ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

`ಅಮ್ಮ' ಪ್ರಶಸ್ತಿಯನ್ನು ಅಮ್ಮನೇ ಸ್ವೀಕರಿಸಲಿ

ಮುದ್ರಣ ರಂಗಕ್ಕೆ ನವೀನ ಸ್ಪರ್ಶ ನೀಡಿದ ಕಾರಣಕ್ಕಾಗಿ ‘ಸ್ವ್ಯಾನ್ ಪ್ರಿಂಟರ್ಸ್’ನ ಮುಖ್ಯಸ್ಥ ಕೃಷ್ಣಮೂರ್ತಿ ಅವರಿಗೆ ‘ಅಮ್ಮ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ.
ಅಮ್ಮ ಪ್ರಶಸ್ತಿಯನ್ನು ಅಮ್ಮನಿಗೇ ಕೊಡಿ ನಾನು ಸಂತೋಷಪಡುತ್ತೇನೆ ಎನ್ನುತ್ತಾರೆ..

`ಅಮ್ಮ’ ಪ್ರಶಸ್ತಿ ನನಗೆ ಸಂದಿರುವುದು ಸಂತಸದ ವಿಷಯ. ಅದು ಅಮ್ಮನ ಹೆಸರಿನ ಪ್ರಶಸ್ತಿಯಾದ್ದರಿಂದ ಅದಕ್ಕೆ ಇನ್ನಷ್ಟು ಮೆರುಗು ಬಂದಿದೆ. ಅಮ್ಮ ಎಂಬ ಶಬ್ದದಲ್ಲೇ ಏನೋ ಒಂದು ಶಕ್ತಿ ಅಡಗಿದೆ. ಅಮ್ಮಂದಿರು ಅವರು ಸಾಧಿಸಲಾಗದ್ದನ್ನು ಮಕ್ಕಳ ಮುಖಾಂತರ ಮಾಡಿಸಿ ಸಂತಸಪಡುತ್ತಾರೆ. ಮಕ್ಕಳಿಗೆ ಪ್ರಶಸ್ತಿ ಬಂದ ವಿಷಯ ಕೇಳಿ ಅಥವಾ ಸಂದ ಸಮಾರಂಭದಲ್ಲಿ ದೂರದಲ್ಲಿ ಕುಳಿತು ನೋಡಿ ಆನಂದ ಭಾಷ್ಪದೊಂದಿಗೆ ಅವರಿಗೇ ಪ್ರಶಸ್ತಿ ಸಂದಷ್ಟು ಖುಷಿಪಡುತ್ತಾರೆ.
ಈ ವಿಷಯದಲ್ಲಿ ನನ್ನ ಅಮ್ಮ ಕೂಡ ಹೊರತಾಗಿಲ್ಲ.
ಶ್ರೀಮಂತ ಮನೆತನದಲ್ಲಿ ಹುಟ್ಟಿ ಎಲ್ಲರಂತೆ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಮುಂದೆ ಏನಾದರೂ ಸಾಧಿಸಬೇಕೆಂಬ ಹಂಬಲದೊಂದಿಗೆ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ನಮ್ಮ ಅಜ್ಜನವರು ತೆಗೆದುಕೊಂಡ ಒಂದು ತಪ್ಪು ನಿರ್ಧಾರದಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟುಕುಗೊಳಿಸಬೇಕಾಯಿತು.
ನಮ್ಮ ಅಜ್ಜನವರ ಆಸೆಯಂತೆ ಮದುವೆಯಾಗಿ ಮುಂದೆ ಸಿನಿಮೀಯ ರೀತಿಯಲ್ಲಿ ಬದುಕಿನಲ್ಲಿ ಬಂದ ನಾನಾ ಕಷ್ಟಗಳನ್ನು ಅನುಭವಿಸಿ, ನಾಲ್ಕು ಮಕ್ಕಳ ಸಮೇತ ಉಟ್ಟ ಬಟ್ಟೆಯಲ್ಲಿ ಮನೆಯಿಂದ ಹೊರಬಂದು ಜೀವನೋಪಾಯಕ್ಕಾಗಿ ಮುರುಘಾ ಮಠದ ಶಾಲೆಯಲ್ಲಿ ಒಂದು ಸಣ್ಣ ಹುದ್ದೆಗೆ ಸೇರಿಕೊಳ್ಳಬೇಕಾಯಿತು. ನಂತರ ಎಂ.ಎ., ಬಿ.ಎಡ್. ಪರೀಕ್ಷೆಗಳನ್ನು ಕಟ್ಟಿ ತೇರ್ಗಡೆಯಾಗಿ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಎದುರಾದ ಕಷ್ಟಗಳನ್ನು ಮಕ್ಕಳಿಗೆ ತಿಳಿಯದಂತೆ ಎಲ್ಲವನ್ನೂ ಸ್ವತಃ ನುಂಗಿ ಒಬ್ಬೊಬ್ಬರೇ ಮಕ್ಕಳನ್ನು ದಡ ಸೇರಿಸಿದರು.
ಈಗ ಮಕ್ಕಳು ಮೊಮ್ಮಕ್ಕಳೊಂದಿಗೆ ಸುಖಸಂಸಾರ ನಡೆಸುತ್ತಿದ್ದಾರೆ. ಎಷ್ಟೋ ಜನ ಕಷ್ಟಪಟ್ಟು ಗುರಿಮುಟ್ಟಿದ ಬಳಿಕ ಬಂದ ಸುಖ-ಸಂತೋಷ, ಪ್ರಶಸ್ತಿ-ಸನ್ಮಾನಗಳು ನೋಡಲು ಅಮ್ಮನಿರಬೇಕಿತ್ತು, ನೋಡಿ ಎಷ್ಟು ಖುಪಡುತ್ತಿದ್ದಳು ಎಂಬ ಕೊರಗಿರುತ್ತದೆ. ಆದರೆ ನನ್ನ ಪಾಲಿಗೆ ಇದನ್ನೆಲ್ಲ ನೋಡಲು ಅಮ್ಮ ಇನ್ನೂ ಗಟ್ಟಿಯಾಗಿ ಇರುವುದು ಅದೃಷ್ಟವೇ.
ಎಷ್ಟೋ ಸಭೆ-ಸಮಾರಂಭಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸುವಾಗ, ಸನ್ಮಾನ ಮಾಡುವಾಗ ಹೆಂಡತಿಯರನ್ನು ಪಕ್ಕದಲ್ಲಿ ಕೂರಿಸುವುದು ವಾಡಿಕೆ. ಹೆಂಡತಿಯಷ್ಟೇ ಅಮ್ಮ ಕೂಡ ಎಲ್ಲರ ಬದುಕಿನಲ್ಲಿ ಮುಖ್ಯ. ಆದ್ದರಿಂದ ನನಗೆ ಈಗ ಸಂದಿರುವ ಅಮ್ಮ ಪ್ರಶಸ್ತಿಯನ್ನು ಆಯೋಜಕರು ಒಪ್ಪುವುದಾದರೆ ನನ್ನ ಕಣ್ಣೆದುರಿನಲ್ಲಿ ನನ್ನ ಅಮ್ಮನೇ `ಅಮ್ಮ’ ಪ್ರಶಸ್ತಿಯನ್ನು ಸ್ವೀಕರಿಸಲಿ ಎಂಬುದು ನನ್ನ ಮಹದಾಸೆ. ಇದಕ್ಕೆ ಅನುಮತಿ, ಅವಕಾಶ ದೊರೆಯುವುದೆಂಬ ನಿರೀಕ್ಷೆ ನನ್ನದು.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ
ಸ್ವ್ಯಾನ್ ಕೃಷ್ಣಮೂರ್ತಿ

‍ಲೇಖಕರು avadhi

22 November, 2018

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading