ಅಮ್ಮಾ ಎಲ್ಲಿದ್ದೀಯೇ?

 

 

ನಾ ದಿವಾಕರ

 

 

 

 

ಎಂದೋ ಚೂರಿಯಿಂದಿರಿದ ಗಾಯ
ಮಾಸಿ ವರುಷಗಳೇ ಗತಿಸಿವೆ ಆದರೂ
ನೋಯುವುದೇಕಮ್ಮಾ ? ಮಾಸಿದ ಗಾಯದಲ್ಲೂ
ನೋವು ಬಾಳುವುದೇ ಮಾಸಿದ
ಬದುಕಿನಲಿ ಮರುಕಳಿಸಲು ?
ಎಲ್ಲಿದ್ದೀಯಮ್ಮಾ ??
ನೀ ನೇವರಿಸುತ್ತಿದ್ದ
ಬೆನ್ನೊಳಗೆ ಅದೇನೋ ಬೇನೆ
ನೆನಪುಗಳ ಹಂದರವ ಕಳಚಿದಾಗ
ಮನದ ಪೊರೆಯೂ ಕಳಚುವುದಲ್ಲವೇ ?

ನಾನು ತೊಟ್ಟಿಲಲ್ಲಿಟ್ಟು ಸಲಹಿದೆ
ಅವರು ನನ್ನನ್ನು ತೊಟ್ಟಿಯಲ್ಲಿಟ್ಟುಬಿಟ್ಟರಮ್ಮಾ
ನಾ ಅಂಥವನೇನಮ್ಮಾ ?
ಕಂಡಿಲ್ಲವೇ ನನ್ನಂತರಾಳವನು ;
ಅಪ್ಪಿಕೊಂಡೇ ಇರಿದವನೊಬ್ಬ
ಒಪ್ಪಿಕೊಂಡೇ ಇರಿದವನೊಬ್ಬ
ಒಬ್ಬನಿಲ್ಲ ಮತ್ತೊಬ್ಬನಿದ್ದೂ ಇಲ್ಲ
ನಾನೇಕೆ ? ಬದುಕುವ ಆಸೆ ಅಮ್ಮಾ !

ಯಾರಿಗಾಗಿ ಎನ್ನುವೆಯಾ
ಎಲ್ಲರಿಗಾಗಿ ಬದುಕಿದೆ ಅಲ್ಲವೇ ?
ಕರೂ ಎಂದು ನೀ ಕರೆದಾಗಲೆಲ್ಲಾ
ವಿಕಸಿಸುತ್ತಿದ್ದ ದೇಹ ಇಂದು
ಕೊಟ್ಟಿಗೆಯ ಗೊಬ್ಬರದಂತಾಗಿದೆ ;
ತ್ರಿಶಂಕುವಿನಂತೆ ಅತ್ತ ಬಾಳದೆ
ಇತ್ತ ಅಂತ್ಯ ಕಾಣದೆ
ತಬ್ಬಲಿಯ ಭಾವದಲಿ
ಕೇಳುತ್ತಿದ್ದೇನೆ
ಎಲ್ಲಿದ್ದೀಯಮ್ಮಾ , , , , , ,?

ಏಕೋ ನಿನ್ನ ಮಡಿಲು
ನೆನಪಾಗುತ್ತಿದೆಯಮ್ಮಾ ; ಇನ್ನಾರ
ಕರೆಯಲಿ ? ನಿನ್ನೊಂದು ಕೂಸೂ
ನಿನ್ನೊಳಗೇ ಸೇರಿಬಿಟ್ಟಿತಲ್ಲಾ
ಸುಖಾ ಸುಮ್ಮನೆ ಸದ್ದಿಲ್ಲದೆ ;
ಪ್ರೀತಿ ಒಲವು ಕರುಣೆ ಅಂತಃಕರಣ
ಓಹ್ ಏನೆಲ್ಲಾ ಸಲಹಿದೆ
ಈ ಬೆಂದ ಹೃದಯದಲಿ
ಎಲ್ಲವೂ ಬಿಕರಿಯಾಗಿಹೋದವು
ಸರಕುಗಳಂತೆ ಹರಕು
ಚಿಂದಿಗಳಂತೆ !

ಎತ್ತಲಿಂದಲೋ ಬಂದ ಜೀವ
ಪ್ರೀತಿಯ ಧಾರೆ ಎರೆದಿದೆ
ಸುತ್ತಲಿನ ನಿರ್ಭಾವುಕತೆ
ಕತ್ತು ಹಿಸುಕುತಿದೆ ಗದ್ಗದಿತನಾದರೂ
ನಾಟಕ ಎನಿಸುತ್ತದೆ ಅಲ್ಲವೇನಮ್ಮಾ ?
ನಾಟಕವೇ ಬಿಡು ಅಂಕದ ಪರದೆಗಳ
ನಡುವೆ ಹಂದರದ ತುಣುಕುಗಳಲಿ
ಜೀವ ಸೆಲೆಗಾಗಿ ತಡಕಾಡುವ
ಎಡತಾಕುವ ಜೀವಕ್ಕೆ ಇನ್ನೇನು
ಸಾಧ್ಯ ಅಲ್ಲವೇನಮ್ಮಾ ?

ನೀ ಕಾಣದೆ ಹೋದ ರೂಪ
ನನ್ನದಾಗಿದೆ ನಿನ್ನ ಹಾರೈಕೆಯ
ಕೂಪ ನನ್ನೊಂದಿಗಿದೆ ;
ಬೆಳೆದಿದ್ದೇನಮ್ಮ ಎತ್ತರೆತ್ತರಕೆ
ಇನ್ನೂ ಬೆಳೆಯುವಾಸೆ
ನೀ ಹೇಳುತ್ತಿದ್ದೆಯಲ್ಲ ಅಂತೆಯೇ
ಗಟ್ಟಿ ಪಿಂಡ ಇದು ;
ಅಂತರಂಗದಳೊಂದು ಭಾವವಿದೆ
ಜೀವಸೆಲೆಗೊಂದು ಜೀವ ಇದೆ
ಜೀವಭಾವಗಳ ನಡುವೆ
ಅವ್ಯಕ್ತ ವಾತ್ಸಲ್ಯವಿದೆ !

ಪಿಂಡ ಪ್ರಧಾನ ಮಾಡಿದವನಲ್ಲ
ತುಣುಕು ಜೀವದವೆರಗೂ
ತನುಮನ ತೆತ್ತವನು ;
ನೀ ಶಪಿಸುವುದಿಲ್ಲ
ಮಾತನಾಡುವುದೂ ಇಲ್ಲ
ನಿನ್ನ ಭಾವಚಿತ್ರದೆದುರು
ನಿಂತಾಗ ನೆನಪಾಗುವುದೊಂದೇ
ಅಮ್ಮಾ ,,,
ಆ ಒಲುಮೆಯ ಕರೆ
ಮಗೂ,,,,, ಕರೂ,,,,,,,,, !
ಕರೆಯುತ್ತಲೇ ಇರು
ಬರುತ್ತೇನೆ ಇಂದಲ್ಲ ನಾಳೆ
ನೆನಪಿನ ಭಾರವ ಹೊತ್ತು !

‍ಲೇಖಕರು avadhi

December 17, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: