ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮ ಪ್ರೀತಿಯ ಝರಿ ಮತ್ತು ನನ್ನೊಳಗಿನ ಬಂಡಾಯ!   

ಅಮ್ಮ- ಸದಾ ನನ್ನೊಳಗಿನ ಬಂಡಾಯ

ಸುಧಾ ಆಡುಕಳ

ಮೊದಮೊದಲು ನನಗೂ ಆಸೆಯಿತ್ತು. ಅಮ್ಮ ರಾತ್ರಿ ಕನಸಿನಲ್ಲಾದರೂ ಬಂದು ತಲೆಸವರುತ್ತಾಳೆ ಎಂದು. ಆದರೆ ಅಮ್ಮನ ಹಠ ಅದೆಂಥದ್ದೆಂದರೆ ತಪ್ಪಿಯೂ ನನ್ನ ಕನಸಲ್ಲೂ ಅವಳು ಇದುವರೆಗೂ ಬಂದಿಲ್ಲ.  ಹೋಗಲಿ ಒಮ್ಮೆ ಎದೆಗೊತ್ತಿಕೊಳ್ಳೋಣವೆಂದರೆ ಅವಳ ಒಂದೇ ಒಂದು ಭಾವಚಿತ್ರವನ್ನೂ ಅವಳು ಉಳಿಸಿ ಹೋಗಿಲ್ಲ. ಕನ್ನಡಿಯೇ ಅಪರೂಪವಾದ ಆ ಕಾಲದಲ್ಲಿ ಭಾವಚಿತ್ರದ ಕನಸು ಬಹಳ ದುಬಾರಿ ಬಿಡಿ. ಅದ್ಯಾವುದೋ ಒಂದು ದಿನ ಅಪ್ಪನ ಸಿಟ್ಟು ನೆತ್ತಿಗೇರಿ, ಸೌದೆ ಕಡಿದು ಕೊರಡಾದ ಕೈಯ್ಯಿ ಕೆನ್ನಗೆ ಛಟೀರೆಂದು ಬಾರಿಸಿ ಕೆನ್ನೆಯುಬ್ಬಿದ ಮಾರನೇ ದಿನ ಮುದ್ದು ಬಂದು ತಾಲೂಕಿನ ಕೇಂದ್ರದಲ್ಲಿದ್ದ ಒಂದೇ ಒಂದು ಸ್ಟುಡಿಯೋಗೆ ಹೋಗಿ ತೆಗೆಸಿದ್ದ ಕಪ್ಪು ಬಿಳುಪು ಚಿತ್ರವೊಂದನ್ನು ಅವಳ ಸಾವಿನ ನಂತರ ಆಳೆತ್ತರದ ಚಿತ್ರ ಬಿಡಿಸಲೆಂದು ಹಾಳು ಮಾಡಲಾಯಿತು. ಅರೆಬರೆ ಕಲಾವಿದ ಬಿಡಿಸಿದ ಆ ಚಿತ್ರ ಅಮ್ಮನದೆಂದು ಷರಾ ಬರೆದಿಡಬೇಕಷ್ಟೆ

ಕಣ್ಮುಚ್ಚಿ ನೆನಪಿಸಿಕೊಂಡರೂ ಅಮ್ಮ ಚಿತ್ರವೊಂದು ಮನಸ್ಸಿನೊಳಗೆ ಮೂಡದು. ಆದರೆ  ಅವಳ ನೆನಪುಗಳು ಮಾತ್ರ ಮುಂಗಾರಿನಲಿ ಓಡೋಡಿ ಬರುವ ಮೋಡಗಳಂತೆ ಮನದಾಗಸದ ತುಂಬೆಲ್ಲ ನೆರೆದು ಕೆಲವೊಮ್ಮೆ ಹನಿಯಾಗಿ, ಇನ್ನೊಮ್ಮೆ ಜಡಿಮಳೆಯಾಗಿ ಸುರಿಯತೊಡಗುತ್ತವೆ. ಹೌದು, ಅಮ್ಮನೆಂದರೆ ನನ್ನೊಳಗಿನ ಆರದ ಬಂಡಾಯ, ಜೊತೆಯಲ್ಲಿ ಒಡಲನ್ನು ಎಂದಿಗೂ ಹಸಿಡಿಡಲು ಬಿಡದ ಪ್ರೀತಿಯ ಕಡಲು. ಅವಳು ಇಲ್ಲವಾಗುವ ದಿನವೂ ಅಷ್ಟೆ. ಹದವಾಗಿ ಬೆಂದ ಅನ್ನ, ಘಮಘಮಿಸುವ ಸಾರು, ಒಗ್ಗರಿಸಿದ ಪಲ್ಯ, ನೆಲುವಲ್ಲಿ ತೂಗುಬಿಟ್ಟ ಬೆಣ್ಣೆ ಮುದ್ದೆ ತೇಲುವ ಮಜ್ಜಿಗೆಯ ಪಾತ್ರೆ, ಪರಿಮಳಕ್ಕೇ ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿಯ ಪಾತ್ರೆಗಳು ಒಪ್ಪವಾಗಿ ಅಡುಗೆ ಮನೆಯಲ್ಲಿ ಜೋಡಿಸಿದ್ದವು. ಮನೆಯಂಗಳ ನುಣ್ಣಗೆ ಸಗಣಿ ಸಾರಿಸಿತ್ತು. ಸಂಜೆ ಬರುವ ದನಗಳಿಗೆ ಕುಡಿಯಲು ಅಕ್ಕಚ್ಚು ಸಿದ್ಧಗೊಂಡಿತ್ತು. ಮನೆಯ ಮಣ್ಣಿನ ನೆಲ  ಅವಳ ಕೈಯ್ಯ ಸೋಕಿಗೆ ಲಕಲಕಿಸುತ್ತಿತ್ತು. ಅಮ್ಮನಿರುವುದೇ ಹಾಗೆ. ಗುಡಿಸಲೇ ಆದರೂ ಎಲ್ಲವೂ ಒಪ್ಪವಾಗಿರಬೇಕು. ಹಸಿದೊಡಲಿಗೆ ಹೊತ್ತುಹೊತ್ತಿಗೆ ರುಚಿಯಾದ ಊಟ ಸಿದ್ಧವಾಗಿರಬೇಕು. ಮನೆಗೆ ಬಂದವರು ಯಾರೇ ಆಗಿರಲಿ, ಭಿನ್ನಭೇದವಿಲ್ಲದೇ ಉಂಡು ತೇಗಬೇಕು. ಅದನ್ನು ಅವಳ ಮಾತಿನಲ್ಲೇ ಹೇಳಿದರೆ ಚಂದ, “ಎದೆಯೊಳಗಿರುವ ಪರಮಾತ್ಮ ಸಂತೋಷಪಡಬೇಕು. ಅವನೇ ದೇವರು. ಉಂಡವರು ಹರಸುವುದು ಬೇಡ, ನೊಂದವರು ಶಪಿಸುವುದ ಬೇಡ. ಇನ್ನೊಬ್ಬರ ಆತ್ಮವನ್ನು ನೋಯಿಸಬೇಡ. ಅದೇ ಪೂಜೆ” ಕೇಳಲೂ ತೀರ ಸಾಮಾನ್ಯವಾದ ಈ ಮಾತುಗಳನ್ನು ಕಡುಬಡತನದ  ಆ ದಿನಗಳಲ್ಲಿ ಆಚರಣೆಯಲ್ಲಿಡುವುದು ಅಷ್ಟೇನೂ ಸುಲಭವಾಗಿರಲಿಲ್ಲ. ಆದರದನ್ನು ಅಮ್ಮ ಕೊನೆಯತನಕವೂ ವ್ರತದಂತೆ ಪಾಲಿಸಿದಳು. ಇಡಿಯ  ಊರಿಗೆಲ್ಲ ಅಮ್ಮನೇ ಆಗಿಹೋದಳು.

ಇಡೀ ಊರೇ ನನ್ನದೆಂಬ ಅಹಂಮಿನಲ್ಲಿ  ಮನೆಯೊಳಗೇ ಕುಳಿತು, ಒಕ್ಕಲು ತಂದು ಸುರಿಯುವ ಗೇಣಿಯಲ್ಲಿ ರಾಜನಂತೆ ದರಬಾರು ನಡೆಸುತ್ತಿದ್ದ ಅಜ್ಜನಿಗೆ ಹದಿನೆಂಟೇ ಮಕ್ಕಳಾಗಲು ಕಾರಣ ಹದಿನೆಂಟನೇಯ ಮಗುವಿನ  ಜನನದ ನಂತರ ಅಜ್ಜಿಗೆ ಹುಚ್ಚು ಹಿಡಿದದ್ದು!   ಅದ್ಯಾವುದೋ ದಿನ ಮುಸ್ಸಂಜೆಯ ಹೊತ್ತಿನಲ್ಲಿ ಶೌಚಕ್ಕೆಂದು ಹೊರಗೆ ಹೋದ ಬಾಳಂತಿಗೆ ಕರಾಳ ದೆವ್ವವೊಂದು ಹೊಡೆದ ಪರಿಣಾಮವಾಗಿ ಹುಚ್ಚು ಹಿಡಿಯೆತೆಂದು ಅಪ್ಪ ನಮಗೆ ಕಥೆ ಹೇಳುತ್ತಿದ್ದರು. ಆಗೆಲ್ಲ ಅಮ್ಮ ಹೇಳುತ್ತಿದ್ದಳು, “ ಅಯ್ಯೋ, ಈ ಮುದುಕನಿಗಿಂತ ದೊಡ್ಡ ದೆವ್ವ ಬೇಕೆ?  ಹುಚ್ಚು ಹಿಡಿಯಲು” ಎಂದು. ಅಜ್ಜ ಅಂತಹ ಕಿರಿಕಿರಿಯ, ಬೇಜವಾಬ್ದಾರಿ ಮನುಷ್ಯನಾಗಿದ್ದ. ಉಳುವವನೇ ಭೂಮಿಗೊಡೆಯ ಕಾನೂನಿಂದ ಜಮೀನನ್ನೆಲ್ಲ ಕಳಕೊಂಡ ಮೇಲೆಯೇ ಅಜ್ಜ ವಾಸ್ತವಕ್ಕಿಳಿದದ್ದು. ಸಾಲು, ಸಾಲು ಮದುವೆಯಾಗದ ಹುಡುಗಿಯರು, ಬೇಜವಾಬ್ದಾರಿಯ ಮಕ್ಕಳು, ವರ್ಷಕ್ಕೊಂದರಂತೆ ಮಕ್ಕಳನ್ನು ಹಡೆದು ಹೈರಾಣಾದ ಸೊಸೆಯಂದಿರು, ಮಾತುಬಾರದ ಮೂಗ ತಮ್ಮ ಇವೆಲ್ಲದರ ನಡುವೆ ಮದುವೆಯೇ ಕನಸಾದ ದಿನಗಳಲ್ಲಿ ಆರಡಿ ಅಜಾನುಬಾಹು ಅಪ್ಪ ಐದಡಿಯ ಗೊಂಬೆಯಂತಹ ಅಮ್ಮನನ್ನು ಮರುಮಾತನಾಡದೇ ಒಪ್ಪಿ ಮದುವೆಯಾಗಿದ್ದರು. ಆದರೆ ಪುಟ್ಟ ಅಮ್ಮನ ಚೈತನ್ಯದೆದುರು ಯೋಧನಂತಹ ಅಪ್ಪ ಅದೆಷ್ಟೋ ಸಲ ಶರಣಾದುದನ್ನು ನಾನು ಗಮನಿಸಿದ್ದೆ. ಅಮ್ಮನೊಳಗೆ ಎಂದೂ ಆರದ ಅಂತಹ ಬೆಳಕಿನ ಸೆಲೆಯೊಂದಿತ್ತು.

ಬಾಯಾರಿದವರಿಗೆ ಬರಿಯ ನೀರನ್ನು ಅಮ್ಮ ಎಂದಿಗೂ ಕೊಡುತ್ತಿರಲಿಲ್ಲ. ಬೆಲ್ಲ, ಸಕ್ಕರೆ ತೀರ ಶೋಕಿಯೆನಿಸಿದ ಆ ದಿನಗಳಲ್ಲಿ ಅದೆಷ್ಟೋ ದೂರ ಕೂಲಿ ಮಾಡುತ್ತಿರುವವರು ಚೂರು ಬೆಲ್ಲದ ಸಿಹಿಗಾಗಿ ನಮ್ಮ ಮನೆಯನ್ನೇ ಹುಡುಕಿ ನೀರು ಕುಡಿಯಲು ಬರುವರೆಂದ ಸತ್ಯದ ಅರಿವಿದ್ದರೂ, ಅಪ್ಪನ ಸತತವಾದ ಬೈಗುಳ ಕೊನೆಯವರೆಗೂ ಅಮ್ಮನನ್ನು ಬದಲಾಯಿಸಲಾಗಲಿಲ್ಲ. ಅಪ್ಪ ಹಠಹಿಡಿದು ಬೆಲ್ಲ ಸಕ್ಕರೆ ಮನೆಗೆ ತಾರದೇ ಸತಾಯಿಸಿದರೂ  ಅಮ್ಮ ತನ್ನ ತವರಿನವರು ನೀಡಿದ ಪುಡಿಗಾಸಿನಿಂದಲಾದರೂ ಅದನ್ನು ತರಿಸಿಕೊಂಡು ಕೊಡುವವಳೆ. “ಸತ್ತ ಮೇಲೆ ಯಮ ಕೇಳ್ತಾನಂತೆ, ಹೆತ್ತವರಿಗೆ ನೀರು ಕೊಟ್ಟೆಯೋ?  ಮುಟ್ಟಾದವರಿಗೆ ನೀರು ಕೊಟ್ಟೆಯೋ? ದುಡಿದು ಸುಸ್ತಾದವರಿಗೆ ನೀರು ಕೊಟ್ಟೆಯೋ? ಅಂತ. ಬಾಯಾರಿದವರಿಗೆ ಬರಿಯ ನೀರನ್ನು ಕೊಡಲಾರೆ”  ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದಳು. ಬೆಳಗಿನ ತಿಂಡಿಯ ವೇಳೆಗೆ, ಸಂಜೆಯ ಚಹಾದ ಸಮಯಕ್ಕೆ ಜಗುಲಿ ತುಂಬ ಜನ ನೆರೆದರೂ ಎಲ್ಲರಿಗೂ ಹಂಚಿಯೇ ತಿನ್ನಬೇಕೆಂಬದು ಅಮ್ಮನ ಅಲಿಖಿತ ನಿಯಮ. ಜನ ಖಾಲಿಯಾಗುವವರೆಗೆ ಕಾದು ಮತ್ತೆ ಚಹಾ ಕುಡಿಯುವ ಪದ್ಧತಿಯಿರುವ ಊರಿನಲ್ಲೂ ಅಮ್ಮನ ದಾಸೋಹ ಸದಾ ಚಾಲ್ತಿಯಲ್ಲಿರುತ್ತಿತ್ತು. ಹಂಚಿ ತಿನ್ನುವುದಕ್ಕೆ ಇದಕ್ಕಿಂತ ದೊಡ್ಡ ಉಪಮೆ ನನಗಂತೂ ಸಿಕ್ಕಿಲ್ಲ.

ಅಮ್ಮ ಆ ಕಾಲಕ್ಕೇ ಏಳನೆಯವರೆಗೆ ಓದಿದ್ದಳು. ಅದೆಂತಹ ಕಷ್ಟದ ಬಾಯಿ ಲೆಕ್ಕವಿರಲಿ, ಕ್ಷಣಮಾತ್ರದಲ್ಲಿ ಉತ್ತರ ಹೇಳಿ ಎಲ್ಲರನ್ನೂ ಚಕಿತಗೊಳಿಸುತ್ತಿದ್ದಳು. ಅನಕ್ಷರಸ್ಥರಾದ ಊರಿನವರಿಗೆಲ್ಲ ಸಹಿ ಬರೆಯಲು ಕಲಿಸಿ ಖುಶಿಪಡುತ್ತಿದ್ದಳು. ಕಷ್ಟದಲ್ಲಿರುವ ಹೆಣ್ಣು ಮಕ್ಕಳೆಲ್ಲ ಅದೇನು ಸಂಪತ್ತಿದೆಯೆಂದು ಅಮ್ಮನ ಹತ್ತಿರಕ್ಕೆ ಬರುತ್ತಿದ್ದರೋ ಕಾಣೆ? ಹೋಗುವಾಗ ಹಳೆಯ ಸೀರೆಯೋ, ಹೊದಿಯಲೊಂದು ಚಾದರವೊ, ಸಣ್ಣ ಅಕ್ಕಿಯ ಮೂಟೆಯೋ, ಕಿಂಚಿತ್ತು ಬೇಳೆಯೋ, ಒಂದೆರಡು ಪಾತ್ರೆಯೋ ಅವರ ಕೈಯ್ಯಲ್ಲಿಲ್ಲದಿದ್ದರೆ  ಅದು ಅಮ್ಮನೇ ಅಲ್ಲ. ಅಮ್ಮ ಎಲ್ಲ ಸಂತ್ರಸ್ತರ ಪರಿಹಾರ ಕೇಂದ್ರ!

ಅದ್ಯಾಕೋ ಸಣ್ಣ ಮಕ್ಕಳು ರಚ್ಚೆ ಹಿಡಿದು ಅತ್ತರೆ ಮಕ್ಕಳ ಅಜ್ಜಿಯಂದಿರಿಗೆ ನನ್ನಮ್ಮನೇ ನೆನಪಾಗುವುದು. ಬಡವರ ಮನೆಯ ಮಕ್ಕಳು ಅಳುವುದಕ್ಕೆ ಕಾರಣ ಹಸಿವೆಯೊಂದೇ ಆಗಿರುವುದೆಂಬ ಸತ್ಯ ಅಮ್ಮನಿಗೆ ಗೊತ್ತು. “ಆಗಿಂದ ಒಂದೇ ಸಮಾ ಮರಕ್ತಿದ್ದ ಕಾಣಿ. ಗಂಜಿ ಹಾಕಿಕೊಟ್ಟರೆ ತೂರಿಹಾಕಿಬಿಟ್ಟ” ಎಂದು ದೂರು ಹೇಳುವ ಅಜ್ಜಿಯರ ಬಾಯನ್ನು ಎಲೆಅಡಿಕೆ ಕೊಟ್ಟು ಮುಚ್ಚಿಸುತ್ತಿದ್ದ ಅಮ್ಮ, ಬರಿಯ ಗಂಜಿ ತಿಂದು ಮಗುವಿನ ಬಾಯಿ ಚಪ್ಪೆಗಟ್ಟಿದೆಯೆಂದು ಅರ್ಥ ಮಾಡಿಕೊಳ್ಳುವ ಕರುಣಾಮಯಿ. ಅವಲಕ್ಕಿ, ಕಾಯಿಚೂರು, ತುಸು ಬೆಲ್ಲ ಕೊಟ್ಟರೆ ಅಳುವ ಮಕ್ಕಳ ಮುಖದಲ್ಲಿ ಅದೆಂತಹ ಬೆಳಕು! ಅಮ್ಮ ಊರಿನ ಎಲ್ಲ ಮಕ್ಕಳಿಗೆ ಬೆಚ್ಚನೆಯ ತೊಟ್ಟಿಲು!

ನಡೆಯಲಾರದ ವಯಸ್ಸು ಅವರದ್ದು. ಮಾತುಕೇಳದ ಹರೆಯದ ಮಕ್ಕಳು. ಒಪ್ಪಿಕೊಂಡ ಮೇಲೆ ಪೂಜೆ, ಪುನಸ್ಕಾರಗಳನ್ನು ಶಿಷ್ಯಂದಿರ ಮನೆಯಲ್ಲಿ ನಡೆಸಿಕೊಡಲೇಬೇಕು. ಬೆಳಿಗ್ಗೆ ಮನೆಯಿಂದ ಹೊರಟು ಅವರಸರವಾಗಿ ಬರುವಷ್ಟು ಚೈತನ್ಯ ನಮ್ಮ ದೊಡ್ಡ ಪುರೋಹಿತರಿಗಿರಲಿಲ್ಲ. ರಾತ್ರೆ ಯಾರುಯಾರದೋ ಮನೆಯಲ್ಲಿ ತಂಗಿದರೆ ಅವರ ಉಪವಾಸ, ವ್ರತ, ಆಚರಣೆಗಳಿಗೆಲ್ಲ ಅಣಿಮಾಡಿಕೊಡುವ ತಾಳ್ಮೆ ಯಾರಿಗಿದೆ? ರಾತ್ರಿಗೂ, ಬೆಳಿಗ್ಗೆಗೂ ಮುಸುರೆ(ಅಂದರೆ ಅಕ್ಕಿಯಿಂದ ಮಾಡಿದ ಯಾವುದೇ ತಿಂಡಿ) ತಿನ್ನದ ಭಟ್ಟರಿಗೆ ಒಂದಿಷ್ಟು ಅವಲಕ್ಕಿ ಕಲಸಿ ಎದುರಿಗಿಡುತ್ತಾರಷ್ಟೆ. ಮುದಿಯೊಡಲು ಅದನ್ನು ಜೀರ್ಣಿಸಲಾಗದು. ಅವರಿಗೂ ನೆನಪಾಗುವುದು ಅಮ್ಮನೆ. ಆದರೆ ಅಮ್ಮ ಒರಳು ಕಲ್ಲಿನಲ್ಲಿ ನುಣುಪಾಗಿ ಅರೆದ ಅಕ್ಕಿ- ಉದ್ದಿನ, ಹೂವಷ್ಟು ಮೃದುವಾದ ದೋಸೆಯನ್ನೇ ಅವರಿಗೆ ಗೋದಿಯದೆಂದು ಹೇಳಿ ತಿನ್ನಿಸಿ ಕಳಿಸುತ್ತಿದ್ದಳು. ಕೆಲವೊಮ್ಮೆ ಅಮ್ಮನ ಈ ಸುಳ್ಳಿಗೆ ನಾವು ಮಕ್ಕಳು ಬಂಡೆದ್ದದ್ದಿದೆ. ಆಗೆಲ್ಲ ಅಮ್ಮನದು ಒಂದೇ ಉತ್ತರ. “ಅಕ್ಕಿಯದೋ? ಗೋದಿಯದೋ? ಅವರು ಖುಶಿಪಟ್ಟು ತಿಂದರಲ್ಲ, ಅದು ಮುಖ್ಯ. ಅಕ್ಕಿಗೇ ತತ್ವಾರವಾದ ಮನೆಯಲ್ಲಿ ಗೋದಿಯನ್ನೆಲ್ಲಿಂದ ತರುವುದು?  ಎಲ್ಲರಂತೆ ಬರಿಯ ಅವಲಕ್ಕಿ ತಿನ್ನಿಸಿ ವಯಸ್ಸಾದ ಅವರನ್ನು ಬಳಲಿಸಲಾರೆ.” ಅಮ್ಮ ನನ್ನೊಳಗಿನ ತಿಳಿವಿನ ಬೆರಗು!

ಅಮ್ಮ ತನ್ನ ಏಳನೆಯ ತರಗತಿಯವರೆಗಿನ ಪುಸ್ತಕದ ಬಹಳಷ್ಟು ಪಾಠಗಳನ್ನು ಬಾಯಿಪಾಠ ಹೇಳುತ್ತಿದ್ದಳು. ಅವಳು ಹಿಂದಿಯಲ್ಲಿ ಹೇಳುತ್ತಿದ್ದ ಆಮೆಯ ಕಥೆಯಂತೂ ಇಂದಿಗೂ ಕಿವಿಯಲ್ಲಿ ಗುಂಯ್ಗುಟ್ಟುತ್ತಿದೆ. “ಏಕ್ ಸರೋವರ್ ಮೇ ಏಕ್ ಕಚುವಾ ರಹತಾ ಥಾ. ಉಸೀ ಸರೋವರ್ ಕೆ ಪಾಸ್ ಏಕ್ ಖರಗೋಶ್ ಭೀ ರಹತಾ ಥಾ….. “ ಎಂದು ಪ್ರಾರಂಭಿಸುತ್ತಿದ್ದ ಅಮ್ಮ ಕಥೆ ಮುಗಿಸಿ ನಮ್ಮನ್ನು ನೋಡಿ ನಗುತ್ತಿದ್ದರು. ನಿನ್ನೆ ಓದಿದ್ದನ್ನು ಇಂದು ಮರೆಯುತ್ತಿದ್ದ ನಾನು ಈ ಬಗ್ಗೆ ವಿಚಾರಿಸಿದಾಗ ಅಮ್ಮ ತನ್ನ ಶಾಲಾದಿನಗಳ ಕಥೆ ಹೇಳಿದ್ದಳು. ಹಾಕಿಕೊಳ್ಳಲು ಬಟ್ಟೆಯೂ ಇಲ್ಲದ ಅವಳ ಬಾಲ್ಯದಲ್ಲಿ ಪುಸ್ತಕ ಖರೀದಿ ಕನಸಿನ ಮಾತಾಗಿತ್ತು. ಕಲಿಯುವ ಅತಿಯಾಸೆಯುಳ್ಳ ಅಮ್ಮ ತನ್ನ ಗೆಳತಿಯರಿಂದ ಪುಸ್ತಕವನ್ನು ಒಂದು ದಿನಕ್ಕೆಂದು ಎರವಲು ಪಡೆದು ಅದನ್ನು ಬಾಯಿಪಾಠ ಕಲಿಯುತ್ತಿದ್ದಳಂತೆ. ಹಾಗಾಗಿ ಆಮೆ ಅಮ್ಮನ ಮನದಿಂದ ಅಚ್ಚಳಿಯದೇ ಉಳಿದಿತ್ತು ಮತ್ತು ಸದಾ ಮೊಲದೊಂದಿಗಿನ ಓಟದಲ್ಲಿ ಗೆಲ್ಲತ್ತಲೇ ಇರುತ್ತಿತ್ತು. ಅಮ್ಮನ ಕಥೆಯ ಆಮೆ ಅದ್ಯಾವ ಘಳಿಗೆಯಲ್ಲಿ ನನ್ನೊಳಗೆ ಇಳಿಯಿತೋ ಕಾಣೆ? ಬರೆದ ಎಲ್ಲ ಪರೀಕ್ಷೆಗಳಲ್ಲಿಯೂ ಮೊದಲನೆಯ ಸ್ಥಾನವನ್ನೇ ಕಾಯ್ದಿರಿಸಿತು, ಓಡುವ ಮೊಲವನ್ನು ಉಪೇಕ್ಷೆಯಿಂದ ನೋಡುವ ನಿರಂತರತೆಯ ಪಾಠ ಕಲಿಸಿತು.

ಸಾವು ಅಮ್ಮನನ್ನು ಬಹಳಷ್ಟು ಕಾಡಿದ ವಿಷಯ. ಸಾವಿನಾಚೆಯ ಬದುಕನ್ನು ಅಮ್ಮ ನಂಬಲೇ ಇಲ್ಲ. ನಿಮಗೆ ಗಂಡು ಮಕ್ಕಳೇ ಇಲ್ಲ. ಸತ್ತ ನಂತರದ ಗತಿಯೇನು ಎಂದು ಹಂಗಿಸಿ ಮಾತನಾಡುವ ಸಂಪ್ರದಾಯವಾದಿಗಳಿಗೆಲ್ಲ ಅಮ್ಮನದು ಚಂದದ ಉತ್ತರ. “ಸತ್ತ ನಂತರ ಏನಾಗುವುದೆಂದು ಯಾರಿಗೆ ಗೊತ್ತು? ಇರುವಾಗಿನ ಬದುಕಷ್ಟೇ ಸತ್ಯ. ನನಗಂತೂ ಸತ್ತ ನಂತರ ಹೊತ್ತು ಹೋಗಲು ಹೆಗಲು ಬೇಕೆಂಬ ಆಸೆಯೂ ಇಲ್ಲ. ಕಾಲಿಗೆ ಬಳ್ಳಿ ಕಟ್ಟಿ ಎಳೆದುಹಾಕಿದರೂ ತೊದರೆಯಿಲ್ಲ. ಇರುವವರೆಗೆ ಉಣ್ಣಲು, ಉಡಲು ತೊಂದರೆಯಾಗದಿದ್ದರೆ ಆಯಿತು ಅಷ್ಟೆ”  ಸಂತಾನವಿಲ್ಲದವರೆಲ್ಲ ಕಾಶಿಗೆ ಹೋಗಿ ತಮ್ಮ ಶ್ರಾದ್ಧವನ್ನು ತಾವೇ ಮುಗಿಸಿ ಬರುತ್ತಿದ್ದ ಕಾಲದಲ್ಲಿ ಅಮ್ಮ ಆಡುತ್ತಿದ್ದ ಮಾತುಗಳ ತೂಕ ಈಗ ನನ್ನ ಮನಸ್ಸಿನೊಳಗಿಳಿಯುತ್ತಿದೆ. ಹಾಗಿರುವ ಅಮ್ಮ ಕನಸಿಗೆ ಬರುವವಳಲ್ಲವೆಂಬ ಸತ್ಯವನ್ನು ನಾನು ನಂಬಲೇಬೇಕಾಗಿದೆ.

ಅಮ್ಮ ಎಲ್ಲ ಹೆಣ್ಣುಗಳಂತೆ ಗಂಡಿನ ಅನುಚರಿಯಾಗಲೇ ಇಲ್ಲ. ಸಹಚರಿಯ ಸ್ಥಾನಕ್ಕಾಗಿ ನಿರಂತರ ಸಂಘರ್ಷವನ್ನು ಜಾರಿಯಲ್ಲಿಟ್ಟಿದ್ದಳು. ಪೆಟ್ಟು ತಿಂದರೂ ಬಯಸಿದ ಶಿಲ್ಪವಾಗದ ಕಲ್ಲಿನ ಹಠದವಳು. ಲೈಂಗಿಕತೆಯೂ ಹೆಣ್ಣಿನ ಅಯ್ಕೆಯಾಗಬೇಕೆಂಬ ಅವಳ ಹಂಬಲ ಬದುಕಲ್ಲಿ ಬಹಳಷ್ಟು ತಲ್ಲಣಗಳನ್ನು ಎಬ್ಬಿಸಿತ್ತು. ಅದೆಂತಹ ಅನೈತಿಕತೆಯ ಬಹಿಷ್ಕಾರವೇ ಇರಲಿ, ಹೆಣ್ಣಿನ ನೋವಿಗೆ ಅವಳು ಮಿಡಿಯುತ್ತಿದ್ದಳು. ತಮ್ಮದಲ್ಲದ ತಪ್ಪಿಗೆ ಗರ್ಭ ಹೊತ್ತು ಅಕಾಲಿಕ ಗರ್ಭಪಾತಕ್ಕೊಳಪಡುವ ಹೆಣ್ಣುಗಳನ್ನೂ ಆರೈಕೆ ಮಾಡುತ್ತಿದ್ದಳು. ತನ್ನ ಸೀರೆಯನ್ನು ಹರಿದು ಬೆತ್ತಲಿದ್ದ ಬಡ ಹೆಣ್ಣುಗಳ ಬಟ್ಟೆಯಾಗಿಸುತ್ತಿದ್ದಳು. ‘ ಹಲವು ದೇವರನ್ನು ನಂಬಿ ಹಾದಿಮೇಲೆ ಬಿದ್ದ’ ಎಂಬ ಗಾದೆ ಹೇಳುತ್ತಾ ದೇವರನ್ನೆಲ್ಲ ದೂರವೇ ಇಡುತ್ತಿದ್ದಳು. ಆದರೆ ಸಂಜೆ ಹೊಸಿಲ ಮುಂದೊಂದು ಚಿಮಣಿಯನ್ನು ಹಚ್ಚಿಟ್ಟ ಅಮ್ಮ “ಸಾಕೋ ಸಾಕೋ ಕಷ್ಟ ಪಡಲಾರೆ, ಶ್ರೀರಾಮ ನಾನು, ಯಾಕೆ ಕರುಣೆ ಬಾರದೋ ನಿನಗೆ?….” ಎಂದು ಹಾಡುತ್ತಾ ನೇರವಾಗಿ ದೇವರೊಂದಿಗೆ ಅನುಸಂಧಾನ ನಡೆಸುತ್ತಿರುವಳೇನೋ ಎಂಬಂತೆ ತನ್ಮಯಳಾಗಿಬಿಡುತ್ತಿದ್ದಳು. ಸಾಲಲ್ಲಿ ಮೂರು ಹೆಣ್ಣು ಹುಟ್ಟಿದಾಗ ಧಾರ್ಮಿಕ ಗುರುಗಳ ಆಶೀರ್ವಾದ ಪಡೆದು ಗಂಡು ಹಡೆಯೆಂದು ಅವರಿವರು ನೀಡಿದ ಸಲಹೆಗೆ ಉಪೇಕ್ಷೆಯ ನಗೆ ನಕ್ಕುಬಿಟ್ಟಿದ್ದಳಂತೆ. ಮೂರು ಹೆಣ್ಣಿನ ಮೇಲೆ ಗಂಡು ಹುಟ್ಟಿದರೆ ಮಣ್ಣಿನ ರಾಶಿಯ ಮೇಲೆ ಹೊನ್ನಿನ ರಾಶಿ ಸುರಿದಂತೆ ಬೆಳಗುವುದು ಎಂಬ ಹಿರಿಯರ ಆಶೆ, ಆಶೀರ್ವಾದಗಳಿಗೆ ಸೊಪ್ಪು ಹಾಕದೇ ಇಡೀ ಕುಟುಂಬದಲ್ಲಿ ಮೊದಲ ಬಾರಿಗೆ ಕುಟುಂಬಯೋಜನೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಈ ಶಸ್ತ್ರಚಿಕಿತ್ಸೆಯಿಂದ ಹೆಂಗಸರ ಆರೋಗ್ಯಕ್ಕೆ ಭಾರಿ ಅಪಾಯವಿದೆಯೆಂಬ ಹಳ್ಳಿಗರ ನಂಬಿಕೆಯನ್ನು ಹುಡಿಯಾಗಿಸಿದ್ದಳು. ಅಮ್ಮನೊಂದು ವೈಚಾರಿಕತೆಯ ಸೆಲೆ!

ಅಮ್ಮನಿಗೆ ತೀರ ಸಣ್ಣ ಸಣ್ಣ ಆಸೆಗಳಿದ್ದವು. ಕಪ್ಪು ಬಣ್ಣದ ಕಾಟನ್ ಪತ್ತಲ, ಮುಖಕ್ಕೆ ಹಚ್ಚಲು ಪಾಂಡ್ಸ್ ಪೌಡರ್, ಅಡುಗೆ ಮಾಡಲು ಸ್ಟೀಲಿನ ಪಾತ್ರೆಗಳು, ಆಗಾಗ ಚಹಾ ತಯಾರಿಸಲು ಸೌದೆ ಉರಿಸುವ ಕಷ್ಟದಿಂದ ತಪ್ಪಿಸಿಕೊಳ್ಳಲೊಂದು ಪುಟ್ಟ ಸೀಮೆಎಣ್ಣೆಯ ಸ್ಟೌವ್, ಮಳೆಗಾಲ ಬಂದರೆ ಮನೆಯೊಳಗೆಲ್ಲ ನೀರಾಡುವ ಸೋಗೆ ಹೊದಿಕೆಯ ಮನೆಯ ಬದಲೊಂದು ಸಣ್ಣ ಹಂಚಿನ ಮನೆ. ಆರು ಸೇರು ಅಕ್ಕಿ ಕಡೆಯುವ ಭಂಗದಿಂದ ಪಾರಾಗಲೊಂದು ಪುಟ್ಟ ಮಿಕ್ಸಿ……. ಇಲ್ಲ, ಇವುಗಳಲ್ಲಿ ಯಾವೊಂದು ಆಸೆಯೂ ಅವಳ ಜೀವಿತಾವಧಿಯಲ್ಲಿ ಈಡೇರಲೇ ಇಲ್ಲ. ಆದರೆ ಅಮ್ಮನಿಗೊಂದು ಕನಸಿತ್ತು. ಶಾಲೆಯೇ ಇಲ್ಲದ ಕಾಡಿನೂರಿನಲ್ಲಿ ಹುಟ್ಟಿದ ತನ್ನ ಮೂರೂ ಮಕ್ಕಳು ವಿದ್ಯಾವಂತರಾಗಬೇಕು. ಸಣ್ಣದಾದರೂ ಸರಿಯೆ, ನೌಕರಿಯೊಂದನ್ನು ಹಿಡಿದು ತನ್ನ ಕಾಲಮೇಲೆ ತಾವು ನಿಲ್ಲಬೇಕು. ಎಂದಿಗೂ ಪುಡಿಗಾಸಿಗಾಗಿ ಇನ್ನೊಬ್ಬರೆದುರು ಕೈಚಾಚಬಾರದು ಎಂದು. ಅಮ್ಮನ ಕನಸು ನನಸಾಗಿದೆ, ಅವಳಿಲ್ಲದ ನಿರ್ವಾತದಲ್ಲಿ…..

ಅಮ್ಮ ಚಿತ್ರವಾಗುಳಿಯಲಿಲ್ಲ, ಚಿತ್ತದ ಚಿತ್ತಾರವಾಗಿ ಅರಳಿಕೊಳ್ಳುತ್ತಾಳೆ ನೆನಪಾದಾಗಲೆಲ್ಲ. ಹೌದು, ಅಮ್ಮ ನನ್ನೊಳಗೆ ಹರಿಯುವ ಪ್ರೀತಿಯ ಝರಿ ಮತ್ತು ಸದಾ ನನ್ನೊಳಗಿನ ಬಂಡಾಯ!

‍ಲೇಖಕರು avadhi

7 March, 2020

9 Comments

  1. Ahalya

    ಅದೆಷ್ಟು ಆಪ್ತತೆ!
    ವೈದೇಹಿ ಸಾಲುಗಳು ನೆನಪಾದ್ವು ಸುಧಾ…

    ನನ್ನ ಅಮ್ಮನ ಸೀರೆ-ವೈದೇಹಿ
    .
    .

    ನನ್ನ ಅಮ್ಮನ ಸೀರೆ
    ಉಟ್ಟಷ್ಟೂ ಉಂಟು
    ಎಷ್ಟುದ್ದ ಉದ್ದ ಉದ್ದ
    ಒಮ್ಮೆ ಅಳೆಯಲು ಹೋಗಿ
    ಒಮ್ಮೆ ಉಡಲೂ ಹೋಗಿ
    ನಾನಾದೆ ಗಿಡ್ಡ ಗಿಡ್ಡ
    .
    .
    .
    ನನ್ನ ಅಮ್ಮನ ಹಳೆಯ
    ಉಡುಪಿ ನೇಯ್ಗೆಯ ಸೀರೆ
    ನೋಡುತಿದೆ ನೋಡು ನೇಲೆಯ ಮೇಲೆ ಕುಳಿತು!
    ಹಾಸಿಕೊಳ್ಳುವೆ ಅದನು
    ಹೊದೆದುಕೊಳ್ಳುವೆ ಅದನು
    ‘ಅಮ್ಮ’ ಎನ್ನುವ ಸುಖದ
    ನಿಟ್ಟುಸಿರ ಕರೆದು
    ಸವೆದೂ ಸವೆಯದ ಆ
    ಪದವ ನೆನೆದು
    ಪದವ ನೆನೆದು.

    • Sudha Hegde

      ಅಹಲ್ಯಾ…..

  2. Yogeshnayaka R

    ನಿಮ್ಮ ಲೇಖನ ಓದುವಾಗ ನನಗೆ ನನ್ನ ಅಜ್ಜಿಯ ಕಥೆ ಹೇಳಿದ ಹಾಗೆ ಭಾಸವಾಗುತ್ತಿತ್ತು. ‘ಅಮ್ಮ ಎಲ್ಲ ಸಂತ್ರಸ್ತರ ಪರಿಹಾರ ಕೇಂದ್ರ!’ ಎಂತಹ ಸಾಲು…. ತುಂಬಾ ಇಷ್ಟವಾಯ್ತು ಮೇಡಂ ನಿಮ್ಮ ಲೇಖನ.

    • Sudha Hegde

      Thank u

  3. Hemalatha

    ನಿಮ್ಮ ಕಥೆ ಸೊಗಸಾಗಿದೆ. ಅಮ್ಮ ಎಂದರೆ ಜೀವನದಿ.

  4. Sudha Hegde

    ಕಥೆಯಲ್ಲ, ಬದುಕು

  5. ಸರೋಜ ಪ್ರಶಾಂತಸ್ವಾಮಿ

    ಸುಧಾ ಮೇಡಂ, ಬಹಳ ಆಪ್ತವಾಗಿದೆ.

  6. Sudha Hegde

    Thank u

  7. Poorvi

    Tumba Apthavada baraha Sudha .Odutta, odutta kantumbi banthu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading