನು ಕೃಷ್ಣಪ್ಪನವರು ವಿವರಿಸುವುದು ಹೀಗೆ, ‘ಒಂದ್ಸಲ ಕಾಸರವಳ್ಳಿಯವರು ‘ತಬರನ ಕಥೆ’ ಮಾಡ್ತೀನಿ ಅಂತ ಬಂದ್ರು. ಆಗ ನನಗೆ ಸಿನಿಮಾದಲ್ಲಿ ಆಕ್ಟ್ ಮಾಡ್ಬೇಕು ಅಂತ ತುಂಬಾ ಆಸೆ ಇತ್ತು. ಅದಕ್ಕೆ ಸೀದ ನಾನು ತೇಜಸ್ವಿಯವರ ಹತ್ರ ಹೋಗಿ ‘ಕಾಸರವಳ್ಳಿಯವರಿಗೆ ಒಂದ್ ಮಾತೇಳಿ ಸಾರ್’ ಅಂತ ಕೇಳ್ದೆ. ಕೇಳ್ಬಾರ್ದಿತ್ತು ಅಂತ ಅಮೇಲೆ ಅನ್ನಿಸ್ತು, ಬಹುಶಃ ಅವತ್ತು ನನ್ ಗ್ರಹಚಾರ ಕೆಟ್ಟಿತ್ತು ಅಂತ ಅನ್ಸುತ್ತೆ, ‘ರೀ ನಿಮಗೋಸ್ಕರ ಅವರತ್ರ ಹೋಗಿ ಅವರ ಕೈಕಾಲು ಹಿಡಿಬೇಕೆನ್ರಿ ನಾನು? ನಿಮಗೆ ಟ್ಯಾಲೆಂಟ್ ಇದ್ರೆ ಸಿಗುತ್ತೆ ಇಲ್ಲಾಂದ್ರೆ ಇಲ್ಲ. ಅವರು ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ಸಿನಿಮಾ ಮಾಡ್ತಾರೆ, ಅಮೇಲೆ ನಿಮ್ಮನ್ನ ಹಾಕೊಂಡ್ ಸಿನಿಮಾ ಮಾಡಿ ಸಿನಿಮಾ ತೋಪಾದ್ರೆ ಯಾರ್ರಿ ಹೊಣೆ? ಅಮೇಲೆ ಅವ್ರು ನಂಗ್ ಉಗೀತಾರೆ. ಸುಮ್ನೆ ಕೆಲ್ಸ ನೋಡ್ಕೊ ಹೋಗ್ರಿ’ ಅಂತ ಸರಿಯಾಗ್ ಬೈದ್ರು. ಅದೇ ಕೊನೆ ಮತ್ತೆ ನಾನು ಅವರತ್ರ ಯಾವತ್ತೂ ಬೇರೆ ಏನೂ ಕೇಳ್ಲೇ ಇಲ್ಲ’, ಎಂದು ತೇಜಸ್ವಿಯವರ ಸ್ವಾಭಿಮಾನ ಕುರಿತು ಮಾತನಾಡಿದರು. ಕಡೆಗೂ ತೇಜಸ್ವಿಯವರು ಕೈಬಿಟ್ಟರೂ ಇವರು ಛಲಬಿಡದ ತ್ರಿವಿಕ್ರಮನಂತೆ ಕಾಸರವಳ್ಳಿಯವರ ಬೆನ್ನು ಬಿದ್ದು ‘ತಬರನ ಕಥೆ’ಯಲ್ಲಿ ಅವಕಾಶ ಗಿಟ್ಟಿಸುವುದರಲ್ಲಿ ಯಶಸ್ವಿಯಾದರಂತೆ!
ನಂತರ ಕೃಷ್ಣಪ್ಪನವರು ಮಾತು ತೇಜಸ್ವಿ ತಮ್ಮ ಸುತ್ತಲಿನದನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದ ಕಡೆ ತಿರುಗಿತು. ‘ನಮ್ಮೂರಿನಲ್ಲಿ ಒಬ್ರು ಬಟ್ಟೆ ಅಂಗಡಿ ಇಟ್ಕೊಂಡಿದ್ರು. ಇವ್ರು ಅಲ್ಲಿ ಹೋಗಿ ನಿಂತು ಅವ್ರು ಸೂಜಿಗೆ ದಾರ ಪೋಣಿಸಿ ತುದಿಗೆ ನಾಟ್ ಕಟ್ಟೋದ್ ನೋಡ್ತಾ ನಿಂತಿರ್ತಿದ್ರು. ಇವರಿಗೆ ಇದೆಲ್ಲ ಯಾಕ್ ಬೇಕು ಅಂತ ನಾವು ಅಂದ್ಕೋತಿದ್ವಿ. ಅಮೇಲೆ ನೋಡಿದ್ರೆ ‘ತುಕ್ಕೋಜಿ’ ಅನ್ನೊ ಕತೇಲಿ ಟೈಲರ್ ಹ್ಯಾಗ್ ದಾರದ ತುದಿಗೆ ನಾಟ್ ಹಾಕ್ತಾನೆ ಅನ್ನೋದನ್ನ ತುಂಬಾ ಅಥೆಂಟಿಕ್ಕಾಗಿ, ಕಲಾತ್ಮಕವಾಗಿ ವರ್ಣಿಸಿದ್ರು. ಹಾಗೆ ಪ್ರತಿಯೊಂದನ್ನು ನೋಡಿ, ತಿಳ್ಕೊಂಡು, ಅನುಭವಿಸಿ ಬರೀತಿದ್ರು. ಪ್ರತಿ ಮಾತಿನಲ್ಲೂ ಸತ್ಯ ಇತ್ತು, ಪ್ರಾಮಾಣಿಕತೆ ಇತ್ತು’ ಎಂದು ತೇಜಸ್ವಿಯವರ ಸೂಕ್ಷ್ಮ ಗ್ರಹಿಕೆಯ ಪರಿಯನ್ನು ವಿವರಿಸಿದರು.
ಮಾತಿನ ಮಧ್ಯದಲ್ಲಿ ನೆನಪಿಗೆ ಬಂದ ಅಂದಿನ ಸ್ವಾರಸ್ಯಕರ ಘಟನೆಯೊಂದನ್ನು ಕೃಷ್ಣಪ್ಪನವರು ನಮ್ಮೊಂದಿಗೆ ಹಂಚಿಕೊಂಡರು. ‘ಒಮ್ಮೆ ತೇಜಸ್ವಿ ಅವರ ಜೀಪಿನಲ್ಲಿ ತೋಟದ ಕಡೆಯಿಂದ ಬರುತ್ತಿದ್ದರಂತೆ. ಅವರ ಜೀಪು ಸಹ ಅವರಂತೆ ‘ಮುಕ್ತ ಮುಕ್ತ’, ಅಂದರೆ ಅದಕ್ಕೆ ಮೇಲೆ ಬಾಡಿ, ಹೊದಿಕೆ ಏನೂ ಇಲ್ಲದ ಓಪನ್ ಜೀಪ್ ಅದು.
ಇವರು ಜೀಪಿನಲ್ಲಿ ಬರುತ್ತಿದ್ದಾಗ ದೂರದಲ್ಲಿ ಒಂದು ಗುಂಪು ನಡೆಯುತ್ತಾ ಹೋಗುತ್ತಿತ್ತಂತೆ. ಆದರೆ ಒಂದು ತಿರುವಿನಲ್ಲಿ ಸೇತುವೆಯೊಂದರ ಬಳಿ ಕಣ್ಣು ಮುಚ್ಚಿ ಬಿಡುವುದರೊಳಗೆ ಆ ಗುಂಪು ಕಾಣಿಸಿಕೊಂಡಿದ್ದೆ ಭ್ರಮೆ ಎಂಬಂತೆ ಮಂಗಮಾಯ! ತೇಜಸ್ವಿ ‘ಎಲ್ಲಿ ಹೋಯಿತು ಆ ಗುಂಪು’ ಎಂದು ಆಶ್ಚರ್ಯಚಕಿತರಾಗಿ ಆ ಸೇತುವೆಯ ಸುತ್ತಮುತ್ತ ಹುಡುಕಿದಾಗ ಆ ಗುಂಪು ಸೇತುವೆಯ ಕೆಳಗೆ ಅವಿತು ಕುಳಿತ್ತಿತ್ತಂತೆ. ತೇಜಸ್ವಿ ಅವರ ಬಳಿ ಹೋಗಿ ‘ಏನಾಯಿತೆಂದು’ ಕೇಳಿದಾಗ ಆ ಗುಂಪು ಸಿನಿಮೀಯ ಶೈಲಿಯಲ್ಲಿ ಮಾಯವಾದ ನಿಜವಾದ ಕಥೆ ಹೊರಬಿದ್ದಿದೆ. ಆ ಗುಂಪು ಕಳ್ಳಭಟ್ಟಿ ಕಾಯಿಸುವವರ ಗುಂಪು. ಹಾಗಾಗಿ ಇವರ ಓಪನ್ ಜೀಪನ್ನು ಕಂಡು ಇದು ರೈಡ್ ಮಾಡಲು ಬರುತ್ತಿರುವ ಪೋಲಿಸ್ ಜೀಪೆಂದು ಹೆದರಿ ಎಲ್ಲರೂ ಸೇತುವೆಯ ಕೆಳಗೆ ಅವಿತುಕೊಂಡರಂತೆ. ಕಡೆಗೆ ತೇಜಸ್ವಿ ಅವರ ಪರಿಚಯ ಮಾಡಿಕೊಂಡ ನಂತರ ಎಲ್ಲರೂ ಹಲ್ಲುಕಿರಿಯುತ್ತಾ ಎದ್ದು ಹೋಗಿದ್ದಾರೆ. ಕೃಷ್ಣಪ್ಪನವರ ಮಾತಿಗೆ ನಗುತ್ತಾ ಅವರ ಹೆಂಡತಿ ಕೊಟ್ಟ ಹಬೆಯಾಡುವ ಘಮ ಘಮ ಕಾಫಿ ಹೀರಿದೆವು. ಕ್ಯಾಮೆರ ನಿರಂತರವಾಗಿ ರನ್ ಆಗುತ್ತಿತ್ತು.
ಲಂಕೇಶ್ ಪ್ರಸಂಗ;
ಒಮ್ಮೆ ಕಾರಿನಲ್ಲಿ ಪೆಟ್ರೋಲ್ ಬಂಕಿಗೆ ಬಂದ ತೇಜಸ್ವಿ ಕಾರಿನಲ್ಲಿ ಇವರ ಪಕ್ಕ ಕುಳಿತಿದ್ದ ಒಬ್ಬರನ್ನು ತೋರಿಸಿ ‘ಇವರ್ಯಾರು ಗೊತ್ತೇನ್ರಿ?’ಎಂದು ಕೃಷ್ಣಪ್ಪನವರನ್ನು ಕೇಳಿದರಂತೆ. ಆದರೆ ಅವರು ತೋರಿಸುತ್ತಿರುವ ವ್ಯಕ್ತಿ ಯಾರೆಂದು ಇವರಿಗೆ ಖಚಿತವಾಗಿ ಗೊತ್ತಿರಲಿಲ್ಲವಂತೆ. ಆದರೂ ತಕ್ಷಣ ಬಾಯಿಗೆ ಬಂತೆಂದು ‘ಲಂಕೇಶ್’…ಎಂದರಂತೆ. ನಿಜವಾಗಿಯು ಅವರು ಲಂಕೇಶರೆ ಆಗಿದ್ದರಂತೆ. ಕೃಷ್ಣಪ್ಪನವರು ಗುರುತಿಸಿದ್ದರಿಂದ ಲಂಕೇಶರಿಗೆ ತುಂಬಾ ಸಂತೋಷವಾಗಿ ‘ಸದ್ಯ ಮಾನ ಉಳಿಸಿದೆ ಮಾರಾಯ. ಗೊತ್ತಿಲ್ಲ ಅಂದಿದ್ರೆ ಮರ್ಯಾದೆ ಹೋಗ್ತಿತ್ತು’ ಎಂದರಂತೆ. ಹೀಗೆ ಪೆಟ್ರೋಲ್ ಬಂಕಿನಲ್ಲಿನ ತೇಜಸ್ವಿಯವರೊಂದಿಗಿನ ಒಡನಾಟದ ನೆನಪುಗಳನ್ನು ಹಂಚಿಕೊಂಡರು ಕೃಷ್ಣಪ್ಪನವರು. ಮಾತು ತೇಜಸ್ವಿಯವರ ನ್ಯಾಚುರಾಲಿಟಿಯ ಕಡೆ ತಿರುಗಿತು. ‘ತುಂಬಾ ನ್ಯಾಚುರಲ್ಲಾಗಿ ಬದುಕೋಕೆ ಟ್ರೈ ಮಾಡ್ತಿದ್ರು ಯಾವಾಗ್ಲು. ಒಳಗೊಂದು ಹೊರಗೊಂದು ಇರಲಿಲ್ಲ. ಊಟ ತಿಂಡಿ ಅಂದ್ರೆ ಪ್ರಾಣ. ಬಿಳುವ ಅಂತ ಹಲಸಿನ ಹಣ್ಣಿನ ಥರದ ಒಂದು ಹಣ್ಣು ಬರುತ್ತೆ. ಅದನ್ನ ಕೈಯಲ್ಲಿ ಬಿಡಿಸಿ ತಿನ್ಬಹುದು. ಹಣ್ಣು ಸಹ ತುಂಬಾ ರುಚಿಯಾಗಿರುತ್ತೆ. ಅದನ್ನ ಮರದಿಂದ ಕಿತ್ತು ಅಲ್ಲೇ ಹುಲ್ಲಿನ ಮೇಲೆ ಕೂತು ಬಿಡಿಸಿ ತಿನ್ನೋರು. ಅಷ್ಟು ನ್ಯಾಚುರಲ್. ಯಾರಾದ್ರು ಬಡಾಯಿ ಕೊಚ್ಚಿದ್ರೆ ಕೇರ್ ಮಾಡ್ತಿರ್ಲಿಲ್ಲ. ಒಂಥರ ಮಕ್ಕಳ ಮೊಂಡತನ ಇತ್ತು. ಒಂದೇ ಮಾತಿನಲ್ಲಿ ಹೇಳ್ಬೇಕು ಅಂದ್ರೆ ಸಿನ್ಸಿಯರ್, ಸಿಂಪಲ್ ಅಂಡ್ ಹಾನೆಸ್ಟ್ ಮ್ಯಾನ್ ಅವ್ರು’ ಎನ್ನುತ್ತಾ ತೇಜಸ್ವಿಯೊಂದಿಗಿನ ಒಡನಾಟದ ದಿನಗಳನ್ನು, ಹಳೆಯ ಘಟನೆಗಳನ್ನು ಮೆಲುಕು ಹಾಕುತ್ತಿದ್ದರು.
ಕೃಷ್ಣಪ್ಪನವರ ಹೆಂಡತಿ ನಮ್ಮನ್ನು ತಿಂಡಿ ತಿನ್ನಲು ಕರೆದು ಹೋದರು. ಸಮಯ ಬೆಳಿಗ್ಗೆ ೧೧ ಗಂಟೆ ಸುಮಾರು ಆಗಿದ್ದರೂ ಅದುವರೆಗೂ ನಮಗೆ ಬೆಳಗಿನ ಉಪಹಾರದ ನೆನಪಾಗಿರಲಿಲ್ಲ. ಅವರು ಕರೆದ ಕೂಡಲೆ ಮರೆತಿದ್ದ ತಿಂಡಿ ನೆನಪಿಗೆ ಬಂದು ಹೊಟ್ಟೆ ಚುರುಗುಟ್ಟತೊಡಗಿತು. ನಾವು ನಾಲ್ಕು ಜನರ ಜೊತೆ ಕೃಷ್ಣಪ್ಪನವರು ಸೇರಿ ಅವರ ಹೆಂಡತಿ ಬಿಸಿ ಬಿಸಿ ಸುಡುತ್ತಿದ್ದ ಅಕ್ಕಿ ರೊಟ್ಟಿ ಜೊತೆಗೆ ಆಗಷ್ಟೆ ಇಳಿಸಿದ್ದ ಕುಕ್ಕರಿನಲ್ಲಿ ಹೊಗೆಯಾಡುತ್ತಿದ್ದ ಕಳ್ಳೆ ಸಾರಿನ ಗೊಜ್ಜು (ಎಳೆ ಬಿದಿರಿನಲ್ಲಿ ಮಾಡುವ ಒಂದು ಬಗೆಯ ಖಾದ್ಯ) ನೆಂಚಿಕೊಂಡು ತಿಂದು ತೇಗಿದೆವು. ಉಪಹಾರದ ನಂತರ ಮತ್ತೆ ಚಿತ್ರೀಕರಣ ಪ್ರಾರಂಭವಾದಾರೂ ಅದರಿಂದ ತೇಜಸ್ವಿಯವರ ಕುರಿತು ಸಾಕ್ಷ್ಯಚಿತ್ರಕ್ಕೆ ಬೇಕಾದಂತಹ ವಿಷಯ, ಮಾಹಿತಿಗಳಾವು ಸಿಗಲಿಲ್ಲ. ಆದರೆ ಒಟ್ಟರೆಯಾಗಿ ನೋಡಿದಾಗ ಕೆಲವು ಉಪಯುಕ್ತ ಮಾಹಿತಿಗಳು ಇವರಿಂದ ಸಿಕ್ಕಿವೆ ಎಂದುಕೊಂಡು ಕೃಷ್ಣಪ್ಪನವರಿಗೂಅವರ ಶ್ರೀಮತಿಯವರಿಗೂ ವಂದಿಸಿ ಚಿತ್ರೀಕರಣದ ಸಕಲ ಸಾಮಾಗ್ರಿಗಳನ್ನು ಹೊತ್ತುಕೊಂಡು ಅವರ ಮನೆಯಿಂದಹೊರಡಲು ಸಿದ್ದವಾದೆವು. ಅದಕ್ಕೆ ಮೊದಲು ಬೆಳಿಗ್ಗೆ ಧನಂಜಯ್ ಹೇಳಿದ್ದ ಇಬ್ಬರು ವ್ಯಕ್ತಿಗಳಲ್ಲಿ ಎರಡನೆಯವರಿಗೆ ಫೋನ್ ಮಾಡಿದೆ. ಅವರು ಬನ್ನಿ ಎಂದರು. ಕೃಷ್ಣಪ್ಪನವರು ’ಯಾರು ನಮ್ ರಮೇಶನ್ ಪ್ರೆಸ್ಸ…? ಗೊತ್ತು ಬನ್ನಿ ತೋರಿಸ್ತೀನಿ…’ ಎಂದು ನಮ್ಮನ್ನು ಕರೆದುಕೊಂಡು ಹೊರಟರು. ತುಂಬಾ ದೂರ ಇಲ್ಲದ್ದರಿಂದ ನಡೆದೇ ಹೊರಟು ಐದೇ ನಿಮಿಷದಲ್ಲಿ ರಾಘವೇಂದ್ರ ಪ್ರಿಂಟಿಂಗ್ ಪ್ರೆಸ್, ಮೂಡಿಗೆರೆ ಎಂಬ ಬೋರ್ಡ್ ಇದ್ದ ಒಂದು ಅಂಗಡಿಯ ಮುಂದೆ ಬಂದೆವು. ಬಿಳಿ ಶರ್ಟು, ಕಪ್ಪು ಪ್ಯಾಂಟು ಹಾಕಿಕೊಂಡಿದ್ದ ಮಧ್ಯವಯಸ್ಸಿನ ವ್ಯಕ್ತಿಯೊಬ್ಬರು ‘ನಮಸ್ತೆ, ಬನ್ನಿ ನಾನೇ ರಮೇಶ್ ಅಂದ್ರೆ’ ಎಂದು ಅವರ ಪರಿಚಯ ಮಾಡಿಕೊಳ್ಳುತ್ತಾ ನಮ್ಮನ್ನು ಅವರ ಪ್ರಿಂಟಿಂಗ್ ಪ್ರೆಸ್ ಒಳಗೆ ಸ್ವಾಗತಿಸಿದರು.
ಧನಂಜಯ್ ಹೇಳಿದ್ದ ಎರಡನೇ ವ್ಯಕ್ತಿ ಪ್ರಾರಂಭದ ದಿನಗಳಲ್ಲಿ ಕಿರಗೂರಿನ ಗಯ್ಯಾಳಿಗಳು, ಪರಿಸರದ ಕಥೆ ಸೇರಿದಂತೆ ತೇಜಸ್ವಿಯವರ ಕೆಲವು ಪುಸ್ತಕಗಳನ್ನು ಅಚ್ಚು ಮಾಡಿದ ಮೂಡಿಗೆರೆಯ ’ರಾಘವೇಂದ್ರ ಪ್ರಿಂಟಿಂಗ್ ಪ್ರೆಸ್’ ನ ಮಾಲಿಕ ರಮೇಶ್ ರವರು.
 
(….ಮುಂದುವರೆಯುವುದು)
ಗಾಂಧಿನಗರ, ಜಯನಗರ ಹಾಗೂ ಕೋರಮಂಗಲದ ಸಪ್ನ ಪುಸ್ತಕ ಮಳಿಗೆಗಳಲ್ಲಿ, ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ರೇಸ್ ಕೋರ್ಸ್ ಬಳಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರದ ಡಿವಿಡಿಗಳು ದೊರೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ ಟೋಟಲ್ ಕನ್ನಡದ ಲಕ್ಷ್ಮಿಕಾಂತ್ (ಡಿವಿಡಿ ವಿತರಣೆಯ ಹಕ್ಕುದಾರರು) ರವರನ್ನು ಸಂಪರ್ಕಿಸಿ. Mobile No: 9986222402
 
 

‍ಲೇಖಕರು G

August 25, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: