ಅಶ್ವತ್ಥ

ಗುಲ್ಜಾರ್

ಕನ್ನಡಕ್ಕೆ : ಲಕ್ಷ್ಮೀಕಾಂತ ಇಟ್ನಾಳ
ಅಂಗಳದಲ್ಲಿ ಎಷ್ಟೊಂದು ಹೊಲಸು ಮಾಡುತ್ತದೆ ಈ ಅಶ್ವತ್ಥ ಮರ ಅಂದರೆ
ಅಮ್ಮನಿಗೆ ದಿನದಲ್ಲಿ ಎರಡೆರಡು ಬಾರಿ ಪೊರಕೆ ಹಿಡಿಯಬೇಕಾಗುತ್ತದೆ
ಯಾರ್ ಯಾರೋ ಗೆಳೆಯರು ಬರ್ತಾರ ಇದರದ್ದು
ತಿನ್ನಲಿಕ್ಕೆ ಇದು ತನ್ನ ಹಣ್ಣು ನೀಡುತ್ತದೆ
ಇಡೀ ದಿನ ರೆಂಬೆ ಮೇಲೆ ಕುಳಿತು ಗಿಳಿನೋ, ಗೂಗೆನೋ…
ಅರ್ಧರ್ಧ ತಿಂದು, ಇನ್ನರ್ಧ ಹಾಳುಗೆಡವುತ್ತವೆ
ಗಿಟಕ-ಪಟಕ ಎಲ್ಲಾ ಅಂಗಳದಲ್ಲಿಯೇ ಚಲ್ಲಾಡಿ ಹೋಗುತ್ತವೆ
ಒಂದು ಟೊಂಗೆಯ ಮೇಲೆ, ಹಕ್ಕಿಗಳೂ ಸಹ ಮನೆ ಕಟ್ಟಿಕೊಂಡಿವೆ
ಅಂಗಳದಲ್ಲಿ ದಿನವೆಲ್ಲವೂ ಹುಲ್ಲು ಕಡ್ಡಿಗಳನ್ನು ಹರಗುತ್ತಲೇ ಇರುತ್ತವೆ…
ಅಳಿಲೊಂದು ನಸುಕಿನಿಂದ ಸಂಜೆಯ ತನಕ,
ಅದೇನು ಅವಸರವೋ ಕಾಣೆ–
ಓಡೋಡುತ್ತಲೇ ಹತ್ತಾರು ಬಾರಿ ಎಲ್ಲಾ ರೆಂಬೆಗಳನ್ನೂ ಸುತ್ತಾಡಿ ಬರುತ್ತದೆ
ಹದ್ದೊಂದು ತುದಿಯ ಟೊಂಗೆಯ ಮೇಲೆ ಕುಳಿತು,
ತನ್ನೊಡನೆಯೇ ಮಾತಾಡುತ್ತಿರುತ್ತದೆ, ತಲೆ ಕೆಟ್ಟವರಂತೆ!
ಅಕ್ಕ ಪಕ್ಕದಿಂದ ಎರಗಿ, ಕಸಿದು, ಎಲುವು ಮಾಂಸದ ತುಂಡು ತಂದು
ಈ ಅದೃಷ್ಟಗೇಡಿ ಕಾಗೆಗಳಿಗೆ ಜಗಿಯಲು
ಈ ಅಶ್ವತ್ಥಮರದ ಟೊಂಗೆಯೇ ಆಗಬೇಕೇ!
`ಹುಶ್ ಹುಶ್’ ಎಂದು ಅಮ್ಮ ಬೈಯ್ಯುವಾಗ ಈ ಮಾಂಸಬಡಕವೆಲ್ಲ
`ಕಾವ್ ಕಾವ್’ ಅನ್ನು ಅವಳೆಡೆಗೆ ಎಸೆದು ಹಾರಿ ಬಿಡಬೇಕೇ…
ಇಷ್ಟಾದರೂ ಸಹ ಅದೇಕೋ ಅಮ್ಮ ಹೇಳುತ್ತಾಳೆ:“ ಓ ಕಾಗೆಯೇ…
ನನ್ನ ಶ್ರಾದ್ಧದಲ್ಲಿ ಬರಬೇಕೋ ನೀನೂ! ಅವಶ್ಯ ಬಾ ಮತ್ತ್ಅಅ”!






Very nice!
beautiful………