ಅಯ್ಯೋ ಮನುಷ್ಯ…

 ಕಲಗಾರು ಲಕ್ಷ್ಮೀನಾರಾಯಣ ಹೆಗಡೆ

ಊರಿನಲ್ಲೆಲ್ಲಾ ಗುಲ್ಲು. ಜನಿಸಿದ ಮಗುವಿಗೆ ಬಾಲವಿಲ್ಲ. ಮೈಯಲ್ಲಿ ರೋಮವೂ ಇಲ್ಲ. ಕೈಕಾಲು ನೀಟಾಗಿದೆಯಂತೆ. ಮಗುವನ್ನು ಕಂಡ ಮಂಗಮ್ಮ ಮೂರ್ಛೆ ಹೋಗಿದ್ದಾಳಂತೆ. ಮಂಗಪ್ಪ ಯಾರಿಗೂ ಮುಖ ತೋರಿಸದೆ ಒಳ ಕೋಣೆಯಲ್ಲಿ ಮುಗುಮ್ಮಾಗಿ ಕೂತಿದ್ದಾನಂತೆ.

ಹರಡಿದ ಅಂತೆ ಕಂತೆಯ ಸುದ್ದಿಯನ್ನು ಅರಸಿ ಮನೆಯ ಹತ್ತಿರ ಹೋದರೆ- ಅಲ್ಲಿ ಜನಗಳ ಗುಂಪು ಸೇರಿದೆ. ಎಚ್ಚರ ತಪ್ಪದಿದ್ದರೂ ಮಂಗಮ್ಮನ ಕಣ್ಣಲ್ಲಿ ನೀರಾಡಿದೆ. ಕಲಿಗಾಲ ಇನ್ನೇನು ಕಾದಿದೆಯೋ ಎಂಬ ಉದ್ಘಾರದ ಮಾತುಗಳು, ಬದುಕಿ ಬಳ್ಳಿ ಹರಿದರೆ “ಮದ್ವೆ ಹಬ್ಬ ಹೆಂಗೋ” ಎಂಬ ಮುಂದಿನ ತವಕದ ಮಾತುಗಳು ಕೇಳುತ್ತಿತ್ತು. ಇದಾದ ಎರಡನೆಯ ದಿನಕ್ಕೆ ಮರಿ ಮಂಗಣ್ಣನ ಹೆಂಡತಿ ಹಡೆದರೂ, ಹುಟ್ಟಿದ ಶಿಶುವಿಗೆ ಬಾಲವಿಲ್ಲ. ರೋಮವಿಲ್ಲ!

ಬಸಿರು ಹೆಣ್ಣುಗಳು ಹೊಟ್ಟೆ ನೀವಿಕೊಂಡವು. ದೇವರೇ ಕುರೂಪಿಯನ್ನು ಹುಟ್ಟಿಸಬೇಡ ಎಂದು ಮೊರೆ ಇಟ್ಟವು.

ಆಂಜನೇಯ ದೇವಸ್ಥಾನಕ್ಕೆ ಪವಮಾನ ಅಭೀಷೇಕವೂ ಆಯಿತು. ಅರಣ್ಯ ಕಾಂಡ ಪಾರಾಯಣವೂ ಆಯಿತು.

ಆದರೆ ಬಸಿರು ಹೆಣ್ಣುಗಳು ಹೆತ್ತವು. ಹುಟ್ಟಿದ ಎಲ್ಲಾ ಶಿಶುಗಳಿಗೂ ಬಾಲವಿಲ್ಲ. ರೋಮವಿಲ್ಲ.

ಸುತ್ತಮುತ್ತ ಹದಿನಾರಳ್ಳಿಯಲ್ಲಿಯೂ ಅದೇ ಕತೆ. ಒಬ್ಬಿಬ್ಬರು ಹುಟ್ಟಿದ ಶಿಶುವನ್ನು ಕಲ್ಲು ಕಟ್ಟಿ ಹೊಳೆಯಲ್ಲಿ ಮುಳುಗಿಸಿದ ಸುದ್ದಿ ಕೇಳಿ ಬಂದರೂ ಆ ಕ್ರೌರ್ಯ ಎಲ್ಲರಿಂದಲೂ ಆಗಲಿಲ್ಲ. ಹೆತ್ತ ಮಗು ಕುರೂಪಿ ಎಂದು ಉಳಿದವರು ಭಾವಿಸಿದರೂ ಹೆತ್ತ ಕರುಳುಗಳು ಹೇಗಿದ್ದರೂ ಅಪ್ಪಿ ಮುದ್ದಾಡಿದವು.

ಒಂದಿಷ್ಟು ಹೆಣ್ಣು ಶಿಶು, ಗಂಡು ಶಿಶು-ಹೊಸ ಜನಾಂಗದ ಸೃಷ್ಟಿಕ್ರಿಯೆ ನಡೆದಂತೆ ಗಂಡು-ಹೆಣ್ಣು ಶಿಶುಗಳು ಹುಟ್ಟುವ ಅದ್ಭುತ ನಡೆದಿತ್ತು.

ನೋಡು ನೋಡುತ್ತಿದ್ದಂತೆಯೇ ಮಕ್ಕಳು ಬೆಳೆದವು. ಹರೆಯಕ್ಕೂ ಕಾಲಿಟ್ಟವು. ತಂದೆ ತಾಯಿಯರು ಬಾಲವಿಲ್ಲದ ಮಗನಿಗೆ ಬಾಲವಿಲ್ಲದ ಸೊಸೆಯನ್ನೇ ಹುಡುಕಿ ಅನುರೂಪ ಜೋಡಿಯನ್ನೇ ಅರಸಿ ಮದುವೆ ಮಾಡಿದರು.

ಸೃಷ್ಟಿ ಕಾರ್ಯ ನಿರಂತರ ಸಾಗಿತ್ತು. ಅಪ್ಪ ಅಮ್ಮನಂತೆ ಮಕ್ಕಳು ಹುಟ್ಟಿದವು.

ಅಜ್ಜ-ಅಜ್ಜಿಯರನ್ನು ಕಂಡ ಮೊಮ್ಮಕ್ಕಳು ಬೆಚ್ಚಿ ಬಿದ್ದವು. ಮಂಗ ಎಂದು ಅತ್ತು ಕೂಗಿದವು. ಅವುಗಳ ಕೂಗಿಗೆ ಎಚ್ಚೆತ್ತ ತಂದೆ ತಾಯಿಯರು ನಿಮ್ಮನ್ನು ಕಂಡು ಮಕ್ಕಳು ಹೆದರುತ್ತವೆ. ಹತ್ತಿರ ಬರಬೇಡಿ ಎಂದು ಅಪ್ಪ ಅಮ್ಮನನ್ನು ಓಡಿಸಿದವು.

ಕಾಡಿನಲ್ಲಿ ಹೀಗೆ ಓಡಿ ಬಂದವರದೇ ಗುಂಪು. ಎಲ್ಲರದೂ ಒಂದೇ ಕತೆ. ತಮ್ಮ ಮಕ್ಕಳೇ ತಮ್ಮ ಮೊಮ್ಮಕ್ಕಳ ಹೆಸರಿನಿಂದ ಓಡಿಸಿದ್ದಾರೆ. ಊರಿಲ್ಲ, ಮನೆಯಿಲ್ಲ, ಇನ್ನು ಕಾಡೇ ಗತಿ!

‍ಲೇಖಕರು nalike

June 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. kusum gopinath

    ತುಂಬ ಚೆನ್ನಾಗಿದೆ ನಿಮ್ಮ ಮೆಟಫಾರಿಕಲ್ ಕವಿತೆ /ಲೇಖನ. ಒಂದು ಪ್ರಹಸನ ದಂತಿದೆ .ನಾಟಕವಾಗಿ ಪರಿವರ್ತಿಸಿದರೆ ಮಜವಾಗಿರುತ್ತೆ. ಹಾಗೆಯೇ ಅಲ್ಲಿರುವ ವಿಷಾದದ ಛಾಯೆ ನಮ್ಮನ್ನು ಕಾಡುತ್ತದೆ
    ಕುಸುಮ್‌ ಗೊಪಿನಾಥ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: