ಅರುಣ್ ಜೋಳದಕೂಡ್ಲಿಗಿ ಕಾಲಂ : ಸಮುದಾಯಗಳ ಜಗದ ಸೃಷ್ಟಿಯ ಕಥೆಗಳು

ಯಾವುದೇ ಒಂದು ಜನ ಸಮುದಾಯ ಅಥವಾ ಬುಡಕಟ್ಟು ತನ್ನ ಸಮುದಾಯದ ಹುಟ್ಟಿನ ಮೂಲಕವೆ ಈ ಜಗತ್ತು ಸೃಷ್ಟಿಯಾಯಿತು, ನಾವು ಆದಿ ಮನುಜರು ನಮ್ಮ ನಂತರ ಈ ಜಗತ್ತು ಬೆಳೆದಿದೆ ಎಂದುಕೊಳ್ಳುತ್ತಾರೆ. ಹಾಗಾಗಿ ಕರ್ನಾಟಕದ ಎಲ್ಲಾ ಬುಡಕಟ್ಟು ಅಲೆಮಾರಿ ಸಮುದಾಯಗಳು ತಮ್ಮದೇ ಆದ ಲೋಕದ ಹುಟ್ಟಿನ ಕಥೆಗಳನ್ನು ಕಟ್ಟಿಕೊಂಡಿದ್ದಾರೆ.
ಈ ಕಥೆಗಳು ಜಗತ್ತು ಸೃಷ್ಟಿಯಾದ ಬಗ್ಗೆ ಡಾರ್ವಿನ್ ವಿಕಾಸವಾದಕ್ಕಿಂತ ಬೇರೆಯ ತೆರನಾದವು. ಅಥವಾ ಈ ಸಮುದಾಯಗಳು ಕಟ್ಟಿಕೊಂಡ ಲೋಕದ ಕಲ್ಪನೆ ಡಾರ್ವಿನ್ ವಿಕಾಸವಾದಕ್ಕಿಂತ ಮುಂಚೆಯೆ ಕಟ್ಟಲ್ಪಟ್ಟವುಗಳು. ಇಂತಹ ಸೃಷ್ಟಿ ಕಥೆಗಳು ಬುಡಕಟ್ಟು ಸಮುದಾಯಗಳ ಮೌಖಿಕ ಸಾಹಿತ್ಯದಲ್ಲಿ ಸಿಗುತ್ತದೆ. ಇದು ಅವರ ಆಚರಣೆ, ಹಬ್ಬ ಮುಂತಾದ ಸಂದರ್ಭಗಳಲ್ಲಿ ಕಥೆ ಹಾಡಿನ ರೂಪದಲ್ಲಿ ಹೇಳಲ್ಪಡುತ್ತವೆ. ಈ ಮೂಲಕ ಆಯಾ ಸಮುದಾಯ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಇಂತಹ ಕಥೆಗಳನ್ನು ವರ್ಗಾಯಿಸುತ್ತಿರುತ್ತದೆ.
ಕೆಲವು ಬುಡಕಟ್ಟುಗಳ ವಿಶ್ವದ ಸೃಷ್ಟಿಯ ಕಥೆಗಳನ್ನು ನೋಡೋಣ:
ಬುಡುಬುಡುಕಿ ಸಮುದಾಯ:
ಆದಿಯಲ್ಲಿ ಮೂವರು ರಾಕ್ಷಸರು ಮೂರು ಲೋಕದ ಜನರಿಗೆ ವಿಪರೀತ ಉಪಟಳವನ್ನು ಕೊಡುತ್ತಿದ್ದರಂತೆ. ಆಗ ದೇವಾನುದೇವತೆಗಳೆ ತತ್ತರಿಸಿ ಹೋದರಂತೆ. ನಾರದನ ಸಲಹೆಯಂತೆ ಶ್ರೀಕೃಷ್ಣ ಮಾತ್ರ ಈ ರಾಕ್ಷಸರನ್ನು ಸಂಹಾರ ಮಾಡಬಲ್ಲ ಎಂದು ಆತನಲ್ಲಿ ಮೊರೆ ಇಡುತ್ತಾರೆ. ಆಗ ಕೃಷ್ಣ ಬುಡಬುಡಿಕಿ ವೇಷದಲ್ಲಿ ಬಂದು ರಾಕ್ಷಸರ ಹೆಂಡತಿಯರಿಗೆ ಬಂಜೆತನ ನಿವಾರಿಸುವ ಬಗ್ಗೆ ಉಪಾಯ ಹೇಳುತ್ತಾನೆ. ಅವರು ಹಾಗೆ ಮಾಡಲು ಅವರ ಪಾತಿವ್ರತ್ಯ ಕೆಡುತ್ತದೆ. ಇವರ ಪಾತಿವ್ರತ್ಯದ ಮೇಲೆ ನಿಂತ ರಾಕ್ಷಸರ ಶಕ್ತಿ ಕುಂದುತ್ತದೆ. ಆಗ ಕೃಷ್ಣ ಇವರನ್ನು ಸಂಹಾರ ಮಾಡುತ್ತಾನೆ. ಹೀಗೆ ಸಂಹರಿಸಿ ದೇವಲೋಕಕ್ಕೆ ಮರಳುವಾಗ ಎದುರಿಗೆ ಒಂದು ಸಮುದಾಯ ಬರುತ್ತದೆ, ಆ ಜನರಿಗೆ ಕೃಷ್ಣ ತನ್ನ ಬುಡಬುಡಕಿಯನ್ನು ಕೊಟ್ಟು ಭವಿಷ್ಯ ಹೇಳುತ್ತಾ ಬದುಕಿ ಎಂದು ಹರಸುತ್ತಾನೆ. ಅವರೆ ನಮ್ಮ ಮೂಲ ವಂಶಜರು ಬುಡಬುಡುಕಿಯರು ಎಂದು ಈ ಸಮುದಾಯ ನಂಬುತ್ತದೆ.
ಗೋಸಂಗಿ ಸಮುದಾಯ:
ಭೂಮಿ ಹುಟ್ಟುವ ಮೊದಲು ದೇವಲೋಕ ಮಾತ್ರ ಇದ್ದಿತು. ಬ್ರಹ್ಮನು ಭೋಲೋಕ ನೋಡಲು ಬಂದನು. ಇಡೀ ಭೂಮಿಯೆ ಜಲಾವೃತವಾಗಿತ್ತು. ಆಗ ಜಾಂಬಮುನಿ ಎಂಬ ಮಗನನ್ನು ಸೃಷ್ಟಿಸಿ ಭೂಮಿಗೆ ಕಳಿಸಿದ. ಆತನು ನೀರನ್ನು ಆಚೀಚೆ ಸರಿಸಿ, ನೂರು ಮಕ್ಕಳನ್ನು ಸೃಷ್ಟಿಸಿದನು. ಅದರಲ್ಲಿ ಮೊದಲನೆಯವನೆ ಗೋಸಂಗಿ. ಭೂಮಿಯಲ್ಲಿ ಎಲ್ಲಾ ಜೀವರಾಶಿಗೂ ಮೊದಲು ಗೋಸಂಗಿ ಸಮುದಾಯದ ಮೂಲ ಪುರುಷ ಹುಟ್ಟಿದನೆಂದು ತಿಳಿಯುತ್ತಾರೆ. ಹಾಗಾಗಿ ಗೋಸಂಗಿಗಳ ಮೂಲಪುರುಷ ಜಾಂಬಮುನಿ ಎಂದು ಭಾವಿಸುತ್ತಾರೆ.
ಮೇದರ ಸಮುದಾಯ:
ಪಾರ್ವತಿ ಒಮ್ಮೆ ಗೌರಿ ವ್ರತವನ್ನು ಮಾಡಬೇಕಿತ್ತು. ಆಗ ಅವಳಿಗೆ ಮೊರ ಬೇಕಾಯಿತು. ಮೊರ ಎಲ್ಲಿ ಸಿಗುತ್ತದೆ ಎಂಬುದು ತಿಳಿಯದೆ ಶಿವನನ್ನು ಕೇಳಿದಳು. ಅವನು ತನ್ನ ವಾಹನವಾದ ವೃಷಭನಲ್ಲಿ ಬಿದಿರು ಎಣೆಯುವ ಮನುಷ್ಯನನ್ನು ನಿರ್ಮಿಸು ಎಂದನಂತೆ. ಆಗ ವೃಷಭ ಮೆಲುಕು ಹಾಕುತ್ತಿರುವಾಗ ಮೇದರ ಪೂರ್ವಿಕ ಹುಟ್ಟಿದನಂತೆ. ಪಾರ್ವತಿಯ ಕೋರಿಕೆಯನ್ನು ಅವನಿಗೆ ಹೇಳಿದಾಗ, ಶಿವನ ಆಭರಣವಾದ ಹಾವನ್ನು ಕೈಲಿಡಿದು ಒಂದು ಬೆಟ್ಟಕ್ಕೆ ಹೋದನು. ಅಲ್ಲಿ ಹಾವಿನ ತಲೆಯನ್ನು ನೆಲಕ್ಕೆ ನೆಟ್ಟಾಗ ಒಮ್ಮೆಲೆ ಬಿದಿರು ಕಾಣಿಸಿಕೊಂಡಿತು. ಆ ಬಿದಿರಿನಿಂದ ಮೊರ ಎಣೆದು ಹಾವನ್ನು ಶಿವನಿಗೆ ಹಿಂತಿರುಗಿಸಿದನು. ಇವನಿಂದ ಮೇದರ ಕುಲ ಹುಟ್ಟಿತು. ಇವನೇ ಮೇದರ ಕುಲದ ಪೂರ್ವಜ ಎಂದು ನಂಬುತ್ತಾರೆ.
ಕಿನ್ನುರಿ ಜೋಗಿ ಸಮುದಾಯ:
ಹನ್ನೆರಡು ವರ್ಷ ಭೂಪ್ರದಕ್ಷಣೆ(ವನವಾಸ) ಹೋಗಿದ್ದ ಅರ್ಜುನನಿಗೆ ಹನ್ನೊಂದನೆ ವರ್ಷ ತನ್ನ ತಾಯಿಯನ್ನು ನೋಡುವ ಬಯಕೆಯಾಯಿತು. ಯಾರಾದರೂ ಗುರುತು ಹಚ್ಚಿದರೆ ಮತ್ತೆ ಹನ್ನೆರಡು ವರ್ಷ ಪ್ರದಕ್ಷಣೆ ಹೋಗಬೇಕಾಗುತ್ತದೆಂದು ಋಷಿಗಳಲ್ಲಿ ಪರಿಹಾರ ಕೇಳುತ್ತಾನೆ. ಆಗ ಋಷಿ ಒಬ್ಬ ರಾಕ್ಷಸಿಯನ್ನು ಕೊಂದು ಅವಳ ದೇಹದ ಭಾಗಗಳಿಂದ ಕಿನ್ನುರಿ ತಯಾರಿಸಿ ಅರ್ಜುನನಿಗೆ ಕೊಡುತ್ತಾನೆ. ಆ ಕಿನ್ನುರಿಯನ್ನು ತೆಗೆದುಕೊಂಡು ಜೋಗಿ ವೇಷ ಧರಿಸಿ ಅರ್ಜುನ ತಾಯಿಯನ್ನು ಬೇಟಿ ಮಾಡಿ ಕುಶಲೋಪರಿ ಮಾತನಾಡಿ ಹಿಂತಿರುಗುತ್ತಾನೆ. ಆಗ ಅವನ ಶಿಷ್ಯನೊಬ್ಬನಿಗೆ ಜೋಗಿ ದೀಕ್ಷೆ ಕೊಟ್ಟು ಕಿನ್ನುರಿಯನ್ನು ಅವನ ಕೈಗೆ ನೀಡಿ ಪಾಂಡವರ ಕಥೆಯನ್ನು ಹೇಳಿಕೊಂಡು ಜೀವನ ನಡೆಸುವಂತೆ ಹೇಳುತ್ತಾನೆ. ಈ ಜೋಗಿಯಿಂದ ಕಿನ್ನುರಿ ಜೋಗಿಗಳ ವಂಶ ಉದ್ಧಾರವಾಯಿತು ಎಂದು ನಂಬುತ್ತಾರೆ. ಅದಕ್ಕಾಗಿಯೆ ಇವರನ್ನು ಅರ್ಜುನ ಜೋಗಿಗಳು ಎಂದೂ ಕರೆಯುತ್ತಾರೆ.
ಲಂಬಾಣಿ ಸಮುದಾಯ:
ಒಂದು ಸಲ ದೇವರು ಆಕಾಶದಲ್ಲಿ ಒಂದು ಬೀಜವನ್ನು ಬಿತ್ತುತ್ತಾನೆ. ಆ ಬೀಜದಿಂದ ಒಬ್ಬ ಕನ್ಯೆ ಹುಟ್ಟುತ್ತಾಳೆ. ಆ ಕನ್ಯೆಯ ಬೆವರಿನಿಂದ ಒಬ್ಬ ಬಾಲಕನ ಜನನವಾಗುತ್ತದೆ. ಅವಳಿಗೆ ಆ ಬಾಲಕನಿಂದ ಲೈಂಗಿಕ ಬಯಕೆಯಾಗುತ್ತದೆ. ಆಗ ಆತ ತಿರಸ್ಕರಿಸುತ್ತಾನೆ. ನಂತರ ಇನ್ನೊಬ್ಬ ಬಾಲಕನ ಜನ್ಮವಾಗುತ್ತದೆ ಆತನೂ ಆ ಕನ್ಯೆಯ ಇಚ್ಛೆಯನ್ನು ಒಪ್ಪುವುದಿಲ್ಲ. ಮೂರನೆ ಬಾಲಕನ ಜನ್ಮವಾಗುತ್ತದೆ. ಅವನು ಕನ್ಯೆಯನ್ನು ಕೂಡಿ ಅವಳ ಬಯಕೆಯನ್ನು ಈಡೇರಿಸುತ್ತಾನೆ. ಈ ಬಾಲಕ ಮತ್ತು ಕನ್ಯೆಯಿಂದ ಜಗದ ಸೃಷ್ಟಿಯ ಮೊದಲ ಪುರುಷನ ಜನನವಾಗುತ್ತದೆ. ಹೀಗೆ ಸೃಷ್ಟಿಯಾದ ಮೋಟಾನ ವಂಶದ ಮೂಲ ಪುರುಷನಿಂದ ಲಂಬಾಣಿ ಸಮುದಾಯ ಹುಟ್ಟಿತು ಎಂದು ಹೇಳುತ್ತಾರೆ.

ಚಿತ್ರ ಕೃಪೆ : ಸಿದ್ಧರಾಮ ಹಿರೇಮಠ
ಜೇನು ಕುರುಬ ಸಮುದಾಯ:
ಎಲ್ಲಕ್ಕೂ ಮೊದಲು ಈ ಪ್ರಪಂಚ ಪ್ರಳಯದಿಂದ ಮುಳುಗಿ ಬರೇ ನೀರೇ ನೀರಿನಿಂದ ತುಂಬಿತ್ತು. ಅಲ್ಲಿ ಒಂದು ಕ್ರಿಮಿ ಕೀಟವೂ ಇರಲಿಲ್ಲ. ಆ ನೀರಿನಲ್ಲಿ ಒಂದು ಕಹಿ ಸೋರೆ ಬುರುಡೆ ತೇಲುತ್ತಾ ಇತ್ತು. ಅದು ತೇಲುತ್ತಾ ಒಂದು ಅಂಗೈ ಅಗಲ ಭೂಮಿಯ ಮೇಲೆ ಬಂದು ನಿಂತಿತು. ಆ ಸೋರೆ ಬುರುಡೆಯನ್ನು ಒಡೆದುಕೊಂಡು ಒಂದು ಗಂಡು ಹೆಣ್ಣು ಹೊರ ಬಂದರು. ಅವರಿಬ್ಬರು ಅಣ್ಣ ತಂಗಿ. ಅವರಿಬ್ಬರೂ ಕೈ ಮುಷ್ಟಿಯಲ್ಲಿ ಮಣ್ಣಿನಿಂದ ಒಂದು ಗಂಡು ಹೆಣ್ಣು ಗೊಂಬೆ ಮಾಡಿ ಜೀವ ತುಂಬಿದರು, ಇವರಿಗೆ ಜನಿಸಿದವನೆ ಜೇನು ಕುರುಬರ ಮೂಲ ವಂಶಸ್ಥ. ಆತನಿಂದಲೆ ಈ ಜಗತ್ತು ಸೃಷ್ಟಿಯಾಯಿತೆಂದು ಜೇನು ಕುರುಬರು ನಂಬುತ್ತಾರೆ.
ದೊಂಬಿ ದಾಸರು:
ಭೂಮಿ, ಆಕಾಶ, ಗಾಳಿ, ಬೆಳಕುಗಳಿಲ್ಲದ ಓಂಕಾರದೊಂದಿಗೆ ಒಂದು ಶಂಖ ಹುಟ್ಟಿತು. ಈ ಶಂಖುವಿನಿಂದ ತಾತ ಆದಿ ಜಾಂಬು ಲಿಂಗಯ್ಯ ಹುಟ್ಟಿದನು. ಇವರು ತಾವರೆ ಎಲೆಯ ಮೇಲೆ ಕೂತು ತಪಸ್ಸನ್ನು ಆಚರಿಸಿದ ಆರು ಗಳಿಗೆಯಲ್ಲಿಯೇ ಅದೇ ಶಂಖದಿಂದ ಆಧಿಶಕ್ತಿ ಹುಟ್ಟಿದಳು. ಆಕೆ ತಾತನ ಬಳಿ ಬಂದು ತನ್ನ ಕಾಮವನ್ನು ತೀರಿಸೆಂದು ಕೇಳಿದಳು. ತಾತ ಈ ರೂಪದಲ್ಲಿ ಸಾಧ್ಯವಿಲ್ಲವೆಂದು ನವಿಲುಗಳಾಗಿ ರೂಪಾಂತರ ಹೊಂದಿ ಕೂಡಿದರು.
ಆಗ ಹೆಣ್ಣು ನವಿಲು ನಾಲ್ಕು ಮೊಟ್ಟೆಗಳನ್ನು ಇಟ್ಟಿತು. ಎಷ್ಟು ಕಾವು ಕೊಟ್ಟರೂ ಮೊಟ್ಟೆಯಲ್ಲಿ ಮರಿಯೊಡೆಯಲಿಲ್ಲ. ಆಗ ತಾತ ಒಂದು ಮೊಟ್ಟೆಯನ್ನು ಹೊಡೆದು ಅದರ ಮೇಲಿನ ಭಾಗವನ್ನು ಆಕಾಶ ಮಾಡಿದ, ಕೆಳಗಿನ ಭಾಗವನ್ನು ಭೂಮಿ ಮಾಡಿದ. ಇನ್ನೊಂದು ಮೊಟ್ಟೆಯನ್ನು ಹೊಡೆದು ಒಂದು ಭಾಗ ಸೂರ್ಯ, ಇನ್ನೊಂದು ಭಾಗವನ್ನು ಚಂದ್ರನನ್ನಾಗಿಯೂ, ಮೂರನೆ ಮೊಟ್ಟೆಯಿಂದ ನಕ್ಷತ್ರ ಲೋಕವನ್ನು ಸೃಷ್ಟಿಸುತ್ತಾನೆ. ನಾಲ್ಕನೆ ಮೊಟ್ಟೆಯಿಂದ ಬ್ರಹ್ಮ, ವಿಷ್ಣು, ಈಶ್ವರರನ್ನು ಹುಟ್ಟಿಸುತ್ತಾನೆ. ಇವರು ಬೆಳೆದು ದೊಡ್ಡವರಾದ ಮೇಲೆ ಆಧಿಶಕ್ತಿಗೆ ಇವರ ಮೇಲೆ ಕಾಮಾಸಕ್ತಿಯಾಗುತ್ತದೆ. ಮದುವೆಯಾಗಲು ಒತ್ತಾಯಿಸುತ್ತಾಳೆ. ಬ್ರಹ್ಮ,ವಿಷ್ಣು, ಈಶ್ವರರು ಮದುವೆ ನಿರಾಕರಿಸುತ್ತಾರೆ. ಶಿವ ಉಪಾಯದಿಂದ ಆಧಿಶಕ್ತಿಯ ಹಣೆಯ ಉರಿಗಣ್ಣು, ಕೈಯಲ್ಲಿನ ಉರಿ ಅಸ್ತ್ರವನ್ನು ಪಡೆದು ಅವಳನ್ನು ದಿಟ್ಟಿಸಿ ನೋಡಿ ಬೂದಿ ಮಾಡುತ್ತಾನೆ. ಈ ಬೂದಿಯಿಂದ ಲಕ್ಷ್ಮಿ, ಸರಸ್ವತಿ, ಮತ್ತು ಪಾರ್ವತಿಯರನ್ನು ಮಾಡಿ ಬ್ರಹ್ಮ,ವಿಷ್ಣು, ಈಶ್ವರರು ಮದುವೆಯಾಗಿ ಜಗತ್ತಿನ ಸೃಷ್ಟಿಗೆ ಕಾರಣರಾಗುತ್ತಾರೆ.
ಕೊರಗ ಸಮುದಾಯ:
ಆದಿಯಲ್ಲಿ ಭೂಮಿಯೆಂಬುದು ಇರಲಿಲ್ಲ. ಎಲ್ಲೆಲ್ಲೂ ನೀರೇ ನೀರು. ಈ ನೀರಿನಲ್ಲಿ ಗಂಡು ಹೆಣ್ಣು ಎರಡು ಬೆತ್ತಲೆ ಜೀವಗಳು ಕಾಣಿಸಿಕೊಂಡವು. ಅದನ್ನು ನಾರಾಯಣ ದೇವರು ನೋಡಿ ಒಂದು ಡೋಲಿಯನ್ನು ಹರಿಬಿಟ್ಟ. ಆ ಜೀವಗಳು ಡೋಲಿಯಲ್ಲಿ ಆಶ್ರಯ ಪಡೆದವು. ನಾರಾಯಣ ದೇವರು ನೀವು ಯಾರು ಎನ್ನಲು, ಆ ಜೀವಗಳು ನಾವು ಅಣ್ಣ ತಂಗಿ ಎಂದು ಹೇಳುತ್ತಾರೆ. ನಂತರ ನಿಮ್ಮಿಂದ ಪ್ರಂಪಂಚ ಸೃಷ್ಟಿಯಾಗಬೇಕಿದೆ ಎಂದು ಅಣ್ಣ ತಂಗಿಯರಲ್ಲಿ ಬಯಕೆ ಹುಟ್ಟಿಸುತ್ತಾನೆ. ಇವರಿಬ್ಬರು ಕೂಡಿ ಹುಟ್ಟಿದ ಮಗನೆ ಕೊರಗ. ಆತನಿಂದಲೆ ಜಗತ್ತು ಸೃಷ್ಟಿಯಾಯಿತೆಂದು ಕೊರಗ ಸಮುದಾಯ ಭಾವಿಸುತ್ತದೆ.
ಚಿತ್ರ ಕೃಪೆ : ಎ ಎಸ್ ಪ್ರಭಾಕರ್
ಹೀಗೆ ಕರ್ನಾಟಕದಲ್ಲಿ ಸದ್ಯಕ್ಕೆ ಗುರುತಿಸಲಾದ ಐವತ್ತಕ್ಕಿಂತ ಹೆಚ್ಚಿನ ಬುಡಕಟ್ಟು ಅಲೆಮಾರಿ ಸಮುದಾಯಗಳು ತಮ್ಮ ಬುಡಕಟ್ಟಿನ ಮೂಲದ ಸೃಷ್ಟಿ ಕಥೆಯನ್ನು ಹೇಳುತ್ತಾರೆ. ಇವರು ತಮ್ಮ ಬುಡಕಟ್ಟಿನ ಮೂಲ ಪುರುಷನಿಂದ ಈ ಜಗತ್ತು ಸೃಷ್ಟಿಯಾಯಿತೆಂದು ಭಾವಿಸುತ್ತಾರೆ. ಆ ಮೂಲಕ ಅವರದೇ ಸ್ಮೃತಿಲೋಕದ ಒಂದು ವಿಶ್ವವನ್ನೇ ಕಟ್ಟಿಕೊಳ್ಳುತ್ತಾರೆ. ಅಂದರೆ ನಾವಿಂದು ಗ್ರಹಿಸುವ ಒಂದು ಜಗತ್ತಿನ ಗ್ರಹಿಕೆಯನ್ನು ಒಡೆದು, ಸಮುದಾಯಗಳು ತಮ್ಮ ಕಲ್ಪನಾ ಲೋಕದಲ್ಲಿ ಹಲವು ವಿಶ್ವಗಳನ್ನು ಕಟ್ಟಿಕೊಂಡಿರುವುದು ಬೆರಗು ಮೂಡಿಸುತ್ತದೆ.
ಇಲ್ಲಿನ ಕೆಲವು ಕಥೆಗಳು ಆಯಾ ಸಮುದಾಯ ವರ್ತಮಾನದಲ್ಲಿ ಕೈಗೊಂಡ ವೃತ್ತಿಗೆ ಪೂರಕವಾಗಿವೆ. ಮೇದರ ಕಥೆ ತಾವು ಬಿದಿರು ಬೊಂಬಿನ ಕೆಲಸ ಮಾಡುವುದಕ್ಕೆ ಇರುವ ಮೂಲ ಕಥೆಯೊಂದನ್ನು ಹೇಳುತ್ತಿದ್ದಾರೆ. ಅಂತೆಯೇ ಪ್ರತಿ ಸಮುದಾಯವು ಆರಂಭದಲ್ಲಿ ಜಲಾವೃತವಾದ ಭೂಮಿಯ ಕಲ್ಪನೆ ಕೊಡುತ್ತಾರೆ. ಇಲ್ಲಿ ಮೊದಲಿಗೆ ಹುಟ್ಟುವ ಹೆಣ್ಣು ಗಂಡು ಅಣ್ಣ ತಂಗಿಯಾಗಿರುವುದು, ತಾತ ಮೊಮ್ಮಗಳಾಗಿರುವುದು, ತಾಯಿ ಮಗ ಆಗಿರುವುದು ಮತ್ತವರು ಕೂಡುವ ಸೃಷ್ಟಿ ಕಥೆಗಳಿವೆ. ನಾವು ಬದುಕುತ್ತಿರುವ ಕಾಲದಲ್ಲಿ ಕಟ್ಟಿಕೊಂಡ ಸಂಬಂಧಗಳ ಕಣ್ಣಿಂದ ಈ ಕಥೆಗಳನ್ನು ನೋಡಿದರೆ ಇವು ಅಶ್ಲೀಲವಾಗಿ ಕಾಣುತ್ತವೆ. ಆದರೆ ಇಂತಹ ಸಂಬಂಧಗಳ ಗೋಜಿಲ್ಲದ ಕೇವಲ ಗಂಡು ಹೆಣ್ಣು ಎನ್ನುವ ದೃಷ್ಟಿಕೋನದಲ್ಲಿ ಈ ಕಥೆಗಳು ಹುಟ್ಟಿದಂತಿದೆ. ಇದನ್ನು ನೋಡಿದರೆ ಸಿಗ್ಮಂಡ್ ಪ್ರಾಯ್ಡ್ನ ಸಂಬಂಧಗಳ ಆಚೆಯೂ ವಿರುದ್ಧ ಲಿಂಗಗಳ ಮಧ್ಯೆ ಇರುವ ಆಕರ್ಷಣೆಯ ಥಿಯರಿಯನ್ನು ಈ ಬುಡಕಟ್ಟುಗಳು ತುಂಬಾ ಹಿಂದೆಯೇ ತಮ್ಮ ಕಥೆ ಹಾಡುಗಳಲ್ಲಿ ಕಟ್ಟಿಕೊಂಡಿದ್ದನ್ನು ಗಮನಿಸಬಹುದು.
ಒಂದು ಸಮುದಾಯ ತನ್ನ ಚರಿತ್ರೆಯನ್ನು ಓರಿಯಂಟಲಿಷ್ಟರ ಹಾಗೆ ಇಸ್ವಿ, ಶಾಸನ, ತಾಳೆಗರಿಯಲ್ಲಿ ತನ್ನ ಮೂಲ ಚರಿತ್ರೆಯನ್ನು ಬರೆದಿಟ್ಟಿಲ್ಲ. ತನ್ನ ಸಮುದಾಯದ ಚರಿತ್ರೆಯನ್ನು ಆಚರಣೆಗಳಲ್ಲಿ, ನೆನಪಿನ ಪುರಾಣಗಳಲ್ಲಿ, ಕಥೆ ಗೀತೆಗಳಲ್ಲಿ, ವೃತ್ತಿ, ಹುಟ್ಟು ಸಾವಿನ ಮಧ್ಯೆಯ ಆಚರಣಾ ಲೋಕದಲ್ಲಿ ಚರಿತ್ರೆಯ ಕುರುಹುಗಳನ್ನು ದಾಟಿಸಿಕೊಂಡು ಹೋಗುತ್ತದೆ. ಇಂತಹ ಸಮುದಾಯಗಳನ್ನು ಅಧ್ಯಯನ ಮಾಡುವ ವಿದ್ವಾಂಸರಿಗೆ ಈ ಬಗೆಯ ಸೂಕ್ಷ್ಮತೆಗಳು ಬೇಕಾಗುತ್ತದೆ. ಕನ್ನಡದಲ್ಲಿ ಬುಡಕಟ್ಟುಗಳನ್ನು ಕುರಿತ ಬಹುಮುಖಿ ಅಧ್ಯಯನಗಳು ನಡೆದಿವೆ. ಅದರಲ್ಲಿ ಅಂಕೆ ಸಂಖ್ಯೆಗಳನ್ನು ಕಲೆಹಾಕುವ ಅಧ್ಯಯನಗಳ ಪ್ರಮಾಣವೂ ದೊಡ್ಡದಿದೆ. ಸಮುದಾಯಗಳ ಆತ್ಮಕಥನಗಳ ಮಾದರಿಯಲ್ಲಿ ಹೆಚ್ಚು ಸೂಕ್ಷ್ಮವಾಗಿ ಅಧ್ಯಯನಗಳು ನಡೆಯಬೇಕಾಗಿದೆ.
ಮುಖ್ಯವಾಗಿ ಸಮುದಾಯಗಳ ಅಧ್ಯಯನದ ನೆಪದಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಸಂಪಾದಿಸಿದ ಎನ್.ಜಿ.ಓ ಗಳೂ ವಿಶ್ವವಿದ್ಯಾಲಯಗಳೂ ನಮ್ಮ ಮಧ್ಯೆಯೆ ಇವೆ. ಇವುಗಳಿಗೆ ಸಮುದಾಯಗಳ ಅಧ್ಯಯನ ಆದಾಯದ ಮೂಲವಾಗಿವೆ. ಅಂತೆಯೇ ಆಯಾ ಸಮುದಾಯಗಳು ಮೂಲ ರೂಪದಲ್ಲೆ ಉಳಿಯಬೇಕೆಂಬ ಮೂಲಭೂತವಾದವೂ ಇಂತಹ ಕೆಲವು ಅಧ್ಯಯನಗಳಲ್ಲಿ ಕಾಣುತ್ತದೆ. ಆಧುನಿಕ ಅಭಿವೃದ್ಧಿ ಯೋಜನೆಗಳ ಅಬ್ಬರಕ್ಕೆ ವನವಾಸಿ ಬುಡಕಟ್ಟುಗಳು ತತ್ತರಿಸಿವೆ. ನಿತ್ಯವೂ ಒಂದಿಲ್ಲೊಂದು ಸಮಸ್ಯೆಗೆ ಎದುರಾಗಿ ಈಜುವುದೆ ಇಂತಹ ಬುಡಕಟ್ಟು ಅಲೆಮಾರಿ ಸಮುದಾಯಗಳ ನಿತ್ಯಸತ್ಯವಾಗಿದೆ. ಬುಡಕಟ್ಟುಗಳ ಕುರಿತ ಅಧ್ಯಯನಗಳು ಅವರ ಬದುಕನ್ನು ಕಿಂಚಿತ್ತಾದರೂ ಬದಲಾಯಿಸುವ ಶಕ್ತಿ ಪಡೆಯಬೇಕಿದೆ. ಈಗೀಗ ಕರ್ನಾಟಕದ ಬುಡಕಟ್ಟುಗಳಲ್ಲಿ ಸಂಘಟಿತ ಪ್ರಜ್ಞೆ ಬರುತ್ತಿದೆ. ತಮ್ಮ ಸಮುದಾಯವನ್ನು ತಾವೇ ಅಧ್ಯಯನ ಮಾಡತೊಡಗಿದ್ದಾರೆ. ಇದು ಕರ್ನಾಟಕದ ಸಂದರ್ಭದಲ್ಲಿ ಬುಡಕಟ್ಟು ಸಮುದಾಯದ ಒಳಗೆ ಮೂಡುತ್ತಿರುವ ಬೆಳಕಿನ ಕಿರಣಗಳಾಗಿವೆ.

‍ಲೇಖಕರು G

November 3, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: