ಅಯ್ಯೋ.. ಅವರೇ ತೇಜಸ್ವಿ!!

question mark

 

 

 

 

ದರ್ಶನ್ 

ಬಹುಷಃ ೨೦೦೩ನೇ ಇಸವಿ ಇರಬೇಕು. ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಹಕ್ಕಿಗಳ ಚಿತ್ರಪ್ರದರ್ಶನ, ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಇರುವುದರ ಜಾಹೀರಾತು ಪ್ರಕಟವಾಗಿತ್ತು .

ತೇಜಸ್ವಿಯವರು ನಮಗೆ ಬರಹಗಾರರಾಗಿ ತುಂಬಾ ಚೆನ್ನಾಗಿ ಆಗಲೇ ಗೊತ್ತಿದ್ದರು. ಹೈಸ್ಕೂಲಿನಲ್ಲಿ ಅವರ “ಸುಸ್ಮಿತಾ ಮತ್ತು ಹಕ್ಕಿಮರಿ” ಪಾಠವಿತ್ತು , ನಮಲ್ಲಿ ಕೆಲವರು ಅಷ್ಟುಹೊತ್ತಿಗೆ ಆವರ ಪರಿಸರದ ಕಥೆ , ಕರ್ವಾಲೋ, ಚಿದಂಬರ ರಹಸ್ಯ ಮುಂತಾದ ಕೃತಿ ಗಳನ್ನೂ ಓದಿದ್ದೆವು. ಇಷ್ಟೆಲ್ಲಾ ಇದ್ದರೂ ಒಬ್ಬ ಅನೂಹ್ಯ ಛಾಯಾಗ್ರಾಕರಾಗಿ ಅವರ ಬಗ್ಗೆ ಕೇಳಿದ್ದು ಮಾತ್ರ , ಅವರನ್ನು ನೋಡುವ ಅವಕಾಶ ಒದಗಿಬಂದಿರಲಿಲ್ಲವಾದ್ದರಿಂದ ತಡಮಾಡದೆ ಅಂದಿನ ಸಂಜೆಯೇ ಕಲಾಪರಿಷತ್ತಿಗೆ ಹೋಗುವ ನಿರ್ಣಯ ಮಾಡಿದೆವು.

ನಮ್ಮ ಕಾಲೇಜು ಕೆಂಗೇರಿಯ ಬಳಿ ಇದ್ದುದ್ದರಿಂದ ಎರೆಡೆರಡು ಬಸ್ಸುಹಿಡಿದು ಹೋಗಬೇಕಿತ್ತು. ಮೊದಲು ಮೆಜೆಸ್ಟಿಕ್ ಗೆ ನಂತರ ಅಲ್ಲಿಂದ ಚಿತ್ರಕಲಾ ಪರಿಷತ್ತಿಗೆ ಬಂದಿಳಿದಾಗ ಕೆಲವು ಸರ್ಕಾರಿ ವಾಹನಗಳು ಹೊರಗಡೆ ಕಂಡವು . ಹೊರಬಾಗಿಲಿನಲ್ಲಿ ಗಡ್ಡ ಬಿಟ್ಟವರೊಬ್ಬರು ಖಾದಿ ಹಾಕಿದ್ದ ಮತ್ತೊಬ್ಬರ ಜೊತೆಯಲ್ಲಿ ಮಾತಿನಲ್ಲಿದ್ದರು, ನಾನು ವಯೋಸಹಜ ಕದ್ದಾಲಿಕೆ ಮಾಡಿದ್ದರಿಂದ ಅವರ ಮಾತು ಗಂಬೀರವಾಗಿತ್ತು ಅನ್ನಿಸಿತು! ಆಮೇಲೆ ತಿಳಿದದ್ದು ಗಡ್ಡ ಬಿಟ್ಟವರು ಆಗಿನ ಪರಿಷತ್ತಿನ ಅದ್ಯಕ್ಷರಾದ ಡಿ ಕೆ ಚೌಟರು ಮತ್ತು ಜುಬ್ಬದಲ್ಲಿದ್ದ ರಾಜಕಾರಣಿ ಚಿಕ್ಕಮಗಳೂರಿನ ಬಿ ಎಲ್ ಶಂಕರ್ ರವರೆಂದು!. ಕೆಲವರು ಅಂದುಕೊಳ್ಳುತಿದ್ದರಂತೆ ಯಾರಕೈಗೂ ಸಿಕ್ಕದ ತೇಜಸ್ವಿಯವರು, ಬಿ ಎಲ್ ಶಂಕರ್ ಕೈಗೆ ಸುಲಭವಾಗಿ ಸಿಕ್ಕುತ್ತಾರೆ ಎಂದು. ಇದಕ್ಕೆ ಅವರ ಸಜ್ಜನಿಕೆ ಆಥವಾ ಕಲಾಸಕ್ತಿ ಕಾರಣವಿರಬಹುದು !

ಪ್ರದರ್ಶನದ ಹಾಲು ನಿಶಬ್ಧವಾಗಿತ್ತು. ಅದು ನಾನು ನೋಡುತ್ತಿದ್ದ ಮೊದಲ ಚಿತ್ರಪ್ರದರ್ಶನವಾದುದರಿಂದ ಉತ್ಸಾಹಿತನಾಗಿದ್ದೆ!. ಬೆಳಕಿನ ಸಂಯೋಜನೆ ತುಂಬಾ ಹಿಡಿಸಿತು. ಗೋಡೆಯ ಮೇಲೆ ತೇಜಸ್ವಿಯವರು ಖುದ್ದು ತೆಗೆದ ಹಕ್ಕಿಪಕ್ಷಿಗಳ ಚಿತ್ರಗಳು!. ತಾಯಿ ಹಕ್ಕಿ ಮರಿಗೆ ತುತ್ತನಿಡುವುದು, ಚಿಕ್ಕದೊಂದು ಪೊಟರೆ ಮೇಲೆ ಹಕ್ಕಿಯೊಂದು ಚೀರುತ್ತಿರುವುದು, ಕ್ರೇನ್ ಹಕ್ಕಿಯೊಂದು ಮೀನು ಹಿಡಿದುದು ಹೀಗೆ ಹತ್ತು ಹಲವು ಚಿತ್ರಗಳ ನಡುವೆ ನಮಗೊಂದು ಆಶ್ಚರ್ಯ ಕಾದಿತ್ತು !

ನಮಗಿಂತಾ ವಯಸ್ಸಿನಲ್ಲಿ ಒಂದೆರಡು ವರುಷಕ್ಕೆ ಚಿಕ್ಕವನಿದ್ದ ಹುಡುಗನೊಬ್ಬ ಬಿಳಿಹಾಳೆಯ ಪುಸ್ತಕೊಂದರಲ್ಲಿ ಚಿತ್ರಗಳಲ್ಲಿದ್ದ ಪಕ್ಷಿಗಳನ್ನು ಪೆನ್ಸಿಲ್ಲಿನಲ್ಲಿ ಬಿಡಿಸುತ್ತಿದ್ದ! ನನಗೆ ಆಶ್ಚರ್ಯವಾಗಿ “ಏಕೆ ??” ಎಂದೆ ! ಅದಕ್ಕವನು ಸಹಜವಾಗಿ ಮತ್ತು ಸಲೀಸಾಗಿ “ಹಾಬಿ” ಅಂದ ! ಆಗಿನ್ನೂ ಎಲ್ಲರ ಕೈಗಳಲ್ಲಿ ಮೊಬೈಲ್ ಫೋನುಗಳು ಇರಲಿಲ್ಲ ಮತ್ತು ಒಂದುವೇಳೆ ಇದ್ದರೂ ಅದಕ್ಕೆ ಒಳಗೆ ಅವಕಾಶವಿರಲಿಲ್ಲ. ಆ ಹುಡುಗ ಅದಾಗಲೇ ಐದರಿಂದ ಆರು ಪಕ್ಷಿಗಳ ಚಿತ್ರಗಳನ್ನು ಬಿಡಿಸಿದ ಹುಮ್ಮಸ್ಸಿನಲ್ಲಿದ್ದ! ಸ್ವಲ್ಪ ಆವನ ಬಗ್ಗೆ ವಿಚಾರಿಸಿದೆ, M E S ವಿಜ್ಞಾನ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿ ಎಂದು ತಿಳಿಯಿತು! ವಿಜ್ಞಾನ ಮತ್ತು ಚಿತ್ರಕಲೆ ಎಲ್ಲಿಯನಂಟು? ಪ್ರೈವೇಟ್ ಟ್ಯೂಶನ್ ಬಿಟ್ಟು ಇಲ್ಲಿ ಏಕೆ ಬಂದೆ ಮರುಳ ಎನ್ನಬೇಕು ಆನಿಸಿತು, ಅನ್ನಲಿಲ್ಲ! ತೇಜಸ್ವಿಯವರೂ ಕಾಲೇಜಿನಲ್ಲಿ ವಿಜ್ಞಾನವನ್ನೇ ಆರಿಸಿಕೊಂಡಿದ್ದರೂ ನಂತರ ಕಾರಣಾ೦ತರಗಳಿಂದ B.A ನಲ್ಲಿ ಕಲೆ ಕಡೆಗೆ ವಾಲಿದ್ದರು.

ಹೀಗೇ ಎಲ್ಲ ಚಿತ್ರಗಳ್ನೂ ನೋಡಿಕೊಂಡು ಬರುವಾಗ ನನಗನ್ನಿಸಿದ್ದು ಈ ತೆರೆನಾದ ಚಿತ್ರಗಳನ್ನು ತೆಗೆಯಬೇಕಾದರೆ ಲಕ್ಷಾಂತರ ರೂಪಾಯಿ ಮೌಲ್ಯದ ಕ್ಯಾಮೆರಾಗಳು ಬೇಕಾಗಬಹುದೆಂದು! ಅದು ಆಗ ನನಗೆ ಗಗನಕುಸುಮವಾಗಿದ್ದರಿಂದ ( ಈಗೂ !!!) ಫೋಟೋಗಳನ್ನು ಆಸ್ವಾದಿಸಿ ಫೋಟೋಗ್ರಫಿಯನ್ನು ಮನಸಲ್ಲೇ ನಿಂದಿಸಿಕೊಂಡು ಹೊರಬಂದರೆ ಮತ್ತೊಂದು ಅಚ್ಚರಿ ಕಾದಿತ್ತು ! ಅಲ್ಲೊಂದಷ್ಟು ಜನ ಸೇರಿದ್ದರು, ಅವರ ಮಧ್ಯೆ ಇದ್ದ ಅರವತ್ತರ ಆಸುಪಾಸಿನ ವ್ಯಕ್ತಿಯೊಬ್ಬರ ಸಂದರ್ಶನ ನಡೆಯುತ್ತಿತ್ತು. ಹತ್ತಿರವಾದಾಗ ಜನ ಅವರನ್ನು ಸಂಬೋಧಿಸುತ್ತಿದ್ದ ರೀತಿಯಿಂದ ತಿಳಿದದ್ದು ನಮ್ಮ ತಲೆಮಾರಿನ ಯುವಕ ಯುವತಿಯರನ್ನು ಸಾಹಿತ್ಯದ ಓದಿಗೆ ಹಚ್ಚಿದ, ವಿಜ್ಞಾನವನ್ನು ಇಂಟರೆಸ್ಟಿಂಗ್ ಆಗಿಸಿದ, ಕಾಡುಗಳ ಬಗ್ಗೆ ಭಯ ಓಡಿಸಿ ಪ್ರೀತಿ ಹುಟ್ಟಿಸಿದ, ನಮ್ಮಸುತ್ತಲಿನ ಪರಿಸರದ ಬಗ್ಗೆ, ಜನರ ಬಗ್ಗೆ ಕುತೂಹಲ ಹೆಚ್ಚಿಸಿದ ತೇಜಸ್ವಿಯವರು ಅವರೇ ಎಂದು !!!

ಹೀಗೆ ಮೊದಲ ಬಾರಿಗೆ ತೇಜಸ್ವಿ ಸಿಕ್ಕಿದ್ದು! ಗುಂಡಗಿದ್ದರು, ಬಿಳಿಯ ಗಡ್ಡ ಮುಖಕ್ಕೆ ಒಪ್ಪುತ್ತಿತ್ತು. ಸರಳವಾದ ಕಾಟನ್ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ತೊಟ್ಟಿದ್ದರು, ಕಾಲಿಗೆ ಆಫೀಸ್ ಚಪ್ಪಲಿ ಮತ್ತು ಕಣ್ಣಿಗೆ ಕನ್ನಡಕ ಹೇಳಿಮಾಡಿಸಿದಹಾಗಿತ್ತು! ಹೆಗಲಿಗಿದ್ದ ಸೈಡ್ ಬ್ಯಾಗು ಅವರು ಕಾಂಕ್ರೀಟ್ ಕಾಡಿನಿಂದ ಮರಳಿ ಅವರ ತೋಟಕ್ಕೆ ಹೋಗುವ ಧಾವಂತವನ್ನು ಸೂಚಿಸುತ್ತಿತ್ತಾ ??? ಗೊತ್ತಿಲ್ಲ ! ಬಹುಶಃ ಅ ಬ್ಯಾಗಿನಲ್ಲಿ ಕ್ಯಾಮೆರಾ ಇತ್ತಾ ??? ಗೊತ್ತಿಲ್ಲ ! ಪುಸ್ತಕಗಳು ಇದ್ದವಾ ? ಇರಬಹುದು ! ಕೇಳುವ ಧೈರ್ಯ ಯಾರಿಗುಂಟು ? ಹೀಗೆ ಯೋಚನಾಲಹರಿ ಎಲ್ಲೆಲ್ಲೋ ಸಾಗಿದ್ದಾಗ ಹಿರಿಯರೊಬ್ಬರು ಒಂದು ಪ್ರಶ್ನೆ ಕೇಳಿದರು ಮತ್ತು ಆ ಪ್ರಶ್ನೆ ತೇಜಸ್ವಿಯವರನ್ನೂ ಪುಳಕಿತರನ್ನಾಗಿಸಿತು !

ಅದೆಂದರೆ ” ಕುವೆಂಪುರವರು ಕಾಜಾಣ ದ ಬಗ್ಗೆ ಅವರ ಕೃತಿಗಳಲ್ಲಿ ತುಂಬಾ ಕಡೆ ಉಲ್ಲೇಖಿಸಿದ್ದಾರೆ ನೀವು ಅದರ ಫೋಟೋನೇ ತೆಗೆದಿಲ್ಲವಲ್ಲ” ! ಎಂಬುದು. ಈ ಪ್ರಶ್ನೆಗೆ ತೇಜಸ್ವಿಯವರು ಸಣ್ಣಗೆ ನಕ್ಕುಹೇಳಿದರು “ಬಡ್ಡಿಮಗುಂದು ತಲೆತಪ್ಪಿಸಿಕೊಂಡು ಓಡಾಡ್ತಾ ಇದೆ !” ಆಗಿನ್ನೂ ಇಂಜಿನಿಯರಿಂಗ್ ಗೆ ಕಾಲಿಟ್ಟಿದ್ದ ನಮಗೆ ಕನ್ನಡದ ಶ್ರೇಷ್ಠ ಲೇಖಕರೊಬ್ಬರು ಹೀಗೆ ನಮ್ಮಹಾಗೆಯೇ ಮಾತನಾಡುವುದನ್ನು ನೋಡಿ ಎಲ್ಲಿಲ್ಲದ ಸಂತೋಷ !

ಮತ್ತೊಬ್ಬರು ಪತ್ರಕರ್ತೆ ಬಹುಶಃ ಡೆಕ್ಕನ್ ಹೆರಾಲ್ಡ್ ನವರಿರಬೇಕು ಇಂಗ್ಲಿಷ್ ನಲ್ಲಿ ” Sir how difficult it is to capture birds ?” ಅಂತ ಕೇಳಿದ್ದಕ್ಕೆ ತೇಜಸ್ವಿಯವರು ” You see…if you think it is difficult everything is difficult, you need to wait , i have waited for some birds for days, months, sometimes years !” ಅಂದರು .

ಕೆಲವು ಪಕ್ಷಿಗಳಿಗೆ ಕೊಬ್ಬು ಜಾಸ್ತಿಯಂತೆ ಎಲ್ಲ ಸೆಟ್ ಮಾಡಿಕೊಳ್ಳುವವರೆಗೂ ಸುಮ್ಮನಿದ್ದು ಕಡೆಗೆ ಕೈಕೊಡುತ್ತವಂತೆ ! ಮತ್ತೆ ಕೆಲವು ಸರಿಯಾಗಿ ಪೋಸು ಕೊಡುವುದಿಲ್ಲವಂತೆ ! ಇದೇ ಕಾರಣಕ್ಕೆ ಲೆನ್ಸ್ ಗಳ ಮೇಲೆ ಲಕ್ಷಾಂತರ ಸುರಿದೆ ಎಂದಾಗಲೇ ನನಗೆ ತಿಳಿದದ್ದು, ಕ್ಯಾಮೆರಾಗಿಂತ ಲೆನ್ಸ್ ಗಳೇ ದುಬಾರಿ ಅದೂ ಲಕ್ಷಗಟ್ಟಲೆ ಎಂದು !

ಮತ್ತೊಬ್ಬ ಹಿರಿಯರು ” ಈ ಫೋಟೋಗಳು ಸಂಪೂರ್ಣ ನ್ಯಾಚುರಲ್ಲೋ ಅಥವಾ ಡಿಜಿಟಲ್ ಮಾನ್ಯುಪುಲೇಶನ್ ಮಾಡುತ್ತಿರೋ ? ” ಎಂದು ಕೇಳಿದರು !!! ನಾನು ಈ ಪ್ರಶ್ನೆ ತೇಜಸ್ವಿಯವರನ್ನು ಖಂಡಿತ ಕೊಪಗೊಳಿಸುತ್ತದೆ ಅಂದುಕೊಂಡೆ ಆದರೆ ಆದದ್ದು ಬೇರೆಯೇ ! ತೇಜಸ್ವಿ ” ಹೌದು ಕೆಲವೊಮ್ಮೆ ಮಾಡಬೇಕಾಗುತ್ತದೆ ” ಎಂದು ಬಿಟ್ಟರು ! ಕಡೆಗೆ ಅವರ ಕೈಕುಲುಕಿ, ಒಂದೆರಡು ಚಿಕ್ಕ ಸೈಜಿನ ಹಕ್ಕಿ ಗಳ ಫೋಟೋ ಖರೀದಿಸಿ ಹೊರಡುವಾಗ ಹಕ್ಕಿಚಿತ್ರ ಬಿಡಿಸುತ್ತಿದ್ದ ಹುಡುಗ ಇನ್ನೂ ಕಾರ್ಯಮಗ್ನನಾಗಿದ್ದ ! ಅವನ ಹುಮ್ಮಸ್ಸು ನೋಡಿ ಖುಷಿಯಾಯಿತು , ತೇಜಸ್ವಿಯವರ ಬಗೆಗಿನ ಪ್ರೀತಿ ಮತ್ತು ಸೆಳೆತ ಇಮ್ಮಡಿಯಾಯಿತು ಮತ್ತು ಆ ಪ್ರದರ್ಶನಕ್ಕೆ ಅವರು ಇಟ್ಟ ಹೆಸರು ” ಹಾರಾಡುವ ಹಾಡುಗಳು ” ಅತೀ ಸೂಕ್ತ ಅನ್ನಿಸಿತು.

‍ಲೇಖಕರು Admin

February 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. Veeerabhadrappa

    Bahala chennagide vivarisiddeya ninu anubhavisida poornachandra tejaswiyanna.

    ಪ್ರತಿಕ್ರಿಯೆ
  2. dr.ramakrishna

    very goood darshan..,neenu vivarisiddu keli nanguuu tejaswi avarannu noduva aasay aagidhe..,you are lucky

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: