
ಮದ್ದಿಕ್ಕುವವರ ಮನೆಯಲ್ಲಿ-ಅವ್ರ
ಮದ್ದಾನ್ಕೆ ಮುರದು ಬರಬೇಕು
ಅನ್ಯಾಯ ಮಾಡೊ ಮುಂಡೆಮಕ್ಕಳ
ಇನ್ನಿಲ್ಲದಂಗೆ ಮಾಡಬೇಕು…..
ಎಂಬಂತೆ ಬಂಡಾಯ ತಾಳುವ ಕಾರಣಕ್ಕೆ ಮಲೆಯ ಮಾದಪ್ಪ ನನ್ನೊಳಗೆ ನೆಲೆಸಿದ್ದ. ಆತನ ಕಾವ್ಯವನ್ನು ಹಾಡುವವರ ತನ್ಮಯತೆ, ಆ ಹಾಡಿನಲ್ಲಿ ರೂಪು ಪಡೆಯುತ್ತಾ ಹೋಗುವ ಮಾದಪ್ಪನ ಚಿತ್ರ ನನ್ನೊಳಗೆ ಸದಾ ಹಸಿರಾಗಿವೆ. ಈ ಬಗೆಯ ಚಿತ್ರಗಳ ಕಟ್ಟಿಕೊಂಡ ನಾನು ಈಚೆಗೆ ಮಲೆಯ ಮಾದಪ್ಪನ ಬೆಟ್ಟಕ್ಕೆ ಬಹುದಿನದ ಕನಸೆಂಬಂತೆ ಹೋಗಿ ಬಂದೆ. ನನ್ನೊಳಗಿದ್ದ ಮಾಯ್ಕಾರ ಮಾದೇವ ಈಗಿನ ದೇವಸ್ಥಾನದ ಆವರಣದ ಗುಡಿ ಗೋಪುರಗಳಲ್ಲಿ ಎಲ್ಲಿಯೂ ಕಾಣ ಸಿಗಲಿಲ್ಲ. ಅರೆ, ಮಾದಪ್ಪ ಕಾಣೆಯಾಗಿದ್ದಾನೆ ಅನ್ನಿಸುವಾಗಲೆ, ಎತ್ತಲಿಂದಲೋ ಗುಡ್ಡರ ಹಾಡುಗಾರಿಕೆಯ ಧ್ವನಿಯೊಂದು ಕೇಳಿಸಿತು. ನೋಡಿದರೆ ಗುಡ್ಡರ ಹಾಡಿನಲ್ಲಿ ಮಾದೇವ ಮೈದುಂಬಿ ಕುಣಿಯ ತೊಡಗಿದ್ದ.
ಶೈವ ಪರಂಪರೆಯ ಮಲೆಯ ಮಾದೇಶ್ವರ ಮೈಸೂರು ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಕಾವೇರಿ ನದಿ ಆಚೆಗೆ ಕರ್ನಾಟಕ ಮತ್ತು ತಮಿಳುನಾಡು ಗಡಿಯ ಮಲೆಸಾಲುಗಳ ನಡುವೆ ನೆಲೆಗೊಂಡಿದ್ದಾನೆ. ಅಸಂಖ್ಯಾತ ಭಕ್ತರು ಏಳುಮಲೆಯ ಮಾದಯ್ಯ ಎಂದು ಕರೆದು ಈತನನ್ನು ಆರಾಧಿಸುತ್ತಾರೆ. ಕೆಳಜಾತಿಗಳ ಶೂದ್ರಾತಿಶೂದ್ರ ಭಕ್ತಾದಿಗಳೇ ಹೆಚ್ಚಾಗಿದ್ದು ಅವರಲ್ಲಿ ಬಹುಪಾಲು ಜನರು ಮಾಂಸಾಹಾರಿಗಳೇ ಆಗಿರುತ್ತಾರೆ. ತಮಿಳು ಜನಪದ ಗೀತೆಗಳಲ್ಲಿ “ಮಾಂಸದಡಿಗೆ ಮಾಡಿರುವೆ ಮಾದಪ್ಪ| ಊಟ ಮಾಡಬನ್ನಿ ಮಾದಪ್ಪ” ಎಂಬ ವಿವರಗಳು ದೊರೆಯುತ್ತವೆ. ಚಾರಿತ್ರಿಕವಾಗಿ ಹದಿನಾರನೆಯ ಶತಮಾನಕ್ಕೆ ಸೇರಬಹುದಾದ ಈತನ ಬಗ್ಗೆ-ಸಾಕ್ಷಾತ್ಈಶ್ವರನೆಂದೂ, ಶ್ರವಣನನ್ನು ಕೊಲ್ಲಲು ಕೈಲಾಸದಿಂದ ಭೂಮಿಗೆ ಇಳಿದು ಬಂದ ದೇವತೆಯೆಂದೂ-ಅನೇಕ ನಂಬಿಕೆಗಳು ಮತ್ತು ಕಲ್ಪನೆಯ ಹಲವಾರು ಕಥಾನಕಗಳು ಹೆಣೆದುಕೊಂಡಿವೆ.
ಮಾದಪ್ಪನನ್ನು ಕುರಿತ ಚಾರಿತ್ರಿಕ ಸಂಗತಿಗಳ ಕಡೆ ಕಣ್ಣಾಯಿಸಿದರೆ ಒಂದಷ್ಟು ಸಂಗತಿಗಳು ಎದ್ದು ಕಾಣುತ್ತವೆ. ಚಾಮರಾಜನಗರ ತಾಲ್ಲೂಕು ಹರದನಹಳ್ಳಿ ಶಾಸನದಲ್ಲಿ-ಮಾದೇಶ್ವರನು ಶ್ರವಣನನ್ನು ಕೊಂದು ವಜ್ರಮಲೆಯಲ್ಲಿ ನೆಲೆಸಿದ ಬಗ್ಗೆ ಹಾಗೂ ಹಾಲಂಬಾಡಿ ಜುಂಜೇಗೌಡನು ಮಾದೇಶ್ವರನಿಗೆ ಗುಡಿಕಟ್ಟಿಸಿ ಬೇಡರ ಕನ್ನಯ್ಯನ ಕುಲಜರಿಂದ ಪೂಜೆಯು ನಡೆಯುತ್ತಿದ್ದ ಬಗ್ಗೆ ಮಾಹಿತಿಗಳು ಸಿಗುತ್ತವೆ. ಕ್ರಿ.ಶ. ೧೭೬೧ರ ಹೈದರಾಲಿ ತಾಮ್ರ ಶಾಸನವು ಮಾದೇಶ್ವರನ ಸೇವೆಯ ಅರ್ಹತೆಯ ಹಕ್ಕಿನ ಬಗ್ಗೆ ಕೆಲವು ಗುಂಪುಗಳ ನಡುವೆ ಹೋರಾಟ ನಡೆದಾಗ ವಿಚಾರಣೆ ನಡೆಸಲ್ಪಟ್ಟು ಬರೆಸಿರುವುದಾಗಿದೆ.
ಕ್ರಿ.ಶ. ೧೮೪೧ರಲ್ಲಿದ್ದ ದೇವಚಂದ್ರನ `ರಾಜಾವಳಿ ಕಥೆ’ ಯಲ್ಲಿ ಹಲವು ಸ್ವಾರಸ್ಯಕರ ಸಂಗತಿಗಳಿವೆ. ಈ ಬಗ್ಗೆ ಹೆಚ್ಚಿನ ಅಕಾಡೆಮಿಕ್ ಅಧ್ಯಯನಗಳು ನಡೆದಿವೆ. ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ಡಾ. ವೆಂಕಟೇಶ್ ಇಂದ್ವಾಡಿ ಅವರು ಸಂಪಾದಿಸಿದ `ಮಲೆಯ ಮಾದಪ್ಪ: ಸಾಂಸ್ಕೃತಿಕ ಮುಖಾಮುಖಿ’ ಕೃತಿಯಲ್ಲಿ ಇಂತಹ ಬಹುಮುಖ ಚರ್ಚೆಗಳು ಸಿಗುತ್ತವೆ. ಆಸಕ್ತರು ಆ ಪುಸ್ತಕವನ್ನೊಮ್ಮೆ ಕಣ್ಣಾಡಿಸಬಹುದು.

ಚಿಟ್ಟೆಗಳ ಸ್ವಾಗತ
ತಿರುವುಗಳಲ್ಲಿ ಸುತ್ತಿಕೊಂಡು ಮಾದಪ್ಪನ ಬೆಟ್ಟ ಹತ್ತುವಾಗ ಮಲೆಗೆ ಸ್ವಾಗತಿಸಿದ್ದು ಸಹಸ್ರಾರು ಚಿಟ್ಟೆಗಳು. ನಿಸರ್ಗ ಸಹಜ ಈ ಸ್ವಾಗತ ಎಂಥವರನ್ನು ರೋಮಾಂಚನ ಗೊಳಿಸುವಂತಿತ್ತು. ನೂರಾರು ವಿಧ ವಿಧದ ಈ ಚಿಟ್ಟೆಗಳು ಹಾರಾಡುತ್ತಿದ್ದವು. ಇವುಗಳ ಸೌಂದರ್ಯ ನಮ್ಮ ಕ್ಯಾಮರಾಗಳಲ್ಲಿ ಸಿಗುತ್ತಿದ್ದುದು ಮಾತ್ರ ತೀರಾ ಬಡಕಲಾಗಿ. ಇಲ್ಲಿ ಹಾರುವ ಚಿಟ್ಟೆಗಳನ್ನು ನೋಡಲೆಂದು ವಾಹನ ನಿಲ್ಲಿಸಿದರೆ, ರಸ್ತೆಯ ಪಕ್ಕವೆ ಸತ್ತು ಬಿದ್ದ ಸಹಸ್ರಾರು ಚಿಟ್ಟೆಗಳ ನಿರ್ಜೀವ ಒಣ ಪುಕ್ಕಗಳೂ ಸಿಕ್ಕವು. ಅಲ್ಪಾಯುಷಿಗಳಾದ ಈ ಚಿಟ್ಟೆಗಳು ನೈಸರ್ಗಿಗ ಕ್ರಿಯೆಯ ಅದ್ಭುತ ಸೃಷ್ಠಿಯಂತೆಯೇ ಕಂಡಿತು. ಇವುಗಳು ಹಾರಾಡುತ್ತಾ ಬೆಟ್ಟ ಹತ್ತುವವರನ್ನು ಸ್ವಾಗತಿಸುವಂತೆ ರಸ್ತೆಯುದ್ದಕ್ಕೂ ಹಾರುತ್ತಿದ್ದವು.
ಸೈಕಲ್ ಹುಡುಗರು
ಈ ಏರು ಇಳಿವಿನ ದಾರಿಯಲ್ಲಿ ಯುವಕರನೇಕರು ಬೆಟ್ಟ ಹತ್ತುವ ಸೈಕಲ್ ಪ್ರವಾಸ ಕೈಗೊಂಡದ್ದು ವಿಶೇಷವಾಗಿತ್ತು. ಇವರೆಲ್ಲಾ ಸೈಕಲ್ಲಿನಲ್ಲಿ ತಮ್ಮ ಪುಟ್ಟ ಕೈಚೀಲ, ಕೆಂಪು ಮೈಯಂಗಿ ತೊಟ್ಟು ಸಾಹಸದ ರೀತಿಯಲ್ಲಿ ಸೈಕಲ್ ತುಳಿಯುತ್ತಾ ಬೆಟ್ಟವೇರುತ್ತಿದ್ದರು. ಬಿಸಿಲಿಗೆ ಮೈಯಲ್ಲಿ ಬೆವರಿಳಿಯುತ್ತಿತ್ತು. ಎದೆಯಲ್ಲಿ ದಮ್ಮುಕಟ್ಟಿದ ಹುಸಿರೆಳೆದಾಟ ರಸ್ತೆಯ ವಾಹನಗಳಲ್ಲಿ ಚಲಿಸುವವರಿಗೂ ತಾಕುವಂತಿತ್ತು. ಈ ಹುಡುಗರು ಭಕ್ತಿಯ ನೆಪದಲ್ಲಿ ಸೈಕಲ್ ಸವಾರಿಯನ್ನು ಮತ್ತೆ ಜನಪ್ರಿಯಗೊಳಿಸುತ್ತಿರುವಂತೆ ಕಾಣುತ್ತಿತ್ತು. ಇವರು ಪಾದಯಾತ್ರೆಗೆ ಬದಲಾಗಿ ಸೈಕಲ್ ಬಳಸಿದಂತಿತ್ತು. ಹೀಗೆ ಸೈಕಲ್ ತುಳಿವ ಕೆಂಪ ಮಾದರನ್ನು ಮಾತನಾಡಿಸಿದಾಗ, `ಬಸ್ಸು ಕಾರಿನ್ಯಾಗ ಹೋದ್ರೆ ಮಾದಪ್ಪನಿಗೆ ಅದೆಂಗೆ ಭಕ್ತಿ ಮುಟ್ಟುತ್ತೆ ಸಾರ್, ಸೈಕಲ್ ಮೇಲೆ ಹೋದ್ರೆ ಪಾದಯಾತ್ರೆ ಮಾಡದಂಗಾಯ್ತದೆ’ ಎಂದು ಉತ್ತರಿಸಿದನು. ಇದನ್ನು ಪರಿಸರವಾದಿ ಭಕ್ತಿ ಎಂದು ಕರೆಯಬಹುದೇನೋ.
ಇಂತಹ ಸೈಕಲ್ ಹುಡುಗರು ರಸ್ತೆಯುದ್ದಕ್ಕೂ ಕಾಣಿಸಿಕೊಂಡರು. ಕೆಲವರು ಸುಸ್ತಾಗಿ ರಸ್ತೆ ಪಕ್ಕದ ಗೋಡೆಯ ಮೇಲೆ ಕುಳಿತು ದಣಿವಾರಿಸಿಕೊಳ್ಳುತ್ತಿದ್ದರೆ, ಮತ್ತೆ ಕೆಲವರು ಮೊಬೈಲಿನಲ್ಲಿ ಜೋರಾಗಿ ಮಾದಪ್ಪನ ಹಾಡು ಹಾಕಿಕೊಂಡು ಕೇಳುತ್ತಿದ್ದರು. ಮತ್ತೆ ಕೆಲವರು ಇಯರ್ ಪೋನನ್ನು ಕಿವಿಗೆ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ಸೈಕಲ್ ತುಳಿಯುತ್ತಾ ಏದುಸಿರು ಬಿಡುತ್ತಾ ಸಾಗುತ್ತಿದ್ದರು. ಹೀಗೆ ಸಾಗುತ್ತಿದ್ದ ಕೆಲವು ಹುಡುಗರು ಚೆಲ್ಲಾಪಿಲ್ಲಿಯಾಗಿದ್ದ ತಮ್ಮ ತಂಡದ ಸದಸ್ಯರು ಬರುವತನಕ ಕಾಯುತ್ತಿದ್ದರು. ಇವರೆಲ್ಲಾ ಬೆಟ್ಟಕ್ಕೆ ಹೊಂದಿಕೊಂಡಂತೆ ಇಪ್ಪತ್ತರಿಂದ ಐವತ್ತು ಕಿಲೋಮೀಟರ್ ದೂರದ ಹಳ್ಳಿಗಳವರು. ಕೆಲವರು ಹೈಸ್ಕೂಲು ಕಾಲೇಜಿನಲ್ಲಿ ಓದುವವರು. ಇವರುಗಳೆಲ್ಲಾ ರಜೆಯ ಕಾರಣಕ್ಕೂ ಈ ಸೈಕಲ್ ಸವಾರಿ ಹಮ್ಮಿಕೊಂಡಂತಿತ್ತು. ಈ ಹುಡುಗರು ತಮ್ಮದೇ ಆದ ತಂಡದೊಂದಿಗೆ ಮಾದಪ್ಪನಿಗೆ ಭಕ್ತಿ ಅರ್ಪಿಸಲು ಬರುತ್ತಾರೆ. ಇವರುಗಳು ಬೆಟ್ಟದಲ್ಲಿ ಒಂದೆರಡು ದಿನ ಇದ್ದು, ಬೆಟ್ಟ ಹತ್ತುವಾಗ ಪಟ್ಟ ಶ್ರಮವೆಲ್ಲಾ ಮಾಯವಾಗುವಂತೆ ಇಳಿಯುವಾಗ ಪೆಡಲ್ ತುಳಿಯದೆ ಮೋಜು ಮಾಡುತ್ತಾ ಇಳಿಜಾರಿಗೆ ಇಳಿಯುತ್ತಾರೆ.
ಭವಿಷ್ಯದ ರೋಬೋಗಳು

ಮಾದಪ್ಪನ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಆರೇಳು ರೋಬೋಟ್ ಗಳು ಭವಿಷ್ಯ ಹೇಳುತ್ತಿದ್ದವು. ಈ ಯಂತ್ರಗಳು ಮೈತುಂಬಾ ವೈರ್ ಸಿಕ್ಕಿಸಿಕೊಂಡು ಪಳಕ್ ಪಳಕ್ ಎನ್ನುವ ಜೀರೋ ಬಲ್ಬ್ ಹತ್ತಿಸಿಕೊಂಡು, ಇಡೀ ಜಗತ್ತಿನ ಭವಿಷ್ಯವನ್ನು ನಾವೇ ನಿರ್ಧರಿಸುತ್ತೇವೆ ಎನ್ನುವ ಠೇಂಕಾರದಲ್ಲಿ ನಿಂತಂತಿತ್ತು. ಅವುಗಳನ್ನು ನಿಯಂತ್ರಿಸುತ್ತಿದ್ದುದು ಬೆಟ್ಟಕ್ಕೆ ಹೊಂದಿಕೊಂಡ ಹಳ್ಳಿಗಳ ಅಜ್ಜ ಅಜ್ಜಿಯರು. ವಿಶೇಷವೆಂದರೆ ಅನಕ್ಷರಸ್ತರು. ಇವರುಗಳಿಗೆ ಈ ರೋಬೋಗಳನ್ನು ಆಡಿಸುವಿಕೆ ಗೊತ್ತಿದೆ. ಈಗಾಗಲೆ ರೆಕಾರ್ಡ್ ಆಗಿರುವ ಹತ್ತಾರು ಮಾದರಿಯ ಭವಿಷ್ಯವನ್ನು ಹತ್ತಾರು ಸ್ವಿಚ್ ಗಳಲ್ಲಿ ಹೊಂದಿಸಲಾಗಿದೆ. ಕೇಳುವವರ ವಯಸ್ಸು, ಹೆಣ್ಣು ಗಂಡು ನೋಡಿ ಆಯಾ ಬಟನ್ ಒತ್ತುತ್ತಾರೆ. ಆಗ ರೆಕಾರ್ಡ್ ಆಗಿರುವ ಭವಿಷ್ಯವಾಣಿ ಉಲಿಯತೊಡಗುತ್ತದೆ. ನಾನು ನೋಡಿದಂತೆ ಹೆಚ್ಚಾಗಿ ಮಕ್ಕಳು ಈ ರೋಬೋಟ್ ಭವಿಷ್ಯ ಕೇಳಿ ಎಂಜಾಯ್ ಮಾಡುತ್ತಿದ್ದರು.
ಮಾದಪ್ಪನ ಹತ್ತಿರ ಭಕ್ತಿಯಿಂದ ತಮ್ಮ ಹರಕೆಯನ್ನು ಹೊತ್ತು ಬರುವವರನ್ನು ಕೆಣಕುವಂತೆ ಈ ರೋಬೋಗಳು ಸ್ವಾಗತಿಸುವುದು ರೂಪಕದಂತಿದೆ. ಹಾಗೆಯೆ ಅಕ್ಷರವೇ ತಿಳಿಯದವರು ಈ ರೋಬೋಗಳನ್ನು ನಿಯಂತ್ರಿಸುವುದು, ಅವರ ಹೊಟ್ಟೆಪಾಡಿಗೆ ಇವುಗಳನ್ನು ಬಳಸಿಕೊಳ್ಳುವುದು ಮಾಯ್ಕಾರ ಮಾದೇವನ ಮಾಯೆಯೆ ಸರಿ. ಈ ರೋಬೊ ನಡೆಯುಸುವ ಅಜ್ಜಿಯನ್ನು ಮಾತನಾಡಿಸಿದರೆ, `ಈ ಗೊಂಬಿ ಒಳಗ ಮಾತು ತುಂಬ್ಯಾರ ಸಾ, ಯಾರು ಕೇಳತಾರ ಅವರಿಗೆ ತಕ್ಕಂಗ ಗೊಂಬಿ ಮಾತಾಡ್ತಾತಿ, ಬ್ಯಾಟರಿ ಚಾರ್ಜ ಮಾಡಿರ್ತೀವಿ, ಅದ ಈ ಗೊಂಬಿಗಳಿಗೆ ಊಟ. ನಮ್ಮ ಮಗ ಈ ಗೊಂಬಿ ಹಾಕಿ ಕೊಟ್ಟಾನ ಸಾ, ದೊಡ್ಡೋರೇನು ಜಾಸ್ತಿ ಕೇಳಲ್ಲ, ಸಾಲಿ ಹುಡುಗ್ರು ಜಾಸ್ತಿ ಕೇಳ್ತಾವ. ಒಂದ್ಸಾರಿ ಕೇಳೋಕೆ ಐದು ರೂಪಾಯಿ ಮಾಡಿವ್ರಿ. ಮೊದಲ ನಮ್ಮದೊಂದ ಗೊಂಬಿ ಇತ್ತು. ಆಗ ದಿನಕ್ಕ ಸಾವಿರ ರೂಪಾಯಿವರೆಗೂ ಆಗ್ತಿತ್ತು. ಈಗ ಬಾಳ ಗೊಂಬಿ ಆಗ್ಯಾವ. ಹಂಗಾಗಿ ಈಗ ಕಲೆಕ್ಷನ್ನು ಕಡಿಮಿ’ ಎಂದು ಅಜ್ಜಿ ಈ ರೋಬೋ ಭವಿಷ್ಯ ಹೇಳಿತು.
ಸುಡುವ ಬಂಡೆಯಲ್ಲಿ ಉರುಳು ಸೇವೆ
ನಾವು ಮಧ್ಯಾನದ ವೇಳೆಗೆ ಬೆಟ್ಟಕ್ಕೆ ಹೋದದ್ದರಿಂದ ಸುಡು ಬಿಸಿಲು ಹೊಡೆಯುತ್ತಿತ್ತು. ಹಾಗಾಗಿ ದೇವಸ್ಥಾನದ ಸುತ್ತಮುತ್ತಣ ಹಾಸುಬಂಡೆಯ ನೆಲ ಸುಡುತ್ತಿತ್ತು. ಇಂತಹ ಸುಡುವ ಬಂಡೆಗಳ ಮೇಲೆ ಬರಿ ಮೈಯಲ್ಲಿ ಉರುಳು ಸೇವೆ ಮಾಡುತ್ತಿದ್ದರೆ, ಹೆಣ್ಣುಮಕ್ಕಳು ಒದ್ದೆ ಸೀರೆಯಲ್ಲಿ ಉರುಳುತ್ತಿದ್ದರು.ಇದರಲ್ಲಿ ಬಹುತೇಕ ಜನ ಗ್ರಾಮೀಣ ಪ್ರದೇಶದವರಂತೆ ಕಾಣುತ್ತಿದ್ದರು.
ಇಂತಹ ಸುಡು ನೆಲದಲ್ಲಿ ಅವರು ಉರುಳು ಸೇವೆ ಮಾಡುವುದನ್ನು ನೋಡಿದರೂ ಭಯವಾಗುತ್ತಿತ್ತು. ಅವರೆಲ್ಲಾ ಮಾದಪ್ಪನ ಭಕ್ತಿಯಲ್ಲಿ ಮೈಮರೆತದ್ದರಿಂದ ಸುಡುವುದನ್ನು ಮರೆತಿದ್ದರೋ ಅಥವಾ ಸುಡುತ್ತಿದ್ದರು ಅದನ್ನು ಸಹಿಸಿಕೊಳ್ಳುವುದರಲ್ಲಿಯೇ ನಮ್ಮ ಭಕ್ತಿ ಅಡಗಿದೆ ಎಂದು ತಿಳಿದಿದ್ದರೋ ಗುರುತಿಸಲಾರದಂತೆ ಬೆರೆತಿತ್ತು. ಇದರಲ್ಲಿ ಚಿಕ್ಕ ಚಿಕ್ಕ ಮಕ್ಕಳನ್ನು ತಂದೆ ತಾಯಿಗಳು ಉರುಳು ಸೇವೆಗೆ ಬಿಡುತ್ತಿದ್ದರು. ಈ ಮಕ್ಕಳು ಮನೆ ಅಂಗಳದಲ್ಲಿ ಆಟವಾಡುವ ಖುಷಿಯಲ್ಲಿ ಉರುಳುತ್ತಿದ್ದವು. ಸ್ವಲ್ಪ ದೂರ ಎದ್ದು ಓಡುವುದು ಒಂದಷ್ಟು ಮಲಗಿ ಎರಡು ಸುತ್ತು ಉರುಳುವುದು ಮಾಡುತ್ತಿದ್ದರು.
ಭಕ್ತಿರಸ ತುಂಬುವ ಗೀತೆಗಳು
ಇಡೀ ದೇವಸ್ಥಾನದ ಆವರಣವನ್ನು ತುಂಬಿದ್ದು ಮಾದೇಶನ ಭಕ್ತಿಯ ಗೀತೆಗಳ ಗಾಯನದಿಂದ. ಅದೇನು ಗುಡ್ಡರು ಹಾಡುವ ಮಾದಪ್ಪನ ಕಾವ್ಯವಲ್ಲ, ಬದಲಾಗಿ ಮಾದೇಶನ ಬಗ್ಗೆ ಹಾಡಿದ ಜನಪ್ರಿಯ
ಭಕ್ತಿ ಗೀತೆಗಳು. ಇದು ಕೂಡ ದೇವಸ್ಥಾನದ ಕಮಿಟಿಯವರು ಗೋಪುರದ ಮೈಕಿನಲ್ಲಿ ಪ್ರಸಾರ ಮಾಡುತ್ತಿದ್ದ ಹಾಡಾಗಿರಲಿಲ್ಲ. ಬದಲಾಗಿ ದೇವಸ್ಥಾನದ ಆವರಣದಲ್ಲಿನ ಸಿಡಿ-ಡಿವಿಡಿ ಕ್ಯಾಸೆಟ್ ಅಂಗಡಿಯೊಂದು ಪ್ರಚಾರಕ್ಕೆ ಹಾಕಿದ ಹಾಡುಗಳಾಗಿದ್ದವು. ಇಡೀ ದೇವಸ್ಥಾನದ ಆವರಣದಲ್ಲಿ ಆವರಿಸಿದ್ದ ಭಕ್ತಿಗೀತೆಗಳ ಗಾಯನವೇ ಒಂದು ರೀತಿಯಲ್ಲಿ ಆ ಅಂಗಡಿಯ ಜಾಹೀರಾತಿನಂತೆ ಕಾಣುತ್ತಿತ್ತು. ಇದರ ಪ್ರಭಾವವೋ ಏನೋ ಈ ಅಂಗಡಿಯ ಮುಂದೆ ಜನವೋ ಜನ. ಇಲ್ಲಿ ಎಸ್.ಪಿ ಬಿ ಒಳಗೊಂಡಂತೆ ಹಲವು ಗಾಯಕ ಗಾಯಕಿಯರು ಹಾಡಿದ ಹಾಡುಗಳ ಡಿವಿಡಿಗಳಿದ್ದವು. ಅಂತೆಯೇ ಮಾದಪ್ಪನ ಜಾತ್ರೆಯ ವೀಡಿಯೋ ಕ್ಲಿಪಿಂಗ್ ಒಳಗೊಂಡ ಹಾಡುಗಳ ಡಿವಿಡಿಗಳೂ ದೊರೆಯುತ್ತಿದ್ದವು. ಇದು ಜಾತ್ರೆಯ ನೆನಪನ್ನು ಹಿಡಿದಿಟ್ಟು ಹೊರಗಿನ ಜನರಿಗೂ ತೋರಿಸುವ ಕಸರತ್ತಿನಂತೆ ಕಾಣುತ್ತಿತ್ತು. ಅಂತೆಯೇ ರಘು ದೀಕ್ಷಿತ್ ಅವರ `ನಿನ್ನ ಪೂಜೆಗೆ ಬಂದೆ ಮಾದೇಶ್ವರಾ.. ಎನ್ನ ಕರುಣದಿ ಕಾಯೋ ಮಾದೇಶ್ವರಾ..ಹಾಡು ಯುವ ಭಕ್ತರನ್ನು ಸೂಜಿಗಲ್ಲಿನಂತೆ ಆಕರ್ಷಿಸಿ ಅಂಗಡಿಯತ್ತ ಸೆಳೆಯುತ್ತಿದ್ದಂತೆ ಕಾಣುತ್ತಿತ್ತು.
ಇವು ಸಾಮಾನ್ಯವಾಗಿ ಮಧ್ಯಮ ಮತ್ತು ಕೆಳ ವರ್ಗದವರ ಭಕ್ತಿಯನ್ನೇ ಬಂಡವಾಳ ಮಾಡಿಕೊಂಡಂತಿತ್ತು. ಇದನ್ನು ನಕಾರಾತ್ಮವಾಗಿಯೇ ನೋಡುವಂತಿಲ್ಲ. ಇವು ಜನಪದ ಗಾಯಕನೊಬ್ಬನ ಸಂವಹನಕ್ಕಿಂತ ನೂರು ಪಟ್ಟು ಸಂವಹನದ ಸಾಧ್ಯತೆಯನ್ನು ಹಿಗ್ಗಿಸಿವೆ. ಈ ಹಾಡುಗಳು ಮೊಬೈಲಿನಲ್ಲಿಯೂ ದಾಟುತ್ತಿವೆ. ಆದರೆ ಈ ಹಾಡುಗಳು ಮಾದಪ್ಪನ ಒಂದು ಜನಪ್ರಿಯ ಚಿತ್ರವನ್ನು ಕಟ್ಟಿಕೊಡುತ್ತವೆ. ಈ ಜನಪ್ರಿಯ ಚಿತ್ರವೇ ಹೊಸ ತಲೆಮಾರಿನಲ್ಲಿ ನೆಲೆಗೊಳ್ಳುವ ಅಪಾಯವೂ ಇದೆ. ಇಲ್ಲಿ ಗುಡ್ಡರ ಮಾದಪ್ಪನ ಕಾವ್ಯದಲ್ಲಿ ಒಡಮೂಡುವ ಮಾದಪ್ಪ ಸಿಗುವುದಿಲ್ಲ. ಹಾಗಾಗಿ ಇಂತಹ ಕ್ಯಸೆಟ್ ಹಾಡುಗಾರಿಕೆಯಲ್ಲಿಯೂ ಮಾದಪ್ಪನ ಕಾವ್ಯ ಹಾಡುವ ಗುಡ್ಡರನ್ನೂ ಬಳಸಿಕೊಳ್ಳುವ ಪ್ರಯತ್ನಗಳು ನಡೆಯಬೇಕು. ಮಾದೇಶ್ವರನನ್ನು ಕುರಿತ ಸುದೀರ್ಘ ಜನಪದ ಕಾವ್ಯದಲ್ಲಿ ಬೇವಿನ ಹಟ್ಟಿ ಕಾಳಮ್ಮ ಎಂಬ ಅತ್ಯುಗ್ರ ಮನಸ್ಸಿನ ಅಪರೂಪದ ಬೇಡರ ಮಹಿಳೆಯೊಬ್ಬಳನ್ನು ಮಾದಯ್ಯನು ನಾನಾ ಬಗೆಗಳಲ್ಲಿ ಪರೀಕ್ಷೆಗೆ ಒಳಪಡಿಸುವ ಪ್ರಸಂಗಗಳು ಮತ್ತು ಆತನು ಶ್ರವಣನೊಡನೆ ನಡೆಸುವ ಹೋರಾಟ ಪ್ರಧಾನವಾಗಿ ಕಾಣಿಸಿಕೊಳ್ಳುತ್ತವೆ.
ಭಕ್ತಿ ಗೀತೆಗಳ ಡಿವಿಡಿ ಹಾಡುಗಳು ಒಂದೆಡೆಯಾದರೆ, ದೇವರದರ್ಶನಕ್ಕೆಂದು ಸಾಲು ನಿಂತ ಪಂಜರದ ಬದಿಯಲ್ಲಿ ಗಾಯಕರ ತಂಡವೊಂದು ಸುಶ್ರಾವ್ಯವಾಗಿ ಹಾಡನ್ನು ಹಾಡುತ್ತಿದ್ದರು. ಎಂಟತ್ತು ಜನರಿರುವ ಈ ಗಾಯಕರಲ್ಲಿ ಒಬ್ಬ ಮುಖ್ಯ ಗಾಯಕ ಹಾಡುತ್ತಿದ್ದರೆ ಉಳಿದವರು ಹಿಮ್ಮೇಳದಲ್ಲಿ ಹಾಡುತ್ತಿದ್ದರು. ಈ ತಂಡ ಮಾದಪ್ಪನ ಮೂರ್ತಿಯ ದರ್ಶನಕ್ಕೆ ಹೊರಟವರಿಗೆ ತಮ್ಮ ಪದಗಳಲ್ಲಿ ನಿಜ ದರ್ಶನ ಮಾಡಿಸುತ್ತಿದ್ದರು. ಆದರೆ ಮೂರ್ತಿ ದರ್ಶನಕ್ಕೆ ಆರತಿ ತಟ್ಟೆಗೆ ಹಾಕಿದಷ್ಟನ್ನೂ ಸಹ ಭಕ್ತರು ಈ ಹಾಡುಗಾರರಿಗೆ ಕೊಟ್ಟಂತೆ ಕಾಣುತ್ತಿರಲಿಲ್ಲ. ಸಾಮಾನ್ಯವಾಗಿ ಹೀಗೆ ದರ್ಶನಕ್ಕೆ ಸಾಲು ನಿಂತ ಭಕ್ತರನ್ನು ಭಿಕ್ಷೆ ಬೇಡುತ್ತಿದ್ದ ಕುರುಡರು, ಅಶಕ್ತರ ಜತೆ ಇವರನ್ನೂ ಬಿಕ್ಷುಕರಂತೆಯೇ ನೋಡುತ್ತಿದ್ದರು. ಇದು ಜನಪದ ಹಾಡು ಪರಂಪರೆಯ ವರ್ತಮಾನದ ಮುಖವನ್ನು ದರ್ಶನ ಮಾಡಿಸುತ್ತದೆ.
ಬಿಸಿಲಿಗೆ ಮಿಂಚುವ ಬೋಳು ತಲೆಗಳು
ಮಾದಪ್ಪನಿಗೆ ಹರಕೆ ಸಲ್ಲಿಸುವ ಹಲವು ವಿಧಗಳಿವೆ. ಅನೇಕ ಬಗೆಯ ಹರಕೆಗಳನ್ನು ಹೊತ್ತು, ಅವುಗಳನ್ನು ತೀರಸಲೆಂದು ವಿವಿಧ ಸಂದರ್ಭಗಳಲ್ಲಿ ಬೆಟ್ಟಕ್ಕೆ ಬರುವ ಭಕ್ತರು-ಧೂಪದ ಸೇವೆ, ಎಳ್ಳಿನ ಸೇವೆ, ಹೆಜ್ಜೆ ನಮಸ್ಕಾರ, ಪಂಜಿನ ಸೇವೆ, ಒಚ್ಚಮಗ್ಗುಲಸೇವೆ. ಉರುಳುಸೇವೆ, ಬಾಯಿಬೀಗ ಮುಂತಾದ ಸೇವೆಗಳಲ್ಲಿ ತೊಡಗುತ್ತಾರೆ. ಅದರಲ್ಲಿ ತಲೆಬಳಗ ಕೊಡುವ ಅಥವಾ ಮಂಡೆಸೇವೆಯೂ ಒಂದು. ಹಾಗಾಗಿ ದೇವಸ್ಥಾನದ ಆವರಣದಲ್ಲಿ ಹೀಗೆ ಮಂಡೆಸೇವೆ ಮಾಡಿದ ಕೂದಲಿರದ ಮಿಂಚುವ ತಲೆಯ ಭಕ್ತರು ಹೆಚ್ಚಾಗಿ ಕಾಣಿಸಿಕೊಂಡರು. ಕೆಲವರು ಬಿಸಿಲಿನ ತಾಪಕ್ಕೆ ಕರವಸ್ತ್ರವನ್ನು ಒದ್ದೆ ಮಾಡಿಕೊಂಡು ತಲೆಯ ಮೇಲೆ ಹಾಕಿಕೊಂಡಿದ್ದರೆ, ಕೆಲವರು ತಲೆಗೆ ವಿಭೂತಿಯ ಪಟ್ಟೆಯನ್ನು ಎಳೆದುಕೊಂಡು ಆರಾಮಾಗಿ ಓಡಾಡಿಕೊಂಡಿದ್ದರು. ತಲೆಯ ಮೇಲೆ ಕಣ್ಣಿನ ಚಿತ್ರವನ್ನು ಬರೆದಿದ್ದರು. ಇದು ಶಿವನನ್ನು ಮುಕ್ಕಣ್ಣ ಎನ್ನುವುದನ್ನು ನೆನಪಿಸುವಂತಿತ್ತು.
ಹೀಗೆ ಬೋಳುತಲೆಗಳ ನೆತ್ತಿಯಲ್ಲಿನ ಕಣ್ಣಿನ ಹಾಗೆ ಕಾಣುವ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದರೆ ತೆಂಗಿನ ಕಾಯಿಯ ಚಿತ್ರದಂತೆಯೂ ಕಾಣುತ್ತಿತ್ತು. ಇದು ಹಿಂದೆ ಉಗ್ರ ಶಿವಭಕ್ತರು ಬೋಳು ತಲೆಗೆ ತೆಂಗಿನ ಕಾಯಿಯನ್ನು ಹೊಡೆದುಕೊಂಡು ತಮ್ಮ ಭಕ್ತಿಯನ್ನು ಅರ್ಪಿಸುತ್ತಿದ್ದುದರ ಸಾಂಕೇತಿಕ ಮುಂದುವರಿಕೆಯೇ ಅನ್ನಿಸಿತು. ಕಾರಣ ಹರಿಹರನ ಕಾವ್ಯದಲ್ಲಿ ಮಾದಪ್ಪನ ಉಲ್ಲೇಖವೂ ಸಿಗುತ್ತದೆ ಅಂತೆಯೇ ತಲೆಗೆ ತೆಂಗಿನ ಕಾಯಿ ಹೊಡೆದುಕೊಳ್ಳುವ, ಭಕ್ತಿಗಾಗಿ ಶಿರಚ್ಛೇದ ಮಾಡಿಕೊಳ್ಳುವ ಶಿವ ಭಕ್ತರ ಉಲ್ಲೇಖವೂ ಬರುತ್ತದೆ. ಇದು ತಕ್ಷಣಕ್ಕೆ ಹೊಳೆದ ಊಹೆಯಷ್ಟೆ. ಇದನ್ನು ಪರೀಕ್ಷಿಸಿ ನೋಡಬಹುದು.
ನೆನಪಾದ ಜಿ.ಎಸ್.ಎಸ್. ಕಾವ್ಯ
ಈ ಬೆಟ್ಟದ ಜನರ ಆಚರಣೆ ಭಕ್ತಿಯ ಪರಾಕಾಷ್ಠೆ ಮುಂತಾದವುಗಳನ್ನು ನೋಡಿದಾಗ ಬಹಳ ಹಿಂದೆಯೇ ಓದಿದ ಜಿ.ಎಸ್.ಶಿವರುದ್ರಪ್ಪ ಅವರ ಕವಿತೆಯೊಂದು ನೆನಪಾಯಿತು. ಮನೆಗೆ ಬಂದಾಗ ಜಿ.ಎಸ್.ಎಸ್ ಅವರ ಸಮಗ್ರ ಕಾವ್ಯ ತೆಗೆದು ಹುಡುಕಿದಾಗ `ರಾತ್ರೋ..ರಾತ್ರಿ’ ಪದ್ಯ ಸಿಕ್ಕಿತು. ಮಾದಪ್ಪನ ಬೆಟ್ಟಕ್ಕೆ ಹೋದ ನೆಪದಲ್ಲಿ ಮತ್ತೊಮ್ಮೆ ಪದ್ಯ ಓದಿದೆ, ಇಡೀ ಮಾದಪ್ಪನ ಭಕ್ತ ಪರಂಪರೆಯನ್ನು ಜಿ.ಎಸ್.ಎಸ್.ಕಟ್ಟಿಕೊಡುವುದು ಹೀಗೆ:

ರಾತ್ರೋ ರಾತ್ರೆ
ರಾತ್ರೋ ರಾತ್ರೆ,
ಮಾದೇಶ್ವರನ ಬೆಟ್ಟಕ್ಕೆ ಹೊರಟಿದೆ ಜಾತ್ರೆ !
ತಮಟೆಗಳ ಸದ್ದು,
ತನ್ನ ಪಾಡಿಗೆ ತಾನು ತೆಪ್ಪಗೆಯೆ ಮಲಗಿದ್ದ
ಇರುಳಿನೆದೆಗೊದ್ದು,
ಬಯಲಾಟದಟ್ಟಣೆಯ ಹಲಗೆ ಮುರಿಯುವ ತನಕ
ಕುಣಿವ ರಾಕ್ಷಸ ಪಾತ್ರ ;
ಇದರ ತಾಳವೊ ಲಯವೊ, ದೊಪ್ಪನೆಯೆ ಮಸಿಕುಡಿಕೆ
ಬಿದ್ದು ಚೆಲ್ಲಿದ ಚಿತ್ರ !
ರಾತ್ರೋ ರಾತ್ರೆ,
ಮಾದೇಶ್ವರನ ಬೆಟ್ಟಕ್ಕೆ ಹೊರಟಿದೆ ಜಾತ್ರೆ !
ಚಿಕ್ಕೆ ಚೆಲ್ಲಾಪಿಲ್ಲಿ, ಕೋಳಿ ಕೆದರಿದ ಕಾಳು.
ಕತ್ತಲಿನ ತಿಪ್ಪೆಯ ರಾಶಿಯಂಚಿನಲಿ
ತಿಂದೆಸೆದ ಮಾವಿನ ವಾಟೆ ಆ ಚಂದ್ರ !
ಮೋಂಬತ್ತಿ ಬೆಳಕಿನ ನೆಲದಿ, ಗಿಡಮರದ ನೆರಳು
ಈ ನಡುವೆ ತಲೆಗೆದರಿ ಹೊರಟಿಹುದು ಜಾತ್ರೆಯ ಮರುಳು,
ರಾತ್ರೋ ರಾತ್ರೆ,
ಮಾದೇಶ್ವರನ ಬೆಟ್ಟಕ್ಕೆ ಹೊರಟಿದೆ ಜಾತ್ರೆ !
ಇದ್ದಕಿದ್ದಂತೆ ಇದು ಎದ್ದುದೆಲ್ಲಿಂದ !
ಎಲ್ಲಿತ್ತೊ, ಈ ಕೊಪ್ಪಲಿನ ರೊಪ್ಪದಲಿ
ಹುದುಗಿದ್ದ ಭಕ್ತಿಯ ಭೂತ !
ಸದ್ಯ, ಇದು ತೊಲಗಿದರೆ ಸಾಕು, ಈ ಕಿರುಚು, ಕುಣಿತ,
ಎದೆಯಿರಿತ,
ತಾಳಬಲ್ಲನು ಅವನು ಆ ಮಾದೇಶ್ವರ;
ನಾವು ನರಮನುಷ್ಯರು, ಸದ್ಯ, ಇದು ಇಲ್ಲಿಂದ ತೊಲಗಿ
ಅಲ್ಲಾಗಲಿ ಸಮರ್ಪಿತ !
ಅರುಣ್ ಜೋಳದಕೂಡ್ಲಿಗಿ ಕಾಲಂ : ಮಾದಪ್ಪನ ಮಲೆಯಲ್ಲಿ ಕಂಡ ಚಿತ್ರಗಳು
ನಿಮಗೆ ಇವೂ ಇಷ್ಟವಾಗಬಹುದು…




ನೋಡಿ ಅರುಣ್ , ನಮ್ಮ ಮಾದಪ್ಪನ ಸನ್ನಿದಿಯಲ್ಲಿ ಏನೆಲ್ಲಾ ವಿಶೇಷ ಇದೆ. ಅಲ್ವಾ? ಬಹುಶಃ ಇದು ಅಲ್ಲದೆ ಇನ್ನೂ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳು ನಿಮ್ಮ ಗಮನಕ್ಕೆ ಬಂದಿರಬಹುದು. ದೇವಸ್ಥಾನದ ಒಳಗಡೆ ಪೂಜಾರಿಗಳ ವರ್ತನೆ ಬಹುಶಃ ಇಲ್ಲಿ ನೀವು ದಾಖಲಿಸಿಲ್ಲ. ನೇರವಾಗಿ ಮಂಗಳಾರತಿ ತಟ್ಟೆಗೆ ಕಾಸನ್ನು ಅಲ್ಲ ದುಡ್ಡನ್ನು ಹಾಕುವಂತೆ ಹೇಳುತ್ತಾರೆ. ಹಾಕಲಿಲ್ಲ ಅಂದ್ರೆ ಮುಖ ಮುಖ ನೋಡಿ ಕೆಲವರು ಮನಸ್ಸಿನಲ್ಲೇ ಬೈಯ್ಕೋತಾರೆ, ಕೆಲವರು ನೇರವಾಗಿ ಬೈಯುತ್ತಾರೆ. ಕೆಲವರು ನೇರವಾಗಿ ಕೊಡಿ ಅಂತ ಕೇಳುತ್ತಾರೆ, ಮಾದಪ್ಪನಿಗೆ ಅಂತ ಗಂಧದ ಕಡ್ಡಿ ಕರ್ಪೂರಗಳನ್ನು ತೆಗೆದುಕೊಂಡು ಹೋದರೆ ಅವುಗಳನ್ನು ಮತ್ತೆ ಆ ಪೂಜಾರಿಗಳು ಚೀಲದಲ್ಲಿ ತುಂಬಿ ಅದನ್ನು ನೀವು ಎಲ್ಲಿಂದ ತಂದಿರುತ್ತೀರೋ ಅವರಿಗೆ ವಾಪಸ್ಸು ಕೊಡುತ್ತಾರೆ. (ಅದನ್ನು ಒಂದು ಚೀಲದಲ್ಲಿ ತುಂಬಿ ಇಟ್ಟಿರುತ್ತಾರೆ, ಗಮನಿಸಿ) ‘ಭಕ್ತರು’ ಮತ್ತೆ ಅದನ್ನೇ ದುಡ್ಡು ಕೊಟ್ಟು ತರುತ್ತಾರೆ. ಇಲ್ಲಿ ಲಾಭ ಪೂಜಾರಿಗೆ ಮತ್ತು ಸಣ್ಣಪುಟ್ಟ ಅಂಗಡಿಯವರಿಗೆ ಮಾತ್ರ.. ಗಮನಿಸುತ್ತಾ ಇದ್ರೆ ಇನ್ನೂ ರೋಚಕ ವಿಷಯಗಳು ಅಲ್ಲಿ ಇದೆ, ಈಗ ನೀವು ಹೇಳಿರೋದು ಪಾಸಿಟಿವ್ ಆಗಿರೋದು ಮಾತ್ರ. ಆದರೂ ಒಂದು ಸುಂದರ ಸಾಂಸ್ಕೃತಿಕ ಜಾನಪದ ತಾಣದ ಸಚಿತ್ರ ನೋಟ ಚೆನ್ನಾಗಿದೆ. ಇಂತಹ ಸುಂದರ ಸಾಂಸ್ಕೃತಿಕ ಜಾನಪದ ತಾಣ ಮುಂದೆ ಒಂದು ದಿನ ಕೆಲವು ಮನಸ್ಸುಗಳಿಂದ ಕೆಟ್ಟರೆ, ಜಾನಪದರ ನಂಬಿಕೆಯನ್ನು ಕಳೆದುಕೊಂಡರೆ ಎಂಬ ಭಯ ಅಷ್ಟೇ ನನ್ನದು.
naanu mateswamy okkalu,baraha chennagide;odi kushiyaythu…..
chennagi grahisideeri.ella janapada mahakayagala nayakara tanagala vrtamaanada chitrana roopugollabeekagide.