ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮಿಯ ಸೌಹಾರ್ದ ಬದುಕು

ಅಮ್ಮಿಯ ಸೌಹಾರ್ದ ಬದುಕು

k shareefa

ಡಾ ಕೆ ಷರೀಫಾ

ನನ್ನವ್ವನ ಬದುಕಿನ ಪ್ರೀತಿ, ಹೋರಾಟ, ಸೌಹಾರ್ದದ ಬದುಕು ಇಂದಿಗೂ ನನ್ನ ಕಣ್ಣ ಮುಂದಿದೆ. ಇಂದು ಬದುಕಿನಲ್ಲಿ ಅಮ್ಮಿ ಅಬ್ಬಾ ಇಬ್ಬರೂ ಇಲ್ಲ. ಆದರೆ ಅವರು ಬದುಕಿದ ಸೌಹಾರ್ದದ ಬದುಕು ಇಂದಿಗೂ ನನಗೆ ಮಾದರಿ. ಅಮ್ಮಿ ಅಶಿಕ್ಷಿತಳು, ದೈವಭಕ್ತೆ. ಆದರೆ ಎಂದಿಗೂ ಭಿನ್ನವಾದ ಧರ್ಮದ ರೇಖೆಗಳೊಳಗೆ ಬದುಕಿದವಳಲ್ಲ.

ನನ್ನ ಬಾಲ್ಯ ಕಳೆದದ್ದು ಗುಲಬರ್ಗಾದ ಷಹಬಜಾರದಲ್ಲಿ. ನಾನು ಐದನೇ ತರಗತಿಯಲ್ಲಿ ಓದುತ್ತಿದ್ದೆ. ಇದ್ದಕ್ಕಿದ್ದಂತೆ ಏನಾಯಿತೋ ಕಾಣೆ, ಮುಸ್ಲೀಮರ ಮನೆಗಳಿಗೆ, ಅದೂ ಪುರಾತನ ಕಾಲದ ಜುಮ್ಮಾ ಮಸೀದಿಯ ಪಕ್ಕದಲ್ಲಿರುವ ಮುಸ್ಲೀಮರ ಮನೆಗಳಿಗೆ ಬೆಂಕಿ ಬಿದ್ದಿತು. ಪ್ರಮುಖವಾಗಿ ಮುಸ್ಲೀಂ ಸಮುದಾಯದವರು ಬದುಕಿದ್ದ ಮೋಹಲ್ಲಾ ಅದು. ಅಲ್ಲಿ ಮರಾಠಿಗರು, ಲಿಂಗಾಯಿತರು ಮತ್ತು ಇತರೇ ಸಮಾಜದವರೂ ವಾಸಿಸುತ್ತಿದ್ದರು. ಜುಮ್ಮಾ ಮಸೀದಿಯ ammana nenapu book2ಮುಂದೆ ಆಗಿನ ಕಾಲದ ಸಮಾಧಿಗಳು ಮತ್ತು ಸುತ್ತಲೂ ಮುಸ್ಲಿಂ ಹಾಗೂ ಕೆಲವು ಹಿಂದೂ ಮನೆಗಳಿದ್ದು ಅದರ ಎದುರಿಗೇ ಒಂದು ಆಶಿರ್ಖಾನಾ ಇತ್ತು.

ಆ ಆಶಿರ್ಖಾವನ್ನು ಹಿಂದೂಗಳು (ಮರಾಠಿಗರು) ವಹಿಸಿಕೊಂಡು ಅಲ್ಲೋಂದು ಹನುಮಂತನ ವಿಶಾಲ ಮೂರ್ತಿ ತಂದಿಟ್ಟಿದ್ದರು. ಆ ಆಶಿರ್ಖಾನಾದಲ್ಲಿ ಇಂದಿಗೂ ಹನುಮಂತನ ಮೂರ್ತಿಯಿದೆ. ಆ ಕಟ್ಟಡದ ಮೇಲೆ ಕೆಲವು ಬಾರಿ ಹಸಿರು ಧ್ವಜ ಹಾರುತ್ತಿದ್ದರೆ, ಮತ್ತೇ ಕೆಲವು ಬಾರಿ ಭಗವಾ ಧ್ವಜ ಹಾರುತ್ತಿತ್ತು. ಆ ಧ್ವಜದ ಕಾರಣಕ್ಕಾಗಿಯೇ ಹಿಂದು ಮುಸ್ಲೀಮ್ ದಂಗೆಗಳಾಗುತ್ತಿದ್ದವು. ಆದರೆ ಅನಂತ ಕಾಲದಿಂದ ಅಲ್ಲಿಯೇ ವಾಸಿಸುತ್ತಿದ್ದ ಅಮ್ಮಿ ಸೌಹಾರ್ದದ ಕೊಂಡಿಯಾಗಿ ಬದುಕಿದ್ದಳು.

ಆದರೂ ಕೋಮುವಾದಿಗಳ ಆರ್ಭಟಕೆ ಅನೇಕ ಮುಸ್ಲೀಮರ ಮನೆಗಳು ಬೆಂಕಿಗಾಹುತಿಯಾದವು. ಜುಮ್ಮಾ ಮಸೀದಿಯ ಮುಂದಿನ ಗೋರಿಗಳು ನೆಲಸಮ ಮಾಡಿದರು. ದಂಗೆಯಲ್ಲಿ ಸುಟ್ಟ ಮನೆ ಜೀವ ಹಾನಿ ಸಹಿಸದ ಅನೇಕ ಮುಸ್ಲಿಂ ಕುಟುಂಬಗಳು ಗುಲಬಗರ್ಾದ ಹಜರತ್ ಖ್ವಾಜಾ ಬಂದೇನವಾಜರ ದರ್ಗಾದ ಬಳಿಯ ಮೊಹಲ್ಲಾಗಳಿಗೆ ವಲಸೆ ಹೋದರು. ಆಗ ನಮಗಿನ್ನೂ ಚಿಕ್ಕ ವಯಸ್ಸು. ಅಮ್ಮ ಎಂದಿಗೂ ಕೋಮುವಾದಿಯಾಗಿರಲ್ಲಿಲ್ಲ. ನಮ್ಮ ಮೇಲೆಯೂ ಅದು ಗಾಢ ಪರಿಣಾಮ ಬೀರಿತ್ತು. ಎಲ್ಲ ಮುಸ್ಲಿಂ ಮನೆಗಳು ಖಾಲಿಯಾದವು. ಬಾಯಿಗೆ ಬಂದ ಬೆಲೆಗೆ ಮನೆಮಾರುಗಳನ್ನು ಮಾರಿ ವಲಸೆ ಹೋದರು.

ಕೆಲವು ದಿನ ಅಲ್ಲಿಯೇ ಇದ್ದ ನಾವು ಪಕ್ಕದ ಶೇಖರೋಜಾದಲ್ಲಿ ಒಂದು ಬಾಡಿಗೆ ಮನೆ ಪಡೆದು ಅಲ್ಲಿಗೆ ಮನೆ ಬದಲಾಸಿದೆವು. ನನಗೆ ಶಾಲೆ ಮತ್ತೂ ದೂರವಾಯಿತು. ಶೇಖರೋಜಾದಿಂದ ನಾಕಾ ಸಾಲಿಯವರೆಗೆ ನಡೆದುಕೊಂಡೇ ಬರುತ್ತಿದ್ದೆ. ಅಮ್ಮಿ ಯಾವತ್ತೂ ಕಟ್ಟುವ ಸಂಸ್ಕೃತಿಯವಳು. ಎಂದಿಗೂ ಗಲಭೆ, ದಂಗೆಗಳನ್ನು ಬೆಂಬಲಿಸಿದವಳಲ್ಲ. ಯುದ್ಧ, ದಂಗೆಯೆಂಬ ಶಬ್ದಗಳು ಯಾವತ್ತೂ ಅವಳ ವ್ಯಾಪ್ತಿಗೆ ಬರುತ್ತಿರಲಿಲ್ಲ. ಪಕ್ಕದ ಮನೆಯ ಮಾದೇವಿಗೆ ಜ್ವರ ಬಂದರೂ ಅಮ್ಮಿ ಕಾಳಜಿ ಮಾಡಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಳು. ಮೊಹಲ್ಲಾದ ಯಾವುದೇ ಗಂಡಹೆಂಡತಿ ಜಗಳ, ಕುಟುಂಬದ ಸಮಸ್ಯೆಗಳಿದ್ದರೆ ಜನ (ಹಿಂದೂಗಳೂ ಸೇರಿ) ಅಮ್ಮಿಯನ್ನು ಕರೆಸುತ್ತಿದ್ದರು. ಅವಳು ಹೋಗಿ ಪರಿಹರಿಸುತ್ತಿದ್ದಳು. ಅವಳು ನಿರಕ್ಷರಿಯಾದರೂ ನ್ಯಾಯಕ್ಕಾಗಿ ಮುಂದಾಗುತ್ತಿದ್ದಳು. ಓಣಿಯ ಹಿಂದೂ ಜನರೆಲ್ಲ ನನ್ನ ಅಮ್ಮಿಗೆ ಅಮ್ಮಾ ಎಂದೇ ಕರೆಯುತ್ತಿದ್ದರು ಅಮ್ಮಾನ ಮನೆಗೆ ಹೋಗಿ ಕರೆದುಕೊಂಡು ಬಾ ಎಂದು ಕಳಿಸುತ್ತಿದ್ದರು.

ಶೇಖರೋಜಾದ ನಮ್ಮ ಮನೆಯ ಒಂದು ಕಡೆ ಹಿಂದೂಗಳ ಮನೆಗಳಿದ್ದರೆ, ಇನ್ನೊಂದು ಕಡೆ ಮುಸ್ಲೀಮರ ಮನೆಗಳಿದ್ದವು. ಸಹಜವಾಗಿಯೇ ಅಮ್ಮಿಗೆ ಹಿಂದೂ ಗೆಳತಿಯರಿದ್ದಂತೆ ಮುಸ್ಲಿಂ ಗೆಳತಿಯರೂ ಇದ್ದರು. ನನಗೂ ಸಹ ಅಮ್ಮಿಯಂತೆಯೇ ಎರಡೂ ಧರ್ಮಗಳಿಗೆ ಸೇರಿದ ಗೆಳತಿಯರ ಬಳಗವಿತ್ತು, ಅಪ್ಪನದೂ ಕೂಡ ಹಾಗೆಯೇ. ಅಮ್ಮ ಯಾವತ್ತೂ ಕಟ್ಟುವ ಸಂಸ್ಕೃತಿಯನ್ನು ನಂಬಿ ನಡೆದವಳೇ ವಿನಾ ಕೆಡಹುವ ಕೆಟ್ಟ ಸಂಸ್ಕೃತಿಯನ್ನಲ್ಲ. ತನ್ನ ಗಂಡನ, ಮಕ್ಕಳ ಏಳ್ಗೆಗಾಗಿ, ಹಗಲಿರುಳೂ ದುಡಿಯುತ್ತಿದ್ದಳು. ಅಪ್ಪನಿಗೆ ಸಕರ್ಾರಿ ಕೆಲಸವಿದ್ದರೂ ಸಹ ಎಂದಿಗೂ ಕುಳಿತು ಉಂಡವಳಲ್ಲ. ಅವಿರತ ಶ್ರಮವೇ ಅವಳ ಧರ್ಮ. ಮೈಲಿಗಟ್ಟಲೇ ದೂರ ನಡೆದುಕೊಂಡು ಹೋಗಿ ಸೆಗಣಿ ಸಂಗ್ರಹಿಸಿ, ಬೆರಣಿ ತಟ್ಟಿ, ಆ ಬೆರಣಿ ಮಾರಿ ಸಂಗ್ರಹಿಸಿದ ಹಣದಿಂದಲೇ, ‘ಹೆಣ್ಣುಮಕ್ಕಳಿದ್ದಾರಲ್ಲ’ ಎಂದು ನಮಗಾಗಿ ಚೂರುಪಾರು ಹಣ, ಬಂಗಾರವನ್ನು ಒಟ್ಟು ಮಾಡುತ್ತಿದ್ದಳು. ನಮ್ಮ ಮದುವೆಗೆ ಬೇಕಾಗುತ್ತದೆ ಎಂದು ಹಣ ಬಂಗಾರನ್ನು ಅಕ್ಕಸಾಲಿಗರಾದ ನಮ್ಮ ತಾತನ ಬಳಿ ಕೂಡಿಡುತ್ತಿದ್ದರು. ಇದಕ್ಕೆಲ್ಲಾ ನನ್ನಪ್ಪನ ವಿರೋಧವಿತ್ತು. ಹಣ, ಬಂಗಾರ ಜೀವಕ್ಕೆ ಮೂಲ, ಅವೆಲ್ಲಾ ನಮಗ್ಯಾಕೆ ಎನ್ನುತ್ತಿದ್ದರು ನನ್ನ ಉದಾರವಾದಿ ಅಪ್ಪ.
ಅಮ್ಮಿಯ ಕಕ್ಕುಲಾತಿಯೇ ಬೇರೆ. ಅವಳು ತನ್ನ ಗಂಡ ಮಕ್ಕಳು ಯಾವುದಕ್ಕೂ ಪರದಾಡಬಾರದು. ಸಮಾಜದಲ್ಲಿ ತನ್ನ ಕುಟುಂಬ ತಲೆ ಎತ್ತಿ ಬದುಕಿದರೆ ಸಾಕು ಎಂದು ಬಯಸುತ್ತಿದ್ದಳು. ಈ ಸಂದರ್ಭದಲ್ಲಿ ನನಗೆ ಲಂಕೇಶರ ಅವ್ವ ಕವನದ ಸಾಲುಗಳು ನೆನಪಾಗುತ್ತವೆ.

ನನ್ನವ್ವ ಬದುಕಿದ್ದು
ಕಾಳು ಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ
ಮೇಲೊಂದು ಸೂರು, ಅನ್ನ ರೊಟ್ಟಿ, ಹಚ್ಚಡಕ್ಕೆ
ಸರೀಕರ ಎದುರು ತಲೆ ಎತ್ತಿ ನಡೆಯಲಿಕ್ಕೆ

ಈ ಎಲ್ಲ ಗುಣಗಳೊಂದಿಗೆ ಅಮ್ಮಿಯಲ್ಲಿ ಇನ್ನೊಂದು ಗುಣವಿಶೇಷವಿತ್ತು. ಅದುವೇ ಸೌಹಾರ್ದದ ಬದುಕು. ಅವಳಿಗೆ ಜಾತಿಗಳು ಯಾವತ್ತೂ ಅಡ್ಡಿಯಾಗಲಿಲ್ಲ. ಬದುಕಿನಲ್ಲಿ ಸೋತು ಯಾವತ್ತೂ ಸಾವಿಗಾಗಿ ಬೇಡಿಕೆ ಇಟ್ಟವಳಲ್ಲ. ಅಲ್ಲಾಹ್ನನ್ನು ಶ್ರದ್ಧೆಯಿಂದ ನಮಿಸುತ್ತಿದ್ದಳು. ಆದರೆ ತೋರಿಕೆಯ ಡಾಂಭಿಕ ಭಕ್ತಿ ಅವಳದಾಗಿರಲಿಲ್ಲ. ನಾವು ಖುರಾನ್ ಓದಿ ಮುಗಿಸಿದಾಗ ‘ಹದಿಯಾ’ ಮಾಡುತ್ತಿದ್ದರು. ನಾನು ಪಿಯುಸಿ ಓದುತ್ತಿದ್ದ ಕಾಲ ಆದಾಗಿತ್ತು. ಆಗ ನಾನು ತಿಪ್ಪೇರುದ್ರಸ್ವಾಮಿಯವರ ಕದಳಿಯ ಕರ್ಪುರ ಮತ್ತು ಮಾತೆ ಮಹಾದೇವಿಯವರ ಹೆಪ್ಪಿಟ್ಟ ಹಾಲು ಕೃತಿಗಳನ್ನು ಓದಿ ಮುಗಿಸಿದೆ. ಹೆಪ್ಪಿಟ್ಟ ಹಾಲು ಗಾತ್ರದಲ್ಲಿ ಬಹಳ ದೊಡ್ಡ ಪುಸ್ತಕ. ನಾನು ಅದನ್ನು ಓದುತ್ತಿದ್ದರೆ, ಅಮ್ಮಿ ನನ್ನನ್ನು ಹೆಮ್ಮೆಯಿಂದ ನೋಡುತ್ತಿದ್ದಳು. ‘ನನ್ನ ಮಗಳು ದಪ್ಪ ದಪ್ಪ ಹೊತ್ತಿಗೆಗಳನ್ನು ಓದಬಲ್ಲಳು’ ಎಂಬುದು ಅವಳ ಹೆಮ್ಮೆಗೆ ಕಾರಣವಾಗಿತ್ತು. ನನ್ನ ಅಮ್ಮಿ ಎಷ್ಟು ಮುಗ್ಧೆಯೆಂದರೆ ಹೆಪ್ಪಿಟ್ಟ ಹಾಲು ಓದಿ ಸಂಪೂರ್ಣ ಮುಗಿಸಿದಾಗ ಆಕೆ ಕೇಳಿದಳು, ಬೇಟಿ, ಪೂರ್ಣ ಮುಗಿಯಿತಲ್ಲ. ಹದಿಯಾ ಮಾಡಬೇಕೆ ? ಇಂತಹ ಅಮ್ಮನಿಗೆ ಮತೀಯ ಸಂಕುಚಿತ ಮನೋಭಾವ ಇರಲು ಹೇಗೆ ಸಾಧ್ಯ ?

ರಂಜಾನ್ ಹಬ್ಬ ಬಂದಿತೆಂದರೆ ಸಾಕು. ಓಣಿಯ ಹಿಂದೂಗಳೆಲ್ಲ, ಹಿರಿಯರು ಮಕ್ಕಳೆನ್ನದೇ ಎಲ್ಲರೂ ಸೇರಿ ನಮ್ಮ ಮನೆಗೆ ಲಗ್ಗೆ ಹಾಕುತ್ತಿದ್ದರು. ಅವರು ಮಾಂಸಾಹಾರಿ ಗಳಲ್ಲವಾದ್ದರಿಂದ ಅಮ್ಮಿ ಅವರಿಗೆ ಹೊಟ್ಟೆ ತುಂಬಾ ಶುರುಖುರಮಾ (ಪಾಯಸ) ಕುಡಿಸಿ, ಎಲೆ ಅಡಿಕೆ ಮಡಿಚಿ ಅವರ ಕೈಗಿಡುತ್ತಿದ್ದಳು. ಅವರನ್ನೆಲ್ಲ ಕಂಡು ಸಂಭ್ರಮಿಸುತ್ತಿದ್ದಳು. ಹಿಂದೂಗಳ ಹಬ್ಬಗಳಲ್ಲಿ ಬೇವುಬೆಲ್ಲ, ಒಬ್ಬಟ್ಟು (ಹೋಳಿಗೆ) ನಮ್ಮ ಮನೆಗೆ ಧಾರಾಳವಾಗಿ ಬರುತ್ತಿದ್ದವು. ಇಂತಹ ಸೌಹಾರ್ದ ಕೊಂಡಿ ನಮ್ಮಲ್ಲಿ ಬೆಸೆದಿದ್ದವು.

ಒಂದು ಬಾರಿ ಮೊದಲಿನಂತೆ ಶಹಬಜಾರದಲ್ಲಿ ಮತ್ತೆ ಕೋಮು ದಂಗೆಗಳಾದಾಗ, ಶೇಖರೋಜಾದ ಹಿಂದೂ ಮುಸ್ಲಿಂ ಹಿರಿಯರೆಲ್ಲ ಸೇರಿ ಸೇತುವೆ ಮೇಲೆ ಹಗಲಿರಳೂ ಕಾವಲು ಕುಳಿತರು. ಗಲಭೆಕೋರರು ಶೇಖರೋಜಾದ ಮುಸ್ಲಿಂ ಮನೆಗಳಿಗೆ ಬೆಂಕಿ ಇಡಲು ಬಂದಾಗ, ನಾವಿಲ್ಲಿ ಹೊಂದಿಕೊಂಡು ಚೆನ್ನಾಗಿದ್ದೇವೆ. ನೀವು ಬೆಂಕಿಯಿಡಲು ಬರಬೇಡಿ ಎಂದು ಮನವರಿಕೆ ಮಾಡಿ ದಂಗೆಕೋರರನ್ನು ಸೇತುವೆ ಮೇಲಿಂದಲೇ ವಾಪಸ್ಸು ಕಳಿಸಿದ್ದರು. ದಂಗೆಕೋರರು ಹಲ್ಲೆ ಮಾಡಿದರೆ ಏನು ಮಾಡುವುದೆಂದು ಇವರೂ ಸಹ ಕೈಯಲ್ಲಿ ಕೋಲು, ಬಡಿಗೆಗಳನ್ನು ಹಿಡಿದುಕೊಂಡು ಕುಳಿತಿದ್ದುದು ಒಂದು ಚರಿತ್ರಾರ್ಹ ಘಟನೆ.

ಬಹುಶಃ ನನ್ನಮ್ಮಿಯಂತವರ ಸೌಹಾರ್ದಪೂರ್ಣ ಬದುಕುಗಳೇ ಅಂದಿನ ನೆಮ್ಮದಿಯ ದಿನಗಳಿಗೆ ಕಾರಣವಾಗಿರಬಹುದು. ಅಪ್ಪ 1981 ಮೇ ತಿಂಗಳಲ್ಲಿ ತಾವು ಕೆಲಸ ಮಾಡುತ್ತಿದ್ದ ಮುಧೋಳದಲ್ಲಿ ಹೃದಯಾಘಾತದಿಂದ ನಿಧನರಾದಾಗ, ಸುದ್ದಿ ತಿಳಿದು ಹಿಂದೂ ಮುಸ್ಲಿಂ ಸಮಾಜದ ಮುಖಂಡರೆಲ್ಲ ಹೋಗಿ ಶವವನ್ನು ಗುಲಬಗರ್ಾಕ್ಕೆ ತಂದಿದ್ದ ದೃಶ್ಯ ನನಗಿನ್ನೂ ಮರೆಯಲಾಗಿಲ್ಲ. ಆಗಿನ್ನೂ ನಾನು ಕೆಲಸಕ್ಕೆ ಸೇರಿ ನಾಲ್ಕು ವರ್ಷವಾಗಿತ್ತು. ಅಣ್ಣನಿಗೂ ಕೆಲಸ ದೊರೆತು ವಿಜಯವಾಡಾದಲ್ಲಿ ಕೇಂದ್ರ ಸಕರ್ಾರದ ನೌಕರಿಯಲ್ಲಿದ್ದನು. ಆಗಿನ್ನೂ ನಮಗೆ ಫೋನಿನ ಸೌಕರ್ಯ ಇಲ್ಲದಿದ್ದುದರಿಂದ ಅಣ್ಣ ದಫನ್ ಕಾರ್ಯ ಮುಗಿದ ಮಾರನೆಯ ದಿನ ಬಂದನು.

ಆಗ ಐದು ಜನ ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳಲ್ಲಿ ಇನ್ನೂ ಯಾರ ಮದುವೆಯೂ ಆಗಿರಲಿಲ್ಲ. ಅಮ್ಮನಿಗೆ ಚಿಂತೆ ಶುರುವಾಯಿತು. ಸ್ವಲ್ಪ ಹೊಲ, ಮಿಜಗುರಿಯಲ್ಲಿ ಒಂದು ಮನೆ, ಶೇಖರೋಜಾದ ಒಂದು ಮನೆ ಹಾಗೂ ಪೆನ್ಶನ್ ಬಿಟ್ಟರೆ ಅಪ್ಪ ಯಾವುದೇ ಆಸ್ತಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೂ 1981 ರಲ್ಲಿಯೇ ಅಮ್ಮಿ ನನ್ನ, ಅಣ್ಣನ ಮತ್ತು ಇಬ್ಬರು ತಂಗಿಯಂದಿರ ಮದುವೆ ಮಾಡಿದಳು. ಅಮ್ಮಿ ಕಡಿಮೆ ಸಮಯದಲ್ಲಿ ಮಾಡಿದ ಈ ಮದುವೆಗಳನ್ನು ನೋಡಿದ ಮೊಹಲ್ಲಾದ ಜನ ಬಾಯಿ ಮೇಲೆ ಬೆರಳಿಟ್ಟುಕೊಂಡರು. ಅಮ್ಮಿ ಬದುಕಿಗೆ ಯಾವತ್ತೂ ಬೆನ್ನು ಮಾಡಲಿಲ್ಲ. ಅವಳು ಜೀವ ಚೈತನ್ಯದ ಕೊಂಡಿಯಾಗಿದ್ದಳು

ಮನೆಯಲ್ಲಿ ಎಮ್ಮೆ ಆಕಳು ಕಟ್ಟಿದ್ದಳು. ತುಂಬಾ ರುಚಿಕಟ್ಟಾದ ಚಹಾ ಮಾಡುತ್ತಿದ್ದಳು. ಅವಳ ಚಹಾದ ಆಸೆಗಾಗಿಯೇ ಬಹಳಷ್ಟು ಜನ ನಮ್ಮ ಮನೆಗೆ ಬರುತ್ತಿದ್ದರು. ಬೇಸಿಗೆ ಬಂತೆಂದರೆ ಸಾಕು, ಬೀಸುಕಲ್ಲಿನಲ್ಲಿ ಜೋಳದ ನುಚ್ಚು ಬೀಸುತ್ತಿದ್ದಳು. ಬೆಳಿಗ್ಗೆಯೇ ಎದ್ದು ನುಚ್ಚು ಕುದಿಸಿ, ಮಜ್ಜಿಗೆ ಮಾಡಿ, ಬೆಣ್ಣೆ ತೆಗೆದು ಇಡುತ್ತಿದ್ದಳು. ಮಕ್ಕಳಿದ್ದ ಮನೆ ಹಯನು ಬೇಕೆಂದು ಎಷ್ಟೇ ಕಷ್ಟವಾದರೂ ದನಗಳನ್ನು ಸಾಕಿದ್ದಳು. ಬಡವರು ಭಿಕ್ಷುಕರು ಯಾರು ಮನೆಗೆ ಬಂದರೂ ಗುಲಬಗರ್ಾದ ಉರಿ ಬಿಸಿಲಿನ ಝಳಕ್ಕೆ ಹೊಟ್ಟೆ ತಣ್ಣಗಿರಲೆಂದು ನುಚ್ಚು ಮಜ್ಜಿಗೆ ಉಣಲು ಬಡಿಸುತ್ತಿದ್ದಳು. ತನ್ನದೇ ಬಡತನದ ಬದುಕು. ಆದರೂ ಮೇಲು, ಕೀಳು, ವರ್ಗಭೇದ ಯಾವುದೂ ಪರಿಗಣಿಸುತ್ತಿರಲಿಲ್ಲ.

ಶ್ರಮಜೀವಿ ಅಮ್ಮಿ ಕಾಯಿಲೆ ಬಿದ್ದುದನ್ನು ನಾನು ನೋಡಿಯೇ ಇಲ್ಲ. ಏಳು ಮಕ್ಕಳು ಹುಟ್ಟಿದರೂ ಆಸ್ಪತ್ರೆಗೆ ಹೋಗಲೇ ಇಲ್ಲ. ಎಲ್ಲರನ್ನೂ ಮನೆಯ ಆಚೆ ಕಳಿಸಿ ಬಾಗಿಲು ಹಾಕಿಕೊಂಡು, ಬಾಣಂತಿ ಮಗುವಿಗೆ ಹಾಸಿಗೆ ಬಟ್ಟೆ ಸಿದ್ಧಪಡಿಸಿ, ಬಿಸಿನೀರಿಗೆ ಒಲೆ ಹಚ್ಚಿ, ತನಗೆ ಬೇಕೆನಿಸಿದ ಖಾರದ ಊಟ ಮಾಡುತ್ತಿದ್ದಳು. ಹೆರಿಗೆಯ ನಂತರ ಕೂಸಿನ ಮಾಸು ಒಂದು ಮಡಿಕೆಗೆ ಹಾಕಿ ಮೊದಲೇ ಅಂಗಳದಲ್ಲಿ ತೋಡಿದ ಗುಂಡಿಯಲ್ಲಿ ಹುಗಿಯುತ್ತಿದ್ದಳು. ನಂತರ ಮಗುವಿಗೆ ಸ್ನಾನ ಮಾಡಿಸಿ, ಮಲಗಿಸಿ, ತಾನೂ ಸ್ನಾನ ಮಾಡಿಕೊಂಡು ಬಾಗಿಲು ತೆಗೆಯುತ್ತಿದ್ದಳು. ಅವಳಿಗೆ ನೋವು ಆರಂಭವಾಗುತ್ತಿದ್ದಂತೆಯೇ ಅಪ್ಪ ಸ್ಟೇಶನ್ ಬಜಾರಿನಲ್ಲಿದ್ದ ಅಜ್ಜಿಯ ಮನೆಗೆ ಕರೆಯಲು ಹೋಗುತ್ತಿದ್ದ. ನಾವು ಒಳಗೆ ಬಂದು ನೋಡಿದಾಗ ಪುಟ್ಟ ಮಗುವನ್ನು ಕಂಡು ಸಂಭ್ರಮಿಸುತ್ತಿದ್ದೆವು. ಅಮ್ಮಿಯ ಮನೋಧೈರ್ಯ ಕಂಡು ನನಗೀಗ ಗಾಬರಿಯಾಗುತ್ತದೆ. ಅಮ್ಮಿಯ ಬದುಕಿಗೆ ಯಾವ ರೀತಿಯ ಜಾತಿ, ವರ್ಣ, ವರ್ಗಗಳು ಅಡ್ಡಬರಲಿಲ್ಲವೂ ಹಾಗೆಯೇ ಅಧೈರ್ಯವೂ ಅಡ್ಡಬರಲಿಲ್ಲ. ಅವಳು ಜೀವ ಚೈತನ್ಯದ ಮಡುವಾಗಿದ್ದಳು. ಸರಳತೆ ಅವಳ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು. ಶಾಂತಮೂರ್ತಿಯಾಗಿದ್ದ ಅವಳಲ್ಲಿ ಸಿಟ್ಟು, ಸೆಡವುಗಳನ್ನು ನಾನು ಕಾಣಲೇ ಇಲ್ಲ.

ಹೀಗೆ ಒಬ್ಬಳೇ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಿದವಳಿಗೆ ಕೊನೆಯ ಏಳು ವರ್ಷ ಕಾಲ ಕಾಲು ನೋವು ಬಳಲಿಸಿತು. ಹಾಸಿಗೆ ಹಿಡಿದು ಮಲಗಿದ ಅವಳು ದಿನಾಂಕ 2011ರ ಎಪ್ರಿಲ್ ಹನ್ನೊಂದರಂದು ದೈವಾಧೀನಳಾದಳು.

‍ಲೇಖಕರು Admin

9 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading