ಬುದ್ಧ ನಿನ್ನೊಂದಿಗೆ ಮಾತನಾಡಬಹುದೆ?
ನಂ.ಪಾರ್ವತಿ
ಅಯ್ಯಾ ಬುದ್ಧ,
ಎಲ್ಲರ ಮಾತ ಕೇಳುವೆಯಂತೆ ನೀನು
ವಟಗುಡುವ ಜೀವ ನನ್ನದು
ನಿನ್ನೊಂದಿಗಿಷ್ಟು ಮಾತನಾಡಬಹುದೆ?
ನನ್ನನೊಮ್ಮೆ ಕನಿಕರಿಸಿ ಆಲಿಸಯ್ಯ
ಆಲಿಸುವುದೆನಗೂ ಕಲಿಸಯ್ಯ.
ನೆಲ-ಜಲ ಭೇದವಿಲ್ಲದೇ
ತಿರುಗುವ ಜೀವಿ ನಾನು
ಕಲ್ಲಿನಂತೆ ಕುಳಿತಿರುವ ನೀನು
ಧ್ಯಾನದಲ್ಲಿ ಮುಳುಗಿರುವೆಯಂತೆ
ನನಗೆ ನನ್ನ ನೆಲೆ ಯಾವುದು ತೋರಯ್ಯ.
ನೀನು ಕಣ್ತೆರದು
ನೋಡಿದ್ದಕ್ಕಿಂತ
ಕಣ್ಮುಚ್ಚಿ ಕಂಡದ್ದೇ
ಹೆಚ್ಚಿರಬೇಕು
ಒಮ್ಮೆ ಕಣ್ತೆರೆದು ನೋಡಿ
ನನಗೆ ನನ್ನ ಕಾಣಿಸಯ್ಯ.
ನೀನು ಮಾತನಾಡಿ
ಮೈಮರೆತದ್ದಕ್ಕಿಂತ
ಆಲಿಸಿ ಆಲಂಗಿಸಿದ್ದೇ
ಮಿಗಿಲಿರಬೇಕು
ನನ್ನ ಮಾತೊಮ್ಮೆ ಆಲಿಸಿ
ನನ್ನಂತರಂಗದ ಮಾತ
ನಾನರಿವ ಬೆಳಕ ನೀಡಯ್ಯ.
ನಿನ್ನಂತರಂಗವೇನೋ
ಅದರ ಚಂದವೇನೋ
ಕಾಣುವಾಸೆಯಾಗಿದೆ
ನನ್ನಂತರಂಗವನೊಮ್ಮೆ ಹೊಕ್ಕು
ನಿನ್ನಂತರಂಗವ ಸೇರುವ
ಹಾದಿಯ ತೋರಯ್ಯ.
ಹಿಡಿದ ಹಾದಿಯ
ಬಿಡದೇ ನಡೆವ
ದಾರಿಯ ತೋರಯ್ಯ…
ಬಗೆಯ ಕರುಣಿಸಯ್ಯ…
ಒಮ್ಮೆ ನನ್ನ ನನಗೆ ತೋರಿ
ನಸುನಕ್ಕು ನಡೆದುಬಿಡಯ್ಯ.





Koneyalli “Koodalasangamadeva” Serisuvudanna Martideera Ansatte…:-)
ಕರೆಕ್ಟ್ !!