ನಮ್ಮ ಕರು ಹೆಚ್ಚು ಮಾತನಾಡುವುದೇ
ಇಲ್ಲ ಎಂದೆನುವಾಗಲೆಲ್ಲಾ
ಮುಸಿಮುಸಿ ನಕ್ಕವರೆಷ್ಟೋ !
ಕರು ಮಾತನಾಡುತ್ತದೆಯೇ ? ಭ್ರಮೆ ;
ಆದರೂ ನಿನ್ನ ಆಂತರ್ಯದ ನುಡಿಗಳು
ಪಟಪಟಿಸುತ್ತಿದ್ದವು ಮಗೂ ಎಂಬ
ಮುದ್ದುಕರೆಯೊಡನೆ !
ಇಂಥ ಅಪರಾಧ ಮಾಡಬಹುದೇ
ನಿಮ್ಮ ಹುಡುಗ ! ಎಂದೆನುವಾಗ
ನೀ ಹೇಳಿದುದೇನು ?
ನಮ್ಮ ಮಗು ಎಂದೂ ತಪ್ಪು ಮಾಡುವನಲ್ಲ,
ಅಬ್ಬಬ್ಬಾ, ಎಂಥ ವಿಶ್ವಾಸ
ಅದಕ್ಕೇ ಅಲ್ಲವೇ ಮಾತೃ ಹೃದಯವೆನ್ನುವುದು ;
ಅರಿಯಲೂ ಬೇಕು ದಿವ್ಯಾನುಭವ !
ಜಲಚರಗಳಿಗೆ ಶರಧಿಯೇ ಮಾತೆ ಎನುವರು
ದಿಟವೇ ! ಲವಣದಲಿ ಸಿಹಿಯುಣಿಸುವ
ಒಡಲು ಮತ್ತೆಲ್ಲಿ ; ಕಡಲೊಡಲ ತೊರೆದ
ಕಂದಮ್ಮಗಳಿಗೆ ನೆಲೆ ಎಲ್ಲಿ !
ನಿನ್ನೆದೆಯ ಹಾಲುಣ್ಣುವಾಗ
ಸ್ವೇದದ ಸವಿಯನಾಸ್ವಾದಿಸಲಿಲ್ಲವೇ ಈ ಜೀವ ;
ಅದೇ ನೆತ್ತರಿನ ಬಂಧ ಜನ್ಮಾಂತರದ
ಅನುಬಂಧ !

ಶುಷ್ಕವಾಗಿದೆ ನೀ ತೆರೆಸಿದ ಕಂಗಳು
ಒತ್ತರಿಸಿ ಬರುವ ಹನಿಗಳಿಗೆ ಉತ್ತರದಾಯಿತ್ವ
ಹುಡುಕುತ್ತಾ ; ಬರುವೆಯಾ ಸಾಂತ್ವನಕೆ !
ಎತ್ತಲಿಂದ ಬರುವೆ ; ಹಾದಿ ಎಲ್ಲಿದೆ ನಿನಗೆ ;
ಒಡಲಾಳದ ಮಮತೆಯ ಗೂಡುಗಳು
ಛಿದ್ರವಾಗಿವೆ ದ್ವೇಷಾಸೂಯೆಗಳ ಕಂಪನಕೆ
ಇಲ್ಲಿರುವುದೆಲ್ಲವೂ ಪಳೆಯುಳಿಕೆಗಳೇ !
ನೀ ನಡೆದ ಮಾರ್ಗವೇ ಋಜುಮಾರ್ಗ
ಎಂದ ನೀನೆಲ್ಲಿ ; ನಡೆವ ಮಾರ್ಗದ
ರುಜುವಾತು ಬೇಕೆನುವವರೆಲ್ಲಿ !
ಎಲ್ಲವೂ ಪ್ರೀತಿ ವಾತ್ಸಲ್ಯಗಳಿಗಾಗಿ ;
ಸಂಬಂಧಗಳಿಗಾಗಿ ಹೃದಯಗಳ
ಮಿಲನ ಬಂಧನಗಳಿಗಾಗಿ ;
ಎನಿತು ಅಂತರ ಭೂಮಿ ಆಕಾಶಗಳ ನಡುವೆ !
ಉಗುರು ಕಡಿಯಬೇಡವೋ ಎಂಬ ನಿನ್ನ
ಎಚ್ಚರಿಕೆಯ ನೆನಪಾದಾಗಲೆಲ್ಲಾ ಆಂತರ್ಯ
ಉಸುರುತ್ತದೆ ; ಅಮ್ಮಾ,,,,,,,
ನಾ ನುಂಗುವುದು ಉಗುರಿನ
ಚೂರುಗಳನಲ್ಲ ; ನೊಂದ ಮನದ
ತುಣುಕುಗಳನ್ನು ; ಘಾಸಿಗೊಂಡ ಭಾವನೆಗಳ
ಹಿಕ್ಕೆಗಳನ್ನೆಂದು !
ಉಸಿರಿನ ಕಣಕಣದಲಿ ಉಸಿರಾಡುತಿಹ
ಆತ್ಮಕೆ ತರ್ಪಣವೇಕೆ ; ನಿನ್ನೊಲುಮೆಯಲಿದೆ
ಜೀವಾತ್ಮದ ಚಿಲುಮೆ ; ನಿನ್ನ
ಪಾದತಲದಲ್ಲಿದೆ ಅಂತರಾತ್ಮದ ನಲ್ಮೆ ;
ಹೂ ಮುಳ್ಳುಗಳ ಹಾದಿಯಲಿ
ದೇಹದಂಡನೆಯ ಭಯವೇಕೆ ತಾಯೇ ;
ನಿನ್ನಾಶೀರ್ವಚನವಿರೆ !
ಪರಿಶುದ್ಧತೆಯ ಶೋಧನೆಯಲಿ
ಬಳಲಿದೆ ನಿನ್ನಾತ್ಮದ ತುಣುಕು ; ಹೇಗೆ
ಅರುಹಲಿ ! ತೋರುವೆಯಾ ಅಂತರಾತ್ಮದ
ಬೆಳಕು ; ಪಾದಸ್ಪರ್ಶದ ಕನಸು ಮುದುಡಿ
ಹೋಗಿದೆ ಅಮ್ಮಾ ; ಆದರೂ
ಹೆಜ್ಜೆಗುರುತುಗಳು ದೃಡವಾಗಿವೆ
ನೀನಿತ್ತ ಹೃದಯ ಕವಾಟದಲಿ ;
ನಮಿಸುವೆ ಬಿಡು ನಿರಂತರವಾಗಿ !
(ಇಂದಿಗೆ 25 ವರ್ಷಗಳ ಹಿಂದೆ ನನ್ನನ್ನಗಲಿದ ಅಮ್ಮನ ನೆನಪಿನಲ್ಲಿ)






Hrudayasparshiyagide antharalada dani
uttamma ati uttama. ammana pritiyannu varnisalu shabdhave saladu. adare nimma prayatna banna tandide sir.
Hema –
Mumbai
Thanks Hema Ji. When Tears blocks our vision Only Mother comes across, nothing else That is the power of that great divine force called Mother.
ಚೆನ್ನಾಗಿದೆ.