ತೇಜಸ್ವಿಯನ್ನು ಹುಡುಕುತ್ತಾ – "ಇವನು ಹುಚ್ಚ, ಇವನ ಹಿಂದೆ ಹೋಗೋರು ಹುಚ್ಚರೇ"

“ತೇಜಸ್ವಿಯವ್ರನ್ನ ಇವತ್ತಿನ ಕಾಫಿ ಬೆಳೆಗಾರರೆಲ್ಲ ನೆನೆಸ್ಕೊಳ್ಳಲೇಬೇಕು, ಅವರ ಫೋಟೋ ಇಟ್ಕೊಂಡು ಪೂಜೆ ಮಾಡ್ಬೇಕು.ಯಾಕಂದ್ರೆ ಅವರು ಕಾಫಿ ಬೆಳೆಗಾರರಿಗೆ ಕೊಟ್ಟ ಕೊಡುಗೆ ಅಷ್ಟು ದೊಡ್ಡದು’.1976ರಕ್ಕೆ ಮುಂಚೆ ಕಾಫಿಗೆ ಮುಕ್ತ ಮಾರುಕಟ್ಟೆ ಇರಲಿಲ್ಲ. ಬೆಳೆಗಾರರು ಬೆಳೆದ ಕಾಫೀನ ಕಾಫಿ ಬೋರ್ಡಿಗೇ ಕೊಡ್ಬೇಕಿತ್ತು.ಆ ಕಾಫಿ ಬೋರ್ಡು ಬೆಳೆಗಾರರಿಗೆ ಹಣಾನ ಒಟ್ಟಿಗೆ ಒಂದೇ ಸಲ ಕೊಡದೇ ಆಗಿಷ್ಟು, ಈಗಿಷ್ಟು ಅಂತ ಲಾಟ್ ಸೇಲ್ ಆದ ಹಾಗೆ ಸ್ವಲ್ಪ ಸ್ವಲ್ಪಾನೇ ಕೊಡ್ತಿತ್ತು.ಜೊತೆಗೆ ಕಾಫೀನ ಹೊರಗಡೆ ನಮಗೆ ಇಷ್ಟಬಂದೋರಿಗೆ ಮಾರೊ ಸ್ವತಂತ್ರ ಕೂಡ ನಮಗಿರ್ಲಿಲ್ಲ. ಆಗ ಮೊಟ್ಟಮೊದಲ ಬಾರಿಗೆ ಕಾಫಿ ಬೋರ್ಡಿನಈ ಕರ್ಮಕಾಂಡದ ಬಗ್ಗೆ ದನಿ ಎತ್ತಿದವರೇ ತೇಜಸ್ವಿ.ಲಂಕೇಶ್ ಪತ್ರಿಕೆನಲ್ಲಿ ತೇಜಸ್ವಿ ಪ್ರತಿವಾರ ’ಕಾಫಿ ಬೋರ್ಡಿನ ಕರ್ಮಕಾಂಡ’ ಅಂತಲೇ ಒಂದು ಅಂಕಣ ಬರೀತಿದ್ರು.ಅದರಲ್ಲಿ ಬೆಳೆಗಾರರಿಗೆ ಆಗ್ತಿರೊ ಅನ್ಯಾಯಗಳು, ಕಾಫಿಬೋರ್ಡಿನ ಅವ್ಯವಸ್ಥೆಗಳು, ಮುಕ್ತ ಮಾರುಕಟ್ಟೆ ವ್ಯವಸ್ಥೆ ಬಂದ್ರೆ ಬೆಳೆಗಾರರಿಗೆ ಆಗೊ ಪ್ರಯೋಜನಗಳ ಬಗ್ಗೆ ಎಲ್ಲಾ ವಿವರವಾಗಿ ಬರೀತಿದ್ರು. ಕಾಫಿ ಬೆಳೆಗಾರರು ಇವತ್ತೇನು ರಾಜವೈಭೋಗ ಅನುಭವಿಸ್ತಿದಾರೆ, ವರ್ಷಕ್ಕೊಂದು ಕಾರು ಕೊಂಡುಕೊಂಡು ಮಜಾ ಮಾಡ್ತಿದಾರೆ ಇದಕ್ಕೆಲ್ಲಾ ಮೂಲ ಕಾರಣ ಕಾಫಿಗೆ ಮುಕ್ತ ಮಾರುಕಟ್ಟೆ ಆಗ್ಬೇಕು ಅಂತ ತೇಜಸ್ವಿ ಶುರು ಮಾಡಿದ ಹೋರಾಟ…”
ತೇಜಸ್ವಿಯವರ ಸುಮಾರು 30 ವರ್ಷಗಳ ಒಡನಾಡಿ ರಾಘವೇಂದ್ರರವರ ಜೊತೆ ಸುದೀರ್ಘವಾಗಿ ಮಾತನಾಡಿ ಆ ಮಾತುಗಳನೆಲ್ಲಾ ಚಿತ್ರೀಕರಿಸಿ ಮುಗಿಸುವ ಹೊತ್ತಿಗೆ ಸಮಯ ರಾತ್ರಿ 8 ಗಂಟೆ ಆಗಿತ್ತು.ಅವರಿಂದ ಸಾಕ್ಷ್ಯಚಿತ್ರಕ್ಕೆ ಅನೇಕ ಉಪಯುಕ್ತ ವಿಷಯಗಳು, ಮಾಹಿತಿಗಳು ದೊರಕಿದ್ದವು.ಅಂದಿನ ಶೆಡ್ಯೂಲ್ ಪ್ರಕಾರ ರಘುರವರದ್ದೇ ಕಡೆಯ ಚಿತ್ರೀಕರಣವಾಗಿತ್ತು. ಹಾಗಾಗಿ ಎಲ್ಲಾ ಮುಗಿಸಿ ಕ್ಯಾಮೆರ, ಲೈಟುಗಳು ಮುಂತಾದವುಗಳನೆಲ್ಲಾ ಪ್ಯಾಕ್ ಮಾಡಿ ಇಟ್ಟುಕೊಳ್ಳುತ್ತಿದ್ದಾಗ ರಘುರವರು ’ವ್ಯಕ್ತಿಯೊಬ್ಬರ ಹೆಸರು ಹೇಳಿ, ’ಇವರು ಇದಾರ ನಿಮ್ಮ ಶೂಟಿಂಗ್ ಲಿಸ್ಟ್ ನಲ್ಲಿ?’ ಎಂದು ಕೇಳಿದರು. ಅವರು ಹೇಳಿದ ಆ ಹೆಸರು ಸಾಕ್ಷ್ಯಚಿತ್ರದ ಚಿತ್ರೀಕರಣದ ಲಿಸ್ಟ್ ನಲ್ಲಿ ಇರಲಿಲ್ಲವಾದ್ದರಿಂದ ’ಇಲ್ವಲ್ಲ ಸಾರ್….ಯಾರಿವ್ರು…?’ ಎಂದು ಕೇಳಿದೆ.”ಇವರು ತೇಜಸ್ವಿದು ನಿರುತ್ತರ ತೋಟ ಇದ್ಯಲ್ಲ ಅದರ ಪಕ್ಕದ ತೋಟದವರು.ತೇಜಸ್ವಿ Neighborಇವ್ರನ್ನ ಮಾತಾಡ್ಸೋಕಾದ್ರೆ ಟ್ರೈ ಮಾಡಿ’ ಎಂದು ಆ ವ್ಯಕ್ತಿಯ ಫೋನ್ ನಂಬರ್ ಕೊಟ್ಟರು. ರಘುರವರು ಹೇಳಿದ ತೇಜಸ್ವಿಯವರ Neighbor ರನ್ನು ಮಾತನಾಡಿಸಲು ಇಷ್ಟವಿದ್ದರೂ ನಮ್ಮ ಬಿಗಿಯಾದ ಶೂಟಿಂಗ್ ಶೆಡ್ಯೂಲ್ ಅದಕ್ಕೆ ಅವಕಾಶ ಕೊಡುವಂತಿರಲಿಲ್ಲ. ಮುಂದಿನ ದಿನಗಳ ಶೆಡ್ಯೂಲ್ ತುಂಬಾ ಬಿಗಿಯಾಗಿತ್ತುಮತ್ತು ಚಿತ್ರೀಕರಿಸಲು ಇನ್ನೂ ಸಾಕಷ್ಟು ವಿಷಯಗಳಿದ್ದವು. ಹಾಗಾಗಿ ನಾಳೆ ಎಂದು ಮುಂದೂಡುವುದು ಬೇಡ ಎಂದುಕೊಂಡು ರಘುರವರು ಕೊಟ್ಟ ಆ ನಂಬರಿಗೆ ಫೋನ್ ಮಾಡಿದೆ.
ರಘುರವರು ’ಅವರು ತುಂಬಾ ದೊಡ್ಡ ಕಾಫಿ ಪ್ಲಾಂಟರ್ ಎಂದು ಈ ಟೈಮಲ್ಲಿ ನಿಮಗೆ ಸಿಗೋದು ಕಷ್ಟ’ ಎಂದು ಹೇಳಿದ್ದರು.ಆದರೆ ಒಂದು ಭಂಡ ನಂಬಿಕೆ ಮೇಲೆ ಸಿಕ್ಕರೆ ಸಿಗಲಿ ಎಂದು ಆ ನಂಬರಿಗೆ ಫೋನ್ ಮಾಡಿ ’ತೇಜಸ್ವಿಯವರ ಬಗ್ಗೆ ಮಾತನಾಡಬೇಕು ಸಿಗ್ತೀರ?’ ಎಂದು ಕೇಳಿದ್ದೆ.ಕರೆ ಸ್ವೀಕರಿಸಿದ ಆ ವ್ಯಕ್ತಿ ’ಓ…ಖಂಡಿತಾ…ತೇಜಸ್ವಿಯವ್ರ ವಿಚಾರ ಅಂದ್ರೆ ಎಷ್ಟೊತ್ತಿಗೆ ಬೇಕಾದ್ರೂ ಸಿಗ್ತೀನಿ…’ ಎಂದರು. ’ನಾನು ಈಗ್ಲೇ ಸಿಗಬಹುದ ತಾವು…? ಎಂದು ಕೇಳಿದೆ.’ಅಯ್ಯೊ ಸಾರಿ, ನಾನು ಹಾಸನದಿಂದ ಮೂಡಿಗೆರೆಗೆ ಟ್ರಾವೆಲ್ ಮಾಡ್ತಾ ಇದೀನಿ.ಇನ್ನು one hour ಬೇಕು ಮೂಡಿಗೆರೆ ರೀಚ್ ಆಗೋದಿಕ್ಕೆ…ರಾತ್ರಿ ಹತ್ತು ಗಂಟೆ ಆಗ್ಬಹುದು…But ನನಗೇನು ಪ್ರಾಬ್ಲಂ ಇಲ್ಲ. ಎಷ್ಟೊತ್ತಾದ್ರೂ ಸಿಗ್ತೀನಿ.ನಿಮಗೆ ತೊಂದ್ರೆ ಇಲ್ಲ ಅಂದ್ರೆ ಹೇಳಿ…ಸಿಗ್ತೀನಿ’ ಎಂದು ಅವರು ಹೇಳಿದರು.’ನಮಗೂ ನೋ ಪ್ರಾಬ್ಲಂ ಸಾರ್.ಹತ್ತು ಗಂಟೆಗೆ ಎಲ್ಲಿಗೆ ಬರ್ಬೇಕು?ಹೇಳಿ. ಬರ್ತೀವಿ..’ ಎಂದಿದ್ದಕ್ಕೆ, ಬೇಡ ನಾನು ಮನೆಗೆ ಹೋಗೋಕೆ ಮುಂಚೇನೆ ನಿಮ್ಮನ್ನ ನೋಡ್ಕೊಂಡು ಮಾತಾಡಿ ಹೋಗ್ತೀನಿ, ಎಲ್ಲಿ ನೀವು ಉಳ್ಕೊಂಡಿರೋದು? ಎಂದು ಕೇಳಿದರು.ನಾನು ’ಮೂಡಿಗೆರೆ ಐಬಿ’ ಎಂದೆ. ’ಸರಿ ಹತ್ತು ಗಂಟೆಗೆ ಅಲ್ಲಿರ್ತೀನಿ…’ ಎಂದು ಹೇಳಿ ಅದರಂತೆ ಹತ್ತು ಗಂಟೆಗೆ ಮೂಡಿಗೆರೆಯ ಐಬಿಗೆ ಬಂದು ಮೇಲಿನಂತೆ ತೇಜಸ್ವಿ ಕಾಫಿ ಬೋರ್ಡಿನ ವಿರುದ್ದ ನಡೆಸಿದ ಹೋರಾಟದ ದಿನಗಳ ಕುರಿತ ನೆನಪುಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದರು. ಹೆಸರು ’ಹಳೇಕೋಟೆ ರಮೇಶ್’ ಮೂಡಿಗೆರೆಯ ಕಾಫಿ ಬೆಳೆಗಾರ.

ರಮೇಶ್ ಮುಂದುವರೆಸಿದರು, “1976ರಲ್ಲಿ ಮೂಡಿಗೆರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ರಾಂಚ್ ಬಂತು.ಅದರ ಉದ್ಘಾಟನೆಗೆ ಅವತ್ತಿನ ಕಾಫಿ ಬೋರ್ಡಿನ ಅಧ್ಯಕ್ಷರು ಬಂದಿದ್ರು.ತೇಜಸ್ವಿ ಮತ್ತು ಕೆಲವು ಸ್ನೇಹಿತರು ಅಧ್ಯಕ್ಷರ ಮುಂದೆ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ಮಾಡಿದ್ರು.ಅವತ್ತು ಅವರನ್ನ ಪೋಲೀಸರು ಅರೆಸ್ಟ್ ಮಾಡಿದ್ರು.ಆಗ ಮೂಡಿಗೆರೆ ಸುತ್ತಮುತ್ತಲಿನ ಇದೇ ಇವತ್ತಿನ ದೊಡ್ಡ ದೊಡ್ದ ಕಾಫಿ ಪ್ಲಾಂಟರುಗಳು ’ಇವನಿಗೆಲ್ಲೊ ಹುಚ್ಚಿಡಿದೆ.ಕಾಫಿ ಬೋರ್ಡ್ ವಿರುದ್ದಾನೇ ಪ್ರತಿಭಟನೆ ಮಾಡಿ ಈಗ ಯಾವ ತೊಂದ್ರೇನೂ ಇಲ್ಲದೇ ಬರ್ತೀರೊ ಆದಾಯಕ್ಕೆ ಕಲ್ಲು ಹಾಕ್ತಿದಾನೆ.ಇವನು ಹುಚ್ಚ, ಇವನ್ಜೊತೆಹೋದೋರು ಹುಚ್ಚರು…’ ಅಂತ ಬಾಯಿಗೆ ಬಂದಾಗೆ ಮಾತಾಡಿದ್ರು.ಇವತ್ತು ಅವ್ರೆಲ್ಲಾ ಅನ್ನ ತಿನ್ನೋಕೆ ಮುಂಚೆ ಇವ್ರನ್ನ ನೆನೆಸ್ಕೊಬೇಕು.ಅದು ಮುಕ್ತ ಮಾರುಕಟ್ಟೆ ಹೋರಾಟಕ್ಕೆ ನಾಂದಿ ಆಯ್ತು.ನಂತರ 1976ರಿಂದ ಸತತವಾಗಿ ಪ್ರಯತ್ನ ಮಾಡಿದ್ರು.1984ರಲ್ಲಿ ಕಾಫಿಬೋರ್ಡಿನ ಮೂಡಿಗೆರೆಯ ಹಿರಿಯ ಸಂಪರ್ಕಾಧಿಕಾರಿಯ ಮುಂದೆ, ಕಛೇರಿಗಳ ಮುಂದೆ ಸ್ಟ್ರೈಕ್ ಮಾಡಿದ್ವಿ.ಅವರಿಗೆ ಎಷ್ಟು ಸಿಟ್ಟಿತ್ತು ಇದರ ವಿರುದ್ದ ಅಂದ್ರೆ ಅವತ್ತು ಇಡೀ ದಿನ ಒಂದು ತೊಟ್ಟು ನೀರು ಸಹ ಕುಡೀಲಿಲ್ಲ ಅವರು. ಅಮೇಲೆ ಬೆಂಗಳೂರಿನ ಕಾಫಿಬೋರ್ಡಿನ ಕೇಂದ್ರ ಕಛೇರಿ ಮುಂದೆ ಸ್ಟ್ರೈಕ್ ಮಾಡ್ಬೇಕು ಅಂತ ಡಿಸೈಡ್ ಮಾಡ್ಕೊಂಡು ಹೊರಟ್ವಿ.ಇಲ್ಲಿನ ಕಾಫಿ ಬೆಳೆಗಾರರೆಲ್ಲಾ ಪ್ರೈವೇಟ್ ಬಸ್ ಮಾಡ್ಕೊಂಡು ಬೆಂಗಳೂರಿಗೆ ಹೋದ್ರು.ಆಗ ಮೂಡಿಗೆರೆಯಿಂದ ಬೆಂಗಳೂರಿಗೆ ಈಗಿನಂಗೆ ಬಸ್ ವ್ಯವಸ್ಥೆ ಇರಲಿಲ್ಲ. ಒಂದೋ ಎರಡೋ ಬಸ್ ಅಷ್ಟೇ ಇದ್ದಿದ್ದು.ನನಗಿನ್ನೂ ಕ್ಲಿಯರಾಗಿ ನೆನಪಿದೆ, ಅವತ್ತುನಾನು ತೇಜಸ್ವಿಮೂಡಿಗೆರೆ ಹ್ಯಾಂಡ್ ಪೋಸ್ಟ್ ಹತ್ರ ರಾತ್ರಿ 11 ಗಂಟೇಲಿ ಬಸ್ಸಿಗೆ ಅಂತ ಕಾಯ್ತಾ ಕೂತಿದ್ವಿ.ತುಂಬಾ ಹೊತ್ತಾದ್ಮೇಲೆ ಧರ್ಮಸ್ಥಳ-ಬೆಂಗಳೂರು ಅಂತ ಒಂದು ಬಸ್ ಬಂತು.ಅದರಲ್ಲಿ ನಿಲ್ಲಕ್ಕೂ ಜಾಗ ಇರ್ಲಿಲ್ಲ. ಅಷ್ಟು ರಶ್ಶು.ನಾನು’ಬೆಳಿಗ್ಗೆ ಬೇರೆ ಬಸ್ಸಿನಲ್ಲಿ ಹೋಗೋಣ ಸಾರ್’ ಅಂತ ಹೇಳಿದ್ರು ಅವರು ಕೇಳ್ಲಿಲ್ಲ. ’ಎಷ್ಟೇ ಕಷ್ಟ ಆದ್ರೂ ಪರ್ವಾಗಿಲ್ಲ, ಬೆಂಗಳೂರಿಗೆ ಹೋಗ್ಲೇಬೇಕು, ಪ್ರತಿಭಟನೆ ಮಾಡ್ಲೇಬೇಕು’ ಅಂತ ಹೇಳಿ ಅವತ್ತು ಇಡೀ ರಾತ್ರಿ ಆ ಬಸ್ಸಿನ ಫುಟ್ ಬೋರ್ಡ್ ಮೇಲೆ ಕೂತ್ಕೊಂಡ್ ಪ್ರಯಾಣ ಮಾಡಿ ಬೆಳಿಗ್ಗೆ ಬೆಂಗಳೂರು ಸೇರಿ ಅಲ್ಲಿ ಕಾಫಿ ಬೋರ್ಡ್ ಆಫೀಸ್ ಮುಂದೆ ಸ್ಟ್ರೈಕ್ ಮಾಡಿದ್ರು. ಅವರ ಈ ಹೋರಾಟಕ್ಕೆ 1995ರಲ್ಲಿ ಭಾಗಶಃ ಜಯ ಸಿಕ್ತು.’30% ಮುಕ್ತ ಮಾರುಕಟ್ಟೆನಲ್ಲಿ ಮಾರ್ಕೋಬಹುದು, ಉಳಿದ 70% ಭಾಗ ಬೋರ್ಡಿಗೇ ಕೊಡ್ಬೇಕು’ ಅಂತ ಆರ್ಡರ್ ಬಂತು.ಆದ್ರೆ ತೇಜಸ್ವಿಗೆ ಅದೂ ಇಷ್ಟ ಆಗ್ಲಿಲ್ಲ. ಮತ್ತೆ ಹೋರಾಟ ಮುಂದುವರೆಸಿದ್ರು.ಕೊನೇಗೆ 1996ರಲ್ಲಿ ಕಾಫಿಗೆ ನೂರಕ್ಕೆ ನೂರು ಮುಕ್ತ ಮಾರುಕಟ್ಟೆ ಅಂತ ಆಯ್ತು.ಅವರ ಹೋರಾಟಕ್ಕೆ ಜಯ ಸಿಕ್ತು.30 ವರ್ಷ ಬೇಕಾಯ್ತು ನೋಡಿ ಒಂದು ಬದಲಾವಣೆ ಆಗೋದಿಕ್ಕೆ.ಬೆಳೆಗಾರರು ತಮ್ಮ ಕಾಫಿಯನ್ನ ಎಲ್ಲಿ, ಯಾರಿಗೆ ಬೇಕಾದ್ರೂ ಮಾರ್ಕೊಬಹುದು ಅಂತ ಆಯ್ತು.’ಇವನು ಹುಚ್ಚ’ ಅಂತ ಹೇಳಿದ್ ಅದೇ ಕಾಫಿ ಬೆಳೆಗಾರರೇ ಅವತ್ತು ಸಂಭ್ರಮದಿಂದ ಹಬ್ಬ ಆಚರಿಸಿದ್ರು’ ಎಂದು ಹಳೇಕೋಟೆ ರಮೇಶ್ ರವರು ನಿರರ್ಗಳವಾಗಿ ಮಾತನಾಡುತ್ತಾ ಹೋದರು.ಮೂಡಿಗೆರೆಯ ಐಬಿಯ ಹೊರಗಿನ ಕಾರಿಡಾರಿನಲ್ಲಿ ಇವರ ಮಾತುಗಳ ಚಿತ್ರೀಕರಣ ನಡೆಯುತ್ತಿತ್ತು.ದರ್ಶನ್ ರ ಕ್ಯಾಮೆರಾದಲ್ಲಿ ಇವರ ಪ್ರತಿಯೊಂದು ಮಾತುಗಳು ದಾಖಲಾಗುತ್ತಿದ್ದವು.
ಮಳೆ ಸಣ್ಣಗೆ ಹನಿಯುತ್ತಾ ಸುತ್ತಲಿನ ವಾತಾವರಣವನ್ನು ತಂಪು ಮಾಡಿತ್ತು.

ಮಾತು ಮತ್ತೆ ಮುಂದುವರೆಯಿತು, “ತೇಜಸ್ವಿಯವ್ರು ಈ ಸಾಲ ಮನ್ನಾ, ಬಡ್ಡಿ ಮನ್ನಾ, ಸಬ್ಸಿಡಿ ಇವನ್ನೆಲ್ಲಾ ವಿರೋದಿಸ್ತಾ ಇದ್ರು. ಯಾಕಂದ್ರೆ ‘ಇದರಿಂದ ಸರ್ಕಾರಿ ಇಲಾಖೆಗಳಲ್ಲಿ, ಆಫೀಸುಗಳಲ್ಲಿ ಕೆಲಸ ಮಾಡೋ ಕಳ್ಳ, ಖದೀಮರಿಗೆ ದುಡ್ಡು ಹೊಡೆಯೋಕೆ ಒಂದು ದಾರಿ ಆಗುತ್ತೆ, ಭ್ರಷ್ಟಾಚಾರ ಜಾಸ್ತಿ ಆಗುತ್ಯೇಹೊರತು ಸಾಮಾನ್ಯ ರೈತರಿಗೆ ಇದರಿಂದ ಏನೂ ಪ್ರಯೋಜನ ಸಿಗೊದಿಲ್ಲ. ಅದರ ಬದಲು ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ಒಂದು ಬೆಂಬಲ ಬೆಲೆ ಅಂತ ಕೊಡ್ಲಿ, ಎಲ್ಲಾ ಕಡೆ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡ್ಲಿ, ಕೋಆಪರೇಟಿವ್ ಬೇಸಿಸ್ ನಲ್ಲಿ ರೈತರು ಬೆಳೆದ ಬೆಳೆಗಳನ್ನ ಮಾರಾಟ ಮಾಡೋ ವ್ಯವಸ್ಥೆ ಮಾಡ್ಲಿ. ಅದು ಬಿಟ್ಟು ಆ ಸಬ್ಸಿಡಿ, ಈ ಸ್ಕೀಮು, ಸಾಲಮನ್ನಾ, ಇವೆಲ್ಲಾ ತಿರುಪತಿ ಚೌರದ ಯೋಜನೆಗಳು ಅಂತ ಹೇಳ್ತಿದ್ರು.ಉದಾಹರಣೆಗೆ ಕರೆಂಟ್ ಫ್ರೀ ಅಂತ ಹೇಳಿ ಮೂರು ಗಂಟೆ ಕರೆಂಟ್ ಕೊಟ್ರೆ ಅದ್ರಿಂದ ಏನ್ ಪ್ರಯೋಜ್ನ ಆಗ್ತದೆ.ಹೋಗ್ಲಿ ಕೊಡೊ ಆ ಮೂರು ಗಂಟೆ ಫ್ರೀ ಕರೆಂಟ್ ಆದ್ರೂ ಸರಿಯಾಗಿ ಕೊಡ್ತಾರ ಅಂದ್ರೆ ಅದೂ ಇಲ್ಲ. ಅದ್ರಲ್ಲೂ ಅರ್ಧಕ್ಕರ್ಧ ಸಿಂಗಲ್ ಫೇಸ್ ಕರೆಂಟ್ ಕೊಡ್ತಾರೆ.ಅಮೇಲೆ ಫ್ರೀ ಅಂತ ಹೇಳಿ ವಿದ್ಯುತ್ ಇಲಾಖೆ ಕೆಲಸಗಾರರು ಸರಿಯಾಗಿ ಕರೆಂಟ್ ಕೊಡದೇ ಸೊಮಾರಿತನ ಮಾಡ್ತಾರೆ.ಅದಕ್ಕೆ ಬದಲು ದುಡ್ಡು ತಗೊಂಡೇ ಕರೆಂಟ್ ಕೊಡಿ, ಆದ್ರೆ ಬೆಳೆದಿದ್ದಕ್ಕೆ ಸರಿಯಾದ ಬೆಲೆ ಸಿಗಂಗೆ ಮಾಡಿ, ಸುಮ್ನೆ ರೈತರ ಮೂಗಿಗೆ ತುಪ್ಪ ಹಚ್ಚೊ ಕೆಲ್ಸ ಮಾಡ್ಬೇಡಿ’ ಅಂತ ಹೇಳ್ತಿದ್ರು.
ಅಷ್ಟೇ ಅಲ್ಲ ಅವರು ನಮ್ಮನ್ನು (ರೈತರನ್ನು) ಎಚ್ಚರಿಸ್ತಿದ್ರು, “ದುಂದುವೆಚ್ಚ ಮಾಡ್ಬೇಡಿ, ಆಡಂಬರದ ಮದುವೆ ಮಾಡ್ಬೇಡಿ, ಅಗತ್ಯ ಇದೆಯೊ ಇಲ್ವೊ ಸುಮ್ನೆ ಕಾರು ತಗೊಂಡು ಊರು ಸುತ್ತುತ್ತಾ ಶೋಕಿಗೆ ಬೀಳ್ಬೇಡಿ, ಒಂದು ಚೌಕಟ್ಟಿನಲ್ಲಿ ಜೀವನ ಮಾಡಿ’ ಅಂತ. ಅದೇನೊ ’ನುಡಿದಂತೆ ನಡೆಯೋದು’ ಅಂತಾರಲ್ಲ ಹಾಗೆ ಅವರು ಏನ್ ಹೇಳ್ತಿದ್ರು ಹಾಗೇ ಬದುಕ್ತಿದ್ರು. ಈಗಂತೂ ನಮ್ಮ ಕಾಫಿ ಪ್ಲಾಂಟರುಗಳು ಯಾರೂ ಕಾರು ಬಿಟ್ಟು ಕೆಳಗೇ ಇಳಿಯೋದಿಲ್ಲ. ವರ್ಷಕ್ಕೊಂದ್ ಕಾರು, ಜೀಪು ಚೇಂಜ್ ಮಾಡ್ಕೊಂಡು, ಅದ್ದೂರಿಯಾಗಿ ಪಾರ್ಟಿ, ಮದುವೆ ಅದು ಇದು ಅಂತ ಕುಣಿದು ಕುಪ್ಪಳಿಸ್ತಾರೆ. ಆದ್ರೆ ತೇಜಸ್ವಿ ಸುರಿಯೊ ಮಳೇಲೂ ಸ್ಕೂಟರಿನಲ್ಲೇ ಬರ್ತಿದ್ರು.’ಏನ್ ಸಾರ್ ಮಳೇಲೂ ಸ್ಕೂಟ್ರಲ್ಲಿ ಬಂದೀದೀರಲ್ಲ…ಕಾರ್ ತರ್ಬೋದಿತ್ತಲ್ಲ…’ ಅಂದ್ರೆ “ಎಂತಕ್ಕೆ ಮಾರಾಯ ಕಾರು.ಸುಮ್ನೆ ನಾಲ್ಕು ಲೀಟ್ರು ಪೆಟ್ರೋಲ್ ವೇಸ್ಟು.ದೇಶಕ್ಕೆ ಉಳೀತದೆ ಬಿಡು’ ಅಂತಿದ್ರು. ಅಂತ ಸರಳ, ನೇರ ಮಾತಿನ ವ್ಯಕ್ತಿತ್ವ ಅವ್ರುದ್ದು. ಮನೆ ಬಾಗಿಲಿಗೆ ಬಂದಿತ್ತು ರಾಜ್ಯಸಭಾ ಮೆಂಬರ್ಶಿಪ್ಪು, ಮನೆಬಾಗಿಲಿಗೆ ಬಂದಿತ್ತು ಎಂ ಎಲ್ ಸಿ ಪದವಿ, ’ನನಗೆ ಯಾವ್ದೂ ಬೇಡ ಮಾರಾಯ್ರಾ..ನಮ್ ಪಾಡಿಗೆ ನಮ್ಮನ್ ಬಿಟ್ಬಿಡಿ…’ ಅಂತ ಹೇಳಿದ್ರು. ಇವತ್ತು ದೊಡ್ಡವರು, ಬುದ್ದಿಜೀವಿಗಳು ಆನ್ನಿಸ್ಕೊಂಡೋರು ಎಷ್ಟ್ ಜನ ಅಧಿಕಾರಕ್ಕೆ ಲಾಬಿ ಮಾಡ್ತಿದಾರೆ ಅಂತ ನಮ್ಮ ಕಣ್ಮುಂದೇನೆ ಕಾಣಿಸ್ತಿರೋವಾಗ ತೇಜಸ್ವಿ ಅಂತ ನಿಜವಾದ ಮನುಷ್ಯನಿಗೆ ಮಾತ್ರ ಹೀಗೆ ಎಲ್ಲಾ ಬಿಟ್ಟು ಕಾಡಿನಲ್ಲಿ ತಮ್ಮ ಪಾಡಿಗೆ ತಾವು ಬದುಕೋಕೆ ಸಾಧ್ಯ ಏನೋ…? ಅಲ್ವ?
ಅದು ಬಿಡಿ ಒಂದು ಘಟನೆ ಹೇಳ್ತೀನಿ, ಅವ್ರಿಗೆ ಅರವತ್ತು ವರ್ಷ ತುಂಬಿದಾಗ ನಾನು ಅವ್ರತ್ರ ಹೋಗಿ ’ಸಾರ್ ನಿನಗೆ 60 ತುಂಬಿದಕ್ಕೆ ಒಂದು ಕಾರ್ಯಕ್ರಮ ಮಾಡ್ತೀವಿ’ ಅಂತ ಹೇಳ್ದಾಗ ಅವ್ರು ’ಅಲ್ರಯ್ಯ ಪ್ರಪಂಚದಲ್ಲಿ 700 ಕೋಟಿ ಜನ ಇದಾರೆ. ಅವರಲ್ಲಿ ಅರ್ಧ ಜನಕ್ಕಾದ್ರೂ 60 ತುಂಬುತ್ತೆ.ಅವ್ರಿಗೆಲ್ಲಾ ನೀವು ಕಾರ್ಯಕ್ರಮ ಮಾಡ್ತೀರ…ಸುಮ್ನೆ ಇಂತ ವಿಷಯಗಳನ್ನ ತಂದು ಟೈಂ ವೇಸ್ಟ್ ಮಾಡ್ಬೇಡಿ’ ಅಂತ ಬೈದಿದ್ರು.ಮತ್ತೊಂದ್ ಸಲ ಅವ್ರಿಗೆ ಪಂಪ ಪ್ರಶಸ್ತಿ ಬಂದಾಗ ಮತ್ತೆ ಹೋಗಿ ’ಸಾರ್ ಒಂದು ಅಭಿನಂದನಾ ಕಾರ್ಯಕ್ರಮ ಇಟ್ಕೋತೀವಿ’ ಅಂದಾಗ ’ರೀ ಯಾರಿಗ್ರಿ ಬೇಕು ಈ ಸನ್ಮಾನ, ಅಭಿನಂದನೆ ಎಲ್ಲಾ?ಅದರ ಬದಲು ಸುಮ್ನೆ ಒಂದು ವಿಚಾರ ಮಂಥನ ಮಾಡಿ.ಎಲ್ರೂ ಸೇರಿ ವಿಚಾರ ವಿನಿಮಯ ಮಾಡೋಣ’ ಅಂತ ಹೇಳಿದ್ರು.ಅದೇ ಪ್ರಕಾರ ನಾವೆಲ್ರೂ ಸೇರಿ ’ಪ್ರಶ್ನೊತ್ತರ’ ಅಂತ ಕಾರ್ಯಕ್ರಮ ಮಾಡಿದ್ವಿ.ಅವರು ಬಂದು ನಾವು ಕೇಳಿದ ಪ್ರಶ್ನೆಗಳಿಗೆಲ್ಲಾ ಅವ್ರದ್ದೇ ಸ್ಟೈಲ್ ನಲ್ಲಿ ಉತ್ತರ ಕೊಟ್ರು. ಅವ್ರ ಜೊತೆ ಮಾತಾಡೋದು ಅಂದ್ರೆ ಒಂದು ವರ್ಲ್ಡ್ ಟೂರ್ ಮಾಡಿದ experience ಸಿಗ್ತಿತ್ತು. ಅದೊಂದು encyclopedia. ಮಾತಿಗೆ ಹೇಳೋದಲ್ಲ ಅಂಥವ್ರನ್ನ ಇಷ್ಟು ಬೇಗ ಕಳ್ಕೊಂಡಿದ್ದು ನಿಜಕ್ಕೂ ನಮ್ಮ ದುರಾದೃಷ್ಟ. ಅವರು ಡಾಕ್ಟ್ರು ಹೇಳ್ದಂಗೆ ಕೇಳಿದ್ರೆ ಇನ್ನೊಂದ್ ಹತ್ತಾರು ವರ್ಷ ಮಾರ್ಗದರ್ಶಕರಾಗಿ ನಮ್ಮ ಜೊತೆ ಇರ್ತಿದ್ರು. ಆನೆ ನಡೆದಿದ್ದೇ ಹಾದಿ.ಏನ್ ಮಾಡೋದು….” ಎಂದು ಹಳೇಕೋಟೆ ರಮೇಶ್ ಮೌನವಾದರು.
ಅಲ್ಲಿಗೆ ರಮೇಶ್ ರವರ ಮಾತುಗಳಿಗೆ ಮತ್ತು ಅಂದಿನ ಚಿತ್ರೀಕರಣಕ್ಕೆ ಪೂರ್ಣ ವಿರಾಮ. ನಮ್ಮ ಹುಡುಗರು ಕ್ಯಾಮೆರ, ಲೈಟು ಮುಂತಾದ ಚಿತ್ರೀಕರಣದ ಹತ್ಯಾರುಗಳನೆಲ್ಲಾ ನಾಳಿನ ಚಿತ್ರೀಕರಣಕ್ಕೆ ಸಜ್ಜುಗೊಳಿಸತೊಡಗಿದರು. ಹಳೇಕೋಟೆ ರಮೇಶ್ ರವರು ’ಒಳ್ಳೆ ಕೆಲಸ ಮಾಡ್ತೀದ್ದೀರಿ…ಇಂತ ಒಂದು ಕೆಲಸ ಆಗ್ಬೇಕಿತ್ತು…ಮಾಡಿ. ನನ್ನಿಂದ ಏನಾದ್ರೂ ಹೆಲ್ಪ್ ಬೇಕಾದ್ರೆ ಕೇಳಿ…ಮಾಡ್ತೀನಿ..’ ಎಂದು ಹೇಳಿದರು. ಅವರ ವಿಶ್ವಾಸಕ್ಕೆ ಹಾಗೂ ನಮ್ಮನ್ನೇ ಹುಡುಕಿಕೊಂಡು ಬಂದು ತೇಜಸ್ವಿ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಅವರಿಗೆ ಧನ್ಯವಾದ ಹೇಳಿ ಅವರನ್ನು ಬೀಳ್ಕೊಟ್ಟೆ.ಮಳೆ ಸಣ್ಣಗೆ ಹಾಗೇ ಬೀಳುತ್ತಿತ್ತು.ಸಮಯ ಸುಮಾರು 11.30.ತಂಡದೊಂದಿಗೆ ನಾಳಿನ ಚಿತ್ರೀಕರಣದ ವಿವರಗಳನ್ನು ಚರ್ಚಿಸಿ, ಮೂಡಿಗೆರೆಯ ಹೋಟೆಲೊಂದರಲ್ಲಿ ಊಟ ಮಾಡಿ ನಿದ್ರೆಗೆ ಶರಣಾದೆ.ಅಲ್ಲಿಗೆ 7 ದಿನಗಳ ನಮ್ಮ ಮೂಡಿಗೆರೆಯ ಚಿತ್ರೀಕರಣ ಮುಗಿದಿತ್ತು.ನಾಳೆಯಿಂದ ಚಿತ್ರೀಕರಣ ತೇಜಸ್ವಿ ಹೆಜ್ಜೆಗುರುತಿನ ಬೇರೆಬೇರೆ ಪ್ರದೇಶಗಳಲ್ಲಿ ಪ್ರಾರಂಭವಾಗಲಿತ್ತು.
 
 
“ಮೂಡಿಗೆರೆ ಬಿಟ್ಟು ಹೊರಡುವ ಹಾದಿಯಲ್ಲಿ…”
ಮರುದಿನ ಬೆಳಿಗ್ಗೆ ಎದ್ದವನೇ ಮೂಡಿಗೆರೆ ಐಬಿಯ ಮೇಟಿಯನ್ನು ಕಂಡು ರೂಮು ಖಾಲಿ ಮಾಡುತ್ತಿರುವುದಾಗಿ ತಿಳಿಸಿ ಅಲ್ಲಿವರೆಗಿನ ಬಾಡಿಗೆಯನ್ನು ಅವರಿಗೆ ಕೊಟ್ಟೆ.ಆ ರೂಮು ಸಿಗಲು ಕಾರಣರಾಗಿದ್ದ ಗೆಳೆಯ ಧನಂಜಯ್ ಗೆ ಫೋನ್ ಮಾಡಿ ಮೂಡಿಗೆರೆ ಬಿಡುತ್ತಿರುವ ವಿಷಯ ಹೇಳಿದೆ.ಅವರು ’ಓಕೆ ಪರಮೇಶ್ವರ್, ಐ ಹೋಪ್ ನಿಮ್ಮ ಕೆಲಸಗಳು ಅಂದುಕೊಂಡ ಹಾಗೆ ಆಗಿರುತ್ತೆ ಅಂತ. ಎನಿ ವೇ ಆಲ್ ದಿ ಬೆಸ್ಟ್ ನಿಮ್ಮ ಮುಂದಿನ ಚಿತ್ರೀಕರಣಕ್ಕೆ.ನೆಕ್ಸ್ಟ್ ಯಾವ್ ಕಡೆ ಪ್ರಯಾಣ?’ ಎಂದು ಕೇಳಿದರು.’ನೆಕ್ಸ್ಟ್ ಕುಪ್ಪಳ್ಳಿ ಸಾರ್…ಅಮೇಲೆ ತೀರ್ಥಳ್ಳಿ,ಶಿಮೊಗ್ಗ, ಭದ್ರಾವತಿ ಹಾಗಿದೆ ನಮ್ಮ ಪ್ಲಾನು…’ ಎಂದೆ.’ಓಕೆ ಚೆನ್ನಗಾಗ್ಲಿ.ಏನಾದ್ರೂ ವಿಷಯ ಇದ್ರೆ, ಅಥವ ಹೆಲ್ಪ್ ಬೇಕಾದ್ರೆ ಫೋನ್ ಮಾಡಿ.ವಿಲ್ ಟ್ರೈ ಮೈ ಬೆಸ್ಟ್.Happy Journey…’ ಎಂದು ಗೆಳೆಯ ಹಾರೈಸಿದರು.ನಂತರ ಮತ್ತೊಂದು ನಂಬರಿಗೆ ಕರೆ ಮಾಡಿದೆ.ಆ ಕಡೆಯಿಂದ ಕರೆ ಸ್ವೀಕರಿಸಿದವರು ’ಗುಡ್ ಮಾರ್ನಿಂಗ್ ಪರಮೇಶ್ವರ್.ನಾನು ಬೆಳಿಗ್ಗೇನೆ ಪುತ್ತೂರಿನಿಂದ ಬಸ್ ಹತ್ತಿದ್ದೀನಿ.ಸುಮಾರು ಹತ್ತು ಗಂಟೆ ಅಷ್ಟರಲ್ಲಿ ಕೊಟ್ಟಿಗೆಹಾರ ಇರ್ತೀನಿ’ ಎಂದರು.’ಓಕೆ ಸರ್.ನಾವು ಹೊರಟ್ಟಿದ್ದೀವಿ. ನಿಮಗಿಂತ ಮೊದಲೇ ಅಲ್ಲಿರ್ತೀವಿ ಬನ್ನಿ..’ ನಾನು ಅವರಿಗೆ ಹೇಳಿದೆ. ಫೋನ್ ಕಟ್ ಆಯ್ತು.ಅಷ್ಟರಲ್ಲಿ ನಮ್ಮ ಹುಡುಗರು ವ್ಯಾನಿಗೆ ಎಲ್ಲಾ ಲಗೇಜುಗಳನ್ನು ಭರ್ತಿ ಮಾಡಿ ಕಾಯುತ್ತಾ ನಿಂತಿದ್ದರು.ಸರಿಯಾಗಿ 8 ಗಂಟೆ ಹೊತ್ತಿಗೆ ಮೂಡಿಗೆರೆ ಬಿಟ್ಟು ಕೊಟ್ಟಿಗೆಹಾರದ ಕಡೆ ಹೊರಟೆವು.ಮೂಡಿಗೆರೆ, ಹ್ಯಾಂಡ್ ಪೋಸ್ಟು, ಎಲ್ಲಾ ದಾಟಿ ನಮ್ಮ ವ್ಯಾನು ಓಡುತ್ತಿತ್ತು.ಅವತ್ತು ಆಗಸ್ಟ್ ಹದಿನೈದು. ಬಿಳಿ ಯೂನಿಫಾರ್ಮ್ ಧರಿಸಿ, ಕೈಯಲ್ಲಿ ಪ್ಲಾಸ್ಟಿಕ್ ರಾಷ್ಟ್ರಧ್ವಜ ಹಿಡಿದು ಸಂಭ್ರಮದಲ್ಲಿ ಶಾಲೆಯ ಕಡೆ ಗುಂಪುಗುಂಪಾಗಿ ಹೊರಟ್ಟಿದ್ದ ಮಕ್ಕಳ ದೃಶ್ಯ ಮೂಡಿಗೆರೆ, ಬಣಕಲ್, ಮುಂತಾದ ಹಾದಿ ಪಕ್ಕದ ಊರುಗಳ ರಸ್ತೆಯ ಮೇಲೆ ಸಾಮಾನ್ಯವಾಗಿತ್ತು. ಇದೆಲ್ಲವನ್ನೂ ನೋಡುತ್ತಾ ಹೊರಟ ಅರ್ಧ ಗಂಟೆಯಲ್ಲಿ ಕೊಟ್ಟಿಗೆಹಾರ ತಲುಪಿದೆವು. ನಾವು ನಿರೀಕ್ಷಿಸುತ್ತಿದ್ದ ಆ ವ್ಯಕ್ತಿ ಬರಲು ಇನ್ನೂ ಒಂದುವರೆ ಗಂಟೆ ಸಮಯವಿದ್ದುದ್ದರಿಂದ ಅಲ್ಲಿಯವರೆಗೆ ಏನು ಮಾಡಬೇಕೆಂದು ಯೋಚಿಸುತ್ತಿದ್ದಾಗ ‘ಮಳೆಯಿಂದ ಗುಂಡಿಬಿದ್ದು ನೀರು ನಿಂತು ಕೆಸರಾಗಿದ್ದ ಕೊಟ್ಟಿಗೆಹಾರದ ರಸ್ತೆಯನ್ನು, ತೊಟ್ಟಿದ್ದ ಹೊಸ ಪ್ಯಾಂಟ್ ಕೆಸರಾಗಬಾರದು ಎಂದು ಪ್ಯಾಂಟನ್ನು ಎರಡೂ ಕೈಯಲ್ಲಿ ಮಂಡಿಯವರೆಗೂ ಎತ್ತಿ ಹಾರಿ ಹಾರಿ ರಸ್ತೆ ದಾಟುತ್ತಿದ್ದ ಬಾಪು ದಿನೇಶ್ ಕಣ್ಣಿಗೆ ಬಿದ್ದರು’. ಅವರು ನಮ್ಮನ್ನು ಕಂಡು ಮಾತನಾಡಿಸಿ ’ಆಫೀಸ್ ಕಡೆ ಹೋಗ್ತಿದ್ದೆ.ಬನ್ನಿ…’ ಎಂದು ನಮ್ಮನ್ನು ಅವರ ಜೊತೆ ಕರೆದುಕೊಂಡು ಹೋದರು.(ಅದು ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವವೈವಿಧ್ಯ ಕೇಂದ್ರದ ಆಫೀಸು. ಅದರ ಬಗ್ಗೆ ಪ್ರಾರಂಭದ ಸಂಚಿಕೆಗಳಲ್ಲಿ ಬರೆದಿದ್ದೆ.).ಬಾಪು ದಿನೇಶ್ ರೊಂದಿಗೆ ಮಾತನಾಡುತ್ತಾ ಕುಳಿತ ಅರ್ಧ ಗಂಟೆಯ ಹೊತ್ತಿಗೆ ’ಅವರು’ ಫೋನ್ ಮಾಡಿ.’ನಾನು ಕೊಟ್ಟಿಗೆಹಾರದಲ್ಲಿದ್ದೀನಿ.ಎಲ್ಲಿಗೆ ಬರಲಿ?’ ಎಂದರು.ನಾನು ಜಾಗ ಹೇಳಿದೆ.ಮುಂದಿನ ಐದು ನಿಮಿಷಗಳಲ್ಲಿ ಅವರು ನಮ್ಮ ಮುಂದೆ ನಿಂತಿದ್ದರು.ಪರಸ್ಪರ ಪರಿಚಯದ ನಂತರ ಅವರಿಗೆ ನಮ್ಮ ತಂಡವನ್ನು ಪರಿಚಯಿಸಿದೆ.ಬಾಪು ದಿನೇಶ್ ರ ಪರಿಚಯ ಅವರಿಗೆ ಮೊದಲೇ ಇತ್ತಾದ್ದರಿಂದ ಅವರಿಬ್ಬರು ಪರಿಚಯದ ನಗೆ ನಕ್ಕಿಕೊಂಡರು. ದೂರದ ಪುತ್ತೂರಿನಿಂದ ಕೊಟ್ಟಿಗೆಹಾರಕ್ಕೆ ತೇಜಸ್ವಿ ಕುರಿತು ಅವರ ನೆನಪುಗಳನ್ನು ಹಂಚಿಕೊಳ್ಳಲು ಬಂದಿದ್ದ ಆ ತೇಜಸ್ವಿ ಒಡನಾಡಿಗೆ ಸಾಕ್ಷ್ಯಚಿತ್ರದ ರೂಪುರೇಶೆಗಳನ್ನು ವಿವರಿಸಿ ಅವರಿಂದ ನಾವು ನಿರೀಕ್ಷಿಸುತ್ತಿದ್ದ ವಿಷಯಗಳ ಬಗ್ಗೆ ಹೇಳಿದೆ. ಅವರು ಎಲ್ಲವನ್ನೂ ಕೇಳಿ ’ಆಗ್ಲಿ, ನಾನು ಸಿದ್ದ ಇದ್ದೇನೆ…’ ಎಂದರು.ನಂತರ ಎಲ್ಲರೂ ಕೊಟ್ಟಿಗೆಹಾರದ ಶಾಲಾ ಆವರಣಕ್ಕೆ ಹೋಗಿ ಅಲ್ಲಿ ಚಿತ್ರೀಕರಣ ಪ್ರಾರಂಭಿಸಿದೆವು. ದೂರದಿಂದ ಬಂದಿದ್ದ ಅವರು ತಮ್ಮ ಪರಿಚಯ ತಾವೇ ಮಾಡಿಕೊಳ್ಳುವ ಮೂಲಕ ಮಾತು ಪ್ರಾರಂಬಿಸಿದರು, “ನನ್ ಹೆಸ್ರು ನರೇಂದ್ರ ರೈ ದೇರ್ಲ ಅಂತ, ಡಾ||ಶಿವರಾಮ ಕಾರಂತ ಫಸ್ಟ್ ಗ್ರೇಡ್ ಕಾಲೇಜ್, ಬೆಳ್ಳಾರೆ,ಸುಳ್ಯ ತಾಲೂಕು
ಇಲ್ಲಿ ಕನ್ನಡ ಉಪನ್ಯಾಸಕನಾಗಿ ಕೆಲಸ ಮಾಡ್ತಾ ಇದೇನೆ. ೧೯೯೧ರಲ್ಲಿ ತೇಜಸ್ವಿ…”
(ಮುಂದುವರೆಯುವುದು)

‍ಲೇಖಕರು G

November 3, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. g.n.nagaraj

    ಹುಚ್ಚರೋ ನಾವು,ನೀವೆಲ್ಲ ಹಚ್ಚರೋ

    ಪ್ರತಿಕ್ರಿಯೆ
  2. pamparaddy

    ಲೇಖನ ಒಬ್ಬ ಓದುಗನ್ನು ಓದಿಸಿಕೊಂಡು ಓಡುತ್ತದೆ. ಅದರಲ್ಲಿ ತೇಜಸ್ವಿ ಅಂದ್ರನೇ ಓದಿಸಿ, ಓಡಿಸಿಕೊಂಡು ಹೋಗುತ್ತದೆ. ಒಬ್ಬ ಬರಹಗಾರನಿಗೆ ಇರುವ ಸಮಾಜದ ಜವಬ್ದಾರಿಯನ್ನು ತೇಜಸ್ವಿಯವರು ಎಂದೋ ಮಾಡಿದ್ದಾರೆ. ವಾಸ್ತವವಾಗಿ ಇದು ಈ ತಲೆಮಾರುನ್ನು ಕಾಡುತ್ತಿದೆ ಎಂದು ಅನ್ನಿಸುತ್ತಿದೆ.
    ಪಂಪಾರಡ್ಡಿ ಅರಳಹಳ್ಳಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: