ಅರಣ್ಯವೇನೋ ಬೆಳೆದಿದೆ; ಆದರೆ ಅದು ಉಳಿಯುವುದೇ?

ಶಿವರಾಂ ಪೈಲೂರು

ಗುರುಗ್ರಾಮದ ಪಾಳು ಭೂಮಿಯಲ್ಲಿ ಕಾಡು ಬೆಳೆಸಿದ್ದಾರೆ. ಒಂದು ದಶಕದ ಅರಣ್ಯೀಕರಣ ಕೆಲಸ ಫಲ ನೀಡಿದೆ. ಈ ಯಶೋಗಾಥೆಯ ಮೇಲೆ ಬೆಳಕು ಚೆಲ್ಲುವ ಲೇಖನ ಈ ಕಾಡಿನ ಉಳಿವಿನ ಬಗ್ಗೆಯೂ ಆತಂಕ ವ್ಯಕ್ತಪಡಿಸಿದೆ.

ದೊಡ್ಡ ನಗರದಂಚಿನ ಪ್ರದೇಶ. ಗಣಿಗಾರಿಕೆಯಿಂದಾಗಿ ಸಾಕಷ್ಟು ಬಸವಳಿದಿದ್ದ ಜಾಗ. ಜತೆಗೆ ಒತ್ತುವರಿ. ಕಸದ ರಾಶಿ. ಇಂತಹ ಜಾಗ ಹೇಗೆ ಇದ್ದೀತು ಅಂತ ಊಹಿಸಿಕೊಳ್ಳಿ. ಆದರೆ ಈಗ ಈ ಚಿತ್ರಣ ಸಂಪೂರ್ಣ ಬದಲು. ಆ ಬೆಂಗಾಡು ಈಗ ಬರೋಬ್ಬರಿ 380 ಎಕರೆ ವಿಸ್ತೀರ್ಣದ ಜೀವವೈವಿಧ್ಯ ಪಾರ್ಕ್. ನೂರಾರು ಬಗೆಯ ಗಿಡಮರಗಳು, ಪ್ರಾಣಿ-ಪಕ್ಷಿಗಳು. ಆ ಕಾಡು ಇಡೀ ನಗರಕ್ಕೆ ಶ್ವಾಸಕೋಶ. ಬೆಂಗಳೂರಿನ ತುರಹಳ್ಳಿ ಅರಣ್ಯದಂತೆ.

ಅರಾವಳಿ ಪರ್ವತ ಶ್ರೇಣಿಯ ಸೆರಗಿನಲ್ಲಿರುವ ರಾಜಸ್ಥಾನದ ರಾಜ್ ಸಮಂಡ್ ಜಿಲ್ಲೆಯ ಪಿಪ್ಲಾಂತ್ರಿಯಲ್ಲಿ ಶ್ಯಾಮ್ ಸುಂದರ್ ಪಾಲೀವಾಲ್ ಅವರ ನೇತೃತ್ವದಲ್ಲಿ ಕೈಗೊಂಡ ಅರಣ್ಯೀಕರಣ ಕೆಲಸಗಳು ದಶಕದ ನಂತರ ಫಲ ನೀಡಿದ್ದರ ಬಗ್ಗೆ ಎರಡು ವರ್ಷಗಳ ಹಿಂದೆ ಸಣ್ಣದೊಂದು ಪುಸ್ತಕ ಬರೆದಿದ್ದೆ. ಈಗ ಅದೇ ಪರ್ವತ ಶ್ರೇಣಿಯ ಇನ್ನೊಂದು ತುದಿಯಲ್ಲಿರುವ ಗುರುಗ್ರಾಮದಲ್ಲಿ ಸಾಕಾರಗೊಂಡಿರುವ ಕಾಡು ಬೆಳೆಸುವ ಯೋಜನೆಯೊಂದು ವರದಿಯಾಗಿದೆ.

ದೆಹಲಿಯಿಂದ ಪ್ರಕಟವಾಗುವ ‘ಸಿವಿಲ್ ಸೊಸೈಟಿ’ ಮಾಸಿಕದ ಮಾರ್ಚ್ 2021 ಸಂಚಿಕೆಯಲ್ಲಿ ಈ ಕುರಿತು ಕವಿತಾ ಚರಂಜಿ ಅವರ ಲೇಖನವಿದೆ. ಗುರುಗ್ರಾಮದ ಅರಣ್ಯವೀಗ ಬೆಳೆದಿದೆ, ಆದರೆ ಅದು ಉಳಿಯುತ್ತದೆಯೇ ಎಂಬ ಆತಂಕದ ದನಿಯೊಂದಿಗೆ ಈ ಬರಹ ಮೂಡಿಬಂದಿದೆ. ಗುರುಗ್ರಾಮವಿರುವುದು ಹರ್ಯಾಣ ರಾಜ್ಯದಲ್ಲಾದರೂ ಅದು ದೆಹಲಿಗೆ ಹೊಂದಿಕೊಂಡಿರುವ ಪ್ರದೇಶ. ಇತ್ತೀಚಿನವರೆಗೂ ಅದು ಗುಡ್ ಗಾಂವ್.

2016ರಲ್ಲಿ ಗುರುಗ್ರಾಮವೆಂದು ಮರು ನಾಮಕರಣ. ಇಸವಿ 2009. ‘ಪಾಳುಬಿದ್ದಿರುವ ಈ ಜಾಗದಲ್ಲಿ ನಾವು ಪಾರ್ಕ್ ನಿರ್ಮಿಸುತ್ತೇವೆ’ ಎಂಬ ಮನವಿಯೊಂದಿಗೆ ಲತಿಕಾ ತುಕ್ರಾಲ್, ಸ್ವಂಝಲ್ ಕಕ್ ಕಪೂರ್ ಹಾಗೂ ಅಂಬಿಕಾ ಅಗರ್ವಾಲ್ ಅಲ್ಲಿನ ಪುರಸಭೆಯ ಆಯುಕ್ತ ರಾಜೇಶ್ ಖುಲ್ಲರ್ ಅವರಿಗೆ ಮನವಿ ಸಲ್ಲಿಸುವುದರೊಂದಿಗೆ ಈ ಹಸಿರು ಕಥೆ ಆರಂಭವಾಗುತ್ತದೆ.

ಈ ಮೂವರು ಸ್ಥಾಪಿಸಿದ ಬಳಗದ ಹೆಸರು ‘ನಾನು ಗುಡ್ ಗಾಂವ್’ – I am Gurgaon (IAG). ಇದರ ಪ್ರಸ್ತಾವಕ್ಕೆ ಆಯುಕ್ತರಿಂದ ಹಸಿರು ನಿಶಾನೆ ಸಿಗುವುದು ತಡವಾಗಲಿಲ್ಲ. ಐಎಜಿ ವಿವಿಧ ಇಲಾಖೆಗಳು, ಕಂಪೆನಿಗಳು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ಉಮೇದಿನಿಂದ ಕಾರ್ಯಕ್ಕಿಳಿಯಿತು. ಹರ್ಯಾಣ ಅರಣ್ಯ ಅಭಿವೃದ್ಧಿ ನಿಗಮ ಒಂದಿಷ್ಟು ಮೂಲಭೂತ ಕೆಲಸಗಳನ್ನು ಮಾಡಿ ಸ್ಥಳೀಯವೆನಿಸಿದ ಕೆಲವೊಂದು ಗಿಡಗಳನ್ನೂ ನೆಟ್ಟಿತು.

2010ರಲ್ಲಿ ‘ಅರಾವಳಿ ಬಯೋಡೈವರ್ಸಿಟಿ ಪಾರ್ಕ್’ ಉದ್ಘಾಟನೆಯೂ ನೆರವೇರಿತು. ಆದರೆ ಈ ವೃಕ್ಷಾಂದೋಲನ ನೆಲ ಕಚ್ಚಲು ಹೆಚ್ಚು ತಡವಾಗಲಿಲ್ಲ. ‘ಒಂದು ಲಕ್ಷ ಗಿಡ ನೆಡುವುದು ಸುಲಭವಲ್ಲ; ಜತೆಗೆ ಒಂದು ಖಚಿತ ಉದ್ದೇಶ ಮತ್ತು ದೂರಾಲೋಚನೆ ಕೂಡ ಮುಖ್ಯ’ ಎಂಬ ಹಿತಮಾತಿನೊಂದಿಗೆ ಆಗ ಕೈಜೋಡಿಸಿದವರು ವಿಜಯ್ ಧಸ್ಮಾನ. ಅವರೊಬ್ಬ ಪಕ್ಷಿಪ್ರೇಮಿ-ಛಾಯಾಗ್ರಾಹಕ. ಪಾರ್ಕ್ ಯೋಜನೆಗೆ ಬ್ರೇಕ್ ಹಾಕಿದ ತಂಡ ಒಡನೆಯೇ ಅರಾವಳಿ ಶ್ರೇಣಿಯ ಬೇರೆಬೇರೆ ಕಾಡುಗಳಿಗೆ ಭೇಟಿನೀಡಿ ಅಲ್ಲಿನ ಜೀವವೈವಿಧ್ಯವನ್ನು ಅಭ್ಯಸಿಸಿತು.

ಖುಲ್ಲರ್ ನಂತರ ಆಯುಕ್ತರಾಗಿ ಬಂದ ಸುಧೀರ್ ರಾಜ್ ಪಾಲ್ ಅವರಿಗೂ ಹಸಿರು ಕಾಳಜಿ ಇತ್ತು. ಅಧ್ಯಯನಕ್ಕೆ ಖುದ್ದಾಗಿ ಸಾಥ್ ನೀಡಿದರು. ಆಗ ಅರ್ಥವಾದದ್ದೆಂದರೆ ‘ನಾವು ಯಾವ್ಯಾವುದೋ ಗಿಡಗಳನ್ನು ಬೆಳೆಸುವುದರಿಂದ ಪ್ರಯೋಜನವಿಲ್ಲ. ಬದಲು ಅರಾವಳಿಯದ್ದೇ ಸಸ್ಯ ಸಂಕುಲನವನ್ನು ನೆಚ್ಚಿಕೊಳ್ಳಬೇಕು.’ ಅಲ್ಲಿನ ಗಿಡಕಂಟಿಗಳು, ಹುಲ್ಲು ಪೊದರುಗಳು, ಕಲ್ಲು ಬಂಡೆಗಳ ನಡುವೆ ಬೆಳೆಯುವ ಮರಗಳು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ತಂಡ ಅರಾವಳಿಯದ್ದೇ ಆದ ಸುಮಾರು 200 ಗಿಡಮರಗಳನ್ನು ಪಟ್ಟಿಮಾಡಿತು. ಆ ಪೈಕಿ ಕೆಲವು ಪ್ರಭೇದಗಳು ತುಂಬ ಅಪರೂಪವಾಗಿದ್ದವು. ಅವುಗಳ ಗಿಡಗಳು ಸರ್ಕಾರಿ ಅಥವಾ ಖಾಸಗಿ ನರ್ಸರಿಗಳಲ್ಲೂ ಸಿಗುತ್ತಿರಲಿಲ್ಲ.

ತಂಡದ ಸದಸ್ಯರು ಅರಾವಳಿಯ ಸಸ್ಯ ವೈವಿಧ್ಯವನ್ನೆ ಗುರುಗ್ರಾಮದಲ್ಲಿ ಬೆಳೆಸಲು ಮುಂದಾದರು. ಪಾರ್ಕಿನೊಳಗೆಯೆ ನರ್ಸರಿ ಸ್ಥಾಪಿಸಿ, ತಾವು ಪಟ್ಟಿ ಮಾಡಿದ್ದ ಗಿಡಗಳನ್ನು ಬೆಳೆಸಿ ಆಯಾ ಜಾಗಕ್ಕೆ ಸೂಕ್ತವಾದ ಗಿಡವನ್ನು ನಾಟಿ ಮಾಡಿದರು. ಕ್ರಮೇಣ ನೈಸರ್ಗಿಕ ಕಾಡು ರೂಪುಗೊಳ್ಳತೊಡಗಿತು. ಜತೆ ಜತೆಯಲ್ಲೆ ಅರಾವಳಿಯಲ್ಲಿ ನೈಸರ್ಗಿಕವಾಗಿ ಕಂಡು ಬರುತ್ತಿದ್ದ ನಾನಾ ಪ್ರಾಣಿ-ಪಕ್ಷಿ-ಚಿಟ್ಟೆಗಳೂ ಅಲ್ಲಿ ಮನೆಮಾಡಿದವು. ಅಲ್ಲೀಗ 200ಕ್ಕೂ ಹೆಚ್ಚು ವಿಧದ ಗಿಡಮರಗಳು ಹಾಗೂ 300ಕ್ಕಿಂತ ಹೆಚ್ಚು ಬಗೆಯ ಪಕ್ಷಿಗಳಿವೆ. ನಿಸರ್ಗ ಪ್ರೇಮಿಗಳಿಗೆ ಅದೊಂದು ಮಹತ್ವದ ಅಧ್ಯಯನ ತಾಣ.

ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿನೀಡಿ ಪರಿಸರ ಪಾಠ ಕಲಿಯುತ್ತಿದ್ದಾರೆ. ಧಸ್ಮಾನ, ಸ್ವಂಝಲ್ ಮತ್ತು ತುಕ್ರಾಲ್ ಇತ್ತೀಚೆಗೆ ವನ್ಯಜೀವಿ ಸೇವಾ ಪ್ರಶಸ್ತಿಗೂ ಭಾಜನರಾದರು ಎಂಬಲ್ಲಿಗೆ ಈ ಕಥೆ ಸುಖಾಂತ್ಯವಾಗುವುದಿಲ್ಲ. ಅಲ್ಲೊಂದು ತಿರುವು ಪಡೆದುಕೊಳ್ಳುತ್ತದೆ. ಈ ಪಾರ್ಕಿನ ನಡುವೆಯೆ ಹಾದುಹೋಗುವ ಎಕ್ಸ್ ಪ್ರೆಸ್ ಹೆದ್ದಾರಿ ಯೋಜನೆಗೆ ಮತ್ತೆ ಚಾಲನೆ ಸಿಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮೊದಲು 2018ರಲ್ಲಿ ಈ ಯೋಜನೆಗೆ ಪರಿಸರವಾದಿಗಳು ಹಾಗೂ ನಾಗರಿಕರ ಪ್ರಯತ್ನದಿಂದಾಗಿ ತಡೆ ಸಿಕ್ಕಿತ್ತು.

ಅಧಿಕಾರಿಗಳು ಪ್ರವಾಸಿಗರ ಆಕರ್ಷಣೆಗಾಗಿ ಹೊಸ ಹೊಸ ಯೋಚನೆಗಳನ್ನು ಮುಂದಿಟ್ಟಾಗಲೆಲ್ಲ ಐಎಜಿ ಪ್ರಬಲ ಆಕ್ಷೇಪ ವ್ಯಕ್ತಪಡಿಸಿತ್ತು. ಇದನ್ನು ಉರಗೋದ್ಯಾನ ಅಥವಾ ಮೊಸಳೆ ಪಾರ್ಕ್ ಮಾಡಬೇಕು; ಇಲ್ಲಿ ನೈಟ್ ಸಫಾರಿ ಕಲ್ಪಿಸಬೇಕು; ಮಾತ್ರವಲ್ಲ ಇಲ್ಲೊಂದು ಸ್ಪಾ ಕೂಡ ಆರಂಭಿಸಬೇಕು(!) ಎಂಬಿತ್ಯಾದಿ ಯೋಜನೆಗಳು ಕಡತದಿಂದಾಚೆಗೆ ಬರದಂತೆ ಐಎಜಿ ನಿಗಾ ವಹಿಸಿತ್ತು. ಆದರೆ ಈಗ ಈ ಪಾರ್ಕಿನ ನಿರ್ಹಹಣೆಯನ್ನು ಖಾಸಗಿ ಕಂಪನಿಯೊಂದಕ್ಕೆ ಒಪ್ಪಿಸುವ ವದಂತಿ ಹಬ್ಬಿದ್ದು ಇದು ಇಡೀ ಅರಣ್ಯಪ್ರದೇಶದ ಸುಸ್ಥಿರ ಬೆಳವಣಿಗೆಯ ಹಾದಿಯಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಐಎಜಿ ಜಾಲತಾಣ – http://www.iamgurgaon.org/ ಇದರಲ್ಲಿ Making of a City Forest ಎಂಬ ಪುಸ್ತಕದ ಪಿಡಿಎಫ್ ಕೂಡ ಲಭ್ಯವಿದ್ದು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಅದರ ಲಿಂಕ್ ಇಲ್ಲಿದೆ – https://iamgurgaon.org/portfolio/abdp/

ಐಎಜಿ ಫೇಸ್ ಬುಕ್ ಪುಟ – https://www.facebook.com/IAMGURGAON/

ಸಿವಿಲ್ ಸೊಸೈಟಿ ಪತ್ರಿಕೆಯ ಜಾಲತಾಣ – www.civilsocietyonline.com

ಪಿಪ್ಲಾಂತಿ ಪುಸ್ತಕಕ್ಕಾಗಿ – https://booksloka.com/product/piplantri/

‍ಲೇಖಕರು Avadhi

March 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: