ತೇಜಸ್ವಿಯನ್ನು ಹುಡುಕುತ್ತಾ : ಚಿದಂಬರ ರಹಸ್ಯ ಮತ್ತು ಕೆಸರೂರಿನ ಹೈಬ್ರಿಡ್ ಕಥೆ

(ಇಲ್ಲಿಯವರೆಗೆ)

’ಮೂಡಿಗೆರೆಯಂತ ಊರಲ್ಲಿದ್ದುಕೊಂಡು ಬದುಕನ್ನ ಅಷ್ಟು ರಸವತ್ತಾಗಿ ಅನುಭವಿಸ್ಬೇಕು ಅಂದ್ರೆ ಒಳಗಡೇನೆ ಇರಬೇಕು ಆ ಚೇತೋಹಾರಿ ಮನೋಭಾವಮತ್ತು ಆಎಂತುಸಿಯಾಸಮ್ಮು…ಆ ರೀತಿ ಒಂದು ಚೇತೋಹಾರಿ ಮನಸ್ಸು ಅವರೊಳಗಡೆ ಇದ್ದದ್ದರಿಂದಲೇ ಮೂಡಿಗೆರೆಯಂತ ಸಣ್ಣ ಊರಿನಲ್ಲೂ ಕೂಡ ಆ ಕುತೂಹಲ ಉಳುಸ್ಕೊಂಡು ಅಷ್ಟು ಲವಲವಿಕೆಯಿಂದ ಬದುಕೋಕ್ಕೆ ಸಾಧ್ಯ ಆಗಿದ್ದು ಅವರಿಗೆಅಂತ ನನಗನ್ಸುತ್ತೆ. ಹಾಗಾಗಿ ಅವರ ಬದುಕೇ ಹಾಗಿದ್ದಿದ್ರಿಂದ ಬರವಣಿಗೆನಲ್ಲಿ ಆ ಲವಲವಿಕೆ, ಫ್ರೆಶ್ ನೆಸ್ ತರೋದಕ್ಕೆ ಅವರಿಗೆ ಅಂತ ಕಷ್ಟ ಆಗ್ಲಿಲ್ಲ ಅಂತ ನನಗನ್ಸುತ್ತೆ.
ನೀವು ಅವರ ಯಾವ ಕೃತಿ ಬೇಕಾದ್ರು ತಗೊಳಿ…. ಅದು ಮಾಯಲೋಕದಲ್ಲಿ ನಡೆಯೊ ಏಡಿ ಶಿಕಾರಿ ಇರಬಹುದು, ಕಿರಗೂರಿನ ಗಯ್ಯಾಳಿಗಳಲ್ಲಿ ಮರ ಎತ್ತೋಕೋಗಿ ಸೊಂಟ ಉಳುಕಿಸ್ಕೊಂಡು ತಮ್ಮ ಹೆಂಡ್ತೀರ್ ಕೈಯಿಂದ್ಲೇ ಧರ್ಮದೇಟು ತಿನ್ನೊ ಗಂಡಸರ ಕಥೆ ಇರಬಹುದು, ಇಲ್ಲ ಮಾಯಲೋಕದಲ್ಲಿ ಬಾಯಮ್ಮನ ಸೀರೆ ಒಳಗೆ ಹಂದಿ ನುಗ್ಗಿಸಿದಾಗ್ಬಹುದು, ಅಥವ ಕ್ರಾಂತಿ ಮಾಡ್ತೀನಿ ಅಂತ ಹೋಗಿ ಗಾನ್ ಕೇಸ್ ಆಗೊ ಜುಗಾರಿ ಕ್ರಾಸ್ಸು ಸುರೇಶ ಆಗ್ಬಹುದು, ಲೈಂಗಿಕ ಅಶಿಸ್ತಿನ ಮನುಷ್ಯ ಕರ್ವಾಲೋದ ಬಿರ್ಯಾನಿ ಕರಿಯಪ್ಪ ಆಗ್ಬಹುದು…ಹೀಗೆ ನೀವು ಅವರ ಯಾವ್ದೇ ಬರವಣಿಗೆ ತಗೊಂಡ್ ಓದಕ್ ಶುರು ಮಾಡಿದ್ರು ಆ ಲವಲವಿಕೆ, ಹೊಸತನ ಅವರ ಬರವಣಿಗೆನಲ್ಲಿ ಉದ್ದಕ್ಕೂ ಬರ್ತಾನೇ ಇರುತ್ತೆ. ಯಾಕಂದ್ರೆ ಒಬ್ಬ ಬರಹಗಾರನ ಬದುಕು ಮತ್ತು ಆತ ಅದನ್ನ ಬದುಕುವ ಕ್ರಮ ಅವನ ಬರವಣಿಗೆಯ ಮೇಲೆ ತುಂಬಾ ಪ್ರಭಾವ ಬೀರುತ್ತೆ ಅನ್ನೊ ಮಾತು ಹಂಡ್ರೆಡ್ ಪರ್ಸೆಂಟ್ ಸತ್ಯ…’
ಮಾತು ಮುಗಿಯುವ ಹೊತ್ತಿಗೆಹುಡುಗ ಕಾಫಿ ತಂದಿಟ್ಟು ಸ್ಪೂನುಗಳನ್ನು ಟಿಶ್ಯುನಿಂದ ಒರೆಸಿ ಸಾಸರ್ ಮೇಲಿಟ್ಟು ಪಕ್ಕಕ್ಕೆ ನಿಂತುಕೊಂಡ.
’ಯಸ್ ಕಾಫಿ ಬಂತು. ಹ್ಯಾವ್ ಇಟ್. ಈ ಕಾಫಿ ನಿಮಗೆ ನಾರ್ಮಲಿ ಬೆಂಗಳೂರಿನ ಕಾಫಿ ಡೇ ಶಾಪ್ ಗಳಲ್ಲಿ ಸಿಗೋದಿಲ್ಲ. ಇದು ಹೆಡ್ ಆಫೀಸ್ ಕಮ್ ರಿಸರ್ಚ್ ಸೆಂಟರ್ ಆಗಿರೋದ್ರಿಂದ ಇಲ್ಲಿ ಮಾತ್ರ ಈ ಫ್ಲೇವರ್ ಸಿಗೋದು. ಪ್ಲೀಸ್ ಹ್ಯಾವ್ ಇಟ್’ ಎಂದು ಆತ್ಮೀಯವಾಗಿ ನಗುತ್ತಾ ಕಾಫಿ ಡೇ ಲೊಗೊ ಇದ್ದ ಕಪ್ಪೊಂದನ್ನು ಎತ್ತಿ ನನ್ನ ಮುಂದೆ ಇಟ್ಟು ತಾವು ಸಹ ಕಪ್ಪೊಂದನ್ನು ಕೈಗೆತ್ತಿಕೊಂಡು ಕುಳಿತಿದ್ದ ಚೇರಿಗೆ ಒರಗಿದರು. ಆ ಸಹೃದಯಿ ಗೆಳೆಯನ ಹೆಸರು ಪ್ರದೀಪ ಕೆಂಜಿಗೆ. ತೇಜಸ್ವಿಯವರ ಪುಸ್ತಕಗಳ ಪರಿಚಯ ಇದ್ದವರಿಗೆಪ್ರದೀಪ ಕೆಂಜಿಗೆ ಹೆಸರು ಎಂಬ ಹೆಸರು ಗೊತ್ತಿರಲೇಬೇಕು, ಅಥವ ಎಲ್ಲೋ ಕೇಳಿದ ಹಾಗಿದ್ಯಲ್ಲ…???’ಎಂದಾದರೂ ಅನ್ನಿಸಿರಲಿಕ್ಕೆ ಬೇಕು. ಕಾರಣ ಹೆನ್ರಿ ಛಾರೇರೆಯ ಪ್ರಸಿದ್ಧ ಕಾದಂಬರಿ ‘ಪ್ಯಾಪಿಲಾನ್’ ಕನ್ನಡ ಅನುವಾದ(ಭಾಗ ೦೧ ಮತು ೦೨), ಬರ್ಮುಡಾ ಟ್ರೈಯಾಂಗಲ್ ಮುಂತಾದ ಕೆಲ ಪುಸ್ತಕಗಳಿಗೆ ತೇಜಸ್ವಿಯವರೊಂದಿಗೆ ಜಂಟಿಯಾಗಿ ಲೇಖನಿ ಹಂಚಿಕೊಳ್ಳುವ ಅಪರೂಪದ ಅವಕಾಶ ಪಡೆದವರು ಈ ಪ್ರದೀಪ ಕೆಂಜಿಗೆ. ವೃತ್ತಿಯಲ್ಲಿ ಕೃಷಿ ವಿಜ್ಞಾನಿಯಾದ ಇವರು ಸದ್ಯ ಕಾಫಿ ಡೇ ಕಂಪನಿಯ ಚಿಕ್ಕಮಗಳೂರಿನ ಮುಖ್ಯ ಕಛೇರಿಯಲ್ಲಿ ಸೇವೆಯಲ್ಲಿದ್ದಾರೆ.
ತೇಜಸ್ವಿಯವರ ಕುರಿತ ಸಾಕ್ಷ್ಯಚಿತ್ರಕ್ಕಾಗಿ ತೇಜಸ್ವಿ ಕುರಿತ ನೆನಪುಗಳನ್ನು ಹಂಚಿಕೊಳ್ಳಬೇಕೆಂದು ಕೇಳಿದಾಗ ತಕ್ಷಣ ಒಪ್ಪಿಕೊಂಡ ಪ್ರದೀಪ್ ನಮ್ಮನ್ನು ಬರಹೇಳಿದ್ದು ಕಾಫಿ ಡೇ ಕಂಪನಿಯ ಅವರ ರಿಸರ್ಚ್ ಲ್ಯಾಬಿಗೆ. ಗಿರಿಜಾಶಂಕರ್ ರವರ ಚಿತ್ರೀಕರಣ ಮುಗಿಸಿಕೊಂಡು ಸರಿಯಾಗಿ ೧೧ ಗಂಟೆಯ ಹೊತ್ತಿಗೆ ನಾನು ನಮ್ಮ ತಂಡ ಅವರು ಹೇಳಿದ್ದ ಆ ಲ್ಯಾಬ್ ನ ಒಳಗೆ ಅವರ ಮುಂದೆ ಕುಳಿತಿದ್ದೆವು. ತಾವು ಧರಿಸಿದ್ದ ಉಡುಪಿನ ಮೇಲೆ ಬಿಳಿಯ ಕೋಟ್ ಹಾಕಿಕೊಂಡು ಸರ್ಕಾರಿ ಆಸ್ಪತ್ರೆ ಡಾಕ್ಟರ್ ರಂತೆ ಕಾಣುತಿದ್ದ ಪ್ರದೀಪ್ ಮೇಲೆ ದಾಖಲಿಸಿರುವಂತೆ ತೇಜಸ್ವಿ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದರು.

“ಹುಡುಕಾಟ, ಅನ್ವೇಷಣೆ, ಕುತೂಹಲಗಳ ಕಣಜ…”
ಪ್ರದೀಪ್ ಮುಂದುವರೆಸುತ್ತಾ ಹೋದಂತೆ ಹತ್ತಿರತ್ತಿರ ಸುಮಾರು ೩೦೦ ಎಂಎಲ್ ನಷ್ಟಿದ್ದ ಕಾಫಿ ನಿಧಾನಕ್ಕೆ ಕರಗುತ್ತಿತ್ತು.’ತೇಜಸ್ವಿಯವ್ರ್ ಬಗ್ಗೆ ಮಾತಾಡಿ ಅಂತಂದ್ರೆ ಇವನ್ಯಾಕೆ ಈ ಲ್ಯಾಬಿಗೆ ಕರ್ಕೊಂಡು ಬಂದು ಕೂರ್ಸಿದಾನೆ ಅಂತ ನಿಮಗೆ ಅನ್ನಿಸ್ತಿರ್ಬಹುದು. ಬಟ್ ದಿಸ್ ಈಸ್ ರೆಲೆವಂಟ್. ಯಾಕಂದ್ರೆ ತೇಜಸ್ವಿ ಅಂದ ತಕ್ಷಣ ನಮಗೆ ನೆನಪಾಗೋದು ಅವರ ಪ್ರಯೋಗ, ಕುತೂಹಲಗಳು. ಹಾಗಾಗಿ ಈ ಲ್ಯಾಬ್ ಒಳಗೆ ತೇಜಸ್ವಿ ಬಗ್ಗೆ ಮಾತಾಡೋದು ರೆಲೆವಂಟ್ ಅನ್ಸಿ ಇಲ್ಲಿಗೇ ಬರೋಕೆ ಹೇಳ್ದೆ. ಕರ್ವಾಲೋನೇ ತಗೊಳಿ, ಭತ್ತದ ಗದ್ದೆಗೆ ಬಿದ್ದಿದ್ದ ಹುಳಕ್ಕೆ ಪರಿಹಾರ ಕೇಳ್ಕೊಂಡು ಡಾಕ್ಟರ್ ಕರ್ವಾಲೊ ಅವರ ಲ್ಯಾಬಿಗೆ ಹೋಗೊ ಮೂಲಕ ನಿರೂಪಕ ಅಂದ್ರೆ ತೇಜಸ್ವಿ ಮತ್ತು ಡಾಕ್ಟರ್ ಕರ್ವಾಲೊ ಅವರ ಫ್ರೆಂಡ್ಶಿಪ್ ಸ್ಟಾರ್ಟ್ ಆಗುತ್ತೆ. ಅದು ಹ್ಯಾಗೆ ಮುಂದೆ ಇವರ ಕುತೂಹಲಗಳು, ಅವರ ಕುತೂಹಲಗಳು ಎಲ್ಲಾ ಸೇರಿ ಕಡೇಗೆ ಎಲ್ರೂ ಸೇರಿ ಹಾರೊ ಓತಿನ ಹುಡುಕ್ಕೊಂಡು ಕಾಡು ಮೇಡು ಅಲ್ಕೊಂಡು ಹೋಗ್ತಾರೆ. ಸೊ ಅವರ ಮೊದಲ ಕಾದಂಬರಿ ಕರ್ವಾಲೊನಲ್ಲೇ ಎಷ್ಟು ಹುಡುಕಾಟ, ಅನ್ವೇಷಣೆ, ಕುತೂಹಲ ಎದ್ದು ಕಾಣುತ್ತೆ. ಒಂದು ಮಗು ಏನಾದ್ರು ಹೊಸದು ಸಿಕ್ಕಿದ್ರೆ ಅದು ಎಷ್ಟು ಅದರ ಬಗ್ಗೆ ಪ್ರಶ್ನೆ ಕೇಳುತ್ತೆ? ಅದನ್ನ ಹಿಂದೆ ಮುಂದೆ ಎತ್ತಿ ಹಿಡಿದು ನೋಡಿ ಅದನ್ನ ಅರ್ಥ ಮಾಡ್ಕಳ್ಳಕ್ ಟ್ರೈ ಮಾಡುತ್ತೆ ಆಥರ ಹೊಸದನ್ನಅರ್ಥ ಮಾಡ್ಕೊಳೊ ಟ್ರೈ ಅವರ ಬದುಕಿನುದ್ದಕ್ಕೂ ಇತ್ತು, ಅದೇ ಅವರ ಎಲ್ಲಾ ಕಥೆಗಳಲ್ಲಿ, ಕಾದಂಬರಿಗಳಲ್ಲಿ ನಮಗೆ ಕಾಣಿಸ್ಕೊಳೊ ಅಂತದ್ದು. ಎಂದು ಹೇಳಿ ಕಾಫಿ ಗುಟುಕರಿಸತೊಡಗಿದರು.
“ಚಿದಂಬರ ರಹಸ್ಯ ಮತ್ತು ಕೆಸರೂರಿನ ಹೈಬ್ರಿಡ್”


’ಸರ್ ನಿಮ್ಮ ಅವರ ಒಡನಾಟ ಪ್ರಾರಂಭ ಆಗಿದ್ದು ಹೇಗೆ?’ ಅವರನ್ನು ಕೇಳಿದೆ.
’ಹಹಹ…ಐ ಡೋಂಟ್ ಥಿಂಕ್ ಇಟ್ ಈಸ್ ರೆಲೆವಂಟ್ ಅಂತ’…ಕಾಫಿ ಕಪ್ಪು ಟೇಬಲ್ ಮೇಲಿಡುತ್ತಾ ಅವರು ಉತ್ತರಿಸಿದರು. ’ಬಟ್ ಅದಕ್ಕಿಂತಲೂ ಮುಖ್ಯವಾದದ್ದು ಅಂದ್ರೆ ನಮ್ಮ ಪರಿಚಯ ಆದ ನಂತರ ಅವರು ನನ್ನ ಕೇಳಿದ್ದೆ, “ಈ tissue culture ಅಂದ್ರೆ ಏನಯ್ಯ…?’ ಅಂತ. ಯಾಕಂದ್ರೆ ನಾನು ಇಲ್ಲಿ ಓದಿ ಉದ್ದಾರ ಆಗಿದ್ದು ಸಾಲ್ದು ಅಂತ ಅಬ್ರಾಡ್ ಗೂ ಹೋಗಿ ಹೈಯರ್ ಸ್ಟಡೀಸ್ ಮುಗಿಸಿ ಬಂದಿದ್ದೆ. ಅದು ಅವರಿಗೆ ಗೊತ್ತಿದ್ರಿಂದ ಆ ಪ್ರಶ್ನೆ ಕೇಳಿದ್ರು. ನಾನು tissue culture ಅಂದ್ರೆ ಏನು ಅಂತ ನನಗೊತ್ತಿರೋದನೆಲ್ಲಾ ಹೇಳ್ದೆ. ಅವರು ’ಹೌದೇನಯ್ಯಾ..ಹಾಗ ಅದು?….’ ಅಂತ ಎಲ್ಲಾ ಕೇಳ್ಕೊಂಡ್ ಹೋದೋರು ಮೂರು ದಿನ ಬಿಟ್ಟು ಮತ್ತೆ ಸಿಕ್ಕಾಗ ’ಏಯ್…tissue culture ಎಲ್ಲಾ ಹಳೇದು ಆಯ್ತು ಕಣಯ್ಯ. ಈಗ cell cultureಅಂತ ಒಂದು ಬಂದಿದೆ. ಅದೇ ಈಗ ಲೇಟೆಸ್ಟ್ ಟೆಕ್ನಾಲಜಿ…!!!’ ಅಂತ ನನಗೆ ಹೇಳಿಕೊಟ್ರು.

ನನಗಂತೂ ನಾನು ಇಷ್ಟು ಕಷ್ಟಪಟ್ಟು ಮೂರ್ನಾಲ್ಕು ವರ್ಷ ಓದ್ಕೊಂಡ್ ಏನೋ ಭಾರಿ ತಿಳ್ಕೊಂಡಿದ್ದೀನಿ ಅಂತ ಅಂದ್ಕೊಂಡಿದ್ದೆಲ್ಲಾ ಜರ್ರಂತ ಇಳಿದೋಯ್ತು. ಬರೀ ಮೂರೇ ದಿನದಲ್ಲಿ ನಾನ್ ಓದಿದ್ ವಿಷಯ ಮೀರಿದ್ ವಿಷಯಾನ ನನಗೇ ವಾಪಸ್ ಹೇಳಿಕೊಟ್ಟಾಗ ‘ಹಾಗಾದ್ರೆ ಇಷ್ಟು ವರ್ಷ ನಾನು ಸುಮ್ನೆ ದಂಡಕ್ಕೆ ಓದಿದ ಹಾಗಾಯ್ತಲ್ಲ’ ಅಂತ ಅನ್ಸೋಕ್ ಶುರು ಆಗ್ಬಿಡ್ತು. ಅಮೇಲೆ ಅವರು ಹೇಳಿದ್ದು ಕರೆಕ್ಟಾಗೂ ಇತ್ತು. ಆಗ tissue culture ಹಳೇದಾಗಿ cell culture ಬಂದು ತುಂಬಾ ಕಾಲ ಆಗಿತ್ತು. ಹಾಗ್ ಅವರು…upto date updated…!!! ಎಂದು ಜೋರಾಗಿ ನಗಲು ಪ್ರಾರಂಭಿಸಿದರು. ಅವರ ಜೊತೆ ನಾನು ಹೇಮಂತ ಸಹ ಕೋರಸ್ ಕೊಟ್ಟೆವು.
’ಅಮೇಲೆ ಯಾಕ್ ಅವ್ರು ಈ tissue culture ಅದು ಇದು ಅಂತೆಲ್ಲಾ ಕೇಳಿದ್ರು ಅಂತ ಅಮೇಲೆ ನನಗೆ ಗೊತಾಯ್ತು. ಚಿದಂಬರ ರಹಸ್ಯ ಓದಿದ್ರೆ ನಿಮಗೆ ಗೊತ್ತೇ ಇರುತ್ತೆ. ಆ ಕಾದಂಬರಿ ಪೂರ್ತಿ ನಡೆಯೋದೇ ಏಲಕ್ಕಿ ಬೆಳೆ ಸುತ್ತ. ಇದಕ್ಕೆ ಸಂಬಂಧಪಟ್ಟ ಹಾಗೆ ಒಂದು ಘಟನೆ ಹೇಳ್ತೀನಿ…
ಆಗ ಸರ್ಕಾರ ಏಲಕ್ಕಿ, ಬಾಳೆ ಹೀಗೆ ಎಲ್ಲದಕ್ಕೂ tissue culture ಮಾಡ್ಬೇಕು ಅಂತ ಸ್ಕೀಮ್ ಮಾಡಿತ್ತು. high yield ಬರುಸ್ಬೇಕು ಅಂತ ಗೌರ್ಮೆಂಟ್ ಪ್ಲಾನು. To certain extent ಅದು ನಿಜ ಕೂಡ. tissue culture ಮಾಡಿದ್ರೆ output ಸ್ವಲ್ಪ ಜಾಸ್ತಿ ಆಗುತ್ತೆ ಇಲ್ಲ ಅಂತಲ್ಲ. ಆದ್ರೆ ನಮ್ಮ ಇಂಡಿಯನ್ ಕಾಂಟೆಕ್ಸ್ಟ್ ನಲ್ಲಿ ಅದೂ ಕೂಡ ಎಷ್ಟು corrupt practices ಗೆ ಒಳ್ಗಾಗಿದೆ ಅಂದ್ರೆ ಐದಾರ್ ಕಂಪನಿಗಳು ಸರ್ಕಾರನ ಪುಸಲಾಯಿಸಿ ಅವರವರ ಕಂಪನಿಗಳನ್ನು certify ಮಾಡುಸ್ಕೊಂಡು ’ನೀವು ಇಂಥಲ್ಲಿಂದ ಟಿಶ್ಯೂ ಕಲ್ಚರ್ಡ್ ಪ್ಲಾಂಟ್ಸ್ ಕೊಂಡ್ಬಿಡಿ ಸಾಕು, ನೀವು ಎಕರೆಗೆ ಒಂದು ಟನ್ ಏಲಕ್ಕಿ ಬೆಳೀಬಹುದು ಅಂತ anounce ಮಾಡಿಬಿಟ್ವು. ಅದಕ್ಕೆ ತೇಜಸ್ವಿ ಹೇಳೋದು ’ಅದು ಹೇಗ್ ಸಾಧ್ಯ ಮಾರಾಯ? ಒಂದು ಓಳ್ಳೆ ಗಿಡ ಇದ್ರೆ ಅದರಿಂದ tissue culture ಮಾಡಿದ್ರೆ ಏನಾದ್ರು ಸಾಧ್ಯ ಆಗ್ಬಹುದು. ಒಂದು ಟನ್ ಫಲ ಕೊಡೋ ಗಿಡಾನೇ ಇಲ್ದಿದ್ರೆ ಎಲ್ಲಿಂದ tissue culture ಮಾಡೋದು…?
ಆಯ್ತು ಈಗ ಒಂದು ಟನ್ ಬೆಳೆಯೋ ಗಿಡ ಇದೆ ಅಂತ ಇಟ್ಕೊ. ಹಾಗಾದ್ರೆ ಅದರ ಪಿಳಕೆಗಳನ್ನ ಬೆಳೆದ್ರೆ ಇಳುವರಿ ಬರ್ಬೇಕಲ್ಲ…ಟಿಶ್ಯೂ ಕಲ್ಚರ್ರೇ ಯಾಕ್ ಬೇಕು? ಈ ಥರದ ಜಿಜ್ಞಾಸೆಗಳು ಅವರಲ್ಲಿ ಪ್ರಾರಂಭವಾದವು. ಇದನೆಲ್ಲಾ ವಿವರಿಸಿ ಅವರು ಸರ್ಕಾರಕ್ಕೆ ಎರಡ್ಮೂರು ಪತ್ರ ಸಹ ಬರೆದ್ರು. ಆದ್ರೆ ಅಷ್ಟೊತಿಗಾಗಲೇ ಸುಮಾರು ಕಂಪನಿಗಳು ಸಬ್ಸಿಡಿ ಹೆಸರಲ್ಲಿ ಕೊಟ್ಯಾಂತರ ರೂಪಾಯಿ ದೋಚಿ ಆಗಿತ್ತು. ಜೊತೆಗೆ ಇವರೂ ಸಹ ಏಲಕ್ಕಿ ಬೆಳೀತೀನಿ ಅಂತ ಹೋಗಿ ಆಗಿನ್ ಕಾಲಕ್ಕೆ ಸುಮಾರು 80,000 ರೂಪಾಯಿ ಕಳೆದಿದ್ರು. ಸೊ ಈ ಎಲ್ಲಾ ಪ್ರಶ್ನೆಗಳನ್ನಿಟ್ಟುಕೊಂಡೇ ಅವರು ಕೆಸರೂರಿನ ಹೈಬ್ರಿಡ್ ಹುಡುಕೊ ನೆಪದಲ್ಲಿ ಚಿದಂಬರ ರಹಸ್ಯ ಬರೆದಿದ್ದು. ಅದರಲ್ಲಿ ಬರೊ ಡಾಕ್ಟರ್ ಜೋಗಿಹಾಳ್ ಕೊಲೆ ಕೇಸಿಗೂ ಕೆಸರೂರು ಅನ್ನೊ ಊರಿನ ಸಾಂಸ್ಕೃತಿಕ, ಸಾಮಾಜಿಕ ಬದಲಾವಣೆಗಳಿಗೂ ಹೀಗೆ ಒಂದಿಡೀ ಸಮಾಜ ಹಾಳಾಗೋದಕ್ ಹ್ಯಾಗೆ ಅಫ್ಟರ್ ಆಲ್ ಒಂದು ಏಲಕ್ಕಿ ಬೆಳೆ ಮೂಲ ಕಾರಣ ಆಗುತ್ತೆ ಆನ್ನೊದನ್ನ ಸೂಕ್ಷ್ಮವಾಗಿ ಗಮನಿಸಿದರೆ ಹೊಳೆಯುತ್ತೆ.
ಪ್ರದೀಪ್ ಈ ಮಾತು ಹೇಳಿ ಮುಗಿಸಿದಾಗ ಎಲ್ಲರ ಕಪ್ಪುಗಳಲ್ಲಿನ ಕಾಫಿ ಖಾಲಿಯಾಗಿತ್ತು. ದರ್ಶನ್ ಅವರ ಪಾಡಿಗೆ ಅವರು ಪ್ರದೀಪ್ ರ ಮಾತುಗಳನ್ನು ಚಿತ್ರಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದರೆ ಹೇಮಂತ ಕಾಫಿ ಡೇ ಲ್ಯಾಬಿನಲ್ಲಿದ್ದ ಚಿತ್ರವಿಚಿತ್ರ ಉಪಕರಣಗಳನ್ನು ತದೇಕಚಿತ್ತದಿಂದ ನೋಡುವುದರಲ್ಲಿ ಮುಳುಗಿದ್ದ. ನಿತಿನ್ ನಮಗೆ ಕಾಫಿ ತಂದುಕೊಟ್ಟ ಹುಡುಗನ ಸ್ನೇಹ ಬೆಳಸಿ ಅವನೊಂದಿಗೆ ಹರಟುತ್ತಾ ಹೊರಗಿನ ಕಾರಿಡಾರ್ ನಲ್ಲಿ ಓಡಾಡುತ್ತಿದ್ದ.

ಸ್ವಲ್ಪ ಹೊತ್ತಿನ ನಂತರ ಮತ್ತೆ ಪ್ರದೀಪ್ ಮಾತು ಪ್ರಾರಂಭಿಸಿದರು. ’ಬಟ್ ಒಂದಿತ್ತು ಅವರಿಗೆ, ಏನೇ ಮಾಡಿದ್ರು ಅದು ಜನಮುಟ್ಟಲೇಬೇಕು ಅದು ಅಂತ. ಬರೆದ್ರೂ ಜನ ಓದ್ಬೇಕು, ಹೋರಾಟ ಮಾಡಿದ್ರೂ ಅದು ಜನರಿಗೆ ಉಪಯೋಗ ಆಗ್ಬೇಕು, ಕನ್ನಡ ಸಾಫ್ಟ್ವೇರ್ ಮಾಡಿದ್ರು ಅದು ಜನರನ್ನ ತಲುಪಲೇಬೇಕು ಹೀಗೆ ಜನರಿಗೆ ತಲುಪಲೇಬೇಕು ಅನ್ನೊ ಅಂಶ ಅವರಲ್ಲಿ ಸದಾ ಎಚ್ಚರವಾಗಿರ್ತಿತ್ತು. ಹಾಗಾಗಿ ಅವರ ಯಾವ ಕಥೆ ಕಾದಂಬರಿ, ಸೈನ್ಸ್ ಫಿಕ್ಷನ್ನು, ಯಾವ್ದೇ ತಗೊಂಡ್ರು ಅದು ಸರಾಗವಾಗಿ ಓದುಸ್ಕೊಂಡ್ ಹೋಗ್ತವೆ.ಸೊ ಕುತೂಹಲದ ಕಣ್ಣಲ್ಲಿ ನೋಡಿದ್ದನ್ನ ತಾವೇ ಸ್ವತಃ ಪ್ರಯೋಗ ಮಾಡಿ ನೋಡಿ ಅದನ್ನ ಸರಳವಾಗಿ, ಓದಿಸ್ಕೊಂಡ್ ಹೋಗೋ ಹಾಗೆ ಜೊತೆಗೆ ಸ್ವಲ್ಪ ಹ್ಯೂಮರ್ ಸೇರ್ಸಿ ಬರಿತಿದ್ರು. ದಟ್ ವಾಸ್ ಹಿಸ್ ಸ್ಟ್ರೆಂಥ್ ಅಂಡ್ ಯುನಿಕ್ನೆಸ್.
“ಏಲಕ್ಕಿ ಹುಳ ಮತ್ತು ಬ್ಲಡ್ ಕ್ಯಾನ್ಸರ್ ಪೇಷಂಟ್”
ನೀವು ಕುತೂಹಲ ಅಂದ್ರಲ್ಲ ಅದಕ್ ಸಂಬಂಧಪಟ್ಟಒಂದು ಘಟನೆ ಜ್ಞಾಪಕಕ್ಕೆ ಬರ್ತಾ ಇದೆ. ದಟ್ ವಿಲ್ ಶೋ ಹಿಸ್ ಹೈಟ್ ಆಫ್ ಕುತೂಹಲ.
ಒಂದ್ಸಲ ಬೆಳಿಗ್ಗೇನೆ ನನಗೆ ಫೋನ್ ಮಾಡಿ ’ಏನಯ್ಯ ಮಾಡ್ತಿದ್ದೀಯ?’ ಅಂದ್ರು ನಾನು ’ಏನಿಲ್ಲ ಸಾರ್ ಹೀಗೆ ಸಣ್ಣಪುಟ್ಟ ಕೆಲಸಗಳು..’ ಅಂದೆ. ’ಸರಿ ಹಾಗಾದ್ರೆ ಬೇಗ ಬಾ, ನಿನಗೊಂದು ತುಂಬಾ ಇಂಪಾರ್ಟೆಂಟ್ ವಿಷ್ಯ ಹೇಳ್ಬೇಕು’ ಅಂದ್ರು. ಸರಿ ಆಗ ನನಗೂ ಮಾಡಕ್ ಏನೂ ಕೆಲ್ಸ ಇರ್ಲಿಲ್ಲ. ಯಾರಾದ್ರೂ ಕರೀತಾರ ಅಂತ ಕಾಯ್ತಿದ್ದೆ.ಇವರು ಕರೆದ ತಕ್ಷಣ ಇದ್ದ ಹಾಗೆ ಎದ್ದು ನನ್ನ ಹತ್ರ ಹಳೆದೊಂದು ಬೈಕ್ ಇತ್ತು ಅದನ್ನ ತಗೊಂಡ್ ಸೀದ ಅವರ ಮನೆಗೆ ಹೋದೆ. ನಾನು ಅವರ ತೋಟದ ಗೇಟ್ ದಾಟಿ ಒಳಗೆ ಹೋಗ್ತಿರ್ಬೇಕಾದ್ರೆ ಎದುರುಗಡೆ ಅವರ ಮನೆ ಕಡೆಯಿಂದ ಒಬ್ಬ ವ್ಯಕ್ತಿ ನನೆದುರಿಗೆ ಹೋಗ್ತಿದ್ರು. ಅವರು ಯಾರು ಅಂತ ನನಗೆ ಗೊತ್ತಿತ್ತು, ಅವರಿಗೂ ನಾನು ಗೊತ್ತಿತ್ತು. ಹಾಗಾಗಿ ಹಲೊ ಹೇಳಿ ಒಳಗಡೆ ಹೋದೆ. ಹೋದ ತಕ್ಷಣ ತೇಜಸ್ವಿಯವರು ’ನೀನು ಕೃಷಿ ವಿಜ್ಞಾನ ಓದಿದ್ದೀನಿ ಅಂತೀಯಲ್ಲ ಎಂಟಮಾಲಜಿ ಅಂದ್ರೆ ಏನು ಅಂತ ಗೊತ್ತೇನಯ್ಯ ನಿನಗೆ?’ ಅಂತ ಡೈರೆಕ್ಟಾಗಿ ಪ್ರಶ್ನೆ ಕೇಳಿದ್ರು.
ನಾನು, ’ಗೊತ್ತು ಸಾರ್ ಎಂಟಮಾಲಜಿ (ಕೀಟಶಾಸ್ತ್ರ) ಅಗ್ರಿಕಲ್ಚರಲ್ ಸೈನ್ಸ್ ನಲ್ಲಿ ಒಂದು ಭಾಗನೇ ಇರುತ್ತೆ ಓದಿದ್ದೀನಿ ಸಾರ್…’ ಅಂದೆ.‘ಸರಿ ಅದೇನೊ ಓದಿ ಕಡೆದು ಕಟ್ಟೆ ಹಾಕ್ಬಿಟ್ಟಿದ್ದೀನಿ ಅಂತೀಯಲ್ಲ…ಇದೇನೇಳು ಅಂತ ನನ್ನ ಮುಂದೆ ಒಂದು ಬೆಂಕಿಪೊಟ್ಣ ಹಿಡಿದು ಕೇಳಿದ್ರು. ನಾನು ‘ಮ್ಯಾಚ್ ಬಾಕ್ಸು’ ಅಂದೆ. ’ಅಯೋಗ್ಯ, ಅದಲ್ಲಯ್ಯ ಒಳಗಡೆ ತೆಗೆದ್ ನೋಡು’ ಅಂತೇಳಿ ಅವರೇ ಅದನ್ನ ತೆಗೆದ್ರು. ನೋಡಿದ್ರೆಒಳಗಡೆ ಒಂದು ಹುಳ!!! ’ಏನ್ ಗೊತ್ತೇನಯ್ಯ ಇದು?’ ಅಂದ್ರು. ನಾನು ’ಗೊತ್ತು ಸಾರ್, ಅದು ಇಂತ ಒಂದು ಕೀಟ. ಸಾಮಾನ್ಯವಾಗಿ ಏಲಕ್ಕಿ ಗಿಡಗಳಲ್ಲಿ ಡಾಮಿನೆಂಟಾಗಿರುತ್ವೆ’ ಅಂತ ಹೇಳ್ದೆ. ಬರಿ ಅಷ್ಟೇ ಅಲ್ಲ ಕಣಯ್ಯ ಇದರ ಮಹತ್ವ ಗೊತ್ತೇನಯ್ಯ ನಿನಗೆ?’ ಅಂದ್ರು. ನಾನು ’ಗೊತ್ತಿಲ್ಲ’ ಅಂದೆ.’ಬ್ಲಡ್ ಕ್ಯಾನ್ಸರಿಗೆ ಔಷಧಿ ಕಣಯ್ಯ ಈ ಹುಳ!!!’ ಅಂದ್ರು. ನನಗೆ ಪರಮಾಶ್ಚರ್ಯ.
ಅವರು ಹೇಳಿದ ವಿಷಯ ಕೇಳಿ ತಕ್ಷಣಕ್ಕೆ ಏನ್ ಹೇಳ್ಬೇಕು ಅಂತ ಗೊತ್ತಾಗ್ಲಿಲ್ಲ. ಕಡೆಗೆ ’ಯಾವನ್ ಸಾರ್ ನಿಮಗೆ ಇದನ್ನ ಹೇಳಿದ್ದು?ಅಂದೆ. ’ಯಾರೋ ಹೇಳುದ್ರು? ನಿನಗ್ಯಾಕ್ ಅದು? ಕ್ಯಾನ್ಸರ್ ಬಂದು ಈ ಹುಳ ತಿಂದು ಖಾಯಿಲೆ ಸಂಪೂರ್ಣ ವಾಸಿ ಮಾಡ್ಕೊಂಡಿದ್ದ ವ್ಯಕ್ತೀನೆ ಬಂದು ಹೇಳಿ ಹೋದ. ಅವನಿಗೆ ಕ್ಯಾನ್ಸರ್ ಲಾಸ್ಟ್ ಸ್ಟೇಜ್ ನಲ್ಲಿತ್ತಂತೆ. ಡಾಕ್ಟರ್ಸೇ ಇವನಿನ್ನು ಬದುಕೋದಿಲ್ಲ ಅಂತ ಕೈಬಿಟ್ ಬಿಟ್ಟಿದ್ರಂತೆ. ಆಗ ಯಾರೋ ಹೇಳಿ ಅವನು ಈ ಹುಳ ತಿಂದು ಈಗ ಸಂಪೂರ್ಣ ಗುಣ ಆಗಿದ್ದಾನೆ ಕಣಯ್ಯ. ಆ ವ್ಯಕ್ತೀನೆ ಬಂದು ಹೇಳಿ ನನ್ನ ಕೈಗೆ ಈ ಹುಳ ಕೊಟ್ಟು ಹೋದ’ ಅಂತ ಎಲ್ಲಾ ವಿವರಿಸಿದ್ರು. ’ಸಾರ್ ಯಾರೋ ನಿಮಗೆ ರಾಂಗ್ ಇನ್ಫರ್ಮೇಷನ್ ಕೊಟ್ಟಿರ್ಬೇಕು…ಅಲ್ಲ ಸಾರ್ ಹಾಗೇನಾದ್ರೂ ಇದ್ದಿದ್ರೆ ಇಷೊತ್ತಿಗಾಗ್ಲೇ ಯಾರಾದ್ರೂ ಅದನ್ನ ರಿಸರ್ಚ್ ಮಾಡಿ ಪಿಹೆಚ್ ಡಿ ಮಾಡಿತಿದ್ರು. ಯಾವ್ದಾದ್ರು ಕಂಪನಿ ಪೇಟೆಂಟ್ ತಗೋತಿತ್ತು. ಇದೆಲ್ಲ ಸುಳ್ಳು ಸಾರ್’ ಅಂದೆ.
ತಕ್ಷಣ ಯದ್ವಾತದ್ವಾ ಕೋಪ ಮಾಡ್ಕೊಂಡು ’ಏನಯ್ಯ ನೀನು ನಾನ್ ಇಷ್ಟ್ ಹೇಳಿದ್ರು ನಂಬಲ್ವಲ್ಲ ನೀನು… ಬ್ಲಡ್ ಕ್ಯಾನ್ಸರ್ ಇದ್ದ ಆ ವ್ಯಕ್ತೀನೆ ಬಂದು ಎಲ್ಲ ಹೇಳಿ ಹೋಗಿದ್ದಾನೆ.ಮೆಡಿಕಲ್ ಸರ್ಟಿಫಿಕೇಟ್ ಎಲ್ಲಾ ತೋರಿಸ್ದಾ.ಇಷ್ಟೊತನಕ ಇಲ್ಲೇ ಕೂತಿದ್ದ. ಮೂರು ಅವರ್ ಮಾತಾಡ್ದ ಇದರ ಬಗ್ಗೆ’ ಅಂದ್ರು. ಆಗ ನನಗೆ ಸ್ವಲ್ಪ ಸ್ವಲ್ಪ ಅರ್ಥ ಆಗೋಕೆ ಶುರು ಆಗಿ ’ಯಾರು ಈಗ ಎದ್ದು ಹೋದ್ನಲ್ಲ ಆ ವ್ಯಕ್ತೀನಾ ಸಾರ್ ನಿಮಗೆ ಈ ವಿಷ್ಯ ಹೇಳಿದ್ದು?; ಅಂದೆ. ’ಹೌದು ಕಣಯ್ಯ ಅವನೇ.ಅವನಿಗೆ ಕ್ಯಾನ್ಸರ್ ಜಾಸ್ತಿ ಆಗಿ ಬೆಂಗಳೂರಿನಲ್ಲಿ ಆಸ್ಪತ್ರೆಗೆ ಸೇರ್ಸಿದ್ರಂತೆ.ಅಲ್ಲಿ ಯಾರೋ ಅವನಿಗೆ ಈ ಹುಳದ ಟ್ರೀಟ್ಮೆಂಟ್ ಕೊಟ್ಟು ಉಳಿಸಿದ್ರಂತೆ.ಅವನೇ ಹೇಳ್ದಾ…’ ಅಂದ್ರು.ಅವರು ಇನ್ನೂ ಆ ಮಾತು ಮುಗಿಸಿರ್ಲಿಲ್ಲ, ನಾನು ಅಲ್ಲೇ ಉರುಳಾಡ್ಕೊಂಡು ಬಿದ್ದು ಬಿದ್ದು ನಗೋಕೆ ಶುರು ಮಾಡ್ಬಿಟ್ಟೆ.
ಅವರಿಗೆ ಏನು ಅರ್ಥ ಆಗ್ದೇ ’ಯಾಕಯ್ಯ ಹುಚ್ಚುನ್ ಥರ ನಗ್ತೀಯ?’ ಅಂದ್ರು. ನಾನು ನಗು ತಡೆಯೋಕಾಗ್ದೇ…’ಸಾರ್ ಆ ವ್ಯಕ್ತಿಗೆ ಹೆಲ್ತ್ ಅಪ್ ಸೆಟ್ ಆಗಿದ್ದಿದ್ದು ನಿಜ, ಅವನನ್ನ ಅವನ ಮನೆಯವ್ರು ಬೆಂಗಳೂರಿನ ಆಸ್ಪತ್ರೆಗೆ ಸೇರ್ಸಿದ್ದಿದ್ದು ನಿಜ. ಆದ್ರೆ ಅವನಿಗಾಗಿದಿದ್ದು ಫಿಸಿಕಲ್ ಪ್ರಾಬ್ಲಂ ಅಲ್ಲ…ಮೆಂಟಲ್ ಪ್ರಾಬ್ಲಮ್ಮು…ಕ್ಯಾನ್ಸರ್ ಆಸ್ಪತ್ರೆಗಲ್ಲ ಅವನನ್ನ ಸೇರ್ಸಿದಿದ್ದು ಬದಲಿಗೆ ಮೆಂಟಲ್ ಹಾಸ್ಪಿಟಲ್ಗೆ. ನಿನ್ನೆ ತಾನೆ ಡಿಸ್ಚಾರ್ಜ್ ಆಗಿ ಬಂದಿದಾನೆ ಅವನು…ಆ ಹುಚ್ಚನ ಜೊತೆಗೆ ಮೂರು ಅವರ್ ಟೈಂ ವೇಸ್ಟ್ ಮಾಡಿದ್ದೀರಲ್ಲ ಸಾರ್. ಅವನಿಗಿನ್ನೂ ಹುಚ್ಚು ಪೂರ್ತಿ ವಾಸೀನೇ ಆಗಿಲ್ವಂತೆ….!!!’ ಅಂತ ಹೇಳಿದ್ದೇ ತಡ ನನ್ನ ಕಣ್ಣಿಗಿನ್ನೂ ಕಟ್ಟಿದ್ ಹಂಗಿದೆ, ಅವರು ಕೈಲಿದ್ದ ಬೆಂಕಿಪೊಟ್ಣನಾ ತೆಗೆದು ದೂರಕ್ಕೆ ಎಸೆದು ಅಲ್ಲೇ ನೆಲದ ಮೇಲೆ ಹರ್ಕೊಂಡ್ ಹೋಗ್ತಿದ್ದ ಹುಳಾನೂ ಕಾಲಲ್ಲಿ ತುಳಿದು ಸಾಯ್ಸಿ ’ಅಲ್ಲ ಕಣಯ್ಯ, ಎಂತೆಥ ಜನಾ ಇರ್ತಾರಯ್ಯ…ಬ್ಲಡ್ ಕ್ಯಾನ್ಸರಿಗೆ ಔಷಧಿ ಅಂತ ಹೇಳಿ ಮೂರು ಗಂಟೆ ನನ್ ತಲೆ ತಿಂದ್ನಲ್ಲಯ್ಯ ಅವನು…’ ಅಂತ ಒಂಥರಾ ಮುಖ ಮಾಡ್ಕೊಂಡ್ರು. ನಾನು ನಕ್ಕೊಂಡ್ ಸುಮ್ನಾದೆ.
ಅಮೇಲೆ ಆ ಮಹಾನುಭಾವ ಇಲ್ಲೇ ಮೂಡಿಗೆರೆ ಸುತ್ತಾ ಮುತ್ತಾ ಓಡಾಡ್ಕೊಂಡಿದ್ರು. ಕಡೆವರೆಗೂ ಅವರ ತಲೆ ಸರಿ ಹೋಗ್ಲೇ ಇಲ್ಲ. ಯಾಕೀ ಘಟನೆ ಹೇಳ್ದೇ ಅಂದ್ರೆ ಅವರ ಕುತೂಹಲ ಎಷ್ಟಿತ್ತು ಅಂತ ನಿಮಗೆ ಉದಾಹರಣೆ ಕೊಡೋಕೆ. ಒಬ್ಬ ಕಾಮನ್ ಮನುಷ್ಯನಿಗೆ ಅವರು ತ್ರೀ ಅವರ್ಸ್ ಟೈಂ ಕೊಟ್ಟಿದ್ದಾರೆ ಅಂತಂದ್ರೆ ನೀವೇ ಲೆಕ್ಕ ಹಾಕೊಳ್ಳಿ. ನಾನೇ ನೋಡಿರೊ ಹಾಗೆ ಮುಖ್ಯಮಂತ್ರಿಗಳು ಸಹಿತ ಇವರ ಅಪಾಂಯಿಂಟ್ಮೆಂಟ್ ಇಲ್ಲದೆ ಹೋಗಿದ್ದಿದೆ. ಒಂದ್ಸಾರ್ತಿ ಜೆ.ಹೆಚ್ ಪಟೇಲ್ರು ಸಿಎಂ ಆಗಿದ್ದಾಗ ಹೇಳಿದ್ ಟೈಗಿಂತ ಹತ್ತು ನಿಮಿಷ ಲೇಟ್ ಮಾಡಿದ್ರು ಅಂತ ಇವರು ಅವರ ಜೊತೆ ಮಾತಾಡೊಕ್ ಕೂಡ ಇಷ್ಟಪಡದೇ ವಾಪಸ್ ಕಳಿಸಿದ್ದನ್ನ ನಾನೇ ನೋಡಿದ್ದೀನಿ. ಅಂತಾದ್ದರಲ್ಲಿ ಒಬ್ಬ ಸಾಮಾನ್ಯನಿಗೆ 3 ಅವರ್ಸ್ ಟೈಂ ಕೊಟ್ಟಿದಾರೆ ಅಂದ್ರೆ ಜಸ್ಟ್ ಇಮ್ಯಾಜಿನ್ ಹಿಸ್ ಕ್ಯಾರೆಕ್ಟರ್.
ಪ್ರದೀಪ್ ಹೇಳಿದ ಈ ಘಟನೆ ಕೇಳಿದ ನಂತರ ಬಿದು ಬಿದ್ದು ನಗುವ ಸರದಿ ನಮ್ಮದಾಗಿತ್ತು.
ನಂತರ ಮಾತು ಹತ್ತು ಹಲವು ಆಯಾಮ ಪಡೆದುಕೊಂಡಿತು. ಕಡೆಯಲ್ಲಿ ಪ್ರದೀಪ್ ‘it is such a memorable personality. ಮಾತಾಡ್ತಾ ಇದ್ರೆ ದಿನಗಟ್ಟಲೇ ಮಾತಾಡ್ಬಹುದು. Hope this is enogh from my side.’ ಎಂದು ಹೇಳಿ ಮಾತಿಗೆ ಪೂರ್ಣ ವಿರಾಮ ಹಾಕುವ ಸೂಚನೆ ಕೊಟ್ಟರು.ಹೊರಡುವ ಮೊದಲು ಪ್ರದೀಪ್ ಮತ್ತೊಮ್ಮೆ ತರಿಸಿಕೊಟ್ಟ ಬೇರೊಂದು ಫ್ಲೇವರ್ ಕಾಫಿ ಕುಡಿದು ಅವರಿಗೆ ಧನ್ಯವಾದ ಹೇಳಿ ಚಿಕ್ಕಮಗಳೂರಿನ ಕಾಫಿ ಡೇ ಕಂಪನಿಯ ಕ್ಯಾಂಪಸಿನಿಂದ ಹೊರಬಂದೆವು.
ಚಿತ್ರೀಕರಣದ ನಮ್ಮ ವ್ಯಾನ್ ಹತ್ತಿನಿತಿನ್ ಗೆ ಮೂಡಿಗೆರೆಯ ಆಚೆಗಿನ ಜನ್ನಾಪುರದ ಕಡೆ ಗಾಡಿ ಓಡಿಸುವಂತೆ ಸೂಚಿಸಿ ನನ್ನ ಫೋನ್ ತೆಗೆದುಕೊಂಡು ನಂಬರೊಂದಕ್ಕೆ ಕರೆ ಮಾಡಿದೆ. ಆ ಕಡೆಯಿಂದ ಮಾತನಾಡಿದ ಹಿರಿಯರು ’ಮೂರು ಗಂಟೆ ನಂತರ ಯಾವಾಗ್ಬೇಕಾದ್ರೂ ಬನ್ನಿ ಪರ್ವಾಗಿಲ್ಲ’ ಎಂದರು.ಸಮಯ ನೋಡಿಕೊಂಡೆ.ಇನ್ನೂ ಎರಡು ಗಂಟೆಗಳ ಸಮಯಾವಕಾಶವಿತ್ತು.ಮಾರ್ಗ ಮಧ್ಯೆ ಸಿಕ್ಕ ಹೋಟೆಲೊಂದರಲ್ಲಿ ಊಟ ಮಾಡಿಕೊಂಡು ಆ ಹಿರಿಯರು ಹೇಳಿದ ಹಾಗೆ ಸರಿಯಾಗಿ ಮೂರು ಗಂಟೆಗೆ ಜನ್ನಾಪುರದಿಂದ ಸಕಲೇಶಪುರಕ್ಕೆ ಹೋಗುವ ಮಾರ್ಗದಲ್ಲಿರುವ ಅವರ ಮನೆ ಮುಂದಿದ್ದೆವು.ಆ ಹಿರಿಯರು ಗೇಟಿನ ಬಳಿ ಕಾಯುತ್ತಿದ್ದವರು ನಮ್ಮನ್ನು ನಗುಮೊಗದಿಂದ ಸ್ವಾಗತಿಸಿ ಒಳಗೆ ಕರೆದುಕೊಂಡು ಹೋದರು. ಅವರು ತೇಜಸ್ವಿಯವರ ಫಿಶಿಂಗ್ ಸಾಹಸಗಳಲ್ಲಿ ಅವರ ಶಾಶ್ವತ ಒಡನಾಡಿಯಾಗಿದ್ದ ಸದ್ಯ ಪುಸ್ತಕ ಪ್ರಕಾಶನದ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ತೇಜಸ್ವಿಯವರ ಆಪ್ತ ಒಡನಾಡಿ ರಘು ಅಲಿಯಾಸ್ ರಾಘವೇಂದ್ರರವರು…

ಮುಂದುವರೆಯುವುದು…
(ರಘುರವರು ಕಂಡ ತೇಜಸ್ವಿ ಹಾಗೂ ಬರಿ ಬೆತ್ತಲೆ ಹೇಮಾವತಿ ನದಿಯಲ್ಲಿ ಮುಳುಗಿ ಕಳೆದುಹೋದ ಗಾಳ ಹುಡುಕಿದಂತಹ ಕುತೂಹಲಕಾರಿ ಘಟನೆಗಳು ಮುಂದಿನ ವಾರ…)
ಗಾಂಧಿನಗರ, ಜಯನಗರ ಹಾಗೂ ಕೋರಮಂಗಲದ ಸಪ್ನ ಪುಸ್ತಕ ಮಳಿಗೆಗಳಲ್ಲಿ, ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ರೇಸ್ ಕೋರ್ಸ್ ಬಳಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರದ ಡಿವಿಡಿಗಳು ದೊರೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ ಟೋಟಲ್ ಕನ್ನಡದ ಲಕ್ಷ್ಮಿಕಾಂತ್ (ಡಿವಿಡಿ ವಿತರಣೆಯ ಹಕ್ಕುದಾರರು) ರವರನ್ನು ಸಂಪರ್ಕಿಸಿ. Mobile No: 9986222402
 

‍ಲೇಖಕರು avadhi

October 20, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: