ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮ ಒಬ್ಬಳನ್ನೇ ಕಳಿಸಿಬಿಟ್ಟೆ..

ಶಿವಕುಮಾರ್ ಮಾವಲಿ

ಪ್ರತಿ ಬಾರಿ ಅಮ್ಮ ಬೆಂಗಳೂರಿಗೆ ಬಂದಾಗಲೂ ವಾಪಾಸ್ ಹೋಗುವಾಗ ಯಾರಾದರೂ ಜೊತೆಯಲ್ಲಿ ಒಬ್ಬರು ಹೋಗುತ್ತಿದ್ದುದು ರೂಢಿ. ಆದರೆ ಯಾವುದೋ ತುರ್ತಿನಿಂದಾಗಿ ಅವರನ್ನು ಆ ಬಾರಿ ಒಬ್ಬರನ್ನೇ ಕಳಿಸಬೇಕಾಗಿ ಬಂತು.

ಬಸ್ಸಲ್ಲಿ ಅಷ್ಟು ದೂರದ ಪ್ರಯಾಣ ಅವರಿಗೆ ಆಯಾಸವಾಗುತ್ತದೆಂದು ಮುಂಜಾನೆ ಹೊರಡುವ ಪ್ಯಾಸೆಂಜರ್ ಟ್ರೈನ್ ಗೆ ಕಳಿಸುವುದೆಂದು ತೀರ್ಮಾನಿಸಿ ಅವರಿಗೆ ಹೇಳಿದೆ. ಸುಮ್ಮನೆ ತಲೆಯಲ್ಲಾಡಿಸಿದ ಅವರು ‘ ಟಿಕೆಟ್ ಎಲ್ಲಿ ತಗೋಳೋದು?’ ‘ ಟ್ರೈನ್ ಇಳಿದು ಶಿವಮೊಗ್ಗದಲ್ಲಿ ಬಸ್ ಸ್ಟಾಪ್ ಗೆ ಹೇಗೆ ಹೋಗೋದು?’- ಹೀಗೇ ಮತ್ತೆನೇನೋ ಪ್ರಶ್ನೆ ಮಾಡಿದರು. ಅವೆಲ್ಲಕ್ಕೂ ಸಮಾಧಾನವಾಗಿ ಉತ್ತರಿಸಿದೆ.

ಬೆಳಗ್ಗೆ ಬೈಕಲ್ಲಿ ಅಮ್ಮನನ್ನು ಕೂರಿಸಿಕೊಂಡು ಹೊರಟವನು ರೈಲ್ವೇ ಸ್ಟೇಷನ್ ಗೆ ಹೋಗದೆ ನೇರ ಮೆಜೆಸ್ಟಿಕ್ ನ ಕೆಎಸ್ಸಾರ್ಟಿಸಿ ಬಸ್ ಸ್ಟಾಪ್ ಗೆ ಹೋದೆ. ಆಗ ಅಮ್ಮ ‘ಇಲ್ಯಾಕೆ ಬಂದೆ?’ ಅಂದರು. ‘ ಟ್ರೈನ್ ಬೇಡ ಅಮ್ಮ. ಬಸ್ಸಾದರೆ ತೊಂದರೆ ಇರಲ್ಲ. ಕಂಡಕ್ಟರ್ ಗೆ ಹೇಳ್ತೀನಿ‌’ ಎಂದೆ.

ಅಮ್ಮನಿಗೆ ಒಳಗೇ ಖುಷಿಯಾಗಿತ್ತು. ರಾತ್ರಿ ಟ್ರೈನ್ ಬಗ್ಗೆ ಅವರು ಆತಂಕ ವ್ಯಕ್ತಪಡಿಸುವಾಗ ‘ಸುಮ್ನೆ ಬಸ್ ಗೆ ಹೋಗ್ತೀನಿ’ ಎಂದು ಅವರು ಹಿಂಜರಿಕೆಯಿಂದಲೇ ಹೇಳಿದ್ದನ್ನು ಗಮನಿಸಿಯೇ ನಾನು ಹಾಗೆ ಮಾಡಿದ್ದೆ.

ಟಿಕೆಟ್ ತೆಗಿಸಿ ಕಂಡಕ್ಟರ್ ಗೆ ಅಮ್ಮನನ್ನು ತೋರಿಸಿ ಶಿವಮೊಗ್ಗದಲ್ಲಿ ಇಳಿಸುವಂತೆ ಹೇಳಿ ಹೊರಟೆ. ಏನೋ ನೆನಪಾಯ್ತು, ಅಮ್ಮ ಕೂತ ಕಿಟಕಿಯ ಬಳಿ ಹೋಗಿ ‘ ಅಮ್ಮ, ಕೆ.ಬಿ.ಕ್ರಾಸ್ ನಲ್ಲಿ ತಿಂಡಿಗೆ ನಿಲ್ಲಿಸ್ತಾರೆ. ಅಲ್ಲೇ ಟಾಯ್ಲೆಟ್ ಇರುತ್ತೆ. ಅದೂ ಅಲ್ಲದೆ ಬೇರೆ ಎಲ್ಲಾದರೂ ನಿಲ್ಲಿಸಬೇಕೆಂದ್ರೆ ಕಂಡಕ್ಟರ್ ಗೆ ಹೇಳು’ ಎಂದೆ. ಅಮ್ಮ ತಲೆಯಲ್ಲಾಡಿಸಿದರು.

ಆಗಿನ್ನೂ ಅವರ ಬಳಿ ಮೊಬೈಲ್ ಇರಲಿಲ್ಲ. ಅವರು ಊರು ತಲುಪಿಯೇ ನನಗೆ ಕಾಲ್ ಮಾಡಬೇಕಿತ್ತು. ಆದರೆ ಅಮ್ಮ ತಿಂಡಿಗೆ ನಿಲ್ಲಿಸಿದಾಗ, ತಿಪಟೂರಲ್ಲಿರುವಾಗ, ಶಿವಮೊಗ್ಗ ತಲುಪಿದಾಗ ಯಾರ್ಯಾರದ್ದೋ ಮೊಬೈಲ್ ನಿಂದ ನಮಗೆ ಕಾಲ್ ಮಾಡಿ ವರದಿ ಒಪ್ಪಿಸುತ್ತಿದ್ದರು. ಅವರು ನನ್ನೂರು ತಲುಪುವ ತನಕ ನನಗಿದ್ದ ಆತಂಕ ಅಷ್ಟಿಷ್ಟಲ್ಲ. ಆದರೆ ನನ್ನ ಆತಂಕವನ್ನು ದೂರಮಾಡಿದ ಅಮ್ಮ ಅವರಿಗಿದ್ದ ಭಯವನ್ನೂ ಮೀರಿದ್ದರು.

ಈಗಲೂ ನಾನು ಊರಿನಿಂದ ಬೆಂಗಳೂರಿಗೆ ಹೊರಟುಬಂದ ಮರುದಿನ ಬೆಳಗ್ಗೆ ತಪ್ಪದೇ ಅಮ್ಮ ಕಾಲ್ ಮಾಡಿ ತಲುಪಿರುವ ಬಗ್ಗೆ ವಿಚಾರಿಸುತ್ತಾರೆ.

ಆಗ ನನಗನ್ನಿಸುವುದು ಇಷ್ಟೇ : ಪರ ಊರಿನಿಂದ ಬೆಂಗಳೂರಿಗೆ ಮಕ್ಕಳನ್ನು ಕಳಿಸಿದ ಅಮ್ಮನ ಆತಂಕ ಮತ್ತು ಬೆಂಗಳೂರಿನಿಂದ ತನ್ನೂರಿಗೆ ಅಮ್ಮನನ್ನು ಕಳಿಸಿ ಕೊಟ್ಟ ಮಗನ ಆತಂಕ ಎರಡೂ ಒಂದೇ. ಈ ಎರಡೂ ಪ್ರಯಾಣಗಳನ್ನು ಆಗು ಮಾಡಿರುವುದು ಮಮತೆಯಲ್ಲದೆ ಮತ್ತೇನು ?

‍ಲೇಖಕರು avadhi

12 May, 2019

2 Comments

  1. Sudha Hegde

    ಹೌದು

  2. Vasundhara k m

    ಚೆನ್ನಾಗಿದೆ ಬರಹ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading